Feb 222016
 

ವಿನೀಲಮಲ್ಲೀನವಮಾಲೆಯೊಪ್ಪುಗುಂ

  36 Responses to “ಪದ್ಯಸಪ್ತಾಹ ೧೯೦: ಸಮಸ್ಯಾಪೂರಣ”

  1. ಅಯ್ಯಯ್ಯ… ಇದಕ್ಕೆ ಹೆದರಿ ಸಂಸ್ಕೃತತಾಣದಿಂದ ಓಡಿಬಂದರೆ, ಇಲ್ಲೂ ಬಂತಾ!! ಇರಲಿ, ಇಂದೊಂದು ಪ್ರಯತ್ನ 🙂

    ಅನಂತಲಾವಣ್ಯವಿಶೇಷವೈಷ್ಣವೀ-
    ಮನೋಹರೋರಸ್ಸ್ಥಲವದ್ದಿಗಂತಕಂ
    ನಿನಾದಪೂರ್ಣಾಬ್ಧಿತರಂಗಶೃಂಖಲಾ-
    ವಿನೀಲಮಲ್ಲೀನವಮಾಲೆಯೊಪ್ಪುಗುಂ

    ವಿಶಾಲವಾಗಿ ಹರಡಿರುವ ದಿಗಂತವೆಂಬ ವಿಷ್ಣುವಕ್ಷಸ್ಥಲಕ್ಕೆ, ಭೋರ್ಗರೆಯುತ್ತಿರುವ ನೀಲಿಗಡಲ ತೆರೆಗಳ ಹೆಣಿಕೆಯ ನೀಲಮಲ್ಲಿಕಾಮಾಲೆಯೊಪ್ಪಿರುವುದು.

    • ಓಡಿಬಂದ ಆಯಾಸವಿನ್ನೂ ಇರುವುದರಿಂದ ಉರಸ್ಥಲ-ತರಂಗ ಎಂಬ ಪದಗಳು ಬಳಕೆಯಾಗಿವೆ!

  2. ಅನಂತಲಾವಣ್ಯವಿಶೇಷವೈಷ್ಣವೀ-
    ಮನೋಹರೋರಸ್ಸ್ಥಲವನ್ನಭಕ್ಕಮೀ
    ನಿನಾದಪೂರ್ಣಾಬ್ದನಿಬದ್ಧಶೃಂಖಲಾ-
    ವಿನೀಲಮಲ್ಲೀನವಮಾಲೆಯೊಪ್ಪುಗುಂ

    ಮೇಲಿನದ್ದೇ, ಸ್ವಲ್ಪ ವ್ಯತ್ಯಾಸದೊಂದಿಗೆ. ಆಕಾಶ, ಮೋಡಗಳ ಮಾಲೆ…

  3. ಅನೂತ್ನಮಾಗಿರ್ಪೊಡಮೇಕೆ ಚಿಂತೆಯೌ!
    “ವಿನೀತಭಾವಂ ನೆಲೆಗೊಳ್ಳುತರ್ಪಿಸಲ್
    ವಿನೀಲಮಲ್ಲೀನವಮಾಲೆಯೊಪ್ಪುಗುಂ
    ಪಿನಾಕಿಗಂ ತಾಂ ಹಸನಾಗಿಯೇ ಸದಾ!”

    (ಹಳೆಯ ಹೂ(ಬಾಡಿ, ಕರಿದಾದ) ಎನುವ ಚಿಂತೆಯೇಕೆ? ವಿನೀತಭಾವವಿದ್ದರೆ, ವಿನೀಲಮಲ್ಲಿಯ ನವಮಾಲೆಯೂ ಶಿವನಿಗೆ ಪ್ರಿಯವೇ ಆಗುತ್ತದೆ)

    • ಚೆನ್ನಾಗಿದೆ ಮೇಡಮ್ 🙂 ಆದರೆ ನವಮಾಲೆ ಎಂಬುದು ನಿಮ್ಮ ಕಲ್ಪನೆಗೆ ಸ್ವಲ್ಪ ಅಡೆತಡೆಯೊಡ್ಡುತ್ತದೆ.

  4. ಸನಾತನಂ ಕನ್ನಡಮೆಂದು ಭಾವಿಪರ್
    ವಿನೂತ್ನಮಾದೀ ಲಘುಬಾಣಿಗೆತ್ತವೊಲ್,
    ವಿನೀಲಮಲ್ಲೀನವಮಾಲೆಯೊಪ್ಪುಗುಂ
    ಮನೋಹರಂ!ವರ್ಣಮದೆಂಬ ಲೋಕಕಂ!

    • ಏನರ್ಥ?

      • ಹಳಯದೆಂದು ಕನ್ನಡವು, ವಿನೂತನವಾದ ಲಘುಭಾಷೆಯನ್ನು ಕಂಡುಕೊಂಡತೇ, ಈ ನೀಲಮಲ್ಲಿಗೆ ಮಾಲೆಯೊಪ್ಪುಗುಂ ಬಣ್ಣಕ್ಕೆ ಮಾರುಹೋದ ಲೋಕಕ್ಕೆ

        • ಕ್ಷಮಿಸಿ, ಅರ್ಥವಾಗಲಿಲ್ಲ 🙁
          ಅಂದಹಾಗೆ ಎರಡನೇ ಸಾಲಿನ ಛಂದಸ್ಸು ತಪ್ಪಿದೆ.

          • ಹಳಗನ್ನಡಕ್ಕೆ ಬದಲಾಗಿ, ಹೊಸಭಾಷೆಗೆ ಹೊಂದಿಕೊಂಡಿರುವಂತೇ, ಹೊಸದಾದ ನೀಲಿಬಣ್ಣದ ಮಾಲೆಯನ್ನು(ಮೂಲ ಮಲ್ಲಿಗೆಯ ಬದಲು), ಲೋಕವೊಪ್ಪುತ್ತಿದೆ

  5. ಮನೋಜ್ಞನೀಲೋತ್ಪಲಮಿರ್ಪ ದೀರ್ಘಿಕಂ
    ಮನಂಗಳಂಸೂರೆಗೊಳುತ್ತೆ ಭಾಸಿಸಲ್,
    ಪುನೀತೆಯೀ ಧಾತ್ರಿಯ ಕಾಯದೊಳ್ಗಹಾ!
    ವಿನೀಲಮಲ್ಲೀ ನವಮಾಲೆಯೊಪ್ಪುಗುಂ!
    (ಸುಂದರ ನೀಲೋತ್ಪಲ ಸರೋವರವು ,ಭಾರತಂಬೆಯ ಕಾಯದಲ್ಲಿ ನೀಲಮಲ್ಲಿಯ ಮಾಲೆಯಂತೇ ಕಾಣುತ್ತಿದೆ)

  6. ವಿನೋದಮಂ ಪೊಂದುತೆ,ಮೆತ್ತಿ ಶಾಯಿಯಂ,
    ವಿನೀತಭಾವಂಗೊಳುತಿರ್ದು ಬಾಲಕರ್,|
    ವಿನಾಯಕಂ ಶೋಭಿಸೆ,ಪೂಜೆಗರ್ಪಿಸಲ್,
    ವಿನೀಲಮಲ್ಲೀನವಮಾಲೆಯೊಪ್ಪುಗುಂ ||

  7. ಅನಂಗನಾರಾತಿಯ ಕೇಶದಂತಿರಲ್
    ಘನಸ್ವನಾಪೂರಿತಮೇಘಸಂಘಟಂ
    ವಿನೀಲಮ್, ಅಲ್ಲೀ ನವಮಾಲೆಯೊಪ್ಪುಗುಂ
    ಮನಂಗೊಳುತ್ತುಂ ಪೊಳೆಮಿಂಚುವಳ್ಳಿಯಾ

  8. ಮನೋಜನಾರಾಚಮೆ ನಾಟಲೆರ್ದೆಗಂ,
    ವಿನೀಲಶಾಟೀಸಖಿಗೀಯುತುಂ ಸರಂ
    ಮನೋವಿಕಾರಂಗೊಳೆ,ಪೇಳ್ದನಿಂತು”ಯ
    ವ್ವಿ!ನೀಲಮಲ್ಲೀ!ನವಮಾಲೆಯೊಪ್ಪುಗುಂ!”

  9. ನೀಲ ಮತ್ತು ಮಲ್ಲಿಯರ ಮದುವೆಯಲ್ಲಿ ದೇವಿ ಎಂಬವಳ ಹಾರೈಕೆ –

    ಅನೇಕ ವರ್ಷಂಗಳ ಕಾಲ ಸೇರಿರೈ
    ವಿನೋದ ತುಂಬಲೈ ನವೀನ ಬಾಳಿನ-
    ಲ್ಲಿ , ನೂರು ವರ್ಷಂ ಬದುಕೆಂದು ಪೇಳ್ದ ದೇ-
    ವಿ “ನೀಲ ! ಮಲ್ಲೀ!! ನವಮಾಲೆಯೊಪ್ಪಗುಂ !”

  10. ಅನಾಥಮಾಗಿರ್ದ ವಿಶಾಲ ವೀಥಿಗಂ
    ವಿನೀಲ ಪೂಗೊ೦ಚಲ ಸಾಲ್ಮರ೦ಗಳಿ೦
    ವಿನೀಲ ಮಲ್ಲೀ,ನವಮಾಲೆಯೊಪ್ಪುಗುಂ
    ವಿನೂತ್ನಪುಷ್ಪಂಗಳ ವರ್ಷ ಧಾರೆಯಿಂ II

    ನೀಲಿ ಬಣ್ಣದ ಹೂಗೊಂಚಲುಗಳಿಂದ ಶೋಭಿಸಿ, (ನೀಲ ಬಣ್ಣದ ಹೂಗಳ ಟಬೂಬಿಯಾ ಮರ ) ಬೆಳಗಿನ ಸಮಯ ಅನಾಥವಾಗಿರುವ ವಿಶಾಲವಾದ ಬೀದಿಗಳಿಗೆ ಹೂವನ್ನೇ ಮಳೆಗರೆಯುವ ಸಾಲ್ಮರಗಳ ಮಲ್ಲಿಗೆಯಂಥ(ಮಲ್ಲಿ ನವ ಮಾಲೆ ) ಉದುರಿದ ಹೂಗಳು ರಸ್ತೆಗೆ ಮಾಲೆತೊಡಿಸಿದ೦ತಿವೆ .

    Click to Edit

    • ಕ್ಷಮಿಸಿ . Jacarandra ಎಂಬ ಮರವನ್ನು ಕಲ್ಪಿಸಿ ಬರೆದಿರುವುದು ಟಬೂಬಿಯ ಎಂದಾಗಿದೆ .ನೀಲ ಬಣ್ಣದ ಹೂವುಗಳ ಟಬೂಬಿಯ ಮರಗಳಿವೆಯೇ , ಇಲ್ಲವೇ ಎಂಬುದು ನನಗರಿಯದು.

      • ಇಲ್ಲದಿದ್ದರೆ, ತೋಟಗಾರನಿಗೆ (horticulturist) ಹೇಳಿ grafting ಮಾಡಿಸೋಣಂತೆ!

        • ಪ್ರಸಾದು ಸರ್ ,ಮುಂಗಡವಾಗಿ ಕಾಯ್ದಿರಿಸಿಕೊಳ್ಳುವ ಸವಲತ್ತು ಇದೆಯೇ ? ಇದ್ದರೆ ನಮಗೂ ಎರಡು ಗಿಡಗಳಿರಲಿ ..

  11. ವಿನೂತನಾಚಾರವಮಿಂತು ಕೇಳಿರೈ
    ವಿನೀಲ ಮಲ್ಲೀ ನವಮಾಲೆಯೊಪ್ಪುಗುಂ
    ಮುನೀಶನೀರೀತಿಯೊಳಿಂದೆಪೂಜಿಸೈ
    ವಿನಾಶಮೆಲ್ಲಂಗಳು ದೂರಮಾಗುಗುಂ

  12. ದಿನಾಂತ್ಯರಾಗಂ ಮುದವೀಯುತೀರ್ವರಾ
    ಮನಂಗಳೊಳ್ ರಮ್ಯತೆ ಹಾಸಿಪೊಕ್ಕಿರಲ್
    ತನುಪ್ರಭಾಸೋಜ್ವಲಕಾಂತಸಂಗದೊಳ್
    ವಿನೀಲಮಲ್ಲೀನವಮಾಲೆಯೊಪ್ಪುಗುಂ

    [ಸಂಧ್ಯಾರಾಗದ ಮುದದಿಂದ ರಮ್ಯತೆಯು ಪ್ರೇಮಿಗಳ ಮನದಲ್ಲಿ ಹಾಸುಹೊಕ್ಕಾಗಿರಲು, ತನುವನ್ನು ಉಜ್ವಲವಾಗಿ ಬೆಳಗುವ (ತಾಪದಿಂದ) ಕಾಂತನ ಸಂಗದಲ್ಲಿ, ತೊಟ್ಟಿದ್ದ ಬಾಡಿದ ಮಲ್ಲಿಗೆಯ ನವಮಾಲೆಯೂ ಒಪ್ಪುಗುಂ]

  13. ವಂಶಸ್ಥವಿಲ|| ಅನೇಕದೇವಸ್ಥಲಮಂ(temples) ಪುರೋಹಿತರ್
    ದಿನೇದಿನೇ ಶುದ್ಧಿಯ ಗೈವರೇಂ ವಲಂ|
    (ಹೇ) ಮನೀಷಿ, ನಿರ್ಮಾಲ್ಯದ (ಬಿಳಿಯ)ಪೂವದಾಗಿರಲ್
    ವಿನೀಲಂ (ಕರಕು), ಅಲ್ಲಿ ಈ ನವಮಾಲೆಯೊಪ್ಪುಗುಂ||

  14. ಮನೋಹರಂ ಗೈಯುತೆ ,ಮಲ್ಲೆಪೂವನಂ
    ತೆ ನೀಲಪುಷ್ಪಂಗಳ ಕೂಡೆ ಕೋದಿರಲ್
    ವಿನೂತ್ನ ಪಾಂಗಿಂ!ಹರಿ ಮೈಯ ವಣ್ಣಕೀ
    ವಿನೀಲಮಲ್ಲೀ ನವಮಾಲೆಯೊಪ್ಪುಗುಂ!
    (೨ ಬಗೆಯ ಹೂಮಾಲೆ)

  15. ಮನೀಷಿ ಸಂಶೋಧಿಸಿ ಸಸ್ಯಭೇದಮಂ,
    ಬನಂಗಳೊಳ್ ನೆಟ್ಟಿರೆ ಸಾಕಲೊಲ್ಮೆಯಿಂ,|
    ಮನೋಜ್ಞಪುಷ್ಪಂಗಳನುಟ್ಟ ಪಚ್ಚೆಯೊಳ್,
    ವಿನೀಲಮಲ್ಲೀನವಮಾಲೆಯೊಪ್ಪುಗುಂ ||

  16. Soma,
    ಸಖ್ಯಮೊಪ್ಪುಗುಂ, ನೆತ್ತರೊಪ್ಪುಗುಂ, ಮಾಲೆಯೊಪ್ಪುಗೀಗಳ್|
    ವ್ಯಾಖ್ಯೆಗೈವೆ ’ಮುಳ್ಳೊಪ್ಪುಗೆಂ’ದು ಬಹ(next) ಪಾದಪೂರ್ಣದೊಳ್ ನೀಂ||

  17. ಮನೋವಿಕಾರಂದಳೆದಿರ್ಪ ಬಾಲಕಂ,
    ಸುನೇತ್ರಮಂ ಪೊರ್ದಿರದಂತೆ ವರ್ತಿಸಲ್,|
    ವಿನೀತೆ ಚಂದಂಗೊಳೆ ಸೂಡೆ ಪೇಳ್ದನೈ,
    “ವಿನೀಲಮಲ್ಲೀನವಮಾಲೆಯೊಪ್ಪುಗುಂ” ||

    • ಪಾಶ್ಚಾತ್ಯವೈದ್ಯಪದ್ಧತಿಗಳಲ್ಲಿ ಮನೋವಿಕಾರವನ್ನು ಭೂತಚೇಷ್ಟವೆಂದು ಪರಿಗಣಿಸಿ ರೋಗಿಗಳ ಕೈಕಾಲುಗಳಿಗೆ ಸರಪಳಿಯನ್ನು ಕಟ್ಟಿ ಸಾಯಲು ಬಿಡುತ್ತಿದ್ದರಂತೆ. ಅವರಲ್ಲಿ psychiatry ಆವಿಷ್ಕಾರವಾದದ್ದು ಈಚೆಗೆ. ಆಯುರ್ವೇದದಲ್ಲಾದರೋ ಮನೋವಿಕಾರಕ್ಕೆ ಲಗಾಯ್ತಿನಿಂದ ಚಿಕಿತ್ಸೆಯಿರುವುದು ಮಾತ್ರವಲ್ಲ, ಅದನ್ನು ಪ್ರಾಥಮಿಕವಾದ ’ಕಾಯಚಿಕಿತ್ಸೆ’ ಎಂದೇ ವರ್ಗೀಕರಿಸಿದ್ದಾರೆ. ನೀವಂತೂ ಅದನ್ನು ಇನ್ನೂ ಸರಳವಾಗಿಸಿಬಿಟ್ಟಿದ್ದೀರಿ – ಮನೋವಿಕಾರವು ಕನ್ನಡಕಮಾತ್ರದಿಂದ ವಾಸಿಯಾಗುತ್ತೆ ಎಂದು!
      ಮನೋವಿಕಾರಂ ಬಡಿದಿರ್ಪ ಬಾಲಗಂ
      ಸುನೇತ್ರಮಾತ್ರಂ ಸುಖಮೀವುದೆಂದುಂ!
      ಸನಾತನಜ್ಞಾನಕೆ ನೂತ್ನಟೀಕೆಯಂ
      ಮನೀಷೆಯಿಂ ಗೈದಿರಿ ವಂದಿಸಿರ್ಪೆನೌ|| 🙂

      • ಕುನೇತ್ರಮಂ ಪೊರ್ದಿದ ಮಂದಬಾಲಕಂ,
        ಸುನೇತ್ರಮಂ ತಾಳದವೋಲೆ ವರ್ತಿಪಂ|
        ಮನೀಷದಿಂ ಕನ್ನಡಕಂಗೊಳಲ್ಕೆ ನೀಂ,
        ವಿನಂತಿಪೆಂ,ಪದ್ಯದೆ ಕಾಣೆ ದೋಷಮಂ || 🙂

  18. ಪ್ರಾಸರಹಿತ ಕರಂಭ (ಸಮಸ್ಯಾಪಾದವೊಂದು ವಂಶಸ್ಥ, ಉಳಿದವು ಇಂದ್ರವಂಶ):
    ನಲ್ವತ್ತಮೂರುಂ(43ವ್), ತ್ರಿದಶಕ್ಕೆ+ನಾಲ್ಕು(34ನ್), ನ-
    ಲ್ವತ್ತೀರ್(42ಲ್), ಮುವತ್ತೆಂಟಕೆ ಸೇರಿಸೊಂದನುಂ(39ಮ್)|
    ಡಿಟ್ಟೋ(42ಲ್), ಮುವತ್ನಾಕ್(34ನ್), ಮೊದಲಂಕಿಯೇ(43ವ್) ಗಡಾ
    ನಲ್ವತ್ತಕೊಂದೀರ್ ಕಳೆಯುತ್ತೆ ಸೇರಿಸೈ (resp.: 40-1=39ಮ್, 40+2=42ಲ್)||
    ನಲ್ವತ್ತೆ(40ಯ್): ಬೇಡೈ ಕಳೆ-ಕೂಡುವೊಂದುಮುಂ (No plus or minus!)
    ಮೂವತ್ತುಮೈದುಂ(35ಪ್) ಹದಿನೇಳುಮಂತುಟೇ(17ಗ್)|
    ಸಂಖ್ಯಾಕ್ರಮಂ ವರ್ಣದ ಮಾಲೆಯೊಳ್ ವಲಂ (ऌ&ॡ ನಗಣಿಸಿ):
    ವಿ, ನೀ, ಲ, ಮ, ಲ್ಲೀ, ನ, ವ, ಮಾ, ಲೆ, ಯೊ, ಪ್ಪು, ಗುಂ|| 🙂
    ಪುಣ್ಯಕ್ಕೆ ಎಲ್ಲೂ ವಿಜಾತೀಯಸಂಯುಕ್ತಾಕ್ಷರವಿಲ್ಲ!

  19. Why rejoice on seeing the dark (ವಿನೀಲ) jasmine developed by a scientist(!) through thoughtless genetics? It puts an end to the adage ಮೊಸರು ಚೆಲ್ಲಿದಂತೆ ಮಲ್ಲಿಗೆ!
    “ವಿನೀಲಮಲ್ಲೀನವಮಾಲೆಯೊಪ್ಪುಗುಂ”
    (ಹೇ) ಮನೀಷಿ, ಇಂತೆನ್ನುತೆ ಹಿಗ್ಗಲೇತಕೈ?
    ಅನಾರ್ಯ’ಮಾಲೀ’ಕೃತಹೀನಕಾರ್ಯಮಿಂ-
    ದನಿತ್ಯಗಯ್ತಯ್ ದಧಿ-ಪುಷ್ಪಸಾಮ್ಯಮಂ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)