Aug 022015
 

‘ತಾನೇತಕೋ ನಕ್ಕಳಯ್’ ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು

  117 Responses to “ಪದ್ಯಸಪ್ತಾಹ ೧೬೨: ಪದ್ಯಪೂರಣ”

 1. ಆಶುಕವಿತಾಗೋಷ್ಠಿಯಲ್ಲಿ ನಾನು ಮೊನ್ನೆ ಪೂರಯಿಸಿದ್ದು ಹೀಗೆ –

  ಕ್ಷಯದಿ೦ದ೦ ತನು ನಿಚ್ಚಮು೦ ಕಿಡುತಿರಲ್ ಕರ್ಣಕ್ಕೆ ಬೀಳುತ್ತೆ ನಿ-
  ರ್ದಯದಿ೦ದ೦ ಗಡ ಗ೦ಗೆಯುರ್ಬಟೆಯಿರಲ್ ಕಾಳೋರಗ೦ಬೋಲ್ವ ರಾ-
  ತ್ರಿಯ ಘೋರಾ೦ಧತೆಯಿರ್ದು ನೀರವತೆಯಿ೦ ವಿಶ್ವಕ್ಕಮಾಗಲ್ಕೆ ಭೀ-
  ತಿಯೆ ಗಾತ್ರ೦ ನಲವಿ೦ದೆ ಚ೦ದ್ರಿಕೆಯದೋ ತಾನೇತಕೋ ನಕ್ಕಳಯ್

  ಕ್ಷಯರೋಗದಿ೦ದ ಮೈ ದಿನಾಲೂ ಕೆಡುತ್ತಿದ್ದಾಗ್ಯೂ, ತನ್ನ ಮನೆಯಾದ ಶಿವನ ತಲೆಯಿ೦ದ ಬೀಳುವ ಗ೦ಗೆಯ ಕರ್ಣಕಠೋರವಾದ ಉಬ್ಬಟೆಯಿದ್ದರೂ, ಕಾಳಸರ್ಪದ೦ತೆ ರಾತ್ರಿಯ ಘೋರ ಆಕಾರವಿದ್ದರೂ, ನಿಶ್ಶಬ್ದತೆಯಿ೦ದ ವಿಶ್ವಕ್ಕೇ ಭೀತಿಯಾವರಿಸಿದ್ದರೂ, ನಲವಿ೦ದ ಚ೦ದ್ರಿಕೆ (ಬೆಳುದಿ೦ಗಳ) ಅದೇಕೋ ನಕ್ಕಳು.

 2. ಅರಿಕೇಸರಿಯನರಸಿ ಬಂದ ಪಾಂಚಾಲಿ ಮುಂ
  ಬರುವ ದಿನಗಳ ಕನಸ ಕಾಣುತ್ತಿರಲ್|
  ಅರೆಯಲೈವರ್ಗಂಡಿರಿರ್ಪರೆಂದೊಡನೆಯೇ
  ಮರುಳಂತೆ ತಾನೇತಕೋ ನಕ್ಕಳೈ|

  • ಅರೆಯಲ್: ಪಡ್ಡೆಹುಡುಗರ ಪರಿಭಾಷೆಯ ’ಹಿಡಕೊಂಡು ರುಬ್ಬುತ್ತಾನೆ’ ಎಂಬುದರ ಶಿಷ್ಟರೂಪವೆ? 🙂

 3. ಎರೆದುಂ ಕೂರ್ಮೆಯನಂತೆಯೇ ಹರುಷಮಂ, ಸೌಭಾಗ್ಯಕಾರಂ ದಿಟಂ
  ಹರಣಂ ಗೈವನೆ ವೇಸರಂ ,ಸಖನವೊಲ್ ಸಾಂಗತ್ಯಮಂ ನೀಳ್ವನೇಂ?
  ಪರಮಾಪ್ತಂ ಭುವಿಗಪ್ಪನೇಂ ಮರಳಿರಲ್ಕಾರ್ ಬಲ್ಲರೈ ಸತ್ಯಮಂ?
  ಪರಿದುಂ ವರ್ಷಮೆ ಸಾರ್ದುಸಂದಣಿಸಿರಲ್ತಾನೇತಕೋ ನಕ್ಕಳಯ್!

  • artha please?

   • ಭೂಮಿಯತ್ತ ವರ್ಷವು ಬಂದಾಗ(ತಿರುಗಿ) ,ಏತಕೋ ನಕ್ಕಳು,ಅದಕ್ಕೆ ಕಾರಣವು ಆಕೆಗಾತನು ಸ್ನೇಹಿತನೂ ಮತ್ತು ಆಪ್ತನೂ ಅಗುವನೇನೋ! ಸತ್ಯವನ್ನು ತಿಳಿದವರಾರು?

    • ಭಾಷೆ-ಶೈಲಿಗಳು ಚೆನ್ನಾಗಿವೆ. ಆದರೆ ಅರ್ಥಸ್ಪಷ್ಟತೆ ಸ್ವಲ್ಪ ತಗ್ಗಿದೆ. ಜೊತೆಗೆ ಕಡೆಯ ಸಾಲಿನಲ್ಲಿ ಛಂದಸ್ಸಿನ ಲೋಪವಾದಂತಿದೆ.

     • ಇದರಲ್ಲಿಯೂ ಸವರಣೆಯನ್ನು ಮಾಡಲು ಯತ್ನಿಸಿದ್ದೇನೆ, ಧನ್ಯವಾದಗಳು ಸರ್.
      (ಇದೀಗ ಅರ್ಥಸ್ಪಷ್ಟವಾಗಬುದೆಂದು ಭಾವಿಸಿದ್ದೇನೆ)

 4. ಸುರಸೌಂದರ್ಯಮನಾಂತು ಸನ್ನಿಧಿಗೆ ತಾಂ ಬಂದಿರ್ಪ ಕಂದಂ ನಿಜಂ
  ಮರೆಸುತ್ತೆಲ್ಲರ ನೋವನಂತೆ ಸೊಬಗಿಂ ಪೂವಂತೆಮೇಣಾಗಿರ
  ಲ್ಕರರೇ!ಪೆಣ್ಣಿನ ಭಾವಮೆಲ್ಲಮುದದಿಂದೋಷ್ಠಂಗಳೊಳ್ ಚೆಲ್ಡುದೇಂ!
  ಸಿರಿಗೂಸಂದು ಮಲಂಗಿನಿದ್ರಿಸುತಿರಲ್ತಾನೇತಕೋ ನಕ್ಕಳಯ್!

  • ಹಿಂದಿನಂತೆಯೇ ಭಾಷೆ-ಶೈಲಿಗಳು ಚೆನ್ನಿವೆ. ಆದರೆ ಮೂರನೆಯ ಸಾಲಿನಲ್ಲಿ ಛಂದಸ್ಸು ಕೆಟ್ಟಿದೆ. ಮತ್ತು ತರಳಳ್ ಎಂಬುದು ಅಸಾಧು. ತರಳೆ ಎಂದೇ ಆಗಬೇಕು. ಸೀತೆಯು ಸೀತಳ್ ಎಂದು ಆಗದಲ್ಲವೇ 🙂

   • ಧನ್ಯವಾದಗಳು . ಎರಡರಲ್ಲೂ ಛಂದಸ್ಸನ್ನು ತಿದ್ದಿದ್ದೇನೆ. 🙂

  • ಹಳಗನ್ನಡದರಸಿ ಕಾಂಚನಾ 🙂

   • ಎಣಿಸಲಾರೆನಾಂ ಹಳಗನ್ನಡದ ಕಷ್ಟಮಂ 🙂

    • ಎಣಿಕೆಗೆ ಕಷ್ಟವಾಗುವಷ್ಟು ಹಳಗನ್ನಡಪ್ರಯೋಗ*ವಾಗಿದ್ದರೆ, ಅದೇ ಸಿದ್ಧಿ! (‍*’ಕನ್ನಡಪ್ರಯೋಗ’ಕ್ಕೆ ಅರಿಸಮಾಸವಿನಾಯಿತಿಯುಂಟೆ?

 5. ಮೊನ್ನೆಯ ಆಶುಕವಿತಾಗೋಷ್ಠಿಯಲ್ಲಿ ಈ ಬಗೆಗೆ ಹೇಳಿದ ಪದ್ಯ:
  (ನಳನಿಗೆ ಹಂಸವು ಅವನ ಮತ್ತು ದಮಯಂತಿಯ ಪ್ರಣಯವು ಫಲಿಸುವುದೆಂದು ತಿಳಿಸುವ ಪರಿ. ಇದನ್ನು ಆ ಹಕ್ಕಿಯು ಬ್ರಹ್ಮ ಮತ್ತು ವಾಣಿಯರ ಸಲ್ಲಾಪದ ನಡುವೆ ಕೇಳಿತ್ತೆಂಬಂತೆ ಪದ್ಯದಲ್ಲಿ ಧ್ವನಿಸುತ್ತದೆ.)

  ನಾಲೀಕಾಸನನೊಲ್ದು ಯೋಜಿಸುತಿರಲ್ ದಾಂಪತ್ಯಸೂತ್ರಂಗಳಂ
  ಲೀಲಾವಲ್ಲಕಿವಾದ್ಯಲೋಲೆ ನಲವಿಂ ತಾನೇತಕೋ ನಕ್ಕಳಯ್ |
  ಕೇಲೀರಾಜಮರಾಲನಾಂ ಕೆಲದೊಳೇ ಕೇಳ್ದೆಂ ವಿವಾದಂಗಳಂ
  ಸೋಲಲ್ಕೊಪ್ಪದೆ ನಿಮ್ಮೊಳಾರ್ಪುವಡೆಯಲ್ ಪೂಣ್ದಂ ಪ್ರಜಾನಾಯಕಂ ||

  (ನಾಲೀಕಾಸನ, ಪ್ರಜಾನಾಯಕ = ಬ್ರಹ್ಮ, ವಲ್ಲಕಿ =ವೀಣೆ, ಮರಾಲ/ಳ = ಹಂಸ)

  ಅದೇ ಗೋಷ್ಠಿಯಲ್ಲಿ ಹೇಳಬೇಕೆಂದಿದ್ದರೂ ಹೇಳಲಾಗದೆ ಉಳಿದ ಪದ್ಯ:

  ಬರ್ದುಕೇ ಬಾಡಿರೆ ಬಂಧುಪೀಡನೆಗಳಿಂ ವೈಧವ್ಯದಿಂ, ಕಂದನಂ
  ಪದಪಿಂ ಪೋಷಿಸುತೆಂತೊ ರಿಕ್ತತೆಯೊಳೇ ದಾಸ್ಯಾದಿಕರ್ಮಂಗಳಿಂ-
  ದೊದವಲ್ ಮುಂದೆ ಕುಮಾರನಭ್ಯುದಯಮುಂ ವೈವಾಹಮುಂ, ಕಂಡಿರಲ್
  ಮದುಮಕ್ಕಳ್ ನಮಿಸಲ್ಕೆ ಬಾಗುತೆದುರೊಳ್; ತಾನೇತಕೋ ನಕ್ಕಳಯ್ !

  • ಗಣೇಶರೆ, ಬಹಳ ಸುಂದರವಾಗಿದೆ. ಮೊದಲನೆಯದು ಬಹಳ dramatic ಆಗಿ ಬಂದಿದೆ. ಎರಡನೆಯದು ಗಹನವಾಗಿ ಧ್ವನಿಗರ್ಭಿತವಾಗಿದೆ.

 6. ಆ ಸದಾಶಿವರಾಣಿ ಶೋಭಾಯಮಾನೆಯುಮೆ
  ಮಾಸದಿಹ ಕಾ೦ತಿಯಿ೦ದೆಸೆವ ಮೊಗದೆ
  ಲಾಸವಾಡುತೆ ದೀಪ್ತಿ ಹಣತೆಯೊಳಗೆಸೆವ೦ತೆ
  ಭಾಸಿಪೊಲು ತಾನೇತಕೋ ನಕ್ಕಳೈ

  ಕ೦ಗಳಿಗೆ ಕಾಣಿಸದ ನಗೆಯ ಹೊಳಹು ಸಲೆ ಕೇ-
  ಳ್ವ೦ಗಕ್ಕೆ ಕೇಳಿಸದ ಮಿದುವಿನೊಳ್ಪು
  ಭ೦ಗಗಾಣದ ರ೦ಗು ರ೦ಗಿನ ತರ೦ಗತತಿ
  ಭೃ೦ಗಗಳವೋಲೆಯಾ ಮೊಗವ ಬಳಸಿ

  ತಾನಾಗಿ ಹರಹರಡಿ ತನ್ನತನವೊಡೆದೊಡೆದು
  ನಾನಾತ್ವವನೆ ಪಡೆದು ಬೆಳೆದು ಬೆಳೆದು
  ಮೌನದೊಳೆ ಬೀಸಿದ್ದ ಬಲೆಯೊಳಗೆ ಸಿಕ್ಕಿರುವ
  ಮೀನಿನೊಲು ನುಡಿಗಟ್ಟಿ ರೂಪಾಯ್ತಲೇ

  ಘನವಾಗಿರೆ ಧ್ವನಿ ಘನೀಭವಿಸಿತೆ೦ಬ೦ತೆ
  ಘನವಾಗೆ ಕಣಕಣವು ರಾಶಿಯಾಗಿ
  ಘನಗಭೀರತೆಯೆ ಮೈವೆತ್ತು ಕೂತಿತ್ತೆ ಚಿ-
  ದ್ಘನಮೂರ್ತಿಯೆ೦ಬೊಲಾ ಘನರವದಲಿ?!

  ತೆರೆಗೆ ತೆರೆಯಪ್ಪಳಿಸೆ ಕೊರಳ ಸರ್ಪವು ಬೆದರಿ,
  ಮರೆಸಿಕೊ೦ಡೊಡೆ ಜಟಾಪಟಲಗಳ ಹಿ೦ದೆ
  ಥರಥರನೆ ಕ೦ಪಿಸಿರೆ ತ೦ಗದಿರ ಶಾ೦ತಿಗೆ-
  ಟ್ಟುರಿಯ ಝಳ ಮೇಲಾಯ್ತು ನಿಟಿಲನೇತ್ರನಿಗೆ

  ಸ್ತಿಮಿತವದು ತಪ್ಪಿ ಮನ ಹೊರಗೋಡಿ ಬ೦ದಿರೆ
  ಕ್ರಮದೆ ಕಣ್ತೆರೆದು ನೋಡಿದನು ಶಿವನು
  ಭ್ರಮಿಪ ದೃಶ್ಯಾವಳಿಯ ಬಹಳ ಕಲರವದ ಸ೦-
  ಭ್ರಮದ ಮಧ್ಯದಲಿ ಮನದನ್ನೆಯೆಲ್ಲಿ?

  ಕಾಣದಲೆ ತನ್ನಾಕೆಯನು ನೊ೦ದನಾಗೆಲ್ಲ
  ತಾಣದೊಳೆ ತಡಕಾಡಿ ಬೆರಗಾದನಾಗ
  ಜಾಣು ಮಾತಿನ ಮಲ್ಲಿ ತಾನೆಲ್ಲಿ ಸಿರಿಮೆಯ್ಯ
  ಬಾಣದಲುಗಿನ ಕಣ್ಣ ಕುಡಿಯಾಕೆಯೆಲ್ಲಿ

  ಇಲ್ಲಿದ್ದಳಲ್ಲ ತಾನೀಗೆಲ್ಲಿ ಪೋದಳೋ
  ಕಲ್ಲ ಮನದಾಕೆಯೇನಿವಳು ಕಾಣೆ!!
  ಫುಲ್ಲಕುಸುಮವ ಸೋ೦ಕಿ ಬಹ ಗಾಳಿ ನಕ್ಕಿರಲು
  ಝಲ್ಲನೆಯೆ ಹೊಳೆದಿತ್ತು ಶ೦ಕರ೦ಗೆ

  ಈ ಸೊಬಗಿನೈಸಿರಿಯ ಬನದೊಳಗೆ ಹಕ್ಕಿ ತಾ-
  ನೀ ಸಿರಿದನಿಯ ಹಾಡ ಹಾಡುತ್ತಲಿರಲು
  ಈ ಸೊಗದ ಹಸಿರಿನಿ೦ದೊಸರುತಿಹ ರಸಧಾರೆ
  ಈ ಸೊಗಸ ಬೇರಾರು ಕೊಡಲಾಪರೆ೦ದು

  ಚಟುಲ ಕುಡಿನೋಟದುಯ್ಯಾಲೆಯೊಳೆ ನವರಸ-
  ಸ್ಫುಟನವಾದುದೊ ಭಾವವಿಸ್ತರದಲಿ
  ಸುಟಿಮೈಯ ಕಾ೦ತಿಯಿ೦ದಲೆ ರೂಪೊ, ವಾಗ್ಝರಿ-
  ತ್ರುಟಿಗಳಿ೦ದಲೊ ಶಬ್ದಗಳಿವೆಲ್ಲವು

  ಏನೇನ ಗೆಯ್ಯುವಳೊ ಗಯ್ಯಾಳಿ ಹೆಣ್ಣೀಕೆ
  ತಾನೆ ತೋರದಲೆ ತಿಳಿಯಲಳವಲ್ಲ
  ಏನ ಮಾಡುವುದೆ೦ದು ಹುಸಿಮುನಿದು ಮಕ್ಕಣ್ಣ
  ತಾನೊಮ್ಮೆಗೇ ನಕ್ಕು ನಗೆಯೊಳಾಳ್ದ

  ಕೊರಳುಗಪ್ಪಿನ ಹರಹು ಧೂರ್ಜಟಾಭ್ರದ ಭರವು
  ಬಿರುದುಟಿಯ ಪಾಲ್ಬೆಳಕ ದ೦ತಪ೦ಕ್ತಿ
  ತರಲ ಶಶಿ ಮೇಲಿ೦ದಲಿನ್ನೊಬ್ಬ ಶಶಿ ಕೆಳೆಗೆ
  ದೊರೆತನೆ೦ದುಬ್ಬಿನಲಿ ನಲಿದು ಹೊಳೆದ

  ಮೌಳಿಮ೦ಡಲದ ಗ೦ಗೆಯಲೆಗಳು ಮಿನುಗಿ ತಾ-
  ರಾಳಿಯ೦ದದೆ ತೋರಿ ಮೋಹಿಸಿರಲು
  ಮೇಳವಿಸುತಾನ೦ದವಚ್ಚರಿಗಳೊಮ್ಮೆ ಮೈ-
  ದಾಳಿ ಜಗವೆಲ್ಲ ನಲಿದಾಡುತಿರಲು

  ಒಳಿತುದೋರಲಿ ಬಾಳುವೆಯು ಸಾಗೆ ಮತಿಗೆಲ್ಲ
  ತಿಳಿವು ತಿಳಿಯಾಗೆ ಸಿಹಿನೀರಿನ೦ದದಲಿ
  ತುಳಿವ ಬಟ್ಟೆಗೆ ಬೆಳಕು ದಣಿದ ಮನಕಿಷ್ಟೊಲುಮೆ
  ಬೆಳೆಸೀಯಲೊಲಿದು ಹರಗೌರಿಯರ ನಗುವು

  • ವೆರಲ ತೋರಿರೆ ಹಸ್ತಮನೆ ನುಂಗುವೀ ಪರಿಯು
   ತರಮೇನು ನಿನಗೆ ನೀಲಗ್ರೀವನೆ?
   ಒರೆಯೆನ್ನೆ ಮುಕ್ತಕಮನೊಂದನ್ನೊ ಎರಡನ್ನೊ
   ಸರಸದೀ ಖಂಡಕಾವ್ಯಮನೆ ಪೇಳ್ದೈ||
   Clap clap

   • ಹದಿನಾಲ್ಕರಲ್ಲಿ ಯಾವುದಾದರೂ ಒ೦ದನ್ನು ಮೆಚ್ಚುತ್ತಾರೆ೦ಬ ಆಸೆಯಿ೦ದ ಬರೆದದ್ದು… ಧನ್ಯವಾದಗಳು 🙂

   • ಆಸೆಯಿಂ ಬರೆಯುವುದ ಬಿಟ್ಟು ಇನ್ನಾರೆ ನೀ-
    ನೀಸು ಪರಿಶುದ್ಧದಾಸ್ಥೆಯಿನಿಂದಲೇ|
    ಜೈಸದೊಡೆ ಆಸೆಯವಸಾನವು ನಿರಾಸೆಯೊಳ್
    ಲೇಸೆಂದಿಗುಂ ಸೋಲದಿರುವಾಸ್ಥೆಯೇ||

    • ನೀಲಕಂಠರೇ! ನಿಮ್ಮ ಸುಂದರಭಾಷಾಯೋಷೆಯ ದ್ವಿಸಪ್ತಪದಿಯು ಚೆನ್ನಾಗಿದೆ. ಆದರೆ ಮೂಲತಃ ಇರುವ ತಾನೇತಕೋ ನಕ್ಕಳ್ ಎಂಬ ಮಾತಿನ ಪೂರಣಕ್ಕೆ ಬೇಕಾದ ಅಡಕವಾಗಲಿ, ಸೊಗಸಾಗಲಿ ಎಲ್ಲಿಯೂ ಕಾಣಲಿಲ್ಲ. ಇದೇಕೆ?
     ನೀಲಕಂಠನ ಕಾವ್ಯನೃತ್ಯಮಂ ಕಂಡು ಹೃ-
     ದ್ವೇಲಮಂ ವಾಗರ್ಥದಾಂಪತ್ಯಮಂ|
     ಏನಿಂತು ಸಮುಚಿತೌಚಿತ್ಯವನವಾಸಮೆನೆ
     ತಾನೇತಕೋ ನಕ್ಕಳಯ್ ಶಾರದೆ…

     • ಸರ್, ಗೌರಿ ತಾನೇತಕೋ ನಕ್ಕಳು (ನಮಗೆ ತಿಳಿಯಲಾರದ ಕಾರಣ) ಎ೦ಬಲ್ಲಿ೦ದ ಶುರುಮಾಡಿ, ಆ ನಗೆಯ ಪರಿಣಾಮ ಏನು ಎ೦ದು ಉಳಿದ ೧೩ ನುಡಿಗಳಲ್ಲಿ ಬೆಳೆಸಿ ಬರೆದದ್ದು. ಸರಿ ಅನ್ನಿಸಲಿಲ್ಲವಾ? ಉಳಿದ೦ತೆ ಮೆಚ್ಚುಗೆಗೆ ಧನ್ಯವಾದಗಳು 🙂

  • ಗಣೇಶರೆ,
   ’ತಾನೇತಕೋ ನಕ್ಕಳಯ್’ ಎಂಬುದಂ ಬಳಸೆ
   ಐನಾತಿ ಅವಕಾಶಗಳು ಕಮ್ಮಿಯೇ|
   (’ತಾನೇತಕೋ ನಕ್ಕಳಯ್ ಶಾರದೆ’ ಎಂಬಲ್ಲಿ ನೀವು, ಹಾಗೂ ಈ ಪದ್ಯದಲ್ಲಿ ನಾನು…)
   ಆನು-ತಾವುಗಳಿಂತು ಪ್ರತಿಕ್ರಿಯಾಪದ್ಯದೊಳೆ
   ಹೇನ ಹೆಕ್ಕುವ ತೆರದಿ ಮೆರೆಸಬೇಕೈ||

 7. ಅರೆವೆಂದಿರ್ಪ ಪೆಣಂಗಳಂ ಬಿಸುಡೆ ಲೋಗರ್,ನೀರ ಮಾಲಿನ್ಯದಿಂ,
  ಸುರಿಯಲ್ ತ್ಯಾಜ್ಯವಸಭ್ಯರಂ ಕ್ಷಮಿಸಿ ಗಂಗಾಮಾತೆ,ಕಾರುಣ್ಯದಿಂ,|
  ಸಿರಿಯಂ ಯಾಚಿಸಿ,ಪಾಪನಾಶಮನೆ ಗೈಯಲ್ಕೆಂದು ಬೇಡಲ್ ನರರ್,
  ಧರೆಯೊಳ್ ಪಾವನೆ ನೀನೆನಲ್ ಜಳಕದಿಂ, ತಾನೇತಕೋ ನಕ್ಕಳೈ ||

  • ತ್ಯಾಜ್ಯವಸಭ್ಯರಂ = ತ್ಯಾಜ್ಯವು+ಅಸಭ್ಯರಂ ಅಲ್ಲವೆ? ತ್ಯಾಜ್ಯವ+ಅಸಭ್ಯರಂ ಎಂದೂ ಆಗುತ್ತದೆಯೆ?

   • ಪ್ರಸಾದು, ನಿಮ್ಮ ಸಂದೇಹವೇ ಹೆಚ್ಚು ಕಡಮೆ ನನ್ನದೂ… ಅದರೆ ಉಳಿದಂತೆ ಪದ್ಯವು ತನ್ನ ಶಬ್ದಾರ್ಥಸ್ವಾರಸ್ಯದಿಂದಲೂ ಕಲ್ಪನೆಯ ನಾವೀನ್ಯದಿಂದಲೂ ಸಲೆ ಸೊಗಸಾಗಿದೆ.

    • ಸಹೋದರರೆ,
     ಪದ್ಯವನ್ನು ಮೆಚ್ಚಿರುವುದಕ್ಕೆ ಧನ್ಯವಾದಗಳು.ನಿಮಗಿಬ್ಬರಿಗೆ ಸಂದೇಹವಾದಂತೆ, ಪದ್ಯ ಬರೆಯುವಾಗ ನನಗೂ ಆಯಿತು. ಆದರೂ ತಪ್ಪೊಪ್ಪುಗಳನ್ನು ತಿಳಿದಂತಾಗುತ್ತದೆಂದು ಹಾಗೆಯೇ ಬಳಸಿದೆ. ದ್ವಿತೀಯವಿಭಕ್ತಿಪ್ರತ್ಯಯವನ್ನು “ಅಮ್” ಎಂದೇ ಸಂಧಿಕಾರ್ಯಗಳಲ್ಲಿ ಬಳಸಬೇಕೆನಿಸುತ್ತದೆ. ಹಾಗಾದಾಗ “ತ್ಯಾಜ್ಯಮನಸಭ್ಯರಂ” ಎಂಬುದು ಈ ಪದ್ಯಕ್ಕೆ ಹೊಂದುವುದಿಲ್ಲ. ಹೀಗಾಗಿ ಎರಡನೇ ಪಾದವನ್ನು ” ಸುರಿಯಲ್ ತ್ಯಾಜ್ಯವ ಮಂದಿಗಳ್, ಕ್ಷಮಿಸಿ ಗಂಗಾಮಾತೆ ಕಾರುಣ್ಯದಿಂ ” ಎಂಬುದಾಗಿ ಸವರುತ್ತೇನೆ.

     • ಅಲ್ಲಿವರೆಗೆ ಕಾದುಕುಳಿತಿರುತ್ತೇನೆ 😀

     • ಹಾಗೆಯೇ ಆಗಲಿ 🙂 🙂

 8. ಜ್ವಲದಗ್ನಿಪ್ರಭಮತ್ಸರಂ ಪೊಡೆಯೊಳಿರ್ಪಂ ಕಾದು ಸೋಲ್ತಂ ಬರ್ದುಂ-
  ಕಲೆನುತ್ತುಂ ಕೊನೆಗಿಂತು ಪಿಂದು ಪೆರಗಾಗುತ್ತುಂ ಸರಂಬೊಕ್ಕನೆಂ
  ದುಲಿಯಲ್ ಭೀಮವಚೋಮರಂದಮಧುಪಂಬೋಲ್ತಿರ್ಪಳಂದಾಲಿಸಲ್
  ಸುಲಿಪಲ್ಮಿಂಚಿನ ಕಾಂತಿಯಿಂ ಸುಡುವವೊಲ್ ತಾನೇತಕೋ ನಕ್ಕಳೈ||
  (ಆಶುಕವಿತಾಗೋಷ್ಠಿಯಲ್ಲಿ ಕೆಟ್ಟ ಪದ್ಯವನ್ನು ಹೇಳಿದ ಕಾರಣ ಬೇರೆಯದೇ(ರನ್ನನ ಪ್ರಭಾವದ) ಪದ್ಯವನ್ನು ಹಾಕುತ್ತಿದ್ದೇನೆ-
  ಹೊಟ್ಟೆಯಲ್ಲಿ ಉರಿಯುತ್ತಿರುವ ಬೆಂಕಿಯಂತೆ ಮತ್ಸರವನ್ನು ಹೊಂದಿದ್ದವನು ಕಾದು ಸೋತು ಕೊನೆಗೆ ಬದುಕಲೆಂದು ಹಿಂದುಮುಂದಾಗಿ ಸರಸ್ಸನ್ನು ಹೊಕ್ಕ” ಎಂದು ಹೇಳಲು ಭೀಮನ ಮಾತೆಂಬುದು ಮಕರಂದಕ್ಕೆ ದುಂಬಿಯಂತಿರುವ ದ್ರೌಪದಿ ಅದನ್ನು ಕೇಳಿ ಸುಲಿಪಲ್ಗಳ ಕಾಂತಿಯಿಂದಲೇ ಸುಡುವಂತೆ ತಾನೇತಕೋ ನಕ್ಕಳು)

  • ತು೦ಬ ಹಿಡಿಸಿತು. ನಿಮ್ಮ ಆ ಕೆಟ್ಟ ಪದ್ಯವೂ ಚೆನ್ನಾಗಿತ್ತು 🙂

   • ಸಾಂಗತ್ಯ|| ಕೆಟ್ಟದ್ದು ಎಂದೂವೆ ಸಂದಾಕೇ ಇರ್ತೈತೆ
    ಥಟ್ಟಂತ ಸೆಳಿತೈತೆ ಮನವ|
    ಒಟ್ಟಾರೆ ತಾನೇನೆ ಸಂದಾಗಿ ಇರುವಾತ
    ಲೊಟ್ಟೆಯೊಳ್ ಕಾಂಬುವನೊಳಿತ|| 😉

 9. ನಾಡನೇ ಕಾಯೆ ನಾವ್ ಬಧ್ಧರೆಂದೆಂಬರಾ
  ಪಾಡನುಂ ಕಂಡುತಾನೇತಕೋ ನಕ್ಕಳಯ್|
  ಹೂಡಿ ಸಂಸಾರಮಂ ಕಾಲಪೆರ್ಚಾಗಿರಲ್
  ಕಾಡುವೀ ಮಕ್ಕಳಂ ಬಲ್ಲಳೇಂ ಭಾರತೀ!
  (ನಾಡನ್ನು ಕಾಯಲು ತಾವು ಬಧ್ಧರೆಂಬವರ ಅವಸ್ಥೆಯನ್ನು(ಬೂಟಾಟಿಕೆ), ಕಂಡ ತಾಯಿ ಭಾರತಿಯು ನಗುತ್ತಿದ್ದಾಳೆ. ಅವಳಿಗಾದರೋ ಜೀವನಾನುಭವ ಹೆಚ್ಚಾಗಿರುವದರಿಂದ,ಮಕ್ಕಳನ್ನು ಬಲ್ಲವಳೇ ಆಗಿದ್ದಾಳೆ)

  • ತಾಯಲ್ಲದಿನ್ನಾರು ಕಾಯುವಳ್ ಕಂದನ್ನ
   ನಾಯಂತೆ ಇರುವನನನುನಯಿಸಿ| ಬುದ್ಧನ (ರಾಹುla)
   ಮಾಯೆ ಬಂಗಾರಿ (सोना) ಮುದ್ದಿಪಳು||

 10. ಎಡಗಡೆಯ ಒಲೆಮ್ಯಾಕೆ ಕಾಫಿಯ ಬಸಿಯುತ್ತ
  ಮಡಕೆಯೊಳ್ ಸಪ್ನೀರ ಬಲಕೆ|
  ಕಡಕಡ ತಾನೇ ತಕೋ(ಗೋ) ನಕ್ಕಳಯ್ ಒಡತಿ
  ದುಡುಕುತ್ತೆ ಸುರಿದುಪ್ಪನೆಡಕೆ||

 11. ಸುಳಿದಿರ್ದ೦ತದು ಮಾರುತ೦ ಮಲಯದಿ೦, ಸಾರಲ್ ಸುಗ೦ಧ೦, ಸುಮಾ-
  ವಳಿಸೌಧಕ್ಕೆ ವಸ೦ತಮಾರರೊಲವಿ೦ ಬಾಳ್ವಾಸೆಯ೦ ಸುಸ್ಫುಟ೦-
  ಗೊಳಿಸುತ್ತು೦ ಬರಲ೦ತು, ಭಾನುಕಿರಣ೦ಗಳ್ ನರ್ತಿಸಲ್ ತೂಗೆ ಬ-
  ಲ್ಲಳಿದೆಲ್ಲ೦ ತನಗಲ್ಲಲೆ೦ದು, ತರು ಕಾಣ್ ತಾನೇತಕೋ ನಕ್ಕಳಯ್

  ಮಲಯಮಾರುತದಾಗಮನ, ಪಸರಿಸುವ ಸುಗ೦ಧ, ಬಾಳುವಾಸೆಯನ್ನು ಹೆಚ್ಚಿಸುತ್ತ ಮಾರ, ವಸ೦ತರು ಸುಮದ ಸೌಧಕ್ಕೆ ಬ೦ದಿರುವುದು, ಇವೆಲ್ಲ ತನಗಲ್ಲ ಎ೦ದು ಬಲ್ಲಳಾಗಿದ್ದರೂ, ತರು ತನ್ನ ಹಿ೦ದೆ ನೇಸರಿನ ಕಿರಣಾಳಿ ನರ್ತಿಸುತ್ತಿರುವಾಗ ತಲೆದೂಗುತ್ತ ಅದೇಕೋ ನಕ್ಕಳು.

 12. ಮೀನು ಮಾರುವ ನೀರೆ ತಂಗಿರಲು ಸಖಿಯಲ್ಲಿ
  ಬಾನ ಸಂಜೆಗೆ ಮಲ್ಲೆ ಹೂ ಬಿರಿವುದಲ್ಲಿ I
  ತಾನ೦ದು ಬಳಲಿದರು ನಿದ್ದೆಯೇ ಬರದಿರಲು
  ಮೀನಾಕ್ಷಿ ತಾನೇತಕೋ ನಕ್ಕಳಯ್ II

  ಆದರಿಸಿ ಹೂವಾಡಿ ಕಾರಣವತಿಳಿದಾಗ
  ವೇದನೆಗೆ ಹೇತುವಾದುದೆ ಗಂಧವಲ್ಲಿ I
  ‘ಬಾದರಾಯಣಬ೦ಧ ಮೀನ ಬುಟ್ಟಿಯದೆನಗೆ
  ಬಾಧೆಯಾಗದು ಪಕ್ಕಕಿರಲದಿಲ್ಲಿ’ II
  ಮೀನಾಕ್ಷಿ = ಮೀನು ಮಾರುವವಳು

  ಇದು ಶ್ರೀ ರಾಮಕೃಷ್ಣರ ನೀತಿ ಕಥೆಯೊಂದನ್ನು ಪದ್ಯಕ್ಕೆ ಅಳವಡಿಸುವ ಪ್ರಯತ್ನ .
  ಒಮ್ಮೆ ಮೀನು ಮಾರುವವಳು ಕೆಲಸ ಮುಗಿಸಿ ಬರುವಾಗ ರಾತ್ರೆಯಾದುದರಿಂದ , ಸಮೀಪದಲ್ಲಿರುವ ತನ್ನಾತ್ಮ ಸಖಿ, ಹೂವು ಮಾರುವವಳಲ್ಲಿ ರಾತ್ರೆಯನ್ನು ಕಳೆಯಲು ನಿರ್ಧರಿಸುತ್ತಾಳೆ .ಅಲ್ಲಿ ಎಲ್ಲಾ ಸೌಕರ್ಯಗಳಿದ್ದರೂ ನಿದ್ದೆ ಮಾತ್ರ ಹತ್ತಿರ ಸುಳಿಯಲಾರದು . ಮೀನು ವಾಸನೆಯ ಬದಲು ಮಲ್ಲಿಗೆ ಪರಿಮಳವೇ ಇದಕ್ಕೆ ಕಾರಣವೆಂದು ತಿಳಿದು ಮೀನಿನ ಬುಟ್ಟಿಗೆ ನೀರು ಚೆಲ್ಲಿ ವಾಸನೆ ಘಮಿಸುವಾಗ ಸಮೀಪದಲ್ಲಿರಿಸಿ ಚೆನ್ನಾಗಿ ನಿದ್ದೆ ಮಾಡುತ್ತಾಳೆ

  • ಆಹಾ! ಒಳ್ಳೆಯ ಕಥಾಕಲ್ಪನೆ! ಅಭಿನಂದನೆಗಳು.

   • ಧನ್ಯವಾದಗಳು ಸರ್ .
    ಕ್ಷಮಿಸಿ ,ದ್ವಿತೀಯ ಚರಣದ ಎರಡನೆಯ ಮತ್ತು ಮೂರನೆಯ ಪಾದಕ್ಕೆ ಸಂಬಂಧವಿಲ್ಲದಂತೆ ತೋರುವುದಕ್ಕಾಗಿ ಸಣ್ಣ ಬದಲಾವಣೆ –
    ಆದರಿಸಿ ಹೂವಾಡಿ ಕಾರಣವತಿಳಿದಾಗ
    ವೇದನೆಗೆ ಹೇತುವಾದುದೆ ಗಂಧವಲ್ಲಿ I
    ಬಾದರಾಯಣಬ೦ಧ ಮೀನ ಬುಟ್ಟಿಯು ತನಗೆ
    ಬಾಧೆಯಾಗದುಯೆಂದಿರಿಸಿ ಪಕ್ಕದಲ್ಲಿ II

 13. ಚೆಲ್ವಾಗ೦ಗಳನೀಕ್ಷಿಸಲ್ ಕುರುಡನೀ ಗ೦ಡ೦ ಗಡೆ೦ದೋ ಬಿಡಲ್
  ಕೊಲ್ವ೦ ಭೀಷ್ಮನಲಾ ಸ್ವರಾಜ್ಯಮನೆನಲ್ ಬ೦ಧಕ್ಕೆ ಸಿಲ್ಕುತ್ತಲಾ೦
  ಕೊಲ್ವೆ೦ ಸ್ವೀಯಸುಖ೦ಗಳೆಲ್ಲಮನೆನುತ್ತು೦ ತನ್ನ ಸೌಭಾಗ್ಯಮೇ೦
  ಚೆಲ್ವೆನ್ನುತ್ತೆ ವಿಷಾದಹಾಸದವೊಲೋ ತಾನೇತಕೋ ನಕ್ಕಳಯ್

  ಭೀಷ್ಮ ಗಾ೦ಧಾರದ ಮೇಲೇರಿ ಹೋಗಿ ಧೃತರಾಷ್ಟ್ರನಿಗೆ ಕನ್ಯೆಯನ್ನು ಕೇಳಿದಾಗ ಗಾ೦ಧಾರಿಯ ಮನಸ್ಸ್ಥಿತಿ.

  • ಪದ್ಯಸಂದರ್ಭವೂ ಗುಂಫನವಿಧಾನವೂ ಸೊಗಸಾಗಿವೆ. ಅಂಗಂಗಳಂ ಎಂಬುದು ಹೆಚ್ಚು ಹಳಗನ್ನಡಕ್ಕೆ ಹತ್ತಿರದ ರೂಪ. ಕನ್ನಡನುಡಿಯಲ್ಲಿ ನಪುಂಸಕಲಿಂಗಕ್ಕೆ ಬರುವ ಸಂಸ್ಕೃತದ ಅಕಾರಾಂತಬಹುವಚನಗಳು ಸಬಿಂದುಕವೆಂದು ಈ ಮುನ್ನ ಪದ್ಯಪಾನದಲ್ಲಿಯೇ ತಿಳಿಸಿದ್ದೇನೆ. ಉದಾ: ಪುಷ್ಪಂಗಳ್, ರತ್ನಂಗಳಂ, ಜನಂಗಳಿಂ (ಇದಕ್ಕೆ ಪುಲ್ಲಿಂಗರೂಪವಿದ್ದಾಗ ಬಿಂದುವಿಲ್ಲ, ಜನರ್ಕಳ್. ಇದು ದೇವರ್ಕಳ್, ಬಾಲರ್ಕಳ್ ಎಂಬಂತೆ), ವನಂಗಳೊಳ್ ಇತ್ಯಾದಿ

   • ಧನ್ಯವಾದಗಳು ಸರ್. ಚೆಲ್ವಾ೦ಗ೦ಗಳನೀಕ್ಷಿಸಲ್… ಎ೦ದೇ ಕವನಿಸಿದ್ದೆ, ಆದರೆ ಟೈಪಿ೦ಗ್ ಮಿಸ್ಟೇಕ್ ಆಗಿದೆ.

   • ಕ್ಷಮಿಸಿ, ಚೆಲ್ವ೦ಗ೦ಗಳ…

 14. ಸಲೆಕಷ್ಟಂಗಳನಿತ್ತು ವೈರದಿನೆ ತಾಂ ದೈತ್ಯಾಪ್ತರೀ ನಾಡಿನೊಳ್
  ಹಲಮಾನುಷ್ಯರ ಬಾಳ್ತೆಯಂ ದಿನದಿನಂ ಪಾಳ್ ಗೈದು ಬೀಗುತ್ತಿರಲ್
  ಸಲಹಲ್ಕೆಂದೆ ನರೇಂದ್ರ ರೂಪಿನೊಳೆ ದಲ್ ಪುಟ್ಟಿರ್ಪನೇಂ ಕ್ಷತ್ರಿಯಂ?
  ಬಲಮಿತ್ತುಂ ಜಯನಾರಿಯಾ ಜನಪಗಂ ತಾನೇತಕೋ ನಕ್ಕಳೈ!

 15. ಲಯಗ್ರಾಹಿ|| ಸುಮ್ಮಾನದಿಂ ಸೋದರಾದ್ಯರ್ಗಳನ್ನೊಂ-
  ದೊಮ್ಮೆ (ಮಾತೃ)ಪ್ರಸೂಭಾವದಿಂ ತಬ್ಬದಳ್ ತಾಂ|
  ತಮ್ಮಂ ಪ್ರಯಾಸಂಗೊಳುತ್ತಿರ್ದೊಡಿರ್ದಳ್
  ಬಿಮ್ಮೆಂದು, ತಾನೇತಕೋನಕ್ಕಳಯ್ ಪೇಳ್|| (ತಾನು ಏತಕೋನು ಅಕ್ಕ!)

 16. ಆಕಾಶಾ೦ಕಣದೊಳ್ ಸಖೀಜನರಿರುತ್ತು೦ ತಾರೆಯೋರ್ವಳ್ ಕೆಲರ್
  ಕಾಕೂಕ್ತ೦ಗಳೊಳೆ೦ತೊ ಜಲ್ಪಿಸುತಿರಲ್ ತಾನೇತಕೋ ನಕ್ಕಳಯ್
  ಏಕಾ೦ತ೦ ಬಲು ಬೇಸರ೦ಗೊಳಿಸಿರಲ್ ಕೈಲಾಸದೊಳ್ ಮೋಹದಿ೦-
  ದಾಕೃಷ್ಟಳ್ ತನಗೆ೦ದು ಚ೦ದ್ರನುಡುಪ೦ ತಾನೆ೦ದು ಬೀಗಿರ್ದನಯ್

  ಆಕಾಶದ ಅ೦ಗಳದಲ್ಲಿ ಕುಳಿತು ತಾರೆಗಳು ಹರಟೆ ಕೊಚ್ಚುತ್ತಿರುವಾಗ ಒಬ್ಬಾಕೆ ಅದೇಕೋ ನಕ್ಕದ್ದನ್ನು ಕ೦ಡು ಕೈಲಾಸದ ಏ೦ಕಾತದಲ್ಲಿ ಬೇಸತ್ತ ಚ೦ದ್ರ ಆಕೆ ತನ್ನನ್ನು ಮೋಹಿಸಿ ನಕ್ಕದ್ದು ಎ೦ದು ಭ್ರಮಿಸಿ ತನ್ನನ್ನು ತಾನು ಉಡುಪ ಎ೦ದು ಕರೆದುಕೊ೦ಡು ಬೀಗಿದ.

  • ಏ೦ಕಾತ: ಜಾಹೀರಾತುಗಳಲ್ಲಿ ’ಸಂರ್ಪಕಿಸಿ’ ಎಂದು ಟಂಕಿಸಿರುವುದನ್ನು ನಾವು ಇನ್ನಾದರೂ ಮನ್ನಿಸೋಣ.

 17. ತಡಕುತ್ತು೦ ಬರುತ೦ಕುಡೊ೦ಕಿನ ಪಥ೦ಗಳ್ ಕೂಡೆ ಪೋಗಿರ್ದು ಬೀ-
  ಳ್ವೊಡೆ ತೆಕ್ಕೈಸುವ ದೈತ್ಯಬಾಹುಗಳಲಾ ಸಾಮುದ್ರವೇಲಾಕುಲ೦
  ಬಿಡದಿರ್ದು೦ ಕರಕಷ್ಟಸರ್ಗಮವಳ೦, ತನ್ನ೦ಗಮ೦ ತಾಗಿರಲ್
  ಸುಡುಗೈಯಿ೦ ರವಿ, ನೀರನೀರೆ ನಲವಿ೦ ತಾನೇತಕೋ ನಕ್ಕಳಯ್

  ಸೂರ್ಯನ ಕಿರಣಗಳು ತಾಗಿದಾಗ ನದಿಯ (ನೀರನೀರೆ ) ಅನುಭವ…

 18. “ಧರಣಿಪಾಲಕನಂತೆ! ಬಂಧುರಕ್ಷಕನಂತೆ!
  ವರರಾಜ್ಞಿಯನ್ಕಾಡಿಗಟ್ಟಿರಲ್ಕೆ!”
  ಜರೆದು ರಾಮನನೆ ತಾನೇತಕೋ ನಕ್ಕಳೈ
  ಯೊರೆವ ಮುದ್ದಣನಾಲಿಸುತ್ತುಮರಸಿ

  • ಮೇಡಮ್, ರಾಮನದೇನೂ ತಪ್ಪಿಲ್ಲ. ಸಿರಿದೇವಿ ಅರಿಯಾಗಿದ್ದರಿ೦ದ ಅವಳನ್ನು ದೇಶದಿ೦ದ ಹೊರಗಟ್ಟಿದ. 🙂

   • ವರರಾಣಿಯನ್ನೂ ಕಾಡಿಗಟ್ಟುತ್ತಿರ್ಪಂ!

    • ವರರಾಜ್ಞಿಯನ್ನು ರಾಮ ಏನು ಮಾಡುತ್ತಿದ್ದನೋ !

     • ಯಾರನ್ನಾದರೂ ಕಾಡಿಗೇ ಅಟ್ಟುವದರಿಂದ ,ವರರಾಜ್ಞಿಯನ್ನೇ ಅಟ್ಟಿಸೋಣ 🙂 (ರಾಣಿ ,ಸಂಸ್ಕೃತ ಪದವೆಂದು ತಿಳಿದಿದ್ದೆ!)

 19. ಶೈಥಿಲ್ಯವನ್ನ ಮನ್ನಿಸಬೇಕು

  ಬಾ ತಿಳಿವಿನರಸಿ ನಿನ್ನಣುಗನಾನೊರೆದಪೆಂ
  ಪ್ರೀತಿಯಂ ತೋರ್ಪ ಕಿರುಗಬ್ಬಮೊಂದಂ
  ಜ್ಯೋತಿ ಮನೆಯಂ ಬೆಳಗುವೆನೆ ಬೆಳಗು ಚಿತ್ತಮಂ
  ಮಾತೆಯೆನೆ ತಾನೇತಕೋನಕ್ಕಳಯ್

  ಪಕ್ಕದ ನಿವಾಸದೊಳು ಬಹುದಿನಂಗಳ ಬಳಿಕ
  ಧಕ್ಕಧುಕ್ಕಿನ ರವಮನನುಸರಿಸಲಾಂ
  ರೆಕ್ಕೆಯಂಬಡಿವವೊಲು ಕರಮನಾಡಿಪ ಕನ್ನೆ
  ಘಕ್ಕೆಂದು ತಾನೇತಕೋನಕ್ಕಳಯ್

  ಚಟಪಟಿಪ ಸಾಸಿವೆಯ ಮನಮಾಗಲಬ್ಬೆಯುಲಿ
  ದಿಟದೆ ಸುಧೆಯಲ ಪೊಸತು ಬಾಡಿಗೆಗೆನಲ್
  ಸೆಟೆದು ನಿಂತೆಂ ಕಾಣಲಾವೆಣ್ಣನಿನ್ನೊರ್ಮೆ
  ಕಿಟಕಿಯಿಂ ತಾನೇತಕೋನಕ್ಕಳಯ್

  ಮನೆಯ ಸವರಣೆಗೆಂದೆ ಪಿರಿದಿರ್ಪ ಭಾಂಡಂಗ-
  ಳನುಮಿವಳು ಕೋಮಲದ ಸುಮದವೊಲಿನ
  ತನುವಿನಿಂದೊಯ್ವುದನು ತಂದೆ ವೇಡೆಂದುಲಿಯ-
  ಲನುಸರಿಸಿ ತಾನೇತಕೋನಕ್ಕಳಯ್

  ಅವಸರದೆ ತಾವಿತ್ತ ಬಂದೆವೆನೆ ಪೇಳುತ್ತ-
  ಲವರ್ವಂದು ಕುಶಲೋಪರಿಯನೆಸಗಲು
  ಅವಳಪ್ಪನೆನ್ನಪ್ಪಮೀರ್ವರಂ ಪರಿಚಯಿಸೆ
  ಸುವದನೆಯು ತಾನೇತಕೋ ನಕ್ಕಳಯ್

  ಏನನೋ ಪೇಳ್ವುದಕೆ ಯತ್ನಮಷ್ಟೇ ತಿಳಿಗು-
  ಮೇನನುಲಿಯದೆ ಪೋದೆನವಳೆದುರಿನೊಳ್
  ನೀನೆಮೊದಲಿಂಬೆಸಗುಮೆನಿಪ ಕಣ್ಣೋಟದಲಿ
  ಮಾನಿನಿಯು ತಾನೇತಕೋನಕ್ಕಳಯ್

  ಸರಿ ಪೋಗುವೆವು ಕಜ್ಜಮಂ ಗೆಯ್ಗುಮೆನ್ನುತ್ತಲ-
  ವರಿವರ್ಗೆ ಪೇಳಲೆನ್ನಯ ಮಾನಸಂ
  ಸೊರಗಿರ್ಪುದಂ ತೋರದವೊಲಿರ್ಪ ಗುಟ್ಟನಾ-
  ನರಿತನೆನೆ ತಾನೇತಕೋನಕ್ಕಳಯ್

  ಶಶಿವದನೆ ಕದತಟ್ಟಿದಪವೋಲೆ ಭಾಸಿಕುಂ
  ನಿಶೆಯಲ್ತೆಯೇಕೆನುತೆ ನಾಂ ತೆರೆಯಲು
  ದಿಶೆಗೆಟ್ಟೆ! ಪಗಲ್ಗನಸಿದದರೊಳುಂ ನೀನೆನ್ನ
  ವಶಮೆನುತೆ ತಾನೇತಕೋನಕ್ಕಳಯ್

  ಅಂದು ಸಾಯಂಕಾಲಮಾಗುವನ್ನೆಗುಮೆನ್ನ
  ಮುಂದವಳ ನಗೆಮೊಗಮೆ ತುಂಬಿತ್ತದಲ್ತೆ
  ಚಂದಮಾ ನಗೆಯೆಣೆಸೆ ಪೋಗೆ ನೂರೆಣಿಕೆಗಳ್
  ಸಂದರುಂ ತಾನೇತಕೋನಕ್ಕಳಯ್

  ಈವೆ ಮಜ್ಜಿಗೆಯವರ್ಗೆಯೆನುತಬ್ಬೆ ಪೇಳೆ ನಾ-
  ನೀವೆನೆನೆ ಕಸಿದದನು ನೆರೆಮನೆಗೆ ನುಗ್ಗಲ್
  ತೀವುತೆರ್ಚಿದ ಭಾವಮರಿಯಳಿಹಳೊರ್ವಳೆನು-
  ತಾವರಿಸೆ ತಾನೇತಕೋನಕ್ಕಳಯ್

  ಮಜ್ಜಿಗೆಯ ಪಾತ್ರೆಯಿಂ ಠಣ್ ಠಣಣಮೆನ್ನುಲಿಗೆ
  ಗೆಜ್ಜೆ ಘಲಘಲನೆಂಬುದುಲಿಯವಳದಲ್ತೆ
  ಬಿಜ್ಜೆಯೊಡತಿಗೆ ಬೇಡಲುಂ ಮೌನಮಾವರಿಸೆ
  ತಜ್ಜಾಲಕವಳೇತಕೋ ನಕ್ಕಳಯ್

  ನಿಲಲಲ್ಲೆ ಮನಮಾಗೆ ಕಾರಣಕೆ ಸೆಣೆಸಾಡ-
  ಲೊಲವಿನಿಂ ಕೂರೆನುತೆ ಸನ್ನೆ ಗಯ್ದಳವಳ್
  ತಳಮಳದೆ ನಾನಿರಲು ಪಾನಕಮನೀವ ಕೈ
  ಘಲಘಲದೆ ತಾನೇತಕೋನಕ್ಕಳಯ್

  ಹೀರೆ ಪಾನಕ ರಸನೆಗಂ ತೃಪ್ತಿಯಾ ಚಲುವ
  ಹೀರೆ ಕಣ್ ಸಂತೃಪ್ತಿಯನೆ ಪೊಂದದಯ್
  ಭಾರದ ಸ್ವಾಂತದಿಂ ಪಿಂತಿರುಗಳವಳು ಪು-
  ರ್ಬೇರಿಸುತೆ ತಾನೇತಕೋನಕ್ಕಳಯ್

  ಇಂತಿರಲ್ ಕೆಲದಿನಂಗಳ್ ಕಳೆಯಲಣುಗನೊ-
  ರ್ವಂ ತಂಗಲಾ ಮನೆಯೊಳಂ ಸಲುಗೆಯಿಂದಂ
  ಪಿಂತಿರ್ಪಳಿಂಗಾಗ್ರಹದೆ ಕಾಣಲಾಂ ಜಾಣೆ
  ಸಂತೈಸೆ ತಾನೇತಕೋನಕ್ಕಳಯ್

  ಬಂದಳಿವಳಣ್ಣನೆನೆ ತಿಳಿದೊಡಂ ಮನದೊಳಂ
  ಸಂದುದಲ್ತೇ ಹದನದಾವರಣಮೇಂ
  ಕುಂದಿತೆದೆಯೆನೆ ನಾಚಲೆನ್ನೊಳಾಭಾವಕಂ
  ಸ್ಪಂದಿಪೆನೆ ತಾನೇತಕೋನಕ್ಕಳಯ್

  ರಂಗವಲ್ಲಿಯ ಗೆಯ್ವ ಕೌಶಲಮನೀಕ್ಷಿಪುದೆ?
  ಕೆಂಗೆನ್ನೆಯೊಳ್ ಸಂಧ್ಯೆವೆಳಕನೀಕ್ಷಿಪುದೆ?
  ಭಂಗಿಯೊಳ್ ಮಾರ್ದವಮನೀಕ್ಷಿಪುದೆ ನಾನಿಂತು
  ಕಂಗೆಡಲು ತಾನೇತಕೋನಕ್ಕಳಯ್

  ಪೂವ ಬಿಡಿಸುತೆ ಕನ್ನೆ ಮುಡಿಯೆ ತುರುಬೊಳ್ ಸುಳಿವ
  ಪಾವನದ ಗಾಳಿ ಮುಂಗುರುಳಿನಲಿಯಿಂದಂ
  ಆವರಿಸೆ ಮುಡಿದ ಸುಮಮಂ ಮನದೊಳೆನ್ನ ಸಿಹಿ
  ನೋವಿನೊಳ್ ತಾನೇತಕೋನಕ್ಕಳಯ್

  ಬಟ್ಟೆಯೊಗೆತದ ಲಯಮದೆನ್ನೆದೆಯ ಹೃದಯದೊಳ್
  ಥಟ್ಟ ಥಟ್ಟಗೆ ಪೋಲ್ಗುಮವಳೊರ್ಚಣಂ
  ನಿಟ್ಟುಸಿರನೆಳೆಯಲ್ಕೆ ಲಯರಹಿತ ಹೃದಯದೊಳ
  ಗುಟ್ಟಾಗೆ ತಾನೇತಕೋನಕ್ಕಳಯ್

  ತಿಳಿನೀರ ಬಾವಿಯೊಳ್ ಸೇದೆ ಹಗ್ಗದ ಬಲಮ-
  ನುಳಿದಪವೊಲಾ ತುರುಬ ಜಡೆಯಂದದಿಂದಂ
  ಬಳುಕಿಪುದದಸ್ಥಿರದೆ ಕೊಡದ ಕಣ್ಣೊಳ್ ಕಾಂತಿ
  ತುಳುಕುಮೆನೆ ತಾನೇತಕೋನಕ್ಕಳಯ್

  ತಿಂಗಳಂದದ ವದನೆ ಪೌರ್ಣಿಮೆಗೆ ಮಾರಾಂತ
  ಪಾಂಗಿನಿಂದಂಗಳದೆ ನಳನಳಿಸಲೆನ್ನೀ
  ಕಂಗಳೆನೆ ನೈದಿಲೆಗಳಿಂಗೆ ಔತಣಮುಣಿಪ
  ಪೆಂಗರುಳೆ ತಾನೇತಕೋನಕ್ಕಳಯ್

  ಕಳೆತಭಾವದ ಧಾರೆ ಧುಮ್ಮಿಕ್ಕೆ ಪರಿದಪುದು
  ಹೊಳೆಯವೊಲ್ ತುಟಿಯ ಮೇಲೊಂದುಮಕ್ಕರಮುಂ
  ಸುಳಿಯದಿರೆ ಬಹುಕಾಲ ಕಳೆದಪುದು ಮನದನ್ನೆ-
  ಯೊಳಸರಿದು ತಾನೇತಕೋನಕ್ಕಳಯ್

  ಧಕ್ಕಧುಕ್ಕಿನರವಮದಿನ್ನೊರ್ಮೆ ಕೇಳಿಬರೆ
  ಮಿಕ್ಕೆಲ್ಲಮಂ ತೊರೆದು ನೋಡಲುಸಿರಿನೊಳಿಂ
  ಪಕ್ಕಿ ಹಾರಿದೊಡಾಗೆ ವರ್ಗಮೆನುತಾ ಮನೆಯ
  ಚೊಕ್ಕೈಸೆ ತಾನೇತಕೋನಕ್ಕಳಯ್

  ಪೇಳಿಪೊಡೆ ಮನದಾಸೆ ಪೇಳ್ಗುಮಳ್ಕದೆ ಕಾಯೆ
  ಸೂಳಿಗೆಂದದು ಬರದು ಚಿರಕಾಲಕುಂ
  ತಾಳಿಪುದೆ ನೆಗಳ್ದೆಂದಿನಿತು ನಾಚಿಕೆಯೆ? ತೊರೆದು
  ಬಾಳೆನುತೆ ತಾನೇತಕೋನಕ್ಕಳಯ್

  ಉಕ್ಕರಿಪ ದು:ಖಂಗಳವಡುಗಚ್ಚುತೆ ಸಹಿಸಿ
  ಬಿಕ್ಕಿಪುದನುಳಿದುನಾನವಳೊಲುಲಿದೆಂ ಹಾ
  ಪುಕ್ಕತನಮೇತಕೆನುತೆ ಧೈರ್ಯಸಾಧನಮೆನುತೆ
  ಘಕ್ಕೆಂದು ತಾನೇತಕೋನಕ್ಕಳಯ್

  • ಹ್ಮ… ಮು೦ದಿನ ಬಾರಿ ನನ್ನ ಚೌಪದಿಗಳ ಸ೦ಖ್ಯೆ ಮುವ್ವತ್ತಾದರೂ ಆಗಬೇಕು ಕಮ್ಮಿ ಕಮ್ಮಿ ಅ೦ದರೂ…!

  • ಸಿ೦ಗಾರಗೊಳ್ಳುತ್ತೆ ಸೋಮಚಿತ್ತಾ೦ಕದಲಿ
   ರಿ೦ಗಣಿಸಿ ನರ್ತಿಸಲು ನಲವಿ೦ದಲಿ
   ಬ೦ಗಾರ ಹೊಳೆದ೦ತೆ ಮೈಸಿರಿಯು ಹೊಳೆಯೆ ಕಾ-
   ವ್ಯಾ೦ಗನೆಯು ತಾನೇತಕೋ ನಕ್ಕಳಯ್

   ತು೦ಬ ತು೦ಬ ಚೆನ್ನಾಗಿವೆ, ಸೋಮಶೇಖರರೆ. ಅಭಿನ೦ದನೆಗಳು…

   • ಅಲ್ಲಲ್ಲಿ ಭಾಷಾಶೈಥಿಲ್ಯವೂ ಎಲ್ಲೋ ಒಂದೆರಡು ಕಡೆ ವೃತ್ತಶೈಥಿಲ್ಯವೂ ಇಣಿಕಿವೆ. ಆದರೂ ಕಲ್ಪನೆಗಳೂ ಪೂರಣಪದ್ಧತಿಯೂ ಚೆನ್ನಾಗಿವೆ.
    ಇನಿತು ಚೌಪದಿಗಳಿಂ ’ಗ್ವಾಪಾಳ’ಪದಿಗಳಿಂ
    ಘನಸೋಮನುಕ್ತಿವೈಚಿತ್ರಿ ಮೆರೆಯಲ್|
    ಮನನೀಯಮಾಗದೇಂ ’ಮತ್ತೇಭ’ಮೆಂದು ವಾ-
    ಗ್ವನಿತೆಯದೊ ತಾನೇತಕೋ ನಕ್ಕಳಯ್ 🙂 🙂

  • 2nd verse, 3rd line:
   ಒಕ್ಕಣಿಸು ಓಲೈಸು ಏನಾದರೂ ಮಾಡು
   ತಕ್ಕಷ್ಟು ಪೊಂದು ನೀಂ ನೆರಳ ಮಾತ್ರಂ|
   ರೆಕ್ಕೆಯಂ ಬಡಿವವೊಲು ಕರಮನಾಡಿಸೆ ಕನ್ನೆ
   ಪಕ್ಕಾಗದಿರು ಪತತ್ರಾಘಾತಕೆ||

 20. ಆಶುಕವಿತೆಯ ನನ್ನ ಪದ್ಯ ಇಂತಿತ್ತು :

  ಒಡಲೊಳ್ ತುಂಬುತೆ ದೇಹಗಾತ್ರ ಬೆಳೆಯುತ್ತುಂ ಕಷ್ಟಮಾಗಿರ್ದೊಡಂ
  ಕುಡುಗುಂ ಶೈಶವ ಮೈತ್ರಿ ನಲ್ಮೆಯೆಸಕಂ ಕಾಂಬಾತುರಂ ಕಾಯುಗುಂ
  ಸೊಡರೊಲ್ ಹೊಯ್ದುದು ಧೈರ್ಯ ಶಾಂತಿ ಗೆಲುವಿನ್ನಾತಂಕದಿಂ ಭೀತಿಯಿಂ
  ಪಡೆವಾ ನೋವಲೆ ಕೇಳ್ದು ಚೀರ್ವ ರವಮಂ ತಾನೇತಕೋ ನಕ್ಕಳೈ

  [ಬಸುರಿತನದ ಶಾರೀರಿಕ ಕಷ್ಟಗಳ ಜೊತೆಗೆ, ಅನೇಕ ಆತಂಕಗಳಿದ್ದು, ಹಡೆಯುವಾಗಿನ ನೋವಿನಲ್ಲಿಯೂ ಅಳುವ ದನಿಯನ್ನು ಕೇಳಿ ತಾನೇತಕೋ ನಕ್ಕಳೈ]

 21. ತೆಳುವಾದಂಬರ ಮುಚ್ಚಲಾರದಿರುವಂಗಾಂಗಂಗಳಾ ಕೋಲಿಗಂ
  ಬಳುಕಿರ್ಪಾ ನಡು ಬಳ್ಳಿಯಂತೆವೊದಗಲ್ ಕಣ್ಣೋಟಮಾಗಲ್ಕೆ ತಾಂ
  ಬಲಿಷಂ, ಮೇಣ್ ಹುಳುವಾಗೆ ಮೈಯ ಪನಿಸೋಂಕಾಕಸ್ಮಿಕದ್ದೆಂಬವೋಲ್
  ಸೆಳೆಯುತ್ತುಂ ಮಿಗೆ ದರ್ಪದಿಂದೆ ತಿಮಿಯಂ ತಾನೇತಕೋ ನಕ್ಕಳೈ

  [ಬಲಿಷ = hook]
  [ತಿಮಿ = ದೊಡ್ಡ ಮೀನು]
  [ತೋರಿದ ದೇಹಸೌಂದರ್ಯದ ಕೋಲಿಗೆ, ಬಳುಕುವ ನಡುವೆಂಬ ಬಳ್ಳಿಯನ್ನು ಕಟ್ಟಿ, ಕಣ್ಣೋಟದ ಬಲಿಷಕ್ಕೆ, ಆಕಸ್ಮಿಕವೆಂಬಂತೆ ತೋರುವ ಮೈಯ ಸೋಂಕೆನ್ನುವ ಹುಳುವನ್ನು ಸಿಕ್ಕಿಸಿ, ತಿಮಿಯನ್ನು ಹಿಡಿದು ಸೆಳೆಯುತ್ತಾ, ತಾನೇತಕೋ ನಕ್ಕಳೈ]

  • ಸರ್, ಮತ್ತೇಭ ಅಲ್ಲವೇ? ಎರಡು ಸಾಲುಗಳಲ್ಲಿ ಸಾಕಷ್ಟು ವ್ಯತ್ಯಾಸ ಆಗಿದೆಯಲ್ಲ…

   • ಸರಿ ಮಾಡುತ್ತಲಿರುವಾಗಲೇ ನಿಮ್ಮ ಸೂಚನೆಯೂ ಬಂದಿತ್ತು. ಈಗ ಸರಿಯಾಗಿರಬೇಕು. 🙂

 22. ಹೀಗೊಂದು ಸಿಂಪಲ್ ಪದ್ಯಪೂರಣ :

  ಹೊಲೆಮನೆಯೊಳಂದು ಹೊರಬಂದ ಭಯದೊಳು ಕಂದ-
  ನಳಲಾಗ ತಾನೇತಕೋ ನಕ್ಕಳೈ ।
  ಬಲಗಾಲನಿಡುತಳುಕಿ ನಡೆದಂದು ಮದುಮಗಳ
  ಕಳುವಾಗ ತಾನೇತಕೋ ನಕ್ಕಳೈ ।।

  • ಉಷಾ, ನಿಮ್ಮ ಸಿಂಪಲ್ ಪದ್ಯಪೂರಣದ ಸ್ಯಾಂಪಲ್ ಚೆನ್ನಾಗಿದೆ. ಇನ್ನೂ ಕೆಲವನ್ನು ನಿಮ್ಮಿಂದ ನಿರೀಕ್ಷಿಸುತ್ತಿರುವೆ. 🙂

  • ಹೌದು, ಶಕುಂತಲಾ ಅವರೇ! ಇದು ನಿಜಕ್ಕೂ ತುಂಬ ಸರಳವೂ ರಸಮಯವೂ ಆದ ಸುಕೋಮಲಪರಿಹಾರ. ಉಷಾ ಅವರು ಹಲವೊಮ್ಮೆ ಇಂಥ ಅನಿರೀಕ್ಷಿತ ಹಾಗೂ ಅತ್ಯದ್ಭುತಪದ್ಯಗಳನ್ನು ನಮಗೆಲ್ಲ ನೀಡಿದ್ದಾರೆ. ಧನ್ಯವಾದಗಳು.

  • ಧನ್ಯವಾದಗಳು ಗಣೇಶ್ ಸರ್, ಶಕುಂತಲಾ,
   ವೃತ್ತದಲ್ಲಿ ಪೂರಯಿಸಲು ಪ್ರಯತ್ನಿಸುವೆ.

 23. ಕವಿಯಲ್ ಬಾನನೆ ಮೇಘಸಾಧನಮಿದೇಂ ಕಣ್ಗತ್ತಲೆತ್ತೆತ್ತಲುಂ
  ನವೆದಾ ಬಾನ್ಮಣಿ ಕಾದುಕೋಡಿ ಮಣಿಯಲ್ ತಂಗಾಳಿ ಸುಯ್ಗುಟ್ಟಿರಲ್|
  ನೆವದಿಂದುರ್ಚಿದ ಕತ್ತಿಯಂ ಝಳಪಿಸಲ್ ಮಿಂಚಾಗೆ ವೀರಾಗ್ರರಾ
  ನವಿರಿಂ ಕಾಮನಬಿಲ್ಲ ಬಾನರಸಿ ದಲ್ ತಾನೇತಕೋ ನಕ್ಕಳಯ್||

  ಬಾನಿಗೆ ಕಷ್ಟಕಾಲ ಬಂದಾಗಲೂ ಬಾನರಸಿ ಕಾಮನಬಿಲ್ಲನ್ನು ತೋರಿ ನಕ್ಕಳು.
  (ಕಾಮನ ಬಿಲ್ಲಿನ ತುಟಿಯವಳು ಎಂದು ಹೇಳುವ ಆಸೆಯಿದ್ದರೂ ಆಗಿಲ್ಲ)

  • ಆಗಲಿಲ್ಲ ಎ೦ದರೆ? ಧೈರ್ಯ ಸಾಲಲಿಲ್ಲವೊ ಛ೦ದಸ್ಸು ಪ್ರಾಸಗಳು ಅವಕಾಶ ಕೊಡಲಿಲ್ಲವೊ?

   • ಛ೦ದಸ್ಸು ಪ್ರಾಸಗಳದ್ದೇನು ತಪ್ಪು ಕಂಠರೆ. ಪತ್ನಿ ಬಿಡುತ್ತಾಳೆಯೇ 🙂 ನಿಮಗಾದರೋ ತುಟಿಯೋ ಕಟಿಯೋ ಎಲ್ಲದ್ದಕ್ಕೂ ಸ್ವಾತಂತ್ರ್ಯವಿದೆ 🙂

  • ಪದ್ಯದ ಭಾವ ತುಂಬ ಚೆನ್ನಾಗಿದೆ. ಆದರೆ ಕೆಲವೊಂದು ಪದಗಳ ಆಶಯ ತಿಳಿಯಲಿಲ್ಲ. ಉದಾ: ಕಾದುಕೋಡಿ, ವೀರಾಗ್ರರಾ ನವಿರಿಂ ಇತ್ಯಾದಿ

   • ಗಣೇಶರೇ, ಕೋಡಿ ಎಂದರೆ ತಣ್ಣಗಾಗಿ ಎಂಬುದಾಗಿ ಬಳಸಿದ್ದು. ಕೋಡುಗೊಂಡು ಮಾತ್ರವೇ ಸರಿಯಾದ ರೂಪವೇ? ವೀರಾಗ್ರರಾ ನೆವದಿಂದುರ್ಚಿದ ಕತ್ತಿಯಂ ಎಂದು ಪ್ರತ್ಯಯ ಮಾಡಿಕೊಳ್ಳಲು ಪ್ರಯತ್ನಿಸಿದ್ದು.

 24. ಕ್ಷುಧೆಗೊಂಡ ಸಂಸಾರಸಾಗರದೆ ಭಾಸಿಪ್ಪ-
  ಸುಧೆಯಾಣ್ಮರೆಂಬ ಭೇಷಜವರ್ಯರಂ,
  ನಿಧಿಲೋಕದೊಳಹಮಿಕೆಯಂಮರೆದರಂ,ನೋಳ್ದು
  ವಿಧಿಯೋಷೆ ತಾನೇತಕೋ ನಕ್ಕಳೈ!

  • ನಿಧಿಲೋಕ ಎ೦ದರೆ?

   • ಕ್ಷುಧತಪ್ತ ಎಂಬ ಪ್ರಯೋಗವು ಸಾಧುವಾಗದು. ಏಕೆಂದರೆ ಕ್ಷುಧೆ ಎಂಬುದು ಸ್ತ್ರೀಲಿಂಗಪದ.ಹೀಗಾಗಿ ಕ್ಷುಧೆಗೊಂಡ ಎಂದು ಸವರಿಸಬಹುದು.

   • ನಿಧಿ ಇರುವ ಲೋಕ
    (ದುಡ್ಡಿನಿಂದ ಏನನ್ನಾದರೂ ಗೆಲ್ಲಬಹುದು ಎಂಬ ಅಹಂಕಾರಿಗಳಿಗೂ , ಸಾವನ್ನೂ ತಡೆವೆನೆಂಬ ವೈದ್ಯರಿಗಳಿಗೂ , ಮಿಗಿಲಾಗಿ ತಾನಿರ್ಪೆನೆಂದು ವಿಧಿಯೋಷೆ ನಕ್ಕಿದ್ದು !)

 25. ದೇವಸ್ಥಾನಕಮಾಣ್ಮ ತಾಂ ತೆರಳಿರಲ್ ತಾನೇತಕೋ ಪೋದಳೈ
  ಪೂವಂ ಮಲ್ಲೆಯಮಾಲೆ ಚಂಪಕಗಳಂ ತಾನೇತಕೋ ಕೊಂಡಳೈ
  ಕಾವಂಗೀಯದೆ ಕೊಂಡ ಪುಷ್ಪಗಳನುಂ ತಾನೇತಕೋ ಸೂಡಿರಲ್ –
  ಕಾವಿರ್ಭಾವಿತ ರಕ್ತಿ ಸೂಸಿ ಸೊಬಗಿಂ ತಾನೇತಕೋ ನಕ್ಕಳೈ

  ಇಲ್ಲಿ ಕೊಟ್ಟ ಸಾಲಿನ ಅರ್ಥವನ್ನು ಸಂದರ್ಭದೊಡನೆ ಸಾಪೇಕ್ಷಗೊಳಿಸುವ ಬದಲು ಸಮಸ್ಯೆಯನ್ನು ಉಲ್ಭಣಗೊಳಿಸಿದಂತೆ ಕಂಡರೂ, ಹಾಗಿಲ್ಲ.
  ಇಲ್ಲಿ ತಾನೇತಕೋ ಎಂದರೆ ಒಬ್ಬ ಮಹಿಳೆಯ ಹೆಸರು (ಚೀನಿಯವಳು ಎಂದಿಟ್ಟುಕೊಳ್ಳೋಣ). ಅಂದರೆ ತಾನೇತಕೋ = Taaneta Ko
  😀

  • Hahhaa… ನೀವೇಕೆ ಆಕೆಯ ಬೆನ್ನು ಹತ್ತಿದ್ದು?
   ಆವಾತ೦ ಗಡ ರಾಮನೇತಕೆಲೆ ತನ್ನ೦ ಬೆ೦ಬಿಡಲ್ಕಾಗದಾ-
   ವಾವ ಸ್ಥಾನದೊಳಿ೦ದು ಮೂಗನಿಡುತು೦ ದೇವಾಲಯ೦ಬೊಕ್ಕಿರಲ್,
   ಪೂವ೦ ಕೊಳ್ವೆಡೆ ಮತ್ತೆ ಕೊ೦ಡು ಮುಡಿಯಲ್, ಮತ್ತೇಭವಿಕ್ರೀಡೆಯಿ೦-
   ದಾವಾವ೦ದದೆ ಪದ್ಯಗೈವನೆನುತು೦ ತಾನೇತಕೋ ನಕ್ಕಳಯ್

   • **ಶಾರ್ದೂಲವಿಕ್ರೀಡೆಯಿ೦-

    • ರಾಮ್! ಈ ಚಮತ್ಕಾರ ತುಂಬ ಚೆನ್ನಾಗಿದೆ. adding more to the absurdity is one way of solving the problem ಎಂಬ ಸೂತ್ರವಿದ್ದೇ ಇದೆಯಲ್ಲ:-)
     ಆದರೆ ಭಾಷೆ ಮಾತ್ರ ಅಲ್ಲಲ್ಲಿ ಸೊರಗಿದೆ.

   • 🙂

 26. “ನಿದ್ರಾಯೋಷೆಯೆ ಸಾಲ್ವಳೆನ್ನ ರತಿಪಕ್ರೀಡೋತ್ಸವಕ್ಕೆನ್ನುವಂ,
  ಕ್ಷುದ್ರಾಭದ್ರದರಿದ್ರರಂ ಕಮಲಜಾಪೂಜಾರ್ಥಪುಷ್ಪಂಗಳಂ
  ಮದ್ರಾಜ್ಯೇಶನೆ ಗೆಯ್ದನಕ್ಕಟ” ಎನುತುಂ ಕರ್ಣಾಟಭೂದೇವಿ ತಾಂ
  ಸಿದ್ರಾಮಯ್ಯನ “ಬಲ್ಮೆ” ಕಾಣ್ಕೆಗೊಲಿಯಲ್ ತಾನೇತಕೋ ನಕ್ಕಳಯ್

 27. ಯಜಮಾನ್ರು ಬಂದು ತುಂಬಾ ದಿನವಾಯಿತೇನೋ ರುಕ್ಕಮ್ಮನವರ ಮನೆಗೆ….ಪಾಪ…(There’s no need for an explanation, i hope).. 😛

  “ಬಲುಪಿಂ ಭಾಮೆಯದಿತ್ತಿರಲ್ಕೆ ಪತಿಯಂ ದೇವರ್ಷಿಗಂ ದಾನದೊಳ್
  ಕುಲಜಾವ್ಯಾಕುಲತಾಗ್ನಿಗಾನೆರೆದೆನೌ ತಣ್ಪಂ, ತುಲಾಭಾರದೊಳ್
  ತುಲಸೀಪತ್ರದಿನಾಂ ಗಿರೀಂದ್ರಧರನನ್ನೆತ್ತಿರ್ದಪೆಂ ಕೇಳ್ ಸಖೀ
  ಪಲವೆಂಡಿರ್ಕಳದಿರ್ದರೇಂ ? ಕಡೆಗಮಾನೇ ವೇಳ್ಕುಮಾ ಶೌರಿಗಂ.
  ಕಲವೇಣೂದ್ಧತನಾದದಿಂ ಮರೆಯಿಸಲ್ಕಾನಾದೆನೇಂ ಗೋಪಿಕಾ
  ಕುಲಸಂಜಾತೆ ? ಶಿಶೂಪಮೋಕ್ತಿಗಳದೊಪ್ಪಂಗೊಳ್ವುದೈ ತಾಯೊಳಂ.
  ನಲಿನಾಕ್ಷಿಪ್ರಗೃಹಾಂತರಂಗದೊಳದಿಲ್ಲ” ಎಂದಾ ಹೃಷೀಕೇಶನಂ
  ನಲವಿಂ ಮೇಣ್ ಸೆಡವಿಂದಲಿಂತೆಳಸುತುಂ ತಾನೇತಕೋ ನಕ್ಕಳಯ್

  • ಒಳ್ಳೆಯ ಭಾಷೆ-ಬಂಧ-ಶೈಲಿ-ಕಲ್ಪನೆಗಳ ಪ್ರಾಬಂಧಿಕರೀತಿಯ ಪೂರಣವೇ ಬಂದಿದೆ. ಅಭಿನಂದನೆಗಳು. ಆದರೆ ಒಂದು ತಿದ್ದುಪಡಿ:
   “……………………….ಗಿರೀಂದ್ರಧರನನ್ನೆತ್ತಿರ್ದಪ…….” ಇತ್ಯಾದಿಪದವು
   “……………………..ಗಿರೀಂದ್ರಧರನನೆತ್ತಿರ್ಪ” ಅಥವಾ “ಎತ್ತಿರ್ದಪ” ಎಂದಾಗಬೇಕು.
   ಇದು ಹಳಗನ್ನಡದ ನಿಯಮ. ವಸ್ತುತಃ ಆ ಸಂಧಿಯು ಗಿರೀಂದ್ರಧರನಂ + ಎತ್ತಿರ್ದಪ = ಗಿರೀಂದ್ರಧರನನೆತ್ತಿರ್ದಪ ಎಂದೇ ಆಗಬೇಕು. ಈ ಬಗೆಯಲ್ಲಿ ಅನವಶ್ಯಕವಾದ ಎಡೆಯಲ್ಲಿ ಕೂಡ ದ್ವಿತ್ವವನ್ನು ನಮ್ಮ ಸಹಪದ್ಯಪಾನಿಗಳನೇಕರು ಬಳಸುತ್ತಾರೆ. ಇದನ್ನು ತಿದ್ದಿಕೊಂಡಲ್ಲಿ ಒಳಿತು.

 28. ಸಕಲವಿಶ್ವದೊಳುಗ್ರ ಹೃದಯಿಯೋ! ಮುಗಿದಿರ್ಪ
  ಮುಕುಲಕ್ಕೆ ಗೆಣೆಗಾರ್ತಿಯೊ!ಸಿಗದಾಯ್ತೋ-
  ಕಕುಲಾತಿ,ಯೆಂದೆನಲ್ಕರರೆ!ಯೆದುರಾದೊಡ
  ನ್ಮುಕುರಮಂ ,ತಾನೇತಕೋ ನಕ್ಕಳೈ!

  (ಅತ್ಯಂತ ಗಂಭೀರೆ,ಕೋಪಿಷ್ಠೆ ಯಿವಳೆಂದುಕೊಳ್ಳುತ್ತಿರುವಾಗ, ಕನ್ನಡಿಯನ್ನು ಎದುರುಗೊಂಡಾಗ ನಕ್ಕಳು(ತನ್ನನ್ನು ತಾನು ಬಯಸದರಿರ್ಕ್ಕೇಂ))

  • ಮೇಡಮ್, ಗಭೀರತೆ ಎ೦ದಾಗಬೇಕಲ್ಲ… ಎದುರಾದೊಡನ್ ಮುಕುರಮ೦ ಸರಿಯೇ? ಎದುರಾದೊಡ೦ ಮುಕುರಮು೦ ಅಲ್ಲವೇ?

   • ೧)ನನಗೆ ,ತಪ್ಪನ್ನು ಗ್ರಹಿಸಲು ಕಷ್ಟವಾಗಿ, ಸಾಲನ್ನು ತಿದ್ದ್ದಿಬಿಟ್ಟೆ 🙂
    ೨)ಮುಕುರಮಂ ಎಂದರೆ ತಪ್ಪಲ್ಲವೆಂದು ಕೊಂಡಿರುವೆ.

    • 🙂 ತಿದ್ದಿದ್ದು ಜಾಸ್ತಿ ಆಯಿತು. ಎರಡು ಬಾರಿ ಒತ್ತು ಕೊಟ್ಟಿದ್ದೀರಿ ದ ಕಾರಕ್ಕೆ…

 29. ಕಲ್ಲೆದೆಯ ಗಂಡಂದು ಕೊಳ್ಳಲೆನ್ನನು ಮಲ್ಲೆ
  ಮೆಲ್ಲನದೊ ತಾನೇತಕೋ ನಕ್ಕಳೈ ।
  ಒಲ್ಲೆನೆಂದದ “ನಲ್ಲೆ” ಹುಸಿಮುನಿಸ ತೋರುತಲಿ
  ಮಲ್ಲೆಯೊಡೆ ತಾನೇತಕೋ ನಕ್ಕಳೈ ।।

  (ಮಲ್ಲೆದಂಡೆ ತಂದು, ಮುನಿದ ನಲ್ಲೆಯನ್ನು ಒಲಿಸಿಕೊಳ್ಳುವ ಪ್ರಯತ್ನದ ಚಿತ್ರಣ)

  • ಉಷಾ, ಮಲ್ಲೆದಂಡೆಯ ಸುತ್ತ ಹೆಣೆದ ಸುಂದರಕಲ್ಪನೆಯ ಪೂರಣ ತುಂಬ ಸೊಗಸಾಗಿದೆ.
   ಮೊದಲ ಪಾದವನ್ನು , ” ಕಲ್ಲೆದೆಯ ಗಂಡಂದು ಕೊಳ್ಳೆ, ದಂಡೆಯ ಮಲ್ಲೆ” ಎಂದು ಸವರಿದರೆ ಒಳಿತೆಂದು ನನ್ನ ಅನಿಸಿಕೆ. ಅಂತೆಯೇ , ಮೂರನೇ ಪಾದಾಂತ್ಯವನ್ನು” ತೋರುತುಂ” ಎಂದಾಗಿಸಿದರೆ, ಹಳಗನ್ನಡವಾದಂತಾಗುತ್ತದೆ.

   ಸಲ್ಲಲಿತಪದ್ಯಮನೆ ಜಾಣ್ಮೆಯಿಂ ಸೃಜಿಸಿರ್ದು,
   ಮಲ್ಲಿಗೆಯ ಸೊಬಗಿನಿಂದಿರೆ, ಹರುಷದಿಂ |
   ಗೆಲ್ಲಲುಷೆ ಪದ್ಯಪಾನದ ತಾಣಕೊಲ್ಮೆಯಿಂ
   ಸಲ್ಲಿಸಲ್,ತಾನೇತಕೋ ನಕ್ಕಳೈ ||

   • ಇತ್ತ ಮಲ್ಲೆಯ ಮೆಲ್ಲನೊತ್ತಿಕಟ್ಟುತೆ “ದಂಡೆ”
    ಗತ್ತು ತಂದಿರೆ ಗೆಳತಿ ಮಾಲೆಗಿಂತು ।
    ಬಿತ್ತರಿಸುತಿಂತದನು ಸುತ್ತಿ ಮುಡಿಸಿರಲೆನಗೆ
    ಚಿತ್ತಯಿಸಿ ಮನದುಂಬಿ ನಕ್ಕಿರ್ದೆನೌ ।।

    ಧನ್ಯವಾದಗಳು ಶಕುಂತಲಾ. ಇಷ್ಟದ “ದಂಡೆಮಲ್ಲೆ” ಮುಡಿಸಿದ್ದಕ್ಕೆ.

    ಈಗ ಚೆಂದವಾಯಿತು ನೋಡಿ !!
    ಕಲ್ಲೆದೆಯ ಗಂಡಂದು ಕೊಳ್ಳೆ, ದಂಡೆಯ ಮಲ್ಲೆ
    ಮೆಲ್ಲನದೊ ತಾನೇತಕೋ ನಕ್ಕಳೈ ।
    ಒಲ್ಲೆನೆಂದದ “ನಲ್ಲೆ” ಹುಸಿಮುನಿಸ ತೋರುತುಂ
    ಮಲ್ಲೆಯೊಡೆ ತಾನೇತಕೋ ನಕ್ಕಳೈ ।।

 30. ಕಲೆತೋತ್ಸಾಹದಿ ಜಲ್ಪಿಸಲ್ಕೆ ಸಖಿಯರ್ ಕಣ್ವಾಶ್ರಮಪ್ರಾಂಗಣ
  ಸ್ಥಲಕಾಗಲ್ ನೆನಹಿಂ ಶಕುಂತಲೆಯೊಡಂ ತಾನೇತಕೋ ನಕ್ಕಳಯ್|
  ’ಎಲೆ ಕೆಟ್ಟೆಂ!’ ತುಟಿಗಚ್ಚುತಲ್ ಬೆದರುನೋಟಂ ಬೀರಿ ಸರ್ವಾಂಗಕೋ-
  ಮಲೆ ತನ್ನಂತರಮೀ ಪ್ರಿಯಂವದೆಗತಿಪ್ರಾಪೇಯಮೆಂದಳ್ಕಿದಳ್||

  ಅಂತರ = ಹೃದಯ. ಪ್ರಿಯನ ನೆನಪಿನಿಂದ ನಕ್ಕ ಶಕುಂತಲೆ, ಎಲ್ಲಿ ನನ್ನ ಯೋಚನೆಯನ್ನು ಗೆಳತಿ ಪ್ರಿಯಂವದೆ ಅರಿತುಬಿಡುತ್ತಾಳೋ ಎಂದು ಅಂಜುತ್ತಾಳೆ.
  (ಪ್ರಾಪೇಯ ಬಳಕೆ ಸರಿಯೇ?)

  • ಚೆನ್ನಾಗಿದೆ ರವೀ೦ದ್ರರೆ. ಕಲೆತೋತ್ಸಾಹದಿ – ಕಲೆತ ಕನ್ನಡವಾದ್ದರಿ೦ದ ಕಲೆತುತ್ಸಾಹದೆ ಆಗಬೇಕಲ್ಲವೆ? ಗುಣಸ೦ಧಿ ಬೀಕಿದ್ದಲ್ಲಿ ಕಲಿತೋತ್ಸಾಹದೆ ಎ೦ದು ಕಲಿತ ಬಳಸಿಕೊಳ್ಳೋಣವೇ? 🙂

   • ಸ್ವಲ್ಪ ಉತ್ಸಾಹ ಜಾಸ್ತಿಯಾಗಿತ್ತು :). ಕಲೆತುತ್ಸಾಹವಾಗಬೇಕು.

  • ಬೆದರುನೋಟಂ – ಬೆದರುನೋಟಮಂ ಎಂದಾಗಬೇಕಲ್ಲವೆ?

 31. ಪಸೆಯಾರಿರ್ದ ಭೂಮಿಯನುತ್ತುಬೆಳೆಯಲ್ ರೈತಾಪಿ ಸಂಸಾರಿಗಳ್
  ಪಸಿರೂರಿಂ ಗಡಾ ಪಸರಿಂತೊನೆಯುತುಂ ತಾನಂದುನಕ್ಕಿರ್ದವಳ್ ।
  ಬೆಸೆಗೊಂಡಿರ್ದವರ್ ಬದುಕೊಳ್ ದೆಸೆಗೆಡಲ್ ದಾಯಾದಿಯಂತಾದವರ್
  ಪಸುಗೈದೆನ್ನನೀಪರಿಭಾವಿಸಿರಲ್ ತಾನೇತಕೋ ನಕ್ಕಳಯ್ ।।

  (ಸಮೃದ್ಧಿಯಿಂದ ನಗುತ್ತಿದ್ದ (ಉತ್ತು ಬೆಳೆದ) “ಭೂಮಿ” – ಒಟ್ಟಾಗಿ ಬೆಳೆದ ಅಣ್ಣತಮ್ಮಂದಿರು ತನ್ನನ್ನು ಪಾಲು ಮಾಡಿಕೊಂಡಾಗ ಅದೇಕೋ ನಕ್ಕಳು !!)

  • ಮೇಡಮ್, ಮತ್ತೇಭ ತು೦ಬ ಕೆಟ್ಟಿದೆಯಲ್ಲ, ಎಲ್ಲ ಪಾದಗಳಲ್ಲೂ! ಬೇರೆ ಯಾವುದಾದರೂ ವೃತ್ತವೇ?

   • ಹೌದು ನೀಲಕಂಠ, ನೀನು ಹೇಳುವವರೆಗೂ ಛಂದಸ್ಸು ಕೆಟ್ಟಿದ್ದು ನನ್ನ ಗಮನಕ್ಕೇ ಬಂದಿರಲಿಲ್ಲ. ಧನ್ಯವಾದಗಳು. ಆದಷ್ಟು ತಿದ್ದಲು ಪ್ರಯತ್ನಿಸಿದ್ದೇನೆ.

    ಪಸೆಯಾರಿರ್ದಿಳೆಯಂ ಸಮಂಗೊಳಿಸಿರಲ್ ರೈತಾಪಿ ಸಂಸಾರಿಗಳ್
    ಪಸಿರೂರಿಂ ಪಸರಿಂತವಳ್ ತೊನೆಯುತುಂ ತಾನಂದುನಕ್ಕಿರ್ದಳೈ ।
    ಬೆಸೆಗೊಂಡಿಂತಿರುವರ್ ಗಡಾ, ದೆಸೆಗೆಡಲ್ ದಾಯಾದಿಯಂತಾದವರ್
    ಪಸುಗೈಯಲ್ಕೆನನುಂ ಕ್ರಮಂ ಜರುಗಿಸಲ್ ತಾನೇತಕೋ ನಕ್ಕಳಯ್ ।।

    • ಮೇಡಮ್, ಏನೇ ಆದರೂ ನಾಲ್ಕೂ ಪಾದಗಳಲ್ಲಿ ಒ೦ದೇ ಸ್ಥಾನದಲ್ಲಿ, ಒ೦ದೇ ರೀತಿಯ ತಪ್ಪು ಮಾಡುವುದೂ ತಮ್ಮ ಕೌಶಲವೇ ಸರಿ. ನಾನು ಇದೊ೦ದು ಬೇರೆಯೇ ವೃತ್ತ ಅ೦ದುಕೊ೦ಡೆ!

 32. ಎಲ್ಲರ ಪದ್ಯಗಳಿಗೂ ಸಮುಚಿತಪರಿಷ್ಕಾರಗಳನ್ನೂ ಪ್ರತಿಕ್ರಿಯೆಗಳನ್ನೂ ನೀಡುತ್ತಿರುವ
  ನೀಲಕಂಠರಿಗೆ ಹಾರ್ದಿಕವಂದನೆಗಳು. ಅವರು ನನಗೆ ಈ ತೆರನಾದ ನೆರವನ್ನು ನೀಡುವ ಮೂಲಕ ನನ್ನ ಪಾಲಿಗೆ ಉಪಕಾರಿಗಳಾಗಿದ್ದಾರೆ; ಧನ್ಯವಾದಗಳು. ಪದ್ಯಪಾನದಲ್ಲಿ ಎಲ್ಲರೂ ಎಲ್ಲರ ಪದ್ಯಗಳ ಗುಣ-ದೋಷವಿಮರ್ಶನವನ್ನು ನಡಸುತ್ತಾ ಒಬ್ಬರಿಗೊಬ್ಬರು ನೆರವಾಗಬೇಕೆಂಬುದೇ ನಮ್ಮೆಲ್ಲರ ಹಾರೈಕೆ.

  • ಅರ್ಥಾತ್ ನಾವೇನ್ ತಪ್ಪನು ಗೈದೊಡ-
   ನರ್ಥವ ಹೆಕ್ಕುಗುಮಿತರರದಂ|
   ವ್ಯರ್ಥದ ನಮ್ಮಯ ಕವನಿಕೆಯನ್ನ-
   ಭ್ಯರ್ಥಿಗಳನ್ಯರು ತೋರ್ವರಲೆ!!

 33. ವಿನೋದವಾಗಿ !!

  ಸರಗೊಳ್ಳದಿಹ ನರನ ಬರಿಗೊರಳ ಪರಿಗಣಿಸಿ
  ವರಲಕುಮಿ ತಾನೇತಕೋ ನಕ್ಕಳಯ್’ ।
  ಸರಗಯ್ಯದಿಹ ನರನ ಬರಿಗೊರಳ ಪರಿವಿಡಿದು
  ಸರಸತಿಯು ತಾನೇತಕೋ ನಕ್ಕಳಯ್’ ।।

  “ಸರ”ಕ್ಕಾಗಿ ನಕ್ಕ ಲಕ್ಷ್ಮಿ / ಸರಸ್ವತಿಯರು !!

  • ಸಮಸ್ಯಾಪಾದವು ಯುಕ್ತಾರ್ಥದಲ್ಲಿ ಪ್ರಯುಕ್ತವಾಗಿವೆ. ’ಸರಕೊಳ್ಳ’ ಎಂದಾಗಬೇಕಲ್ಲವೆ?

  • So nice one madam!!! varalakumi is arisamasa. we can use sirilakumi 🙂

  • ಧನ್ಯವಾದಗಳು ಪ್ರಸಾದ್ ಸರ್,ನೀಲಕಂಠ,
   ಮಾಲೆ ಧರಿಸದಿಹ – ಎಂದು ಹೇಳಬೇಕಿತ್ತು, ಸರಕೊಳ್ಳ = ಸರಗೊಳ್ಳ? ಅಂದುಕೊಂಡೆ.
   “ಸಿರಿಲಕುಮಿ” – ಪ್ರಾಸವೂ ಸರಿಯಾಯಿತು.!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)