Nov 092015
 

ಪಾಡುವ ಮೂಗನಂ ಪೆಳವನಿಂ ಗಡ ನೃತ್ಯಮನಂಧನೀಕ್ಷಿಪಂ

  37 Responses to “ಪದ್ಯಸಪ್ತಾಹ ೧೭೬: ಸಮಸ್ಯಾಪೂರಣ”

 1. ಅಸಮಂಜಸ ಎಂದು ಕಂಡರೂ ಸಮಸ್ಯಾಪಾದವು ಸಾಧುವೇ. ಆದರೂ ಸ್ಪಷ್ಟೀಕರಣವನ್ನು ಕೇಳುತ್ತಿದ್ದೇನೆ. ಹಾಡುವ ಮೂಗನನ್ನು ಕುರುಡನು ನೋಡದಿದ್ದರೇನು, ಅವನ ಗಾಯನವನ್ನು ಆಲಿಸಬಹುದಲ್ಲ 😉

  • ಹೌದು ಪ್ರಸಾದು, ಸಮಸ್ಯೆಯ ಸಾಲು ಹಾಡಿಸುವ ಅಲ್ಲ ಹಾಡುವ ಎಂದೇ ಆಗಬೇಕು. ಧನ್ಯವಾದಗಳು

 2. ಪಾಡಿದ ಕಾವ್ಯದಿಂದೆ ,ನಿಜಚಿತ್ರಮೆ ಗೋಚರಿಪಂತೆ,ದೂರದಿಂ
  ತೀಡುತೆ ಬರ್ಪ ಗಾಳಿ,ಸುಮದಂದಮನಗ್ರಮೆ ತಂದು ನೀಳ್ವವೊಲ್,
  ನೋಡುವ ಕಣ್ಣಿರಲ್ ಬಗೆಯನಾನಿಸಿ,ಕಲ್ಪನೆ ಮೂಡಿ ಬಂದುತಾಂ
  ಪಾಡುವ ಮೂಗನಂ,ಪೆಳವನಿಂ ಗಡ ನೃತ್ಯಮನಂಧನೀಕ್ಷಿಪಂ

  (ಮನಸ್ಸಿಗೆ ಒಪ್ಪಿಗೆಯಪ್ಪಂತೇ ನೋಡುವ ದೃಷ್ಠಿಯಿದ್ದರೆ(ಬಯಸಿದರೆ),ಹಾಡುವ ಮೂಗನನ್ನೂ ಕುಣಿವ ಹೆಳವನನ್ನೂ ಕುರುಡನು ಕಾಣಬಲ್ಲ!
  ಹಾಡಿದ ಕಾವ್ಯದಿಂದಲೇ ಚಿತ್ರವೂ ಗೋಚರಿಸುವುದು, ತೀಡಿಬರುವ ಗಾಳಿಯೂ ಸುಮದ ಚೆಂದದ ಕಲ್ಪನೆಯನ್ನು ಕೊಡಬಲ್ಲದು(ಅದು ದೃಷ್ಟವಾಗಿರದಿದ್ದರೂ,ಕಲ್ಪಿಸಿಕೊಂಡು ಕಾಣಲು ಸಾಧ್ಯ)

 3. ನೋಡದೊಡಂ ದಿಟಂ ಪ್ರಕೃತಿತಾಂ ಪೆಳವೈ ನಲಿಯಲ್ಕಸಂಭವಂ
  ನೀಡುತೆ ಕಾಣ್ ಸದಾ ಪಗಲತಾಂ ಕುರುಡಂ ಪುರುಷಂ ಪ್ರಮಾಣಿಸಲ್
  ಮೂಡುದು ಸೃಷ್ಟಿಯೊಳ್ ಪ್ರಣವನಾದವದುಂ ಮುರಿದಿಕ್ಕಿ ಮೌನವಂ
  ಪಾಡಿಪ ಮೂಗನಂ, ಪೆಳವನಿಂ ಗಡ ನೃತ್ಯಮನಂಧನೀಕ್ಷಿಪಂ ।।

  “ಕುಂಟ”- ಪ್ರಕೃತಿಯನ್ನು ಹೊತ್ತು ಸಾಗಿರೆ “ಕುರುಡ”-ಪುರುಷ – ಆಗುವ ಸೃಷ್ಟಿ – “ಮೂಕ”- ಸೃಷ್ಟಿಯಲ್ಲಿ ಮೊಳಗುವ “ಓಂ”ಕಾರ !!

  • ಅಬ್ಬಬ್ಬಾ! ಇಲ್ಲೀ ತನಕ ಪೂರಣದ ಸಾಧ್ಯತೆಗಳಿದೆ ಅಂತ ತೋರಿಸಿಕೊಟ್ಟಿರಲ್ಲ, ಉಷಾ ಅವರೇ 🙂

  • ಎರಡು ದಿನಗಳ ಹಿಂದೆ ತಾನೆ ಶ್ರಿ ಗಣೇಶರ ಷಡ್ದರ್ಶನ ಸಂಗ್ರಹ ಪುಸ್ತಕದ ಸಾಂಖ್ಯ ದರ್ಶನದ ಬಗೆಗಿನ ಅಧ್ಯಾಯದಲ್ಲಿ ಪಕೃತಿ ಪುರುಷ ಸಹಯೋಗದ ಈ ಅಂಧಪಂಗು ನ್ಯಾಯದ ಬಗ್ಗೆ ಓದಿದ್ದೆ. ನಿಮ್ಮ ಈ ಪೂರಣವನ್ನು ಓದಿ ಬಹಳ ಆಶ್ಚರ್ಯವೂ , ಸಂತೋಷವೂ ಆಯಿತು. ಎಲ್ಲಿಂದೆಲ್ಲಿಗೆ? ನಿಮ್ಮ ಮೂಕ ಸೃಷ್ಟಿ , ಓಂ ಕಾರದ ಮೊಳಗಿನ extension ಕೂಡ ಅದ್ಭುತವೇ. ಹಾರ್ದಿಕ ಅಭಿನಂದನೆಗಳು ಉಷಾರವರೆ..

  • ಧನ್ಯವಾದಗಳು ಸೋಮ, ಗಾಯತ್ರಿ (“ಅಂಧಪಂಗು” ನ್ಯಾಯದ ಆಧಾರ ತಿಳಿದಿರಲಿಲ್ಲ)

 4. ಬೇಡಮೆನುತ್ತೆ ದೂಡಿಪರಖಂಡದ ಧೀರರ ಕೀರ್ತಿಯಾಖ್ಯೆಯಂ
  ಕೂಡದು ಸತ್ಕಲಾಶ್ರಿತರ ಕಜ್ಜದ ಪೆರ್ಮೆಯ ವೈಭವಂಗಳುಂ
  ಪಾಡಿದಶಾಸನವ್ರತಿಕದೀಕ್ಷಿತರೇರಿಪ ಸಂಘಸಂಸ್ಥೆಯೊಳ್
  ಪಾಡುವ ಮೂಗನಂ ಪೆಳವನಿಂ ಗಡ ನೃತ್ಯಮನಂಧನೀಕ್ಷಿಪಂ

  ಪಾಡಿದು ಅಶಾಸನ – ಪಾಡಿದಶಾಸನ

  ದುರ್ಜನರು, ಶಾರದಾಶತ್ರುಗಳು ದೊಡ್ಡ ಕಲಾಪೀಠ, ವಿದ್ಯಾಪೀಠಗಳನ್ನೇರಿದಾಗ ಒಳಗೆ ಉತ್ತಮವಾದದನ್ನು ಕಡೆಗಣಿಸಿ ಕ್ಷುಲ್ಲಕವಾದುದನ್ನು ಆದರಿಸುತ್ತಾರೆ.

 5. ಮೂಡಣವಟ್ಟೆಯೊಳ್ ತಿಮಿರಮಂ, ಸಿತಸಿಂಧುವೊಳಾಬಿಲಾಳಿ ಕಾ-
  ರ್ಮೋಡದೆ ರೌಕ್ಷ್ಯಮಂ ಮೃದುಲವಲ್ಲಿಯೊಳಂ ಕಠಿನತ್ವಮೆಂಬುವೊಲ್
  ನೋಡಿಪ ಲೋಗರೊಂದೆಡೆ, ಕೆಲರ್ಗಭಿರಾಮದೆ ತೋರ್ಪ ಬುದ್ಧಿಯೊಳ್
  ಪಾಡುವ ಮೂಗನಂ ಪೆಳವನಿಂ ಗಡ ನೃತ್ಯಮನಂಧನೀಕ್ಷಿಪಂ

  ಆಬಿಲ – turbid
  ಬುದ್ಧಿ – perception

  How positive and negative mindsets perceive world

 6. ಪಾಡುತಿರಲ್ಕೆ ಮೂಗನೆನುವಾತನಹಾ!ಕುಣಿಯಲ್ಕೆ ಬಾರದಂ
  ತೋಡದೆ ಮಂದಿಯೊಳ್ ಪೆಳವನಾದವನಾಗಳೆ ನೋಂತು ನರ್ತಿಸಲ್,
  ನೋಡುತಿದಂ ಮದಾಂಧನರೆ!ಹರ್ಷಿಸೆ, ಸೋದರಸೋಮರೆಂದರೇಂ
  “ಪಾಡುವ ಮೂಗನಂ,ಪೆಳವನಿಂ ಗಡ ನೃತ್ಯಮನಂಧನೀಕ್ಷಿಪಂ”

 7. ಸೇಡಿನ ತಂತ್ರಮೊಡ್ಡಿ ಸಚಿವರ್ಕಳೆ ರಾಮನ ಬಂಧಿಯಾಗಿಸಲ್
  ಮಾಡದ ದೋಷಕಂ ಮರಣದಂಡಮನೊಡ್ಡಿರೆ ದೇವರಾಯನಿಂ
  ಬೇಡಿಕೆ ಪೇಳ್ಗುಮೆಂಬುಲಿಗೆ ನೋಳ್ಪುದಕಾಶಿಪೆ ದೃಷ್ಯಮಿಂತಿದೋ
  ‘ಪಾಡುವ ಮೂಗನಂ ಪೆಳವನಿಂ ಗಡ ನೃತ್ಯಮನಂಧನೀಕ್ಷಿಪಂ’

  ಮರಣದಂಡನೆಯಿಂದ ತೆನಾಲಿ ರಾಮ ಚಾಣಾಕ್ಷತನದಿಂದ ನೆರವೇರಿಸಲಾಗದ ಕೊನೆಯ ಆಸೆಯನ್ನು ಕೇಳಿ ಬದುಕಿದನೆಂಬ ಪ್ರಸಂಗ

 8. ಬೇಡಿರೆ ದೇವರಂ ವಿನಯದಿಂ,ಸಿರಿಯಂ ಬಯಸುತ್ತೆ ಬಾಳಿನೊಳ್,
  ಮೂಡಿದ ಕಳ್ತಲೊಳ್,ದಣಿವನಾರಿಸೆ ವಿಶ್ರಮಿಸಿರ್ಪ ವೇಳೆಯೊಳ್,|
  ಬಾಡುತೆ ಕಂಗಳಾಗಳತಿಶೀಘ್ರದೆ ಮುಚ್ಚಿರೆ,ಗಾಢನಿದ್ರೆಯೊಳ್,
  ಪಾಡುವ ಮೂಗನಂ, ಪೆಳವನಿಂ ಗಡ ನೃತ್ಯಮನಂಧನೀಕ್ಷಿಪಂ ||

 9. Hope I am forgiven for completing a Kannada samasyA in Sanskrit 🙂

  नित्यम् अकिञ्चना जठरमात्रधियो बहुवेशधारिणो
  नृत्यति गायति प्रतिभयाद्य च यः क्षतगात्रकः पुरा
  एवम् अवस्थितौ जगति चित्रमिदं नहि चेच्चतुष्पथे
  ಪಾಡುವ ಮೂಗನಂ ಪೆಳವನಿಂ ಗಡ ನೃತ್ಯಮನಂಧನೀಕ್ಷಿಪಂ

  • ಹೈವೇಯಲ್ಲಿ ಭಿಕ್ಷುಕರ ಪ್ರತಿಭಾಪ್ರದರ್ಶನವನ್ನು ಬಿಂಬಿಸುವ ಸಂಸ್ಕೃತ ಮತ್ತು ಕನ್ನಡದ ಸಾಲಿನಲ್ಲಿ ಯತ್ನ ಚೆನ್ನಾಗಿದೆ,

   ಸುಹಾಸನ ಮೊದಲನೇ 😉 ೧/೪ ಕನ್ನಡ ಪದ್ಯವಾದಲ್ಲಿ ಉಳಿದ ೩/೪ ಅನ್ನೂ ಸೇರಿಸಿ ಮುಂದಿನ ಸಪ್ತಾಹಗಳಲ್ಲಿ ಪ್ರಯತ್ನಿಸಬಹುದೆಂಬ ಆಶಯ ವ್ಯಕ್ತಪಡಿಸುತ್ತೇನೆ 🙂

  • वसन्ततिलकम्॥ ನಾಮಾರೆ ನಿಮ್ಮವೊಲೆ ಪದ್ಯವ ಪೋಣಿಸಿರ್ಪೆವ್
   Nobody in here is empowered to forgive you (ನೋಬಾಡಿ ಇsನಿಯರಿಸೆಂಪವಟೂ fಅಗಿವ್ಯೂ)|
   खुद आप ही अपने को करना मुआफी
   వ్రాయండగా తెలుగులో పరిపూర్ణపద్యం||

 10. ಕಾಡುವ ಶಿಲ್ಪಮಯ್ ಸ್ಥಪತಿ ಭಾಪೆನುವೊಲ್ ಗಡ ಶಿಲ್ಪಿ ಮೇಣದಿಂ
  ತೀಡಿದ ನೃತ್ಯವೇದಿಕೆಯ ಗಾಯಕ-ನರ್ತಕ-ದರ್ಶಕರ್ಗಳಾ
  ಪೀಡೆಯ ನಿಷ್ಠುರಾಗ್ರಹದ ದಾಳಿಗೆ ಸಿಲ್ಕುತಲಿಂತು ಪೇಳ್ವುದೇಂ
  “ಪಾಡುವ ಮೂಗನಂ ಪೆಳವನಿಂ ಗಡ ನೃತ್ಯಮನಂಧನೀಕ್ಷಿಪಂ”

  ಅದ್ಭತವಾದ ದರ್ಶಕ-ಹಾಡುಗನನ್ನೊಳಗೊಂಡ ನರ್ತನವೇದಿಕೆಯ ಶಿಲ್ಪಕ್ಕೆ ಅಸಹಿಷ್ಣುಗಳ ದಾಳಿ ಮಾಡಿದ ಹೀನಸ್ಥಿತಿ

 11. ಕ್ರೀಡೆಯ ಚೋದ್ಯಕೆಂದೆ ಗುರು ಛಾತ್ರರ ವೃಂದಕೆ ಪಂದ್ಯಮೊಡ್ಡಿ ದಂ
  ನಾಡಿನ ನವ್ಯರಿಂ ಲಿಖಿತವರ್ಣದಚಿತ್ರಮನುಕ್ತಿಯಿಲ್ಲದೇ
  ನೋಡುಗಗಂ ನಿವೇದನಮದಪ್ಪುಗುಮೆಂಬೊಡೆ ಗೆಯ್ದ ಭೂಮಿಯೊಳ್
  ಪಾಡುವ ಮೂಗನಂ ಪೆಳವನಿಂ ಗಡ ನೃತ್ಯಮನಂಧನೀಕ್ಷಿಪಂ

  Modern Artಅನ್ನು Dumb charadesಮೂಲಕ ತಿಳಿಸಿ, ಎಂದಾಗ ಛಾತ್ರರು ಆರಿಸಿದ ಭೂಮಿಕೆ

 12. ನೋಡಲದಾಗದೀಗಿನದಸಾಧ್ಯದ  ಚಿತ್ರದೊಳೇಂ ವಿಚಿತ್ರಮೈ
  ಪಾಡುಗಳೆಂತೊ ಕಾಣೆನಮಮಾ ರಸಮಿಲ್ಲ, ವಿಶೇಷಮಿಲ್ಲಮೈ
  ಬಾಡಿದ ಚಿತ್ತದಿಂ ಶ್ರುತಿ ಲಯಂಗಳ ಮೀರಿದುದಂತೆ ತೋರ್ವುದೀ
  ಪಾಡುವ ಮೂಗನಂ ಪೆಳವನಿಂ ಗಡ ನೃತ್ಯಮನಂಧನೀಕ್ಷಿಪಂ

  • ಚೀದಿ ಚೆನ್ನಾಗಿದೆ, filmಗೆ ಹೋಗ್ದೆ ತುಂಬ ದುಡ್ಡು ಉಳಿಸ್ತಿದಾರೆ ಅನ್ಕೋಬಹುದ 😉

 13. ಜೋಡಿಸೆ ಹೃನ್ಮನಂಗಳನಧಿಷ್ಠಿತ ಪಕ್ಷದನಿಷ್ಟಕಾರ್ಯದೊಳ್
  ತೀಡಿಪರಲ್ತೆ ಪಿಂತೆ ನಡೆದಿರ್ದುದನಾನಿತಿಹಾಸಕಾರನೆಂ-
  ದೋಡಲಸತ್ಯಮಾಕೃತಿಯೊಳಿಂತೆನೆ ತೋರ್ಪುದು ತರ್ಕಯುಕ್ತರ್ಗಂ
  ‘ಪಾಡುವ ಮೂಗನಂ ಪೆಳವನಿಂ ಗಡ ನೃತ್ಯಮನಂಧನೀಕ್ಷಿಪಂ’

  ಅಧಿಷ್ಠಿತ – Ruling
  ಪಕ್ಷದನಿಷ್ಟ – ಪಕ್ಷದ ಅನಿಷ್ಟ – Wrong work of a political party

  So called historians tweak history supporting political positioning of ruling party, when such work is viewed by a logician (because of glaring inaccuracies), it appears like an absurd story as in samasya line

 14. ಕಾಡುವುದೀಮನಂ ಪಿರಿಯರಿಲ್ಲದ ಹಬ್ಬದ ಮೋದದಾವಗಂ
  ಪಾಡದು ದುಷ್ಕರಂ ವಿಧಿಸಿ ಮಾಡಿಪ ಕಾರ್ಯಗಳೆಲ್ಲ ಕೃತ್ರಿಮಂ
  ಬೇಡುತೆ ಪಿಂದಿನಾ ದಿನಗಳಂ, ನಡೆ ತೋರಿಕೆಯಾಟದಂತಿರಲ್
  ಪಾಡುವ ಮೂಗನಂ ಪೆಳವನಿಂ ಗಡ ನೃತ್ಯಮನಂಧನೀಕ್ಷಿಪಂ

  [ಹಿರಿಯರಿಲ್ಲದೆ ಮಾಡುವ ಹಬ್ಬದಲ್ಲಿ ರುಚಿಯಿಲ್ಲ. ಮಾಡುವ ವಿಧಿಯ ಕೆಲಸಗಳೆಲ್ಲ ತೋರಿಕೆಯಂತಾದ ಕೃತ್ರಿಮವಾದ ನಡೆ ಪಾಡುವ ಮೂಗನಂ… ಎಂಬಂತಿದೆ ಎಂಬ ಭಾವ]

  • ಬಹಳ ಚೆನ್ನಾಗಿದೆ ರಾಮ್ ನಿಮ್ಮ ಪದ್ಯಪೂರಣಕ್ಕೆ ಸಂತೋಷವೂ, ಮತ್ತು ನೀವು ಅದರಲ್ಲಿ ತೋರಿರುವ ಭಾವನೆಗೆ ಸಂಕಟವೂ ಆಯಿತು :(.

 15. Translation of ಮೂಕಂ ಕರೋತಿ ವಾಚಾಲಂ…
  ಚೌಡಿಯು ಶೀರ್ಷದೊಳ್ ಕರಮನಿಕ್ಕುತುಮೆಂತುಟೊ ಕಾದಿರಲ್ ವಲಂ.
  ನೋಡದೆ ಲೋಕವೆಲ್ಲವು, ವಿಕಾರವ ನೀಗುತೆ ಮುಕ್ತಕಂಠದಿಂ ಪಾಡುವ ಮೂಗನಂ!
  ಪೆಳವನಿಂ ಗಡ ನೃತ್ಯಮನಂಧನೀಕ್ಷಿಪಂತಾಡಿಪ ಮಾತೆಮೈಮೆಗನಿಶಂ ತಲೆವಾಗಿಪೆನಾನು ಭಕ್ತಿಯಿಂ||

 16. ನೋಡನುಮಂಧತಾಂ ಪೆಳವನೈ ನಡೆದಾಡನು ತಾನೆತಾನದೋ,
  ಪಾಡುದ ಕೇಳನೈ ಕಿವುಡತಾಂ ದಿಟ ಮೂಗನು ಕಾಣ್ ವಿಚಿತ್ರವಂ
  ಪಾಡಿಪ ಮೂಗನಂ, ಪೆಳವನಿಂ ಗಡ ನೃತ್ಯಮನಂಧನೀಕ್ಷಿಪಂ ।
  “ನೋಡುದುಮೆಲ್ಲಮಂ ಬರಿದೆ ಕಂಗಳೊಳಲ್ಲವು” ಕೇಳಿ ನೋಡಿದಂ ।।

  ಎಂಥ ವಿಚಿತ್ರ !!
  ನೋಡಲಾಗದ “ಕುರುಡ” (ತಾನೂ ಪೆಳವ) – (ಕುಣಿಯಲಾಗದ) “ಪೆಳವ”ನ ನೃತ್ಯವನ್ನು ನೋಡುವನು
  “ಹಾಗೇ”
  ಕೇಳಲಾಗದ “ಕಿವುಡ” (ತಾನೂ ಮೂಗ) – (ಹಾಡಲಾಗದ) “ಮೂಗ”ನನ್ನು ಹಾಡಿಸಿ ಕೇಳುವನು ?!

  ನೋಡುವುದು ಬರಿ “ಕಣ್ಣಿ”ನಿಂದ ಮಾತ್ರವಲ್ಲ – “ಕೇಳಿನೋಡು” ?! ( ಮುಟ್ಟಿ/ಮೂಸಿ/ತಿಂದೂ ನೋಡಬಹುದು)

 17. ಸ್ವಲ್ಪ ದೂರಾನ್ವಯವಾಗುವಂತಹ ಒಂದು ಪರಿಹಾರ-
  ಸೇಡಿನ ಬಿತ್ತು ಬಿತ್ತುವುದದೊಂದು ಸುವಾಕ್ಯಮೆ! ಮೂಗನಾತನೈ!
  ಬೇಡದ ಮಾತಿಗಂತು ಕುಣಿದಿರ್ಪುದು ಕುಂಟನವೋಲೆನಲ್ ವಲಂ
  ನೋಡೆ ಸುಯೋಧನಾನುಜನ ಕೃತ್ಯದೆ ಕರ್ಣಕಳಿಂಗರುಕ್ತಿಯೊಳ್!
  ಪಾಡುವ ಮೂಗನಂ ಪೆಳವನಿಂ ಗಡ ನೃತ್ಯಮನಂಧನೀಕ್ಷಿಪಂ
  (ಸೇಡಿನ ಬೀಜವನ್ನು ಬಿತ್ತುವ ಮಾತೊಂದು ಮಾತೇ! ಹಾಗೆ ನುಡಿಯುವವನೇ ಮೂಗ! ಹಾಗೆ ಬೇಡದ ಮಾತಿಗೆ ಕುಣಿಯುವುದು ಕುಂಟನಂತೆಯೇ ಸರಿ! ಸುಯೋಧನಾನುಜನ (ದುಶ್ಶಾಸನನ) ಕೃತ್ಯದಲ್ಲಿ ಕರ್ಣಶಕುನಿಯರ ಮಾತಿನಲ್ಲಿ ಹೀಗೆ ನೋಡಿದರೆ, ಹಾಡುವ ಮೂಕನನ್ನೂ, ಕುಣಿಯುವ ಕುಂಟನನ್ನೂ ಅಂಧನೃಪ ಧೃತರಾಷ್ಟ್ರ ನೋಡಿದ)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)