Nov 212015
 

Crocodile

ಕೃಪೆ ಅಂತರ್ಜಾಲ

  112 Responses to “ಪದ್ಯಸಪ್ತಾಹ ೧೭೮: ಚಿತ್ರಕ್ಕೆ ಪದ್ಯ”

  1. ಖರನಕ್ರೋತ್ಕರಮೀ ಸರಸ್ಸಲಿಲಮಾ೦ತರ್ಯ೦ ದುರಾತ್ಮರ್ಕಳಾ-
    ವರಿಸಿರ್ಪ೦ತೆ ಜಗ೦ಗಳೊಳ್ ಮೆರೆಯುತು೦ ಸ೦ಸಾರಭೀತಿಪ್ರಮೋ-
    ದರಲಾ, ರಾವಣನ೦ದದಿ೦ ದಶಮುಖ೦ಗಳ್ ಮೇಣ್ ಶತ೦, ಭ್ರಾ೦ತಿಯಿ೦-
    ದೆರಕ೦ಗೈವರೊ ರಾಕ್ಷಸಪ್ರವರಮ೦, ನಾರಾಯಣ೦ ಕಾವುದಯ್

    ಮೊಸಳೆಗಳ ಈ ಮಾಯಾಜಾಲದ ಹಬ್ಬುಗೆ, ಸ೦ಸಾರಕ್ಕೆ ಭೀತಿಯನ್ನು ಹುಟ್ಟಿಸಿ ತುಷ್ಟರಾಗುವ ದುರಾತ್ಮರ ಆ೦ತರ್ಯದ೦ತೆ. ರಾವಣನ ಹಾಗೆ ಇವರಿಗೂ – ಇಲ್ಲಿರುವ೦ತೆ – ಹತ್ತೊ ನೂರೊ ತಲೆಗಳು. ಭ್ರಾ೦ತಿಯ ಎರಕದಲ್ಲಿಯೇ ರಾಕ್ಷಸಕುಲವನ್ನು ಹುಟ್ಟಿಸುತ್ತಾರೆ. ನಕ್ರಹರನಾದ ನಾರಾಯಾಣನೇ ಕಾಯಬೇಕು.

    • ಮೊಸಳೆಯ ಹೊರಮೈಯಲ್ಲಿ “ರಾವಣನ ಹಾಗೆ ಇವರಿಗೂ – ಇಲ್ಲಿರಿವ೦ತೆ – ಹತ್ತೊ ನೂರೊ ತಲೆಗಳು” ಎಂಬ ಕಲ್ಪನೆ ಚೆನ್ನಾಗಿದೆ ನೀಲಕಂಠ

      • ಧನ್ಯವಾದಗಳು. ಒಳ್ಳೆ ಚಿತ್ರ ಹಾಕಿದ್ದಕ್ಕೆ ಕೂಡ…

        • ಒಳ್ಳೆಯ ಶೈಲಿ. ಅಭಿನಂದನೆಗಳು. ಪದ್ಯವು ಧ್ವನಿಯುತವೂ ಆಗಿದೆ.

  2. ಸೊಲ್ಗಳೇ ಬರದಿರ್ಪ ಮುಂಬಾಯ ಸಂವೃದ್ಧ-
    ವಲ್ಗುವಿನ ಪೊರಮಡುವ ದೌಷ್ಟ್ಯಮೆನಿಪ
    ಪಲ್ಗಳಿಂದಾಹಾರಸೇವನೆಯ ಜೀವಿತಕೆ
    ಕೀಳ್ಗೆಯ್ದ ರಸನೆ! ಧಿಕ್ ನಿನ್ನಿರುವಿಗಂ

    ಮಾತನ್ನೇ ಆಡುವುಕ್ಕಾಗದ ಅಷ್ಟು ದೊಡ್ಡದಾಗಿ ಬೆಳೆದ ಮುಂಬಾಯ ಸೌಂದರ್ಯಕ್ಕೆ (ವ್ಯಂಗ್ಯ), ಹೊರಗೆ ನಿಲ್ಲುವ ಕ್ರೌರ್ಯಸೂಚಕ ಹಲ್ಲುಗಳು, ಒಟ್ಟು ಆಹಾರ ಸೇವನೆಗೆ ಎಂದೇ ಇರುವ ಜೀವಿತದಲ್ಲೂ ನಲುಗಿರುವ ನಾಲಗೆ (ಮೊಸಳೆಗಳಿಗೆ ನಾಲಗೆ ಬಹಳ ಸಂಕುಚಿತವಾಗಿರುತ್ತದೆ, ಹಾಗಾಗಿ ರಸಾಸ್ವಾದವು ಎಷ್ಟರ ಮಟ್ಟಿಗೋ?) ನಿನ್ನ ಇರುವಿಕೆಗೆ ಧಿಕ್ಕಾರ

    • ಆಹಾ, ಬೈಯುವ ರೀತಿ ಚೆನ್ನಾಗಿದೆ 🙂

    • ಹಾ! ‘ಹಾ’ಕಾರ ಆಹಾರದಿ೦ದ ನುಣುಚಿಕೊಂಡು ‘ಆ ಹರ ‘ಸೇವನೆಯೆ೦ದಾಗಿದೆಯಲ್ಲಾ …

      ನೀಲಕಂಠರ ದುರ್ಬೀನಿಗೂ ಬಿದ್ದಿಲ್ಲವೇ?

      • ಹಾ! ಹೌದು ಟೈಪೋ ಸರಿಪಡಿಸಿದ್ದೇನೆ

      • ನನ್ನ ದುರ್ಬೀನಿಗೆ ಬಿದ್ದಿತ್ತು. ಅದೊ೦ದು ಟೈಪೋ ಮಾತ್ರ, ಅ೦ಥದ್ದನ್ನು ಸೋಮರ೦ಥವರಿಗೆ ಹೇಳುವ ಔಚಿತ್ಯ ಏನೂ ಕಾಣಲಿಲ್ಲ… 🙂

        • ಸೋಮರ೦ಥವರು ತಪ್ಪು ಮಾಡಿದರೆ ಪದ್ಯಪಾನಕ್ಕೆ ಕಲಿಯಲೆಂದು ಬರುವವರು ಆ ತಪ್ಪನ್ನೇ ಸರಿಯೆಂದು ಭಾವಿಸುವ ಸಂಭವನೀಯತೆಯೇ ಹೆಚ್ಚು . ಅಲ್ಲಿ ಮೊಸಳೆಯನ್ನು ಧಿಕ್ಕರಿಸುತ್ತಲೇ ,ಹೊಗಳುತ್ತಾ (ಹರನ ಸೇವೆ ಮಾಡುವುದೆಂಬ ಅರ್ಥ ಬರುವಂತೆ ) ರಸಾಸ್ವಾದನೆಯನ್ನು ಹೆಚ್ಚಿಸಿದ್ದಾರಸ್ಟೇ ? ಅದಕ್ಕೆ ಪರೋಕ್ಷವಾದ ಮೆಚ್ಚುಗೆಯೂ ಹೌದು

          • ತಿದ್ದಿಪಡಿಯನ್ನು ಮನಃಪೂರ್ವಕವಾಗಿ ಸ್ವಾಗತಿಸುವ, ಒಬ್ಬರಿಗೊಬ್ಬರ ಕಲಿಕೆಗೆ, ವಿನಿಮಯಕ್ಕೆ ನೆರವು ನೀಡುವ ತಾಣವಲ್ಲವೇ ಪದ್ಯಪಾನ.

            ಭಾಲ ಅವರೇ, ನಿಮ್ಮ ಪದ್ಯಗಳನ್ನೂ ಹಂಚಿಕೊಳ್ಳಿರಿ ಎಂದು ಕೇಳಿಕೊಳ್ಳುತ್ತೇನೆ

    • ಆಹಾ! ಸೋಮ! ಒಳ್ಳೆಯ ಅನ್ಯೋಕ್ತಿಯೇ ಹೊಮ್ಮಿದೆ!! ಅಭಿನಂದನೆಗಳು.

  3. ಚಿರಕಾಲಮಾಹಾರಕೆನೆ ಕಾಯ್ವ ಸಂಚಿನೊಳ್
    ಚರಮಲ್ತಿದೆನೆ ಕಾಂಬುದಲ್ತೆ ಮಕರಂ
    ಸ್ಥಿರಚಿಚ್ರಿತ್ರಮೇಂ? ಚಲನಚಿತ್ರಮೇನೆನಿಪವೋಲ್?
    ಪರಿಯಾವುದೆನೆ ಪಟಮನೀಕ್ಷಿಸಿಪುದೇಂ?

    Crocodile video on screen may confuse viewer whether this is video or just a photo

  4. ಹೃಷ್ಟಪುಷ್ಟನ ಸೌಷ್ಠವಂಗಳಂ ಬಣ್ಣಿಸಲ್
    ‘ದಷ್ಟಪುಷ್ಟಂ’ ಪೇಳ್ವರಿಂಗೆನುತಿದೋ
    ದುಷ್ಟದಂಷ್ಟ್ರದಜಂತುವಂ ತೋರುತುಂ ಕೇಳ್ಗು-
    ಮಿಷ್ಟರಿಂ ದಷ್ಟನೇಂ? ಮೇಣಧಿಕಮೋ? 😉

    • ಅರ್ಥ ತಿಳಿಸಿ. ಸೌಷ್ಠವ ಆಗಬೇಕಲ್ಲ..

      • ‘ದಷ್ಟಪುಷ್ಟ’ವೆಂದು ಪ್ರಸಿದ್ಧಿ ಪಡೆದಿರುವ ವರ್ಣನೆಯನ್ನು ಗೇಲಿಮಾಡುವ ಪದ್ಯವಿದು ಹೃಷ್ಟಪುಷ್ಟವೆಂದು ಬಣ್ಣಿಸುವುದು ಒಳಿತೆಂದು ಶತಾವಧಾನಿಗಳೇ ಒಮ್ಮೆ ಹೇಳಿದ್ದರು.

        ಈ ಪದ್ಯದ ಆಶಯ: ಹೃಷ್ಟಪುಷ್ಟನ ಸೌಷ್ಠವವನ್ನು ವರ್ಣಿಸಲು ‘ಕಚ್ಚಲ್ಪಟ್ಟ ಸಂವೃದ್ಧಿ’ (‘ದಷ್ಟಪುಷ್ಟಂ’) ಎಂದು ಹೇಳುವ ಜನರಿಗೆ ಈ ದುಷ್ಟದಂಷ್ಟ್ರದಜಂತುವನ್ನು ತೋರಿಸಿ ಹೀಗೆ ಕೇಳಬೇಕು ‘ಇಷ್ಟರಿಂದ ಕಚ್ಚಲ್ಪಟ್ಟನೋ ಅಥವಾ ಇನ್ನು ಅಧಿಕವಾದುದರಿಂದಲೋ?’

        • Hahhaa

        • ದಷ್ಟಪುಷ್ಟ ಎಂದರೆ ಕಚ್ಚಲ್ಪಟ್ಟವನಿಂದ ಪುಷ್ಟನಾದವನು ಅಥವಾ ಕಚ್ಚಲ್ಪಟ್ಟು ಪುಷ್ಟನಾದವನು ಎಂದು ಅರ್ಥ(ಅಪಾರ್ಥ) ಬರುತ್ತದೆ!! ಅದು ಹೃಷ್ಟ(ಸಂತೋಷಗೊಂಡವನೂ)ಪುಷ್ಟನೂ ಆದವನೆಂದು ತಿದ್ದಲ್ಪಡಬೇಕು.

          • ಗಣೇಶ್ ಸರ್, ನೀವೇ ಇಂತಹ ಭಾಷಾಸೂಕ್ಷ್ಮಗಳನ್ನು ತಿಳಿಸಲು ಶಕ್ತರು, ತಿಳಿದ ಮೇಲೆ ನಾನು ಸರಿಯಾದ ಬಳಕೆಯನ್ನೇ ಅಳವಡಿಸಿಕೊಂಡಿದ್ದೇನೆ ಧನ್ಯವಾದಗಳು ಸರ್

  5. ತನ್ನ ಚೆಲ್ವ ಮೊಗಮೀಕ್ಷಿಸಲೆಂದೇ
    ಮುನ್ನಮೇರುತುರೆ ಮಾರುತಬಿಂಬಂ
    ಚನ್ನಮೆಂದು ಮಕರಂ ಸಲೆ ಕಾಯ್ಗುಂ
    ಭಿನ್ನಮಪ್ಪ ಪಟದೊಳ್ ನಲವಿಂದಂ

    ಮೊಗಮೀಕ್ಷಿಸಲ್ – ಮೊಗಮಂ ಈಕ್ಷಿಸಲ್
    ಭಿನ್ನ – loosened, expanded
    ಮಾರುತಬಿಂಬಂ – ನೀರಿನಿಂದ ನೋಡಿದಾಗ ಪ್ರತಿಫಲನ ಗಾಳಿಯಲ್ಲಿನ ಬಿಂಬ (ಗಾಳಿಯಿಂದ ನೋಡಿದಾಗ ನೀರಿನ ಪ್ರತಿಫಲನವೆಂಬಂತೆ ನೀರಿನಿಂದ ನೋಡಿದಾಗ ಗಾಳಿಯ ಪ್ರತಿಫಲನ)

    Crocodile is waiting for the stability of top layer of water to view its own beautiful image.

  6. ಕಲೆತೀ ಸಾಗರನಪ್ಪಿ ಕಾಡುವರಿ ಷಡ್ವರ್ಗಂಗಳಾ ಪಂಕ್ತಿಯೋ!
    ಜಲರತ್ನಂಗಳ ರಕ್ಷೆಗೆಂದೊದವಿದಾ ದೈತ್ಯಾದಿ ಸಂಕೀರ್ಣಮೋ!
    ಒಲವಂ ಸೂಸದೆ ದಾರ್ಢ್ಯದಿಂದೆ ಭುವಿಯಂ ಪೊಂದಲ್ಕೆ ಹುನ್ನಾರಮೋ!
    ಕುಲನಾಶಂಗೊಳಿಸಲ್ಕೆ ವಾರಿನಿಧಿಯೊಳ್ ಪುಟ್ಟಿರ್ಪ ಸಂತಾನಮೋ!

    • ಚೆನ್ನಾಗಿದೆ ಮೇಡಮ್! ಭವ್ಯಕಡಲು ಅರಿಯಾಯಿತು. 🙂
      ನೀರನಿಧಿಯೊಳ್, ವಾರಿನಿಧಿಯೊಳ್….
      ದಾಷ್ಟ್ರದಿ೦ದೆ? ದ೦ಷ್ಟ್ರದಿ೦ದೆ?

      • ಧನ್ಯವಾದ,ಸವರಣೆ ಮಾಡಿದ್ದೇನೆ .

        • ಆಹಾ! ತುಂಬ ಒಳ್ಳೆಯ ಪದ್ಯ!! ಉತ್ಪ್ರೇಕ್ಷೆ ಹಾಗೂ ಸಸಂದೇಹಗಳ ಛಾಯೆ ಇಲ್ಲಿದೆ; ಅದೊಂದು ಬಗೆಯಿಂದ ಕಂಡಾಗ ಉಲ್ಲೇಖಾಲಂಕಾರವೂ ಆದೀತು. ಚೆನ್ನಾದ ಶೈಲಿ; ಅಭಿನಂದನೆಗಳು.

    • ಚೆನ್ನಾಗಿದೆ ಸಾ. ಸಹೋದರಿ

  7. ಕಾಯಮನಾಂತುಡ ಚರ್ಮಮಿರಲ್ಕುಂ,
    ಬಾಯೊಳಿರಲ್ಕತಿ ಚೂಪಣ ಖಡ್ಗಂ,
    ನೋಯದೆ ,ಸಾಗರಮೀಸುತುಮಿರ್ದುಂ,
    ಹಾ!ಯೆನಿಪೀ ಲಘುಚಿಂತೆಯೆ?ನಕ್ರಂ!
    (ಇಷ್ಟೊಂದು ಸಾಮರ್ಥ್ಯವಿರುವ(ದಪ್ಪ ಚರ್ಮ,ಖಡ್ಗ,ಸಾಗರದಲ್ಲಿ ಈಜು),ನಿನ್ನನ್ನೂ ಈ ಲಘುವಾದ ಚಿಂತೆ ಕಾಡುತ್ತಿದೆಯೆ!)

    • ಯಾವ ಚಿ೦ತೆ?

      • ಈವರೆಗೆ ಅದೆಷ್ಟೋ ಚಿಂತಾಮಗ್ನ’ನಕ್ರ’ಗಳನ್ನು ನೋಡಿರುವಿರಿ. ಆಗ ತೋಚದ ಮಾತು ಈಗ ’ನಖ್ರ’ಕ್ಕಾಗಿ ಒದಗಿತೋ?
        ನೋಡಿಲ್ವೆ ನೀಲ್ಕಣ್ಟ ಚಿಂತೆಗೆ ಇಲ್ಗಂಟ
        ಈಡಾದ ಎಷ್ಟೆಷ್ಟೊ ನಕ್ರ|
        ಕಾಡದ ಮಾತಂದು, ಈಗಾಯ್ತೆ ಇಲ್ಲಿಯ-
        ಖಾಡದೆ ಮಾಡಾಕೆ ನಖ್ರ||

  8. ಪಸಿವಂ ನೀಗಲ್ಕಾಸೆಯಿ
    ನುಸಿರಂ ಪಿಡಿದು ,ಕುಳಿತಿರ್ಪ ಮಕರಂ,ಗೆತ್ತಿಂ
    ದೆಸೆದಿರ್ಪುದು ಕಾಮಾಸ್ಯದ
    ಪಸೆಯಂ ಪಿಡಿದೆತ್ತ್ತಿ ತೋರ್ದವೊಲ್ ಜಗಕೆಲ್ಲಂ!

    (ಹಸಿವನ್ನ ನೀಗಿಸಿಕೊಳ್ಳಲು ಹೊಂಚಿ ಕುಳಿತಿರುವ ಮೊಸಳೆಯು ಕಾಮಮೊಗದ ತಿರುಳನ್ನು ಪಿಡಿದೆತ್ತಿ ಜಗತ್ತಿಗೇ ತೋರ್ದಂತಿದೆ)

  9. ಚಿತ್ತಶರೌಘಮೇ ಮಕರರೂಪಮನಾ೦ತುದೊ ತೀರದಾಸೆಯಿ೦-
    ದೆತ್ತಿ ತಟಾಕದಿ೦ದೆ ಮೊಗಮ೦ ಚಪಲಪ್ರಬಲಾಯುಧಪ್ರಭ೦
    ಕತ್ತಿಯಲ೦ಗಿನ೦ತೆ ಪಲುಗಳ್ ಮಸೆಗಲ್ ವಿಷಯ೦ಗಳಲ್ತೆ ಮೇ-
    ಣೆತ್ತಣಮೋ ಮನಶ್ಶಮನಮೀ ದುರಹ೦ಕೃತಿಯೊಳ್ ವಿಧಾನಮೇ೦?!

    ಚಿತ್ತಜಲಧಿಯೇ ಮಕರರೂಪವನ್ನು ತಳೆದು ತೀರದಾಸೆಯನ್ನು ತೀರಿಸಿಕೊಳ್ಳಲು ತಟಾಕದಿ೦ದಾಚೆ ತಲೆ ಹಾಕಿತೋ? ಚಪಲಪ್ರಬಲವಾದ ಆಯುಧದ೦ತೆ, ಕತ್ತಿಯಲಗಿನ೦ತೆ ಅದರ ಹಲ್ಲುಗಳು. ವಿಷಯವಸ್ತುಗಳೇ ಮಸೆಗಲ್ಲು. ಈ ದುರಹ೦ಕಾರದ ಭರಾಟೆಯಲ್ಲಿ ಎಲ್ಲಿಯ ಮನಶ್ಶಾ೦ತಿ. ಮಾರ್ಗವೇನು?

  10. ಸಾಗರದೆ ಮಿಂದೆದ್ದು ಕಣ್ಮುಚ್ಚಿ ಕುಳಿತರುಂ
    ಸೋಗಿದೆಂಬುದನಿಂದು ಜನವರಿಯರೇಂ,
    ಭೋಗ ಲಾಲಸೆಗಳಂ ಮೈತುಂಬಿಕೊಂಡಿಹ
    ತ್ಯಾಗದೀಕ್ಷಿತರೊಡಂ ಬಾಳುತಿರೆ ತಾಂ!

  11. ಮಜ್ಜನಚರ್ಯೆಯಂ ಪೆಡಸ ರೂಕ್ಷದ ಕಾಯದಿನಯ್ದಿರಲ್ಕೆ ನೀರ್
    ಗೊಜ್ಜಿನ ಪಾಂಗಿನಿಂ ಕದುಡುಗುಂ ಗಡ ಕೌತುಕಮಪ್ಪವೋಲಿದೇಂ
    ತಜ್ಜಲಹಿಂಸ್ರಮಂ ಮಗುಳ್ದಲುಂಗದ ನೀರಿನ ತಿಳ್ಪನೀಕ್ಷಿಸಲ್
    ಬಿಜ್ಜೆಯನೊಂದುವೊಂ ಬಿಡದೆ ಕಜ್ಜಕೆ ನೋಂತು ತಿತಿಕ್ಷೆಯಪ್ಪುವೊಂ

    ಬಿಜ್ಜೆಯನೊಂದುವೊಂ – ವಿದ್ಯೆಯನ್ನು ಹೊಂದೋಣ
    ತಿತಿಕ್ಷೆಯಪ್ಪುವೊಂ – ಸಹನೆಯನ್ನು ಕಲೆಯೋಣ

    • ತಿತೀಕ್ಷೆ -> ತಿತಿಕ್ಷೆ

    • ಸೋಮಾ! ನೀನೂ ಕಾಂಚನಾ ಮತ್ತು ನೀಲಕಂಠರೂ ಸ್ಪರ್ಧೆಗೆ ಬಿದ್ದಂತೆ ಕವನಿಸುತ್ತಿದ್ದೀರಿ! ಎಲ್ಲರಿಗೂ ಅಭಿನಂದನೆಗಳು. ಪದ್ಯಪಾನದ ಜಾಲದಾಣವೇ ಈ ಕೆಲವು ದಿನಗಳಿಂದ ತೆರೆಯಲಾಗಾದಂತೆ ಮುಚ್ಚಿಕೊಂಡಿತ್ತು. ಅದಾವ ಕಂಪ್ಯೂಟರ್ ತಂತ್ರವೋ ಕಾಣೆ; ಇದೀಗ ಇಂದೇ ಅದು ತೆರೆದಿದೆ. ಹೀಗಾಗಿ ನಾನಿಲ್ಲಿ ತೊಡಗಿದ್ದೇನೆ. ಈ ಮುನ್ನಿನ ನನ್ನ ಅನುಪಸ್ಥಿತಿಯನ್ನು ಯಾರೂ ಅನ್ಯಥಾ ತಿಳಿಯಬಾರದೆಂದು ನಿವೇದನೆ.

      • ನಾವು ಅನ್ಯಥಾ ಭಾವಿಸುವ ಪ್ರಮೇಯವೇ ಇಲ್ಲ ಸರ್, ನಿಮ್ಮ ಕಾಮೆಂಟ್ಗಳು ಟಿಪ್ಪಣಿಗಳು, ಪದ್ಯಗಳಿಂದ ಕಳೆ ಕಟ್ಟುತ್ತದೆ ಪದ್ಯಪಾನತಾಣ…

        • ಬೆಂಗಳೂರಿನ ದುರ್ದಿನಗಳಿಂದು ಅಂತ್ಯಗೊಂಡಂತೇ ಪದ್ಯಪಾನದಲ್ಲಿಯೂ ಬಹಳದಿನಗಳ ನಂತರ ಬೆಳಕು ಮೂಡಿದೆ ! ಧನ್ಯವಾದಗಳು .

  12. ತಿಮಿಯಂ ತಿಮಿಂಗಿಲದವೊಲು-
    ಪಮೆಯಂತಿರ್ದಪುದು, ನಕ್ರಮಂ ನುಂಗಿರ್ಪಾ
    ಭ್ರಮೆಯಜ್ಞಾತದ ಮೃಗದಿಂ
    ಸಮೆಪ ಜಠರರಸಮೆನಿಪ್ಪ ಜಲನಿಧಿಯಲ್ತೇ

    ತಿಮಿಯನ್ನು ತಿಮಿಂಗಲವು ತಿನ್ನುವು ಉಪಮೆಯಂತೆ ಇದೆ, ಮೊಸಳೆಯನ್ನು ನುಂಗಿರ್ಪ ಭ್ರಮೆಯನ್ನುಂಟುಮಾಡುವ ಅಜ್ಞಾತ ಮೃಗದಿಂದ ಸವೆಸುವ ಪಿತ್ತರಸದಂತೆ ಕಾಣುವ ಜಲನಿಧಿಯಲ್ಲವೇ

    • ಮಕರಧ್ವಜನಿಗೂ ಸೋಮಶೇಖರನಿಗೂ ಬದ್ಧವೈರವಿರುವಾಗ ಮಕರದ ಮೇಲೇಕೆ ಇಷ್ಟೊ೦ದು ಪದ್ಯಗಳು ಸೋಮರೇ? 🙂

      • Neelakantha :), onderaDu bareyONa anta… niivu niilakanTha alve… enu kammi maaDade bareyuttiddiiralla ide vastuvige 😉

        • ಪಾಪ! ವೈರದಿಂದೇ ಈ ಬಡಜೀವವೂ ಸಾಕಷ್ಟು ಬೈಗುಳವನ್ನು ಗಳಿಸಿತು. ಇನ್ನು ಶನಿವಾರದೊಳಗೆ ಬೂದಿಯಾಗಿ ತೇಲೀತು 🙂

          • ಹಹಾ .. ಹೌದುsss, ಈ ಮೊಸಳೆಯನ್ನು ಎದುರಿಸಿದ ಧೀರರು ನಾವು ಮೂರು ಜನ ಮಾತ್ರ ಅಲ್ಲವೇ 🙂

    • ಇದಾವುದೋ ಶ್ರೀಹರ್ಷೀಯಕಲ್ಪನೆಯ ಹಾಗೆ ದುರ್ಬೋಧವಾಗಿ ತೋರಿದೆ ಸೋಮಾ!

  13. ಕುಲಜಾತರ್ ಮತಿಗೆಟ್ಟು ಸಾರ್ದಡೆ ತಮ೦, ಸಾರ್ದತ್ತು ತದ್ದಿಕ್ಕಿಗ೦
    ಕುಲಮೆಲ್ಲ೦, ಮಕರ೦ ಪ್ರವಾಹಸಹಿತ೦ ಧೀ೦ಕಿಟ್ಟು ತೀರ೦ಬುಗಲ್
    ಜಲಮೆಲ್ಲ೦ ತೆರೆಗೂಡಿ ಸಾರ್ವ ತೆರದಿ೦ದೊರ್ವೊರ್ವನಿ೦ದೀ ಪರಿ,
    ಪ್ರಲಯ೦ ಪೋಲ್ತುದು ದೌಷ್ಟ್ಯದಿ೦ದೆಳಸಿರಲ್ ವ೦ಶಾಳಿವೀಚೀಕುಲ೦

    ಕತ್ತಲೆದು೦ಬಿದ ತೀರದೆಡೆ ಮೊಸಳೆ ಗಮಿಸುತ್ತಿರುವುದು, ಅದರ ಜೊತೆ ನೀರೂ ಸೆಳೆದುದು, ಇದನ್ನು ಗಮನಿಸಿ… ಕುಲದಲ್ಲಿ ಒಬ್ಬನು ಹಾದಿಗೆಟ್ಟು ನಡೆದರೆ ಇಡೀ ಕುಲವೇ ದಾರಿತಪ್ಪೀತು. ಇನ್ನು ವ೦ಶದ ಎಲ್ಲರೂ ಅಲೆಗಳ ಗು೦ಪಿನ೦ತೆ ಕೆಟ್ಟದ್ದಕ್ಕೆಳಸಿದರೆ ಪ್ರಳಯೋಪಮವಾದೀತು.

    • ತುಂಬ ದೂರಾನ್ವಿತವಾಯಿತು. ಇದು ತೆಂಗಿನ ಮರಕ್ಕೆ ಹಸುವನ್ನು ಕಟ್ಟಿದ ಕಥೆಯಾಯಿತು:-) ನೀಲಕಂಠಾ!!

  14. ಜಲಭುವಿಗಳೊಳ್ ನೆಲೆಸುತುಂ
    ಹಲಕಾಲಂಗಳಿನೆಲಾ!ಮಕರರಾಯಂ ನೀಂ,
    ಸುಲಭದಿನಾಗಸಕು ನೆಗೆವ
    ಛಲಮಂ ತಳೆದು,ಕುಳಿತಿರ್ಪವೊಲ್ ಭಾಸಿಪೆಯೈ!

  15. “In the Gajendramoksha of yore, there was only one of us, and you appealed to Vishnu for help. To avenge the defeat of our ancestor, we have now arrived by the dozen – two each for each foot, trunk and tail of yours. Challenge us now, and let’s see how you will appeal for help!”
    ಸಾಂಗತ್ಯ|| “ಬಾರಯ್ಯ ಗಜರಾಜ, ಕಾಲು-ಸೊಂಡಿಲು-ಬಾಲ-
    ಕ್ಕಾರಾರು ಬಂದೀವಿ ಈಗ|
    ಅ(/ಯಾ)ರನ್ನದೆಂತು ನೀ ಕರೆವೆಯೊ ನೋಳ್ಪೆವು
    ಪಾರುಗಾಣಿಸೆ ನಿನ್ನನೀಗಳ್||

    • ಆಗ ಬ೦ದವನು ಆದಿತ್ಯರೂಪಿ ವಿಷ್ಣು. ಈಗಲೂ ನಿಮ್ಮ dozen ಮೊಸಳೆಗಳಿಗೆ ದ್ವಾದಶಾದಿತ್ಯರನ್ನು ಕರೆಸಿದರಾಯಿತು.

      • haha. Fitting reply.
        ಏಳೆ|| ‘ಕರೆಸಿದರಾಯಿತು’
        ಗರುಡವಾಹನರನ್ನೆ-
        ಲ್ಲರನೆನ್ನಲೇಕಯ್ಯ ನೀಲ||
        ಏಳೆ|| ಸರಸವಾಡಲುಮನಿತು
        ಸರಸೀರುಹದೊಡನೆ (ಸರಸ್ಸಿನಲ್ಲಿ ಹುಟ್ಟಿದ್ದು=ಕಮಲ, ಮೊಸಳೆ…)
        ಕರಿಯಪ್ಪೆ ನೀನೇನೆ ಆಗ!!

        ಏಳೆಯಲ್ಲಿ ಹಲವು ವಿಧಗಳುಂಟು: ವಿವಿವಿವಿವಿವಿಬ್ರ, ವಿವಿವಿವಿವಿಬ್ರವಿ, ವಿವಿವಿವಿವಿವಿವಿ. ಇವುಗಳು ಸಪ್ರಾಸವೂ ವಿಪ್ರಾಸವೂ ಇರಬಹುದು. ಇದನ್ನು ಗಮನಿಸಿದಾಗ, ಏಳೆ ಎಂಬ ಶಬ್ದವು ಸಂಸ್ಕೃತದ ಏಲಾ ಶಬ್ದದ ತದ್ಭವವೆಂದಲ್ಲದೆ ಬೇರೊಂದು ನಿರ್ವಚನವೂ ಸಾಧ್ಯ ಎನ್ನೋಣವೆ – ಏನೇ ಆಗಲಿ ಏಳೆಯಲ್ಲಿನ ಗಣಸಂಖ್ಯೆ ’ಏಳೆ(seven)’ ಎಂದು 😉

        • ನಿಮ್ಮ ಪದ್ಯವೂ ಕಲ್ಪನೆಯೂ ಚೆನ್ನಾಗಿವೆ ಹಾದಿರಂಪರೇ! ಏಕೆ ಸ್ವಲ್ಪ ತಡವಾಗಿ ಬಂದಿರಿ?

          • ಇನ್ನೇನು ನೀವು ಬಂದುಬಿಡುತ್ತೀರಿ ಎಂಬ ಭೀತಿಯಲ್ಲಿ ಈಗ ಕವನಿಸಿದೆ. “ಎಲ್ಲಿ ಹಾದಿರಂಪ ಕಾಣಿಸುತ್ತಿಲ್ಲವಲ್ಲ” ಎಂದು ನೀವು ಹೇಳುವಂತಾಗಲಿಲ್ಲವಲ್ಲ ಸಧ್ಯ!

    • ಚೆನ್ನಾಗಿದೆ ಪ್ರಸಾದು

    • chennaagide. ninnaneega anta nilsidre bhaashe consitency, antya praasa erdu bartittu.

      • ಅನ್ತ್ಯಪ್ರಾಸದ ಬಗೆಗೆ ಆಲೋಚನೆ ಬಂದಿತ್ತು – ಎರಡನೆಯ ಪಾದಾಂತ್ಯವನ್ನು ’…. ಬಂದಿರ್ಪೆವೀಗಳ್’ ಎಂದು ಮಾಡೋಣವೆಂದು. ಮಾಡಿಬಿಟ್ಟಿದ್ದರೆ ಚೆನ್ನಾಗಿತ್ತು. ನಿಮ್ಮಿಂದ ಒಂದು ಮಾತನ್ನು ಕೇಳುವುದು ತಪ್ಪುತ್ತಿತ್ತು 🙁 ಧನ್ಯವಾದಗಳು

  16. ತೆರೆಯ ರಭಸಕೆ ದಡಕೆ ಬ೦ದಪ್ಪಳಿಸಿ ಬಿರಿದು
    ಪರಿಪರಿಯ ವೇದನೆಯ ಪಡುತಿಹರು ಮೊರೆದು I
    ಕರೆದು ರೋದಿಸಿದರೂ ಮೂಢ ಮನುಜರ ಮಾತು
    ”ತೆರಳದಿರು ರಕ್ಷಣೆಗೆ ಮೊಸಳೆ ಕಣ್ಣೀರು ” II

    ದಡಕ್ಕೆ ಅಪ್ಪಳಿಸಿ ನೋವಿನಿಂದ, ಮೂಕವೇದನೆ ಅನುಭವಿಸುತ್ತಿರುವ ಇತರ ಮೊಸಳೆಗಳಿಗೆ ಎದುರು ಕಾಣುವ ಮೊಸಳೆ ರೋದಿಸಿದಾಗ ಮನುಜರು ”ಅದು ಮೊಸಳೆ ಕಣ್ಣೀರು ಹಾಕ್ತಾ ಇದೆ ” ಎಂದು ಮೂದಲಿಸಬಹುದು ಎನ್ನುವ ಸಾರ

    • ೧) ’ತೆರೆಯ ಭೋರ್ಗರೆತಕ್ಕೆ ದಡಕಪ್ಪಳಿಸಿ ಬಿರಿದು’ ಎಂದು ಸವರಿದರೆ ಗತಿಯು ಸುಧಾರಿಸುತ್ತದೆ.
      ೨) ಇಲ್ಲಿ ೨ direct speech ಇವೆ: ಮೊದಲನೆಯ ಮೊಸಳೆ ಹೇಳುವುದೊಂದು ಹಾಗೂ ಮನುಜರು ಹೇಳುವುದೊಂದು. ಇವನ್ನು ವಿವಿಕ್ತವಾಗಿ ಸ್ಪಷ್ಟವಾಗಿ ಏಕೆ ತೋರಿಸಲಾಗಲಿಲ್ಲವೆಂದರೆ, ನೀವು ವಿವರಣೆಯಲ್ಲಿ ಹೇಳಿರುವ ’ಎದುರು ಕಾಣುವ ಮೊಸಳೆ’ ಎಂಬುದು ಪದ್ಯದಲ್ಲಿ ಲುಪ್ತವಾಗಿರುವುದರಿಂದ. ಮೂರನೆಯ ಪಾದವನ್ನು ತಿದ್ದಲು ಪ್ರಯತ್ನಿಸಿ.

      • ಮೊದಲ ಸಾಲಿನಲ್ಲಿ ಗತಿ ಸುಭಗತೆಗೆ ಕೊರತೆಯಾಗಿರುವುದು ಎಲ್ಲಿ ಎಂದು ತಿಳಿಸುವಿರಾ ?
        ೩ನೆಯ ಪಾದವನ್ನು ಯಾಕಾಗಿ ತಿದ್ದ ಬೇಕೆಂಬುದು ಅರ್ಥವಾಗಿಲ್ಲ ….
        ಮೇಲಿನ ಪದ್ಯ , ಮುಖ ಎತ್ತಿಕೊಂಡಿರುವ ಮೊಸಳೆಯ ಸ್ವಗತ ವಿಲಾಪ ; ಅಲ್ಲಿರುವ ಇತರ ಮೊಸಳೆಗಳಿಗಾಗಿ . ಮನುಜರು ತಮ್ಮನ್ನು ಸಮಯ , ಸ೦ದರ್ಭ ಗಳೊಂದೂ ನೋಡದೆ ದೂಷಿಸುತ್ತಾರೆ ಎಂಬುದು ಅದರ ಕೊರಗು

    • ತು೦ಬ ಚೆನ್ನಾಗಿದೆ ಮೇಡಮ್. ವೇದನೆಯ ಪಡುತಿಹುದು… ಅಲ್ಲವೇ?

      • ಧನ್ಯವಾದಗಳು .
        ೨,೩ ಮೊಸಳೆಗಳು ಕಂಡಂತೆ ಭಾಸವಗುತ್ತದಲ್ಲಾ . ಮುಖ ಎತ್ತಿಕೊಂಡಿರುವ ಮೊಸಳೆ ಸ್ವಗತದಲ್ಲಿ ಇತರ ಮೊಸಳೆಗಳ ಕುರಿತಾಗಿ ಬಹುವಚನ ರೂಪದಲ್ಲಿ ಹೇಳಿದಂತೆ ಬರೆದಿದ್ದೇನೆ . ನಾವು(ಮನುಷ್ಯರು ) ಹೇಳುವುದಿದ್ದರೆ ನಪು೦ಸಕ ಲಿಂಗವನ್ನು ಬಳಸಬಹುದು ಅನ್ನಿಸುತ್ತದೆ . ಸರಿಯೋ ತಪ್ಪೋ ನನಗೆ ತಿಳಿಯದು

    • ಪದ್ಯದ ಕಲ್ಪನೆ ತುಂಬ ಚೆನ್ನಾಗಿದೆ. ಇದು ಸೊಗಸಾದ ಅನ್ಯೋಕ್ತಿ.

      • ಕಲ್ಪನೆಯನ್ನು ಮೆಚ್ಚಿ , ಅಲ೦ಕಾರವನ್ನೂ ತಿಳಿಸಿರುವುದಕ್ಕೆ ಧನ್ಯವಾದಗಳು ಸರ್ .

    • ಚೆನ್ನಾಗಿದೆ

  17. ಘಟಾನುಘಟಿಗಳೆಲ್ಲ ಬರೆದು ಕಲ್ಪನೆಗಳು ಖಾಲಿಯಾಗುತ್ತಿರುವಾಗ ನನ್ನ ಈ ವಿಭಿನ್ನಯತ್ನ:

    ಮಕರಾ! ಬಾಲಕಶಂಕರಂ ಜಲವಗಾಹಕ್ಕಿಂದು ಬರ್ಪಂ ಗಡೆಂ-
    ದಕಟಾ! ಬಾಯ್ದೆರೆದಿರ್ಪೆಯೇಂ? ವಿಕಲನಯ್ ನೀನ್! ಇಂದು ಸಂನ್ಯಾಸಕಾ-
    ಮುಕರಾರ್? ಕಾಮುಕಮಾತ್ರರಲ್ತೆ ಸುಳಿವರ್ ಸಂಸಾರಕೀಲಾಲದೊಳ್,
    ವಿಕಟಾಚಾರರ ಕಾಲ್ಗಳಂ ಪಿಡಿವೊಡಿನ್ನೇಂ ಪುಣ್ಯಮೋ? ಗಣ್ಯಮೋ?

    (ಜಲ+ವಗಾಹ = ನೀರಿನಲ್ಲಿ ಮೀಯಲು ಮುಳುಗುವುದು, ಕೀಲಾಲ = ನೀರು)
    ಅಂದಿನ ಬಾಲಶಂಕರನಂತೆ ಇಂದು ಸಂನ್ಯಾಸಕಾಮುಕರಿಲ್ಲ, ಇರುವರೆಲ್ಲ ಹೆಚ್ಚಾಗಿ ಬರಿಯ ಕಾಮುಕರಷ್ಟೇ; ಹೀಗಾಗಿ ಸುಮ್ಮನೆ ಪುಣ್ಯಪ್ರಾಪ್ತಿಭ್ರಾಂತಿಯಿಂದ ಅವರಿವರ ಕಾಲನ್ನು ಹಿಡಿಯಬಾರದೆಂದು ಮೊಸಳೆಯನ್ನು ಕುರಿತ ಅನ್ಯೋಕ್ತಿಯಿದು.

    • ಆಹಾ, ಘಟಾನುಘಟಿಗಳ ಪದ್ಯಗಳಿಗೆ ಮಕುಟಪ್ರಾಯವಾಗಿದೆ ಸರ್!

    • ೧) ಗಜೇಂದ್ರಮೋಕ್ಷವನ್ನೋ ಶಂಕರವಿಜಯವನ್ನೋ ಕುರಿತು ನಿರೂಪಕಪದ್ಯವೊಂದನ್ನು ರಚಿಸಿಬಿಡಬಹುದು. ಅದರಲ್ಲಿ ಹೀಗೆ ಅನ್ಯೋಕ್ತಿಯನ್ನು ಅಡಗಿಸಿರುವುದು ಬೋಧಪ್ರದ. ಧನ್ಯವಾದಗಳು.
      ೨) ಮೊಸಳೆಯು ಪ್ರಭಾವಿಯ ಕಾಲನ್ನು ಹಿಡಿಯುವುದು ಆತನ ಅನುಗ್ರಹವನ್ನು ಬೇಡುವುದಕ್ಕಲ್ಲ, ಅವನ ಇಡಿಯ ದೇಹವನ್ನು ಕ್ರಮಕ್ರಮವಾಗಿ ಕಬಳಿಸುವುದಕ್ಕೆ.
      ಆಟವೆಲದಿ|| ಇಲ್ಲಮಿಲ್ಲಂ, ಶಸ್ತಮಿದೆ ನಕ್ರಕಾರ್ಯಮದು
      ಜೊಲ್ಲ ಸುರಿಸದಿಹುದು ಭಿಕ್ಷೆಗಾಗಿ|
      ಹಲ್ಲನೂರಿ ಕಾಲಿನೊಳು ಮೊದಲು ನಂತರದೆ
      ಕೊಲ್ಲಲೆಳಸುವುದದು ಬೇಟೆಯನ್ನು||

    • ಬಹಳ ಚೆನ್ನಾದ ಹೊಸ ಕಲ್ಪನೆ ಕೊಟ್ಟಿರಿ ಧನ್ಯವಾದಗಳು ಸರ್

    • ತುಂಬಾ ಚೆನ್ನಾಗಿದೆ. ಧನ್ಯವಾದಗಳು.

      • ಎಲ್ಲರಿಗೂ ಧನ್ಯವಾದಗಳು.
        ಹಾದಿರಂಪರೇ! ನಿಮ್ಮ ವೈನೋದಿಕ ಆಕ್ಷೇಪಕ್ಕೆ ಸದಾ ಸ್ವಾಗತ.
        ಆದರೆ ಇದನ್ನು ಎಲ್ಲರಿಗೂ ಪ್ರಯೋಜನವಾಗಲೆಂದಷ್ಟೇ ಗಂಭೀರವಾಗಿ ಭಾವಿಸಿ ಕವಿಕಲ್ಪನೆ, ಕವಿಸೃಷ್ಟಿ, ಅಲಂಕಾರಸಂಯೋಜನೆ ಮುಂತಾದ ಕಾವ್ಯಮೀಮಾಂಸಾವಿಚಾರಗಳನ್ನಿಲ್ಲಿ ಪ್ರಸ್ತಾವಿಸುತ್ತಿದ್ದೇನೆ:

        ಮೊಸಳೆಯು ಯಾರದೇ/ಯಾವುದೇ ಕಾಲನ್ನು ಹಿಡಿಯುವುದು ನುಂಗಲಿಕ್ಕೇ ಎಂಬ ತಥ್ಯವು ಎಲ್ಲರಿಗೂ ಗೋಚರ. ಆದರೆ ಈ ಅನ್ಯೋಕ್ತಿಯ ರಚನೆಯಲ್ಲಿ ಅದು ಕೇವಲ ಭಕ್ತಿ-ಗೌರವಗಳಿಂದ ತನ್ನ ಬಲಿಯ ಕಾಲು ಹಿಡಿಯುವುದೆಂಬ (ಇಲ್ಲಿ ಕೂಡ “ಕಾಲು ಹಿಡಿಯುವುದೆಂಬ” ಮಾತಿನಲ್ಲಿರುವ ಶ್ಲೇಷವೇ ಈ ಪದ್ಯದ ಜೀವಾಳ. ಹಾಗಲ್ಲದೆ ನಮಸ್ಕಾರ ಮಾಡುವುದು, ವಂದಿಸುವುದು, ಪೊಡಮಡುವುದು ಮುಂತಾದ ಯಾವುದೇ ಇನ್ನಿತರಪದಗಳು ಈ ಉದ್ದೇಶವನ್ನು ಸಾಧಿಸಲಾರವು. ಹೀಗಾಗಿ ಇಲ್ಲಿ ಪದವಕ್ರತಾ ಅಥವಾ ಶಬ್ದಶಕ್ತಿಮೂಲಧ್ವನಿಯುಂಟು. ಇಂತಲ್ಲದೆ ಸುಮ್ಮನೆ ಯಾವಯಾವುದೋ ಹುಚ್ಚುಕಲ್ಪನೆಗಳನ್ನು ಮಾಡಿದರೆ ಅದು ಕವಿತೆಯಾಗದು. Obscurity and trivializing are not synonymous of suitability and keen observation) ಸಂಭಾವನೆ ಅಥವಾ ಅಧ್ಯಯವಸಾಯವು (fancying and exertion) ಕೇವಲ ಕವಿಗೆ ಮಾತ್ರ ಗೋಚರಿಸುವ ಕಲಾಸತ್ಯ. ಲೋಕದ ತಥ್ಯವನ್ನೇ ಹಿಡಿದು ಬಂದರೆ ಕಾವ್ಯ ಹುಟ್ಟದು, “ವಾರ್ತೆ”(ಆಲಂಕಾರಿಕರ ಪ್ರಕಾರ ವಾರ್ತೆ ಎಂದರೆ ರಸಶೂನ್ಯವಾದ ಮಾಹಿತಿ) ಜನಿಸುತ್ತದೆ. ಸಂಭಾವನೆ ಮತ್ತು ಅಧ್ಯವಸಾಯಗಳೇ ಕ್ರಮವಾಗಿ ಉತ್ಪ್ರೇಕ್ಷೆ ಮತ್ತು ಅತಿಶಯೋಕ್ತಿಗಳೆಂಬ ಪ್ರಸಿದ್ಧಾಲಂಕಾರಗಳ ಮೂಲಲಕ್ಷಣ. ಹೀಗಾಗಿಯೇ ಇವನ್ನು ನಮ್ಮ ಆಲಂಕಾರಿಕರು “ಕವಿಜೀವಿತಮ್” ಎಂದು ಆದರಿಸಿದ್ದಾರೆ.

        ಸಹಪದ್ಯಪಾನಿಗಳೆಲ್ಲ ಈ ಸೂಕ್ಷ್ಮವನ್ನು ತಮ್ಮ ತಮ್ಮಕಾವ್ಯಗಳ ರಚನೆ-ವಿಮರ್ಶನಗಳಲ್ಲಿ ಗಮನಿಸುವಂತಾಗಲಿ

    • ಸರ್,
      ನನ್ನ ಪ್ರತಿಕ್ರಿಯೆಯಲ್ಲಿ ಎರಡು ಅಂಶಗಳಿವೆ. ನನ್ನ ವೈನೋದಿಕವನ್ನು ಎರಡನೆಯದನ್ನಾಗಿ ತೋರಿಸಿದ್ದೇನೆ. ನಿಮ್ಮ ಪದ್ಯದ ಗಂಭೀರತ್ವವನ್ನು ಮೊದಲನೆಯದನ್ನಾಗಿ ತೋರಿಸಿದ್ದೇನೆ.
      ಅಲ್ಲದೆ, ದೃಷ್ಟಾಂತವನ್ನು ಬಳಸಿಕೊಳ್ಳುವಾಗ ನಮ್ಮ ನಿರೂಪಣೆಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಆಯ್ದುಕೊಳ್ಳುವುದು ಎಂಬುದಿದ್ದೇ ಇದೆ. ಹಾಗಾಗಿ, ನಿಮ್ಮ ಪದ್ಯವನ್ನು ಕುರಿತು ನನ್ನ ಚಕಾರವೇನೂ ಇಲ್ಲ, ನೀವೇ ಹೇಳಿರುವಂತೆ ವೈನೋದಿಕವನ್ನುಳಿದು.

  18. ಕಾರ್ತಿಕ ಮಾಸದಲ್ಲೇ ಮಕರಸಂಕ್ರಮಣ ?!

    ಮೂಸುದಿದುವೆಂತು ತಟದೊ-
    ಳ್ಗೀಸುತುವಿಂತುಭಯವಾಸಿ ತಾಂ ಕಾಣ್ ನಕ್ರಂ ।
    ಮಾಸಮಿದು ಕಾರ್ತಿಕಮು ಮೇಣ್
    ಭಾಸಮಿದುವೈ ಮಕರರಾಶಿಯೊಳ್ ಸಂಕ್ರಮಣಂ ।।

    ನಕ್ರ = ಮೊಸಳೆ / ಮೂಗಿನ ಬಗೆಗಿನ ಪದ್ಯ !!

    • ಉಷಾ ಮೇಡಮ್, ೪ ನೇ ಸಾಲಿನಲ್ಲಿ ಒ೦ದು ಮಾತ್ರೆ ಹೆಚ್ಚಿದೆ. ಭಾಸಮಿದೈ ಮಕರರಾಶಿ…. ಎ೦ದರೆ ಸರಿಯಾಗ್ತದೆ.

    • ಕಕರ-ಮಕರ ಆಗಿದೆ ಎನ್ನೋಣವೆ ನೀಲ?

    • ಪದ್ಯದ ಕಲ್ಪನೆ ಚೆನ್ನಾಗಿದೆ. ಆದರೆ ಭಾಷೆ, ಛಂದೋಗತಿಗಳಲ್ಲಿ ಸ್ವಲ್ಪ ಹಳಿ ತಪ್ಪಿದೆ.

    • ವಿನೋದವಾಗಿ:

      ದೇಕುದದೊ ಕಕಮಕರ ತೆರೆತೆರೆಯ ತೆರೆಮರೆಯೆ
      ತಾಕಲಾಡುದೆ ತೆವಳಿ ತೊರೆಯೆ ತೊರೆಯಂ ।
      ಸೋಕಿರಲ್ ಸುಳಿಗಾಳಿ ಸೀತುದದೊ ಮೊಸಳೆ ಮುಳಿ
      ತಾಕಿದುದೆ ಜೊಂಡಸುಳಿ ಮೂಗ ತುದಿಗಂ ?!!

      • ಬಿಡುಗಡೆಯ ಮಾರ್ಗ:
        ತಿಳಿದಿರ್ದೊಡೀ ಸೂಕ್ಷ್ಮ ಗಜರಾಜ-ಶಂಕರರಿ-
        ಗಿಳಿಯುತಿರ್ದರು ನೀರಿಗಲ್ಲೆ ಎಲ್ಲಿ|
        ಕಳೆಯವೋಲ್ ಬೆಳೆದಿರ್ದು ಜೊಂಡು ಮಕರಂಗಳಿಗೆ
        ಬುಳುಬುಳೆನ್ನುತೆ ಸೀನ ಚೋದಿಸುವವೋ||

  19. ನಿಕಟತೆವೊ೦ದಿ ನೀರಿನೊಡಲೊಳ್ ಸತತ೦, ನೆಲಮೆ೦ತು ಕಾ೦ಬುದೆ೦-
    ದಿಕೊ ಪೊರಬ೦ದು ನೋಡೆ ಬಹಳಚ್ಚರಿಯಿ೦, ಪ್ರತಿಬಿ೦ಬದ೦ತಿದೋ
    ಮಕರಮುಖಕ್ಕಮಾಯ್ತೆ ಮುಕುರ೦ ವಿಕಟಸ್ಪೃಹೆಯಿ೦ದಮೀ ಜಗ೦
    ಪ್ರಕಟಿತಲೋಭಮೋಹಮದಮತ್ಸರವರ್ಗವಿಕಾರದಿ೦ ಗಡಾ?!

    ನೀರ ಮೇಲಕ್ಕೆ ಬ೦ದು ನೋಡಿದರೆ ಮೊಸಳೆಗೆ ತನ್ನದೇ ಪ್ರತಿಬಿ೦ಬ ಕಾಣುತ್ತಿದೆ ಮೇಲ್ಗಡೆ. ಈ ಜಗತ್ತು ಅತ್ಯಾಶೆ, ಲೋಭ, ಮೋಹಾದಿಗಳಿ೦ದೊಡಗೂಡಿ ಮೊಸಳೆಯ ಮುಖಕ್ಕೆ ಕನ್ನಡಿಯ೦ತಾಯಿತೇ?!

    • ನೀಲಕಂಠರೇ! ನಮ್ಮೀ ಪದ್ಯಪಾನದಲ್ಲಿ ವೇದಾಂತಿಗಳ ಪ್ರವೇಶ ತೀರ ವಿರಳ. ನೀವು ಆ ಅನುಪಸ್ಥಿತಿಯನ್ನು ನಿಮ್ಮ ಪದ್ಯಗಳಲ್ಲೆಲ್ಲ ಬಲುಮಟ್ಟಿಗೆ, ಸಮರ್ಥವಾಗಿ ತುಂಬಿಕೊಡುತ್ತಿದ್ದೀರಿ! ಧನ್ಯವಾದಗಳು!!!
      ಈ ಬಗೆಗೆ ನಮ್ಮ ಗೆಳೆಯರಾದ ಜಿ ಎಸ್ ರಾಘವೇಂದ್ರ, ರಾಮಚಂದ್ರ, ಬಾಪಟ್, ಶ್ರೀಶ, ಕೊಪ್ಪಲತೋಟ, ಶಂಕರ್, ವಾಸುಕಿ ಮುಂತಾದವರೂ ಸಹಮತವನ್ನು ತೋರಿಯಾರೆಂದು ಭಾವಿಸುತ್ತೇನೆ.

    • ನನ್ನ ಹೆಸರನ್ನು ಸೂಚಿಸಿಲ್ಲವಾಗಿ, ಈರ್ಷ್ಯೆಯಿಂದ:
      ಮಕರರೂಪವ ಜರಿಯೆ ಜರಿದವೋಲೇ ಕೇಳು
      ವಿಕೃತಿಯಪ್ಪುದು ದೈವಸೃಷ್ಟಿಯೆಂದುಂ|
      ಸಕಲದೌಷ್ಟ್ಯಗಳಲ್ಲದೆಲೆ ನೃ-ಜಂತುವೊಳಂಗೆ
      ಸುಕೃತಶಿವಮಿಲ್ಲಮೇಂ -ಹಾದಿರಂಪ|| 😉

      • ನಿಮ್ಮ ಹೆಸರನ್ನು ಕೈಬಿಟ್ಟವರು ಗಣೇಶ ಸರ್. ಅದಕ್ಕಾಗಿ ನನ್ನ ಮೇಲೇಕೆ ವಾಗ್ಯುದ್ಧ?

        • hhahha. Yes, misplaced reaction. ಅದು ಹಾಗಿರಲಿ. ಪದ್ಯಕ್ಕೆ ಕಾಸು ಕೊಡಿ ಸರ್ 🙂

  20. ತುಂಬಾ ಚೆನ್ನಾಗಿ ಬರೆದಿರುವುದಲ್ವ ಸಂತೋಷ, ನನಗೇಕೆ ಆಗಲ್ಲ ಅಂತ, ಹಾಗೆ ಸುಮ್ಮನೆ ಪ್ರಯತ್ನಿಸಬಹುದಲ್ವ

    • “ಏಸು ದಿನ ತಪವಗೈದೇಸು ಬನ್ನವನಾ೦ತು
      ಕೌಶಿಕ೦ ಬ್ರಹ್ಮರ್ಷಿಪದಕರ್ಹನಾಗೆ”
      ಈಸು ಯತ್ನವ ಗೈಯೆ ಪದ್ಯರಚನಾಕ್ರಮವೆ
      ಭಾಸಿಪುದು ದಿಟಮಲ್ತೆ ಶಿವಶ೦ಕರಾರ್ಯ!

    • ಪಲ್ಲವ|| ‘ಅಲ್ವ’-‘ಅಲ್ವ’ಮೆನುತ್ತುಮೇಕೈ
      ನಿಲ್ವೆ ನಿಂತೆಡೆಯಲ್ಲೆ ‘ಶಂಕರ’
      ಬಿಲ್ವಪತ್ರವ ‘ಶಿವ’ನಿಗರ್ಪಿಸಿ
      ಚೆಲ್ವ ಪದ್ಯವ ರಚಿಸು ನೀಂ|
      ಶಿವಶಂಕರರೆ, ನಿತ್ಯವೂ ಘಳಿಗೆಯಷ್ಟು ಕಾಲವನ್ನು ಮೀಸಲಿಟ್ಟರೆ ಕೆಲವೇ ತಿಂಗಳುಗಳಲ್ಲಿ ಕವನಿಸಬಲ್ಲಿರಿ. ಈ ಮೊದಮೊದಲ ಕವನಗಳಲ್ಲಿ ಸಾಕಷ್ಟು ತಪ್ಪುಗಳಿರುತ್ತವೆ ಎಂಬುದು ನಮ್ಮೆಲ್ಲರ ನಿರಪವಾದಾನುಭವ. ಅಂತಹ ಪದ್ಯಗಳ ಮೇಲೆ ನಾವೆಲ್ಲ ಹಾರಿಬಿದ್ದು ಹೊಡೆದು-ಬಡಿದು (strike out and iron out respectively) ಮಾಡಿ ತಿದ್ದುತ್ತೇವೆ. ಆ ಮುಂದಿನ ಪದ್ಯಗಳು ಕ್ರಮಕ್ರಮವಾಗಿ ಸುಧಾರಿಸುತ್ತವೆ. ಸುಮಾರು ಒಂದು ವರ್ಷದಲ್ಲಿ ತಕ್ಕಮಟ್ಟಿಗೆ ಕವನಿಸುವಂತಾಗುವಿರಿ. ಆಮೇಲೆ ನೋಡಿ – ನಿಮಗೂ ಹಲ್ವ, ನಮಗೂ ಹಲ್ವ! ಕಲಿಕೆಯ ರೀತಿ ಇದೇ. ದಯವಿಟ್ಟು ಇಂದೇ ಆರಂಭಿಸಿ. ಈ ವ್ಯೋಮಪುಟದ ಶಿರೋಭಾಗದಲ್ಲಿರುವ Learn Prosodyಗೆ ಭೇಟಿನೀಡಿ. ಶುಭಾಶಯಗಳು.

Leave a Reply to ಭಾಲ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)