Feb 282016
 

ಮಾಲಿನೀ, ,ಸ್ರಗ್ಧರಾ, ಮಹಾಸ್ರಗ್ಧರಾ ಮುಂತಾದ ವೃತ್ತಗಳ ಪಾದಾಂತ್ಯಕ್ಕೆ ಹೊಂದುವ ಕೆಳಗಿನ ಸಾಲನ್ನು ಅಳವಡಿಸಿ ಪದ್ಯಪೂರಣವನ್ನು ಮಾಡಿರಿ

“ಪೆಣ್ಣ ಚಿದ್ವೃತ್ತಿಯಲ್ತೇ”

  38 Responses to “ಪದ್ಯಸಪ್ತಾಹ ೧೯೧: ಪದ್ಯಪೂರಣ”

  1. ಶ್ರೀಲಕ್ಷ್ಮೀಶಂ, ಪರತರವರಂ ಗೌರಿಯಾಣ್ಮಂ, ವಚಶ್ಶ್ರೀ-
    ಲೋಲಂ, ಮೂರ್ವರ್ಕಳ ಪೆಸರಿನೊಳ್ ಭಾವಮಂ ತಾಳ್ದು ನಿಂದರ್
    ಲೀಲಾಪಾರವ್ಯವಹರಣದಿಂ ಪತ್ನಿಯರ್ ತನ್ನವರ್ಗಂ
    ಶೀಲಂಗೊಟ್ಟು ಕ್ರಮಿಪ ಪರಿಯೇ ಪೆಣ್ಣ ಚಿದ್ವೃತ್ತಿಯಲ್ತೇಂ

  2. ಪೆಣ್ಣ ಚಿದ್ವೃತ್ತಿಯಲ್ತೇ
    – U – – U – –

    some thing missing here. right? cant fit in to mattebha/shardula paadaantya??

  3. ಬಿಡುವುದೊಳಿತು ಸಂದೇಹಂಗಳಂ! ಸೃಷ್ಟಿಕಾರ್ಯ
    ಕ್ಕೆಡೆಬಿಡದಿರೆ ಕೈಯಿತ್ತಂತೆ,ಸಂತೋಷಮೀಯು
    ತ್ತೊಡಲಭರಿಸಿ,ಸಲ್ವೀ ತಾಯ್ತನಕ್ಕಿರ್ಕೆ ಮೇಲುಂ!
    ಪೊಡವಿಯೊಳಗಿದೆಂದುಂ ಪೆಣ್ಣ ಚಿದ್ವೃತ್ತಿಯಲ್ಲ್ತೇ!
    (ಪೆಣ್ಣ ಚಿತ್ತಕ್ಕೆ ಹತ್ತಿರವಾದದ್ದು ತಾಯ್ತನವಲ್ಲದೇ ಬೇರೇನು?-ಸೃಷ್ಟಿಕಾರ್ಯದಲ್ಲಿ ಕೈಜೋಡಿಸುತ್ತ, ಒಡಲಭರಿಸಿ ಸಂತೋಷಮನೀಯುತ್ತಿರುವಾಗಳಿದು!

  4. ಪೊತ್ತುಂ ನೋವಂ ,ಪರಿವನದಿಯೊಲ್ ಜೀವನಂ ನೀಡುತಿರ್ದುಂ,
    ಮತ್ತಂ ಮುಳ್ಳೊಳ್ ಬೆಳೆವ ಸುಮದೊಲ್ ಕಾಂತಿಯಂ ಲೋಕಕೀದುಂ,
    ಪತ್ತಂಪೆತ್ತುಂ,ಭುವಿಯನಡೆಯಂ ಪಾಲಿಸುತ್ತಿರ್ಪೊಡಂ ತಾಂ
    ಗತ್ತನ್ನೆಂದುಂ ಮೆರೆಯದಿಪುದೇ ಪೆಣ್ಣ ಚಿದ್ವೃತ್ತಿಯಲ್ತೇ!

  5. Dear manvAdimanu,
    I have done modern-day justice to you by substituting PARENTS for FATHER, and CHILDREN for SON in the Kannada translation of your verse पिता रक्षति कौमार्ये भर्ता रक्षति यौवने पुत्रः रक्षति वार्धक्ये न स्त्री स्वातंत्र्यमर्हति| I couldn’t help retaining the quantum and gender of the husband!
    ಮಂದಾಕ್ರಾಂತ|| ಕೌಮಾರ್ಯಾವಸ್ಥೆಯೊಳು ಹಡೆದ(ವ)ರ್, ಯೌವನಾವಸ್ಥೆಯೊಳ್ ಮೇಣ್
    ನಾಮಿ ಪ್ರಾಣೇಶನಪರವಯೋಮಾನದೊಳ್ ಸೂನುಗಳ್ ತಾಂ|
    ಹೇಮಾಮೂಲ್ಯಕ್ಕೆನುವವೊಲು ರಕ್ಷಾಕ್ಷಣಳ್ ನಾರಿಯೆಂಬರ್
    ಸಾಮಿಂದೀ ಭಾವಕೆಡೆಯದುಮೇಂ? ಪೆಣ್ಣ ಚಿದ್ವೃತ್ತಿಯಲ್ತೇ||

  6. ಬಹಳವೆ ಕಷ್ಟಮಂ ತೋರಿಸದೆ ಮಗುಪೊತ್ತು
    ಸಹಕರಿಸಿ ಮನೆಯನ್ನು ಮುನ್ನಡೆಸಿಹಳ್
    ದಹಿಸುತಿರಲೊಳಮನಸು, ಸ್ಮಿತವದನ ಸಾಹಸವು
    ಸಹನೆಯೇ ಪೆಣ್ಣ ಚಿದ್ವೃತ್ತಯಲ್ತೇ

    • ಬಹಳವೆ: ಒಂದು ಮಾತ್ರೆ ಕಡಿಮೆ ಇದೆ.
      ಮಗುಪೊತ್ತು: ’ಮಗುವು ಹೊತ್ತು’ ಎಂದಾಗುತ್ತದೆ. ’ಮಗುವ ಹೊತ್ತು’ ಎಂದಾಗದು. ಈ ವಿಭಕ್ತಿಪಲ್ಲಟವು ಸಾಧುವೂ ಇರಬಹುದು. ತಿಳಿದವರು ವಿಶದಪಡಿಸಲಿ.

  7. ಮಿಹಿರನುರಿಯುತಾಲಾಪಂ ಸದಾಗೈವೊಡೆಂದುಂ
    ವಹಿಪನದಿಯು ತನ್ನಾಚಾರಮಂ ಬಿಟ್ಟಳೇಂ!ತಾಂ
    ಕಹಿಯುದಕಮನೀದು ದ್ವೇಷಮಂ ಕಾರ್ದಳೇಮೀ
    ಸಹನೆಯೊಳನುರಾಗಂ ಪೆಣ್ಣ ಚಿದ್ವೃತ್ತಿಯಲ್ತ್ತೇಂ!

    • Taking it higher! Good one.
      ದ್ವಿರುಕ್ತಿ in the first line: ಸದಾ & ಎಂದುಂ(ಎಂದಿಗುಂ). If you want to carry ಎಂದುಂ(ಎನುತ್ತುಂ) to the next point (river), say ಗೈವನೆಂದುಂ.

      • ಧನ್ಯವಾದ,ಗೈವೊಡೆ,ಎಂದುಂ –ಹೀಗೇ ತೆಗೆದುಕೊಂಡಿದ್ದು !

  8. ಪೆರರ ಮಗುವೊಂದಕಂ
    ಮರುಗುತೂಟವನಿತ್ತು
    ಮೆರೆದಳೈ ಕನಿಕರವ ಬಹುಬೇಗದೊಳ್
    ಪರಮಾತ್ಮ ರೂಪಿಸಿದ
    ತರತರದ ಸೃಷ್ಟಿಯೊಳ್
    ಕರುಣೆಯೇ ಪೆಣ್ಣ ಚಿದ್ವೃತ್ತಿಯಲ್ತೇ

    • ಸೊಗಸಾದ ಕಲ್ಪನೆಗಳಿಂದ ಹಲವು ಪದ್ಯಗಳನ್ನು ಉತ್ಸಾಹದಿಂದ ರಚಿಸುವುದಕ್ಕಾಗಿ ಅಭಿನಂದನೆಗಳು ಅಂಕಿತಾ !!

      • ಧನ್ಯವಾದಗಳು ಮೇಡಮ್,
        ಆದರೆ ನನ್ನ ಪದ್ಯ ತುಂಬಾ ಸೊರಗಿರುವಂತೆ ಕಾಣುತ್ತದೆ ಅಲ್ಲವೇ?

        • ಇಲ್ಲವಲ್ಲ ! ಹೀಗೆಲ್ಲ ಯೋಚಿಸಿ ನೀನು ಸೊರಗುವುದೇ ಬೇಡ. ನೀನು ಬೆಳೆಯುವಂತೆ ಪದ್ಯಗಳೂ ಬೆಳೆದು ಹೆಚ್ಚಿನ ತೂಕಗೊಳ್ಳುವುದನ್ನು ನೀನೇ ಮುಂದೆ ಗಮನಿಸಬಹುದು 🙂

        • ಅಂಕಿತಾ, ಷಟ್ಪದಿಗಳು, ಅದರಲ್ಲೂ ಶರ ಕುಸುಮ ಭಾಮಿನೀ ಇತ್ಯಾದಿ, ನೋಡಲು ತೆಳ್ಳಗೇ ಕಂಡರೂ ತುಂಬ ಘಾಟಿ. ಚಿಂತಿಸಬೇಡ 🙂

  9. ಮುನಿಮತಂಗನ ಸೇವೆಯಂ ಶ್ರದ್ಧೆಯಿ೦ಗೈದು
    ಮುನಿಬೋಧನೆಯ ನಿರಾಕಾರಮಾಕೃತಿಯಾಗೆ
    ತನುವೊಂದು ಚಿತ್ತರೂಪದೊಳೆ ಬಿಲ್ಬಾಣ೦ಗಳಂಪಿಡಿದ ಬೇಡನಾದ೦ I
    ಅನುವಾಸರದೊಳಾ ಪುಳಿಂದನಂ ಧ್ಯಾನಿಸಲ-
    ದಿನ ಕುಲೋದ್ಭವನ ರೂಪದಳು ಸಾಕಾರದಿಂ
    ವನ ಕುಟೀರದೆ ಶಬರಿಗೊಲಿಯಲದು ಪೆಣ್ಣ ಚಿದ್ವೃತ್ತಿಯಲ್ತೇ? II

    ನಿರಾಕಾರನಾದ ಭಗವಂತ ಭಕ್ತನ ಬಯಕೆಯಂತೆ ರೂಪವನ್ನು ತಳೆದು ದರ್ಶನ ಕೊಡುತ್ತಾನೆ ಎಂದ ಮತಂಗ ಮುನಿಗಳ ಬೋಧನೆಯಂತೆ ಶಬರಿ ಅವನನ್ನು ಧ್ಯಾನಿಸಲು ಅದು ಅವಳ ಚಿತ್ತದಲ್ಲಿ ; ಅವಳಿಗೆ ಪರಿಚಿತವಾದ ಬಿಲ್ಲು ಬಾಣಗಳನ್ನು ಹಿಡಿವ ಬೇಡನ ರೂಪವನ್ನೇ ತಾಳಿತು . ಹಲವು ವರ್ಷಗಳ ಕಾಲ ಆ ರೂಪದಲ್ಲಿ ಭಗವಂತನನ್ನು ಧ್ಯಾನಿಸಲು ,ಬಿಲ್ಲು ಬಾಣಗಳನ್ನು ಹಿಡಿದ ಶ್ರೀ ರಾಮನು ರೂಪದಲ್ಲಿ ಅವಳಿಗೆ ಒಲಿದುದು ಅವಳ ಚಿದ್ವೃತ್ತಿಯಲ್ಲವೇ ? (ಯಥಾ ಭಾವಂ ತದ್ ಭವತಿ – ಎಂಬಂತೆ )

  10. || ಮಾಲಿನೀವೃತ್ತ||

    ಹೃದಯಮಿರುತೆ ಸೂಕ್ಷ್ಮಂ, ಕ್ರೌರ್ಯದರ್ಪಕ್ಕೆ ಬಾಡಲ್,
    ಗದರೆ, ಮುದುಡೆ ಕಣ್ಣೀರಂಗೊಳುತ್ತಳ್ತು ನೋವಿಂ,|
    ಮುದದಿನರಳೆ ನೇಹಾಧಿಕ್ಯಕಾರುಣ್ಯಕೆಂದುಂ,
    ಮೃದುಮಧುರಭಾವಂ ಪೆಣ್ಣ ಚಿದ್ವೃತ್ತಿಯಲ್ತೇ ? ||

  11. ಪೆಬ್ಬಂಡೆಗಳೆದುರಿರೆ ,ಧೈರ್ಯದಿಂದುರಗತತಿ
    ತಬ್ಬಿತಾಂ ಕಿರುಗಂಡಿಯಿಂ ಸಾರ್ವವೊಲ್
    ಹಬ್ಬಿದುರೆ ಕಷ್ಟಮಿರೆ,ಬಾಳ್ತೆಯಂ ಚತುರತೆಯಿ
    ನೆಬ್ಬುವದೆ ಪೆಣ್ಣ ಚಿದ್ವೃತ್ತಿಯಲ್ತೇ!
    ಎಬ್ಬು=ಓಡಿಸು(ಬಂಡೆಗಳ ಸಂಧಿಯಲ್ಲಿ ತೂರಿಕೊಂಡು ಹೋಗುವ ಉರಗದಂತೆ,ಬಾಳ್ತೆಯನ್ನು ಕಷ್ಟಕಾಲದಲ್ಲಿ ಚಾತುರ್ಯದಿಂದ ನಡೆಸುವದನ್ನು ಬಲ್ಲಳಲ್ಲ)

    • ಚೆನ್ನಾಗಿದೆ ಕಾಂಚನಾ.” ಪೆಬ್ಬಂಡೆ”- “ಪೆರ್ಬಂಡೆ” ಆಗಬೇಕು. ಮೂರನೇ ಪಾದದಲ್ಲಿ ಒಂದು ಮಾತ್ರೆ ಹೆಚ್ಚಿದೆ. “ಎಬ್ಬುವದೆ”- ಎಬ್ಬುವುದೆ” ಆದಲ್ಲಿ ಒಳಿತಲ್ಲವೆ? “ಮಬ್ಬರಿದ”- ಅರ್ಥವಾಗಲಿಲ್ಲ.ಎರಡನೇ ಪಾದದಲ್ಲಿ, ಛಂದಸ್ಸಿಗೆ ಅನುಗುಣವಾಗಿ, ಸಾರ್ವವೋಲೇ-“ಸಾರ್ವವೋಲ್” ಎಂದಾಗಬೇಕೆ ? “ಪೆರ್ಬಂಡೆಗಳೆದುರಿರೆ”-“ಪೆ್ರ್ಬಂಡೆಗಳ ನಡುವೆ” -ಆದಲ್ಲಿ ಹೆಚ್ಚು ಸರಿಯಾದೀತೆ ?

      • ಶಕುಂತಲಾ,೧)ಪೆಬ್ಬಂಡೆಯೆಂದರೂ ಆಗಬಹುದು ಎಂದು ತಿಳಿದಿರುವೆ
        ೨)ಮಾತ್ರೆಯನ್ನು ಸರಿಪಡಿಸಿಕೊಂಡಿರುವೆ
        ೩)ಮಬ್ಬರಿದ ದ ಬಳಕೆ ತಪ್ಪಾಗಿಯೇ ಇರುವದರಿಂದ ತಿದ್ದಿಕೊಂಡಿರುವೆ
        ೪)ಹೌದು:-) ಸಾರ್ವ್… ತಿದ್ದಿದ್ದೇನೆ!
        ಧನ್ಯವಾದಗಳು

        • ಪೆಬ್ಬಂಡೆಯೂ ಸರಿಯೆಂದು ತಿಳಿದಿರಲಿಲ್ಲ. ಧನ್ಯವಾದಗಳು. ಪೆರ್ಬಂಡೆಯಾದಲ್ಲಿ ಪ್ರಾಸವೂ ತಪ್ಪುವುದಲ್ಲಾ…. ಈಗ ಗಮನಿಸಿದೆ 🙂 “ಹಬ್ಬಿದುರೆ ಕಷ್ಟಮಿರೆ”-ಅರ್ಥವಾಗಲಿಲ್ಲ. 🙂

  12. ನೋವಿಂದೊರ್ವಳ್ ಮಿಡಿವತರದೊಳ್ ಕಾಂತನಿರ್ಯಾಣದೊಳ್,ಮುಂ
    ಜಾವೊಳ್,ಚಂದ್ರಂ ಪುಗುತೆ,ಭುವಿಯೊಳ್ ಬಾಷ್ಪಮುಕ್ಕೇರದೇಂ!ಮೇಣ್
    ಯಾವಂ ಕಾಂಬನ್ ರವಿಯ ಬರದೊಳ್ಗಂಬುಜಾ ಕಾಂತಿಯಂ ತಾಂ!
    ಭಾವೋದ್ವೇಗಂ ಮೆರೆವುದಮಮಾ!ಪೆಣ್ಣ ಚಿದ್ವೃತ್ತಿಯಲ್ತೇಂ!

    (ಕಾಂತನು ದೂರ ಪೋಪಾಗ ಕಂಬನಿಮಿಡಿವಳ ತೆರದಲ್ಲಿ ಭುವಿಯು ,ಚಂದ್ರನ ನೆನೆದು ಮುಂಜಾವು ಮಿಡಿಯಳೇ!(ಇಬ್ಬನಿ), ರವಿಯ “ಬರ” ದಲ್ಲಿ ,ಯಾರಿಗಾದರೂ ಕಮಲದ ಕಾಂತಿಯನ್ನು ಕಾಣಲಾದೀತೆ!ಹೀಗೆ ಭಾವೋದ್ವೇಗವನ್ನು ತೋರ್ಗೊಡುವುದೇ ಪೆಣ್ಣ ಚಿದ್ವೃತ್ತಿಯಲ್ಲವೇ)

  13. (ಕಲಿಯುಗದಲ್ಲಿ) ಉಭಾಭ್ಯಾಮಪಿ ಪಾಣಿಭ್ಯಾಂ ಶಿರಃ ಕಂಡೂಯನಂ ಸ್ತ್ರಿಯಃ – ವಾಲ್ಮೀಕಿರಾಮಾಯಣಂ
    ಚಿತ್ = ಚಿಂದಿ/complicated (ಟಪೋರಿಭಾಷೆಯಲ್ಲಿ)
    ತಲೆಹಿಡುಕನೆನ್ನದಿರಿ, ಮಾತು ನನ್ನದಿದಲ್ಲ
    ಪಲುಕಿಹರು ವಾಲ್ಮೀಕಿಗಳಿದನಂದೇ|
    ತಲೆಯನೆರಡೂ ಕೈಗಳಿಂ ಕೆರೆಯುತಿರ್ಪುವುದೆ
    ಕಲಿಯುಗದ ಪೆಣ್ಣ ಚಿದ್ವೃತ್ತಿಯಲ್ತೇ||
    (ಮೊದಲಗಣಗಳು ಸರ್ವಲಘು)

    • ಪ್ರಸಾದು ಸರ್,ಇದರ ಅರ್ಥವೇನು … ”ಉಭಾಭ್ಯಾಮಪಿ ಪಾಣಿಭ್ಯಾಂ ಶಿರಃ ಕಂಡೂಯನಂ ಸ್ತ್ರಿಯಃ”ಆ ಶ್ಲೋಕದ ಮುಂದಿನ ಅಥವಾ ಹಿಂದಿನ ಪಾದಗಳು ಏನೆಂದು ಹೇಳುತ್ತವೆ ?ಹೇನುಗಳು ಜಾಸ್ತಿಯಾಗುತ್ತವೆ ಎಂದೇ ?;-)

      • ದಯಮಾಡಿ ಮೂಲಮಂ ನೋಡದೆಲೆ ಇದ್ದುಬಿಡಿ
        ಭಯಗೊಳ್ಳುವಿರಿ, ಮೇಣಿನಿಂದೆ ನೀವು|
        ಹುಯಿಲೆಬ್ಬಿಸುವಿರಿ ವಾಲ್ಮೀಕಿಯೇತಕೆ ಹೇನ
        ದಯದಿಂದೆ ಪ್ರಸ್ತಾವಿಸಿರರೆನ್ನುತುಂ|| 🙁
        (’ಹೇನನ್ನಾದರೂ ಪ್ರಸ್ತಾವಿಸುವ ದಯೆ ಏಕೆ ತೋರಲಿಲ್ಲ ಅವರು’ ಎಂದು ಖೇದಗೊಳ್ಳುವಿರಿ)
        ~ಶಂ~

        • ಋಷಿ ಮೂಲವನ್ನು ನೋಡಬಾರದೆನ್ನುವ ಮಾತಿದೆ … ಋಷಿಗಳು ಬರೆದುದನ್ನು ಓದಬಾರದೆಂದು ಯಾರೂ (ನೀವಲ್ಲದೆ ) ಹೇಳಿಲ್ಲವಲ್ಲಾ. ದಯಮಾಡಿ ತಿಳಿಸಿರಿ .

          • ಭಾಲ ಅವರೇ, ನನಗೆ ಗೊತ್ತಿರುವಂತೆ ಇದು ಕಲಿಗಾಲದ ವರ್ಣನೆಯ ಶ್ಲೋಕ. ಈ ಕಾಲದಲ್ಲಿ ಹೆಂಗಸರು ಬೀದಿಯಲ್ಲಿ ನಿಂತು ಎರಡೂ ಕೈಗಳಿಂದ ತಲೆಗೂದಲನ್ನು ಬಾಚುವುದು ಇತ್ಯಾದಿ ಮಾಡುತ್ತಾರೆ ಎನ್ನುವುದಿದೆ. ಇದು ಮಹಾಭಾರತದ ಶ್ಲೋಕವೆಂದು ನೆನಪು.

          • ನೀಲಕಂಠರಿಗೆ ಧನ್ಯವಾದಗಳು .

  14. ಚೆಲುವಿಂದೆ ಕರಕುಶಲಗಳನೆಲ್ಲ ಪೋಣಿಸುತೆ
    ಹೊಲಿಗೆಯಿಂ ಚೆಂದಗಾಣಿಸಿಹಳೀಕೆ
    ಒಲವಿಂದಡುಗೆಯ ಮಾಡಿ ನಗುಮೊಗದೊಳುಣಿಸುವ
    ಕಲೆಗಳೇ ಪೆಣ್ಣ ಚಿದ್ವೃತ್ತಿಯಲ್ತೇ?

  15. ಕರದಲಿ ಪ್ರಾವೀಣ್ಯವನು ಪಡೆದನಡುಗೆಯಲಿ
    ಕರಕುಶಲದಲಿ ಪಂಡಿತನಿವನಾದಂ
    ಉರದಿ ಮೃದು ಭಾವ- ಸೌಜನ್ಯ -ಕನಿಕರಪೊಂದ
    ಪುರುಷನದು ,ಪೆಣ್ಣ ಚಿದ್ವೃತ್ತಿಯಲ್ತೇ?

  16. ಭುಜಂಗಪ್ರಯಾತ|| ವಿಲಾಸೋಜ್ಜ್ವಲದ್ರೂಪಲಾವಣ್ಯಮಂ ಕೋ-
    ಮಲಾಂಗಿ ಪ್ರಯಾಸಂಗೊಳುತ್ತೆಂತೊ ಪೊಂದಲ್|
    ವಿಲೇಪಾ*ನುಲೇಪಾ^ಕುಲಂ ಸಾಜಮಂದಿಂ-
    ದಲಂಕಾರಮೇ ಪೆಣ್ಣ ಚಿದ್ವೃತ್ತಿಯಲ್ತೇ (ಚಿತ್=ಹೊಳಪು/ಪ್ರಕಾಶ)||
    *ವಿಲೇಪ: Hiding dark circles, shimmery eye base and a touch of foundation
    ^ಅನುಲೇಪ: Sculpting cheekbones and shading them with bronze and gold creams to give more depth to eyes, rimming upper lash lines with a brown liner pencil and smudging it upward with shadow brush, gently buffing lip with a damp washcloth before applying lip balm or running a piece of ice over the lips before slicking on gloss to help color last all day and prevent it from bleeding… uffff (కేశాలు, కర్ణాలు, గొంతు ఎలాగే ఉన్ని!)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)