Feb 072016
 

ಮಾಲಿನೀ, ,ಸ್ರಗ್ಧರಾ, ಮಹಾಸ್ರಗ್ಧರಾ ಮುಂತಾದ ವೃತ್ತಗಳ ಪಾದಾಂತ್ಯಕ್ಕೆ ಹೊಂದುವ ಕೆಳಗಿನ ಸಾಲನ್ನು ಅಳವಡಿಸಿ ಪದ್ಯಪೂರಣವನ್ನು ಮಾಡಿರಿ

“ಮತ್ತದೇ ಕೌತುಕಂ ದಲ್”

  70 Responses to “ಪದ್ಯಸಪ್ತಾಹ ೧೮೮: ಪದ್ಯಪೂರಣ”

 1. ಇರವನೊರೆಯಲಾರೊಳ್ ಬಂದು ನಿಂದತ್ತೆ ತಾನೇ-
  ನರೆಬಿರಿದಿರೆ ಕಂಗಳ್ ನೇಸರುತ್ಥಾನಮಾಗ-
  ಲ್ಬೆರೆತು ರಮಿಸೆ ಪೂವಂ ಸಾರವೇಂ ಪೊನ್ನ ಕೈಗಳ್
  ಪರಮಿರದೊಲವೊಳ್ ಕಾಣ್ ಮತ್ತದೇ ಕೌತುಕಂ ದಲ್

  ತನ್ನ ಇರವನ್ನೆಂದೂ ಹೇಳಿಕೊಳ್ಳದ ಹೂವನ್ನು ರಮಿಸಲು ಇನ್ನೂ ಅರೆಬಿರಿದ ಕಂಗಳ ಆಗತಾನೇ ಎದ್ದ ನೇಸರ ಕರಗಳು ಅದರೆಡೆಗೆ ಸಾರುತ್ತವೆ. ಈ ಒಲವಿನ ಪರಿಯಲ್ಲಿ ಅದೆಂಥ ಕೌತುಕ ನೋಡು!

 2. ಸುರನೇಂ ಮೇಣ್ ಸೌರಸೇನಾಧಿಪನೆ ಸರಿಯನೇಂ ಪೆಟ್ಟಿಗಂ ಗಟ್ಟಿಗಂ ತಾ-
  ನೆರವಾದೆಂ ಮಾಯೆಯಾಟಕ್ಕರೆ ಮುದಿತನಮೇ ಸಾರ್ದುದೇನಿಂತುಮೆನ್ನಂ
  ಸರಿಯೇ, ನೀಗುತ್ತುಮೀಗಳ್ ಕವಿದುರೆ ಕೊರಗಂ ಶರ್ವನಂ ಪೂಜಿಸಲ್ಕೇಂ
  ಪರಿಯಿಂ ಬೇಡಂಗೆ ಪೂವ್ಗಳ್ ನೆರೆದವೆ! ಅರರೇ ಮತ್ತದೇ ಕೌತುಕಂ ದಲ್

  ಕಿರಾತನೊಡನೆ ಹೋರಾಡುವಾಗ ಅರ್ಜುನ ಅಚ್ಚರಿಪಟ್ಟದ್ದು…

 3. ತಾರಾನೀಕಪ್ರಭವನಕರಂ ಸರ್ವವಿಶ್ವಾಂಗರೂಪಂ
  ಪಾರಾವಾರಪ್ರತರಣಪರಂ ದೇವನೆಂದುಚ್ಚದಾಶ್ಚ-
  ರ್ಯಾರೋಹಕ್ಕೇನೆಳಸುವೆಯೊ ನೀಂ ಮುಗ್ಧತಾರಾಜ್ಯಪಟ್ಟ-
  ಕ್ಕಾರೋಹಂ ಕಾಣ್ ಮಗುಮೊಗದೊಳಂ ಮತ್ತದೇ ಕೌತುಕಂ ದಲ್

  ತಾರಾನೀಕಸಮೇತಬ್ರಹ್ಮಾಂಡಕರ್ತ, ಸಂಸಾರಸಾಗರೋತ್ತರಣತತ್ಪರ ಎಂದೆಲ್ಲ ಆ ದೇವರೆಂಬ ಅಚ್ಚರಿಗೇರುವುದೇಕೆ?! ಮುಗ್ಧತೆಯ ಸಾಮ್ರಾಜ್ಯಕ್ಕೆ ಪಟ್ಟಗಟ್ಟಿದಂತಿರುವ ಎಳೆಮಗುವಿನ ಮೊಗ ನೋಡು, ಅಲ್ಲಿ ಅದೇ ಕೌತುಕವೇ ಕಾದಿದೆ!

  • ಧಾರೆಯಿದೇಂ ಸರಿ! ಸರಿ! ರವಿ
   ವಾರಕೆ ನೀಂ ತೆತ್ತುಕೊಂಡ ಪರಿಯಿದು ಚೆಲುವಯ್|
   ಶಾರದೆ ನಲಿದೊಲಿದಿತ್ತೀ
   ಪ್ರೇರಣೆಯೊಳ್ ನೀಲಕಂಠಕವಿರವಿ ಪೊಳೆವಂ||

   • 🙂 _/\_

   • ಉಲಿದಿರ್ದಪೆ ರವಿ ಸೊಗಮಂ
    ಭಲೆ ಎಂಬವೊಲಿರ್ಪುದೀಕವನಸಂಪುಟಮೈ|
    ಕುಲುಕುತೆ ಬಳುಕಿರ್ಪಿದನಂ
    ಕುಲಕರ್ಣಿಯುಳಿದುಮದಾರೊರೆವರನ್ಯರ್ ಪೇಳ್||

    • ಕುಲುಕುತೆ ಬಳುಕುವ ಅಂದರೆ ತುಂಬ ಶೇಕಿ ಅಂತನಾ? 🙂

     • ಧನ್ಯವಾದಗಳು, ನಿಮ್ಮ ಪದ್ಯರಚನಕಾಲದಲ್ಲಿ ನೀವು ಯಾವ ಮನೋನೆಲೆಯಲ್ಲಿದ್ದಿರಿ ಎಂದು ತಿಳಿಸಿಕೊಟ್ಟುದಕೆ 😉

     • ಹಾಗಲ್ಲ. ವ್ಯಕ್ತಿಯೊಬ್ಬ ಕವಿತ್ವಕ್ಕೆ ಮಾಧ್ಯಮ ಅಷ್ಟೇ. ಕವಿತೆ ಹೊರಹೊಮ್ಮುವಾಗಿನ ಮನೋಭೂಮಿಕೆ ಮತ್ತದೇ ತೆರ ಇರುತ್ತದೆ ಎಂದು ಖಾತ್ರಿ ಏನಿಲ್ಲ. ಇದನ್ನು ದುರುಪಯೋಗಪಡಿಸಿಕೊಳ್ಳುವವರು ವ್ಯಾಖ್ಯಾತೃಗಳು. ಪಾಪ, ಕವಿ ಇವರ ವ್ಯಾಖ್ಯಾನದ ಗೋಜಲಿನಲ್ಲಿ ಸಿಲುಕಿ ನಲುಗುತ್ತಾನೆ 🙂

     • ಅಂದಹಾಗೆ ಸುಮಾರು ಒಂದು ವರ್ಷದ ಹಿಂದೆ ಗಣೇಶ ಸರ್ ಅವರು ನಿಮಗೆ ಇದೇ ತಾಣದಲ್ಲಿ ತಿಳಿಸಿದ್ದರು, ಮನೋನೆಲೆ ಅರಿಸಮಾಸ ಎಂದು 🙂

     • ಓ ಮರೆತಿದ್ದೆ. ಇನ್ನು ಆ ಸಮಾಸವನ್ನು ಬಳಸುವುದಿಲ್ಲ. ಧನ್ಯವಾದಗಳು.

 4. ಕಂಡುಂ ಕಂಗಳ್ಗೆ ಕಾಣಲ್ಕೆಳಸದಿರುವವೊಲ್ ಕೂರ್ತ ಸೋಮಾರಿ ಶರ್ವಂ,
  ಪಿಂಡಾಂಡಕ್ರೀಡೆಯಿಂದಂ ಸಮಯಹರಣಮಂ ಮಾಳ್ಪ ಬೊಮ್ಮಂ, ಮಗುಳ್ ಕಾ-
  ಣುಂಡುಟ್ಟಾಡುತ್ತೆ ತಲ್ಪಕ್ಕೊರಗಿದ ಹರಿಯುಂ ಮೂವರೊಳ್ ಕಜ್ಜಕಾದರ್
  ಪೆಂಡಿರ್ ದೇವೀಸಮಾನರ್ ಜಗದ ನಯದೊಳುಂ ಮತ್ತದೇ ಕೌತುಕಂ ದಲ್

  ತ್ರಿಮೂರ್ತಿಗಳಲ್ಲಿ ಒಬ್ಬನೂ ಕೆಲಸ ಮಾಡುವವನಿಲ್ಲ. ಅವರ ಹೆಂಡಿರು ಮಾತ್ರ ವಿದ್ಯೆ, ಧನ, ಶಕ್ತಿಯ ಕೆಲಸಗಳನ್ನು ಮಾಡುತ್ತಲೇ ಇರುವವರು. ಅಷ್ಟಲ್ಲದೇ ಅವರ ಸೇವೆಯನ್ನೂ ಮಾಡುತ್ತಿರುತ್ತಾರೆ, ಮನರಂಜನೆಗಾಗಿ ವೀಣೆ ನುಡಿಸೋದು, ಅವರ ಕಾಲೊತ್ತೋದು, ಅವರ ಪೂಜೆ ಮಾಡೋದು ಇತ್ಯಾದಿ. ಇದೇ ಕೌತುಕ ಈ ಜಗತ್ತಿನಲ್ಲೂ ಇರುವಂಥದ್ದು. (ಮೈಗಳ್ಳ ಗಂಡಸರ ಬಗ್ಗೆ) 🙂

  • ಪದ್ಯಗಳೆಲ್ಲ ಚೆನ್ನಾಗಿವೆ. ’ಪೂಜೆ ಮಾಡೋದು’ ಎಂಬದರ ವಿಸ್ತೃತಾರ್ಥವನ್ನು ತಿಳಿಸಬೇಕಾಗಿ ವಿನಂತಿ 😉

   • Hahhaa.. ನೀವು ಬಯಸುತ್ತಿರುವ ಅರ್ಥವಿಲ್ಲಿಲ್ಲ.
    ಧನ್ಯವಾದಗಳು ಮೆಚ್ಚುಗೆಗೆ 🙂

  • ವಸಂತತಿಲಕ|| ಸಾಮರ್ಥ್ಯಮನ್ನೆನಿತೊ ಪೊಂದಿರೆ ದೇವಿಯರ್ಕಳ್
   ಗ್ರಾಮೀಣಮೂಢರನೆ (ಹರಿಹರಬ್ರಹ್ಮ) ತಾಂ ವರಿಸಿರ್ದಿರಲ್ ದಲ್|
   ಕೌಮಾರ್ತೆಯರ್ ಕಲಿಯ ಕಾಲದೊಳೇತಕಿಂತುಂ
   ಮೀಮಾಂಸೆಗೈವರಲೆ ಗಂಡಿನ ರೂಪಮನ್ನುಂ/ ಅರ್ಥಮನ್ನುಂ/ ವಂಶಮನ್ನುಂ/ ಕ್ಷೇತ್ರಮನ್ನುಂ/ ಲಂಬಮನ್ನುಂ/ ನಾಸಮನ್ನುಂ/ ಕರ್ಣಮನ್ನುಂ/ ಬಣ್ಣಮನ್ನುಂ/ ಗಾತ್ರಮನ್ನುಂ/ ಗೋತ್ರಮನ್ನುಂ/ ಜೈತ್ರಮನ್ನುಂ/ ನೇತ್ರಮನ್ನುಂ/ ಮೈತ್ರಮನ್ನುಂ/ ಯಾತ್ರಮನ್ನುಂ/ ಸೂತ್ರಮನ್ನುಂ/ (ಪಾತ್ರಮನ್ನುಂ ಬಿಟ್ಟು)||

 5. ಪೂವಂಬೊಕ್ಕೀ ಸೌರಭಂ ಪರ್ಣದೀ ಶ್ಯಾ-
  ಮಾವಾರಂ ಪೊಂಬಣ್ಣದೀ ನೇಸರಂಗಂ
  ಸಾವಂಗಾಣಲ್ಬಾರದೀ ಕಾವ್ಯವಾಕ್ಕೊಳ್
  ತೀವಿತ್ತೈ ಕಾಣ್ ಮತ್ತದೇ ಕೌತುಕಂ ದಲ್

  ಅನಿರ್ವಚನೀಯವಾದಂತಿರುವ ಈ ಹೂವ ಮೈಯಾಂತ ಪರಿಮಳದಲ್ಲಿಯೂ, ಈ ಎಲೆಯ ಪಸಿರ್ವಣ್ಣದಲ್ಲಿಯೂ (ಶ್ಯಾಮ ಎಂದರೆ ಹಸಿರು ಎಂಬರ್ಥ ಎಂದೂ ಕೇಳಿದ್ದೆ), ಹೊಂಬಣ್ಣದ ನೇಸರ ಕರಗಳಲ್ಲಿಯೂ, ಸಾವನ್ನೇ ಕಾಣದ ಕವಿವಾಕ್ಕಿನಲ್ಲಿಯೂ ಅದೇ ಕೌತುಕವನ್ನೇ ಕಾಣುತ್ತೇವೆ.

  • ಪದ್ಯವು ಚೆನ್ನಾಗಿದೆ. ಆದರೆ ಇಲ್ಲಿ ಮತ್ತದೇ ಎಂದು ನೀವು ಹೇಳಿರುವುದು ಮತ್ತೆ(again) ಅದೇ ಎಂಬರ್ಥದಲ್ಲಿ. ಮತ್ತೆ+ಅದೇ=ಮತ್ತೆಯದೇ ಅಲ್ಲವೆ? ಮತ್ತದೇ=ಮತ್ತು(and)+ಅದೇ ಅಲ್ಲವೆ?
   ಸಂಖ್ಯೆ 12ರಲ್ಲಿನ ನನ್ನ ಪದ್ಯಕ್ಕೂ ಇದೇ ಅನ್ವಯವಾಗುತ್ತೋ ಏನೋ!

   • ಮತ್ತೆ ಅದೇ ಎಂಬುದು ಮತ್ತದೇ ಎಂತಲೇ ಆಗುತ್ತದೆ. ಮತ್ತದೇ ಸಂಜೆ ಮತ್ತದೇ ಬೇಸರ ಎಂಬಲ್ಲಿರುವಂತೆ. ಮತ್ತೆಯದೇ ಎಂದು ಎಲ್ಲೂ ಬಳಸುವುದಿಲ್ಲವಲ್ಲ…

 6. ಹರಿನಾಮಸಂಕೀರ್ತನಾತತ್ಪರರ್ಕಳೊಳ್
  ಬೆರಕೆಯೆಲೆ ಮತ್ತದೇಕೌ? ತುಕಂ ದಲ್
  ಪರತರಂ ಭಕ್ತರೊಳ್! ಸೇರ್ವನೆ ತಪಂಗೆಟ್ಟು
  ಪರನಾರಿಯೊಳ್, ಗಣಿಕೆ ಬಿಡು ಯತ್ನಮಂ

  ಪ್ರಸಾದರಿಗೆ ಸಲ್ಲಬಹುದಾಗಿದ್ದ ಒಂದು ಅವಕಾಶವನ್ನು ಕಿತ್ತುಕೊಂಡೆ 🙂
  ಸಂತ ತುಕಾರಾಮರ ತಪಸ್ಸನ್ನು ಕೆಡಿಸಲು ಬಂದ ಒಬ್ಬ ಗಣಿಕೆಗೆ ಬುದ್ಧಿಮಾತು!!

  • ಗಣಿಕೆಗೆ ಬುದ್ಧಿಮಾತ ಹೇಳುವಷ್ಟು ಅನುಭವ ನನಗಿಲ್ಲ. ಆ ಕೈಂಕರ್ಯವನ್ನು ನೀವು ವಹಿಸಿಕೊಂಡುದು ಒಳ್ಳಿತೇ ಆಯಿತು; ಅದಕ್ಕೆ ನ್ಯಾಯ ಮಾಡುವುದಾಯಿತು 😉

 7. ಸ್ವರತಾನವಿನ್ಯಾಸಲೀಲಾವಿನೋದಾಬ್ಧಿ
  ಭರದಿಂದಮುಕ್ಕೇರಿ ಮುಳುಗಿರ್ದ ರಸಿಕರ್ಗೆ
  ಹರಿ ಕರುಣಮಂದೋರಿ ಸುಧೆಯಂ ಕುಡುತ್ತಿರ್ಪ ತೆರನಾದ ಸಂಗೀತಮಯ್
  ಪರಿಯಲೊಂದೇ ರಾಗವಾಹಿನಿಯೆ ಕರ್ಣದೊಳ್
  ಕೊರೆ ಕಾಂಬುದಿಲ್ಲ ರಸಭಾವಕ್ಕೆ ಭೀಮಸೇ-
  ನರ ಗಾಯನವನಾಲಿಸುತ್ತಿರೆ ಪುನಃಪುನಃ ಮತ್ತದೇ ಕೌತುಕಂ ದಲ್

  ಜ್ವಲದಗ್ನಿಭಾಸ್ವಚ್ಛಿಖಾಮಾಲೆಯೆದ್ದೆದ್ದು
  ವಿಲಯಂಗೊಳುತ್ತೆ ಶ್ರುತಿಗಗನಾಂತರ್ಯದೊಳ್
  ನಲವಿಂದೆ ಮತ್ತೆತ್ತಣಿಂದಮೋ ಪುಟ್ಟಿ ಬರ್ಪಂದಮೇ ಸ್ವರಲೀಲೆಯಯ್
  ಜಲಧಿಯುರ್ಕಿನ ಹೆದ್ದೆರೆಗಳೆದ್ದು ಮೇಲ್ವಾಯ್ದು
  ತಲೆಗಿಂತು ಪನ್ನೀರ ತುಂತುರಿನ ಸೇಚನಮೊ
  ಚೆಲುವಾಯ್ತಿದೆಂದೆನಲ್ ಮರಮರಳಿ ಕೇಳ್ದೊಡಂ ಮತ್ತದೇ ಕೌತುಕಂ ದಲ್

  ಜರ್ರನೇ ಜಾರ್ದತ್ತು ಜಿಹ್ವೆಯಂಗಳದಿಂದೆ
  ಪುರ್ರನೇ ಪಾರ್ದತ್ತು ಮಿಂಚಿನಂಚೆನೆ ಚುಂಚು
  ಭರ್ರನೇ ರೆಂಕೆಗಳ್ ಬಿಚ್ಚಲ್ಕೆ ಸರಸಮಾಯ್ತು ಸ್ವರಸ್ವರ್ಲೋಕದೊಳ್
  ತಿರ್ರನೆ ಸುಪರ್ಣನಂತಾಗಸದ ತಾರದೊಳ್
  ಘರ್ರನುತೆ ಮಂದ್ರದೊರತೆಯೊಳಂತೆ ಮೀನಿನೊಲ್
  ಹುರ್ರೆನಲ್ ಮನಮಿದೇಂ ಕೇಳ್ವುದೋ ನೋಳ್ಪುದೋ ಮತ್ತದೇ ಕೌತುಕಂ ದಲ್

 8. ನಲಿವ ಮಳೆಯ ರೂಪಿಂ ಜೀವನಂ ನೀಳ್ವೊಡಂ ತಾಂ
  ಕಲೆತು,ಕೊಲುತೆ ಸಲ್ಗುಂ ಕೋಪವುರ್ಕೇರುವಾಗಳ್!
  ಪಲವು ಬಗೆಯಬಣ್ಣಂ ನೈಜಮೆಂಬಂತೆ ತೋರ್ವೀ
  ಜಲದ ಪರಿಯಿದಾಹಾ ಮತ್ತದೇ ಕೌತುಕಂದಲ್!

 9. She had rejected this groom (Tukarama) long back when she was in her early 20s! She has made amends now.
  ಕಾಗೆ-ಗೂಗೆಯೆನುತ್ತೆ ಬಂದ ವರಗಳ ಜರೆದು
  ಬೀಗೀಗಿಳಿಯಿತೇನು ನಿಜರೂಪಿನಾ|
  ಈಗಿಗಿಂ ಹತ್ತು ವರ್ಷಕೆ ಮುನ್ನ ತ್ಯಜಿಸಿರ್ದು-
  ಮೀಗ ಪೇಳ್ ಮತ್ತದೇಕೌ ತುಕಂ ದಲ್||

 10. ಹರಳವೋಲ್ ಪೊಣಿಸಿರ್ಪ ಫಲಗಳಂ ಸರಮಾಲೆ
  ಸರದಿಯಲಿ ಪಕ್ಕಿಗಳು ಪಾಡುತಿಹವು
  ಮರೆಯುವರು ತಂತಾವೆ ರಸಿಕರ್ಗಳೆಲ್ಲರೂ
  ಪರಿಸರದಿ ಮತ್ತದೇ ಕೌತುಕಂ ದಲ್

 11. In a so called experimental movie, nobody knows what is coming up next; much less the climax. Yet it is insipid. But in masala movies, the songs, the fights and the climax are always the same. Yet we relish in anticipation each time.
  ಮಾಲಿನಿ|| ಪರಿಕಿಸಿರೆ ಮಸಾಲಾಚಿತ್ರಮಂ (ಅದು) ಯಾವುದಿದ್ದೇಂ
  ಪರಿಯದದುವೆ ಪಾಡೊಳ್, ಬಾಹುಯುದ್ಧಂಗಳೊಳ್ ಮೇಣ್|
  ಅರಿವನಿಬರಿಗುಂಟೈ ಏಂ ಪರಾಕಾಷ್ಟೆಯೆಂದುಂ (climax)
  ನಿರುಕಿಪರದ ಮತ್ತಂ, ಮತ್ತದೇ ಕೌತುಕಂ ದಲ್||

 12. ಅಂದದಾ ಕಬ್ಬಗಳ್ ಕಾಂಬುದೇ ಸೋಜಿಗಂ
  ಸಂದವುದರರೆಪರ್ವದಕ್ಷಿಗಳಿಗೆ
  ಚಂದದಂತರ್ಜಾಲದಲಿ ಪದ್ಯಪಾನದೊಳ್
  ಬಂದಿರಲ್ ಮತ್ತದೇ ಕೌತುಕಂ ದಲ್

  • ೧) ಕಲ್ಪನೆಯು ಚೆನ್ನಾಗಿದೆ.
   ೨) ಅಂದದ ಎಂಬರ್ಥದಲ್ಲಿ ಅಂದದಾ ಎಂದು ಬಳಸಲಾಗದು. ಪದ್ಯದಲ್ಲಿ ಏನನ್ನಾದರೂ ಪ್ರಸ್ತಾವಿಸಿದ್ದರೆ, ಅಂದದಾ (ಅಂದದ ಆ) ಎಂದು ಅದನ್ನು ನಿರ್ದೇಶಿಸಬಹುದು.
   ೩) ಪರ್ವದಕ್ಷಿಗಳಿಗೆ?

 13. ನಗುವಂ ಸೂಸುತ್ತೆ ಸೂರ್ಯಂ ಪೊಸತನದಿನಹಾ! ನಿತ್ಯವುಂ ಬರ್ಪನೆಂತೋ!
  ಖಗಗಳ್ ಸಂತೋಷದಿಂದಂ ಗಗನಕೆರೆಗೆ ಸಾಮರ್ಥ್ಯಮಂ ಪೊಂದುಗೆಂತೋ!
  ಜಗಮಂ ನೋಡರ್ದ ಜೀವಂಗಳರಿವಿರದೊಡಂ ತತ್ತಿಯಂ ಸೀಳ್ಗುಮೆಂತೋ!
  ಬಗೆಯೊಳ್ ಸ್ಥಾಣುತ್ವಮಂ ತಾನರೆ!ಪಡೆಯದಿರಲ್ ಮತ್ತದೇ ಕೌತುಕಂ ದಲ್!

  (ಬಲವಾದ ಇಚ್ಛೆಯು ಮನಸ್ಸಿನಲ್ಲಿ ಸ್ಥಿರಸ್ಥಾನವನ್ನು ಪಡೆಯದಿದ್ದಲ್ಲಿ, ಸೂರ್ಯನು ಹೇಗೆ ನಿತ್ಯವೂ ಬಂದಾನು!ಹಕ್ಕಿಗಳು ಹೇಗೆ ತಾನೇ ಗಗನಕ್ಕೆರುವ ಶಕ್ತಿಯನ್ನು ಪಡೆದಾವು!ಏನನ್ನೂ ಅರಿಯದ ಹೊಸ ಜೀವ ಮೊಟ್ಟೆಯನ್ನು ಸೀಳಿ ಹೊರ ಬಂದೀತು!)

 14. ಶಾಲಿನೀ|| ಮೀಮಾಂಸಾವಸ್ಥಾತ್ರಯವ್ಯಾಪ್ತಿಯೊಳ್ ಕೇಳ್
  (ಮದ್ಯ)ಸೋಮಕ್ಕಾದಾತಂ ದಿಟಂ ಬ್ರಹ್ಮಲೀನಂ|
  ಸಾಮಿಂ ನಿದ್ರಾತುಲ್ಯಭಾವಂ ನಶಾರ್ದ್ರಂ (ಆರ್ದ್ರತೆಯು)
  ಹಾ! ಮದ್ಯಂಗಳ್ಮತ್ತದೇ(ಅಮಲು) ಕೌತುಕಂ ದಲ್||

 15. ಅಗಲವಾ ಕಾಂತಗಳ್
  ಸೊಗಮಲ್ತೆ ಕಾರ್ಬೋನು ?
  ತಗಲುತಲಿ ಬಿಡಿಸುವುದು ಕಷ್ಟಸಾಧ್ಯಂ
  ಅಗಲಿಸಲು ಪೋದರಿವು
  ನಗುನಗುತ ಸಂದುವವು
  ಮೊಗವರಳಿ ಮತ್ತದೇ ಕೌತುಕಂ ದಲ್

  • ಆಹಾ, ಸರಳ ಸುಂದರ ಕಲ್ಪನೆ 🙂
   ಕಾರ್ಬೋನು – ಕರ್ಬುನಂ, ಕಬ್ಬಿಣ ತಾನೇ? ಸರಿಯಾದ ಪದ ಯಾವುದು?

  • ಪರಿಯನಾನರಿಯೆನಾಯಸ್ಕಾಂತಹಸನಮಂ
   ತಿರುಗುಕಣ್ಣದಕಿಲ್ಲಮಧರಮಿಲ್ಲಂ|
   ಹೊರಳಿಸಲ್ ಮಣ್ಣಿನೊಳಗದನು ಕಾಂಬುವೆವಾಗ
   ಬಿರುಬಿನಿಂ ರೋಮಹರ್ಷಣಮಪ್ಪುದಂ|| 🙂

 16. ದೂರಕಟ್ಟಲ್ಕಾದುದೇನಿದಂ,ಕಲ್ಲೆದೆಯ
  ಮಾರವೈರಿಗುಮಸ್ಖಲಿತನೆಂಬವೊಲ್!
  ಬೇರಾವುದು ಜಗಮಂ ನಡೆಯಿಸುಗು!ಸೃಷ್ಟಿಗಂ
  ಕಾರಣಂ ,ಮತ್ತದೇ ಕೌತುಕಂ ದಲ್!

 17. ನೀಲಕಂಠ ಸರ್, ಕ್ಷಮಿಸಿ.ತಮ್ಮ 8 ನೆಯ ಅಂಕಣದ ಚಿತ್ತಾರವನ್ನು ಕುರಿತು …….

  ಮತ್ತೊಮ್ಮೆ ಯೋಚನೆಯ
  ಚಿತ್ತಾರ ಮೂಡಿರಲು
  ಸುತ್ತುತಿದೆ ಮನದಲಿ ಪ್ರಶ್ನೆನೂರು
  ಉತ್ತರವು ದೊರಕದಲೆ
  ಮತ್ತೆಂಟರಂಕಣವೆ
  ಚಿತ್ತದೊಳ್ ಮತ್ತದೇ ಕೌತುಕಂ ದಲ್

  • Hahhaaa… ಚೆನ್ನಾಗಿದೆ 🙂 ನಿನ್ನ ಪ್ರತಿಭೆಗೆ ವಂದನೆ! ಪ್ರಸಾದರ ಆಶೀರ್ವಾದ ದಕ್ಕಿದೆ ನಿನಗೆ …

   • ಚೆನ್ನಾಗಿದೆ. ಆದರೆ ನಿನಗೆ ಮೇಲ್ಪಙ್ತಿಯು ನಾನಾಗುವುದು ಬೇಡ. ನಾನು ಆಗೀಗ ದೂಷಣೆಗೊಳಗಾಗುವಂತೆ ನೀನೂ ಆಗುವುದು ಬೇಡ 🙂
    ಈ ಹಿಂದೆ ಹೇಳಿದ್ದನ್ನು ಮತ್ತೊಮ್ಮೆ ಕೊನೆಯದಾಗಿ ಹೇಳುತ್ತೇನೆ: ಚಾಟುವು ತೀರ ಮಿತದಲ್ಲಿರಲಿ. ಅದೊಂದು ಚಟವಾಗದಿರಲಿ. ಗಂಭೀರಪದ್ಯಗಳೇ ಬರಲಿ. ಒಂದು ಪದ್ಯಪಾನಕ್ಕೆ ಒಂದೂವರೆ ಚಾಟುಪದ್ಯಕಾರರು ಸಾಕು 🙁
    ಭಾಮಿನಿಯಲ್ಲಿ ಬರೆಯುವ ಬದಲು ಪಲ್ಲವದಲ್ಲಿ ಬರೆಯುವವನು ನಾನು, ಆರರ ಬದಲು ನಾಲ್ಕು ಪ್ರಾಸಪದಗಳಲ್ಲಿ ಮುಗಿಯುತ್ತದೆ ಎಂದು. ನೀನಾದರೋ, ಆರೇನು (ಯಾರೇನು 😉 ) ಮಹಾ ಎಂಬಂತೆ ಪಂಚಮಾತ್ರಾಚೌಪದಿಯನ್ನು ಕುಸುಮಷಟ್ಪದಿಯಾಗಿಸಿರುವೆ! ಅಭಿನಂದನೆಗಳು.

    • ಆಹಾ, ನಿಮ್ಮ ಗುಟ್ಟು ಗೊತ್ತಾಯ್ತು… ಅದಿರಲಿ, ಒಂದೂವರೆ ಯಾರು? ಒಂದಂತೂ ನೀವು… ಇನ್ನರ್ಧ?

 18. ಲಯಗ್ರಾಹಿ|| ಹೇಮಾಂಗಗೋದುಗ್ಧಮೌಲ್ಯಂ ಗಡಿಂತುಂ
  ತಾ ಮೇಲೆ ನಲ್ವತ್ತಕಿಂ ಮೂರೊ ನಾಕೋ| (Rs.43/- or 44/- at the most)
  ಸಾಮಿಂದೆ ಮೂರ್ಪಟ್ಟು ಕೇಳ್ ಗಂಜಲಕ್ಕಂ (Rs.150/-)
  ಗೋಮೂತ್ರಕಿಮ್ಮತ್ತದೇ ಕೌತುಕಂ ದಲ್|| (ಅರಿಸಮಾಸವನ್ನು ನಗಣಿಸಬೇಕೆಂದು ವಿನಂತಿ)
  This is just the versification of a question posed by aprastutaprasangi Sri. Ramachandra to avadhaani Sri Ramakrishna Pejattaya at an avadhaana recently.

 19. ಮಂದಾಕ್ರಾಂತ|| ಜೂಜಾಟಂ ಕಾಣ್ ಚಟಮದನಿಶಂ ಕ್ರೀಡೆಯಂ ಬಿಟ್ಟರುಂಟೇಂ
  ಮೋಜೆಲ್ಲಂ ಕೇವಲಮೆ ಮುಳುಗಿರ್ಪನ್ನೆಗಂ ದ್ಯೂತದೊಳ್ ತಾಂ|
  ಮೇಜಂ ಬಿಟ್ಟೇಳುವರು ಕಹಿಯಿಂ ವಿತ್ತಮುಕ್ತಾಯಮಾಗಲ್
  ಸಾಜಂ ಸೋಲೆಂಬುವರಮಮ ಹಿಮ್ಮತ್ತದೇ ಕೌತುಕಂ ದಲ್||

 20. ಭುಜಂಗಪ್ರಯಾತ|| ಪ್ರಪಂಚಂ ಗಡೆನ್ನೊಲ್ ಸುರಾಪಾನಿಯಂ ಮೇಣ್
  ತ್ರಪಾಹೀನನಂ ಕಂಡುದೇಮಿನ್ನೆಗಂ ಪೇಳ್|
  ನಿಪೀತಂ ಗಡಿರ್ದುಂ ಗಡಂಗಂ ಪುಗಿರ್ಪೆಂ
  ಕ್ಷಪಾ (ಹೇ ರಾತ್ರಿಯೇ), ನಿನ್ನ ಗಮ್ಮತ್ತದೇ ಕೌತುಕಂ ದಲ್||
  (ಕ್ಷಪಾ ಎಂಬ ಶುದ್ಧಸಂಸ್ಕೃತಪದವನ್ನು ಬಳಸಿದ್ದೇನೆ. ಕ್ಷಮೆಯಿರಲಿ)

  • ಅಬ್ಬ ಚೆನ್ನಾಗಿದೆ 🙂 ಕ್ಷಪಾ ಪರವಾಗಿಲ್ಲ ಅನಸ್ತದೆ, ಸಂಬೋಧನೆ ಹೀಗೆಯೇ ಅಲ್ಲವೇ ಕನ್ನಡದಲ್ಲಿ.

   • ನಿಮ್ಮ ಉದ್ಗಾರವು ಮೂಲಘಜ಼ಲ್‍ಕಾರನಿಗೆ ಸಲ್ಲಲಿ: नही देखे साकी (bartender) ने हम(जै)से शराबी, के मैखाने मे भी गए पीते पीते… ಮುಂದಿನ ಚರಣದಲ್ಲಿ: नशा हो तो क्या खब्र(awareness) मरने का – आदम (ಅಂಕಿತ)? के हम कब्र (grave) मे भी गए पीते पीते…
    Listen to the ghazal here: https://www.youtube.com/watch?v=gfbybbE-P5k

 21. ನವಿರೇಳ್ವ ಪಂಚಮದಿ ಪಾಡುವ ಕೋಗಿಲೆಯು
  ಸವಿಸವಿಯ ಪೆಜ್ಜೆ ಪಿಡುತಿಹ ಮಯೂರಿ
  ಭವ ಭಯಪಡದ ಕಪಿಯು ಪಾರುತಾನಂದಿಸುವ
  ಭುವಿಯಲಿ ಮತ್ತದೇ ಕೌತುಕಂ ದಲ್

  • ಮೊದಲನೇ ಸಾಲಿನ ಗಣವೊಂದು ತಪ್ಪಿದೆ

   • ಪದ್ಯದ ಮೊದಲ ತಪ್ಪನ್ನು ಹಿಡಿದುತೋರಿದರೆ ಸಾಕು, ಅಲ್ಲಿಂದಾಚೆಗೆ ಓದುವುದು ಬೇಡ ಎಂಬ ಆಲಸ್ಯಪೂರ್ವsadism ಸಲ್ಲ 🙁

 22. ಅರೆಚಣದೊಳು ಪೊತ್ತೊ್ೈದಿರ್ಪನೈ ಜೀವಮಂ ತಾಂ
  ಸರಸರ ಬಿಡಿಸಿರ್ಪಂ ಮಾಯೆಯಿಂ ಬಂಧಮೆಲ್ಲಂ
  ಬರೆದಿಹನರೆ! ಬಮ್ಮಂ ಆಯುವಂ ಇಚ್ಛೆಯಿಂದಂ
  ಮರುಕಳಿಸಿರೆ ಮತಿಯೊಳ್ ಮತ್ತದೇ ಕೌತುಕಂ ದಲ್

 23. ಗೋಮಯಕೆ#, ಪಾಲಿಂಗೆ, ಗೊಬ್ಬರಕ್ಕಾದುದೀ
  ಗೋಮಾತೆ, ಗೋದೇವಿಯೆಂದರ್ಚಿಪರ್|
  ಮೈಮರೆಯೆ* ಚಣಕಾಲ, ಘೃಣದಿಂದೆ ಸಿರ್ರೆಂದು
  ರಾಮ! ಗುಮ್ಮತ್ತದೇ ಕೌತುಕಂ ದಲ್||
  (In the adjectives the cow is feminine. In the conclusion the cow is neuter!)
  #ಅಂಗಳವನ್ನು ಸಾರಿಸಲು *ಮೂಗುದಾರವನ್ನು ಹಿಡಿದುಕೊಳ್ಳದಿದ್ದರೆ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)