Dec 272015
 

“ಸಾಕೆನ್ನುತುಂ ಸುಯ್ದನಯ್” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು

  72 Responses to “ಪದ್ಯಸಪ್ತಾಹ ೧೮೩: ಪದ್ಯಪೂರಣ”

  1. ಜನ್ಮಾರಭ್ಯಮೆ ಪೋರುತು೦ ತುಹಿನಮಾಯಾಸ್ತ್ರೀಯನುಚ್ಚಾಟಿಸ-
    ಲ್ಕುನ್ಮತ್ತ೦ ತಮಮಿರ್ದುಮದ್ರಿಯೊಲದ೦ ಸೀಳ್ದು ಪ್ರಕಾಶ೦ಗುಡಲ್
    ತನ್ಮಾತ್ರಾಪ್ರಕರ೦ ಸುಗ೦ಧಮಯದೀ ಪದ್ಮಾ೦ಗಿನೀಪೀಡೆಯು೦
    ಸನ್ಮಾನ೦ ರವಿಗಿಲ್ಲ ಸ೦ಜೆವರೆಗು೦ ಸಾಕೆನ್ನುತು೦ ಸುಯ್ದನಯ್

    ಹುಟ್ಟುತ್ತಲೇ ಮ೦ಜ ಮಾಯಾಸ್ತ್ರೀಯ ಜೊತೆ ಹೋರಾಟ, ಭೀಕರ ಕತ್ತಲೆಯನ್ನು ಸೀಳಿ ಪ್ರಕಾಶವಿತರಣದ ಕಾರ್ಯ, ಶರೀರದ ಕಣಕಣವೂ ಗ೦ಧಯುತವಾದ ಕಮಲಿನಿಯ ಪ್ರಣಯ ಪೀಡೆ, ಇವೆಲ್ಲದರ ನಡುವೆ ಸ೦ಜೆವರೆಗೂ ಮನುಷ್ಯರಿ೦ದ ಸಿಗದ ಸನ್ಮಾನ… ರವಿಗೆ ಸಾಕಾಗಿ ಹೋಯ್ತು!

    • ವಿಶೇಷವೇನಿಲ್ಲ. ತುಂಬ ಚೆನ್ನಾಗಿದೆ. ಇದು ’ಸಾಕ್ಷಿ’ಯ ಮಂಜಯ್ಯ ಎಂಬ ಆತುರದ conclusionಗೆ ಬಂದಿದ್ದೆ!

    • ಜನ್ಮಾರಭ್ಯ ಪದ ಹೇಗೆ ಸಾಧುವಾಗುತ್ತದೆ? ಬಹುಶಃ ಜನ್ಮಾರಂಭದೆ ಎಂದಾದರೆ ಸರಿಯಾದೀತು. ಆದರೂ ಜನ್ಮ ಎಂಬುದೇ ಆರಂಭವಾಗುವ ಕಾರಣ ಪುನರುಕ್ತಿಯಾಗುತ್ತದೆ ಎನಿಸುತ್ತದೆ. ಉನ್ಮತ್ತಂ ಯಾರು? ರವಿಯೇ? ತಮಮಿರ್ದುಂ ಎಂಬ ಸಮುಚ್ಚಯಾರ್ಥವೇಕೆ? ಅದ್ರಿಯೊಲ್? ಅದ್ರಿವೊಲ್/ಅದ್ರಿಯವೊಲ್ ಹೆಚ್ಚು ಸಾಧು. ಆದರೆ ಅದ್ರಿ ಯಾವುದನ್ನು ಸೀಳುತ್ತದೆ? ಸನ್ಮಾನ ಎಂಬ ಪದಕ್ಕಿಂತ ಸಮ್ಮಾನ ಎಂಬುದು ಹೆಚ್ಚು ಸೂಕ್ತ ಪದ. ಇಡಿಯ ಪದ್ಯದಲ್ಲಿ ಅನ್ವಯಕ್ಲೇಶವಿರುವ ಕಾರಣ ಅಭಿಪ್ರಾಯ ಬಹುಧಾ ಸ್ಪಷ್ಟವಾಗದಾಗಿದೆ.

      • ಆರಭ್ಯ ಎಂದರೆ ಶುರುವಾದದ್ದು ಎಂದರ್ಥವಲ್ಲವೇ? ಹುಟ್ಟುತ್ತಲೇ ಎಂಬರ್ಥದಲ್ಲಿ ಬಳಸಿದ್ದು, ಜನ್ಮಾರಭ್ಯ.

  2. ಮುನ್ನ೦ ತೌರ ಸುಖಕ್ಕೆ ಸೋಲ್ತ ಸತಿಯ೦ ನು೦ಗಿರ್ದ ಕಿಚ್ಚೀಗಳು೦
    ತನ್ನೀ ಪುಬ್ಬಿನ ಗ೦ಟ ಕೋಪದ ತೆರ೦ ತಾನಿರ್ದು, ಚ೦ಡಿಪ್ರಭಳ್
    ಚೆನ್ನಿ೦ ಚ೦ಚಲೆ ಮಾಯೆಯಿಮ್ಮಡಿಯವಳ್, ಮತ್ತ೦ ಶಿರಸ್ಸೇರಿದಳ್,
    ಬನ್ನ೦ ತಪ್ಪದಲೇ ಶಿವ೦ ಶಿವ ಶಿವಾ ಸಾಕೆನ್ನುತು೦ ಸುಯ್ದನಯ್

    ಮೊದಲನೆಯವಳು ತವರಿನ ಸುಖಕ್ಕೆ ಸೋತು ಬೆ೦ಕಿಗೆ ಬಿದ್ದಳು, ಆ ಕಿಚ್ಚು ಇನ್ನೂ ಕೋಪದ ರೂಪದಲ್ಲಿ ತನ್ನ ಹಣೆಯಲ್ಲಿ ಕುಣಿಯುತ್ತಿದೆ. ಎರಡನೆಯವಳು ಚ೦ಡಿ, ಮಾಯಗಾತಿ. ಮತ್ತೋರ್ವಳು ತಲೆಯೇರಿ ಕೂತಿದ್ದಾಳೆ. ಈ ತೆರನ ಕಷ್ಟಗಳ ಸ೦ಕೋಲೆಯಲ್ಲಿ ಶಿವನಿಗೆ ಬದುಕೇ ಸಾಕಾಯ್ತು.

    • ಆಹಹಾ! ಎರಡೂ ಸೊಗಸಾಗಿವೆ ನೀಲಕಂಠರೆ!

    • ಶಿವನೇ ’ಶಿವ ಶಿವಾ’ ಎಂದನೆ!

      • ಹರ೦ ಹರಿ ಹರೀ ಸಾಕೆನ್ನುತು೦ ಸುಯ್ದನಯ್
        ಈಗ ಸಮಾಧಾನ ಆಯ್ತಾ? 🙂

        • ಅವರಿಬ್ಬರೂ ಸಮ(ಕಾಲೀನ)ರಲ್ಲವೆ? ನಾನು “ಕುಲಕರ್ಣಿ ಕುಲಕರ್ಣೀ” ಎಂದು ಸುಯ್ದಂತಾಯ್ತು!

    • ಚಂಡಿಪ್ರಭಳ್- ಎಂದರೆ ಚಂಡಿಯಂತಹವಳು ಎಂದಾಗುತ್ತದೆಯಲ್ಲ. ಶಿರಸ್ಸೇರಿದಳ್ ಎಂಬುದಕ್ಕಿಂತ ಶಿರಸ್ಸನೇರಿದಳ್ ಎಂದಲ್ಲಿ ವಿಭಕ್ತಿ ಹೆಚ್ಚು ಸ್ಪಷ್ಟವಾಗುತ್ತದೆ.
      ಮತ್ಪೀಡಾಹತ-ನೀಲಕಂಠನಿದೊ ತಾಂ ಸಾಕೆನ್ನುತುಂ ಸುಯ್ದನಯ್!!
      ಎಂದುಕೊಳ್ಳಬೇಡಿ. 😉

  3. ಹ೦ಸಾನ೦ದಿಯವರನ್ನು (ಅವರ ಹೆಸರನ್ನು) ಕ೦ಡಾಕ್ಷಣ ಮತ್ತೊ೦ದು ಶಾರ್ದೂಲವಿಕ್ರೀಡಿತ ಹೊಳೆಯಿತು 🙂

    ಧ್ವ೦ಸ೦ಗೈಯೆ ದುರಾತ್ಮರ೦ ಜನನದಾರಭ್ಯ೦ ನಿತಾ೦ತ೦ ಕುಲೋ-
    ತ್ತ೦ಸ೦ ಕ೦ಸಹರ೦ ಹರಿ ಶ್ರಮಿಸಲೇ೦ ದುಃಖಾ೦ತ್ಯಮ೦ ಕ೦ಡನಯ್
    ಹ೦ಸಾನ೦ದಿಯ ಶೋಕಸ೦ಮಿಳಿತದಾರೋಹಕ್ಕೆ ಪೋಲ್ದತ್ತು ತ-
    ತ್ಸ೦ಸೇವ್ಯಪ್ರಭುಜೀವಿತ೦ ಕೊನೆಯೊಳು೦ ಸಾಕೆನ್ನುತು೦ ಸುಯ್ದನಯ್

    ಹುಟ್ಟಿನಿ೦ದಲೂ ದುಷ್ಟರ ನಾಶಕ್ಕೆ ಬಡಿದಾಡಿದ. ಆದರೇನು? ಆ ಹರಿಯ ಜೀವಿತ ಬೆಳೆಬೆಳೆದ೦ತೆ – ಹ೦ಸಾನ೦ದೀ ರಾಗದ ಶೋಕಭರಿತ ಭಾವದ ಆರೋಹಣದ೦ತೆಯೇ – ದುಃಖಯುಕ್ತವಾಗುತ್ತಲೇ ಹೋಯಿತು. ಕೊನೆಗೂ ಸಾಕಪ್ಪ ಎನ್ನುತ್ತಲೇ ಸುಯ್ದು ಹೋದ, ಕೃಷ್ಣ.

    • ಚೆನ್ನಾಗಿದೆ. ಆದರೂ ಕೃಷ್ಣನನ್ನು ಹೀಗೆಂದುಬಿಟ್ಟಿರಲ್ಲ!
      ಜನನದಾರಭ್ಯ ಒಂದರ ಜೊತೆ ಕೊನೆಯೊಳುಂ -ಕೊನೆಯೊಳಂ ಆದರೆ ಇನ್ನೂ ಚೆನ್ನ.

  4. ಮರುಳಂ ಧರ್ಮಜನೊರ್ವನಂಧತೆಗೆ ಭೀಮಂ ಕೋಪದಿಂ ಪೇಳ್ದನೈ
    ಕರದೊಳ್ ದಾಳಮನಿಟ್ಟೊಡಂ ಮತಿಗೆಡಲ್ ಜೂದಾಟಕೆಂದೋಡುವಂ
    ಅರಿಯಿಂ ಗೈದ ಕುಕೃತ್ಯಮುಂ ಸರಿಯೆನುತ್ತುಂ ಮೌನದಿಂದಿರ್ಪನೀ
    ಪುರುಷಂಗೇಕಧಿಕಾರಮೆನ್ನತೆ ಗಡಾ ಸಾಕೆನ್ನುತುಂ  ಸುಯ್ದನೈ

    • ಎರಡನೇ ಸಾಲಿನ ಕೊನೆ+ ಮೂರನೇ ಪಾದದ ಮೊದಲಕ್ಷರಗಳು ಸಂಧಿಯಾಗಬೇಕಲ್ಲ. ಹಾಗಾದರೆ ಛಂದಸ್ಸು ತಪ್ಪುತ್ತದೆ. ಮೂರನೇ ಸಾಲನ್ನು “ಪರರಿಂ” ಎಂದು ಪ್ರಾರಂಭಿಸಬಹುದು. ಗೈದ ಎಂದು ಇರುವ ಕಾರಣ ‘ಪರರೇ’ ಎಂದು ಪ್ರಥಮಾ ಮಾಡಬಹುದು. ಅಥವಾ “ಪರರಿಂದಾದ ಕುಕೃತ್ಯ’ ಎಂದು ಮಾಡಬಹುದು.ಕೊನೆ ಸಾಲು ಮುದ್ರಾರಾಕ್ಷಸನಿಂದಾದದ್ದು- ‘ಅಧಿಕಾರಮೆನ್ನುತೆ”. ಒಳ್ಳೆಯ ಪರಿಹಾರ.

  5. ಮೊದಲಾಯ್ತಂದಿಗಮಾಟದೊಳ್ ಪರಿಭವಂ ವಿಶ್ವಸ್ತರೀಯಂ ಗಡಾ
    ಮುದದೊಳ್ದಾಂಡಿಗಗುಂಪಿಗಂದಿನೊಡೆಯನ್ ಸಿಂಹಂ ಯುವಂ ರಾಜಕಂ ।
    ಸದೆಯಲ್ಕ್ರೀಡೆಯ ಚೆಂಡನಾಚೆಗಮಮಾ ಷಡ್ದಿಕ್ಕಿಗೊಂದೊಂದನುಂ
    ಮೆದುವಾದಂ ಬಿಳಿಯಾಂಗ್ಲಚೆಂಡಿಗನವನ್ ಸಾಕೆನ್ನುತುಂ ಸುಯ್ದನಯ್ ||

    ಆಧುನಿಕ ಪರಿಹಾರ. ದಾಂಡಿಗರ ಗುಂಪಿಗೆ (ಅಂದಿನ) ರಾಜನಾದ ಯುವರಾಜನ ಆರು ಸಿಕ್ಸರ್ ಮಳೆಯನಂತರ ಬಿಳಿಯಾಂಗ್ಲ ಚೆಂಡಿಗ (ಬೌಲರ್) – ಸ್ಟುಅರ್ಟ್ ಬ್ರಾಡ್ (ಇವನ ಹೆಸರನ್ನು ಹೊಂದಿಸಲಾಗಲಿಲ್ಲ) ಸಾಕೆನ್ನುತುಂ ಸುಯ್ದನ್. ತಪ್ಪಿದ್ದರೆ ತಿದ್ದುಪಡಿಗಳನ್ನು ಸೂಚಿಸುವುದು.

    • ಅಮಮಾ ಬೌಂಡರಿ ದಾಂಟಿತಲ್ತೆ ಭವದೀಯಂ ಹೃದ್ಯಪದ್ಯಂ ವಲಂ
      ಕ್ರಮದೊಳ್ ಸಲ್ವುದು ಸರ್ವರೊಪ್ಪಿರೆ ಲಸದ್ವೃತ್ತಾಂತಸಂವೃತ್ತಮುಂ!
      – ಸಿಂಹಂ ಯುವಂ ರಾಜಕಂ ಬಂದಿದ್ದು ತುಂಬಾ ವಿಶಿಷ್ಟವಾಗಿದೆ.

  6. ಶ್ರೀ ಎಸ್. ಎಲ್. ಭೈರಪ್ಪನವರ ’ನೆಲೆ’ ಕಾದಂಬರಿಯ ಕುಮಾರನ ಧೋರಣೆ:
    ಲಯಗ್ರಾಹಿ|| “ಬೇಕಿಲ್ಲಮೇಂ ಪತ್ನಿ-ಸಂತಾನಸೌಖ್ಯಂ?
    ಯಾಕಾರೆ ಪುಟ್ಟಂ ಗಡಿತ್ತೈ ಪಿತಂ ನೀಂ|
    ತಾಕೀತ ನಾಂ ಗೈದೆನೇಂ ಪುಟ್ಟಿಸೆಂದುಂ
    (Care)ಸಾಕು,” ಎನ್ನುತುಂ ಸುಯ್ದನಯ್, “ಪೆತ್ತುದಕ್ಕಂ||”
    —————
    The given phrase is a simple poser, and can underline many a situation. Will rake in maximum entries, but there may not be much variety Soma. The world is brimming with ‘ಸಾಕಪ್ಪss ಸಾಕು!’

    • ಪ್ರಸಾದು, ಹೌದು ಸಾಧ್ಯತೆಗಳು ಹೆಚ್ಚಿದೆ, ಹಾಗಾಗಿ ಕೇವಲ ಪೂರಣಸಾಧನೆಯಿಂದ ಹೊರಬಂದು ಪೂರಣದ ನಿರ್ವಹಣೆಯ ಸಂವಿಧಾನವು ರಸವತ್ತಾಗಿ ಅಲಂಕಾರಯುತವಾಗಿರುವೆಡೆ ಪದ್ಯಪಾನಿಗಳಿಗೆ ಅವಕಾಶ ಆಗುತ್ತದೆ… ಏನಂತೀರಿ? 🙂

    • ಪ್ರಸಾದು ಅವರೇ, ಭೈರಪ್ಪನವರ ಕಾದಂಬರಿಗಳ ಗುಂಗಿನಲ್ಲಿಯೇ ಇದ್ದೀರಾ ಎನಿಸುತ್ತದೆ 😉 ನೀಲಕಂಠರ ಪದ್ಯಕ್ಕೆ ನಿಮ್ಮ ಪ್ರತಿಕ್ರಿಯೆ ನೋಡಿದಾಗಳೇ ಗೊತ್ತಾಯಿತು.

  7. ಇಡುತುಂ ಪೆಜ್ಜೆಯನೊಲ್ಮೆಯಿಂದಲೊಡನೇ ಬಂದಿರ್ದ ವೈದೇಹಿಯಾ
    ನಡುಗಾಡೊಳ್ ಸಲೆ ಮಾಯಗೊಂಡ ಚಣದೊಳ್ ವಿಭ್ರಾಂತಿಯಿಂ ರಾಮನೇ
    ತಡಕಾಡುತ್ತೆ ಕುಟೀರ ಕಾನನದೆ ಮೇಣ್ ತನ್ನಳ್ತಿಯಂ ಕೂಗುತುಂ
    ಬಿಡು!ನೀನಿಲ್ಲದ ಬಾಳ್ತೆಯಿಂದೆನಗೆ ಹಾ! ಸಾಕೆನ್ನುತುಂ ಸುಯ್ದನಯ್

    • ಪರಿಹಾರ ಚೆನ್ನಾಗಿದೆ. “ಇಡುತುಂ ಪಜ್ಜೆಯನ್” ಎಂದು ಮಾಡಿದರೆ ಹೆಚ್ಚು ಚೆನ್ನ. ಒಡಮೇ- ಒಡನೇ? ಜತೆಯೊಳ್ ಎಂದು ಮಾಡಬಹುದು. “ನಡುಕಾಂತಾರ” ಆಗದು. ನಡುಗಾಡೊಳ್/ ನಡುಗಾನೊಳ್ ಎಂದು ಮಾಡಬಹುದು. ರಾಮತಾಂ- ರಾಮಂ ತಾಂ ಆಗಬೇಕು, ರಾಮನೇ ಎಂದು ಮಾಡಬಹುದು. ಕಾನನವ- ಕಾನನದೆ.

  8. ಬೇಕು ಬೇಕೆಂದೆಂಬುವಾಸೆಗಳ ಕೋಟೆಯೊಳ್
    ನೂಂಕುತ್ತೆ ಬಾಳ್ವೆಯಂ ನಡೆಸಿರ್ಪನುಂ
    ಶೋಕದಿಂದುರುಳಿರಲು ಮರಣಶಯ್ಯೆಯೊಳಕಟಾ!
    ‌”ಬೇಕುಗಳೆ “ಸಾಕೆನ್ನುತುಂ ಸುಯ್ದನಯ್

  9. ಮತ್ತೇಭವಿಕ್ರೀಡಿತ:

    ಮಡದೀಯೊರ್ವಳು ನಿಲ್ಲಲಾರಳ್ ಗಡಾ ಮೂರ್ಕಾಲಮುಂ ಚಂಚಲಳ್
    ಕಡಲಿನ್ ಆರ್ಭಟಮಂ ಸ್ವಭಾವದೊಳೆ ತಾಂ ಮೈವೆತ್ಘಳ್ ಸಾಜದೊಳ್
    ಜಡಳೈ ಗಂಡನನೊಮ್ಮೆಯೂ ನುಡಿಸಳೈ ಆ ಭೂಮಿಯೆಂದೆನ್ನಿಸಲ್
    ಮಿಡುಕುತ್ತಾ ಮರವಾದೆನೆಂದು ಹರಿ ತಾ “ಸಾಕೆನ್ನುತುಂ ಸುಯ್ದನಯ್

    ಒಬ್ಬ ಹೆಂಡತಿಯೋ (ಲಕ್ಷ್ಮಿ) ಅತಿ ಚಂಚಲೆ, ಮೂರು ಗಳಿಗೆ ನಿಂತಲ್ಲಿ ನಿಲ್ಲಲಾರಳು. (ತಂದೆಯಾದ) ಸಮುದ್ರನ ಆರ್ಭಟಿಸುವ ಮನೋವೃತ್ತಿಯನ್ನೂ ಶಾಂತವಾಗಿರದ ಗುಣವನ್ನೂ ಸಹಜವಾಗಿಯೇ ಮೈವೆತ್ತಿದ್ದಾಳೆ. ಇನ್ನೊಬ್ಬ ಹೆಂಡತಿಯಾದ ಭೂಮಿಯೋ, ಒಮ್ಮೆಯಾದರೂ ಗಂಡನನ್ನು ಮಾತೂ ಆಡಿಸದ ಜಡಳು. ಹೀಗಾಯ್ತಲ್ಲಾ ತನ್ನ ಪಾಡು ಎಂದು ಮಿಡುಕುತ್ತಾ ಹರಿ “ಸಾಕಪ್ಪಾ ಸಾಕು ನನ್ನ ಪಾಡು” ಎಂದು ಮರವಾಗಿ ಹೋದನು.

    (ಪುರಿಯ ಜಗನ್ನಾಥನ ವಿಗ್ರಹವು ಮರದಿಂದ ಮಾಡಿರುವುದ ಬಗ್ಗೆ ಇರುವ ಈ ಈ ಕೆಳಗಿನ ಪದ್ಯದ ಮೊದಲ ಮತ್ತು ಕೊನೆಯ ಸಾಲುಗಳ ಸಾರಾಂಶವನ್ನು ತೆಗೆದುಕೊಂಡು ಬರೆದ ಛಾಯಾ ಪದ್ಯ ನನ್ನದು)

    ಏಕಾ ಭಾರ್ಯಾ ಪ್ರಕೃತಿರಚಲಾ ಚಂಚಲಾ ಚ ದ್ವಿತೀಯಾ
    ಪುತ್ರೋSನಂಗಸ್ತ್ರಿಭುವನಜಯೀ ಮನ್ಮಥೋ ದುರ್ನಿವಾರಃ |
    ಶೇಷಃ ಶಯ್ಯಾ ವಸತಿರುದಧಿರ್ವಾಹನಂ ಪನ್ನಗಾರಿಃ
    ಸ್ಮಾರಂ ಸ್ಮಾರಂ ಸ್ವಗೃಹಚರಿತಂ ದಾರುಭೂತೋ ಮುರಾರಿಃ||

    ಇನ್ನು ಮರವಾದನು ಅನ್ನುವುದನ್ನು ಶಿಲೆಯಾದನು ಎಂದು ಬದಲಾಯಿಸಿದರೆ ಯಾವುದೇ ಹರಿಯ ವಿಗ್ರಹಕ್ಕಾದರೂ ಇದನ್ನು ಹೊಂದಿಸಬಹುದು.

    (ಮಡದೀಯೊರ್ವಳು ಎಂಬ ಒಂದು ತಪ್ಪು ಪ್ರಯೋಗವನ್ನೇ ಬಳಸಬೇಕಾಯಿತು. ಇನ್ನೂ ತಪ್ಪುಗಳಿದ್ದರೆ ದಯವಿಟ್ಟು ತೋರಿರಿ)

    -ಹಂಸಾನಂದಿ

    • ಮೈವೆತ್ತಿಹಳ್ ಸಾಜದೊಳ್ ಎಂದು ಓದಿಕೊಳ್ಳಿ .

    • ’ಮಡದೀಯೊರ್ವಳು’ ಬದಲು ’ತೊಡೆಯೊಳ್ ಕೂತಳು’ ಎನ್ನಬಹುದೆ 😉

      • 🙂 ಆಗಬಹುದು ಅನ್ನಿಸುತ್ತೆ.

        ಇನ್ನೂ ಒಂದು ಬದಲಾವಣೆಯೂ ಸಾಧ್ಯ- ಇದರಿಂದ ಮೊದಲಸಾಲಿನ ಛಂದೋದೋಷವನ್ನು ನಿವಾರಿಸಿಕೊಂಡೆ. ಆದರೆ ಕಡಲಿನ್ ಆರ್ಭಟಮಂ ಎಂಬಲ್ಲಿನ ವಿಸಂಧಿಯನ್ನು ಸರಿ ಮಾಡಲು ದಾರಿ ತೋರಲಿಲ್ಲ.

        ಉಡುರಾಜಾನುಜೆ ನಿಲ್ಲಲಾರಳು ಗಡಾ ಮೂರ್ಕಾಲಮುಂ ಚಂಚಲಳ್

        • ಹ೦ಸಾ೦ನ೦ದಿಯವರೆ, ಚ೦ಚಲಳ್ ಎ೦ಬುದು ಅಸಾಧು. ಚ೦ಚಲೆ ಎ೦ಬ ಪದ ಚ೦ಚಲಳ್ ಎ೦ದಾಗುವುದಿಲ್ಲ. ಚಾ೦ಚಲ್ಯದಿ೦ ವ೦ಚಿಪಳ್ ಎ೦ದು ತಿದ್ದಬಹುದು. ಮಡದಿ ಪ್ರಾಕೃತೆ … ಎ೦ದು ತಿದ್ದಿದರೆ ಅಸಾಧುಪ್ರಯೋಗದ ನಿವಾರಣೆ, ಹಳಗನ್ನಡಿಸುವಿಕೆ ಎರಡೂ ಆಗುತ್ತದೆ. ಕಡಲತ್ಯಾರ್ಭಟಮ೦ (ಕಡಲ ಅತಿ ಆರ್ಭಟ) ಮಾಡಬಹುದು.

        • ಹಾಗೆಯೇ, ಮೊದಲ ಸಾಲಿನಲ್ಲಿ ಇನ್ನೊ೦ದು ದೋಷವಿದೆ. ನಿಲ್ಲದಿರ್ಪಳರರೇ ಎ೦ದು ತಿದ್ದಬಹುದು.

          ಮಡದಿ ಪ್ರಾಕೃತೆ ನಿಲ್ಲದಿರ್ಪಳರರೇ ಚಾ೦ಚಲ್ಯದಿ೦ ವ೦ಚಿಪಳ್
          ಕಡಲತ್ಯಾರ್ಭಟಮ೦……..

        • ಮಿಡುಕುತ್ತು೦, ಹರಿ ತಾ೦ ಎ೦ದೆಲ್ಲ ಬಳಸಿದರೆ ಹಳಗನ್ನಡದ ರೂಪ ಬಲವಾದೀತು.

    • ನಿಮ್ಮ ಅನುವಾದದ ಉಪಾಯ ಚೆನ್ನಾಗಿದೆ. ನೀಲಕಂಠರ ಸವರಣೆಗಳಿಂದ ಪದ್ಯ ಇನ್ನೂ ಚೆನ್ನಾಗುತ್ತದೆ.

      • ಧನ್ಯವಾಗಳು ನೀಲಕಂಠ ಮತ್ತೆ ಗಣೇಶ ಭಟ್ಟರೆ. ಈಗೀಗಲೇ ಹಳೆಗನ್ನಡವನ್ನು ಸ್ವಲ್ಪ ಮುಟ್ಟಲು ಪ್ರಾರಂಭಿಸಿದ್ದೇನೆ. ಮುಂದೆ ಎಂದಾರರೊಮ್ಮೆ ಸ್ವಲ್ಪ ಸುಧಾರಿಸುವುದೋ ನೋಡಬೇಕು 🙂

  10. ‘ತಾ’ಯೆಂಬಕ್ಷರಮಾತ್ರಮಲ್ತೆ ಜಸಕಂ ಬೀಜಾಕ್ಷರಂ ಬೇಡಮಾ
    ‘ಕೋ’ಯೆಂಬಕ್ಷರದಾವನುಂ ಕುಲದೊಳಂ ದೌರ್ಭಾಗ್ಯಮೇ ದಾನಮೆಂ-
    ದಾಯುಷ್ಯಂಗಳೆದಿರ್ಪ ಪಣ್ಯಪುರುಷಂ ಪಂಚತ್ವಪರ್ಯಂಕದೊಳ್
    ‘ಹಾ’ಯೇಂ ಸಾಲಮನಿತ್ತೆನೋ ಪಡೆದೊಡಂ ಸಾಕೆನ್ನುತುಂ ಸುಯ್ದನಯ್

    • Very good diction Soma. ಪಂಚತ್ವಪರ್ಯಂಕದೊಳ್ – fine word.

    • ಪಣ್ಯಪುರುಷನ ಬಗ್ಗೆಯಾ?!!!! ಒಟ್ಟಾರೆ ಅರ್ಥ ನನಗೆ ಸ್ಪಷ್ಟವಾಗಲಿಲ್ಲ. ಆದರೆ ಚೆನ್ನಾಗಿದೆ.

      • ತಮ್ಮಿಂದ ಹೊಗಳಿಸಿಕೊಳ್ಳುವುದು ಹೇಗೆಂಬ ಗುಟ್ಟು ತಿಳಿಯಿತು ಕೊಪ್ಪಲತೋಟರೆ. ಧನ್ಯವಾದಗಳು.

  11. ಅಂದಂದಿಂದವ ಕಾವ್ಯಮಂ ಕಲಿಯೆ ಗೈಯ್ದುಂ ಪದ್ಯಪಾನಂ ಗಡಾ
    ಇಂದೀಗಳ್ ಕವಿತಾಂ ಸ್ವಯಂ ಸೃಜಿಪ ಪಾಡಂ ಪಿಂದುಮುಂದಿಕ್ಕುತುಂ ।
    ವೊಂದಲ್ ಪ್ರಾಸಪದಂಮಲಂಕರಿಸೆ ವೃತ್ತಾವೃತ್ತದೊಳ್ತಾಂವೃಥಾ
    ಚಂದೋಬದ್ಧದೆ ಪದ್ಯವಂ ರಚಿಪುದೇ ಸಾಕೆನ್ನುತುಂ ಸುಯ್ದನೈ ।।

    ಆಗಾಗ್ಗೆ ಕಾವ್ಯಾಭ್ಯಾಸ ಮಾಡಿ, ಈಗೀಗ ವೃತ್ತದಲ್ಲಿ ಪದ್ಯಗಳನ್ನು ರಚಿಸುತ್ತಿರುವ ಕವಿಯ ಸಮಸ್ಯೆ !!
    (ಸ್ವಾನುಭವದ ಪದ್ಯ !! )

    • ಛಂದೋಬಂಧದ ಪದ್ಯಪಾನರಸದಾಸ್ವಾದಾನ್ವಿತಾಲೋಲಸು-
      ಸ್ಪಂದಪ್ರೋಜ್ಝಿತಕೇಲಿಯೊಳ್ ಮುಳುಗಿದರ್ ಸಾಕೆಂಬರೇನೌ! ಸದಾ-
      ನಂದಕ್ಕಂದದೆ ಸಂದ ಕುಂದದ ವಲದ್ವ್ಯಾಪಾರಪಾರಸ್ಫುರ-
      ಚ್ಛಂದಂ ನಿರ್ನೆರಮಾದುದೌ ಪರಮಸಂಧಾನಕ್ಕೆ ಯೋಗ್ಯಂ ವಲಂ!!

      • “ಮಂದಾಕ್ರಾಂತದ ಪದ್ಯವೆನ್ನದದಕೇಂ ಶಾರ್ದೂಲವಿಕ್ರೀಡಿತಂ” !!
        ಧನ್ಯವಾದಗಳು ಕೊಪ್ಪಲತೋಟ.

      • ಭಟ್ಟ ತೋಟರು ಸ್ವಲ್ಪ ಅರ್ಥ ತಿಳಿಸುವ ಕೃಪೆ ಮಾಡಬೇಕು 🙂

    • ಉಷಾರವರೆ,

      ಪದಂ + ಅಲಂಕರಿಸೆ = ಪದಮಲಂಕರಿಸೆ
      ಪ್ರಾಸಪದಂಮಲಂಕರಿಸೆ – ಇಲ್ಲಿ ಸ್ವಲ್ಪ ತೊಂದರೆಯಿದೆ. ಇದು ಪದಂ + ಮಲಂಕರಿಸೆ ಎಂಬಂತೆ ತೋರುತ್ತದೆ
      🙂

      • ಹೌದು ರಾಮಚಂದ್ರ ಸರ್, ಇದೇ ಸಮಸ್ಯೆ!!
        “ವೊಂದಲ್ ಪ್ರಾಸಪದಂಗಳಂ ಬೆಸೆದು ವೃತ್ತಾವೃತ್ತದೊಳ್ತಾಂವೃಥಾ” ಎಂದು ಸವರಿಸುವೆ.

      • ರಾಮ್, ಆ ಅವಾಚ್ಯವನ್ನು ಹೇಗೆ ಹೇಳುವುದು ಎಂದು ಸುಮ್ಮನಿದ್ದೆ.

        • ಓ… ಈಗ ಅರ್ಥವಾಯಿತು !!
          (ನಿಮ್ಮ ಈ ಪ್ರತಿಕ್ರಿಯೆ ಬಹುಶಃ ನನ್ನ ಎರಡನೇ ಪದ್ಯಕ್ಕಿದ್ದಿರಬಹುದು ಎಂದುಕೊಂಡಿದ್ದೆ, ಪ್ರಸಾದ್ ಸರ್ !)

  12. ಬೇಕಾಬಿಟ್ಟಿಯುಗುಳ್ವ ಕರ್ಬೊಗೆವುಗಲ್ ಮೂಗಂ ಮಗುಳ್ ಕರ್ಣಕಂ
    ಕಾಕೋಲೂಕಸಮಾಕುಲಂ ಗಜರಿತೇನೆಂಬಂತೆ ಶಬ್ದಂಗೊಳಲ್
    ಲೋಕಾಳಿಪ್ರಶಮಂಗೆಡುತ್ತೆ ನೆರೆದಿರ್ಪೋಲ್ಗಾಂಬ ಸಮ್ಮರ್ದಮುಂ
    ನೂಕಲ್ಕೀ ಬಿಡದಿರ್ಪ ಬಾಳ್ತೆ ಪಥದೊಳ್ ಸಾಕೆನ್ನುತುಂ ಸುಯ್ದನಯ್

    • ಮೂಗಂ~ಕರ್ಣಮಂ

    • ಚೆನ್ನಾಗಿದೆ. ಆದರೆ ನೆರೆದಿರ್ಪೊಲ್ ಗಿಂತ ನೆರೆದಿರ್ಪವೊಲ್ ಆದರೆ ಚೆನ್ನ.ಅಥವಾ ನೆರೆದಂದಂ ಕಾಣ್ಬವೊಲ್… ಹಾಗೇ ಬೇಕಾಬಿಟ್ಟಿ ಶಬ್ದ ಅಷ್ಟು ಶುದ್ಧ ಅಲ್ಲ. ಕೇವಲ ಆಡುಮಾತಿನ ಶಬ್ದವಷ್ಟೆ. ನೂಕು- ನೂಂಕು ಹೆಚ್ಚು ಸೂಕ್ತ.

  13. ಉತ್ತೀರ್ಣಂಗೊಳೆ ವಿದ್ಯೆಯೊಳ್ ಜಯಮದೇ ಸಾಕೆನ್ನುತುಂ ಬಾಲ್ಯದೊಳ್,
    ಮುತ್ತೊಂದಂ ಕುಡೆ ವಿದ್ಯೆ ಸಾಕೆನಿಪ ಕೌಮಾರ್ಯಂ ಗಡಂ, ವಿದ್ಯೆಯಿಂ
    ತುತ್ತನ್ನಂ ಗಳಿಸಲ್ಕೆ ಸಾಕೆನುತೆ ಗೆಯ್ದಂ ಕಜ್ಜದೊಳ್, ಮುಪ್ಪೊಳುಂ
    ಚಿತ್ತೈಕಾಗ್ರತೆಯಾಂತವಿದ್ಯೆಯುಳಿಯಲ್ ಸಾಕೆನ್ನುತುಂ ಸುಯ್ದನಯ್

    • ಆಹಾ! ಲೋಕದ ವಾರ್ತೆಯಂ ಸರಸದಿಂ ಸೋಮಣ್ಣ ತ್ವತ್ಪದ್ಯದೊಳ್
      ಮೋಹಾತೀತಮೆನಿಪ್ಪವೋಲೆ ಬರೆದಿರ್ಪೀ ಬಲ್ಮೆಯೇ ಸಲ್ವುದೈ!
      ಬಾಹುಲ್ಯಂ ನೆರೆದಿರ್ಪ ಪೂರ್ವದ ಭವತ್ಪದ್ಯಪ್ರಪಂಚಕ್ಕಂ ಮಗುಳ್
      ವಾಹ್ ಎಂಬೆಂ ನಮಿಸುತ್ತೆ ಮುಕ್ತಕಮಿದೋ ಎನ್ನಿಂದಮೊರ್ಗಾಣ್ಕೆಯೈ||

  14. ಕರಿಮೋಡಂಗಳೆ ಕೂರ್ಮೆಯಿಂದಲಮಮಾ ಬಾನಂ ದಿಟಂ ಸೇರುತುಂ
    ಪರಿಸಲ್ಕಂದದ ಹಾಸವಲ್ಲರಿಯನೇ, ವಿದ್ಯುಲ್ಲತಾರೂಪದೊಳ್!
    ಸಿರಿಯಾಣ್ಮಂಗೆದುರಾಗೆ ಶಿಕ್ಷೆ ಪಡೆದಾ ಯಕ್ಷಂ ಮಹಾದು:ಖದೊಳ್,
    ಸುರಿವಾಷಾಢದೊಳೊಂಟಿ ಜೀವನಮಿದೋ ಸಾಕೆನ್ನುತುಂ ಸುಯ್ದನಯ್
    (ಸಿರಿಯಾಣ್ಮ=ಕುಬೇರ?)

    • ಒಳ್ಳೆಯ ಪದ್ಯ. ಎರಡನೆ ಸಾಲಿನಲ್ಲಿ ‘ಪರಿಸಲ್’ ಎಂದು ಮಾಡಿದರೆ ಹೆಚ್ಚು ಚೆನ್ನ. ಭಾಸದೊಲ್- ಭಾಸದವೊಲ್ ಎಂದಾದರೆ ಒಳ್ಳೆಯದು. ವಿದ್ಯುಲ್ಲತಾಭಾಸಮೈ ಎಂದು ರೂಪಕ ಮಾಡಬಹುದು.

      • ಧನ್ಯವಾದಗಳು ! ವಿದ್ಯುಲ್ಲತಾಭಾಸಮೈ ಎಂದರೆ ಅರ್ಥಕ್ಕೆ ತೊಡಕಾಗಬಹುದೆಂದು ತಿಳಿದು,ಮೇಲ್ಕಂಡಂತೆ ತಿದ್ದಿರುವೆ.

  15. ಮೆಟ್ಟಲ್ ಕಾಲ್ಗಳನೊಂದೆ ನೋವು ಜತೆಯೊಳ್ ಪಾರ್ಶ್ವಾಸನಸ್ಥರ್ಕಳಿಂ
    ಕುಟ್ಟುತ್ತಿರ್ಪ ಶಿರೋಹತಿ ಪ್ರಕಟದುರ್ವಾಕ್ಯಪ್ರಕಾಮಂ ಜನಂ
    ಕೊಟ್ಟಾ ಚೀಟಿಯೊಡಂ ಸ್ವವಿತ್ತಮಕಟಾ ಚೋರರ್ಗೆ ಸಂದಿರ್ದೊಡಂ
    ಕೆಟ್ಟಂ ಭಟ್ಟನೆ ಲೋಕಯಾನಗಮನಂ ಸಾಕೆನ್ನುತುಂ ಸುಯ್ದನೈ||
    (ಕಾಲನ್ನು ಮೆಟ್ಟುವಾಗ ಒಂದೆ ನೋವು? ಪಾರ್ಶ್ವಾಸನದಲ್ಲಿರುವವರ ಶಿರಸ್ಸಿನಿಂದ ಕುಟ್ಟುತ್ತಿರುವುದು, ದುರ್ವಾಕ್ಯಗಳನ್ನೇ ಆಡುವ ಜನ, ಕೊಟ್ಟ ಚೀಟಿಯ ಜೊತೆ ತನ್ನ ಹಣವೂ ಕಳ್ಳರ ಪಾಲಾಯ್ತು. ಹೀಗೆ ಕೆಟ್ಟ ಭಟ್ಟನು ಲೋಕಯಾನ( bus)ದಲ್ಲಿ ಹೋಗುವುದು ಸಾಕೆಂದು ಸುಯ್ದ)

    • ಚೆಕ್ಕಿಂಗ್ನೋರ್ಬಂದಿದ್ರೆ ಸಿಕ್ಕಾಕ್ಕೊಂಡಿದ್ದಿದ್ರೆ
      ಪೊಕ್ಕುವಂತಾಗಿ ಸೆರೆಯನ್ನು| ಲೋಕವು
      (ಕಗ್ಗಂಟು)ಸಿಕ್ಕಾಗುತ್ತಿತ್ತು ಮತ್ತೂವೆ||
      —-
      ನಿಮ್ಮನ್ನು ಕುಟ್ಟುತ್ತಿದ್ದುದು ಪಕ್ಕದ ಆಸನದಲ್ಲಿ ನಿಂತಿದ್ದವನ (ಸ್ಥ) ಶಿರವೆ? 😉

    • ಭಟ್ಟರ್ ಚಿತ್ರಿಸಲಾತ್ಮವೃತ್ತಮನೆ, ಪದ್ಯಂ ಭೂರಿವೈನೋದಿಕಂ 🙂

  16. ತರುಪುಷ್ಪಂಗಳೆ ತಮ್ಮವೆಂದುಬಗೆವಾ ,ಭೃಂಗಂಗಳಿರ್ಪಂತೆವೊಲ್,
    ವರನೀಲಾಂಬರಮೆಮ್ಮದೆಂದು ಮೆರೆವಾ, ತಾರಾಳಿಯಂ ಪೋಲುತುಂ,
    ನಿರುತಂ ಪಾಡುತೆ ಬರ್ಪ ಸೊಳ್ಳೆಗಳಿರಲ್ಕಾತ್ಮೀಯರಾ ವೇಷದೊಳ್,
    ಪುರುಷಂ ವಾಸಮೆ ಬೆಂಗಳೂರಿನೊಳಗಂ ಸಾಕೆನ್ನುತುಂ ಸುಯ್ದನಯ್!

    • ಕಾಂಚನಾ, ಮೂರನೇ ಪಾದದಲ್ಲಿ ಛಂದಸ್ಸು ಕೆಟ್ಟಿದೆ. “ನಿರುತಂ ಪಾಡುತುಮೆಲ್ಲ ಸೊಳ್ಳೆಗಳಿರಲ್,ಸಸ್ನೇಹದಿಂ ಮುತ್ತುತುಂ ” ಎಂದು ಸವರಿದಲ್ಲಿ ಸರಿಯಾಗುವುದು. “ಉಲಿಯುವ”- ಉಲಿವ ಆದಲ್ಲಿ ಒಳಿತು. ಪುರಬೆಂಗ್ಳೂರು – ಸಾಧುವೆ ?ನಕ್ಷತ್ರನೈಪುಣ್ಯಮೋ!- ನಕ್ಷತ್ರಪುಂಜಂಗಳೋ ! – ಎಂದಾಗಬೇಕೆ ? ಪದ್ಯದ ತಾತ್ಪರ್ಯ ತಿಳಿಯಲಿಲ್ಲ.

      • ನನ್ನ ಪದ್ಯವೇ ನನ್ನಲ್ಲಿ ಗೊಂದಲವನ್ನುಂಟುಮಾಡಿರಲಾಗಿ,ಈಗ ಸವರಣೆಯನ್ನು ಮಾಡಿದ್ದೇನೆ 🙂 . ಇಲ್ಲಿ ಸೊಳ್ಳೆಗಳ ತರವೇ , ದುಂಬಿಗಳ ಮತ್ತು ನಕ್ಷತ್ರಗಳ ಸ್ವಾರ್ಥಪರವಾದ ಗುಣವನ್ನು ತೋರಬಯಸಿದೆ

    • ಮತ್ತೆ ಕೆಲವು ಸವರಣೆಗಳು: ಉಸುರುವಾ- ಉಸುರ್ವಾ ಆಗಬೇಕು. ಆದರೆ ಛಂದಸ್ಸಿಗೆ ಹೊಂದುವುದಿಲ್ಲ. ಅದಕ್ಕಾಗಿ “ತಮ್ಮವೆಂದು ಬಗೆವಾ ” ಎಂದು ತಿದ್ದಬಹುದು. ಭೃಂಗಂಗಳಿಂಗೊಪ್ಪುತುಂ- ಇಲ್ಲಿ ವ್ಯಾಕರಣವು ತಪ್ಪಿದೆ. “ಭೃಂಗಂಗಳಿರ್ಪಂತೆವೋಲ್” ಎಂದು ಸವರಬಹುದು.”ಪುರಬೆಂಗ್ಳೂರೊಳು ವಾಸಮಿಂದಿಗಮಮಾ ಸಾಕೆನ್ನುತುಂ ಸುಯ್ದನಯ್”- “ಪುರುಷಂ ವಾಸಮೆ ಬೆಂಗಳೂರೊಳೆನಗಂ ಸಾಕೆನ್ನುತುಂ ಸುಯ್ದನಯ್ ” ಎಂದಾಗಿಸಬಹುದು. ಹೀಗೆ ಮಾಡುವುದರಿಂದ , ಯಾವಾತನು ಸುಯ್ದನೆನ್ನುವುದಕ್ಕೆ ಪದ್ಯದಲ್ಲಿ ಉತ್ತರವು ದೊರಕಿದಂತಾಗುವುದಲ್ಲದೆ, ಪುರಬೆಂಗ್ಳೂರನ್ನೂ ತಪ್ಪಿಸಬಹುದು( ಪುರಬೆಂಗ್ಳೂರು -ಪ್ರಯೋಗವು ಸರಿಯಿರಲಾರದೆನಿಸುತ್ತದೆ) ಸಾಧ್ಯವಾದಷ್ಟು ಮಟ್ಟಿಗೆ ಪದ್ಯದಲ್ಲಿ” ಆ” ಗಳನ್ನು ಬಳಸದಿದ್ದಲ್ಲಿ ಒಳಿತು.

      • ಪದ್ಯದಲ್ಲಿ ಸವರಣೆಯನ್ನು ಮಾಡಿರುವೆ. ನೀವು ತಿಳಿಸಿದಂತೆ,” ಆ” ಬಳಕೆಯನ್ನು ತರದಿರಲು ಪ್ರಯತ್ನಿಸುವೆ. ಧನ್ಯವಾದಗಳು!

        • ನಮ್ಮ ಪದ್ಯವನ್ನು ಓದಿದವರು ಸಾನಂದಾಶ್ಚರ್ಯ ಆ ಆ ಎಂದರೆ ಸಾಕು. ನಾವೇ ಆ ಆ ಎಂದು ಪದ್ಯದಲ್ಲಿ ಬರೆಯುವುದು ಬೇಡ 🙂

  17. ಸುಖಸಂಸಾರದ ಗೋಜುಗೊಂದಲವಿದುಂ ಮಾಸಾನುಮಾಸಂ ಗಡಾ
    ನಿಖರಂ ಕಾಣ್ ಗೃಹಕೃತ್ಯ ಮೂರುದಿನದೊಳ್ಗಟ್ಟುಣ್ಣುವಾ ಕಟ್ಟದುಂ
    ಶಿಖೆಯಂ ಬಂಧಿಸಲೆಂತದೋ ಸೆಣಸುದುಂ ತನ್ನಲ್ಮೆ ಪೆಂಣ್ಗಳ್ಗವಂ
    ಸಖ ಸಂಭಾಳಿಸೆ ಬಾಳ ನೀರ್ಕುಡಿದವಂ ಸಾಕೆನ್ನುತುಂ ಸುಯ್ದನಯ್ ।।

    ತಿಂಗಳ ಮೂರು ದಿನದ ಗಂಡನ ಪಾಡು – ಮನೆಗೆಲಸ / ಅಡುಗೆ / ಹೆಣ್ಣುಮಕ್ಕಳಿಗೆ ಜಡೆ ಹೆಣೆಯುವುದು …..!!

  18. ಕುಕವಿವ್ರಾತದ ಮುಂದೆ ಕಾವ್ಯರಸಮಂ ಕಟ್ಟಿಟ್ಟು ಕೊಳ್ಳಿಂ ರುಚಿ-
    ಪ್ರಕರಂ ಮೋದಕಮೆನ್ನಲೇಂ ಜ್ವರಹತರ್ಗಂ ಜಿಹ್ವೆಯಗ್ರಂಥಿಗಳ್
    ಪ್ರಕಟಂಗೊಳ್ಳದೊಲಾಯ್ತು ಗೋಗರೆದೊಡೇಂ ಬೋರ್ಗಲ್ಲಿಗಂ ಸ್ನಾನದಂ-
    ತಕಟಾ ಗಂಟಲ ನೋವಿನಿಂ ಕವಿವರಂ ಸಾಕೆನ್ನುತುಂ ಸುಯ್ದನಯ್

  19. ಶೀತಂ ಬಾಧಿಸೆ ವೃಧ್ಧನಂ,ಜ್ವರದೆ ಸಂಕಷ್ಟಂಬಡಲ್ ಸಂತತಂ,
    ವಾತಂ ಪೀಡಿಸೆ, ಕಾಲ ನೋವ ಕತದಿಂ ಪಾಸೊಳ್ ಮಲಂಗುತ್ತಿರಲ್,|
    ದಾತಾರರ್ ಪರಿಚರ್ಯೆಗಿಲ್ಲದೆ, ಮಹಾದಾರಿದ್ರ್ಯಸಂತಾಪದೊಳ್,
    ಪ್ರೇತಂ ಕಾಡಿದವೋಲೆ ಸೋಲ್ತು, ನರಕಂ ಸಾಕೆನ್ನುತುಂ ಸುಯ್ದನಯ್ ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)