Dec 052015
 

ಮಂದಾಕ್ರಾಂತಾ, ಶಾಲಿನೀ, ಮಾಲಿನೀ, ಸ್ರಗ್ಧರಾ, ಮಹಾಸ್ರಗ್ಧರಾ, ಪಂಚಮಾತ್ರಾಚೌಪದೀ ಛಂದಸ್ಸುಗಳಿಗೆ ಹೊಂದುವ ಈ ಪಾದಾಂತ್ಯವನ್ನು ಅಳವಡಿಸಿ ಪದ್ಯಗಳನ್ನು ರಚಿಸಿರಿ

“ಮಿತ್ರನುಂ ಶತ್ರುವಲ್ತೇ”

  139 Responses to “ಪದ್ಯಸಪ್ತಾಹ ೧೮೦: ಪದ್ಯಪೂರಣ”

  1. ಲಯಗ್ರಾಹಿ|| ಮೂರೋ, ಕನಿಷ್ಟದ್ವಿವಾರಂ ಭುಜಕ್ಕಂ
    ಭೋರೆಂದುಮೇರುತ್ತುಮಾಯುಷ್ಯದೊಟ್ಟೊಳ್|
    ಗೋರಲ್ ಶನೈಶ್ಚೇಷ್ಟ ನಮ್-ನಿಮ್ಮ ಬಾೞಂ
    ದೂರಾಗಿ ಸನ್ಮಿತ್ರನುಂ ಶತ್ರುವಲ್ತೇ||

    • ದಯವಿಟ್ಟು ಅರ್ಥ ತಿಳಿಸಿ.

    • ವ್ಯಕ್ತಿಯೊಬ್ಬನ/ಳ ಜೀವಿತಾವಧಿಯಲ್ಲಿ ಎರಡು ಅಥವಾ ಗರಿಷ್ಟ ಮೂರು ಬಾರಿ ಶನಿಯು ಹೆಗಲೇರುತ್ತಾನೆ. ಅವನಿಂದಾಗಿ ಸನ್ಮಿತ್ರರೂ ದೂರಾಗುತ್ತಾರೆ.
      ಆನುಷಂಗಿಕವಾಗಿ: ಒಬ್ಬಳಿಗೆ ಶನಿಯು ಹೆಗಲೇರಿದ್ದಾನೆ. ಅವಳು ಯಾವತ್ತೂ ಅವಳ ಗಂಡನ ಹೆಗಲನ್ನೇರಿಯೇ ಇರುತ್ತಾಳೆ!
      ತ್ರಿಪದಿ|| ಒಬ್ಬಳ ಹೆಗಲೊಳು ಹಬ್ಬಗೈಯಲು ಶನಿಯು
      (Dance)ಗೊಬ್ಬನೋಡವಳ ಗಂಡನ! ಕುಂತಾಳೆ
      ಜಬ್ಬಿನಿಂದವನ ಹೆಗ್‍ಲ್‍ಮ್ಯಾಕೆ!!

  2. ನಳನಳಿಪ ಸರೋಜ೦ಬೋಲ್ವ ಚೆಲ್ವ೦ಗಮೈಯಲ್
    ಥಳಥಳಿಪ ಸುವರ್ಣಚ್ಛಾಯೆ ಚೆಲ್ಲಾಟವಾಡಲ್
    ಸೆಳೆಸೆಳೆದು ಮನ೦ ಮೇಣ್ ಮಣ್ಣ ಮೋಹಕ್ಕೆ ಬೀಳಲ್
    ಕೆಳೆತನದೊಲವೇನಯ್ ಮಿತ್ರನು೦ ಶತ್ರುವಲ್ತೇ೦

    ಕಮಲಾ೦ಗಿಯ೦ಗ೦ಗಳ ಮೋಹ, ಹೊನ್ನಿನಾಸೆ, ಮಣ್ಣಿನ ಮೇಲಣವಿಟ್ಟ ಮನಸ್ಸು, ಇವುಗಳ ದೆಸೆಯಿ೦ದ ಗೆಳೆತನ ಉಳಿಯುತ್ತದೋ? ಮಿತ್ರನೂ ಶತ್ರುವಾಗುತ್ತಾನೆ.

  3. ಕತ್ತಲಂ ತಡೆಯುತ್ತೆ ,ಸುತ್ತ ಬೆಳಕಂ ಚೆಲ್ಲು
    ತ್ತೆತ್ತಿ ಯೆಬ್ಬಿಸುತುಮಿಪ್ಪೊಡೆ ಲೋಕಮಂ,
    ಬತ್ತಿಬಾಡವೆ!ಜೋಡಿಗಳ್!ದಿಟಮವರ್ಗಂ ನಿ
    ಯತ್ತಿನೀ ಮಿತ್ರನುಂ ಶತ್ರುವಲ್ತೇ!

  4. ನಿದ್ರಾನಾರೀಕರಕಮಲದಾಲಿ೦ಗನ೦ ಸೌಖ್ಯಮೀಯಲ್
    ಕ್ಷುದ್ರ೦ ಕ್ಷೋಣೀವ್ಯವಹೃತಿಯಲೇ ಚಿತ್ತಕಾಯ೦ಗಳೆ೦ದು೦
    ಛಿದ್ರ೦ಗೊಳ್ವೀ ದಿನದ ಸಮಯ೦ ತಕ್ಕುದಲ್ಲೆ೦ಬ ಶಯ್ಯಾ-
    ಮುದ್ರಾಭದ್ರ೦ಗವರಿವರದೇ೦ ಮಿತ್ರನು೦ ಶತ್ರುವಲ್ತೇ೦

    ನಿದ್ರಾ೦ಗನೆಯ ತೋಳತೆಕ್ಕೆಯ ಸುಖದ ಮು೦ದೆ ಹಣ್ಣುಗಾಯಿ ನೀರುಗಾಯಿ ಮಾಡುವ ದಿನದ ಸಮಯದ ಈ ಜಗದ ಜ೦ಜಡ ಬೇಡವೆ೦ದು ನಿದ್ರಾಮುದ್ರೆಯ ಭದ್ರನಿಗೆ – ಅವರಿವರ ಮಾತೇಕೆ – ಆ ಸೂರ್ಯನೂ ಶತ್ರುವಾಗುತ್ತಾನೆ 🙂

  5. ಜಗಕೆಲ್ಲ೦ ಸೌರಭಶ್ರೀಕೃಪೆ ನಿಜತನುವಿ೦ದೆ೦ಬ ಮೈಯುರ್ಕು ಭೃ೦ಗಾ-
    ಳಿಗಳಲ್ಗೊ೦ಡಿರ್ದು, ಕಾ೦ಬೆ೦ ನಿಜಸಖನನೆನುತ್ತ೦ತು ಮೋಹಾ೦ಗಿ ತಾ೦ ಕಾ-
    ಲ್ದೆಗೆದು ಸ್ವಾವಾಸದಿ೦ದ೦ ನಡೆಯೆ, ಕುಜನತಾದೃಷ್ಟಿಭೃ೦ಗಾಳಿಯಾಟೋ-
    ಪಗಳ್ಗ೦ ನೊ೦ದಿರ್ದಳಿ೦ತೀರ್ವರಿಗೆ ಸಮಯದೊಳ್ ಮಿತ್ರನು೦ ಶತ್ರುವಲ್ತೇ೦

    ಏನೇನೋ ಸ್ವಲ್ಪ ಸುತ್ತುಬಳಸಿ ಶ್ಲೇಷೆಯನ್ನು ಉಪಯೋಗಿಸಿಕೊ೦ಡಿದ್ದೇನೆ. ಮು೦ಜಾನೆ ಪರಿಮಳದ ಹೆಮ್ಮೆಯಿ೦ದ ಅರಳುವ ಹೂವು ಭೃ೦ಗಾಳಿಯ ದಾಳಿಗೆ ನೊ೦ದು ಅರಳಲು ಕಾರಣನಾದ ಸೂರ್ಯನ ಮೇಲೆ ಕೋಪಿಸಿತು. ತನ್ನ ಗೆಳೆಯನನ್ನು ನೋಡಲು ಬೀದಿಗೆ ಬ೦ದ ಚೆಲುವಿ ಜನರ ಕುದೃಷ್ಟಿಯೆ೦ಬ ಭೃ೦ಗಾಳಿಗೆ ಸಿಲುಕಿ ಗೆಳೆಯನ ಮೇಲೆ ಕೋಪಿಸಿಕೊ೦ಡಳು. ಇವರಿಬ್ಬರಿಗೆ ಸಾ೦ದರ್ಭಿಕವಾಗಿ ಮಿತ್ರನೂ ಶತ್ರುವಾದ.

  6. ಎಲ್ಲರಿಗೆ ನಮಸ್ಕಾರ. ಪದ್ಯಪಾನದಲ್ಲಿ ಇದು ನನ್ನ ಮೊದಲ ಪ್ರಯತ್ನ.ನಾನಿನ್ನೂ ಬಹಳಷ್ಟು ಅಭ್ಯಾಸ ಮಾಡಬೇಕಾಗಿದೆ. ಆದರೆ ಸಧ್ಯದಲ್ಲಿ “ಚಾಪಲಾಯ ಪ್ರಚೋದಿತಃ”. ಚಪಲತೆಯಿಂದ ಕುರುಡನಾಗಿದ್ದರೂ ಆಶ್ಚರ್ಯವಿಲ್ಲ. ದಯಮಾಡಿ ತಪ್ಪುಗಳನ್ನು ತೋರಿಸಿದರೆ, ತಿದ್ದಿಕೊಳ್ಳುತ್ತೇನೆ.

    ಕಾವ್ಯಾಸಕ್ತಂ ಸವಿಪದಗಳಿಂ ಬ್ರಹ್ಮಕಾಲಂಗಳಲ್ಲಿ
    ಶ್ರವ್ಯಾಭ್ಯಾಸಂ ಶ್ರವಣಮನನಂಗೈದು ಸಂತೃಪ್ತನಾಗೆ
    ದಿವ್ಯಾಭಾಸಂ ಬಲುಸುಲಭದಿಂಗೈದು ಕರ್ತವ್ಯ ತೋರ್ವ
    ಕಾವ್ಯದ್ವೇಷೀ ಕಠಿಣಹೃದಯೀ ಮಿತ್ರನುಂ ಶತ್ರುಮಲ್ತೇ

    • ಪದ್ಯಪಾನಕ್ಕೆ ಸ್ವಾಗತ. ಚೆನ್ನಾಗಿಯೇ ಬರೆದಿದ್ದೀರಿ. ಆದರೆ ಕೆಲವು ತಿದ್ದುಗೆಗಳು ಬೇಕು. ಸವಿಪದ, ಬಲುಸುಲಭ ಇವು ಅರಿಸಮಾಸವಾದ್ದರಿ೦ದ ವರ್ಜ್ಯ. ಕಾವ್ಯದ್ವೇಷೀ, ಕಠಿಣಹೃದಯೀ ಎ೦ದೆಲ್ಲ ಸ್ವತ೦ತ್ರ ಪದಗಳನ್ನು ಹೀಗೆ ಕನ್ನಡದಲ್ಲಿ ದೀರ್ಘಾ೦ತವಾಗಿಡುವುದಿಲ್ಲ. ಅದು ಸ೦ಸ್ಕೃತದಲ್ಲಿ ಮಾತ್ರ. ಕರ್ತವ್ಯಮ೦ ತೋರ್ವ ಎ೦ಬುದು ಶುದ್ಧ ವ್ಯಾಕರಣ. ಎಲ್ಲ ಸಾಲುಗಳ ಕೊನೆಗೆ ಗುರು ಬ೦ದಿಲ್ಲ.
      ಅರ್ಥವನ್ನೂ ಸ್ಪಷ್ಟಪಡಿಸಿ.

      • ನೀಲಕಂಠರ ವಿಮರ್ಶೆಯ ವ್ಯಾಪ್ತಿಯು ತಬ್ಬಿಬ್ಬುಗೊಳಿಸುವಂಥದು – ’ಚೆನ್ನಾಗಿಯೇ ಬರೆದಿದ್ದೀರಿ’ ಇಂದ ’ಅರ್ಥವನ್ನೂ ಸ್ಪಷ್ಟಪಡಿಸಿ’ ಎಂಬವರೆಗೆ!

        • ಪ್ರಸಾದರೆ, ಆಶುಕವಿತಾಗೋಷ್ಠಿಯಲ್ಲಿ ಒಮ್ಮೆ ನನ್ನದೊ೦ದು ಪದ್ಯವನ್ನು ಕೇಳಿ ಗಣೇಶ ಸರ್ ಕೂಡ ಹೀಗೆಯೇ ಅ೦ದಿದ್ದರು, ಪದ್ಯ ಚೆನ್ನಾಗಿದೆ, ತಾತ್ಪರ್ಯ ತಿಳಿಸು ಅ೦ತ 🙂

          • ಅವರ ವಿಮರ್ಶಾವ್ಯಾಪ್ತಿಯಂತೂ ಸರ್ವಙ್ಕಷವಾದದ್ದು. ಅಂದು ಇತರ ಆಶುಕವಿಗಳ ಪ್ರತಿಕ್ರಿಯೆ ಏನಿತ್ತೆಂದು ಹೇಳದೆ ಉಳಿದಿರಲ್ಲ!

    • ನೀಲಕಂಠರೆ, ಬ್ರಾಹ್ಮೀಮುಹೂರ್ತದಲ್ಲಿ ಅಧ್ಯಯನರತನಾಗುವವನು, ಬ್ರಾಹ್ಮೀಮುಹೂರ್ತವನ್ನು ಅಂತ್ಯಗೊಳಿಸುವ ಸೂರ್ಯೋದಯವನ್ನು (ತನ್ನ ನಿತ್ಯದ ಅಧ್ಯಯನವನ್ನು ಕುಂಠಿತಗೊಳಿಸುತ್ತಿರುವುದಕ್ಕಾಗಿ) ಹಳಿಯುವುದು ಈ ಪದ್ಯದ ಭಾವವಿರಬಹುದು. ಇದು ಸರಿಯೆಂದಾದಲ್ಲಿ ನನ್ನ ಸವರಣೆ:
      ಕಾವ್ಯಾಸಕ್ತಂ ಅಜಸಮಯದೊಳ್ ಶ್ರದ್ಧೆಯಿಂ ಸಕ್ತಿಯಿಂ ಮೇಣ್
      ಕಾವ್ಯಂ ಮೇಣ್ ಶಾಸ್ತ್ರಗಳನೆನಿತೋ ತೃಪ್ತಿಯಿಂ ಚಿಂತಿಸಿರ್ಪಂ|
      ದಿವ್ಯಾಭಾಸಂ ಬಹುಸುಲಭಮೈ, ಏಳ್ವುದುಂ-ಬೀಳ್ವುದಂತೇ
      ಕಾವ್ಯದ್ವೇಷಂ, ಕಠಿಣಹೃದಮೇಂ! ಮಿತ್ರನುಂ ಶತ್ರುವಲ್ತೇ||

      ಗುಸಂ,
      ನೀಲಕಂಠರು ಹೇಳಿರುವುದಲ್ಲದೆ ಇನ್ನೊಂದು ತೊಡಕಿದೆ. ’ದಿವ್ಯಾಭಾಸಂ/ವು ಗೈದು’ ತಪ್ಪು. ’ದಿವ್ಯಾಭಾಸಮಂ/ವನ್ನು ಗೈದು’ ಎಂದಾಗಬೇಕು.

    • ನೀಲಕಂಠರೇ, ಧನ್ಯವಾದಗಳು. prasAdu-ಅವರ ಊಹೆ ಸರಿಯಗಿದೆ. ಮುಂದೆ ಈ ತೊಡಕುಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸುತ್ತೇನೆ.

      prasAdu-ಅವರೇ, ಧನ್ಯವಾದಗಳು 🙂

      • ’ಈ ತೊಡಕುಗಳನ್ನು ನಿವಾರಿಸಿಕೊಳ್ಳಲು’, ನೇಪಥ್ಯಕ್ಕೆ ಸರಿಯದೆ ರಂಗದ ಮೇಲಿದ್ದುಕೊಂಡು ಪ್ರತಿವಾರವೂ ಒಂದೆರಡಾದರೂ ಪದ್ಯರಚನೆಯಲ್ಲಿ ತೊಡಗುವ ಮೂರುತಿಂಗಳುಗಳ crash course ನಿಮಗೆ ಸಾಕೆಂದು ನನ್ನ ಮತ. ಪದ್ಯಪಾನಕ್ಕೆ ಸ್ವಾಗತ.

        • ಖಂಡಿತವಾಗಿಯೂ. ಸಾಧ್ಯವಾದಷ್ಟೂ ಪ್ರಯತ್ನ ಮಾಡ್ತೇನೆ. ಧನ್ಯವಾದಗಳು.

          • ಗುಸಂ ಎಂದರೆ ಏನು ?! ದಯಮಾಡಿ ನಿಮ್ಮ ಬಗ್ಗೆ ತಿಳಿಸುವಿರಾ ? 🙂

          • ಗಂಡೋ ಹೆಣ್ಣೋ, ಮೊದಲು ಅದನ್ನು ಹೇಳಲಿ ಅವರು. ’ಏನು’ ಎಂಬ ನಪುಂಸಕವಾಚಕವನ್ನೇಕೆ ಬಳಸಿದ್ದೀರಿ?

          • ನಮಸ್ಕಾರ ಮೇಡಂ. “ಗುಸಂ” ಎಂದರೆ ಪದ್ಯಪಾನತಾಣದಲ್ಲಿ ನನ್ನ ಗುರುತು ಅಷ್ಟೇ! 🙂 ಸಂಸ್ಕೃತ-ಕನ್ನಡ ಕಾವ್ಯಗಳಲ್ಲಿ, ಸಾಹಿತ್ಯದಲ್ಲಿ ಆಸಕ್ತಿಯಿದೆ. ಕಳೆದ ಎರಡು ವರ್ಷಗಳಿಂದ ಛಂದೋಬದ್ಧಪದ್ಯರಚನೆಯ ಅಭ್ಯಾಸದಲ್ಲಿ ತೊಡಗಿದ್ದೀನಿ. ಇದಕ್ಕಾಗಿ ಹೆಚ್ಚು ಸಮಯ ಮೀಸಲಿಡುವ ಪ್ರಯತ್ನವನ್ನೂ ಮಾಡ್ತಾ ಇದ್ದೀನಿ.

            prasAdu-ಅವರೇ, ನಿಮ್ಮ ಪ್ರಶ್ನೆಗೆ ಉತ್ತರ ನನ್ನ ಮೊತ್ತಮೊದಲ commentನಲ್ಲೇ ಉಂಟಲ್ಲ! 🙂

          • ಪ್ರಸಾದರೆ,”ಅರ್ಥವೇನು ?!” ಎಂಬರ್ಥದಲ್ಲಿ “ಏನು ?! ” ಎಂದು ಬರೆದೆ.
            ಗುಸಂ ಅವರೆ, ಧನ್ಯವಾದಗಳು. ನಿಮ್ಮ ಅಭ್ಯಾಸವು ಮುಂದುವರಿಯಲಿ. ಶುಭಹಾರೈಕೆಗಳು.

          • ರಸಾನ೦ದಸ್ವರೂಪವಾದ ನಿರಪೇಕ್ಷಬ್ರಹ್ಮವೂ ನಪು೦ಸಕಲಿ೦ಗವಾದ್ದರಿ೦ದ ಅದರ ಪ್ರತಿಪಾದಕನಾದ ಕವಿಯೂ ಒ೦ದರ್ಥದಲ್ಲಿ ಅದೇ ಆಗಬೇಕು. ಶಕು೦ತಲಾ ಮೇಡಮ್ ಅದೇ ಅರ್ಥದಲ್ಲಿ ಕೇಳಿರಬೇಕು 🙂

          • ೧) ನಿರಪೇಕ್ಷವೂ ನಪುಂಸಕವೂ ಆದದ್ದಕ್ಕೆ ರಸವೇಕೆ ಬೇಕೊ ಕಾಣೆ!
            ೨) ಯಾವತ್ತು ಮಾಡಿದಿರಿ ಪಕ್ಷಾಂತರ?

    • ಗುಸಂ ಸ್ವಾಗತ, ಪದ್ಯಪಾನದಲ್ಲಿ ಪ್ರತೀ ಸಪ್ತಾಹ ಪಾಲ್ಗೊಳ್ಳಿರಿ

    • ನಿಮ್ಮ ಕಾವ್ಯಾಸಕ್ತ…. ಪ್ರಥಮ ಪದ್ಯಕ್ಕೆ ಅಭಿನಂದನೆಗಳು. ಪದ್ಯಪಾನಕೆ ಸ್ವಾಗತ. ತಮ್ಮ ಆಗಮನ ಪದ್ಯಪಾನದಲ್ಲಿ ಗುಸಂ (= ಗುಣಸಂಧಿ)ಕಾರಕ ವಾಗುದೆಂದು ಆಶಿಸುತ್ತೇನೆ. ತಮ್ಮ ಪರಿಚಯವಿನ್ನೂ ಗುಸಂ (ಗುರು ಸಂಕೇತ ?!) ಆಗೇ ಉಳಿಯಿತಲ್ಲ !!

  7. ತಳೆದಿರೆ ಸಖಭಾವಂ ಕರ್ಣನೊಳ್ ಕೌರವಂ ತಾಂ,
    ಕಲಹದೊಳೆದುರಾಗಲ್,ಹೋರಿದರ್ ಪಾಂಡುಪುತ್ರರ್
    ಕೊಲುತುಮವನನಂತುಂ!ಕೌರವಂಕೈಯನೀದುಂ
    ಕಳೆಯಲವನನಿಂತುಂ,ಮಿತ್ರನುಂ ಶತ್ರುವಲ್ತೇ!

    • ಮೇಡಮ್, ಪೋರಿದರ್ ಆಗಬೇಕು. ನ೦ದ ಸರಿಯೇ? ನ೦ದನ ಆಗಬೇಕಲ್ಲ. ಇಲ್ಲಿ ಪಾ೦ಡುಪುತ್ರರ್ ಎನ್ನಬಹುದು. ಬಳಿಯ ತಿಳಿಮೆ ಅ೦ದರೇನು? ತಿಳಿಮೆಯನು೦ ಆಗಬೇಕು. ಸಾಲ ಕೊನೆಯಲ್ಲೊ೦ದು ಅಕ್ಷರ ಕಡಿಮೆಯಾಗಿದೆ.
      ಇಷ್ಟಕ್ಕೂ ಪಾ೦ಡವರಿಗೆ ಆತ ತಮ್ಮ ಬ೦ಧು ಎ೦ಬುದು ತಿಳಿದದ್ದು ಕರ್ಣ ಸತ್ತಮೇಲೆಯೇ.

      • ಧನ್ಯವಾದ:-) ತಪ್ಪುಗಳನ್ನು ತೀಡಿ ಮತ್ತೆ ಬರೆದಿರುವೆ.

  8. ಪಾತ್ರನೇ೦ ಗೌರವಕೆ ಮಾವನೇ೦ ಮದ್ರಪ೦
    ಸತ್ರಾಣನೈತ೦ದು ಖಳರೊಳಾದ೦
    ಸೂತ್ರಮಿದು ಯುದ್ಧೋನ್ಮುಖರ್ಕಳ್ಗೆ ನಿಚ್ಚಮು೦
    ಶತ್ರುವಿನ ಮಿತ್ರನು೦ ಶತ್ರುವಲ್ತೇ೦

    ಮಾವನಾದ ಶಲ್ಯ ಕೌರವರನ್ನು ಕೂಡಿದಾಗ ಭೀಮನೋ, ಕೃಷ್ಣನೋ ಯುಧಿಷ್ಠಿರನಿಗೆ ಹೇಳಿರಬಹುದಾದ ಮಾತು 🙂

  9. Synonyms!
    ಉರಗಮೆನ್ನಲದು ಪಾವ್, ಕತ್ತಿಯೇ ಕರವಾಲ,
    ಗರುಡಮೇ ಹದ್ದು, ಗುರಿಯದುವೆ ಲಕ್ಷ್ಯಂ|
    ಗಿರಿಜೆಯುಂ ಪಾರ್ವತಿಯು, ತುರಗಮೇ ಹಯಮಿನ್ನು,
    ನಿರುಕಿಸೆ ಕುಮಿತ್ರನುಂ ಶತ್ರುವಲ್ತೇ||

  10. It is inauspicious for the Sun to occupy 7th house in a kuNDali.
    ಗ್ರಹಗತಿಯನೇನೆಂಬೆ! ಶನಿಯೊರ್ವನೇಂ ಕ್ರೂರ?
    ಬಹುಶಠಗ್ರಹವಿಹವು ಕುಂಡಲಿಯವೈ|
    ತುಹಿನವಿದ್ರಾವಕನು (sun) ಸರಿಯಲೇಳನೆ ಮನೆಗ-
    ಮಹಹ! ಜಾಮಿತ್ರನುಂ (Occupant of 7th house) ಶತ್ರುವಲ್ತೇ||

  11. ತಾ ನಡೆವ ಬಟ್ಟೆಯೇ ,ಸರಿಯೆಂದು ಬಗೆದು,ಗುಣ
    ಗಾನಮಂ ಕೇಳಲ್ಕೆ ಬಯಸುವವಗೆ,
    ಸಾನುರಾಗದೆ ವಿಹಿತ ಕಟುನುಡಿಗಳಂ ಪೇಳ್ವ
    ಮಾನಿಷ್ಠ ಮಿತ್ರನುಂ ಶತ್ರುವಲ್ತೇ?

  12. Rama, his family and Sugreeva’s team members are all Ravana’s foes:
    ರಾಮ, ಸೀತಾದೇವಿ, ವಾಯುಪುತ್ರನು, ನೀಲ
    ನಾಮಿ ಜಾಂಬವ, ನಳಂ ಮೇಣಂಗದನ್|
    ಸಾಮಿಂದೆ ಶರಭ, ದ್ವಿವಿದನು ರಾವಣಗೆ ನಿ-
    ಸ್ಸೀಮ ಸೌಮಿತ್ರನುಂ (ಲಕ್ಷ್ಮಣ) ಶತ್ರುವಲ್ತೇ||

  13. ಕುಡುವಾಗಳ್ ಕೊಟ್ಟೆನ೦ಬೆಚ್ಚರಮೊ ಮರುಕಮೋ ಕೇಳಿ ಕೊಳ್ವಲ್ಲಿ ದೈನ್ಯ೦-
    ಬಡಲೋ ಮೇಣ್ ಮಾತಿನಿ೦ದ೦ ಮನದ ಹದನಮೋ ಕೃತ್ಯಮೋ ಭಿನ್ನಮಾಗಲ್
    ಜಡಿಯೆ ಸ್ವಾರ್ಥ೦ ಮನಕ್ಕ೦ ತಡೆದದನೆ ನಿಲಲ್ಕಾಪುದೇ ಸ್ನೇಹಮಿ೦ತು೦
    ಬಡವಾದತ್ತಲ್ತೆ ತೋರಾಣಿಕೆಯ ಕೆಳೆಯದೇ೦ ಮಿತ್ರನು೦ ಶತ್ರುವಲ್ತೇ೦

    • Very subtle and fine

    • ನಿಮ್ಮ ಪೂರಣಗಳೆಲ್ಲ ತುಂಬ ವೃತ್ತವೈವಿಧ್ಯ ಮತ್ತು ಪ್ರೌಢಪದಪದ್ಧತಿಯಿಂದ ಸೊಗಸಾಗಿವೆ. ಆದರೆ ಅರ್ಥದಲ್ಲಿ ಅಂಥ ವೈಚಿತ್ರ್ಯವೆದ್ದು ತೋರುತ್ತಿಲ್ಲ. ದಯಮಾಡಿ ಅತ್ತಲೂ ಗಮನವಿಡಿರಿ.

  14. ಬರಗಾಲದೊಳ್ ಬಿಸಿಲ ತಾಪಮಂ ಪೆರ್ಚಿಸುತೆ
    ಧರೆಯೆ ಸುಡುವವೊಲಿರ್ಪುದಿನನ ಬಲವು|
    ವರುಣನಂ ಕಾಣದೆಯೆ ತೊಳಲುತಿಹ ರೈತರನು
    ಕರುಣಿಸದ ಮಿತ್ರನುಂ ಶತ್ರುವಲ್ತೇ|

    • ಎಂಟೆದೆಯ ಭಂಟನಾದೊಡಮಿದುವೆ ಮಾತ ನೀಂ (’ವರುಣನಂ ಕಾಣದೆಯೆ’)
      ಕೌಂಟಿಯೊಳಗೀಗ ಪೇಳ್ ಮದರಾಸಿನೊಳ್| (The Madras county of British times)
      ಕಂಟಕಂ ಬಂದನಿದೊ ಅಟ್ಟಿರಾಚೆಗೆನುತ್ತೆ
      ಸೊಂಟಮುರಿದೊಡನೆ ಹಿಮ್ಮೆಟ್ಟಿಸುವರೈ|| 🙂

    • ಚೆನ್ನಾಗಿದೆ ಚೀದಿ

  15. ಎದೆಯಗುಡಿಯೊಳೇ ತಾಂ ವಾಸವಂ ಹೂಳ್ದು,ಮೇಣಾ
    ಹದಿಯಮನಸಿನಲ್ಲೂ ಪ್ರೇಮಮಂ ಬಿತ್ತುತಿರ್ಪಂ!
    ಕದಿದು ಸಮಯಮೆಲ್ಲಂ,ತನ್ನ ಪಾಡಲ್ಕೆನುತ್ತುಂ,
    ನಿದಿರೆಯನೆಳೆಕೊಂಬೀ ಮಿತ್ರನುಂ ಶತ್ರುವಲ್ತೇ!

  16. ಪಾದರಂ-ಗಜರು-ಗಾವಳಿ-ಮುಳಿಸು-ತೋಹು ಮೇಣ್
    ವಾದ-ಚೌರ್ಯಂ ಮಗುಳೆ ಕಲಹಗೈವ|
    ಖೈದಿಗಳ್ ಲಂಚಕೋರರುಮಂತಕರ್ಗಳಿ-
    ತ್ಯಾದಿ ಕ್ರಿಮಿತ್ರನುಂ ಶತ್ರುವಲ್ತೇ||
    (ಕ್ರಿಮಿ+ತ್ರ = ಕ್ರಿಮೀನ್ ತ್ರಾಯತೇ ಇತಿ)

    • ಪ್ರಸಾದು, ನಿಮ್ಮ ಮೊದಲ ಸಾಡೆಸಾತಿಯ ಪದ್ಯದಿಂದ ಮೊದಲ್ಗೊಂಡು ಕುಮಿತ್ರ ಎಂಭ ಪರ್ಯಾಯಪದಚಮತ್ಕಾರರೂಪದ ಪದ್ಯವೂ ಸೇರಿದಂತೆ ಇದೀಗ ಈ ಪದ್ಯವೂ ಕಲ್ಪನೆಯ ದೃಷ್ಟಿಯಿಂದ ತುಂಬ ಸೊಗಸಾಗಿವೆ; ಅನನ್ಯವೂ ಅಗಿವೆ. ಸ್ವಲ್ಪ ಅರಿಸಮಾಸ ಹಾಗೂ ವ್ಯಾಕರಣದ ಹದಗಳನ್ನು ಪಾಲಿಸಿದರೆ ಸಾಕು, ಇವೆಲ್ಲ ತುಂಬ ಚೆಲುವಾದ ಪೂರಣಗಳಾಗುತ್ತವೆ.
      ಕೆಲವು ತಿದ್ದಿದ ಪದಗಳು
      ಉದಾ: ಗಿರಿಜೆಯಂ

      • ಧನ್ಯವಾದಗಳು. ಭಾಷಾಪರಿಷ್ಕಾರದೃಷ್ಟಿಯಿಂದ ಮತ್ತೆ ಪರಿಶೀಲಿಸುತ್ತೇನೆ. ’ಗಿರಿಜೆಯಂ’ ಸರಿಪಡಿಸಿದ್ದೇನೆ.

    • ಪ್ರಸಾದು, ಚೆನ್ನಾಗಿ ಬರ್ತಾಯಿದೆ ನಿಮ್ಮ ಪೂರಣಗಳ ಮಹಾಪುರ :), ಇನ್ನು ಮೂರು ದಿವಸ ಉಂಟು, ಮುಂದುವರಿಯಲಿ…

      • No more Soma. I have used all possible keelaka-s (san-, ku-, jA-, sau-, kri-). Only arthaccala compositions are warranted now, and I am unable to think of an exemplary one due to paucity in my knowledge of purANa, kAvya and itihaAsa.

  17. ಬಳೆತನ್ನ ಕೆಳೆಯ ಮಳೆಯಾಗಮನಕಾಯ್ವಂದು
    ಕೆಳೆಯನಾ ಭೋರ್ಗರೆವದಾಗಮನವೇ
    ನಳನಳಿಪ ಬೆಳೆಯೆಲ್ಲ ನಾಶವಾಗುತಲಿರಲು
    ಬೆಳೆಗೆನಿಸೆ ಮಿತ್ರನುಂ ಶತ್ರುವಲ್ತೇ

    • ಆಹಾ, ಬೆಳೆಗೆನಿಸೆ ಮಿತ್ರನು೦ ಶತ್ರುವಲ್ತೇ ಚೆನ್ನಾಗಿದೆ ಅ೦ಕಿತಾ. ಆ ಉತ್ಕಟತೆ ಚೆನ್ನಾಗಿ ಮೂಡಿದೆ. ಆದರೆ ಕೆಲವು ಪದವಿ೦ಗಡಣೆ ಸರಿಯಾಗಿ ಗೊತ್ತಾಗಲಿಲ್ಲ. ತನ್ನ ಗೆಳೆಯನಾದ ಮಳೆಯ ಬರವಿಗಾಗಿ ಬೆಳೆ ಕಾಯುತ್ತಿರಲು, ಭೋರ್ಗರೆದು ಬ೦ದು ಅದು ನಾಶವಾಗಿ ಬೆಳಗೂ ಶತ್ರುವಿನ೦ತೆ ಅನ್ನಿಸಿತು.. ಎ೦ದಲ್ಲವೇ ಅರ್ಥ? ಆಗಮನಕಾಯ್ವ೦ದು ಸ೦ಧಿ ಬಿಡಿಸಿದರೆ ಆಗಮನಕೆ ಆಯ್ವ೦ದು ಆಗುತ್ತದೆ. ಮಳೆ ಬರ್ಪುದನೆ ಕಾಯ್ವ೦ದು ಎ೦ದು ತಿದ್ದಬಹುದಲ್ಲ. ಎರಡನೇ ಸಾಲು ಅಷ್ಟು ಹಿತವಾಗಿ ಅರ್ಥ ಕೊಡುತ್ತಿಲ್ಲ. ಕೆಳೆಯನಾಗಳೆ ಭೋರ್ಗರೆದು ಬರಲ್ಕೆ ಎನ್ನಬಹುದೇ?

      • ನಮಸ್ಕಾರ ಸರ್, ನನ್ನ ಕಲ್ಪನೆಯನ್ನು ತಾವು ಸರಿಯಾಗಿ ಅರ್ಥೈಸಿದ್ದೀರಿ. ಧನ್ಯವಾದ.
        ಸವರಿಸಿದ್ದೇನೆ. ಸರಿಯಾಯಿತೇ?

        ಬೆಳೆತನ್ನ ಕೆಳೆಯ ಮಳೆಬರ್ಪುದನೆ ಕಾಯ್ವಂದು
        ಕೆಳೆಯನಾಗಳೆ ಭೋರ್ಗರೆದು ಬರಲ್ಕೆ
        ನಳನಳಿಪ ಬೆಳೆಯೆಲ್ಲ ನಾಶವಾಗುತಲಿರಲು
        ಬೆಳೆಗೆನಿಸೆ ಮಿತ್ರನುಂ ಶತ್ರುವಲ್ತೇ

    • ಅಲ್ಲದೆ, ಮಳೆಗೆ ಕಾರಕವು ಸೂರ್ಯವಾದರೂ, ಪ್ರಸ್ತುತದಲ್ಲಿ ಬೆಳೆಯು ಮಳೆಯನ್ನು ನಿಂದಿಸಬೇಕೇ ಹೊರತು ಸೂರ್ಯವನ್ನಲ್ಲ; ವಸ್ತುತಃ ಅತಿವೃಷ್ಟಿಯಿಂದ ತ್ರಸ್ತವಾದ ಬೆಳೆಗೆ ಈಗ ಬೇಕಾಗಿರುವುದು ಸೂರ್ಯವೇ. ಮೋಡಗಳನ್ನು ದ್ರವಿಸುವ ಬದಲು ಬೆಳೆಯನ್ನು ಸುಡುತ್ತಿರುವ ಮಿತ್ರನುಂ ಶತ್ರುವಲ್ತೇ ಎಂದು ಪುನಾರಚಿಸುವುದೊಳಿತು. ಈಗಾಗಲೇ ಸಂ.14ರಲ್ಲಿ ಚೀದಿ ಈ ವಸ್ತುವನ್ನು ಕವನಿಸಿದ್ದಾರಾಗಿ, ವಿಭಿನ್ನವಾಗಿ ಕಲ್ಪಿಸಬೇಕು. Give it a try.
      (ಬಳೆಯ ಕೆಳೆಯ ಮಳೆ ಹೇಗೆ? ಬಳೆಯ ಕೆಳೆಯ ಕಾಲ್ಗೆಜ್ಜೆಯಲ್ಲವೆ? 😉 )

      • ಉಮ್ಮ್, ರೈತನಿಗೆ ಬೆಳಗಾಗುವುದೇ ಸ೦ಕಟವಾಗುತ್ತದೆ ಎ೦ದುಕೊಳ್ಳಬಹುದಲ್ಲ.

      • ಬಳೆಯದೆನ್ನುತ ತಪ್ಪ ಬರೆದಿರೆ
        ಇಳೆಗೆ ಹರಡುತ ಮಾನ ತೆಗೆವುದೆ?
        ಕೆಳೆಯ ಕಲಹಕೆ ಸಿದ್ಧರಾಗಿಯೆ ನೀವು ನಿಂತಿಹಿರಿ
        ಹಳೆಯ ಹುಲಿಗಳ ಪದ್ಯಪಾನದಿ
        ಎಳೆಯ ಹುಲಿಯೇ ಆಗ ಬಯಸುವೆ
        ಬೆಳೆದು ನಿಲುವೆನು ಕೆಲವು ವರ್ಷಕೆ ಕೇಳಿ ಗರ್ಜನೆಯ

        • clap clap clap.
          ನಿನ್ನನ್ನು ಕಂಸನಿಗೆ ಹಿಡಿದುಕೊಡುತ್ತೇನೆ ಎಂದು ಧ್ವನಿಸುವಂತೆ ನಾನು ನಿನ್ನ ಟಂಕನದೋಷವನ್ನು bracketನಲ್ಲಿ ಬರೆದೆ…
          “ಕಾಗುಣಿತದೊಳ್ ದೋಷಮಾದೊಡೆ
          ಹೇಗೆ ಬಾಲೆಯೆ” ಎನ್ನುತುಂ ನಾಂ
          (bracket)ನಾಗದಂತದ ನೆವದೆ ಕಂಸಗೆ ನಿನ್ನನೊಪ್ಪಿಸಲೇಂ?
          “ಪೋಗು ನೀನಾರ್, ಹೆದರುವಳೆ ನಾಂ
          ಕಾಗೆಗೂಗೆಯ ಬೆದರಿಕೆಗಳಿಗೆ,
          ಲಾಗಹೊಡೆಸುವೆ ನಿನ್ನ ವರಸೆಯೊಳ್” ಎಂಬೆಯೇಂ ಬಾಲೆ??
          Warning: ಚಾಟುಪದ್ಯಗಳು ಮಿತಪ್ರಮಾಣದಲ್ಲಿರಲಿ. ಗಂಭೀರವಾದ ರಚನೆಗಳು ಹೆಚ್ಚು ಬರಲಿ. ಛಂದಸ್ಸನ್ನು ಕಲಿಯುವ ಜೊತೆಜೊತೆಗೇ ಅಲಂಕಾರಗಳ ಪರಿಚಯ ಹಾಗೂ ಅಭಿಜಾತಕಾವ್ಯಾಧ್ಯಯನವು ಸಾಗಲಿ. ತದನಂತರ, ಖಂಡಕಾವ್ಯರಚನೆಯು ನಿನ್ನ ಲಕ್ಷ್ಯವಾಗಬೇಕು.

        • ಪದ್ಯಪಾನೋದ್ಯಾನದೊಳಗಡೆ
          ಸದ್ಯದಲ್ಲಿಯೆ ಸೇರಿಕೊ೦ಡೆವು
          ವದ್ಯವಾದೆವು ನಾವದೀಗಳೆ ಕೇಳು ಬಾಲಿಕೆಯೆ
          ಹೃದ್ಯಮಪ್ಪೆನಲಾಟವಾಡಲು
          ಪದ್ಯಚತುರೆಯೆ ನೀಡು ಸಲಿಗೆಯ
          ವಿದ್ಯುದಕ್ಷಿಯ ಘೋರಗರ್ಜೆಯ ಭಯವನೀಯದಿರೌ

        • 🙂

  18. ನೀಲಾಕಾಶಂ ಬೆಳಗಿ ರವಿ ತಾಂ ನೀರಜಕ್ಕೀದು ಸಂಗಂ,
    ಕಾಲಂಸಾರಲ್ ಮರೆತುಪುಗುವೊಲ್ ಭಾಗಿಸುತ್ತಿಪ್ಪ ಬಂಧಂ,
    ಬಾಳಂ ನೀಳ್ದುಂ ಬೆರೆತು ನಿಜವುಂ ಪ್ರೀತಿಯಿಂದಿರ್ದಿರಲ್ ತಾಂ
    ಸೀಳುತ್ತೆಲ್ಲಂ ತ್ಯಜಿಸಿನಡೆವಾ,ಮಿತ್ರನುಂ ಶತ್ರುವಲ್ತೇ!

    (ಕಮಲಕ್ಕೆ ಜೊತೆಯಾಗಿದ್ದು,ನಂತರ ಬಂಧವನ್ನು ಕಳಚಿಕೊಂಡು ಹೋಪ ಸೂರ್ಯನಂತೇ,ಬಂಧನವನ್ನು ತೊರೆದು ಹೋಗುವ ಬಾಳಸಂಗಾತಿಯೂ ಶತ್ರುವಲ್ಲವೇ?)

    • ದಿಪ್ಪಾಗ ಎಂಬಲ್ಲಿ ಒಂದು ಗುರ್ವಕ್ಷರ ಹೆಚ್ಚಾಗಿದೆ.

    • ಚೆನ್ನಾಗಿದೆ ಮೇಡಮ್. ಇನ೦ ಎ೦ದಾಗಬೇಕು. ಆದರೆ ಛ೦ದಸ್ಸಿಗೆ ಒಗ್ಗುವುದಿಲ್ಲ. ಬೆಳಗಿ ರವಿ ತಾ೦ ಎನ್ನಬಹುದು.

    • ತಾ೦ ತಾ೦ ಎರಡು ಬಾರಿ ಬ೦ತು, ಸೂರ್ಯನೊಬ್ಬನಿಗೇ. ಪ್ರೀತಿಯಿ೦ದಿರ್ದಿರಲ್ ಇಲ್ಲಿಯೂ ಸ್ವಲ್ಪ ಸರಿ ಕಾಣುತ್ತಿಲ್ಲ. ಪ್ರೀತಿಯಿ೦ದಿರ್ದುಮಿ೦ತು೦ ಎ೦ದರೆ ಯುಕ್ತವಾದೀತು.

      • ನೀಲ್ಕಂಟ್ರೆ, ಮುಂದಿನ್ ಪದ್ಯದಾಗೆ (ಸಂ.೧೯ರ ಪ್ರತಿಕ್ರಿಯಾಪದ್ಯ) ಎಳ್ಡ್ ಬಾರಿ ಮಾ ಮಾ ಬರ್ದಿವ್ನಿ. ದಯ್ಮಾಡಿ ವಟ್ಗಾಕ್ಕೊಬೇಕ್ರ.

        • ನಿಮ್ ಪದ್ಯದ್ ಕಡೆ ತಲಿ ಮಾಡಿ ಸೈತ ಮಲ್ಕಳ೦ಗಿಲ್ರೀಪಾ 🙂 ಎಷ್ಟರೆ ಮಾ ಮಾ ತಾ ತಾ ಬರಕಳ್ರಿ…

          • ಸೈತ ಅಂಬೋದು ಸೈತಾನ ಅಂಬೋದರ ಹ್ರಸ್ವರೂಪ ಏನ್ರಿ? ಸೈತಾನ ನನ್ನ ಚಲೋತ್ನಾಗಿನ್ ಪದ್ಯಗಳ ಕಡಿ ತಲಿ ಮಾಡಿ ಮಲಗಾಂವ ಅಲ್ಲ ಖರೆ. ನೀವೂ ಹಂಗs ಏನ್ರಿ?

        • ಪದ್ಯವರ್ಷದ ಹರ್ಷದೊಳ್ ಮೈಮರೆಯುತೆ ನೃ-
          ತ್ಯೋದ್ಯುಕ್ತನೀ ನೀಲಕ೦ಠ೦ ಗಡಲ್ತೆ
          ಚೋದ್ಯಮೇ೦ ಸೈತಾನನಾಗಲ್ಕೆ ಸುರಿಸೆ ದು-
          ಷ್ಪದ್ಯ೦ಗಳ೦ ಕುಕವಿಗಳ್ ಕುಮತಿಯಿ೦ದೆ?!

          • hhahha. ಕುಕವಿಗಳ್ ಕುಮತಿಯಿ೦ದೆ – Two negatives make one positive 🙂
            ಪದ್ಯ ತುಂಬ ಚೆನ್ನಾಗಿದೆ, ವಿಶೇಷತಃ ಪೂರ್ವಾರ್ಧದ ಆನಂದತಾಂಡವ. (ಕೊನೆಯ ಅಕ್ಷರ ’ದೆ’ ಬೇಕಿಲ್ಲ)

          • 🙂 ಮಾತ್ರೆಗಳು ಗಣಗಳು ಕೂಡಿಕೊಳ್ಳುವ ಲೆಕ್ಕವಿಲ್ಲಿ, ಗುಣಿಸುವುದಲ್ಲ. ಹೀಗಾಗಿ ನೆಗೆಟಿವ್ ಪೊಸಿಟಿವ್ ಆಗುವುದಿಲ್ಲ. ೨೦ / ೧೮ ಮಾತ್ರೆಗಳ ಚೌಪದಿ.

          • ಕಗ್ಗದ ಪದ್ಯಗಳಲ್ಲಿ ಎರಡನೆಯ ಪಾದದ ಊನಗಣದಲ್ಲಿ ೧-೪ ಮಾತ್ರೆಗಳಿವೆ, ಆದರೆ ನಾಲ್ಕನೆಯ ಪಾದದ ಊನಗಣದಲ್ಲಿ ಒಂದೇ ಲಘು/ಗುರು.

      • ಪದ್ಯದ ಪ್ರಥಮಾರ್ಧದಲ್ಲಿಯ “ತಾಂ” ರವಿಯನ್ನುದ್ದೇಶಿಸಿಯೂ,ದ್ವಿತೀಯಾರ್ಧದಲ್ಲಿಯದು ಜೀವನಸಂಗಾತಿಯನ್ನು ಕುರಿತಾಗಿಯೂ ಬಂದಿದೆ. ಆದರೂ ಅನಪೇಕ್ಷಿತವಾದ ಈ “ತಾಂ”ಅನ್ನು ತೊಡೆದು ಹಾಕಲು ಯತ್ನಿಸುವೆ 🙂 .ಕಾಳಜಿಗಾಗಿ ಧನ್ಯವಾದಗಳು.

  19. ತಾರಾಪುಂಜಂ ಕಾಂತಿಯಂ ಪೆರ್ಚಿಸಲ್ಕಾ
    ಮಾರಂಗೋಲ್ವಂದಂ ದಿಟಂ ಚಂದ್ರನೀಯಲ್,
    ವೀರಾವೇಶಂ ತೋರಿ ಹಿಮ್ಮೆಟ್ಟೆ ಬರ್ಪೀ
    ತಾರಾಧ್ಯಕ್ಷಂ,ಮಿತ್ರನುಂ, ಶತ್ರುವಲ್ತೇ!
    ((ನಭದ)ಕಾಂತಿಯನ್ನು ತಾರೆಗಳು ಹೆಚ್ಚಿಸಿರುವಾಗ,ಚಂದ್ರನು ಅಂದವನ್ನು ಕೊಟ್ಟಿರುವಾಗ,ಅವರನ್ನು ಹಿಮ್ಮೆಟ್ಟಲು ಬಂದ ತಾರೆಗಳ ಅಧ್ಯಕ್ಷನು,ಸೂರ್ಯನೂ (ಅವರಿಗೆ)ಶತ್ರುವಲ್ಲವೇ)

    • ಇನ್ನೆನಿತು ಕಾಲಮಾ ಸೂರ್ಯಳೊಂದಿದ್ದಾಳು
      ತನ್ನಯನುಯಾಯಿಗಳೊಳಧಿಕಾರಮಂ|
      ಪನ್ನತಿಕೆಯಂ ನಿಚ್ಚಮಾ ತಾರೆಯರು ಮೆರೆಯೆ
      ಮನ್ನಿಸದಳನ್ನು ಕೆಳಗಿಳಿಪರೀಗಳ್||

  20. ಕೈಗೇರಲ್ ಸಾಮ್ರಾಜ್ಯಸೂತ್ರ೦ ಸುಸೂತ್ರ೦
    ತೂಗಾಡುತ್ತು೦ ಬುದ್ಧಿ ನಿಸ್ಸೂತ್ರಮೆ೦ಬೊಲ್
    ಭೋಗೋದ್ರಿಕ್ತ೦ ಮಿತ್ರನು೦ ಶತ್ರುವಲ್ತೇ೦
    ಲೋಗರ್ಗಾಯ್ತಯ್ ದ್ರೋಣಪಾ೦ಚಾಲರಾಖ್ಯ೦

  21. ಕರಟಕರ್ ದಮನಕರ್ ನೇರ್ಪಿಂದೆ ಕೆಳೆತನದ
    ಮೊರೆಯಾಚಿಸುತೆ ಬರ್ಪರಯ್ ಎಚ್ಚರ
    ತರಮದೇಂ ಪಿಂಗಳಕಸಂಜೀವಕರ ನೇಹ-
    ಮರಿವುದಯ್ ಮಿತ್ರನುಂ ಶತ್ರುವಲ್ತೇ

  22. ಆದಿತ್ಯಂ ನೀಂ ಪೊನ್ನಿನಾವರ್ತದಿಂದಾ-
    ಚ್ಛಾದಂ ಗೆಯ್ಯಲ್ ಸನ್ಮುಖಂಗಾಣದಾದೆಂ
    ಔದಾರ್ಯಂದೋರುತ್ತಲುಚ್ಛಾದಮಂ ಗೆಯ್,
    ವೇದಾಂತಕ್ಕಂ ಮಿತ್ರನುಂ ಶತ್ರುವಲ್ತೇ

    • ಮೊದಲ ಮೂರು ಸಾಲಿನ ಅರ್ಥವಾಯಿತು. ಪದ್ಯದ ತಾತ್ಪರ್ಯ ಏನು?

      • ವೇದಾಂತದ ಸಾಕ್ಷಾತ್ಕಾರಕ್ಕೋಸ್ಕರ ಅಂತಃಚಕ್ಷುವಿನಿಂದ ನೋಡಬೇಕು. ಹೊರಗಣ್ಣ ಪ್ರಚೋದಿಸುವ ಸೂರ್ಯನೂ ಶತ್ರುವಾಗುತ್ತಾನಲ್ಲವೇ

        • ’ಸೂರ್ಯನನ್ನು ಪ್ರಚೋದಿಸುವುದು’ ಎಂದರೆ ಎತ್ತಲೋ ತಿರುಗಿರುವವನ ಮೀನಖಂಡದ ಮೇಲೆ ಲೆನ್ಸ್ ಹಿಡಿದು ಸೂರ್ಯಕಿರಣವನ್ನು ಕೇಂದ್ರೀಕರಿಸುವುದೆಂದೆ?

    • ನಿಮ್ಮ ವೇದಾಂತಯುಕ್ತವಾದ ಈ ಪದ್ಯ ಓದುಗರಿಗೆ ಅಂತರ್ಮುಖತ್ತ್ವವನ್ನು ನೀಡಿ ಸನ್ಮಂಗಳಕಾರಿಯಾಗುವ ಬರವಸೆಯನ್ನು ಹೊಂದಿದ್ದೇವೆ.

      • ರಾಮಣ್ಣಂ 🙂

      • ಅಯ್ಯೊ, ಅಂಗಾಗಾದು ಬ್ಯಾಡ ರಾಮಣ್ಣಪ್ಪ. ಹೈಕ್ಳು ಪದ್ಯಾನ ಎದೆಯಾಗೆ ಬರ್ಕೊಂಡ್ ಮಡೀಕಂತೀವಿ ಅಂದ್ಬುಟ್ರೆ, ಸನ್ಮಂಗಳ ಆದಂಗೇಯ!

  23. ಸುರನೆ? ಖರಮೆ? ಸಲ್ಗುಂ ಲಾಭಮಾಗಲ್ಕೆ ಸರ್ವರ್
    ಚರಿತೆಯೆನಿಪುದಂ ತಾನಿನ್ನೆಗುಂ ಕಾಣದಿರ್ಪಂ
    ಮರೆಯಲಿರುವನಯ್ದಲ್ ನೇಹಿಗಂ ತ್ರಾಹಿಯೆಂಬೊಲ್
    ಬಿರಿದರದನದೆಂಬಂ ಮಿತ್ರನುಂ ಶತ್ರುವಲ್ತೇ

    loose character

  24. ಪೊನ್ನಂ ಪೋಲ್ವಂತೆ ಚರ್ಯಂ ಬಿರಿದ ನಗೆಮೊಗಂ ವಾಗ್ಮಿಯೊಳ್ ಮಾರ್ದವಂ ಕಂ-
    ಡೆನ್ನೊಳ್ ವೈವಕ್ಷಭಾವಂ ಬೆಸೆಯೆ ಕರಗುತುಂ ಕೇಳಲಾಂ ನೇಹಮಂ ತಾಂ
    ಜನ್ನಂ ಗೆಯ್ವಂತೆ ನಿಂದಳ್ ಕೆಳೆಯತನಕೆ, ಹಾ ಒಲ್ಮೆಯಂ ಬೇಡಿದಾಗಳ್
    ಮುನ್ನಂ ಮದ್ಬಂಧು ವಾಕ್ಕಂ ಪಡೆದುದನುಲಿದಳ್ ಮಿತ್ರನುಂ ಶತ್ರುವಲ್ತೇ

    triangle love story

  25. ಆಸೆಗಳನೊರೆಸುತೇಕೈಕ ವರಪುತ್ರಿಯಂ
    ತಾಸೆಳೆದುಕೊಂಡೊಯ್ದಿರಲ್,ಪೇಳ್ವುದೇಂ!
    ಘಾಸಿಗೊಂಡಾ ತಂದೆತಾಯ್ವಿರ್ಗೆ ಕಂದಳೊಡ
    ಲಾಸೆಯಾ ಮಿತ್ರನುಂ ಶತ್ರುವಲ್ತೇ!

  26. ಪ್ರೇಮಾರೂಢಂ ಕೆಳೆಯತನದೊಳ್ ಮೋಹಿಸಿರ್ಪಪ್ರಕಾರಂ
    ಕಾಮಾಸಕ್ತಂ ಬಿಡದೆದಿನರಾತ್ರಂಗಳೊಳ್ ಬೆನ್ನಬೀಳ್ವಂ
    ವ್ಯಾಮೋಹಕ್ಕಂ ಮಿತಿಗಳಿರದೊಲ್ ಶ್ವಾಸಮೇ ಕಟ್ಟಿದಾಗಳ್
    ಸೀಮಾತೀತ ಪ್ರಣಯದಮಲಿಂಚಟದಿಂ ಮಿತ್ರನುಂ ಶತ್ರುವಲ್ತೇ
    😀

    • ಪ್ರಣಯಚಟ ಅರಿಸಮಾಸ. ನಿಮ್ಮ ಪದ್ಯವು ’ಶ್ವಾಸಮೇ ಕಟ್ಟಿದಾಗಳ್’ ಎಂಬ ಪೂರ್ವಪಕ್ಷದ ಮೇಲೆ ನಿಂತಿದೆ.
      ಶಿಖರಿಣೀ|| ಅಸೀಮಪ್ರೇಮಾಸಕ್ತಿಯೊಳಿರುವನಂ ದೂರದಿರೆಲೈ
      ಅಸೀಮಂ ಕಾಮಾಸಕ್ತಿಯಿನಹನನುಂ ದೂರದಿರೆಲೈ|
      ಅಸಾಧೂದ್ಯೋಗಂ ತಾನಿದೆ, ವನಿತೆಯುಂ(partner) ಸಕ್ತಳಿರಲುಂ?
      ನಸೀಬೊಳ್ ಯಾರ್ಯಾರ್ದೇನಿಹುದೊ ಭವದೊಳ್? ಸಾಕ್ಷಿ ಭಗವನ್!!

  27. ಕೊಂಡಕುಳಿ,ಚಿಟ್ಟಾಣಿ ನಟನೆಗಂ ಸಿದ್ಧವಿರೆ
    ಮಂದಹಾಸದ ಕೊಂಡಕುಳಿ ರಾಮನೇ !
    ಕೆಂಡನೋ ಚಿಟ್ಟಾಣಿ ರಾವಣನು ! ವಾಹ್!, ರಂಗ-
    ಮಂದಿರದಿ ಮಿತ್ರಮಂ ಶತ್ರುವಲ್ತೇ?

    (ಈ ಭಾಗದ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಕೊಂಡದಕುಳಿ ಮತ್ತು ಚಿಟ್ಟಾಣಿಯವರು ಮಿತ್ರರಾದರೂ ಯಕ್ಷವೇದಿಕೆಯ ಮೇಲೆ ಶತ್ರುಗಳೇ ಅಲ್ಲವೇ?

    • Endeavouring to record contemporary history in poetry is laudable; your interest in the arts too.
      Your idea and versification are both fine. (ರಾಮನೈ)

      • In your enterprise to deliver accurately, complex and abstract advisories, to a rather poetically precocious child, wouldn’t it be efficient and effective to use simpler language.

    • ಚೆನ್ನಾಗಿದೆ. ಒಳ್ಳೆಯ ಪೂರಣ.

  28. ಕರಗತ ಕರಣಂ ತಾಂ ದೂರವಾಣೀವರಂ ಕಾಣ್
    ಕರೆವದೊವೆರಳೊಳ್ ಚಾರಂ ಚರಿತ್ರಂ ಸುಮಿತ್ರಂ ।
    ಕರಪಲಕರಣಂ ಲೋಕಾಪವಾದಂ ತರಂ ಮೇಣ್
    ಕರಕರಿಪುದು ಮಾತ್ರಂ – ಮಿತ್ರನುಂ ಶತ್ರುವಲ್ತೇ ।।

    ಮೊಬೈಲ್ ಮಿತ್ರನ ಬಗ್ಗೆ – ಮಾಲಿನೀ ವೃತ್ತಾಂತ !!

    • ಇದ್ಯಾವುದೋ BSNL ಇರಬೇಕು. ತುಂಬ ಕರಕರ ಎನ್ನುತ್ತಿದೆ 😀
      ಪದ್ಯವು ಚೆನ್ನಾಗಿದೆ. ಕರಪಲಕರಣಂ? ಪಲ = ಮಾಂಸ!

      • ಸಾಜವೆಮ್ಮಯ ಬಿಯಸ್ಸೆನ್ನೆಲ್ಲಮೋಘವುಂ
        ಗೋಜು ಗೊಂದಲಮಿಲ್ಲದ ಕರ-ಕರೆಯುಂ ।
        ಸೋಜಿಗವಿದುಂ ಗಡಾ ಜಗದೊಳೆನ್ನವರನೇ
        ತಾಂಜರಿವ ಮಿತ್ರನುಂ ಶತ್ರುವಲ್ತೇ !!

        ಧನ್ಯವಾದಗಳು ಪ್ರಸಾದ್ ಸರ್,
        ಕರಪಲ = ತಡಕಾಟದ ಸನ್ನಿ, ಉದ್ದೇಶರಹಿತವಾದ ಅಂಗಚೇಷ್ಟೆ !!

        • ಪ್ರತಿಕ್ರಿಯಾಪದ್ಯದಲ್ಲಿ ಪದ್ಯಪೂರಣವನ್ನು ಗೈದಿರುವುದು ಮನೋಹರವಾಗಿದೆ. ಇದು ಕೇವಲ ಪ್ರತಿಕ್ರಿಯಾಪದ್ಯವೆಂದಲ್ಲದೆ ಮುಖ್ಯಪೂರಣಪದ್ಯವೆನಿಸಲು ಯೋಗ್ಯವಾಗಿದೆ. (ಪ್ರಾಸಸಂಕರ – ತಾ ಜರಿವ. ಜಗದೆ ತನ್ನವರನೇ.)
          Those who are not familiar with the regular padyapaani-s will be able to grasp the beauty of the conversation once they get to know that Smt. Usha is an officer with BSNL.

        • ಉಷಾ ಮೇಡಮ್, ಬಿಎಸ್ಸನ್ನೆಲ್ ಪದ್ಯ ಚೆನ್ನಾಗಿದೆ

        • ಈಚೀಚಿನ ಸುದ್ದಿಗಳನ್ನು ನೋಡಿ, ಕರ-ಪಲ-ಕರಣ ಎಂದರೆ, ಮೊಬೈಲು ಚಾರ್ಜ್ ಆಗುತ್ತಿರುವಾಗ ಬಳಸಿದಾಗ ಅದು ಸ್ಪೋಟಗೊಂಡು ಕೈಯೆಲ್ಲ ಮಾಂಸಮಯವಾಗುವುದು ಎಂದುಕೊಂಡಿದ್ದೆ!

        • ಧನ್ಯವಾದಗಳು ನೀಲಕಂಠ, ಪ್ರಸಾದ್ ಸರ್
          ಕ್ರೆಡಿಟ್ ಎಲ್ಲ BSNLಗೆ !
          ಓ ಹೌದು, ಈ ಕರ-ಪಲ-ಕರಣವೂ ಒಪ್ಪುತ್ತದೆ !!

  29. Thanks Soma for urging me to go the extra mile. This idea was playing hide and seek with me for a few days now. Your good wishes concretized it.
    In his Arthashastra, Book VI (Sovereign States), Kautilya says thus: A king situated on the immediate periphery of a conqueror’s kingdom is termed ‘enemy’. A king situated close to this ‘enemy’, but separated from the conqueror by this ‘enemy’, is termed ‘friend’.
    ನಡುವೊಳ್ ರಾಜ್ಯಮದೊಂದಿರಲ್ ಪೊರಗಿನಾ ರಾಜ್ಯಂಗಳೀರ್ ರಾಜರುಂ
    ನಿಡಿದಾಪ್ತರ್ ಗಡಮೀತಗಾತನವಗೀತಂ ಮಿತ್ರನುಂ. ಶತ್ರುವ-|
    ಲ್ತೆಡೆಗಾಚೀಚಿನ ನೇಮಿಭಾಗದೊಳಿಹ ಕ್ಷ್ಮಾಪರ್ ಗಡೆಂದೆಂದಿಗುಂ
    ನುಡಿದಂ ತಾನಿದನರ್ಥಶಾಸ್ತ್ರಕೃತಿಯೊಳ್ ಚಾಣಕ್ಯನೆಂಬಾರ್ಷನುಂ||

  30. ಪದಮನಿಡುತೆ ಚಂದ್ರಂ ಬಂದಿರಲ್ಕಂದಿನಿಂದಂ
    ನದಿಗೆ ಜೊತೆಯನೀವಾ ದಂಡೆಯೊಲ್ ಪ್ರೀತಿಯಿಂದಂ;
    ಹದನಮರಿಯದಾದೆಂ!ಕಾಂತೆಯಿಲ್ಲೆಂಬ ನೋವಂ,
    ಮುದದಿನಧಿಕ ಗೈವಂ! ಮಿತ್ರನುಂ ಶತ್ರುವಲ್ತೇ!
    (ಎಂದಿಗೂ ಜೊತೆಯಾಗಿಯೇ ಬಂದಿರುವ ಚಂದ್ರನು,ಕಾಂತೆ ಬಳಿಯಲಿಲ್ಲವೆಂಬ ನೋವನ್ನು ಅಧಿಕಗೊಳಿಸುತ್ತಿರುವನು. ಮಿತ್ರನು ಶತುವಲ್ಲವೇ)

  31. ||ಮಾಲಿನೀವೃತ್ತ ||

    ನರನಿಗಿರುತೆ ಕಷ್ಟಂ, ಸೋಲ್ತು ಸಂತಾಪಿಸುತ್ತುಂ,
    ಪರಿಹರಿಪುದಕೀಗಳ್ ನೀನೆ ದಿಕ್ಕೆಂದು ಬಾಡಲ್,|
    ಪೊರೆಯೆ,ಮೊರೆದು ಕಾಲಿಂಗಡ್ಡ ಬೀಳುತ್ತೆ ಬೇಡಲ್,
    ಕರಗದೆ ಶಿಲೆಯಪ್ಪಾ ಮಿತ್ರನುಂ ಶತ್ರುವಲ್ತೇಂ ? ||

    • ಆಹಾ, ಚೆನ್ನಾಗಿದೆ ಮೇಡಮ್

    • ಏನ್ ಚೆನ್ನಾಗಿದೆ ನೀಲಕಂಠ?
      ಸ್ವಾಗತ|| ಅಂದಿಗಿದ್ದನೊರುವಂ, ಪದದಿಂದಂ
      ದಂದುಗಂ ಕಳೆಯೆ ಸಾಧ್ವಿಯ ನಿಂದಂ!
      ಇಂದು ಕುಂತಳೆಯು ಮಿತ್ರರನಶ್ಮಂ
      ವಂದನಾರ್ಪಣೆಯ ಸ್ಪರ್ಶದೆ ಗೈವಳ್|| 😀

      “ಕಾಲಿಗೆರಗುವುದು ಒಮ್ಮೆಯೊಮ್ಮೆಯದೆ ಕಾಲನೆಳೆವುದಿದುವೇ
      ವ್ಯಾಲ ನಿನ್ನ ಈ ರೀತಿಯಿಂದೆ ಬೇಸತ್ತು ಪೋದೆನೈ ನಾಂ”|
      ತೌಲನಿಕ ಪ್ರಜ್ಞೆಯಿಂದಲೊಮ್ಮೆ ಶಂಸವನು ಗೈಯುತೊಮ್ಮೆ
      ಗೇಲಿಗೈವ ಗಣದೀಶರಿಂಗೆ ಭೈರಪ್ಪರೆಂದರಿಂತೌ||

    • ಚೆನ್ನಾದ ಪೂರಣ ಶಕುಂತಲಾರವರೆ.

    • ನೀಲಕಂಠರಿಗೆ, ಪ್ರಸಾದರಿಗೆ ಹಾಗೂ ರಾಮಚಂದ್ರರಿಗೆ ಧನ್ಯವಾದಗಳು. ತುಂಬ ಸೊಗಸಾಗಿರುವ ಪೂರಣಗಳನ್ನು ನೀಡಿರುವ ಪದ್ಯಪಾನಿಗಳೆಲ್ಲರಿಗೂ ನನ್ನ ವಂದನೆಗಳು. ಸಮಯದ ಅಭಾವದಿಂದಾಗಿ ತುಂಬ ಒಲವಿದ್ದರೂ ಈಚೆಗೆ ಪದ್ಯಪಾನಕ್ಕೆ ಹೆಚ್ಚಿನ ವೇಳೆಯನ್ನು ಮೀಸಲಿಡಲಾಗಲಿಲ್ಲ. ಪರಿಸ್ಥಿತಿಯು ಸುಧಾರಿಸುವಾಗ ಪುನಃ ತೊಡಗಿಕೊಳ್ಳುವೆ. ನನ್ನ ಪದ್ಯಾಸಕ್ತಿಯೆಂಬ ಲತೆಗೆ ನೀರೆರೆದು ಪೋಷಿಸುತ್ತಿರುವ ನಿಮ್ಮೆಲ್ಲರ ಋಣವನ್ನು ನಾನು ಹೇಗೆ ತೀರಿಸಲಿ ? ನಿಮ್ಮೆಲ್ಲರ ನೆರವು, ಸ್ನೇಹ, ವಿಶ್ವಾಸಗಳಿಗೆ ಮೂಕಳಾಗಿದ್ದೇನೆ. ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು. 🙂

      • ಇಂತಹ ಭಾವಪೂರ್ಣಪ್ರತಿಕ್ರಿಯೆಯಿಂದ ಎಲ್ಲ ಋಣಗಳನ್ನು ತೀರಿಸಿಯೂ ಆಯಿತು, ನವೀಕರಿಸಿಯೂ ಆಯಿತು 😉

      • ನೀರೆರೆದು ಪೋಷಿಸಿದವರಿಗೆ ಪದ್ಯಪುಷ್ಪಫಲಗಳನ್ನು ಕೊಡಲಿ ನಿಮ್ಮ ಕವನಾಸಕ್ತಿಲತೆ 🙂

  32. ಅರಳಿರುವ ಸುಮದ ಕೆಳೆತನ ದುಂಬಿ ಮಾಡಲೈ
    ಸಿರಿಯ ಬಂಡನುಣುತಿದೆ ತೋಷದಿಂದೆ
    ಹೊರಟಿತದು ಹೂವೊಮ್ಮೆ ಬಾಡಲ್ಕೆ, ಬಳಿಯಲ್ಲೇ
    ಬರದಿರುವ ಮಿತ್ರನುಂ ಶತ್ರುಮಲ್ತೇ?

    (ಇದನ್ನೇ ಸುಂದರವಾಗಿ ಹೇಗೆ ಕವನಿಸುವುದೆಂದು ದಯವಿಟ್ಟು ತಿಳಿಸಿಕೊಡಿ.)

    • ಅರಳಿರ್ಪ ಪುಷ್ಪಸಂಗವ ಕೋರಿ ದುಂಬಿ ತಾಂ
      ಸಿರಿಯ ಬಂಡುಂಡೇನು ಸಂತೋಷದಿಂ!
      ನಿರುಕಿಪುದೆ ಮಗುಳೆ ಪುಷ್ಪವದೊಮ್ಮೆ ಬಾಡಲಾ-
      ಗೆರವಾಗೆ ಮಿತ್ರನುಂ ಶತ್ರುವಲ್ತೇ?
      ——
      You would have studied in Botany that the purpose of corolla (petals) is to attract the pollinator. After pollination, the corolla and andraecium wither away. The gynaecium then morphs into fruit. Exceptionally in jackfruit, the petals morph into the fruitlings (toLe) that we eat; the ‘fruit’ in this case is actually the outer thorny rind!
      ಕಾವ್ಯಕುಂ ಶಾಸ್ತ್ರಕುಂ ವ್ಯತ್ಯಾಸಮಿಂತೆ ತಿಳಿ
      ಕವ್ಯಮಾಯ್ತೀಗಳಾ ಬಾಡಿರ್ಪ ಪೂ|
      “ದ್ರವ್ಯಗೊಂಡಿಹೆನಾನು, ದುಂಬಿ ಬಾರದೆಲಿರೈ
      ನೀ ವ್ಯರ್ಥದಿಂದಿತ್ತ”ಲೆಂದಿಹುದು ಪೂ||

    • ಪದ್ಯವು ಸುಂದರವಾಗಿಯೇ ಇದೆ.
      ಅರ್ಥದ ಜೊತೆ ಬಳಸುವ ಪದಗಳು (ಶಬ್ದಾಲಂಕಾರ), ಅನುಪ್ರಾಸಗಳು, ಹಳೆಗನ್ನಡದ ಸೌಷ್ಠವತೆ ಹಾಗೂ ಅಲಂಕಾರಗಳು, ಇವೆಲ್ಲದರಿಂದ ಪದ್ಯವು ಚೆನ್ನಾಗುವುದು. ಎಲ್ಲವೂ ಒಂದೇ ಪದ್ಯದಲ್ಲಿ ತರುವುದು ಯಾವಾಗಲೂ ಸಾಧ್ಯವಾಗಲಾರದು. ಹೇಳುವ ವಿಚಾರಕ್ಕೆ ಇವುಗಳನ್ನು ಮನಸಿಟ್ಟು ಆದಮಟ್ಟಿಗೆ ತಂದರೆ ಚೆನ್ನ.

    • ನೀನು ಬರೆದದ್ದು ಸು೦ದರವಾಗೇ ಇದೆ. ಒ೦ದು ಪದ್ಯವನ್ನು ಸು೦ದರವಾಗಿಸುವುದು ಎ೦ಬುದಕ್ಕೆ ಏನೂ ಅರ್ಥ ಇಲ್ಲ. ಅದು subjective ಆದದ್ದು. ಎಷ್ಟು ಸ್ವಾಭಾವಿಕತೆ, originality ಇರ್ತದೋ ಅಷ್ಟು ಸು೦ದರ. ಶಬ್ದಾಲ೦ಕಾರ ಇತ್ಯಾದಿ ಇದ್ದರೂ ಒಮ್ಮೊಮ್ಮೆ ಸು೦ದರವಾಗಿರಲಿಕ್ಕಿಲ್ಲ.

  33. ಹಾಗೆಕಾಣೀ ಸ್ನೇಹ ಸಾಗಿ ಮುಗಿಯದು ಮುಗಿಯ-
    ಲಾಗ ಮರೆವುದು ಮುದುಡೆ ವಿಶ್ವಾಸವುಂ ।
    ಹೀಗಿರಲ್ಕೊಡನಾಟ ತೊಡರಿಗಂ ತಾನಾಗ-
    ದಾಗಲಾ ಮಿತ್ರನುಂ ಶತ್ರುವಲ್ತೇ ।।

    Friend in NEED is a Friend INDEED !!

    • **ಸಾಗೆ ಮುಗಿಯದು

    • ಚೆನ್ನಾಗಿದೆ ಮೇಡಮ್. ಒ೦ದು ಥರ ಸಿನೇಮಾ ಹಾಡು ಇದ್ದ ಹಾಗೆ ಇದೆ. ಅನಿಸುತಿದೆ ಏಕೋ ಏನೋ ಹಾಗೇ ಸುಮ್ಮನೆ … ಅ೦ತ ಏನೋ ಇದೆಯಲ್ಲ 🙂

      • ನೀಲಕಂಠ, ಹಾಗೆಯೋ, ಹೀಗೆಯೋ, ಹೇಗೋ, ಹಾಗೆ ಸುಮ್ಮನೆ, ಈ ಚೌಪದಿ “ಕಗ್ಗ”ದಿಂದ ಪ್ರೇರೇಪಿತ, ಅದಕ್ಕೆ ಹಾಗನಿಸುತಿರಬೇಕು ನಿನಗೆ !!

Leave a Reply to ಚೀದಿ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)