Nov 152015
 

“ಪ್ರದೀಪ್ತಮೆ ಭಾರತಂ” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು  ಹರಿಣೀ ಛಂದಸ್ಸಿನಲ್ಲಿ ಹೊಂದಿಸಬಹುದು

ಹರಿಣೀ ಛಂದಸ್ಸು ಹೀಗೆ ಸಾಗುತ್ತದೆ “ನೆಗೆವ ಹರಿಣೀವೇಗ೦ ಯೋಗ೦ ತರ೦ಗತುರ೦ಗಕ೦”

  71 Responses to “ಪದ್ಯಸಪ್ತಾಹ ೧೭೭: ಪದ್ಯಪೂರಣ”

 1. ಪರಮಪದಮಂ ತೋರಲ್ ಸಾರಲ್ ಮಹರ್ಷಿಯ ಮಸ್ತದೊಳ್
  ಸ್ಫುರಿಸುತೊರೆಯಲ್ ಸಂದತ್ತಾಗಳ್ ಗಣೇಶನ ಲೇಖನಂ
  ನೆರೆ ರಸಿಕರೊಳ್ ನಿತ್ಯಂ ಸಲ್ಲುತ್ತಿದೊಳ್ಪನೆ ನೀಡುತುಂ
  ಭರತಕುಲದಾಖ್ಯಾನಂ ಕೀರ್ತಿಪ್ರದೀಪ್ತಮೆ ಭಾರತಂ||
  (ಪರಮ ಪದವನ್ನು ತೋರಿಸಲೆಂದು ಬಂದು, ಮಹರ್ಷಿವ್ಯಾಸರ ತಲೆಯಲ್ಲಿ ಸ್ಫುರಿಸುತ್ತಿರಲು, ಅದಕ್ಕೆ ಗಣೇಶನ ಲೇಖನವೂ ಸಂದಿರಲು, ರಸಿಕರಲ್ಲಿ ನಿತ್ಯವೂ ಸಲ್ಲುತ್ತ, ಒಳ್ಳೆಯದನ್ನೇ ತೋರುವ ಭರತಕುಲದ ಕಥಾನಕ ಭಾರತವು ಕೀರ್ತಿಯಿಂದ ಪ್ರದೀಪ್ತವಾಯಿತು.)

 2. (ಎರಡನೇ ನೀರಸ ಪದ್ಯಕ್ಕೆ ಕ್ಷಮೆಯಿರಲಿ. ಹಲವು ಕಾಲದಿಂದ ಬರೆಯಲಾಗಲಿಲ್ಲವೆಂದೂ, ಪೂರಣಕ್ಕೆ ಕೊಟ್ಟ ಪದ್ಯಭಾಗ ಈ ಛಂದಸ್ಸಿಗೂ ಹೊಂದುವುದು ಎಂದೂ- ಖಚರಪ್ಲುತದ ಪದ್ಯವನ್ನು ಹಾಕುತ್ತಿದ್ದೇನೆ)
  ಪೂರ್ವದೊಳ್ ಪರದೇಶದೆ ಧರ್ಮಂ ಬೀಜದ ರೂಪದೊಳಿರ್ದುದಂ
  ದುರ್ವಿಯೊಳ್ ವಟವೃಕ್ಷದ ಪಾಂಗಿಂ ನಿಂತುದು ಭಾರತದೇಶಮೈ
  ಸರ್ವರೊಪ್ಪುವ ಬಲ್ಮೆಯಿನೇಗಳ್ ಪೂಜ್ಯಮೆನಿಪ್ಪ ನೆಲಂ ಗಡಾ
  ಗರ್ವಕಾರಣಮಾಗಿರೆ ಕಾಣ್ಗುಂ ನೋಡೆ ಪ್ರದೀಪ್ತಮೆ ಭಾರತಂ||
  (ಪೂರ್ವದಲ್ಲಿ ಬೇರೆ ದೇಶಗಳಲ್ಲಿ ಧರ್ಮವು ಬೀಜರೂಪದಲ್ಲಿದ್ದಾಗ ಭೂಮಿಯಲ್ಲಿ ವಟವೃಕ್ಷದಂತೆ ನಿಂತಿದ್ದು ಭಾರತದೇಶ, ಸರ್ವರೂ ಒಪ್ಪುವ ಬಲ್ಮೆಯಿಂದ ಯಾವತ್ತೂ ಪೂಜ್ಯವಾಗಿರುವ ಈ ನೆಲ ನಮ್ಮ ಗರ್ವಕ್ಕೆ ಕಾರಣವಾಗಿದೆ, ಹೀಗೆ ನೋಡಿದರೆ ದೀಪ್ತಿಮಂತವಾದ ಭಾರತ ಕಾಣುತ್ತದೆ.)

  • ಚಂದದಿಂ ಸೊಗಯಿಪ್ಪುದು ನಿನ್ನೀ ಪೂರಣಶೈಲಿಯ ಮಾರ್ದವಂ
   ಶಿಥಿಲ ದ್ವಿತ್ವದ ನಿಯಮದಿಂದ ಖಚರಪ್ಲುತಕ್ಕೆ ಹೊಂದಿಸಿದ ಜಾಣತನ ಚೆನ್ನಾಗಿದೆ

 3. ನೆನೆಯೆ ಮನುಜರ್ ವೇದ೦ಗಳ್ ನೀಳ್ದ ಶಾ೦ತಿಯ ಮ೦ತ್ರಮ೦
  ಮನದ ತಮಮ೦ ದೂರಕ್ಕ೦ ದೂಡಿ ಕಾ೦ತಿಯೊಳಳ್ತಿಯಿ೦
  ಮಿನುಮಿನುಗೆ ಸರ್ವಾತ್ಮರ್ಕಳ್ ನಿಚ್ಚಮು೦ ಸೊಗದಿ೦ದಮು೦
  ವನನಗರಮೆಲ್ಲ೦ ಸೇರುತ್ತು೦ ಪ್ರದೀಪ್ತಮೆ ಭಾರತ೦

  ಓ೦ ಅಸತೋಮಾ ಸದ್ಗಮಯ…..

  • ಚೆನ್ನಾಗಿದೆ ನೀಲಕಂಠ :), ಕನ್ನಡಕ್ಕೆ ಯತಿ ಇಲ್ಲವೆಂದಿದೆ ಸತ್ಯ, ಆದರೆ ಓದಲು ನಿಮ್ಮ ಪದ್ಯ ಸ್ವಲ್ಪ ಕಷ್ಟವಾಗುತ್ತಿದೆಯಲ್ಲ

   • ಧನ್ಯವಾದಗಳು.. ಹರಿಣಿಗೆ ಯತಿ ಇರುವುದು ಗೊತ್ತಿರಲಿಲ್ಲ. ಮತ್ತೆ ನೋಡುವ… 🙂

    • 🙂
     ಹರಿಣಿಯಲ್ಲಿ ಯತಿಯ ಬಗ್ಗೆ ಶತಾವಧಾನಿ ಗಣೇಶರೇ ಸ್ಪಷ್ಟೀಕರಿಸಬೇಕು. ನಿಮ್ಮ ಪದ್ಯ ಓದಿಕೊಳ್ಳುವುದಕ್ಕೆ ತೊಡಕಾಗುತ್ತಿದೆ, ನಿಮ್ಮದೇ ಮಿಕ್ಕ ಪದ್ಯನ್ನೂ ಇದನ್ನೂ, ಓದಿದರೆ ಸ್ಪಷ್ಟವಾಗಿ ವ್ಯತ್ಯಾಸವು ತೋರುತ್ತದೆಯಲ್ಲವೇ. ಗಣೇಶರನ್ನು ಕೇಳಿತಿಳಿಯೋಣ

   • ಪದ್ಯ ಚೆನ್ನಾಗಿದೆ. ಹರಿಣಿಗೆ ಮೊದಲ ಆರು ಅಕ್ಷರಗಳ ಬಳಿಕ (೫ಲ+೧ಗು), ಆನಂತರದ ನಾಲ್ಕು ಅಕ್ಷರಗಳ ಬಳಿಕ(೪ಗು) ಯತಿ ಇದೆ. ಮೊದಲ ಪಾದದಲ್ಲಿ “ನೀ|ಳ್ದಶಾಂತಿಯ ಮಂತ್ರಮಂ” ಎಂಬಲ್ಲಿ ನೋಡಿ, ಯತಿವಿಲಂಘನದಿಂದ “ಅಶಾಂತಿಯ ಮಂತ್ರ” ಎಂದು ಸ್ಫುರಿಸುತ್ತದೆ. ಕೇಶಿರಾಜ “ಯತಿವಿಲಂಘನದಿಂದರಿದಲ್ತೆ ಕನ್ನಡಂ” ಎಂಬುದು ಬಹುಶಃ ಪಾದಾಂತಯತಿಗಷ್ಟೇ ಆಗಿರಬಹುದು ಎಂದು ನನ್ನ ಅನಿಸಿಕೆ.

    • ಧನ್ಯವಾದಗಳು!! got a good awareness about yati, by the example of “ನೀ|ಳ್ದಶಾಂತಿಯ ಮಂತ್ರಮಂ”.

 4. ಶರಮನುಳಿವೆಂ ಸಂಬಂಧಂಗಳ್ ಮಹತ್ತ್ವದೆ ತೋರ್ಗುಮೀ
  ಪರಿಯ ರುಧಿರಪ್ರಧ್ವಂಸಕ್ಕಂ ಸಮರ್ಥನಮೆಂತು? ಸಂ-
  ಕರದೆ ಕುಲಮುಂ, ಪೆಂಡಿರ್, ಮಕ್ಕಳ್ ದುರಾಶ್ರಿತರಲ್ತೆನಲ್,
  ಹರಿಯ ತಿಳಿವಿಂ ಧರ್ಮಂ ತೋರಲ್ ಪ್ರದೀಪ್ತಮೆ ಭಾರತಂ

  • ಸೋಮರೆ, ಒಳ್ಳೆ ಕಲ್ಪನೆ. ಇಲ್ಲಿ ಭಾರತ೦ ಎ೦ಬುದಕ್ಕೆ ಅರ್ಜುನ ಎ೦ದರ್ಥವೇ? ಹಾಗಿದ್ದಲ್ಲಿ ಪ್ರದೀಪ್ತನೆ ಎ೦ದಾಗಬೇಕಲ್ಲ…

   • ಧನ್ಯವಾದ, ಅರ್ಜುನನ ಆತಂಕದ ಪ್ರಶ್ನೆಗಳಿಂದ ಭಾರತವೇ ಬೆಳಗಿತು ಎಂಬುದು ಆಶಯ.

   • ಬರೀ ಬಿಲ್ಲನ್ನು ಬಿಟ್ಟರೆ ಪ್ರಯೋಜನವಿಲ್ಲ ಅಂತ ಬಾಣವನ್ನು ಬಿಡಿಸಿದ್ದೇನೆ ಪ್ರಾಸಕ್ಕೂ ಸಾರಿಯಾಗುತ್ತದೆ 🙂

  • ಸೋಮರೆ, ಪದ್ಯ ಚೆನ್ನಾಗಿದೆ. ಆದರೆ ಪದ್ಯಾರಂಭದಲ್ಲಿ ತೊರೆವೆಂ- ಎಂದು ಬಿಂದುಸಹಿತವಾದಲ್ಲಿ ಒಳಿತಲ್ಲವೆ ?( ಛಂದಸ್ಸು ಕೆಡುವುದು )

   • ಒಪ್ಪಿದೆ ಶಕುಂತಲಾ ಅವರೇ, ಇದಕ್ಕೊಂದು ವ್ಯವಸ್ಥೆ ಮಾಡುತ್ತೇನೆ 🙂

    • ಪದ್ಯ ಚೆನ್ನಾಗಿದೆ, “ತೊರೆಯೆ” ಎಂದು ಬದಲಾಯಿಸಬಹುದಲ್ಲ! ಅರ್ಜುನ ಎಂದು ಎಲ್ಲಿಯಾದರೂ ಬಂದಿದ್ದರೆ ಇನ್ನೂ ಚೆನ್ನಾಗಿರುತ್ತದೆಯೇನೋ!

     • 🙂 ಧನ್ಯವಾದ ತೋಟ, ಪಾರ್ಥನೇ ಹೇಳಿದ್ದು ಕಣೋಪ್ಪ ದೇವರಾಣೆ

  • …. ಮಹತ್ತ್ವದೆ … (ಮಹತ್+ತ್ವ)

  • ಕಾ೦ಚನಾ ಅವರ ಪದ್ಯಚೀರದ ಕಲ್ಪನೆಯ ಮೇಲೆ…
   ಮಿರುಪ ವರಶಬ್ದಾಲ೦ಕಾರಛ್ಛವಿಪ್ರಸರ೦ ವಲ೦
   ನಿರಿಗೆ ಸರಿಯೇ ಅರ್ಥಾಲ೦ಕಾರಮಿರ್ಪ ಸೆರ೦ಗಲೇ
   ಸರಸತಿ ನಿಜಾಸ್ಯಾ೦ಭೋಜೋತ್ಫುಲ್ಲತಾಲತೆಯಿ೦ ಮನ-
   ಕ್ಕರರೆ ಮುದಮ೦ ನೀಳ್ಪಳ್ ತಾನುಟ್ಟು ಚೆಲ್ವಿನ ಚೀರಮ೦ 🙂

 5. ಜಗದ ಪರಿಯಂ ತಿಳ್ದುಂ ಚಕ್ರಾಧಿಪತ್ಯಧರಾಧಿಪಂ
  ಯುಗದ ನಿಯಮಂ ಧರ್ಮಂ ಸಾರ್ವರ್ ಸನಾತನದೀಪಕಮ್|
  ಮೊಗದ ಸೊಗವಂ ತೋರ್ವರ್ನಿತ್ಯಂ ಜಗದ್ಗುರುರಾಷ್ಟ್ರದಾ
  ನಗುತ ಜಗದೊಳ್ ಮೋದೀ ಮಾಳ್ವರ್ ಪ್ರದೀಪ್ತಮೆ ಭಾರತಮ್||

  प्रथमयतितोऽभ्येतुं कीर्तिं कदापि न कामये।

  • ಚೆನ್ನಾಗಿದೆ, ಉಮಾಮಹೇಶ್ವರರೇ ಸರಿಯಾದ ವಸ್ತುವನ್ನು ಆಯ್ಕೆ ಮಾಡಿದ್ದೀರಿ ಧನ್ಯವಾದಗಳು. ಆದರೆ ಸ್ವಲ್ಪ ಅನ್ವಯಕ್ಲೇಷವಿದ್ದಂತೆ ತೋರುತ್ತದೆ, ಉದಾಹರಣೆಗೆ ‘ನಿಯಮಂ ಧರ್ಮಂ ಸನಾತನದೀಪಕಮ್’ ಇವೆಲ್ಲಾ ಕನ್ನಡದಲ್ಲಿ ಪ್ರಥಮಾ ವಿಭಕ್ತಿಯಲ್ಲಿದ್ದರೂ ತೃತೀಯಾದಲ್ಲಿ ಬಳೆಸಲಾಗಿದೆ, ಮೊಗದ ಮತ್ತು ನಗುತ ಎನ್ನುವುದು ಅನ್ವಯಕ್ಕೆ ಹೊಂದುತ್ತಿಲ್ಲ ಗಮನಿಸಿರಿ.

   • ಹೌದು, ಪದ್ಯದ ವಸ್ತು ಚೆನ್ನಾಗಿದೆ. ಆದರೆ ಕೆಲವು ಕಡೆ ಛಂದಸ್ಸಿಗೋಸ್ಕರ ದೀರ್ಘವಾಗಿದೆ (ಉದಾ:ಮೋದೀ) ತಿಳ್ದುಂ ಎಂಬುದು ಸಾಧುವಲ್ಲ, “ತಿಳಿದು” ಎಂದೇ ಆಗಬೇಕು. ಅದರ ಬದಲು “ಕಂಡುಂ” ಎಂದು ಬಳಸಬಹುದು. ಆದರೂ ಅನ್ವಯಕ್ಲೇಶ ಇದ್ದಂತಿದೆ.

 6. ತೆಗೆದೊಗೆದು ಶಸ್ತ್ರಾಸ್ತ್ರಪ್ರೇಯಃಪ್ರತಾಪಮನಾಯುತು೦
  ಬಗೆಯೊಳಗನ೦ ಸಾರ್ದು ಶ್ರೇಯಸ್ಸುಧಾರಸಮ೦ಗೊಳಲ್
  ಝಗಮಗಿಸಲಾಗಳ್ ಕ್ಲೇಶೌಘ೦ ತಿತಿಕ್ಷೆಯಿನೆಚ್ಚುತು೦
  ಮಿಗಿದರಿಯಲಾ ವಿಶ್ವಾಮಿತ್ರ೦ ಪ್ರದೀಪ್ತಮೆ ಭಾರತ೦

 7. ಪರಶಿವನ ಸಾನ್ನಿಧ್ಯ೦ ಹೈಮಾದ್ರಿಯೊಳ್, ಸುರಗ೦ಗೆ ತ-
  ಚ್ಛಿರದ ಸಿರಿಯ೦ಗೊ೦ಡ ಧ್ವಾನ೦ ಮೊಳ೦ಗಿಸುತುರ್ವಿಯೊಳ್
  ಪರಿಯೆ, ಋಷಿಗಳ್ ತಚ್ಚೇತೋಹಾರಿವಾರಿತಟಾಕದೊಳ್
  ಚರಿಸೆ ತಪಮ೦ ಕಾಣ್ ತತ್ತೇಜಃಪ್ರದೀಪ್ತಮೆ ಭಾರತ೦

  • ನೀಲಕಂಠರೆ, ಪದ್ಯ ಚೆನ್ನಾಗಿದೆ. “ಮೊಳಂಗಿಸು”- ಸರಿಯೆ? ಅಥವಾ “ಮೊಳಗಿಸು ” -ಸರಿಯೆ ?
   “ಸಿರಿಯಂಗೊಂಡ”- ಅರ್ಥವಾಗಲಿಲ್ಲ. “ಸಿರಿಯಂ ಕೊಂಡು” -ಎಂದಾಗಬೇಕೆ ?

   • Thanks madam!
    moLangisu – am not sure, just used it, just like taDanku, karangu etc. You may have to confirm.
    siriyam konDu – siriyamgonDu

   • ಹೌದು. ಮೊಳಂಗು ಎಂದು ಇದ್ದಂತಿಲ್ಲ. ಯಾವುದಾದರೂ ಪೂರ್ವಕವಿಪ್ರಯೋಗವನ್ನು ನೋಡಿದ್ದಿದ್ದರೆ/ಕಂಡರೆ ದಯವಿಟ್ಟು ತಿಳಿಸಿ.

    • ಹ್ಮ…. ಧ್ವಾನ೦ಗುಡುತ್ತಲೆ ಧಾತ್ರಿಯೊಳ್… ಎ೦ದು ತಿದ್ದುತ್ತೇನೆ.

  • Good perception and versification.

 8. ಗುಡಿಯ ಮರೆಯೊಳ್ ದೈವತ್ವಕ್ಕ೦ ನವಾಕೃತಿಯೀಯುತು೦
  ನಡೆನುಡಿಗಳೊಳ್ ಸಾಮಾನ್ಯತ್ವ೦ ಸಲಲ್ಕೆನೆ ಬಾಳ್ತೆಯ೦
  ನಡೆಸೆ ನಗರಾವಾಸಿ ಜ್ಞಾನಪ್ರಬುದ್ಧಮನಸ್ಕನೀ
  ಸೊಡರನಿಳೆಗೆಲ್ಲ೦ ತೋರ್ದಾಗಳ್ ಪ್ರದೀಪ್ತಮೆ ಭಾರತ೦

  ಶ್ರೀರಾಮಕೃಷ್ಣರ ಬೆಳಕನ್ನು ಇಡೀ ಜಗತ್ತಿಗೆ ನರೇ೦ದ್ರನು ತೋರಿಸಿದಾಗ ಭಾರತ ಬೆಳಗಿತು.

  • ನಿಮ್ಮ ಎಲ್ಲ ಪೂರಣಗಳೂ ಚೆನ್ನಾಗಿವೆ, ಮುಂದುವರೆಯಲಿ ಇನ್ನೂ ಸೋಮವಾರ 🙂
   ಸ್ಫುರಿಸೆ ಬಗೆಯಿಂ ಪೂರ್ಣಂಗಳ್ ಕೇಳ್ ಪ್ರದೀಪ್ತಮೆ ತಾಣಮಯ್

 9. ಇಡುತೆ ನರನೊಳ್ ಭ್ರಾತೃಪ್ರೇಮಂ,ಸುಧರ್ಮದ ವಾಂಛೆಯಿಂ,
  ನಡೆಯನರುಹುತ್ತುಂ ಗೀತಾಚಾರ್ಯನೀ ಮನುಲೋಕಮಂ
  ನಡೆಸಲೆನೆ,ಗೀತಾಬೋಧಂಗೈದು ,ಜಾಣ್ಮೆಯಿನಿತ್ತ ಚೆಲ್
  ಸೊಡರಧಿಕಮೇ ಕುಂದಲ್ಕಿಂದುಂ , ಪ್ರದೀಪ್ತಮೆ?ಭಾರತಂ!

 10. ಮಹದುಪನಿಷದ್ಭಾ೦ಡ೦ ತೈಲ೦ ತಪೋನಿರತರ್ಕಳಾ
  ವಿಹಿತಚರಿತ೦ ಶ್ರದ್ಧಾಶ್ವಾಸ೦ ವಲ೦ ಪೊಸೆಬತ್ತಿಯೀ
  ಮಹಿತಮಹಿಯೊಳ್ ಚಿಚ್ಚೈತನ್ಯ೦ ನಿರ೦ತರಹೃದ್ಗೃಹೇ-
  ನಿಹಿತಮೆ ಕಿಡಿ ಸ್ಫಾರ೦ಗೊಳ್ಳಲ್ ಪ್ರದೀಪ್ತಮೆ ಭಾರತ೦

  ಉಪನಿಷತ್ತುಗಳೆ ಹಣತೆ ಪಾತ್ರೆ, ತಪಸ್ವಿಗಳ ಚರ್ಯೆಯೇ ತೈಲ, ಶ್ರದ್ಧೆಯ ಉಸಿರು ಹೊಸೆದಿಟ್ಟ ಬತ್ತಿ, ಚಿತ್-ಚೈತನ್ಯವೇ ನಿರ೦ತರ ಬೆಳಕಿನಾಕರವಾದ ಕಿಡಿ. ಇವುಗಳಿ೦ದ ಪ್ರದೀಪ್ತವಾಗಿದೆ ಭಾರತ.

 11. ನೆಗೆಯುತಮಮಾ ಪೋಗಲ್ ದೂರಂ,ವಿತಾಳಿತ ವತ್ಸನಾ
  ಪಗಲಿರುಳೊಳುಂ ತಾಯ್ ವಾತ್ಸಲ್ಯಂ ದಿಟಂ ಬಗೆಯಪ್ವವೊಲ್,
  ಜಗದ ತುದಿಯೊಳ್ ಸಂದಿರ್ಪಾಗುಂ,ನಿರಾಶ್ರಿತ ಕಂದನ
  ನ್ನಗಲುತೆದೆಯಿಂ ಪೋಗಳ್ ತಾಯ್ ತಾಂ! ಪ್ರದೀಪ್ತಮೆ ಭಾರತಂ!
  (ಎಲ್ಲಿದ್ದರೂ ಕಂದನೆದೆಯಲ್ಲಿ ತಾಯಿಭಾರತಿ ಬೆಳಗುತ್ತಿರುವಳು,ತಾಯಿಯಿಂದ ದೂರಾದ ಕರುವಿನ ಮನವನ್ನು ವಾತ್ಸಲ್ಯವು ಆಪ್ಪಿಕೊಳ್ಳುವಂತೇ)

  • ಆಶಯ ಚೆನ್ನಾಗಿದೆ ಸಾ. ಸಹೋದರೀ :),
   ಜಗದ ತುದಿ ಎಂದಾಗ ನಾವೆಲ್ಲಿದ್ದೇವೆ ಎoಬ ಪ್ರಶ್ನೆ ಬರುತ್ತದೆ 😉

 12. ಬಗೆಯನೊಳಗೊಂಡೀ ದೇಶಂ ಸಹಿಷ್ಣುತೆ ಸಾಗರಂ
  ಸೊಗಯಿಸುತೆ ವಿಶ್ವಾದ್ಯಂತಂ ಮಹಾತ್ಮರನೆಲ್ಲರಂ
  ಪೊಗಳುತಿರೆ ಸತ್ಕಾರ್ಯಂಗಳ್ ಪ್ರಭುದ್ಧಮಿದೆನ್ನುತುಂ
  ಜಗಕಿದೊ ವಿಶೇಷ ಕ್ಷೇತ್ರಂ ಪ್ರದೀಪ್ತಮೆ ಭಾರತಂ

  • ಚೀದಿ, ಛಂದಸ್ಸನ್ನ ಗಮನಿಸಪ್ಪ, ಎಡವಿದೆ

   • ಚೇದಿಯವರೆ, ಪಾದಕ್ಕೊ೦ದು ಕಾಣ್, ಕೇಳ್, ಮೇಣ್,ತಾ೦ ಹಾಕಿ 🙂

    • ಬಗೆಯನೊಳಗೊಂಡೀ ದೇಶಂ ಮೇಣ್ ಸಹಿಷ್ಣುತೆ ಸಾಗರಂ
     ಸೊಗಯಿಸುತಿರಲ್ ವಿಶ್ವಾದ್ಯಂತಂ ಮಹಾತ್ಮರನೆಲ್ಲರಂ
     ಪೊಗಳುತಿರೆ ಕೇಳ್ ಸತ್ಕಾರ್ಯಂಗಳ್ ಪ್ರಭುದ್ಧಮಿದೆನ್ನುತುಂ
     ಝಗಝಗಿಸುತಿರ್ಕುಂ ನೋಡೆಲ್ಲು ಪ್ರದೀಪ್ತಮೆ ಭಾರತಂ

     ಸವರಿಸಿದ್ದೇನೆ… ಸೋಮಾ, ಹಾಗೂ ನೀಲಕಂಠರೇ ಈಗ ಸರಿಯಾಯ್ತೇ?

     • sari.. nanna salaheyannu ardha maatra paalisiddeeri 🙂

     • ಸಹಿಷ್ಣುತೆ ಸಾಗರಂ – idu sarina? ಸಹಿಷ್ಣುತಾಸಾಗರಂ aagabekalla. Chhandassu tapputtade. ಸಹಿಷ್ಣುತೆಗಾಗರಂ ennabahude?

  • ನೀಲಕಣ್ಠರೆ,
   ಚೀದಿಯವರು ನಿಮ್ಮ ಸಲಹೆಯನ್ನು ಅರ್ಧಮಾತ್ರ ಪಾಲಿಸಿದ್ದರೆ, ಅದು ನೀರಕ್ಷೀರನ್ಯಾಯದಂತೆ ಪ್ರಶಂಸನೀಯವಲ್ಲವೆ?
   ಚೀದಿಯನುಭವಿಯು ಕೇವಲಮಲ್ಲ ಮೇಣಹನು
   ಬಾದರಾಯಣನ ವೋಲನುಭಾವಿಯುಂ|
   ಗೈದನರ್ಧಗ್ರಹಣಪಾತಕವನೆನ್ನದಿರು
   ಭೇದಮಘಮೇನುದಕದಿಂದೆ ಪಾಲುಂ||

 13. ಹರಿಯ ರವಮೇ ಗೀತಾಧ್ವಾನ೦ ಧರಿತ್ರಿತನೂದ್ಭವಾ-
  ಚರಿತ ನಯಮೇ ನಿಷ್ಠ೦ ಧರ್ಮ೦ ಪರಾ೦ಬರಿಸಲ್ ಜನೋ-
  ತ್ಕರದ ನುಡಿಯೇ ವೇದಾನೀಕ೦ ಗಡಿ೦ತಿರುತು೦ ಪ್ರಭಾ-
  ವಿರಹಿತಮಲೇ! ನಿತ್ಯಭ್ರಷ್ಠ೦! ಪ್ರದೀಪ್ತಮೆ ಭಾರತ೦?!

  ಕೃಷ್ಣನ ಗೀತಾಧ್ವಾನದ ನುಡಿ, ಸೀತೆಯ ಆಚಾರದ ಧರ್ಮ, ಆಡುಮಾತುಗಳು ವೇದಗಳು. ಇ೦ತಿರಲೂ ಪ್ರಭಾಹೀನವಾಗಿದೆ, ಭ್ರಷ್ಟಾಚಾರಯುಕ್ತವಾಗಿದೆ. ಭಾರತವು ಪ್ರದೀಪ್ತವೆ?

 14. ಮುದಿಯ ಜನರೊಕ್ಕೂಟಂ ಪ್ರಾಚ್ಯಂ ಮಗುಳ್ದದೆ ದಕ್ಷಿಣಂ
  ತದನುಸರರೈ ಪಾಶ್ಚಾತ್ಯರ್ ಮೇಣುದೀಚಿಯ ದಿಕ್ಜನಂ
  ಹದನಮೆನಿಪೌನ್ನತ್ಯಂ ರಾಷ್ಟ್ರಕ್ಕೆನಿಪ್ಪವೊಲೆಮ್ಮೊಳಂ
  ಹದಿಹರೆಯದಿಂದೊಪ್ಪಲ್ ಸಯ್ಪಿಂ ಪ್ರದೀಪ್ತಮೆ ಭಾರತo

  ಬೇರೆಲ್ಲಾ ದೇಶಗಳಲಿಗಿಂತ ಯುವಜನರಿಂದ ಕೂಡಿರುವುದರಿಂದ…

 15. ತುಡಿಯುವ “ಭ”ಕಾರಂ -“ಭಾವಂ” ಕಾಣ್ ವಿಭಿನ್ನ ಜನಾಂಗದೊಳ್
  ನಡುವಿಹ “ರ”ಕಾರಂ -“ರಾಗಂ” ತಾಂ ವಿಶಿಷ್ಟ ವಿಚಾರವುಂ ।
  ಒಡನಿಹ “ತ”ಕಾರಂ -“ತಾಳಂ” ಮೇಣ್ ಸನಾತನ ಸತ್ತ್ವವುಂ
  ತೊಡರೆತೆರಳಲ್ “ಗಾನಂ” ತಾನಂ ಪ್ರದೀಪ್ತಮೆ “ಭಾರತಂ” ।।

  ಭಾರತ = ಭಾ(ವ)-ರಾ(ಗ)-ತಾ(ಳ) (ತೊಡರೆತೆರಳಲ್ ) ಜೊತೆಗೂಡಿ ಸಾಗಿರಲು – “ವಿವಿಧತೆಯಲ್ಲಿ ಏಕತೆಯ ಗಾನ”

  • ಚೆನ್ನಾಗಿದೆ ಮೇಡಮ್! ಭಕಾರೋ ಕು೦ಭಕರ್ಣಸ್ಸ ಭಕಾರಶ್ಚ ವಿಭೀಷಣಃ… ನೆನಪಾಯಿತು 🙂

   • ಧನ್ಯವಾದಗಳು ನೀಲಕಂಠರೆ, ಈ ಹರಿಣಿಗೆ ಐದನೇ “ಗುರುಪದ” ತಮ್ಮದೇ !!

    • ಉಷಾ ಮೇಡಮ್, ಹರಿಣಿ ಬ೦ದಾಕ್ಷಣ ನನಗೆ ಬಹುವಚನ ಶುರು ಮಾಡಿದ್ದೇಕೆ?!!

 16. Blessings of the Sun (optimum vis-a-vis other lands), purushArtha-s, spirituality (avasthAtraya etc.), dArshanika-s like yAska, the 16 saMskAra-s, the passage through varNAshrama…
  ಭಾಸ್ಕರೋಪಕೃತಿ, ಪುರುಷಾರ್ಥಗಳ್ ಮೇಣಿನೌ-
  ರಸ್ಕದಾಧ್ಯಾತ್ಮತೆಯವಸ್ಥಾತ್ರಯದೊಲು|
  ಯಾಸ್ಕರೇಂ! ಷೋಡಶದ ಸಂಸ್ಕಾರ! ವರ್ಣ(ಆಶ್ರಮ)ಮೆ ಯ-
  ಶಸ್ಕರವು – ಸಂಪ್ರದೀಪ್ತಮೆ ಭಾರತಂ||

  • ಆಧ್ಯಾತ್ಮತೆ – ತಪ್ಪು ಅನಸ್ತದೆ. ಆಧ್ಯಾತ್ಮಿಕತೆ ಆಗಬೇಕಲ್ಲ. ಮತ್ತೆ, ಪದ್ಯಕ್ಕಾಗಿ ಪ್ರಾಸಗಳೋ, ಪ್ರಾಸಕ್ಕಾಗಿ ಪದ್ಯವೋ? 🙂

   • Tnx N. Will rephrase for ಆಧ್ಯಾತ್ಮಿಕತೆ.
    Regarding prasa – Neither. When I decide what the opening-word will be, the opening-word will decide what the prAsa is 😀

 17. ನಡುಗೆ ಜಗಮೇ ಕ್ರೌರ್ಯಂಗೆಯ್ವಾ ಮತೀಯ ಕುತರ್ಕಕಂ
  ಬಿಡದ ತುಟಿಯಿಂ ಮೋನಂಸಾರ್ವೊಂ, ಸುಶಾಸಿತದೇಶಮೇ
  ಸುಡುತಲುರಿಗುಂ ಹಾ! ಹಾ! ಎಂಬೋಂ ಪ್ರಚಾರಮನೀಂಟುವೋಂ
  ತೊಡೆಯುತೆ ಪುರಸ್ಕಾರಂ ಚೀರ್ವೊಂ ಪ್ರದೀಪ್ತಮೆ ಭಾರತಂ!
  – (ದುರ್)ಬುದ್ಧಿಜೀವಿ

  ಪುರಸ್ಕಾರಂ – ಪುರಸ್ಕಾರಮಂ ಆಗಬೇಕಿತ್ತು

 18. ಎಡೆಯ ಕುಡದೇ ಕೀಳ್ಮಾರ್ಗಕ್ಕೆಂದು ಬಾಳುತೆ,ಸನ್ಮತರ್
  ನಡೆಯರುಹಿರಲ್ಕೆಮ್ಮೊಳ್ ;ಔನತ್ಯಮಂ ದಿಟಮೀದು ಮೇಣ್
  ಬಡವ ಸಿರಿವಂತರ್ ಕೂಡುತ್ತಂತೆ,ವರ್ಣದ ಭೇದಮಂ
  ತೊಡೆಯುತಿರೆ ಪರ್ವಂಗಳ್ ಗೆಲ್ವಿಂ , ಪ್ರದೀಪ್ತಮೆ ಭಾರತಂ!
  (ಜೀವಿಪ ಸರಿಯಾದ ದಾರಿಯನ್ನು ಸನ್ಮತರು ತೋರಿಸಿರಲು,ವರ್ಗ-ವರ್ಣ ಭೇದಗಳನ್ನು ತೊಡು ಹಾಕಲು ದಿನ ನಿತ್ಯವೂ ಬರುವ ಹಬ್ಬಗಳಿಂದಾಗಿ ಪ್ರದೀಪ್ತಮೆ ಭಾರತಂ)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)