Mar 062016
 

Gangavataranam Raja Ravi Varma

  108 Responses to “ಪದ್ಯಸಪ್ತಾಹ ೧೯೨: ಚಿತ್ರಕ್ಕೆ ಪದ್ಯ”

 1. ಶಿವರಾತ್ರಿಯ ಸಂದರ್ಭಕ್ಕೆ ಈ ಸುಂದರ ಚಿತ್ರವನ್ನುಕೊಟ್ಟ ಪದ್ಯಪಾನಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತ – ಒಂದು ಭಾಮಿನಿ. ಲೋಕ ಕಲ್ಯಾಣಕಾರಿಯಾದ ಇವನಿಗೆ ರುದ್ರನೆಂಬ ಹೆಸರು ಹೇಗೆ ತಾನೇ ಸರಿಯಾದೀತು? ಏನಿದ್ದರೂ ಇವನು ಶಿವ, ಶಂಕರ ಎಂಬ ಭಾವದೊಡನೆ:

  ಬಾನಿನಿಂದಲಿ ಬೀಳುತಿರಲಾ
  ಮಾನಿನಿಯು ಹರಿಪದಗಳಿಂದಲಿ
  ನೀನು ದಯೆತೋರುತಲಿ ಮುಡಿಯನು ಹರಡಿ ಲೋಕವನು
  ಸಾನುರಾಗದಿ ಕಾಯ್ದೆಯೆನ್ನುತ
  ಮಾನಿಸರು ಪೇಳಿಹರು ರುದ್ರನು
  ನೀನು ಹೇಗಾದೀಯೆ? ಮಂಗಳದ ಶಂಕರನು ನೀನೆಂದು!

  • ಹಂಸಾನಂದಿಯವರೆ, ಕಡೆಯ ಪಾದದಲ್ಲಿ ಸವರಣೆ ಬೇಕಿದೆ.

   • ಹೌದು, ಕ್ಷಮಿಸಿ – ಇಲ್ಲಿದೆ ಸರಿಪಡಿಸಿದ ಪಾಠ. ಗಮನಿಸಿದ್ದಕ್ಕೆ ಚೇದಿ ಅವರಿಗೆ ನಾನು ಆಭಾರೊ.

    ಬಾನಿನಿಂದಲಿ ಬೀಳುತಿರಲಾ
    ಮಾನಿನಿಯು ಹರಿಪದಗಳಿಂದಲಿ
    ನೀನು ದಯೆತೋರುತಲಿ ಮುಡಿಯನು ಹರಡಿ ಲೋಕವನು
    ಸಾನುರಾಗದಿ ಕಾಯ್ದೆಯೆನ್ನುತ
    ಮಾನಿಸರು ಪೇಳಿಹರು ರುದ್ರನು
    ನೀನು ಹೇಗಾದೀಯೆ? ಶಂಕರ ಶಿವನೆ ನೀನೆಂದು!

    (ಶಿವ, ಶಂಕರ = ಮಂಗಳಕಾರಿ)

    • ಮೊತ್ತಮೊದಲು ಪದ್ಯಗಂಗೆಯನ್ನೀ ಚಿತ್ರಕ್ಕೆ ಅವತಾರಣ ಮಾಡಿಸಿದ ಹಂಸಾನಂದಿಯವರಿಗೆ ವಂದನೆಗಳು.

  • ರೌದ್ರದಿಂದಲ್ಲದೆಲದೆಂತೈ
   ರುದ್ರನಕ್ರಮಿಗಳನು ಸೆದೆಯುತೆ
   ಭದ್ರದಿಂ ಕಾವನಲೆ ಇಳೆಯನು
   ಛಿದ್ರಗೊಳ್ಳದವೋಲು ಪೇಳ್|

 2. ಗಂಗಾವತರಣಂ
  ಸ್ಥಾಣುವಿನ ಜಟೆಯಹುದು ಬಲುಬಿರುಬು, ಸುಲಭದಲಿ
  ವೇಣಿಗೊದಗದು ಶಿವೆಯು ಬೇಸತ್ತಿಹಳ್|
  ಮೇಣದೊಲು ಮಣಿವುದದು ನದಿಯೊಂದರೆಲ್ಲ ನೀ-
  ರೂಣೆಯಾಗದೆ(ಲೆ) ಸುರಿದು ನೆನೆಸಿರ್ದಿರಲ್||
  ಊಣೆಯಾಗದೆ: (A full river) Nothing less

  • ಪ್ರಸಾದು ಚೆನ್ನಾಗಿದೆ ಅತಿಶಯೋಕ್ತಿ

   • Tnx soma

    • ಕಲ್ಪನೆ ಚೆನ್ನಾಗಿದೆ. ಬಂಧ-ಭಾಷೆಗಳಲ್ಲಿ ಮತ್ತಷ್ಟು ಪ್ರಸಾದಗುಣವು ಬಂದರೆ ಒಳಿತು. (ಪ್ರಸಾದಗುಣ ಎಂದರೆ ಹಾದಿರಂಪರ ಗುಣವಲ್ಲ!!!…. ಆಲಂಕಾರಿಕರು ಹೇಳುವ ಓಜಸ್ಸು-ಮಾಧುರ್ಯ-ಪ್ರಸಾದಗುಣಗಳಲ್ಲೊಂದು. 🙂 🙂

 3. ಇದು ಪ್ರಸಿದ್ಧವಾದ ಗಂಗಾವತರಣಪ್ರಸಂಗ. ಸಗರನ ೬೦೦೦೦ ಮಕ್ಕಳಿಗೆ ಸಾಯುಜ್ಯವನ್ನು ದೂರಕಿಸಿಕೊಡಲು ಅವನ ವಂಶಜನಾದ ಭಗೀರಥನ ಪ್ರಾರ್ಥನೆಯನ್ನು ಮನ್ನಿಸಿ ಬ್ರಹ್ಮನು ಕಳುಹಿಸಿದ ಉಗ್ರಗಂಗೆಯನ್ನು ಶಿವನು ತನ್ನ ಜಟೆಯಲ್ಲಿ ಬಂಧಿಸಿ ಶಾಂತವಾಗಿಸಿ ಭೂಮಿಗೂ ಪಾತಾಳಕ್ಕೂ ಹರಿಸಿದ. ಎಲ್ಲರ ಪಾಪವನ್ನು ತೊಳೆವ ಗಂಗೆಯು ಶಿವನ ಜಟೆಯಲ್ಲಿ ತನ್ನ ಪಕ್ಕದಲ್ಲಿರುವ ಚಂದ್ರನ ಕಲೆಯನ್ನು ಕಳೆಯಲು ಅಸಮರ್ಥಳಾದುದಕೆ ಕಾರಣವನ್ನು ತಿಳಿಸುವ, ಸಂಸ್ಕೃತಕವಿ ಡಾ|| ಆರ್. ಶಂಕರ್ ರವರ ಪದ್ಯವೊಂದು ಇಲ್ಲಿ ಸ್ಮರಣೀಯ (ಭಾವಾನುವಾದ):
  ಅನಿಬರೆಲ್ಲರ ಪಾಪಮಂ ತೊಳೆದೊಡೇಂ ಗಂಗೆ
  ಸನಿಹದಿಹ ಚಂದಿರನ ಕಲೆಕಳೆದಳೇಂ|
  ಜಿನುಗುವೊಲ್ ಬಂಧದಿಂದಿಹಳು ಭೋರ್ಗರೆವಾಕೆ
  ಎನಿತೊ ಅಸಮರ್ಥಳೈ ದಾಸ್ಯದಿಂ ತಾಂ||

  • ಬಹಳ ಚೆನ್ನಾದ ಭಾವ

  • ತುಂಬ ಸೊಗಸಾದ ಅನುವಾದ. ಮೂಲದಲ್ಲಿಲ್ಲದ (ಜಿನುಗುವ….. ಭೋರ್ಗರೆಯುವ….ಇತ್ಯಾದಿ) ಹಲಕೆಲವು ಸುಂದರವಾದ ಭಾವಗಳನ್ನು ಒಳಗೊಂಡ ಚೆಲುವಾದ ಸರ್ಜನಶೀಲಾನುವಾದ (creative translation). ಅಭಿನಂದನೆಗಳು.

   • ಮೂಲಪದ್ಯವನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳಲಿಲ್ಲ, ಹೇಗೊ ಏನೊ ಎಂಬ ಆತಂಕದಲ್ಲಿದ್ದೆ. ಧ್ಯನ್ಯವಾದಗಳು.

 4. ಪಾರ್ವತ್ಯುವಾಚ:
  ನೆಮ್ಮದಿಯಿಂದಿದ್ನಿ ಗುಮ್ಮೆಂದು ಬಂದ್ಲವ್ವ
  ಹಮ್ಮಿಂದೆ ನನ್ನ ಸವ್ತವ್ವ| ಕೂರ್ತಾಳಿನ್
  ದಿಮ್ಮೆಂದು ಸಿವನ ಸಿರವೇರಿ||

 5. ಭಗೀರಥನಿಗೆ ಬ್ರಹ್ಮನು ವರವ ಕೊಟ್ಟರೂ, ಅದನ್ನು ಸರಿಯಾಗಿ ವಿಲೇವಾರಿ ಮಾಡಲು ಶಿವನು ಬೇಕಾಯ್ತು.
  ಅಪರವಕ್ತ್ರ|| ಬರಿದೆ ವರವು ಸಾಕೆ ಬ್ರಹ್ಮನಿಂ
  ವರಹರ ಬೇಡವೆ ನೇರ್ಪ ಗೈಯಲುಂ|
  ಭರವಸೆ ಅಧಿಕಾರಿ ನೀಡಲೇಂ
  ಕಿರಿಯಧಿಕಾರಿಯೆ ಮೇಲ್ ಲಗಾಯ್ತಿನಿಂ||

  • ಏನ್ರೀ, ನಮ್ ಶಿವಪ್ಪನ್ನ ಕಿರಿಯಧಿಕಾರಿ ಅಂತೀರಲ್ಲ!!

   • ಪರಮಪಿತನಿಗಿಂತ ಕಿರಿಯನಲ್ಲವೆ ಚಿತ್ರ-ಶಿಲ್ಪಗಳಲ್ಲಿ.

 6. What Brahma released was a ferocious Ganga. Bhagiratha had to ask Shiva to assuage her. And to request Shiva to do it, he arrives in Kailasa ahead of her! (See pic)
  ಜಲೋದ್ಧತಗತಿ|| ಅಗೋ ಪರಮತಾತನುಂ ಕಳುಹಿಸಲ್,
  ಲಗೂನೆ ಶಿವನನ್ನು ಗಂಗೆ ಪುಗಲೇಂ|
  ಇಗೋ ರಭಸದಾಕೆಯನ್ನು ಕ್ರಮಿಸೀ (overtake)
  ಭಗೀರಥನುಮಾಗಲೇ ಹರಗಮಂ||

 7. ಹರಿಪಾದೋದ್ಭವೆ ಗಂಗೆ ತುಂಗಲಹರೀ, ವಾಗೀಶಚಿನ್ಮಂಡಲ-
  ಸ್ಫುರದಂಗೀ ಸುರಮಾರ್ಗಶೋಧನಕರೀ ಚಿನ್ಮಾರ್ಗಸಮ್ಮಾರ್ಜನೀ
  ಹರಚಿದ್ಧ್ಯಾನಸರಸ್ತರಂಗರುಚಿರೇ ಚಿತ್ಸೃಷ್ಟಿರೂಪೇ ಸುಧಾ-
  ಕರರಶ್ಮಿಪ್ರಕರಪ್ರಭಾವಿಲಸಿತೇ ಭಾಗೀರಥೀ ಬಾರೆ ಬಾ

 8. Parvati has just alighted from her husband’s vehicle Nandi. She not driving her own vehicle (lion) would mean …
  ಪೃಥ್ವೀ|| ಅಪರ್ಣಳದೊ ಬಂದಿಹಳ್ ಶಿವನ ನಂದಿಯೇರೇತಕೋ?
  ಅಪಾರ್ಥಕೆಡೆಯಾದುದೇಂ ಚರಿಸದಿರ್ದಿರಲ್ ಸಿಂಹಮಂ|
  ನಿಪಾತಕೆಡೆಯಾಗುತುಂ ಬಹುದುರಸ್ತಿಗೈದಿರ್ಪುದೇಂ (Accident-servicing)
  ವಿಪಾಕಗೊಳೆ ಗರ್ಭದಿಂ ಮದದವಸ್ಥೆಯಂ ಪೊಂದುದೇಂ (Breeding season)||

  • ಹಹ್ಹಾ, ಇನ್ನೊಬ್ಬಾಕೆ ಬಂದಿದ್ದರಿಂದ ತನ್ನ ಒಡತಿಯ ಕಿಮ್ಮತ್ತು ಕಡಿಮೆ ಆಗಿ ಆ ಸಿಂಹ ಮಜಾಮೋಜು ಮಾಡಲು ಹೋಗಿರಬೇಕು. ಪಾಪ, ಈ ಮೊದ್ದು ಎತ್ತು…

  • ಪ್ರಸಾದರೇ, ಅಪರ್ಣೆಯದೊ, ನಂದಿಯೇರ್ದೇತಕೋ, ಆಗಬೇಕು.
   ಚರಿಸದಿರ್ದಿರಲ್ ಸಿಂಹಮಂ ಎಂದರೆ ಅರ್ಥಹೀನವಾಗುತ್ತದಲ್ಲವೇ. ಇರ್ದಿರಲ್ ಅಷ್ಟು ಹಿತವಾದ ಪ್ರಯೋಗ ಅಲ್ಲ. ಹರಿಯನೇರಿ ತಾಂ ಬಾರದೇ ಎಂದೇನಾದರೂ ಮಾಡಬಹುದು.

 9. Shiva has just one spare charmAMbara…
  ಎಷ್ಟೆಂಬೆ ಸೊಕ್ಕಾ ಭಗೀರಥಂಗಬ್ಬಬ್ಬ
  ದೃಷ್ಟಿ ಹಿಂಗಿರ್ಪುದೇನವನಿಂಗೆ ಕಾಣ್|
  ಚೇಷ್ಟಮೇಂ ಶರ್ವವಸ್ತ್ರದಮೇಲೆ ನಿಲ್ಲುವುದು
  ಕಷ್ಟದಿಂ ಗಳಿಸಿಹಂ ಬದಲಿಯೊಂದಂ||

 10. ಒಂದು ಗಂಗಾದಂಡಕ. ಹಿಂದಿನ ಮತ್ತೇಭವಿಕ್ರೀಡಿತದ್ದೇ ಭಾವವಿಸ್ತಾರ. ಬಹಳಷ್ಟು ತಪ್ಪುಗಳಿರಬಹುದೇನೋ, ವ್ಯಾಕರಣರೀತ್ಯಾ. ಬಲ್ಲವರು ತಿದ್ದಬೇಕು.

  ಜಯ ಜಯ ಹರಿಪಾದಸಂಭೂತೆ ತಚ್ಚಿದ್ವಿಲಾಸಪ್ರಭೇ ನೀರೆ ನೀರೇಜಸಂಜಾತಚಿನ್ಮಂಡಲಸ್ಫಾರೆ ಸಂಸಾರೆ ಜೀವೋತ್ಕರಾಧಾರಸಾರೇ ಪಯೋಧಾರೆ ದೇವಾಯನಾನಂದಸಂಚಾರೆ ಚಿತ್ಕರ್ಷಣಾಕಾರತೋಯೇ ಮನೋಭೂಮಿ ತಾ ತೋಯೆ ಬಾ | ಶಾಂಭವೀಧೂರ್ಜಟಾಮಂಡಲಾರಣ್ಯಕೈಕಾಂತತಾಶುಷ್ಕತಾವಾರಿಣೀ, ಶರ್ವಚಿದ್ಧ್ಯಾನವಾರಾನ್ನಿಧಿಸ್ರಂಸಯದ್ವೀಚಿಮದ್ವಾಹಿನೀ, ಶೈವಚಿತ್ಸ್ಫೂರ್ತಿದೇ ಸ್ತಂಭಿತೋತ್ಸೃಷ್ಟಿಚಿನ್ಮೂರ್ತರೂಪಾನ್ವಿತೇ ಜೀವವಂಶಾನ್ವಿತೇ ಮಾನಿತೇ ಹೇ ಮನೋವೃಕ್ಷಸಂಜೀವನೀ ನೀನಿದೀಗೆನ್ನ ಜೀವಕ್ಕಮರ್ದಾಗಿ ಸೌಹಾರ್ದದಿಂ ತೂಗುತೊಳ್ಪಿಂದೆ ನಲ್ವಿಂದೆ ಬಾ | ಶಂಕರೋತ್ತಂಸಭಾಸ್ವದ್ವಿಧುದ್ಯೋತಕಾಂಗೀ ಶುಭಾಂಗೀ ಶಿವೋಚ್ಚಾಂಗಸಂಪೀಡಿತಛ್ಛಂದಸಾಸ್ಯೂತಮಲ್ಲೀಸ್ರಗೀ ನೀ ಮನೋಮೌಳಿಗೆಂದೆಂದಲಂಕಾರವಾಗುತ್ತೆ ಚೆಲ್ವಿಂದೆ ಬಾ | ಪ್ರೋಲ್ಲಸಲ್ಲೀಲೆ ಸಛ್ಛೀಲೆ ಚಿಛ್ಛೀಲಮನ್ಮೌನಿವೃಂದಾನ್ವಿತಾನಂದಸಂಪೂರವೇಲಾಕುಲಾಲಂಬಿತೇ ಲಂಬಿತೇ ಹೇ ಮನಶ್ಶಾಂತಿಸಂದಾಯಿಕೇ ತಾಯೆ ನೀನೆನ್ನ ಮೌನಕ್ಕೆ ಮಾತಾಗಿ ಬಾ | ಬಾರೆ ಸಂಸಾರಮತ್ಸಾಗರಾವಾರಸಂಭೇದಿನೀ ಜೀವಜನ್ಮಾತ್ತಪಾಪಾಂಶಸಮ್ಮಾರ್ಜನೀ ಕ್ಲೇಶಸಂಹಾರಿಣೀ ಮನ್ಮೃತಾಹ್ಲಾದಸಂಬೋಧಿನೀ ಬೋಧಿನೀ ಹೇ ಮನಃಕಲ್ಮಶಾಶೇಷಸಮ್ಮರ್ದಿನೀ ತಾಯೆ ಬಾರೆನ್ನ ಭಾವಕ್ಕೆ ನೀ ಸ್ಪರ್ಶಮಾಣಿಕ್ಯಮಾಗುತ್ತೆ ಬಾ | ಬಾರೆ ಬಾ ಚಿತ್ತಕುಲ್ಲಾಸಮಂ ನೀಡೆ ಬಾ, ತೃಷ್ಣೆಯಂ ನೀಗಿ ನೀ ಪೋಷಿಸಲ್ ತೋಷಿಸಲ್ಕೀಗ ಬಾ | ಬಾರೆ ಮಚ್ಚಿಲ್ಲತಾಪಲ್ಲವಾವೇಶೆ ಕಾವ್ಯಾಂಕುರಾಲಂಬೆ ಮಜ್ಜೀವನಾಲಂಬೆ ಸಮ್ಮೋದದಿಂದಂಬೆ ಈಗೆಮ್ಮ ಕಾಯಲ್ಕೆ ನೀನಮ್ಮಿ ಬಾ | ಬಾರೆ ಬಾ ತಾಯೆ ನೀನೀಗ ಬಾ ||

  • ಲಯಬದ್ಧವಾಗಿದೆ, ಪದಪ್ರೌಢಿಯಿಂದ ಕೂಡಿದೆ, ತುಂಬ ಚೆನ್ನಾಗಿಯೇ ಇದೆ. ಇದನ್ಯಾಕೆ ’ದಂಡ’ಕವೆನ್ನುತ್ತೀರಿ.

   • ಧನ್ಯವಾದಗಳು 🙂 ಏನ್ಮಾಡೋದು, ತಮ್ಮಂಥ ಹಿರೀಕರು ಕೊಟ್ಟ ಹೆಸರು!! 🙁

    • 🙁

     • ದಂಡಕ ಚೆನ್ನಾಗಿದೆ. ಪ್ರಾಯಶಃ ಪದ್ಯಪಾನದ ಮೊದಲ ದಂಡಕವೇನೋ!….. ಕೆಲವೊಂದು ಸವರಣೆಗಳನ್ನು ಮುಖತಃ ಕಂಡಾಗ ತಿದ್ದುವೆ.

 11. ಸುರರ ಲೋಕದ ಗಂಗೆಯೇ ತಾಂ
  ಪರಿಯುತಂದದೆ ಸಾಗದಾದೊಡೆ,
  ನರನದೆಂತುಟೆ ಬಾಳುಗುಂ ಶಿವಕರುಣೆಯಿಲ್ಲದೆಯೇ!
  ಗಿರಿಜೆಯಾತನನೊಲಿಸೆ ಗೈದಿರೆ
  ನಿರುತ ತಪಮಂ ಸಾನುರಾಗದೆ
  ಬರಿದೆ ಬೇರೆಯ ಮಾರ್ಗಮಂ ನಾಂ ತಳೆಯೆ ಫಲಮಿರ್ಕೇಂ!

 12. ಆ ದಿನ ನಂದಿಯು ಕಂಡಂತೆ, ಚಿತ್ರಕ್ಕೆ ಹೋಲುವ ಕೆಲವು ಪದ್ಯಗಳೂ ಇವೆ :

  ಹರಪಾರ್ವತಿ ಕೈಲಾಸಶಿ-
  ಖರದಿರ್ಕೆಯೊಳಾಸಮೇರ್ದ ನಿತ್ಯದ ದೃಶ್ಯಂ
  ಚಿರಸೌಂದರ್ಯದುಲಿಗಳೇ
  ಪೊರಳ್ಚಿ ಲೋಕಾಭಿರಾಮದೀಕ್ಷೆಯ ಸಮಯಂ

  ಆಲಿಸುತವರುಲಿಯಂ ಗಡ
  ಕಾಲಡಿ ಕುಳಿತಿರ್ಪ ವೇಳೆಯೊಳಮಾ ಸಂತಂ
  ಕಾಲಾಂತಕಪ್ರಳಯಮಂ
  ಪಾಲಾಕ್ಷನೆ ನೀಗುಮೆನ್ನುತುಂ ಧಾವಿಸಿದಂ

  ಸುರನದಿಯೆನುವಂ, ತೊದಲುತೆ
  ಹರಿಪದಮೆನುವಂ ವಿರಿಂಚಿಯೆನುವಂ ಭಯದಿಂ
  ತ್ವರೆಯೆನುವಂ ಶಿವಪದಮಂ
  ಕರದಿಂ ಪಿಡಿಯುತೆ ಶಿರಸ್ಸಿಗಿಡುವನಧೀರಂ

  ಗಣಿಸಿದನೊರ್ಮೆಯವಸ್ಥೆಯ-
  ನೆಣೆಗೊಡುವನೆ ವಿಪ್ಲವಂಗಳಂ ತನ್ನೆದಿರೊಳ್?
  ಚಣಮಾತ್ರದೊಳಾಹವದಂ-
  ಕಣಮೆಂಬುವೊಲಾದುದಲ್ತೆ ಶಮದ ಪರಿಸರಂ

  ಭುಗಿಲೆನೆ ಪೀಠದೆ ನಿಂದಂ
  ಜಿಗಿಯುತಲಾನುಂ ತಪಸ್ವಿಯುಂ ಪಿಂತೆರ್ಚಲ್
  ನಗಜೆಯಲುಂಗುವೆಡದ ತೋಳ್
  ಬಿಗಿದಪ ಕೊಂಬಿಂದೆ ತಾಯ ಪಾಡನುಮರಿತೆಂ

  ನಗಜೆಯಲುಂಗುವೆಡದ – ನಗಜೆಯ ಅಲುಂಗುವ ಎಡದ

  ಹರನ ಕೊರಳಿನಾ ನಾಗಾ-
  ಭರಣಂ ನಿದ್ರಿಸುತಲಿರ್ದು ವಿಶ್ರಾಂತಿಗದೇ-
  ಕರರೇ ಭಂಗಂ ಗಡ ಶಂ-
  ಕರನೆನುವೊಲ್ ವ್ಯಾಕುಲಕ್ಕೆ ಶರಣೆನುತಿರ್ಕುಂ

  ಏನೆಂಬುದನಾನರಿಯೆಂ,
  ಬಾನನೆ ದಿಟ್ಟಿಸುತಲಿರ್ಪ ತಾಪಸಿ, ಮೇಣೀ-
  ಶಾನನಮಂತೆಯೆ, ಗೌರಿಯಿ-
  ನಾನುಮದೃಷ್ಟದ ನಿರೀಕ್ಷೆಯೊಳ್ ನಿಂದೆಂ ದಲ್

  ಧೋ ಎನಿಕುಂ ಮುಗಿಲವಗಡ-
  ದಾಯತಲಕ್ಷಣಮನೀವವೋಲೊರ್ಮೆ ಮಗುಳ್
  ಮಾಯೆಯ ಗರಗಸದಿಂದಡಿ-
  ಪಾಯಮೆ ಸೀಳಲ್ಕೆ ನಾಕದಿಂ ರವಮೆನಿಕುಂ

  ಸೆಟೆಯುತೆ ಶಿವನೊರ್ಚಣದೊಳ್
  ಜಟೆಯಂ ಬಿಡಿಸುತ್ತೆ ನಿಂದ ಪರಿಯಂ ಕಂಡು-
  ತ್ಕಟಜಲಧರಪರಿಕೀರ್ಣಿತ-
  ವಟವೃಕ್ಷನವೋಲ್ ಚತುರಭುಜಂ ಕಾಂಬಂ ದಲ್

  ಪಾರ್ವಂ ತಾನೆದರಿಸುತುಂ
  ನೂರ್ವಗೆ ಕಾಠಿಣ್ಯಮೈದೆಯೇಕೀ ಚಣದೊಳ್
  ಶರ್ವಂ ತ್ರಿಶೂಲಮುಳಿದಂ?
  ಪಾರ್ವತಿ ಪಿನ್ನಡೆತಕೇನನೀಕ್ಷಿಸುತಿರ್ಪಳ್

  ಶೀಕರಕಣಗಳೊ ಸೂಚಿಯಿ-
  ನಾಕರಮೊ ಕಂಟಿಸಲ್ ತನುವಂ ಧಾ-
  ರಾಕಾರಮಳೆಯನೊರ್ಮೆಲೆ
  ನಾಕದೆ ಪಡೆದಂ ಜಟಾಳಿಯೊಳ್ ಭೂತೇಶಂ

  • ಆಹಾ, ವ್ಯಾಕುಲಕ್ಕೆ ಶರಣು, ಮಾಯೆಯ ಗರಗಸ, ಉತ್ಕಟಜಲಧರಕೀರ್ಣಿತವಟವೃಕ್ಷ,… ತುಂಬ ಚೆನ್ನಾಗಿದೆ ಸೋಮರೇ 🙂 ಚತುರ್ಭುಜಂ ಟೈಪೋ ಆದಂತಿದೆ.

  • Very prolific & graphic. The theatrics in the fourth verse is too good. Bhagiratha’s anxiety (3rd) and the snake’s predicament (6th) are depicted well. A mini khaNDakAvya! Kudos Soma.

   • ನೀಲಕಂಠ, ಪ್ರಸಾದು, ಧನ್ಯವಾದ, ಹೌದು ಚತುರ್ಭುಜ ಟೈಪೋ ಸರಿಪಡಿಸಿದ್ದೇನೆ

    • ಸೋಮಾ! ಆಹ! ಮಹಾದ್ಭುತ-
     ಭೀಮೋಜ್ಜ್ವಲಚಾರುಮಧುರಕವಿತಾಗಂಗಾ-
     ಸ್ತೋಮಂ ಪರಿದಿರ್ಕುಮಲಾ
     ಸ್ಥೇಮಂ ನಿನ್ನ ಪ್ರಬುದ್ಧಕಾವ್ಯಾಧ್ಯಯನಂ||

 13. ಶಿವನೆ ಶ೦ಕರನೆ ಗೌರೀ ಮನೋಹರನೆ ಕೇ-
  -ಶವನೆ ತ್ರಿಶೂಲಧರ ನಿಟಿಲ ನೇತ್ರನೆ ವೃಷಭ
  ಧವನೆ ಬಿಲ್ವ ಪ್ರಿಯನೆ ಸೋಮಶೇಖರನೆ ನಾಗಾಭರಣಯೆನುತ ಜಪಿಸೆ I
  ಭವಭಯಾಪಹರನ೦ ಶಂಭುವಂ ವತ್ಸರದೆ
  ದಿವಸವುಂ ನೆನೆದ ರಾಜ೦ ಭಗೀರಥಗಂದು
  ಶಿವನೊಲಿದು ಗಂಗೆಯ೦ ಶಿರದೆ ತಾಧರಿಸಿ ಭೋರ್ಗರೆವಳ೦ ಕರೆದು ತಡೆಯೆ II

  ಲೋಕಪಾವನೆಯೆ ಬಾರೆ ಜಾಹ್ನವಿಯೆ ಬಾರೆ ಬಾಯೆನುತೆ ಶಾಂಭವ೦
  ನಾಕಜಾಪಗೆಯ ವೇಗಮಮ್ ತಡೆಯೆ ಕಾಲ್ಗಳ೦ ಧೃಡದೆವೂರುತುಂ I
  ಸೇಕದ೦ತುದಕ ಸೇಚನ೦ಬಡೆವ ಚಿತ್ರಮಮ್ ಬರೆದ ರಾಜನುಂ
  ಲೋಕಮಾನ್ಯನೆನೆ ಕಾವ್ಯಕಂ ರಚಿಸೆ ಚಿತ್ರಮಿಂತೆಸೆದು ಶೋಭಿಕು೦ II

  • ಚೆನ್ನಾಗಿದೆ. ಕೇಶವ ಎಂಬುದು ಶಿವನಿಗೆ ಹೇಗೆ ಅನ್ವಯಿಸುತ್ತದೆ?
   ಎರಡನೇದ್ದು ಯಾವ ವೃತ್ತ? ದೃತವಿಲಂಬಿತದಂತಿದೆ, ಆದರೆ ಕೊನೆಗೆ ಪಂಚಮಾತ್ರಾಗಣವಿದೆ. ದೃಢದೆ ಆಗಬೇಕು. ನಾಕಜಾಪಗೆ ಎಂದರೇನು?

   • ನೀಲ ಕಂಠರೇ , ನೀವು ಬರೆದಿರುವುದು ಬಹಳ ಚೆನ್ನಾಗಿದೆ

    ಕೇಶವ =ಸುಂದರವಾದ ಕೇಶ ಉಳ್ಳವನು ಎಂಬರ್ಥದಲ್ಲಿ. ವಿಷ್ಣು ಸಹಸ್ರ ನಾಮಲ್ಲಿರುವ ವಿವರಣೆಯಿ೦ದ ನಾನು ಇಲ್ಲಿ ಪ್ರಯೋಗಿಸಿರುವುದು . ಅದಲ್ಲದೆ ಇನ್ನೂ ಬೇರೆ ಅರ್ಥಗಳೂ ಇವೆ .
    ನಾಕಜಾಪಗೆ ಎಂಬುದಕ್ಕೆ –
    ನಾಕೇ ಜಾತಾ =ನಾಕಜಾ
    ಆಪ: ಗಚ್ಛಂತಿ ಇತಿ ಆಪಗಾ ಅಂದರೆ –ನಾಕಜಾ ಚ ಆಪಗಾ ಚ = ನಾಕಜಾಪಗಾ . ನಾಕದಲ್ಲಿ ಹುಟ್ಟಿ ಹರಿಯುವ ನೀರು . ಕನ್ನಡಲ್ಲಿ ನಾಕಜಾಪಗೆ(ಗಾ) ಎಂದಾಗಿದೆ . (ವಿವರಣೆ ಸಂಸ್ಕೃತ ಭಾಷೆ ಬಲ್ಲವರಿ೦ದ — ನನಗೆ ಓದುವಷ್ಟೇ ತಿಳಿದಿರುವುದು )

    ‘ಪ್ರಕೃತಿ’ ಎಂಬ ಛ೦ದಸ್ಸು ‘ತರ೦ಗ ‘ ಎಂಬ ವೃತ್ತ . ಒಂಬತ್ತನೆಯ ಅಕ್ಷರ ಸ್ಥಾನದಲ್ಲಿ ಯತಿ . (ಕನ್ನಡ ಛಂದ: ಕೋಶ – ಡಾ .ಟಿ ವಿ ವೇಂಕಟಾಚಲ ಶಾಸ್ತ್ರಿ )

    ಮೇಲೆ ಬರೆದ ಮೊದಲಿನ ಪಾದದಲ್ಲಿ ಯತಿ ಸ್ಥಾನ ಸರಿ ಇದೆಯೇ ಎಂಬ ಸಂದೇಹವಿದೆ . ದಯವಿಟ್ಟು ತಿಳಿಸಿರಿ .

    ‘ದೃಢದೆ ‘ ಎಂಬುದು ಟ೦ಕನ ದೋಷ . ಕ್ಷಮಿಸಿರಿ

    • Thanks for details 🙂
     Am little sad as my “kanTha” is separated from “neela” 🙁

    • And, what is Chhandas and what is vrutta? Sorry for getting into basics, but was under impression that both are interchangeably used, but now I see what you say it prakruti chhandas and taranga vrutta 🙂

     • Same here. My understanding is that mAtrA, vRtta and aMsha are the three divisions of chandas.

     • ನಾನು ಅರ್ಥ ಮಾಡಿಕೊಂಡಂತೆ ,ಅಕ್ಷರ ವೃತ್ತಗಳ ಛ೦ದಸ್ಸಿನ ಚೌಕಟ್ಟು ಅಕ್ಷರಗಳ ಸಂಖ್ಯೆಗಳಾಗಿರುತ್ತವೆ .ಹ್ರಸ್ವ ,ಧೀರ್ಘಾ ಕ್ಷರಗಳ ಪಾದ(ಗಳು ) ವಿವಿಧ ವಿನ್ಯಾಸದಲ್ಲಿರುತ್ತವೆ . ಇವುಗಳನ್ನು ಗಣಗಳಿಂದ ಗುರುತಿಸಬಹುದು . ಉದಾ :- ಮೇಲೆ ನಾನು ಬರೆದ ಪ್ರಕೃತಿ ಎಂಬ ಛಂದಸ್ಸಿನಲ್ಲಿಯೇ ಪದ್ಯಪಾನದ ಅಕ್ಷರವೃತ್ತಗಳ ಪಟ್ಟಿಯಲ್ಲಿರುವ ಸ್ರಗ್ಧರಾ , ಚಂಪಕ ಮಾಲೆ, ವಿಯೋಗಿನಿ ವೃತ್ತಗಳು ಬರುತ್ತವೆ . ಅಕ್ಷರಗಳ ವಿನ್ಯಾಸ , ಯತಿಸ್ಥಾನಗಳು ಬೇರೆ ಬೇರೆಯಾಗಿವೆ . ಅವುಗಳಲ್ಲಿ ಅಕ್ಷರಗಳು ೨೧.
      ಬಹುಶ: ಅಕ್ಷರಗಳ ಮೊತ್ತದಿಂದ, ಅಕ್ಷರವೃತ್ತಗಳ ಛ೦ದಸ್ಸನ್ನು ಗುರುತಿಸಬಹುದು. ಪದ್ಯಪಾನದಲ್ಲಿ ಕೊಟ್ಟ ಪಟ್ಟಿಯಲ್ಲಿ ೧೧,೧೨,೧೩, ೧೪,೧೫ ೧೭……. ಇತ್ಯಾದಿಯಾಗಿ ಅಕ್ಷರಪಾದಗಳ ಅಕ್ಷರವೃತ್ತಗಳಿವೆ . ಆ ಸಂಖ್ಯೆಯ ಆಧಾರದಲ್ಲಿ ಅವುಗಳನ್ನು ಬೇರೆ ಬೇರೆ ಅಕ್ಷರವೃತ್ತದ , ಛ೦ದಸ್ಸುಗಳೆಂದು ನಾನು ಗುರುತಿಸುವುದು .

      ಮತ್ತೆ ನಿಮ್ಮ ಹೆಸರನ್ನು ವಿಭಾಗಿಸಿ ಬರೆದುದಕ್ಕಾಗಿ — ಶಿವ, ಕೃಷ್ಣ ,ನವಿಲುಗಳು ಬಂದಾಗ ಆ ಹೆಸರನ್ನು ಪದ್ಯದಲ್ಲಿ ಬರೆದು ತಪ್ಪು ಕಾಣಿಕೆ ಸಲ್ಲಿಸುತ್ತೇನೆ .

  • ಎರಡನೆಯ ಪದ್ಯವು ವೃತ್ತದಂತೆ standardized ಆದ ಸಂತುಲಿತಮಧ್ಯವರ್ತಗತಿಗೆ (ದ್ರುತವಿಲಂಬಿತವಲ್ಲ) ನೀವು ಹೇಳಿದಂತೆ ಪಾದಾಂತ್ಯದ ಗುರುವಿನ ಬದಲು ಒಂದು ಗಣವೇ ಇದೆ.

   • Haa ಹೌದು

    • ನೀಲಕಂಠ ಮತ್ತು ಪ್ರಸಾದರಿಬ್ಬರೂ ಭಾಲ ಅವರ ಅನವದ್ಯವಾದ ಪದ್ಯಗಂಗಾಪ್ರವಾಹಕ್ಕೆ ಅದೆಷ್ಟು ಪ್ರಶ್ನೆಗಳ ಜಟಾಜೂಟಬಂಧವನ್ನೊಡ್ಡಿದರೂ ಅದು ಧುಮ್ಮಿಕ್ಕಿ ಭೋರ್ಗರೆದು ಹೊಮ್ಮಿ ಸುಮ್ಮಾನಗೊಂಡಿದೆ 🙂

     • ಸರ್, ಈ ಅಲಂಕಾರ ಸಹಿತವಾದ ಮೆಚ್ಚುಗೆಗೆ ಧನ್ಯವಾದಗಳು .

 14. ಮೊದಲಿಗೆ ಬರೆದಿದ್ದ ಭಾಮಿನಿಯನ್ನೇ ಹಿಗ್ಗಿಸಿ ಮತ್ತೇಭವಿಕ್ರೀಡಿತದಲ್ಲಿ ಒಂದು ಪ್ರಯತ್ನ. ಸನ್ಮಿತ್ರ ಡಾ.ಶಂಕರ್ ಅವರು ಹೇಳಿದಂತೆ ಮತ್ತೇಭಚರ್ಮಧಾರಿಗೆ, ಮತ್ತೇಭವಿಕ್ರೀಡಿತ 🙂

  ಈ ಹಿಂದೆ ಪದ್ಯಪಾನದಲ್ಲಿಯೇ ಕೊಟ್ಟಿದ್ದ ಇನ್ನೊಂದು ಪ್ರಶ್ನೆಗೆ ಉತ್ತರವಾಗಿ ನಾನು ಬರೆದಿದ್ದ ಕೆಲವು ಸಾಲುಗಳನ್ನು ಸಾಲ ತೆಗೆದುಕೊಂಡಿರುವೆ!

  ದಿಗಿಲೊಳ್ ಬೇಡಿರಲಾ ಭಗೀರಥ ಮುದಲ್ ಶ್ರೀವಿಷ್ಣು ಪಾದಂಗಳಿಂ
  ಭರದೊಳ್ ಬಿರ್ದಿಹ ಗಂಗೆಯಾರ್ಭಟವನುಂ ಹಬ್ಬುತ್ತ ನೀಳ್ಗೂದಲಂ
  ಹಿತದೊಳ್ ಮಾಣಿಸುತಾಕೆಯಂ ನಲುಮೆಯಿಂ ಕಾಪಿಟ್ಟೆ ಮೂಲೋಕಮಂ
  ದಿಟದೊಳ್ ಶಂಕರ ರೂಪಿ ನೀನೆನಿಸಿರಲ್ ನೀ ರುದ್ರನೆಂದೆಂಬರೇ?

  • ಚೆನ್ನಾಗಿದೆ ಹಂಸಾನಂದಿಯವರೇ. ಆದರೆ ಗಂಗೆ ಬಿದ್ದ ರಭಸಕ್ಕೆ ಆದಿಪ್ರಾಸವೇ ಓಡಿಹೋಗಿದೆಯಲ್ಲ 🙂
   ಜೊತೆಗೆ ಕೆಲವು ತಿದ್ದುಗೆಗಳು. ಭಗೀರಥಂ, ಆರ್ಭಟಮಂ, ಪರ್ಬುತ್ತೆ.

   • ದಿಗಿಲೊಳ್ ಎಂಬುದನ್ನು ಮುದದೊಳ್ ಎಂದು ಸವರಿದರೆ, ಪ್ರಾಸವು ಸರಿಯಾಗುತ್ತದೆ – ಮೊದಲೆರಡು ಲಘುಗಳನ್ನು ಒಂದು unit ಎಂದು ಗ್ರಹಿಸಬೇಕಷ್ಟೆ 🙂

    • @prasAdu ಮೊದಲು ನೀವು ಏನು ಹೇಳ್ತಿದೀರಿ ಅಂತ ತಿಳೀಲಿಲ್ಲ, ನಿದಾನವಾಗಿ ಕೊಳವೆ ದೀಪ ಹತ್ತಿಕೊಂಡಿತು 🙂 🙂

    • For the record, ಅದು ವಿನೋದದ ಪ್ರತಿಕ್ರಿಯೆ ಅಷ್ಟೆ. ಶಾಸ್ತ್ರಿಯವಾಗಿ ಸಾಧುವಲ್ಲ.

    • ಆಗ ಅದು “ಶಾರ್ದೂಲವಿಕ್ರೀಡಿತ”ವಾಗುವುದಲ್ಲವೇ ?!! ಪ್ರಸಾದ್ ಸರ್
     ಹಂಸಾನಂದಿಯವರೇ ಪದ್ಯ ಚೆನ್ನಾಗಿದೆ ಭುವಿಯೊಳ್/ಜವದೊಳ್/ಸವಿಯೊಳ್/ಭವದೊಳ್ ಹೊಂದುವುದೇ?

     • ಕರೆಕ್ಟ್! ಹಾಗೆಲ್ಲ ಮಾಡಿದರೆ ಹುಲಿ ಬಂದು ಕಚ್ಚಿಕೊಂಡುಹೋಗುತ್ತದೆ!

   • ಧನ್ಯವಾದಗಳು ನೀಲಕಂಠ ಅವರೆ. ಹಬ್ಬುತ್ತ ಅನ್ನುವುದಕ್ಕೆ ಪರ್ಬುತ್ತ ಎಂದು ಬರೆಯಬೇಕೆಂದು ಕೊಂಡಿದ್ದರೂ ಅದು ಸರಿ ಕೇಳಿಸಲಿಲ್ಲವಾಗಿ ಬರೆಯಲಿಲ್ಲ. ಸವರಣೆಗೆ ಧನ್ಯವಾದಗಳು. ಯತಿಯನ್ನು ಪಾಲಿಸಿದ್ದರಿಂದ ಪ್ರಾಸವನ್ನು ಬಿಟ್ಟೆ 🙂 ಪರವಾಗಿಲ್ಲವೇನೋ ಅಂತ. ಭಗೀರಥಂ ಎಂದು ಬರೆದರೆ ಒಂದು ಮಾತ್ರೆ ತಪ್ಪುವುದಿಲ್ಲವೇ? ಆರ್ಭಟಮಂ ಬದಲು ಆರ್ಭಟಮನುಂ ಎಂದರೆ ತಪ್ಪಾಗುತ್ತದೆಯೇ?

    • ಹೌದು, ವ್ಯಾಕರಣಕ್ಕೆ ಸಂಬಧಿಸಿದ ತಿದ್ದುಗೆಗಳನ್ನು ಕೊಟ್ಟೆ ಅಷ್ಟೆ. ಇನ್ನು ಮುಂದೆ ಛಂದಸ್ಸಿಗೆ ಭಾಗಿಸುವುದು ತಮ್ಮ ಜವಾಬ್ದಾರಿ 🙂
     ಯತಿಪಾಲನೆಯಿಂದ ಆದಿಪ್ರಾಸಕ್ಕೆ ವಿನಾಯಿತಿ ಇದೆಯೇ ಕನ್ನಡದಲ್ಲಿ?

     • ಒಂದೊಮ್ಮೆ ಹಂಸಾನಂದಿಯವರು ಯತಿಜೀವನಧರ್ಮವನ್ನು ಚಾಚೂ ತಪ್ಪದೆ ಪಾಲಿಸುವುದಾಗಿ ಮುಚ್ಚಳಿಕೆಯನ್ನು ಬರೆದುಕೊಟ್ಟರೆ, ಆದಿಪ್ರಾಸವಿನಾಯಿತಿಯನ್ನು ಕರುಣಿಸೋಣಂತೆ, ಏನೀಗ!

  • ನೀವು ಹೀಗೆಲ್ಲ ಹೇಳಿದರೆ ಅದಕ್ಕೆ ಕೋಪಬರದೆ ಇನ್ನೇನಾಗುತ್ತೆ!
   ಛಂದದಾಯ್ಕೆಗೆ, ಮತ್ತಮಾಯ್ಕೆಗ-
   ಮೊಂದು ಕಾರಣಮನ್ನು ನೀಡ-
   ಲ್ಕೆಂದು ಭಾಮಿನಿಯನ್ನು ಹಿಗ್ಗಿಸಿ
   ತಂದೆ! ಮತ್ತೇಭಮೆನುಗೇಂ!

 15. ಭಗಿಯಿಚ್ಛೆಗೊಲಿದಿಳಿದು ಬುವಿ ಸೇರ ಬಂದಳೈ (ಭಗಿ ಎನ್ನುವುದು ಭಗೀರಥನ ಹೆಸರಿನ short form)
  ನಗುಮೊಗದಿ ಹರಿಪಾದದಿಂದತಾ ಗಂಗೆಯೌ
  ಬಿಗುಮಾನದಿಂದಿಳಿದು ಮಲಿನವಾಗುವಮುನ್ನ
  ಜಗದೀಶ ಪಿಡಿದುದಕ ಪೊರೆವತಾಂ ಕರುಣದಲಿ

 16. ಜಗದೀಶಂ ನಿಜಪೊಂದುತುಂ ಹೃದಯದೊಳ್ ಹೈಮಾದ್ರಿ ಸಂಜಾತೆಯಂ,
  ಸೊಗದಿಂ ಚಿಮ್ಮಿಹ ಗಂಗೆಗುಂ ಶಿರದೊಳೇ ಮೇಣೀಯುತುಂ ಸ್ಥಾನಮಂ,
  ಮಿಗೆತಾಂ ಪೆಣ್ಗಳ ವರ್ಗಕುಂ ಸಮತೆ ಮೇಣ್ ಪ್ರೀತ್ಯಾದಿಯಂ ನೀಡಿರಲ್!
  ಸಿಗಲೇಂ ಮೇಣ್ ಸಿಗದಿರ್ದೊಡೇನು ಭುವಿಯೊಳ್ ಸಂಭಾವ್ಯ ಸಮ್ಮಾನಗಳ್!

  • ನೆವದಿಂ ಪೆಣ್ಗಳ ವರ್ಗಮಂ ಸಮತೆಯಿಂ ತಾಂ ಕಂಡಿರಲ್ ಸಾಧ್ಯಮೇಂ!
   ಬುವಿಯೊಳ್ ಸಂದಿಹ ಮಾನಸನ್ನುತಿಯೊಳೇ ರಾಮ್ ಪಾಪ! ಸಂತುಷ್ಟನೌ 🙁

   • ರಾಮ್ ಪಾಪಸಂತುಷ್ಟನೌ!

    • ಪಾಪ! ಏಕೆ?

    • ಹಾ!! ನೀವಿಬ್ಬರೂ ತಪ್ಪಾಗಿ ನನ್ನ ಪದ್ಯವನ್ನು ಅರ್ಥಮಾಡಿಕೊಂಡಿದ್ದೀರಾ 🙂
     ಮಹಿಳಾ ದಿನದಂದು ಮಹಿಳೆಯರ ಧ್ವನಿಯಿದಾಗಿತ್ತು 🙂 ಈಗ ನಿಮ್ಮನ್ನು ದಾರಿತಪ್ಪಿಸಿದ್ದ ಒಂದು ಸಾಲಿನಲ್ಲಿ ಸ್ವಲ್ಪ ತಿದ್ದುಗೆಯನ್ನೂ ಮಾಡಿದೆ ! (ಶಿವನೇ ಹೆಣ್ಣುಗಳಿಗೆ ಸ್ಥಾನವನ್ನು ಕೊಟ್ಟಿರುವಾಗ, ಭೂಮಿಯಲ್ಲಿ ಸರಿಯಾದ ಸ್ಥಾನ ಹೆಣ್ಣಿಗೆ ಸಿಕ್ಕರೇನು!ಸಿಗದಿದ್ದರೇನು!)

     • ೧) ಶಿವನಿಗೆ ಆ ಯೋಗವಿದೆ, ಶ್ರೀರಾಮನಿಗೆ ಇಲ್ಲ ಎಂದಷ್ಟೇ ನಾನು ಹೇಳಿರುವುದು. ಕುಂಬಳಕಾಯಿ ಕ…..
      ೨) ನಿಮ್ಮ ಪರಿಷ್ಕೃತ ಮೂರನೆಯ ಸಾಲು ನನ್ನ ಪ್ರತಿಕ್ರಿಯಾಪದ್ಯದಲ್ಲೂ ಸಲ್ಲುತ್ತದೆ, ನಿಲ್ಲುತ್ತದೆ 😀

     • ಹೌದು! ಈ ಅನುಕಂಪದ ಮಾತು “ರಂಗಣ್ಣ”ನಿಂದಲ್ಲದೇ ಇನ್ನೆಲ್ಲಿಂದ ಬಂದೀತು! 🙂

     • prasaadaru shuurpanakhiya paravaagi sahaanubhooti tOrisuttiruvantide!! 🙂

     • ’ರಂಗಣ್ಣ’ ಎನ್ನುವುದನ್ನು quotesಲ್ಲಿ ಏಕೆ ತೋರಿಸಿರುವಿರೋ ಕಾಣೆ. ಅಲ್ಲಿರುವುದು ರಂಗ (ವೇದಿಕೆ); ರಂಗು ಅಲ್ಲ ಎಂದು ನಿಮಗೆ ತಿಳಿದಿದ್ದರೆ ಅಷ್ಟೇ ಸಾಕು 🙁
      ನೀಲಕಂಠರು ಶೂರ್ಪಣಖಿಯನ್ನು ಏಕೆ ಎಳೆತಂದರೋ ತಿಳಿಯುತ್ತಿಲ್ಲ!

 17. ಬಸವ ಉವಾಚ
  ಸಾಂಗತ್ಯ – ನನ್ನೊಲ್ಮೆಯೊಡೆಯನು ಜಾಹ್ನವಿಯ ಧರನಾಗ-
  -ಲಿನ್ನಿಲ್ಲ ನೀರಿಗೆ ಕೊರತೆ
  ಚೆನ್ನಾಗಿಲ್ಲಿಯೆ ನಾ ಹಾಯಾಗಿ ನಿದ್ರಿಸುವೆ-
  – ನಿನ್ನು ಶಿವ ಸನಿಹದಲುದಕ

  • ನಿನ್ನುಽ ಶಿಽ/ವ ಸನಿಽಹಽ/ದಲುದಕ ಎಂದು ವಿಭಜಿಸಿದರೆ – ಕೊನೆಯದಾದ ಬ್ರಹ್ಮಗಣದಲ್ಲಿ ನಾಲ್ಕು ಲಘುಗಳಿಗೆ ಅವಕಾಶವಿಲ್ಲ.
   ನಿನ್ನುಽ ಶಿಽ/ವ ಸನಿಽಹದ/ಲುದಕಽ ಎಂದು ವಿಭಜಿಸಿದರೆ – ಮಧ್ಯದ ವಿಷ್ಣುಗಣದಲ್ಲಿ ಐದು ಲಘುಗಳಿಗೆ ಅವಕಾಶವಿಲ್ಲ. Please visit http://padyapaana.com/?page_id=1024
   ಹೀಗೊಂದು ಸವರಣೆ:
   ನನ್ನೊಲ್ಮೆಯೊಡೆಯನು ಜಾಹ್ನವಿಯ ಧವನಾಗ-
   ಲಿನ್ನಿಲ್ಲ ನೀರಿಗೆ ಕೊರತೆ|
   ಚೆನ್ನಿಂದೆ ನಾನಿಲ್ಲೆ ಹಾಯಾಗಿ ನಿದ್ರಿಪೆ-
   ನಿನ್ನು ಬೀ/ದಿಯ ನಲ್ಲಿ/ಯೇಕೆ?

  • Nice idea 🙂

  • ಬಾಯಾರಿ ದಣಿದ ಎತ್ತು ಶಿವಪ್ಪನ ಜಟೆ ಮೇಲಿನ ನೀರಿನೊರತೆಗೆ ಬಾಯಿ ಹಾಕಿ ನೀರು ಕುಡಿದು, ಪೊದೆಹುಲ್ಲು ಅಂತ ಅವನ ಕೂದಲನ್ನೇ ಮೇಯಲು ಹೋಗಿ ಅಲ್ಲೆಲ್ಲ ಹರಿದಾಡೋ ಹಾವಿನ ಕಾಟಕ್ಕೆ ಸಿಕ್ಕಿ ಯದ್ವಾತದ್ವಾ ಹಾರಾಡಿ, ಪಾಪ ತೆಪ್ಪಗೆ ಕೂತಿದ್ದ ಶಿವಪ್ಪನ ಕೈಕಾಲ ಮೇಲೆ ಒದ್ದು ಅವ ಎದ್ದು ಸಿಟ್ಟಿಗೆದ್ದು ಎತ್ತು ಓಡಿಸಿ ಹಾವು ಕಿತ್ತೊಗದು ಗಂಗಿ ವಾಪಸ್ಸು ಮ್ಯಾಲೆ ಕಳಿಸಿ… ಇದನೆಲ್ಲ ನೋಡಿ ನಗತಿದ್ದ ಚಂದ್ರನ ಬಡದು ಓಡಿಸಿ, ಇದೆಲ್ಲ ಆಗೋ ಮಟ ಏನ ಮಾಡತಿದ್ದಿ ಅಂತ ಪಾರ್ವತೀಗೆ ಬೈದು, ನನಗ ಈ ವಿಷ ಒಂದು ಸಾಕು ಅಂತ ಗಂಟಲ ಕಡೆ ನಿಮೀಲಿತನೇತ್ರನಾಗಿ ನೋಡ್ತಾ ಕೂತ… ಅವನ ಆ ಕೂತ ಭಂಗಿ ನಮಗೆಲ್ಲ ಶಾಂತಿ ನೆಮ್ಮದಿ ಕೊಡಲಿ…

 18. ತಾರಕನ ವಧೆಗೆನುತೆ ಗೌರಿಯಂ ವರಿಸಿದನು,
  ಧಾರಿಣಿಯ ಹಿತಕೆಂದು ಸುರಗಂಗೆಯಂ!
  ಬೇರೆಲ್ಲಮಂ ಪೊರೆಯೆ ತಾನಿಂದನೆದೆ ಸೆಟೆದು,
  ಮೂರು ಕಂಗಳ ಚೆಲ್ವ ಮುಕ್ಕಣ್ಣನು!!

  • ಈ ಲೆಕ್ಕದಿಂದೊರೆಯೆ ನೀಂ ಕೃಷ್ಣಕಥೆಯನುಂ
   ಬಾಲಗೋಚಿಯವೋಲು ಬೆಳೆವುದದು ಕೇಳ್|
   ಲೀಲೆಯಮಿತಂ ಗೋಪಬಾಲಿಕೆಯರರಸನದು
   ಮೂಲಮಹಿಷಿಯರಿಂದೆ (+16000+) ರಾಧೆವರೆಗಂ||

   ಜಾಸ್ತಿ ಯೋಚಿಸದಿರ್ದುಮೊರೆಯುವುದೆ ಒಳಿತೆಂಬೆ
   ದುಸ್ತರೋಪಮೆಗಳಂ ಬಳಸಿಬಳಸಿ|
   ವಿಸ್ತಾರದೊಳು ಮಹಾಕಾವ್ಯವನೆ ಮೀರಿಸುವ
   ದಾಸ್ತಾನಿರಲ್ ಖಂಡಕಾವ್ಯಮದರೊಳ್||

   ಕುದುರುವುದು ಕೈ ಕುದುರುವುದು ಮನಸು, ಛಂದಸ್ಸು
   (ferment)ಹುದುಗುವುದಲಂಕಾರ-ಕಲ್ಪನೆಯು ಮೇಣ್|
   ಸದೆಬಡಿಯಬಹುದಾಗ ನಮ್ಮನಿನ್ನಿಲ್ಲದಂ-
   ತುದಯೋನ್ಮುಖದ ಕಬ್ಬಿಗಳೆನಿಸೋರ್ವಳ್||

 19. ಗಂಗೆ ಉವಾಚ –
  ಅರರರೆ ! ಶಿವನಾ ಜಟೆಯಿಂದಿಳಿಯುತ್ತ
  ಧರೆಯನ್ನು ಸೇರುವೆ ಬೇಗ
  ಹರನಲದೆಷ್ಟೊಂದು ಕೇಶದ ರಾಶಿಯ-
  -ಲಿರುವೆನು ಸ್ಥಿರದಲಿ ನಾನು

  • ಗಂಗೆ ಉವಾಚ is ಅರಿಸಮಾಸ.
   ಅರರರೆ/ ಶಿವನಾ/ ಜಟೆಯಿಂದಿ/ಳಿಯುತ್ತ:
   1) The second gaNa is incorrect – ನನನಾ not permissible
   2) For the same reason you can’t have ಜಟೆಯಿಂ as the third gaNa
   3) The fourth gaNa is a ಲಗಂ.
   ಹರನಲಿ …… ರಾಶಿಯಲಿ: ಹರನೊಳದೆಷ್ಟೊಂದು ಕೇಶದ ರಾಶಿಯು! ಅದರೊಳು …

   • ಕಷ್ಟವಪ್ಪಾ …..ಈ ಸಾಂಗತ್ಯದ ಸಾಂಗತ್ಯ…. ಚತುರ್ಮಾತ್ರಾ ಚೌಪದಿಯಲ್ಲೇ ಬರೆಯುತ್ತೇನೆ…

    ಅರರರೆ ! ಶಿವನಾ ಜಟೆಯಿಂದಿಳಿಯುತ
    ಧರೆಯನು ಸೇರುವೆ ಬೇಗದಲಿ
    ಹರಶಿರದಲ್ಲಿದೆ ಕೇಶದ ರಾಶಿಯು
    ಸರಸರ ಹೇಗೆನಾ ಬರಲೀಗ

    • Ankita, 4th line has a 5 matra gana 🙂

    • I have rephrased your verse in sAngatya:
     ಅರರಽರೆಽ! ಈಶಽನಽ ಶಿರದಿಂದಽಮಿಳಿಯುತ್ತೆಽ
     ಧರೆಯಽನುಽ ಸೇರ್ವೆಽನಽದೆಂತೋ|
     ಪರಮೇಶಽಜಟಿಲಽಜಽಟೆಯೊಳೆಂತೊಽ ಸಿಲುಕಿಽಹೆಽ
     ಸರಸಽರಽ ಸರಿಯಽಲಾನೆಂತುಽ||

    • ತುಂಬಾ ಸುಂದರವಾದ ಕಲ್ಪನೆ ಅಂಕಿತ, ಬೊಕ್ಕತಲೆ ಶಿವನನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ !!

     ಅರರರೆ ! ಶಿವನಾ ಜಟೆಯಿಂದಿಳಿಯುತೆ
     ಧರೆಯನು ಸೇರೆನೆ ವೇಗದಲಿ
     ಹರಶಿರದಲ್ಲಿದೆ ಕೇಶದ ರಾಶಿಯು
     ಸರಸರ ಸಾಗುದು ಹೇಗೆನಲಿ ?!

 20. ಬಿಳಿಯ ನಂದಿಯನೇರಿ ಭವಹರ-
  ನಿಳಿದನಿಳೆಗದೊ ಗೌರಿಶಂಕರ
  ಬೆಳೆದು ನಿಂತಿಹ ಮುಗಿಲ ನೇರಕೆ ಮೊರೆಯನಾಲಿಸುತೆ ।
  ಮುಳಿದ ಗಂಗೆಯ ಮುದುಡಿ ಮುಡಿಯಲಿ
  ಬಳಿಯೆ ತೊಡಿಸುವನರ್ಧಚಂದ್ರವ
  ಕಳೆದು ಕಳವಳ ನೆಲೆಸೆ ಸದಮಲ ಶಾಂತಿ ಸೌಖ್ಯವನು ।।

  ಮುನಿಯ / ಮುನಿದ ಗಂಗೆಯ “ಮೊರೆ”ಯನ್ನು ಕೇಳಿ ಭುವಿಗೆ ಬಂಡ ಶಿವ, ಗಂಗೆಯನ್ನು ಜಟೆಯಲ್ಲಿ ಕಟ್ಟಿ “ಅರ್ಧಚಂದ್ರ” ವನ್ನು “ಕೈಕೊಳ”ದಂತೆ ತೊಡಿಸಿ ಶಾಂತ ಗೊಳಿಸುವನೇ ?!!

 21. ಶಿವನುಂ ಪಾರ್ವತಿಯುಂ ಕಾ
  ಲವ ಮರೆತರಚಣದೆ ನೋಡಲಚ್ಚರಿಯಿಂದು-
  ದ್ಭವಿಸಲ್ ಗಂಗೆಯು ನೆಲೆಸಿರೆ
  ಸವಿಯಮೃತವನಿಂದುವಿಂದ ನೀಡಿಹಳಲ್ತೇ
   

 22. ಕಾಂಚನಾ, ಅಂಕಿತಾ, ಉಷಾ ಮುಂತಾದ ಸಹೋದರಿಯರೆಲ್ಲ ಬಗೆಬಗೆಯಾಗಿ ಗಂಗೆಯ ಅವತರಣವನ್ನು ವರ್ಣಿಸಿದ್ದಾರೆ. ನೀಲಕಂಠ ಮತ್ತು ಪ್ರಸಾದು ಅವರು ತಮ್ಮ ತಿದ್ದುಗೆಯ ಕೆಲಸವನ್ನೂ ಸೊಗಸಾಗಿ ಸಾಗಿಸಿದ್ದಾರೆ; ಎಲ್ಲರಿಗೆ ಧನ್ಯವಾದ.

 23. ಗಂಗಾವತರಣವೇನೋ ಪುರಾಣಪ್ರಸಿದ್ಧ. ಆದರೆ ಸದ್ಯದ ಚಿತ್ರದಲ್ಲಿರುವ ವಿವರಗಳನ್ನು ಆಧರಿಸಿಯೇ ಪದ್ಯವನ್ನು ರಚಿಸಬೇಕಾದುದು ಅಪೇಕ್ಷಿತ. ಇಂತಿದ್ದೂ ಈ ಬಗೆಗೆ ಹೆಚ್ಚಿನ ಅವಧಾನವು ಸಾಗಿದಂತೆ ಅನೇಕಪದ್ಯಗಳಲ್ಲಿ ತೋರುತ್ತಿಲ್ಲ. ಹೀಗಾಗಿ ಪ್ರಕೃತ ಚಿತ್ರದ ಒಂದು ವಿವರವನ್ನೇ ಆಧರಿಸಿದ ಒಂದು ಪದ್ಯ:

  ಪ್ರಿಯಕ್ಕರ||
  ತನ್ನ ಸಂನಿಧಿಯೊಳೆ ಪೆಣ್ಣದಾವಳೊ ಧಾವಿಸುತೆರಗಲ್ಕೆ ಪತಿಯ ತಲೆಯೊಳ್
  ಬಿನ್ನಣಂಬೆತ್ತು ಭೋರೆಂದು ಪಾರುತ್ತುಮಾತನ ನೆತ್ತಿಯೊಳ್ ಕೆತ್ತಿ ಕುಣಿಯಲ್|
  ಬನ್ನಂಗೊಳ್ಳದೆ ಕೌತುಕಮೆಂಬಂತೆ ಲೀಲೆಯಿದೆಂಬಂತೆ ಲೋಲನೇತ್ರೆ
  ಚೆನ್ನೆ ಪಾರ್ವತಿ ಚಾರ್ವತಿಲೋಕಾರ್ಥೆ ನಿಂದ ಪಾಂಗಿದುವೆ ದಲ್ ಲೋಕೋತ್ತರಂ||

  • ಆಹಾ, ನಾವೆಲ್ಲ ಗಂಗೆ ಪಾರ್ವತಿಯೇ ಮಧ್ಯೆ ತಂಟೆ ತರಲೆಗಳ ಕುಂಟು ಪದ್ಯ ಬರೆದರೆ ತಾವು ಔದಾರ್ಯ, ಘನತೆಗಳ ರಮ್ಯಗಂಭೀರವಾದ ಚಿತ್ರಣ ಕೊಟ್ಟಿದ್ದೀರಿ. ತುಂಬ ಚೆನ್ನಾಗಿದೆ ಸರ್ 🙂

  • ತುಂಬ ಚೆನ್ನಾಗಿದೆ ಸರ್..

  • ಪತಿಯ ತಲೆಯ ಮೇಲೆ ಮತ್ತಾವಳೊ ಭೋರೆಂದು ಕೆತ್ತಿ ಕುಣಿಯಲೂ ಕೂಡ… ಲೋಕಾರ್ಥದ ಲೀಲೆಯಿರಬಹುದೆಂದು ಸಮಾಧಾನವಾಗಿರುವುದು ಮತ್ತೊಮ್ಮೆ ಪಾರ್ವತಿಯ ಚಿತ್ರವನ್ನು ಗಮನಿಸಿದರೆ ಗೋಚರಿಸುತ್ತಿದೆ. ಚೆನ್ನಾದ ಪದ್ಯ ಗಣೇಶ್ ಸರ್

   • ಸರಿಯೆ. ಶೇಷಪ್ರಶ್ನೆ ಏನೆಂದರೆ, ಪಾರ್ವತಿಯ ಗ್ರಹಿಕೆಯು ಕಲಿಯುಗದಲ್ಲೂ ಅನುಸರಣೀಯವೆ ಎಂದು!

    • idannella mahilaa-vaadi sanghTanegaLu vichaarisuvudu. namage nimagella eke beku?!

     • ನೀಲಕಂಠ, ಸೋಮ, ಚೀದಿ, ಪ್ರಸಾದು! ಎಲ್ಲರಿಗೂ ಧನ್ಯವಾದಗಳು.

    • ಮುನ್ನ ನಾವರಿಯೆವೈ ಪತಿಯ ತಲೆಮೇಲ್ಸುರಿವ ನೀರು ನೀರಲ್ಲ “ನೀರೆ”ಎಂದುಂ !!
     ಇನ್ನುಮೇಲೆ ತಲೆ ಕೆಡಿಸಬೇಕು ಅಲ್ಲ. ಅಲ್ಲ ತಲೆ ಕೆಡಿಸಿಕೊಳ್ಳಬೇಕು ಅಂದುಕೊಳ್ಳುತಿದ್ದೆ. ಅಂಕಿತಳ ಚೌಪದಿ 75% ಸಮಾಧಾನ ಕೊಟ್ಟಿತು !!
     ಸುಂದರ ಅವಧಾನ / ಅಪ್ರಸ್ತುತ ಪ್ರಸಂಗ, ಧನ್ಯವಾದಗಳು ಗಣೇಶ್ ಸರ್, ಪ್ರಸಾದ್ ಸರ್, ನೀಲಕಂಠ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)