Jan 242016
 

Giraffe

  85 Responses to “ಪದ್ಯಸಪ್ತಾಹ ೧೮೬: ಚಿತ್ರಕ್ಕೆ ಪದ್ಯ”

 1. ಎತ್ತೆರೆತ್ತರಮೊಪ್ಪಿದಂತಿರೆ
  ಕುತ್ತಿಗೆಯ ಬಲುಚೆಲ್ವಿನಲಿ ನಲಿ
  ಯುತ್ತ ಮರಿ ತಾಯೆಡೆಗೆ ಚಾಚಿರಲಿಂತು ತುತ್ತುಗೊಳೆ
  ಕುತ್ತುಗಳ ನಡುವೊಳ್ ಪ್ರಕೃತಿ ತಾ-
  ಯಿತ್ತ ವಸ್ತುವನೆತ್ತಿಕೊಳ್ವೆಡೆ-
  ಗೆತ್ತರೆತ್ತರಕಾಯ್ತೆ ಬೆಳೆಬೆಳೆಯುತ್ತೆ ಜೀವಕುಲ

  ತಾಯಿ ಕೊಡುವ ತುತ್ತಿಗೆ ಗೋಣು ಚಾಚುತ್ತ ಮರಿಯೂ ಬೆಳೆಯುತ್ತದೆ. ಪ್ರಕೃತಿ ತಾಯಿ ಕೊಡುವ ಆಸೆಯ ವಸ್ತುಗಳನ್ನು ಕೊಳ್ಳಲು ಹೀಗೆಯೇ ಜಿಗಿಜಿಗಿದು ಜೀವಕುಲ ಬೆಳೆಯುತ್ತಿದೆಯಲ್ಲ…

 2. ಭೂಮ್ಯಂತರಿಕ್ಷಪಥವಿಕ್ರಮಸಾಧನಾಪಾ-
  ರಮ್ಯೋತ್ಸವಶ್ರಮಭರಂ ಮನಮಾದೊಡೇಂ ತ-
  ದ್ರಮ್ಯಾತಿರಮ್ಯಗತಿಸಿದ್ಧಿಯದೇಂ ಕಣಾ ದು-
  ರ್ದಮ್ಯಕ್ಷುಧಾಶಮನಕಂ ಪಿಡಿಪುಲ್, ಜಗಂ ಕಾಣ್

  ಅಷ್ಟೆತ್ತರದಿಂದ, ಭೂಮ್ಯಂತರಿಕ್ಷಯಾನಗೈದು ಬಂದಿತೇ ಎಂಬಂತೆ ಉತ್ಸಾಹಭರಿತವಾಗಿ ಕುಣಿದಾಡುವ ಮನವೇ, ತಂದದ್ದಾದರೂ ಏನು?! ಹೊಟ್ಟೆ ಹಸಿವಿಗೆ ಒಂದು ಹಿಡಿ ಹುಲ್ಲು. ಇದೇ ಸಾಮಾನ್ಯವಾಗಿ ಈ ಜಗದ ವರ್ತನೆ.

 3. ವಾಣೀವಲ್ಲಭನೊರ್ಮೆ ಸೃಷ್ಟಿಗತಿಯೊಳ್ ವಿಶ್ರಾಂತಿಯಂಗೊಳ್ಳೆ ತ-
  ದ್ವೀಣಾಪಾಣಿ ಸರಸ್ವತಿ ಪ್ರಕಟಿತಾತ್ಯಾಸಕ್ತಿಯಿಂ ಕಾರ್ಯದೊಳ್
  ಕ್ಷೋಣೀರಂಗದೊಳುಚ್ಚಕಂಠಕೃತಿಯಂ ಮಾಡಿಟ್ಟಳುತ್ಸಾಹದೊಳ್
  ವಾಣೀಮೋಹದೊಳಾಳ್ದು ವಿಸ್ಮೃತಿಯೊಳೇ ನೀಡಲ್ ಗುಣಾಂಶಂಗಳಂ

  ಬೊಮ್ಮನೊಮ್ಮೆ ವಿಶ್ರಾಂತಿ ಪಡೆವಾಗ ಸರಸ್ವತಿಯು ಅಧಿಕಪ್ರಸಂಗದಿಂದ ತಾನೂ ಸೃಷ್ಟಿಕಾರ್ಯ ಮಾಡುತ್ತೇನೆಂದು ತನ್ನ ವಾಗ್ಮಿತಾಮೋಹದಿಂದ ಅತ್ಯಂತ ಉಚ್ಚಕಂಠದ ಜೀವಿಯೊಂದನ್ನು ಸೃಜಿಸಲು ತೊಡಗಿ ಈ ಒಂದು ಆಕಾರವನ್ನು ಮಾಡಿಟ್ಟಳು. ಆದರೇನು, ಬರೀ ಉತ್ಸಾಹ, ಮಾಡುವ ಕಾರ್ಯದಲ್ಲಿ ಕೌಶಲ್ಯದ ಅಭಾವ, ಆಕಾರಕ್ಕೆ ತಕ್ಕ ಗುಣಗಳನ್ನೇ (ಮಾತಾಡುವ, ಹಾಡುವ) ಕೊಡಲು ಮರೆತಳು.

 4. “ಅಮ್ಮ ಇದನೆಲ್ಲಿ ತಂದೆ?” “ಮುಗಿಲಮೇಲಿಂದೆ ತಂದೆನಿದ ಕೋ”
  “ಕಮ್ಮಕಮ್ಮಗೇ ಚೆಲ್ವಿನೀ ಪುಲ್ಲು ಬೆಳೆದ ಬೆಳೆಗಾರನಾರ್?”
  “ಬೊಮ್ಮನಿದ ಬೆಳೆದ ಚಂದ್ರನಿತ್ತ ಸುಧೆ ತಾರೆಯಾರೈಕೆ ಕಾಣ್
  ಹಮ್ಮಿನಿಂ ಕಾಯ್ವ ಇಂದ್ರಸುತರ ಕಣ್ಕಟ್ಟಿ ತಂದೆ ತಿನ್ನೋ”

  ಮಗು ತಾಯಿಯ ನಡುವಿನ ಸಂಭಾಷಣೆ 🙂

  • ಛಂದಸ್ಸು ಯಾವುದು?

   • ಯಾಕ್ರೀ ಹೆದರಸ್ತೀರಾ? ಆಶುಕವಿತಾಗೋಷ್ಠಿಯಲ್ಲಿ ಆವಾಗಾವಾಗ ರಾಮಚಂದ್ರ ಸರ್ ಹೇಳುತ್ತಿರುತ್ತಾರಲ್ಲ. ಸಂತುಲಿತಮಧ್ಯಾವರ್ತಗತಿ ಅಲ್ಲವೇ? ಶ್ರೀಶರಿಂದ ಕಲಿತದ್ದು. ೩ * (೩ + ೫) + ಗುರು.

    • ಸಂತುಲಿತಮಧ್ಯಾವರ್ತಗತಿ ಎರಡು ಗುರುಗಳಿಂದಲೇ ಮುಕ್ತಾಗೊಳ್ಳುವ ಪದ್ಯಗಳನ್ನೇ ಓದಿಕೊಂಡು ‘ನಾ ನಾ’ ಎಂದು ಅಂತ್ಯವಾಗದಿದ್ದುದರಿಂದ ಸ್ವಲ್ಪ ಕನ್ಫೂಸ್ ಆಯ್ತು, ಇದೂ ಸರಿಯಾಗಿಯೇ ಇದೆ…

     • ಓಹೋ, ಗುರುದ್ವಂದ್ವಾಂತ್ಯವೂ ಇದೆಯಾ? ಹಾಗಾದರೆ ಅದೇ ಇನ್ನೂ ಚೆನ್ನ. ಕೊಳ್ಳಯ್, ನಾರೌ, ಕಾಣೋ, ನಾಂ ತಿನ್ನೋ ಎಂದು ತಿದ್ದುತ್ತಿದ್ದೇನೆ 🙂

     • ಗುರುದ್ವಂದ್ವಾಂತ್ಯವೂ ನಿಯಮವಲ್ಲದೆ ನನ್ನ ಅನಿಸಿಕೆಯಿರಬಹುದು, ಗಣೇಶರಲ್ಲಿ ಕೇಳಿ ತಿಳಿಯೋಣ 🙂

  • ತಿಳಿಯೆಯೇನು ವ್ಯತ್ಯಾಸ ಪಿರಿಯ ಚಿತ್ರೋಷ್ಟ್ರದೊಳ್ ಗಡಂ ನೀಂ
   ತಳಿಯು ಗಂಡೊ ಹೆಣ್ಣಹುದೊ ಎನ್ನುತುಂ, (ಹೇ,) ನೀಲಕಂಠ ಕರ್ಣಿ|
   ತುಳಿಯೆ ನೀಂ ಸ್ವತಂತ್ರನಪೆ ಅಡ್ಡದಾರಿಯನುಮಾಗಳೀಗಳ್
   ತೊಳಗುಪೂವ ನೀನಿಕ್ಕಲೇತಕೈ ಎಮ್ಮಯೆರಡುಕಿವಿಯೊಳ್|| 🙂

   • ಜಿರಾಫೆಯನ್ನು ಕಂಡದ್ದೇ ನೆನಪಿಲ್ಲ. ಇನ್ನು ವ್ಯತ್ಯಾಸ ಗೊತ್ತಾಗುವುದು ಹೇಗೆ 🙂

 5. ಬರಗಾಲಮನೇ ತೋರ್ಪೀ
  ತಿರೆ-ಬಿರುಕಂ ಪೋಲ್ವ ಚರ್ಮಮಂತೆಯೆ ಕಂಠಂ
  ಚಿರವರ್ದಿಪ ಪಶುವಿಂ ತಾಂ
  ಮರಿಗಂ ಪೇಳಲ್ಕೆ ಮೂಕಪಾಠದ ಯತ್ನಂ

 6. ಎತ್ತರದೀ ಜೀವಿ ಬೇರೆಲ್ಲರಂತೆಯೇ
  ಹೊತ್ತಿರೆ ತಾಯಿಯ ಪಟ್ಟ,
  ಎತ್ತಿ ಮುದ್ದಾಡುವ ಸೊಗಮಿಲ್ಲದಿರ್ದರೂ
  ಬತ್ತಿತೇ ಪ್ರ್ರೀತಿಯ ಮಟ್ಟ?

 7. ಆಲಸ್ಯದಿಂದಿರ್ಪ ತನ್ನಯಾ ಸುತನಿಗಂ
  ಬಾಳಲ್ಲಿ ಕಲಿಸಲು ಶ್ರಮಭರಿತ ಜೀವನವ
  ನೀಳದಾ ಸೊಪ್ಪಪಸಿರನ್ನು ತಾ ತಿಂದುಂಡುಳಿಸಿಹಳೈ ಕೆಲವೆಲೆಗಳಂ
  ಕೂಳಿನಿತ ಕೊಡದಿರಲು ತನಯನಂ ಕೇಳಲೈ
  ಬಾಳಲಾಲಸಿಯಾಗದೆಯುಪಹಾರವೆನ್ನಯ
  ನೀಳ ದೇಹದೆತ್ತರದಲಿರಲು ವ್ಯಾಯಾಮದಿಂದುಣ್ಣು ನೀನೆಂದಳೈ

  • 5th line – ರವೆನ್ನಯ, 6th line – ಹದೆತ್ತರ, ಲಗಂ pattern has appeared.

   • ಅಂಕಿತಾ, ಪ್ರಯತ್ನ ಚೆನ್ನಾಗಿದೆ ನೀಲಕಂಠರೆಂದಂತೆ ಲಗಂ ಸವರಣೆ ಮಾಡು

 8. ಮೇದಿನಿಯೆ ಪೋಷಿಸಲ್ಕೆಲ್ಲರಂ ಕೊನೆವರೆಗು,
  ಮೋದದಿಂ ತನ್ನೆಲ್ಲಮನ್ನೆರೆಯುತುಂ,
  ಪಾದಂಗಳನ್ನೂರಿ ನವಲೋಕಮಂ ತಿಳಿವ
  ಗಾದರದಿನುಣಿಸೀವುದಸಹಜವೆ?ತಾಯ್!

  (ಮೇದಿನಿಯು ಸಾವವರೆಗೂ ಸಕಲರನ್ನೂ ಪೋಷಿಸುತ್ತಿರುವಾಗ,ಕಾಲನ್ನು ಈಗಷ್ಟೇ ಊರಿರುವಗೆ,ಉಣಿಸಿಯುತ್ತಿರುವದರಲ್ಲಿ ಅಸಹಜತೆಯೇನಾದರೂ ಇದೆಯೇ!)

  • ಚೆನ್ನಾಗಿದೆ ತಾಯ ವಾತ್ಸಲ್ಯದ ಪದ್ಯ.

   ಕೊನೆವರಂ, ಅಸಹಜಮೆ ಅಂದರೆ ಇನ್ನೂ ಚೆನ್ನ

 9. “ಕಪಟವಿದೇಂ? ತಾಯೆಂಜಲಿ-
  ನಪತ್ರವೆನ್ನದಿರು, ನಿಂಗೆ ಪಸಿಯದುದರವೇಂ ?”

  “ಉಪನಯನವಾಗಿಹುದೆನಗೆ
  ನೆಪವೊಡ್ಡಿ ತಿನಿಸದಿರೆನಗೆ ಮಮತೆಯ ಮಂಮಂ…!!”

 10. Miserly God!
  ಕಂಡು ತೋಷಂಗೊಳಲ್ ಸ್ವರ್ಗದೌನ್ನತ್ಯದಿಂ-
  ದಾಂಡವಂ ಸೃಜಿಸಿಹಂ ಮಿಗಮನಿಂತುಂ|
  ದಂಡಮಲ್ಲಮೆ, ಕಾಣದಿಹ ಪೊಡೆಯು ಚಿತ್ತಾರ-
  ಗೊಂಡಿರ್ದೊಡೇಂ ಫಲಂ – ಹಾದಿರಂಪ||

 11. ಬಳಿಯಂ ಪೋಷಿಸುತಂತೆ ತೋಷಮುಣುವೀ ಉತ್ಕಂಠಸಂಜಾತೆಯುಂ,
  ನಲವಿಂದಂಬುದರಾಶಿಯಿತ್ತು ಸೊಬಗಂ ಮಿಂದಿರ್ಪ ನೀಲಾಂಬರಂ,
  ಚೆಲುವಂ ಗಬ್ಬದೊಳಿತ್ತು ನಿಂದು ಮೆರೆವೀ ಶಾಲೀನ ವೃಕ್ಷಾಂಬೆಯುಂ,
  ಬಲು ಸುಮ್ಮಾನದೆ ನೀಡವೇಂ ಜಗಕಹಾ! ತಾಯಪ್ಪುವೊಂದಾಸೆಯಂ?

 12. ಮಾತೆ ತಾನಳ್ಕರೆಯಿನಣುಗಂಗೆ ನಲ್ಮೆಯಿಂ
  ಕೈ ತುತ್ತನೀವ ಮನುಜರ ಪಾಂಗಿನೊಳ್
  ಮಾತನೇಂ ಶಬ್ಧಮನುಮರಿಯದಿರ್ದಪ ಜೀವಿ-
  ಯೀ ತಾಯಿ ಬಾಯ್ತುತ್ತನೆರೆಯುತಿಹಳಯ್

  • ತಾಯಿ- ಮಗುವಿನ ನಡುವಿನ ವಾತ್ಸಲ್ಯವನ್ನು ಪ್ರಕಟಿಸುವ ತುಂಬ ಸೊಗಸಾದ ಪದ್ಯಗಳನ್ನು ಬರೆದಿದ್ದೀರಿ ಸೋಮರೆ. ಧನ್ಯವಾದಗಳು. ಕೆಲವೇ ಕಡೆಗಳಲ್ಲಿ ಸವರಿಸಿದಲ್ಲಿ ಹಳಗನ್ನಡವಾಗಿ,ಪದ್ಯಗಳ ಶೋಭೆ ಹೆಚ್ಚುವುದು.

   • ಶಕುಂತಲಾ ಅವರೇ ಧನ್ಯವಾದಗಳು, ಹೌದು ನೀವು ಹೇಳುವುದು ಸರಿ, ಆದರೆ ಹಳಗನ್ನಡವನ್ನು ಗಟ್ಟಿಮಾಡಲು ಒಂದೆರೆಡೆಡೆ ಪ್ರಯತ್ನಿಸಿದ್ದೆ ಮಾತ್ರೆಗಳ ಲೆಕ್ಕ ಸರಿಯಿದ್ದರೂ ಪದ್ಯವನ್ನು ಓದಿಕೊಂಡಾಗ ಸರಿಬರಲಿಲ್ಲ ಅದಕ್ಕೆ ಸಡಿಳಿಸಿದೆ. ಕೆಳಗಿನವನ್ನು ನಾನು ಪರಿಗಣಿಸಿದ್ದೆ:

    ತಾಯಿ – ತಾಯ್
    ಉಣಲು – ಉಣಲ್

    ಮಾತ್ರೆ ವ್ಯತ್ಯಾಸವಾಗುತ್ತದೆ:
    ನಿನ್ನಣುಗಗಂ – ನಿನ್ನಣುಗಂಗಂ
    ಪೀರೆ- ಪೀರಲ್ಕೆ

    ಇನ್ನಯಾವುದಾದರೂ ಇದ್ದರೆ ತಿಳಿಸಿರಿ

    • ಸೋಮರೆ, ನನಗೆ ತೋಚಿದಂತೆ ಕೆಲವು ಸವರಣೆಗಳನ್ನು ಮಾಡಿದ್ದೇನೆ. ದೋಷವಿದ್ದಲ್ಲಿ ಮನ್ನಿಸಿರಿ.

     • Shakunthala avare dhanyavAdagaLu, nimma sUchanegaLannu gamaniside, sariyAgide, aLavaDisuttEne 🙂

  • …………….ಜೀವಿ-
   ಯೇ ತಾಯ ಬಾಯ್ತುತ್ತನೆರೆಯುತಿರ್ಪಳ್ || ಎಂದು ಸವರಿದರೆ ಹೇಗೆ ?

 13. ತಾಯ ವೃತ್ತಿಯ ಕಾಣುತನುಸರಿಪ ಕಂದನಡಿ-
  ಪಾಯಮಾಟಕೆ ಸಕಲಜೀವಿಗಳಲುಂ
  ಆ ಎತ್ತರದ ಮರಮೆ ನೀನಾಗೆ ಸಂವೃದ್ಧ-
  ಕಾಯನ್-ಆನೆನೆ ಕೇಲಿಕೆಯ ದೃಶ್ಯಮಯ್

  ಪಾಯo ಆಟಕೆ

  • ಸಕಲಜೀವಿಗಳಲುಂ- ಸಕಲಜೀವಿಗಳೊಳಂ ಆಗಬೇಕೆ ?
   ಸಂವೃಧ್ದ- ಸಮೃಧ್ಧ ?

 14. ಮೆತ್ತನೆಯ ಪಸಿರೆಲೆಯನಾಸ್ವಾದಿಸಲ್ ತಾಯಿ
  ಸುತ್ತಣದ ಪುಲ್ಲುಣಲು ಧೂಲಿರ್ಪುದೆಂದು
  ಅತ್ತ ಕಂದಂಗೆನುತೆ ಕಿತ್ತು ತಂದಿತೆ ಮರದೊ-
  ಳೆತ್ತರದ ಪಲ್ಲವಂಗಳನೀಪರಿ?

  • ತಾಯಿ- ಮಾತೆ ಎಂದು ತಿದ್ದಬಹುದು
   ಸುತ್ತಣದ-ಸುತ್ತಲಿನ ಎಂದಾಗಬೇಕು.( ಸುತ್ತಣ= ಸುತ್ತಲಿನ)
   ಪುಲ್ಲುಣಲು-ಪುಲ್ಲನುಣೆ
   ಮರದೊಳೆತ್ತರದ-ಮರದಿನೆತ್ತರದ

   ( ಎರಡು ಹಾಗೂ ನಾಲ್ಕನೇ ಪಾದಗಳ ಮಾತ್ರೆಗಳು ಹೀಗೂ ಇರಬಹುದೆ? )

 15. ದಿಟಮೆ ನಿನ್ನಯ ದೇಹಮೆತ್ತರದ ಶಾಖೆಗಳಿ-
  ನಟವಿಯ ಕ್ಷಾಮದೊಳುಮುಣಿಸೆ ಹದನಂ
  ಪಟುವಲ್ತನಾವೃಷ್ಟಿಯೊಳ್ ನೆಲದ ನೀರ್ಪೀರೆ
  ಸೆಟೆವುದಂ ತಿಳಿಸುಗುಂ ನಿನ್ನಣುಗಗಂ

  ಸೆಟೆ – bend

  • ನಿನ್ನಣುಗಗಂ- ಕರುಳ ಕುಡಿಗಂ ಎಂದು ಸವರಬಹುದು.

 16. ರಸನೆಯಂ ಚಾಚುತ್ತಲೆಳೆಯೆಲೆಯ ಸ್ಪರ್ಶಕೆಂ-
  ದುಸಿರ ಬೀಳ್ಮೇಲ್ಮೆಯೊಳ್ ಚಡಪಡಿಸುತಿರ್ಪೆಂ
  ಪುಸಿ ಗೆಯ್ದು ಕಾಣದವೊಲಿರ್ಪೆಯೇಕಯ್ ತಾಯೆ-
  ಯೊಸರಿಸೌ ಒಲ್ಮೆಯಂ ನಿನ್ನಣುಗನಾಂ

  • ಚಾಚುತ್ತಲೆಳೆಯೆಲೆಯ- ಚಾಚುತ್ತುಮೆಳೆಯೆಲೆಯ ಆಗಬೇಕು.
   ಕಾಣದವೊಲಿರ್ಪೆಯೇಕಯ್- ಇರ್ಪೆಯೇಕೌ ಆಗಬೇಕೆ ?

 17. ದೃಷ್ಟಿಯಿಡುವೊಡೆ ಮರದೊಳೆಲೆಯ ಗುಚ್ಛದ ಸವಿಯ
  ಪೌಷ್ಟಿಕಾಹಾರದೊಳ್ ಮೇಣ್ ಜಗೆತದೊಳ್
  ದುಷ್ಟಮೃಗನಿಕರಂಗಳಂ ಕಾಂಬುದೆವೆಯಾಡೆ
  ಕಷ್ಟಮೆಂದಾತಾಯ ಶಿಕ್ಷಣಮಿದೇಂ

  ಎವೆಯಾಡೆ – blink of eye

  • ಜಗೆತ ಎಂದರೆ ?
   ಪದ್ಯದ ಅರ್ಥ ಸರಿಯಾಗಿ ತಿಳಿಯಲಿಲ್ಲ.

 18. ಬರಗಾಲಮಿರ್ದೊಡಂ ಮರದಿಂದೆಯುಣಿಸೆಂಬು-
  ದರಿತೆನೌ ತಾಯೆ ನೀರ್ಗುಡಿಯೆ ನಭದಾ
  ಕ್ಷರದಿಂದೆ ಪೀರೆ ಶಕ್ಯಮೆ ಪೇಳ್ಗುಮೆನುತೆ ತಾಂ
  ಸೊರಗುಡುತೆ ರಸನೆಯಂ ಪೊರ ಚಾಚಿತೇಂ

  ಕ್ಷರ = Cloud

  • ಮರದಿಂದೆಯುಣಿಸು- ಮರದಿಂದಮುಣಿಸು
   ಪೇಳ್ಗುಮೆನುತೆ-ಪೇಳೆನುತ್ತೆ ?

 19. ಪಸಿದಿರ್ದಂಗೋವತ್ಸಂ
  ಕೊಸರಿ ಕೊರಳ ಪಗ್ಗಮುಂ ಕಳಚಿ ಪಾಲ್ಪೀರಲ್
  ತುಸುಮೇಲಿರ್ದಮೊಲೆಗೆಗರಿ
  ಬಸವಳಿದೆವೆತೆರೆದು ಕೆಚ್ಚಲನೆನೋಳ್ಪುದೇಂ

  • ಪಸಿದಿರ್ದಂಗೋವತ್ಸಂ
   ಕೊಸರಿ ಕೊರಳ ಪಗ್ಗಮುಂ ಕಳಚಿ ಪಾಲ್ಪೀರಲ್
   ತುಸುಮೇಲಿರ್ದಮೊಲೆಗೆಗರಿ
   ಬಸವಳಿದೆವೆತೆರೆದು ಕೆಚ್ಚಲನೆನೋಳ್ಪಂತೆ

 20. “ಜನನಿ ನಿನ್ನಯ ಬಾಯಲಿರುವುದ-
  ನೆನಗೆ ನೀಡಾವೂಟವೀಗಲೆ
  ನಿನಗೆ ಕಾದಿಹೆ ನೀಡು ಬೇಗನೆ ‘ಡರ್ರ’ ತೇಗುವೆನು”
  “ತನುವ ದುಡಿಸದೆಯೂಟ ಮಾಡಿರೆ
  ಮನಕೆ ಸಂತಸವಾಗದೆಂದೂ
  ದಿನವು ಸಪ್ಪನು ನೀನೆ ಹುಡುಕುವೆನೆನಲು ಕೊಡುವೆನಿದು”

 21. ಮೊನ್ನೆ ವರೆಗು ನಿನ್ನುದರದೆ
  ತಿನ್ನುತ್ತಿರಲರ್ಧಭಾಗದಾಹಾರವನೇಂ|
  ನನ್ನೀ ಜೀವವನುಳಿಸಲ್
  ಬನ್ನದೊಳೆನಗಿನ್ನು ಪಸಿರನುಣಿಸಿಹೆಯಲ್ತೇ|

 22. ಪೊಸಕಾಯದೊಳುದ್ಭವಿಸಿದ
  ಪಸಿವಂ ಹಿಂಗಿಸುತಿರಲ್ಕೊಲವಿನಿಂ ,ತಾಯ್ವಿರ್,
  ಪೊಸತೇನಮಮಾ,ಕಂದರ
  ನುಸರಿಸಿ ಪೋಗಲವರಂ, ಭಕುತಿಯಿಂ ಮುಂದಂ!

  (ಹಸಿವನ್ನು(..) ಹಿಂಗಿಸಲನುವಾದ ತಾಯಂದಿರನ್ನು(ಹಿರಿಯರನ್ನು)ಮುಂದಿನ ಜೀವನದಲ್ಲಿ ಭಕಿಯಿಂದ ಹಿಂಬಾಲಿಸಿ ಹೋಗುವದು(ಅವರ ಹಾದಿಯಲ್ಲಿ ನಡೆವುದು) ಹೊಸತೇನು?)

 23. ಮಾತೆಯ ಪಾಲನೆ ಸಾತತ್ಯಮಾದೊಡೆ
  ಭೀತಿಯದೆಂತು ತಟ್ಟಿತು ?-ಕಂದನ
  ಛಾತಿಯದೆಂತು ಬಲಿದೀತು?

 24. ಬಂದಿರಲ್ ಕ್ಷಾಮವಂ ಪಸಿವು ತಾಯಿ-ಮರಿಗಂ
  ಬೆಂದಿರಲ್ ದಿಗಿಲಾಗಿ ಪಸಿರಿಗಾಗಿ
  ಗೊಂದಲದ ಬೀಡನ್ನು ನೋಡಲಾ ಮೇಘಗಳು
  ಬಂಧಿಸಲು ಬರುತಿಹವು ಬಾಹುಗಳಲಿ

 25. ಬಾಗಿಸಲಾರದೊಡಂ ಕೊರ-
  ಳಂ ಗಡ! ಪಸಿವಳ್ಳಿವೆರಳ ತಾಂ ನೀಡಿದುದೇಂ ।
  ತಾಗಿಸಲಾಗದಿರಲ್ ಕಿರು-
  ಳಂಗದ ಕಾಣ್ ಕರುಳಬಳ್ಳಿ ಮೇಲ್ ನೋಡಿದುದೇಂ ।।

  ತಾಯಿ-ಮಗುವಿನ ವಾಕಿಂಗ್(ಕೈ ಹಿಡಿದು ನಡೆಸುವ) ಕಲ್ಪನೆ !!

  • ಮೇಡಮ್, ಪ್ರಾಸ ಜಾತಿಸಂಕರವಾಗಿದೆ 🙂

   • ಓ.. ಹೌದು! ನೀಲಕಂಠ. ನೀನೆ “ಸಂಕರ್ಷಣ” – ಈ ಸಂಕರ(ಟ)ವನ್ನ ನಿವಾರಿಸಿಕೊಡು.
    (ಬಾ/ತಾ ಗಳು ಸ್ವಲ್ಪ ಬಂ/ತಂ ಥರಾನೇ ಕಾಣಿಸುತ್ತಿದೆಯಲ್ಲವೇ ?!!)

 26. “ನನ್ನಯ ಸುತನೀನಲ್ಲವೆಯಲ್ಲವೊ
  ನಿನ್ನನು ಬಳಿಯಲಿ ಸೇರಿಸಲಾರೆನು
  ಚೆನ್ನದ ಮರಿಯದು ತೊರೆದನು ಬನವನು ಕೊಡಲಿದನಾರಿಗೆನಾ”
  “ನಿನ್ನನು ಕರೆಯುವೆ , ಅಮ್ಮಾ! ಎನುತಲಿ
  ನನ್ನಯ ಹೊಟ್ಟೆಯ ತುಂಬಿಸಲಾರೆಯ
  ಮನ್ನಿಸು ನಿನ್ನೆಯ ಜಗಳವ, ಪಸಿದಿಹೆ ಕೊಡುಯೆನಗೆ”

 27. ಸೊಪ್ಪ ತೋರಿಸಿ ಸೆಳೆದು। ಬೆಪ್ಪನಾಗಿಪ ಕಡೆಗೆ
  ಉಪ್ಪರಿಗೆ ಮಳಿಗೆ ಮಾಲೀಕ। ನವನಪ್ಪೆ
  ಕುಪ್ಪಳಿಸದಿರಲೆ ತೆಪ್ಪsಗೆ ||

  ಈಗಿನ “ಮಾಲ್ ಸಂಸ್ಕೃತಿ” ಬಗೆಗಿನ ಪದ್ಯ.

 28. ಮರಿಯ ಸ್ವಗತ ( ಕಾಮದಾವೃತ್ತ) :

  ಮಾತೆಯಿರ್ಪಳೇಕಿಂತು ಮೌನದಿಂ ?
  ನೀತಿಯಿಂದಮಾನೊಡ್ಡೆ ಜಿಹ್ವೆಯಂ,
  ಪ್ರೀತೆಯಾಗುತುಂ ಸೊಪ್ಪ ನೀಡದೀ
  ರೀತಿ ಸಾಧುವೇಂ,ಬಾನ ಸಾಕ್ಷಿಯೊಳ್ ?

 29. ಹಳೆಯ ಕಾಲದ ಹೆಂಗಳೆಯರ ಜೆಡೆಯು ಎಷ್ಟು ಸಮೃದ್ಧವಾಗಿರುತ್ತಿತ್ತೆಂಬುದರ ಪ್ರತೀಕವಾಗಿದೆ ಆ ಹಿರಿಯ ಜಿರಾಫೆಯ ಬಾಲ.
  ಈಗೆಲ್ಲಮೆಲ್ಲೆಲ್ಲು ಪೋನಿಟೇಲೇ ಅಧಿಕ-
  ಮಾಗೀಗಳಿಲ್ಲಲ್ಲಿ ಹೆಣೆದ ಜಡೆಯು|
  ಮೇಗಳರ್ಧವ ಹೆಣೆದುಮಿನ್ನಷ್ಟ ಪೋನಿಯೊಳ್
  ತೂಗುವನಿತಿದ್ದಿತ್ತೆ ಪಳೆಗಾಲದೊಳ್||

  • ಅಯ್ಯೋ ದೇವರೇ! ಹೋಗಿ ಹೋಗಿ ಜಿರಾಫೆಯ ಈ ಬೋಳುಬೋಳಾದ ಬಾಲದ ಉಪಮಾನವೇ ಸಮೃದ್ಧವಾದ ಜಡೆಗೆ?!! ಎಂಥ ಘೋರ ಅನ್ಯಾಯ

  • ಗಿಡಮೂಲಿಕೆಯಿಂ ಪಡೆಯ-
   ಲ್ಕಡಿನಾಲರ ನೀಳ್ಜಡೆಯೊಲು ಬಾಲವನುಂ ತಾಂ
   ಚಡಪಡಿಸಲ್ ಮೇಣ್ ಪೊಂದುದೆ
   ನಿಡುಗೊರಳಂ ಗಡ ಜಿರಾಫೆ ಬಾಲನವಂ ಕಾಣ್ ।।

   ಅಡಿ ನಾಲರ ನೀಳ್ಜಡೆ = ಮಾರುದ್ದ ಜಡೆ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)