Dec 122015
 

Shakunthala

  90 Responses to “ಪದ್ಯಸಪ್ತಾಹ ೧೮೧: ಚಿತ್ರಕ್ಕೆ ಪದ್ಯ”

 1. ನಲ್ಲನೊದವಿದನೆಂದು ಬೀಗು
  ತ್ತಿಲ್ಲಿನೆಂಗಳ ಮರೆತೆಯಲ್ಲೆ?
  ಬಲ್ಲೆ ನಲ್ಮೆಯು ಸೋಗೆನುತ್ತಲಿ
  ಹುಲ್ಲೆ ಮೊಗವನು ತಿರುವಿತು

  • ಮೃಗ ಉವಾಚ: “ನೀನು ಪೇಳಿಹ ಕಾರಣತ್ವ-
   ಕ್ಕಾನು ಮೊಗವನುಮಿತ್ತ ತಿರುಗಿಪೆ-
   ನೇನುಮಾಕೆಡೆ ಕೊಂಕಿಸುತ್ತಲಿ ದೂರಸರಿಯದೆಲೈ?
   ಏನಿಹುದು ವಸ್ತುಸ್ಥಿತಿಯೆನುತೆ
   ಪಾನಿಯರಿಯಲ್ ಸಕ್ತನಾದೊಡೆ
   ಯಾನಗೈಯೆಲೊ ರಂಪಪದ್ಯಕೆ ಸಂಖ್ಯೆಮೂರರೊಳು||”

   • ಪ್ರಸಾದರೆ, ಮೃಗೋವಾಚ ತಪ್ಪು ಅನಸ್ತದೆ. ಮೃಗ ಉವಾಚ ಎ೦ಬುದರಲ್ಲೇ ವಿಸರ್ಗಲೋಪ ಸ೦ಧಿ ಆಗಿ ಮತ್ತೆ ಗುಣಸ೦ಧಿ ಮಾಡಲಾಗದು.

    • बहुलं छन्दसि ಅಲ್ಲವೆ 😉 ಇರಲಿ, ನಿಮಗೇಕೆ ಬೇಜಾರು. ತಿದ್ದಿದ್ದೇನೆ.

 2. ಉಕ್ಕೇರುವ ಭಾವನೆಗಳ
  ನೊಕ್ಕಣಿಸುವೊಡೆನ್ನ ಪತಿಯನೇ ಬಣ್ಣಿಪೆನೆಂ
  ದಕ್ಕರೆಯ ನುಡಿಯನರಸು
  ತ್ತಕ್ಕಜಮೇಂ? ಕಮಲಪತ್ರ ಬರಿದಾಗಿಹುದೌ

  (ನನ್ನದೂ ಅದೇ ಗತಿಯಾಯಿತು. ಧಾತುವಿಗೆ ತಕ್ಕ ಮಾತು ದಕ್ಕದೆ ಪದ್ಯ ಸೊರಗಿದೆ)

  • ಚೆನ್ನಾಗಿದೆ. ಬಹುಶಃ ಪ್ರಾಸಪದ ಸಿಕ್ಕಿರಲಿಕ್ಕಿಲ್ಲ, ಅಥವಾ ಯತಿಗೆ ಪದ ಮುಗಿಯುತ್ತಿಲ್ಲವೇನೋ!!

   • ಉತ್ತರಾರ್ಧದ ಯತಿಗೆ ಪದ(ವೇನು? ವಾಕ್ಯವೇ, ಪದ್ಯವೇ) ಮುಗಿದಿದೆ ಎಂಬುದರಲ್ಲಿ ಸಂದೇಹವಿಲ್ಲ 😉 ಪೂರ್ವಾರ್ಧದ ಯತಿಗೆ ಪದವು almost ಮುಗಿದಿದೆ – ಬಣ್ಣಿಪೆನೆಂದ್| ಅಕ್ಕರೆಯ 🙂

    • ಕನ್ನಡಿಗರಾದ ನಮಗೆ ನಡೆಯುತ್ತದೆ ಯತಿ ದಕ್ಕಲಿಲ್ಲ ಅ೦ದರೂ, ಶಕು೦ತಲೆ ಪಾಪ, ಯತಿಪ್ರಬಲವಾಗಿ ಬರೆಯಬೇಕಲ್ಲ, ಸ೦ಸ್ಕೃತದಲ್ಲಿ 🙂

     • ಏ, ಸುಮ್ಮನಿರಿ. ಅವಳು ಪ್ರಾಕೃತಳು.

     • ಛೇ ಛೇ, ನಮ್ಮ ಶಾಖೆಯ ಮೂಲ ಋಷಿಗಳ ಸಾಕುಮಗಳೂ, ನಮ್ಮ ಗೋತ್ರಕರ್ತರ ಖಾಸಾ ಮಗಳೂ ಆದ ಅವಳನ್ನು ಪ್ರಾಕೃತಳು ಎ೦ದು ಜರೆಯುತ್ತೀರೋ?!!!

     • ಓ! ತಾವೂ ಪ್ರಾಕೃತರೆಂದಾಯಿತು.

     • ಹಹ್ಹಹ್ಹ…

   • ನೀಲಕಂಠರೆ, ಪತ್ರವನ್ನು ಬರೆಯುವಾಕೆ ಪತಿಯ ಆಲೋಚನೆಯಲ್ಲಿದ್ದಾಳೆ, ಇನ್ನು ಯತಿಗೇಕೆ ಹುಡುಕಾಡಿಯಾಳು?

    • Hahhahaa

    • ಅವರ ವಾನಪ್ರಸ್ಥದವರೆಗೆ ಕಾದರೆ, ಅವಳು ಯತಿಯನ್ನು ಅರಸುತ್ತಿರುವುದು ಅವಳ ಪತಿಯಲ್ಲಿಯೇ ಎಂದು ತಿಳಿದುಬರುತ್ತದೆ.

 3. ಪ್ರಿಯಂವದಾ|| ಬೆಸನದಿಂದಿಹಳು ಕಣ್ವಪುತ್ರಿ ತಾಂ
  ಬಸುರಿದೆಂತು ಪರಿಹಾರ್ಯಮೆನ್ನುತುಂ|
  (agitation)ಮಸಕಕಾಕೆಯದೆ ಸ್ವಾರ್ಥಕಾರಣಂ
  (golden)ಮಿಸುಗಿನೀ ಮಿಗಕೆ ದುಃಖ ಮೈತ್ರಿಯಿಂ||

  • ಅರ್ಥ ತಿಳಿಸಿ. ಹೀಗೆಯೇ ಅನಸೂಯಾ, ಶಕು೦ತಲಾ ಛ೦ದಸ್ಸುಗಳಲ್ಲಿ ಬರೆಯಿರಿ 🙂

   • ೧) ಅವಳದು ಆತ್ಮಾನುಕಂಪ. ಆ ಜಿಂಕೆಯಾದರೋ ಅವಳ ದುಃಖಕ್ಕಾಗಿ ದುಃಖಿಸುತ್ತಿದೆ.
    ೨) ಸುಮ್ಮನೆ ಛೇಡಿಸಬೇಡಿ. ದೂರ್ವಾಸವೃತ್ತದಲ್ಲಿ ಬರೆದುಬಿಟ್ಟೇನು!

    • ರಂಪಣ್ಣ, ಗರಿಕೆಯಲ್ಲಿ ಹೇಗೆ ಬರೆಯುತ್ತೀರಿ ನೋಡುವ ಕುತೂಹಲ. ಬರೆಯಿರಲ್ಲ 🙂 ಇನ್ನು ನಿಮ್ಮ ಕಾವ್ಯನಾಯಿಕೆಯ ಬೆಸನಕ್ಕೆ ಪರಿಹಾರವನ್ನು ನೀವಲ್ಲದೆ ಇನ್ನಾರು ಹೇಳಬೇಕು? ಪದ್ಯಪಾನದಲ್ಲಿಯೇ ಅಂತಹ ಚಿಕಿತ್ಸೆಯನ್ನು ಹಿಂದೆ ಮಾಡಿಸಿದಿರೆಂದು ನೀವೆ ನನಗೆ ಹೇಳಿದ ನೆನಪು 😉

 4. ಪಿಂತಣದ(180) ಪದ್ಯಪೂರಣಕೆ ನಾಂ ಮೊದಲಿಗೇ
  ಶಾಂತಿಗೈದಿರೆ ಶನೈಶ್ಚರಚರಿತದಿಂ|
  (181)ಕಂತಿದೀ ವಾರದೀ ವ್ಯಾಜದಿಂ ಸೋಮನಿಂ
  ಬಂತೆ ವೇಗದೊಳಿಂತು ಶನಿವಾರಮೇ||

  • ಕೃಷ್ಣ ಮುಹೂರ್ತ ತಪ್ಪಿಸಿ ಯುದ್ಧ ಶುರು ಮಾಡಿದ೦ತಾಯ್ತು 🙂

 5. ಮದೀಯನಯನ೦ಗಳ೦ ತರಳೆ ಪೋಲ್ತೊಡೇ೦ ನೇತ್ರದೊಳ್
  ತದೀಯತರಲಾಯುಧ೦ಗಳಿನೆ ಗೆಲ್ದೊಡೇನಾರ್ಯನ೦
  ಹೃದಿಸ್ಥನವಭಾವಮ೦ ಬೆರೆಸಿ ಪತ್ರದೊಳ್ ಕು೦ಚಿಸ-
  ಲ್ಕದೇ೦ ಶ್ರಮವಲೇ, ಪದಛ್ಛವಿಯಿವಳ್ಗೆ ಸ೦ದಿರ್ಪುದೇ೦?!!

  ಹರಿಣ೦ ಚಿ೦ತಿಸುತಿರ್ಪುದು, ನನ್ನ ಕಣ್ಗಳ೦ ಪೋಲ್ವ ಕಣ್ಣಿನೀಕೆ ಅವೇ ಕಣ್ಣಿನಾಯುಧ೦ಗಳಿನೆ ದುಷ್ಯ೦ತನ೦ ಗೆಲ್ದೊಡೇನೀಗಳ್ ಹೃದಯಭಾವಮ೦ ಬೆರೆಸಿ ಪತ್ರದೊಳೊಕ್ಕಣಿಸಲೇ೦ ಶ್ರಮ೦ಬಡುತಿರ್ಪಳೈ!! (ಎನ್ನ) ಕಾಲ್ಗಳ ತೇಜಸ್ಸು (ವೇಗ) / ಪದಸ೦ಪತ್ತು (ಪದಛ್ಛವಿ ಶ್ಲೇಷದಿ೦) ಇವಳ್ಗೆ ಒಲಿದಿರ್ಪುದೇ?

  • ತುಂಬ ಚೆನ್ನಾಗಿದೆ ನೀಲಕಂಠ – ಕಲ್ಪನೆ, ಕವನಿಕೆ, ಛಂದೋವರಣ ಎಲ್ಲ.
   But,
   ಹೃದಿಸ್ಥನ+ಅವಭಾವಮ೦ ಬೆರೆಸಿ ಪತ್ರದೊಳ್ ಕು೦ಚಿಸಲ್
   ಪ್ರದೀಪ್ತಳಿವಳೆಂಬೆನೈ ಹೃದಯದಿಂ ವಿಶಾಲಳ್ ವಲಂ|
   ಸುದೂರಕವನನ್ನು ನೂಕದೆಲೆ ತಾಳ್ಮೆಯಿಂದಿರ್ಪಳೈ
   ವದಾನ್ಯ ವಿಷಕಂಠ ನೀಂ ಹಡೆದೆ ಇಂಥ ಧೀಪಾತ್ರಮಂ||

 6. ಕ್ಲಾಸಸ್ಸೆಲ್ಲವ ಬ೦ಕು ಮಾಡಿ ಕೆಳೆಯರ್ ಕೂಡಾಡುತು೦ ಮೇಸ್ಟ್ರಿಗೇ
  ಮೋಸ೦ಗೈಯುತೆ ವರ್ಣಮಾಲೆ ಕೊರಳ೦ ಬಿಟ್ಟೋಡಿರಲ್ ಕಲ್ತುದೇ೦
  ಲಾಸಾಯ್ತಯ್ ಬದುಕೆಲ್ಲಮಿ೦ದು, ಬರೆಯಲ್ಕೀ ಬಾಲೆಗ೦ ಬಾರದೇ
  ಬೀಸಾದಾಗಸದತ್ತಲೇ ನಿರುಕಿಸಲ್, ಮತ್ತಿಬ್ಬರಯ್ ಮಬ್ಬಿನೊಳ್ 🙂

  • 🙂 ಬಂಕಂ ಗೈದುದೆ ಮೋಸಮೋ? ಕಿತವಮಿನ್ನೇಂ ಗೈದಳೋ ಮೇಷ್ಟ್ರಿಗಂ?

   • ಏನೋ, ತಮ್ಮ ಆಶೀರ್ವಾದಬಲದಿ೦ದ ಇ೦ಥದ್ದೊ೦ದು ಪದ್ಯ ಬರೆಯಲು ಕೈಹಾಕಿದೆ, ಅಷ್ಟೆ 🙂

 7. ಬರೆಯಲೊಲವನು ಹೊರಟ ನಿನ್ನಯ,
  ಕರಗಳಂ ಬಂಧಿಸಿತೆ ! ಮನದೊಳ್
  ಹರಿದ ನೆನಪಿನ ಸುಳಿಯಿನೆದ್ದುರೆ ಭಾವ ಸಂಕೋಲೆ?
  ಬರುವನೈ ಚಂದಿರನುಯೆನ್ನುತು
  ಮಿರುಳು ಹಾಸುವ ಘಳಿಗೆ,ಯರಿಲಂ,
  ಕರಿಯ ಮೇಘದಭಿತ್ತಿಯೊಡ್ಡುವ ಚಣಿಕಮುಸುಕಿನವೊಲ್!
  (ಒಲವನ್ನೇ ಬರೆಯ ಹೊರಟ ನಿನ್ನ ಕರಗಳನ್ನು ನೆನಪುಗಳಿಂದೆದ್ದ ಭಾವಸಂಕೋಲೆಯು ಬಂಧಿಸಿತೆ?ಚಂದಿರ ಬರುವನೆಂದು ಅರಿಲುಗಳನ್ನು ಸಂತೋಷದಿಂದ ಬಿತ್ತುತ್ತಿರುವ ಇರುಳನ್ನು ಮೋಡವು ಅರೆಚಣ ತಡೆದಂತೇ)

 8. ಜವದೊಳ್ ಮೇಲಣತಾಣದೀ ಮನಮೆ ಹಾ! ಬಂಧಂಗೊಳಲ್ ಕಾಂತನೊಳ್!
  ಕವನಾಲಂಕೃತ ಮಾಲೆಯಂದದೊಗೆವಾ ವರ್ಣಂಗಳೇ ಬೀತುದುಂ,
  ಸವಿಯಾಟಂಗಳ ನೋಟಮೀವ ಮಿಗಮೇ ತಾಟಸ್ಥ್ಯಮಂ ತಾಳ್ವುದುಂ,
  ಪವನಂ ತೇಜವಿಹೀನರೊಳ್ ಸಲುವುದುಂ,ಬಲ್ ನೈಜದಂತೊಪ್ಪುಗುಂ!

  (ವೇಗದಲ್ಲಿ ಮೇಲಿನ ಸ್ಥಾನವನ್ನು ಹೊಂದಿದ ಮನಸ್ಸೇ(ಅವಳ) ,ಕಾಂತನಲ್ಲಿ ಬಂಧಿಯಾಗಿರುವಾಗ,…..ಎಲ್ಲವೂ ಸ್ವಾಭಾವಿಕವಾಗಿಯೇ ತೋರುವುದು)

 9. ಅನಸೂಯೆ ಪ್ರಿಯಂವದೆಗೆ ಹೇಳಿದ್ದು:

  ಸುತ್ತಮುತ್ತಲ ಹಚ್ಚಹಸಿರಿದು ನಿಚ್ಚ ಪೊಸದಾಗಿರ್ಪುದೇ
  ಮತ್ತ ಕೋಕಿಲವಿತ್ತ ಪಂಚಮದಲ್ಲಿ ಹಾಡುತಲಿರ್ಪುದೇ
  ಇತ್ತ ಗೆಳತಿಯ ಚಿತ್ತವೆಲ್ಲಿಯೊ ನಮ್ಮ ಮರೆತೇ ಹೋಗಿದೆ
  ಮತ್ತೆ ಓಲೆಯಬರೆಯುತಲೆ ಮನವಿವಳದೆಲ್ಲಿಗೆ ಜಾರಿದೆ ?

  (ಮಾತ್ರಾ ಮಲ್ಲಿಕಾ ಮಾಲೆ, ಲಕ್ಷಣ ಸರಿಯಾಗಿದೆ ಎಂದುಕೊಂಡಿದ್ದೇನೆ)

  -ಹಂಸಾನಂದಿ

 10. ಅನಸೂಯೆ ಪ್ರಿಯಂವದೆಗೆ ಹೇಳಿದ್ದು:

  ಸುತ್ತಮುತ್ತಲ ಹಚ್ಚಹಸಿರಿದು ನಿಚ್ಚ ಪೊಸದಾಗಿರ್ಪುದೇ
  ಮತ್ತ ಕೋಕಿಲವಿತ್ತ ಪಂಚಮದಲ್ಲಿ ಹಾಡುತಲಿರ್ಪುದೇ
  ಇತ್ತ ಗೆಳತಿಯ ಚಿತ್ತವೆಲ್ಲಿಯೊ ನಮ್ಮ ಮರೆತೇ ಪೋದುದೇ
  ಮತ್ತೆ ಓಲೆಯಬರೆಯುತಲೆ ಮನವಿವಳದೆಲ್ಲಿಗೆ ಜಾರಿದೆ ?

 11. ಪರಿವರ್ಧಿನಿ
  ವನವನು ದುರುಳರ ಕರದಿಂ ರಕ್ಷಿಸಿ
  ಅನುದಿನ ಬೆವರಂ ಹನಿಸಿಹ ದೇವತೆ
  ತಣಿಯಲು ಸಮಯಂಮಿಲ್ಲವು ಕರುಣಿಗೆ ಕೆಲಸವೆ ನೂರಾರು
  ತನುವದು ಶಾಂತಿಯ ಬಯಸಿದೆ ಸಾಜಂ
  ದಣಿವಾರಿಸಲೈ ಪದ್ಯದ ಪಾನಿಯು
  ಅನುವನು ಮಾಡಿದ ನಿದ್ದೆಯ ಮಾಡಲು ಹುಲ್ಲಿನ ಹಾಸಿಗೆಯ
  ( ವನವನ್ನು ರಕ್ಷಿಸುವ ದೇವತೆಗೆ ಬಿಡುವಿಲ್ಲದ ಕೆಲಸ. ಅವಳಿಗೆ ದಣಿವಾರಿಸಿಕೊಳ್ಳಲು ಚಿತ್ರವನ್ನು ಪೋಸ್ಟ ಮಾಡಿದ ಪದ್ಯಪಾನಿಯು ಹುಲ್ಲಿನ ಹಾಸಿಗೆಯ ವ್ಯವಸ್ಥೆಮಾಡಿದ್ದಾರೆ ಎಂದರ್ಥ)

  • ಸಮಯಂಮಿಲ್ಲವು ಅಸಾಧು. ಸಮಯಂ+ಇಲ್ಲವು=ಸಮಯಮಿಲ್ಲವು. ಸಮಯವದಿಲ್ಲವು ಎಂದು ಸವರಬಹುದು.

  • ಐದನೇ ಸಾಲಿನ ಕೊನೆಯಲ್ಲಿ ಆರನೆ ಸಾಲಿನ ಮೊದಲಕ್ಷರದ ಜೊತೆ ಸ೦ಧಿಯಾಗಿ ಗಣ ತಪ್ಪುತ್ತದೆ. ತಿದ್ದಬೇಕು.

 12. ಆ ನಾಯಿಕೆ, ಸಖಿಯರು, ಜಿಂಕೆಗಳಂತಿರಲಿ, ಆ ಎರಡು ಬಿಂದಿಗೆಗಳೂ ಆ ಬುಟ್ಟಿಯೂ ದುಃಖಿಸುತ್ತಿವೆ. ಒಂದು ಬಿಂದಿಗೆಯು ಉರುಳಿದೆ, ಇನ್ನೊಂದು ಇನ್ನೇನು ಉರುಳುವಂತೆ ವಾಲಿದೆ, ಆ ಬುಟ್ಟಿಯೂ ವಾಲುತ್ತಿದೆ!
  ಸಾಂಗತ್ಯ|| ಜೀವದಿಂದಿರುವರ ದುಃಖಮಂತಿರಲಿ ನಿ-
  ರ್ಜೀವಿಗಳ್ ಪಾಡಂ ನೀ ನೋಡೈ|
  ತೇವಗೊಂಡಿದೆ ನೆಲವು ಬಿಂದಿಗೆಯೊಂದುರುಳಿ
  ನೋವಿಂದಲಿನ್ನೊಂದು ವಾಲೆ||

  • ಹೂವಿನ ಬುಟ್ಟಿ ಸ೦ಭ್ರಮದಿ೦ದ ನಳನಳಿಸುತ್ತಿದೆಯಲ್ಲ…

   • ಆದ್ದರಿಂದಲೇ ಅದನ್ನು ಪದ್ಯದಲ್ಲಿ ತಂದಿಲ್ಲ; ವಿವರಣೆಯಲ್ಲಿ ಮಾತ್ರ ಸೂಚಿಸಿದ್ದೇನೆ 😉
    ಅಲ್ಲದೆ, ನಳನಳಿಸುತ್ತಿರುವುದು ಹೂವು, ಬುಟ್ಟಿಯಲ್ಲ!

 13. The one to the left is anasUyA. Being the slimmer of the two sakhee-s, she nurses no asUyA towards priyaMvadA (the one to the right) who seems to be well fed!
  ಮಾಲಿನಿ|| ಸಖಿಯರೊಳಗದಾವಳ್ ಯಾವಳೆನ್ನುತ್ತೆ ತೋರ್ದಂ
  ಲಿಖಿತಮಿದು ವದಾನ್ಯಂ! ಸತ್ಕಲಾಕಾರನೀತಂ|
  ಸುಖಮಿತದನಸೂಯಾಖ್ಯಾತೆ ವಾಮಕ್ಕಿರುತ್ತು೦
  ಸುಖದೊರತೆಯೊಳಾಳ್ದಿನ್ನೊರ್ವಳಿರ್ಪಳ್ ಬಲಕ್ಕ೦||

  • ಇದೇನು?!! ಅನ(ನು)ಸೂಯಳ್, ಆತಳ್, ಅ೦ದಳ್, ಮಿತ್ರಳ್ ಎ೦ದೆಲ್ಲ ಅಸಾಧುಪ್ರಯೋಗ ಮಾಡಿದ್ದೀರಲ್ಲ!

  • (ಸುಖದಲ್ಲಿ) ಬೆಳೆದಂಥವಳು ಎಂಬರ್ಥದಲ್ಲಿ ’ಬೆಳೆದಳಂದಳ್’ ಸರಿಯಲ್ಲವೆ? ಉಳಿದವು ಅಸಾಧುಪ್ರಯೋಗಗಳೆಂದು ತಿಳಿಸಿಕೊಟ್ಟುದಕ್ಕೆ ಧನ್ಯವಾದಗಳು. ಸವರಿದ್ದೇನೆ. ಈಗ ಸರಿಯಿದೆಯೆ? ತಮ್ಮ ಸವರಣೆ ಹೇಗಿರುತ್ತದೋ ಎಂಬ ಕುತೂಹಲವಿದೆ. ತಿಳಿಯಪಡಿಸುವಿರ?

   • ಅನಸೂಯಳ್ ಅನ್ನೋದೂ ಅಸಾಧುವೆ. ಗಣೇಶ ಸರ್ ಒಮ್ಮೆ ತಮ್ಮ ಪದ್ಯಕ್ಕೇನೇ ವಿವರಿಸಿದ್ದರಲ್ಲ, ಸೀತಳ್ ಎ೦ಬ ಉದಾಹರಣೆ ಕೊಟ್ಟು. ಅ೦ದಳ್ ಬಗ್ಗೆ ಗೊತ್ತಿಲ್ಲ. ಅ೦ದವಾಗಿರುವವಳು ಎ೦ಬರ್ಥದಲ್ಲಿ ತೆಗೆದುಕೊ೦ಡಿದ್ದೆ.
    ನಿಮ್ಮ ವೃತ್ತ, ಆದಿಪ್ರಾಸ ಇಟ್ಟುಕೊ೦ಡು ಇದೇ ಅರ್ಥಕ್ಕೆ ಇನ್ನೊ೦ದು ಪದ್ಯ ಬರೆಯಬಹುದೇನೋ.. ಪ್ರಯತ್ನಿಸುತ್ತೇನೆ..


   • ಸುಖಮಿರದನಸೂಯಾಖ್ಯಾತೆ ವಾಮಕ್ಕಿರುತ್ತು೦
    ಸುಖದೊರತೆಯೊಳಾಳ್ದೀ ಬಾಲೆಯಿರ್ಪಳ್ ಬಲಕ್ಕ೦ 🙂

    • ಒಳ್ಳೆಯ ಸವರಣೆ. ಧನ್ಯವಾದಗಳು. ಸವರಿದ್ದೇನೆ. (ಸುಖದೊರತೆಯೊಳಾಳ್ದಿನ್ನೊರ್ವಳಿರ್ಪಳ್ ಬಲಕ್ಕ೦)

     • ಹೀಗೆ ಮನಸ್ಸಿಗೆ ಬ೦ದಿತ್ತು. ಆದರೆ ಅದು ಸ೦ದಿಗ್ಧತೆಗೆಡೆಮಾಡುತ್ತದೆ – ಸುಖದಲ್ಲಿ ಬೆಳೆದ ಇನ್ನೊಬ್ಬಳು, ಇಬ್ಬರು ಸುಖದಲ್ಲಿ ಬೆಳೆದವರು – ಎ೦ದು ಈ ರೀತಿ ಮಾಡಿದೆ.

 14. ಕಿಲಕಿಲ ನಾದಮಂ ಲಲನೆಯರ್ ಜೊತೆಗೂಡುತೆ ಗೈವ ಕನ್ಯೆಯಿಂ
  ದಲವರಿದೊರ್ಮೆಯೇ ಭುವಿಯನಾಶ್ರಿಪ ಪೂವಿನವೋಲೆ ಸಂದಿರಲ್!
  ಬೆಳಗನೆ ಬೀರುವಾ ರವಿಯ ಸನ್ನಿಧಿಯೊಳ್ ಕರಿಗತ್ತಲಾದವೊಲ್,
  ಮಲರುವ ತೋಷದಾ ಕಳಸಮೇ ಬರಿದಾದೊಲೆ, ಕಣ್ಗೆ ತೋರ್ಪುದೈ!

  (ಸದಾ ಲಲನೆಯರ ಕೂಡಿ ಕಿಲಕಿಲನಾದವನ್ನು ಗೈವ ಇವಳು ಹೂವಿನಂತೆ ಕೆಳಕ್ಕೆ ಬಿದ್ದಿರುವುದು, ರವಿಯಿರುವಾಗಲೇ ಕತ್ತಲಾದಂತೇ,ವಿಕಾಸವಾಗುವ ಆನಂದಕಳಸವೇ ಬರಿದಾದಂತೇ ತೋರುತ್ತಲಿದೆ)

  • Aaha, tumba chennagide madamme!

  • ಕಲ್ಪನೆ ಚೆನ್ನಾಗಿದೆ.ಎರಡನೆಯ ಪಾದದಲ್ಲಿ ಛಂದಸ್ಸು ತಪ್ಪಿದೆ.” ಮಲರಿನೋಲೆ ” ಗೆ ಬದಲಾಗಿ “ಪೂವಿನವೋಲೆ ” ಎಂದು ಬರೆದಲ್ಲಿ ಸರಿಯಾಗುವುದು.

   • ಧನ್ಯವಾದಗಳು ,ತಮ್ಮಿಬ್ಬರಿಗೂ.

    • “ಆಶ್ರಯಿಸುವ” ಎಂಬರ್ಥದಲ್ಲಿ ಬರೆದಿದ್ದರೆ,”ಆಶ್ರಿಪ”ದ ಬದಲಾಗಿ “ಆಶ್ರಯಿಪ” ಅಥವಾ “ಆಶ್ರೈಪ ” ಎಂದಾಗಬೇಕಾದೀತು.(ಛಂದಸ್ಸು ಕೆಡುವುದು)

 15. ವನಮಯೂರ –

  ತಾವರೆಯ ಪತ್ರೆಯೊಳು ವೇದನೆಯ ನಲ್ಲ೦-
  ಗಾವ ಪರಿ ಬಿನ್ನವಿಸಿ ತೋರಿಪಳೊ ಕಾಣೆ೦I
  ಆವುದದು ಪತ್ರದೊಳಗಾವುದದು ವೃತ್ತ೦
  ಭಾವದೊಳಗೇನು ಸುಳಿಗೊಂಡಿಪುದೊ ಬಾಳಿ೦II

  ಪತ್ರೆ =ಎಲೆ , ಪತ್ರ =ಓಲೆ

  ಚಿತ್ರದಲ್ಲಿರುವಾಕೆ ಶಕುಂತಲೆ ಎಂದು ಪರಿಗಣಿಸಿ —ಆಕೆ ಪತ್ರ ಬರೆಯಲು ಯಾವುದೋ ವೃತ್ತವನ್ನು ಆಯ್ಕೆ ಮಾಡಿಕೊಂಡಿದ್ದಾಳೆ ಮತ್ತು ನಾಲ್ಕನೆಯ ಗೆರೆಯನ್ನು ಪೂರೈಸಲು ಯಾವುದೋ ಪದಕ್ಕಾಗಿ ದೀರ್ಘ ಯೋಚನೆಯಲ್ಲಿ ಮಗ್ನಳಾಗಿರುವಂತೆ ಈ ಮೇಲಿನ ಕಲ್ಪನೆ

 16. ಕೊರೆದಿರೆ ಮನ್ಮಥ ಶರಮೇ
  ಸಿರಿಯೆರ್ದೆಯನಡರುತೆ, ವ್ರಣಂ ತೋರ್ಗೊಡದೊಲ್,
  ವರಸಖಿಯರರಿತರೇನು
  ಕ್ಕುರವಣಿಪೀ ನೋವ,ನಿದಿರು ಸಾರ್ದು ಕುಳಿತರುಂ!

 17. ಹುಲ್ಲೆಗುಣಿಸದೆ ಹೂವನೆಣಿಸದೆ
  ಹುಲ್ಲುಹಸಲೆಯೊಳೊರಗು ತೀಪರಿ
  ತಲ್ಲಣಿಸುತಿರುದೆಂತೊಲುಮೆ ಸಖಿಯರೊಡೆ ಸುಂದರಿಯೇ ।
  ಸಲ್ಲವಿಡುದಾಗದೆಲೆ ಫಲಿಸಿದ
  ಪಲ್ಲವದ ವಿಷಯವರುಹಲು ನೀ
  ನಲ್ಲಗೊಲವಿನೊಳೋಲೆ ಬರೆದಿಹುದಾವ ಭಾವದಲೀ ।।

  ಹುಲ್ಲಹಸಲೆ =ಹುಲ್ಲಿನ ಹಾಸು, ಸಲ್ಲವಿಡು = ತಡೆ,ನಿಗ್ರಹಿಸು

 18. ಹಂಬಲಿಸುತಲೆ ಕಳೆದ ಚಣಗಳ
  ನಂಬುಜಾನನೆ ಸುಖಿಸುತಿರ್ಪೊಡೆ
  ಹುಂಬ ಮುನಿಯಿತ್ತುಗ್ರ ಶಾಪಕೆ ಬಲಿಯದಾದೊಡನುಂ
  ನಂಬುತೊಲವಂ ,ಧೈರ್ಯಗೆಡದೇ
  ಸಂಬಳಿಸಿಕೊಳುತಿರ್ಪ ಸಮಯದೆ
  ಕಂಬನಿಯೆ ಮಸಿಯಾಗುತಿನಿಯಗೆ ಮನವನರುಹಿತಲಾ!

  • ತುಂಬ ಚೆನ್ನಾಗಿದೆ. ಆದರೆ,
   ಕಂಬನಿಯು ತಿಳಿನೀರೊಲಿರದೆಲೆ, (ತಿಳಿನೀರು-ಅರಿಸಮಾಸವೆ?)
   ಬಿಂಬಿಸುಗೆ (ಬಣ್ಣ)ವರ್ಣಾಕ್ಷರಗಳ-
   ನ್ನಂಬೆಯಾಕೆಯು ಗೀಜುಗಣ್ಣೊಳೆ
   ಹಂಬಲಿಪಳು ವತಾರೆಯೇ| 😀
   ವತಾರೆ (ಗ್ರಾಮ್ಯ)=ಪ್ರಭಾತ
   ——–
   ಹಂಬಲಿಸುತಾ, ಮುನಿಯಾ, ಮಿಡಿದಾ: ಇಲ್ಲೆಲ್ಲ ಕೊನೆಗೆ ’ಆ’ ಎಂಬ ಅಕ್ಷರವು ವಿಗ್ರಹವಾಗದಿದ್ದರೆ ಅಸಾಧು. ’ಆ’ ಎಂದು ನಿರ್ದೇಶ್ಯವಾದದ್ದು ವಾಚ್ಯ/ಸೂಚ್ಯವಾಗಿರಬೇಕು. ಇಲ್ಲಿ ’ಮುನಿಯ ಆ ಬಿರುಸುಮಾತಿಗೆ’ ಎಂಬಲ್ಲಿ ಮಾತ್ರ ಸಾಧುವಾಗಿದೆ. ಉಳಿದವನ್ನು ಹಂಬಲಿಸುತುಂ, ಮಿಡಿದುಂ ಎಂದು ಸವರಬಹುದು.

   • ತಿದ್ದಿರುವೆನಾದರೂ, ನಿಮ್ಮ ಪದ್ಯವನ್ನು ಅರ್ಥೈಸಿಕೊಳ್ಳಲಾಗಿಲ್ಲ.

    • ಕಣ್ಣೀರು ವರ್ಣರಹಿತವಾಗಿರುತ್ತದೆ. ಹಾಗಾಗಿ ಇವಳು ಪತ್ರವನ್ನು ಮುಂಜಾನೆಯಲ್ಲಿಯೇ ಬರೆಯುತ್ತಿದ್ದಾಳೆ, ಏಕೆಂದರೆ ಕಣ್ಣೀರಿನೊಂದಿಗೆ ಗೀಜು ಸೇರಿದರೆ ಕಂದುಬಣ್ಣದ ಅಕ್ಷರವು ಮೂಡುತ್ತದೆ!

  • ಬಿರುಸು ವಾಕ್ಕಿಗೆ … ಅರಿಯಾಯಿತು. ಬಿರುಸು ಮಾತಿಗೆ ಮಾಡಬಹುದು.

   • ಸಾಂಗತ್ಯ|| ಕಂಡೆಯೇಂ ವ್ಯತ್ಯಾಸವೇನೆಂಬುದನ್ನು ಗಾ-
    ವುಂಡನೆ (ಕುಲಕರ್ಣಿ) ನಮ್ಮಯ ನಡುವೆ?
    ಮಂಡಿಸಿರ್ಪೆನು ನಾನು ಸೂಚ್ಯಮಾಗಿದ* ಬೆಸ-
    ಗೊಂಡಿರ್ಪೆ ವಾಚ್ಯದಿಂ ನೀನು||
    *ಬಿರುಸುಮಾತಿಗೆ

 19. ಕೇಸರದ ಕುಸುಮವಾಶ್ರಮದಂಗಳದೊಳರಳಿ
  ಬೇಸರದಿ ಬಾಡುದದೊ ನೆಲಕೆರಗಿದೋಲ್ ।
  ಭಾಸವಾಗೆ ರವಿವರ್ಮ ಚಿತ್ತ ಕಾಣ್, ಕಾಳಿ-
  ದಾಸಕಾವ್ಯ ನಿಮಿತ್ತವೀ ಚಿತ್ರ ಮೇಣ್ ।।

  ಚಿತ್ರದಲ್ಲಿನ (ಕೇಸರಿ ಸೀರೆಯುಟ್ಟ) ಶಕುಂತಲೆ, ನೆಲದಮೇಲೆ ಬಿದ್ದ “ಕೇಸರಿ ಹೂ”ವಿನಂತೆ ಕಂಡ ಕಲ್ಪನೆಯಲ್ಲಿ !!

  • ಚೆನ್ನಾಗಿದೆ ಮೇಡಮ್. ಚಿತ್ತದೊಳ್, ಚಿತ್ರಮಯ್ ಎ೦ದರೆ ಪದಪ್ರಯೋಗ ಸರಿಯಾದೀತು.

   • ಧನ್ಯವಾದಗಳು ನೀಲಕಂಠ,(ಗಮನಿಸಿರಲಿಲ್ಲ)
    ತಿದ್ದಿದ ಪದ್ಯ :(ಇದೀಗ ಸರಿಯಾಯಿತು)

    ಕೇಸರದ ಕುಸುಮವಾಶ್ರಮದಂಗಳದೊಳರಳಿ
    ಬೇಸರದಿ ಬಾಡುದದೊ ನೆಲಕೆರಗಿದೋಲ್ ।
    ಭಾಸವಾಗೆ ರವಿವರ್ಮ ಚಿತ್ತದೊಳ್, ಕಾಳಿ-
    ದಾಸಕಾವ್ಯ ನಿಮಿತ್ತವೀ ಚಿತ್ರಮಯ್ ।।

 20. ಕ್ಷಮಿಸಿ, ನನಗೆ ಮೊದಲು ಶಕುಂತಲೆ ಎಂದು ತಿಳಿಯಲಿಲ್ಲ. ಆದ್ದರಿಂದ 11 ನೆಯ ಪದ್ಯದಲ್ಲಿ ಹಾಗೆ ಬರೆದೆ.
  ( ಈ ಪುಡು ಪುಡಿ ಶಬ್ದ ಓದಿ ಯಾರೂ ನಗುವುದಿಲ್ಲ ತಾನೇ?)
  ದೋಧಕ
  ಸುಂದರ ನೇತ್ರವ ಪೊಂದಿಹ ಪೆಣ್ಣಂ-
  ಮಂದದಿ ಲಗ್ನವನಾದನು ರಾಜಂ
  ಚಂದದ ಕನ್ಯೆಯ ದೂರಕೆ ಸಾಗಲ್
  ಸುಂದರ ಪತ್ರವನಂ ಬರೆದಳ್ ತಾಂ

  • ಅ೦ಕಿತಾ, ಚಿತ್ರದ ಮೂಲಕತೆ ಏನು ಎ೦ದೆಲ್ಲ ವಿಚಾರಿಸಬೇಕಿಲ್ಲ. ಚಿತ್ರಕ್ಕೊ೦ದು ಕಲ್ಪನೆಯ ಪದ್ಯ ಕೊಟ್ಟರೆ ಸಾಕು 🙂
   ಹಳಗನ್ನಡ ಹೊಸಗನ್ನಡ ಪ್ರಯೋಗದ ಮಿಶ್ರಣ ಆಗಿದೆ ಬಹಳ. ಪತ್ರವನ೦ ಸರಿಯಲ್ಲ. ಪತ್ರಮ೦ ಎ೦ದಾಗಬೇಕು.

  • ಪೆಣ್ಣ೦ಮ೦ದದಿ ಅ೦ದರೇನು? ಅ೦ದದಿ ಎ೦ದು ಹೇಳುವ೦ತಿದ್ದರೆ ಅದು ಪೆಣ್ಣನ೦ದದಿ ಆಗುತ್ತದೆ.

  • ನನ್ನ ಪದ್ಯಗಳ ವಿಷಯದಲ್ಲಿ ಹೇಳುವುದಾದರೆ, ಯಾರಾದರೂ ನಗುತ್ತಾರೆಯೇ ಎಂಬ ಯೋಚನೆ ನನಗಿಲ್ಲ; ಯಾರಾದರೂ ಅಳುತ್ತಾರೆಯೇ ಎಂಬ ಆತಂಕವಿರುತ್ತದೆ 🙁
   ಪೆಣ್ಣಂಮಂದದಿ ಸರಿಯಲ್ಲ. ಮೂರನೆಯ ಸಾಲಿನಲ್ಲಿ ಅನ್ವಯಕ್ಲೇಶವಿದೆ. ನನ್ನ ಸವರಣೆ:
   ಸುಂದರನೇತ್ರಮನೊಂದಿಹ ಪೆಣ್ಣ-
   ನ್ನಂದದೆ ಲಗ್ನವನಾಗಿರೆ ರಾಜಂ|
   ಚಂದದ ಕನ್ಯೆಯು ದೂರದೊಳಿರ್ಪಾ
   ಸುಂದರಗೋಲೆಯ ಲೇಖಿಪಳೀಗಳ್||

   • ಇಲ್ಲೂ ತಪ್ಪಿವೆ 🙂

    • ನಿರೀಕ್ಷಿಸಿದ್ದೆ. ಲೇಖಿಪಳೀಗಳ್ ಅಸಾಧು ಅಲ್ಲವೆ? ಬೇರೆ ಯಾವುದು? ತಿಳಿಸಿ. ತಿದ್ದುಗೊಳ್ಳೋಣ.

     • ಲೇಖಿಪಳು ಸರಿಯಾಗಿದೆ. ನೇತ್ರಮನೊ೦ದಿಹ ಏನು ಅರ್ಥ? ಪೆಣ್ಣನ೦ದದೆ. ಸು೦ದರ೦ಗೋಲೆಯ೦

    • ನೇತ್ರಮನೊಂದಿಹ= ನೇತ್ರವನು ಹೊಂದಿಹ (http://padyapaana.com/?p=2719#comments – See Sl No. 19, GS Raghavendra’s comments and sub-comments – ಕೀರ್ತಿಯನೊಂದೌ)
     The other two are about haLagannannada, and may be condoned as a transitory phase of learning.

     • “ಒಂದು ಸಮ್ಮೇಲನೇ” ಎಂಬುದು ಧಾತು ಪಾಠ. ಹಳಗನ್ನಡ ಪ್ರಯೋಗಗಳು ಸೇರು, ಕೂಡು ಎಂಬರ್ಥದಲ್ಲಿಯೆ ಇವೆ. ಹೊಂದು ಎಂಬರ್ಥದಲ್ಲಿ ಬಳಕೆ ನಡುಗನ್ನಡದ್ದು.

    • ಧನ್ಯವಾದಗಳು, ಜೀವೆ೦ ಅವರೆ, ವಿವರಣೆಗೆ 🙂

 21. ನನ್ನದೊಂದು ಪ್ರಥಮ ಪ್ರಯತ್ನ. ವ್ಯಾಕರಣ ಶುದ್ದಿ ಇದೆಯೋ ತಿಳಿಯದು !

  ಬಲ್ಲ ಸಖಿರೊಡಗೂಡಿ ಸುಂದರಿ
  ಮೆಲ್ಲ ಮನೆಯಂಗಳದ ಹೊರಗಡೆ
  ಹುಲ್ಲಹಾಸಗೆಯಲ್ಲಿ ಪವಡಿಸಿ
  ಗಲ್ಲತೋಯಿಸಿ ಕಣ್ಣನರಳಿಸಿ
  ನಲ್ಲಗೋಲೆಯ ಕೊರೆವ ಕನ್ಯೆಯ
  ತಲ್ಲಣಿಸಿ ನೋಡುತಿಹ ವನ್ಯಮಿಗವಂ ನೋಡಾ !

 22. ಮರದ ನೆರಳಲಿ ತಂಪು ಗಾಳಿಗೆ
  ಶಿರವ ಕರದಿಂಪಿಡಿದು ಯೋಚಿಸಿ
  ಭಾರಮನದಿಂಬರೆವ ಬಾಲೆಯಂ
  ಸುರಕನ್ಯೆಯೆಂದೆಣಿಸಿ ಬರಮಾಡಿಕೊಳಲೆಂದು
  ನೀರಬಿಂದಿಗೆ ಇರಿಸಿ ಕಾಯ್ವರಾ ನೀರೆಯರ್ ?

 23. ಮಂದಿರಕೆ ಬರಲಿಲ್ಲಾ | ಪತ್ರವದು ಬರೆದಿಲ್ಲಾ
  ಕುಂದಿಹುದು ಎನ್ನಮನ | ಬರವನ್ನೆ ನೋಡುತಲಿ
  ಚಂದಿರನೆ ಉಸಿರಿಗ | ಎಲ್ಲಿಹನು ಅವನೀಗ
  ಸಂಧಿಸಿದ ಪ್ರಥಮದಲೆ | ಬಂಧಿಸಿದ ಎನ್ನನ್ನು

 24. ಒಂದು ಭಾಮಿನಿಯಲ್ಲಿ ಮಿನಿ ಪದ್ಯ ರಚಿಸಲು ಪ್ರಯತ್ನಿಸಿದ್ದೇನೆ . ತಪ್ಪುಗಳಿದ್ದಲ್ಲಿ ಕ್ಷಮಿಸಿ ಮತ್ತು ತಿಳಿಸಿ

  ಕೊಂಚ ಕಂಪಿನ ಹಚ್ಚಹಸಿಲಾ
  ವಂಚಮಂಚಕೆ ದೇಹಚಾಚುತ
  ಮಿಂಚುಕಂಗಳ ಚಂದ್ರನಾಚುವ ಚೆಲ್ವೆ ಚಂದಿರೆಯು |
  ಪಂಚೆಯಂಚಿಗೆ ಕುಂಚದಿಂದಲಿ
  ಇಂಚುಇಂಚಿಗೆ ಲೆಕ್ಕಮಾಡುತ
  ಕುಂಚಿಪಳ್ತನ್ನಚ್ಚುಮೆಚ್ಚಿನ ಚಿತ್ರವ ಯೋಚಿಸಿ ||

  • ಏನು, ಮೂರನೆ ಪದ್ಯ queue ನಲ್ಲಿ ಇದೆಯಾ?

  • ಒಳ್ಳೆ ಪ್ರಯತ್ನ. ಆದರೆ ಅರಿಸಮಾಸಗಳಿವೆ. ಮೂರನೆ ಸಾಲಿನ ಕೊನೆಗೆ ಪದ ಮುಗಿಯಬೇಕು. ಮೂರು, ಆರನೆಯ ಸಾಲ ಕೊನೆಗೊ೦ದು ಗುರು ಬರಬೇಕು. ಅದು ಲಘ್ವಕ್ಷರವಾದರೂ ಪರವಾಗಿಲ್ಲ. ಹಳಗನ್ನಡ ಮತ್ತು ಹೊಸಗನ್ನಡಗಳ ಮಿಶ್ರಣವಾಗಿದೆ.

   • ನಿಮ್ಮ ಸಲಹೆ ಸೂಚನೆಗಳಿಗೆ ಧನ್ಯವಾದಗಳು.
    ಸರಿಪಡಿಸಲು ಪ್ರಯತ್ನಿಸಿದ್ದೇನೆ . ಸ್ವಲ್ಪ ಕಣ್ಣಾಡಿಸಿ ತಪ್ಪುಗಳನ್ನು ಎತ್ತಿ ತೋರಿಸಿ, ತೊಂದರೆಗಾಗಿ ಕ್ಷಮಿಸಿ.

  • ವ ಯೋಚಿ/ಸುತ – ಜಗಣ/ ಹೆಚ್ಚುವರಿ ಮಾತ್ರೆ

   • Thanks.
    ಸುತನ ಜಾಗಕ್ಕೆ sea (ಸಿ) ತಂದಿತ್ತು, ಯೋಚಿಸಿ ಸರಿಪಡಿಸಿದ್ದೇನೆ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)