Mar 272016
“ಚೆನ್ನಂ ವಸಂತೋತ್ಸವಂ” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು
“ಚೆನ್ನಂ ವಸಂತೋತ್ಸವಂ” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು
ಮೈದಾಳುತ್ತಿರೆ ಪೂವ್ಗಳೊಳ್ ಪೊಸತನಂ, ಪರ್ಣಂ ಪಸಿರ್ವೆತ್ತಿ ನ-
ವ್ಯೋದಾರಾಶ್ರಯಮಾಗಲಾ ಪೊಸತಿಗಂ, ಮಂದಾನಿಲಂ ಸಾರ್ದು ಚೆ-
ಲ್ವಾದತ್ತಾಗಳೆ ಚಾಮರಂ, ಪೊಸತಿನೊಳ್ ನಾನಾತ್ವದಿಂ ಜೀವಿಗಳ್
ಮೋದಂಗಂಡು ಮನಂಬುಗಲ್, ಪೊಸತಿನಿಂ ಚೆನ್ನಂ ವಸಂತೋತ್ಸವಂ
Very fresh. But have you mixed up ವಸಂತೋತ್ಸವ & ವಸಂತಋತು? Nevertheless, it is tenable in a sense.
ಧನ್ಯವಾದಗಳು. ವಸಂತೋತ್ಸವ ಅಂದರೆ ಹೋಲಿ ಹಬ್ಬವೇ?
Yes
ಪ್ರಸಾದು, ವಸಂತಋತುವಿನ ಯಾವುದೇ ಆಯಾಮವನ್ನು ಮನದಲ್ಲಿಟ್ಟು ಪದ್ಯರಚಿಸೋಣ ಆಗ ಈ ಋತುವಿನಲ್ಲಿ ಪ್ರಕೃತಿಯ ಉತ್ಸವ, ಹೋಲಿಯ ಆಚರಣೆಯ ಉತ್ಸವ, ಕಲಾಪ್ರದರ್ಶನದ ಉತ್ಸವ ಹೀಗೆ ವಿಶಾಲಾರ್ಥದಲ್ಲಿಯೇ ಪರಿಗಣಿಸಿದರೆ ಹೆಚ್ಚಿನ ಅವಕಾಶ ಸಿಗುತ್ತದೆ ಪದ್ಯರಚನೆಗೆ
Yes Soma. That is what I meant when I said ‘Nevertheless, it is tenable in a sense.’
🙂
ನೀಲಕಂಠರೆ, ಪೂವ್ಗಳೊಳ್- ಪೂಗಳೊಳ್ – ಆಗಬೇಕಲ್ಲವೆ ? ಪಸಿರ್ವೆತ್ತಿ ಅಂದರೆ ? ಪೊಸತಿಗಂ- ಪೊಸತಿಂಗಂ- ಆಗಬೇಕೆ ?ಪೊಸತು-ಪದ್ಯದಲ್ಲಿ ನಾಲ್ಕು ಸಲ ಬಂದಿದೆಯಲ್ಲಾ.. 🙂
ಬೇಕೆಂತಲೇ ಬಳಸಿದ್ದು. ಪೊಸತಿಗೆ ಒತ್ತುಗೊಡಲು 🙂
ಪಸಿರ್ವೊತ್ತು ಆಗಬೇಕು. ಧನ್ಯವಾದಗಳು.
ಕುಳಿರೊಳ್ ದೇವಳಮಂ ಪುಗುತ್ತೆ ನಸುಕೊಳ್ ನಿಚ್ಚಂ ಜನಂ ಮಾಘದೊಳ್
ಚಳಿಗಾಲಂ ಕೊನೆಗೊಳ್ಳೆ ವೇಸಗೆಯನುಂ ಬಾ ಎಂಬರೀ ಪರ್ವದೊಳ್|
ಕೆಳೆಯಿಂ ಕೂಡುತೆ ನೃತ್ಯ-ಗೀತೆಗಳಿನಿಂ ಸಂತೋಷಮಂ ಪೊಂದುತೋ-
ಕುಳಿಯಿಂ ಶಾಖವ ಸಹ್ಯಮಾಗಿಪರವರ್, ಚೆನ್ನಂ ವಸಂತೋತ್ಸವಂ||
ಹಾದಿರಂಪರೆ, ಜನಂ- ಜನರ್ – ಆಗಬೇಕೆ ? ಛಳಿ-ಚಳಿ, ವೇಸಗೆ- ಬೇಸಗೆ- ಅಲ್ಲವೆ ? ಗಾನನೃತ್ಯಗಳಿನಿಂ- ಗಾನನೃತ್ಯಂಗಳಿಂ, ಸಹ್ಯಮಾಗಿಸುವರೈ- ಸಹ್ಯಮಾಗಿಪರೈ- ಆಗಬೇಕಲ್ಲವೆ ? ( ಹೀಗಾದಾಗ ಛಂದಸ್ಸು ಕೆಡುವುದು )
ಜನಂ=ಜನರ್ given that ಜನಂ is plural only.
ಛಳಿ is not listed in Kittel. Thanks for pointing out.
Yes ವೇಸಗೆ=ಬೇಸಗೆ
I have corrected the rest.
ಭಾರಿ ಚಿಗುರನು ಪೊತ್ತ ಮಾಮರದಿ ಕೋಗಿಲೆಯು
ಪೀರಿ ರಸವನು ಪಾಡುತಿಹುದನುದಿನ
ಹಾರಿ ನಲಿಯಲ್ ಮಿಗವು, ಸುಮಂಗಳ್ ಕಂಪನ್ನು
ಬೀರಿರಲ್, ಚೆನ್ನಂ ವಸಂತೋತ್ಸವಂ
ವಸಂತಋತುವೇ ಒಂದು ಉತ್ಸವ ಎಂದು ಭಾವಿಸಬಹುದಾದರೂ, ವಸಂತೋತ್ಸವ=ಹೋಲಿ ಅಲ್ಲವೆ? ಪದ್ಯಪಾನಿಗಳ ಅಭಿಪ್ರಾಯದ ನಿರೀಕ್ಷೆಯಲ್ಲಿದ್ದೇನೆ.
Please watch https://www.youtube.com/watch?v=vmnRN9DGOS4 (7:50 to 13:05 min.)
ಹೌದು ಸರ್, youtube ನೋಡಿದೆ.
ಮೊದಲು ನಾನು ವಸಂತೋತ್ಸವ ಎಂದರೆ ಯುಗಾದಿ ಎಂದುಕೊಂಡಿದ್ದೆ.
ಒಳ್ಳೆ ಕಲ್ಪನೆ, ಕವನಿಕೆ.
ಭಾರಿ ಚಿಗುರು ಅಷ್ಟೊಂದು ಹಿತವಾದ ಅರ್ಥವನ್ನು ಕೊಡಲಾರದು.
ಚಾರುತರ ಪಲ್ಲವದ ಮಾಮರದಿ ಕೋಗಿಲೆಯು
ಪೀರಿ ರಸಮಂ ಪಾಡುತಿಹುದನುದಿನಂ
ಪಾರಿ ನಲಿಯಲ್ ಮಿಗಂ, ಕುಸುಮಾಳಿ ಕಂಪಮಂ
ಬೀರಿರಲ್ ಚೆನ್ನಂ ವಸಂತೋತ್ಸವಂ
ಒಂದಿಷ್ಟು ಹೊಸಗನ್ನಡದ ಮಿಶ್ರಣವನ್ನು ತೆಗೆದಿದ್ದೇನೆ 🙂
ಸೂರ್ಯಂ ಸಪ್ತತುರಂಗರಂಗತತಿಯಿಂ ತೇರೈಸಿ ಬರ್ಪಂತೆಯುಂ
ಶೌರ್ಯಂದೋರುತನಂಗನಂಗವಿಭವಂಗೊಳ್ಳುತ್ತೆ ಸಾರ್ವಂತೆಯುಂ
ಧುರ್ಯಂ ತಾನೆನೆ ಗೋಪಗೋಪಿಕೆಯರೊಳ್ ರಾಗಾಂಕಿತಂ ಶೌರಿ ಮಾ-
ಧುರ್ಯಂದೋರ್ಪ ತೆರಂ ಸೊಗಂ ನಯನಕಂ ಚೆನ್ನಂ ವಸಂತೋತ್ಸವಂ
ಬಣ್ಣಗಳ ಚೆಲ್ಲಾಟವೆಂಬುದು ಸಪ್ತವರ್ಣದ ಕುದುರೆಗಳ ತೇರನ್ನೇರಿ ಸೂರ್ಯ ಬರುವಂತೆಯೂ, ತನ್ನಂಗವೈಭವವನ್ನು ಪ್ರಕಟಪಡಿಸುತ್ತ ಮನ್ಮಥನೇ ಸಾರಿದಂತೆಯೂ, ಗೋಪಗೋಪಿಯರ ಮುಖ್ಯನಾಗಿ ಕೃಷ್ಣನು ಅವರ ಪ್ರೀತಿಯನ್ನು ಹೊತ್ತು ಮಾಧುರ್ಯದ ಆಕರವಾಗಿ ತೋರುವಂತೆಯೂ, ಕಂಗಳಿಗೆ ಸೊಗಯಿಸುತ್ತ ವಸಂತೋತ್ಸವ ಶೋಭಿಸುತ್ತಿದೆ.
ಚೆನ್ನಾಗಿದೆ. ’ತೇರೈಸಿ’ಯನ್ನು ಬಿಡಿಸಿ ವಿವರಿಸುವಿರ?
ತೇರನ್ನು ಐಸಿ – ತೇರನ್ನೇರಿ ಎಂದು ತಿಳಿದುಕೊಂಡಿದ್ದೇನೆ. ಅದು ಕುವೆಂಪು ಅವರ ಪ್ರಯೋಗ. ತೇರೈಸಿ ತೇರ್ಮನೆಗೆ ನಡೆತಂದನು ಎಂದು ಇದೆ.
ತಿಂತಿಣಿಯೊಳುತ್ಸವದೆ ಬಣ್ಣವಾಡಲು ನಾವ-
ದೆಂತೊ ಕುತ್ಸಿತನೆನ್ನ ಜೇಬಿನೊಳಗಿಂ|
ಕಂತೆ ನೋಟುಗಳನೆಲ್ಲವನು ದೋಚೆನ್ನಂ* ವ-
ಸಂತೋತ್ಸವಮನು* ಗೈದಿಹ ದುಃಖಿತಂ||
*ನನ್ನನ್ನೂ ಉತ್ಸವವನ್ನೂ
ಚೆಲುವಿಂ ರಂಗಿನ ವೃಷ್ಟಿಯಮ್ ಕರೆದಿರಲ್ ವೃಕ್ಷಮ್ ದಿಟಂ ನಲ್ಮೆಯಿಂ,
ಕೆಲ ದೊಳ್, ಸೌರಭಮೀವೆವೆಂಬ ಕತದಿಂ ಮೈಯಾನಿರಲ್ ವಲ್ಲಿಗಳ್,
ಮೆಲುವಾಡಂ ಗುನಿಸುತ್ತೆ ಬಂದಳಿಕುಲಂ ಕೂಡಿರ್ಪೊಡಂ ಪೂಗಳೊಳ್,
ನಲವಿಂ ತೇಲಿಪುದೆಲ್ಲರಂ ಕನಸಿನೊಳ್! ಚೆನ್ನಮ್ ವಸಂತೋತ್ಸವಂ!!
ಚೆನ್ನಾಗಿದೆ. ಮೆಲುಗಾನ ಅರಿಸಮಾಸವಾಯಿತು. ಮೆಲುವಾಡಂ ಎನ್ನಬಹುದು
ಧನ್ಯವಾದ ! ವಾಡಂ ?
ಅಯ್ಯಯ್ಯೋ.. ಅದು ಪಾಡು – ಹಾಡು. ಸಂಧಿ ಮಾಡಿ ಮೆಲುವಾಡಂ ಮಾಡಿದೆ 🙂
🙂 ಮುಂದಿನ ತಪ್ಪನ್ನು ನಾಳೆಗೆ ಕಾದಿರಿಸಿ!
ಮೈಮರೆತಿರಲ್ ಎಂಬಲ್ಲಿ ಛಂದಸ್ಸು ತಪ್ಪಿದೆ, ಅಥವ ಮಾತ್ರಾ ಮತ್ತೇಭ ಮಾಡಿರುವಿರಾ? 🙂
Good diction
ಸೌರಭಮೀವ ಒಂದು – ಸಂಧಿಯಾದರೆ ಸೌರಭಮೀವೊಂದು ಆಗುತ್ತದೆ, ಸೌರಭಮೀವವೊಂದು ಆಗಲಾರದು.
ಧನ್ಯವಾದಗಳು, ಸವರಿದ್ದೇನೆ!
ನವವರುಷಕೆಂದುತಾ ಮಾಡಿಹಳ್ ಖಾದ್ಯಗಳ್
ಸವಿ-ಕಹಿಯ ಬೇವು-ಬೆಲ್ಲವನಿಟ್ಟಳೈ
ನವವರುಷದಿ ಪತಿಸುತಸುತೆ ದೂರದಲಿರುತಿರ-
-ಲವಳಿಗೇಂ ಚೆನ್ನಂ ವಸಂತೋತ್ಸವಂ?
ಕೀಲಕವು ಚೆನ್ನಾಗಿದೆ.
ಖಾದ್ಯಗಳ್ ~ ಖಾದ್ಯಗಳ
ನವವರುಷ(ವರ್ಷ), ಸವಿ-ಕಹಿ(ತಿಕ್ತ) – ಅರಿಸಮಾಸ
ನಲ್ವಿಂ ಶಂಭು ಸರಾಗದಿಂದೊಲಿವನೆಂಬಾಕಾಂಕ್ಷೆಯಿಂ ಸಂದಳೇಂ
ಚೆಲ್ವಿಂ ಗೌರಿ ಮನಃಪ್ರಸಾದನಮೆನಲ್ ಚೆನ್ನಂ ವಸಂತೋತ್ಸವಂ
ಸೋಲ್ವೆಂ ಚಿತ್ತದೊಳಂತು ತುಂಬುಸೊಬಗೊಳ್, ಗ್ರೀಷ್ಮಂ ಲಲಾಟಾಕ್ಷಿಯಿಂ
ಮೇಲ್ವಾಯ್ವಗ್ನಿಯವೊಲ್ ವಿಜೃಂಭಿಪನದಾಗಳ್ ಹಾ! ವಿಪರ್ಯಾಸಮಯ್
ಇನ್ನೇನು ಶಂಕರನು ಧ್ಯಾನದಿಂದ ಹೊರಬಂದು ಪ್ರೀತಿಯಿಂದೊಲಿವ ಎಂದು ಗೌರಿ ಸಿಂಗರಿಸಿಕೊಂಡು ಬಂದ ಹಾಗೆ ಈ ವಸಂತೋತ್ಸವ ರಂಜಿಸುತ್ತಿದೆ. ಆದರೇನು, ಮುಂದೆ ಬರುವ ಗ್ರೀಷ್ಮ ಶಿವನ ಲಲಾಟಾಗ್ನಿಯಂತೆ ತಾಂಡವವಾಡುವುದು ವಿಪರ್ಯಾಸ!!
ಹೊಂಗೆಮರದ ಸ್ವಗತ
ಎಲೆಯಿಕ್ಕಿ ನೆರಳಾಗಿ ಪೂಬಿರಿದು ಸೊಂಪಾಗಿ-
-ಯಳಿವಿಂಡು ,ಖಗಕುಲವ ಹೃದಯದೊಳು ತೊಟ್ಟೆI
ಎಳೆವೆಳಗ ನೇಸರನು ರಂಗೇರಿ ಬರುವಾಗ
ಪುಳಕದೊಳೆ ಚೆನ್ನಂ ವಸಂತೋತ್ಸವಂ II
ಭಾಲರೆ, ನಿಮ್ಮ ಪದ್ಯದ ಭಾವವು ಚೆನ್ನಾಗಿದೆ. ಪದ್ಯವನ್ನು ಹಳಗನ್ನಡವಾಗಿಸಿ ನನಗೆ ತೋಚಿದಂತೆ ತಿದ್ದಿ ಬರೆದಿರುವೆ.( ಹೊಂಗೆಮರದ ಸ್ವಗತವಾಗಿರದೆ, ಪ್ರಕೃತಿಯ ಸೊಬಗಾಗಿದೆ)
ಬೆಳೆದು ನೆಳಲಂ ನೀಡಿ, ಪೂಗಳಿಂ ಚೆಲ್ವಾಗು-
ತಳಿವಿಂಡುಗಳನೊಂದೆ,ಖಗಮಿರ್ಪ ವೃಕ್ಷಂ,|
ಕಳೆಗೊಂಡ ನೇಸರಂ ರಂಗೇರೆ ನಸುಕಿನೊಳ್,
ಪುಳಕಮೈ ! ಚೆನ್ನಂ ವಸಂತೋತ್ಸವಂ!! ||
ಒಂದೆ ಖಗಮಿರ್ದೊಡಾವುದದುಮೆನ್ನುತ್ತೆ ನೀಂ
ಚಂದದಿಂದಲಿ ವರ್ಣಿಸದೆಪೋದೆಯೇಂ?
ಒಂದೆಂಬುದಂಕೆಯಂ ಸೂಚಿಸದೆ ಪದ್ಯದೊಳ್,
ಪೊಂದಿರ್ಪುದೆಂಬರ್ಥಮಂ ತಾಳ್ದಿರಲ್,|
ಮಂದವರ್ಣನೆಯೆಂದು ಮೂದಲಿಸೆ,ಮಾತ್ರೆಯೊ್ಳ್
ಕುಂದಿರ್ಪುದಲ್ತೆ ನಿಮ್ಮಯ ಸಾಲಿನೊಳ್ ? || 🙂
After posting this I went out for a walk, and while recalling the line I felt that the first line is short of one guru. I corrected it immediately on return, but by that time you have pointed it out! ಪ್ರತಿಕ್ರಿಯಾಪದ್ಯವು ಚೆನ್ನಾಗಿದೆ.
ಶಕುಂತಲಾ ಅವರೇ ನಿಮಗೆ ತೋಚಿದಂತೆ , ಶ್ರಮವಹಿಸಿ ಹಳೆಗನ್ನಡಕ್ಕೆ ಪರಿವರ್ತಿಸಿರುವುದಕ್ಕೆ ಧನ್ಯವಾದಗಳು .
ಡಿ.ವಿ.ಜಿ. ಯವರ ಕಗ್ಗದ ಚೌಪದಿಯ ಬಗ್ಗೆ ನನಗಿರುವ stereotype ಕಲ್ಪನೆಯಿಂದಾಗಿ ನಾನು ಅದನ್ನು ಹಳೆಗನ್ನಡದಲ್ಲಿ ಬರೆಯುವ ಪ್ರಯತ್ನ ಮಾಡಲೇ ಇಲ್ಲ . ಯಾಕೋ ಹಳೆಗನ್ನಡ ವೃತ್ತಗಳಿಗೆ ಮಾತ್ರ ಸೀಮಿತ ಎಂಬ ಭಾವನೆ ನನ್ನದು
ಹೊಂಗೆ ಮರದ ಸ್ವಗತದ ಭಾವಾರ್ಥ —
ಎಲೆಗಳನ್ನು ಉದುರಿಸಿದ ಮೇಲೆ, ಋತುಮಾನಕ್ಕನುಗುಣವಾಗಿ ಚಿಗುರಿ (ಎಲೆಯಿಕ್ಕು) ಮಂದವಾದ ಹಸಿರು ಬಣ್ಣದ ಎಲೆಗಳಿಂದ ಕೂಡಿ (ಜೀವಿಗಳಿಗೆ) ನೆರಳು ನೀಡಿ ಆಮೇಲೆ ಹೂ ಬಿರಿದು ,ದುಂಬಿಗಳನ್ನು ಆಕರ್ಷಿಸಿ , ಹಕ್ಕಿಗಳಿಗೆ ಗೂಡು ಕಟ್ಟಿ ಸಂತಾನಾಭಿವೃದ್ಧಿಗೆ ಅನುಕೂಲವಾಗುವಂತಹ ವಾತಾವರಣವನ್ನು( ಹೃದಯದೊಳುತೊಟ್ಟೆ ) ಕಲ್ಪಿಸಿ ಕೊಟ್ಟು , ಬಣ್ಣ ಬಣ್ಣದ ಪ್ರಖರವಾಗಿಲ್ಲದ ಸೂರ್ಯನ ಕಿರಣಗಳು (ಸೂರ್ಯೋದಯ) ನನ್ನ ಮೇಲೆ (ಹೊ೦ಗೆ ಮರ) ರಂಗೆರಚುವ ಸಂದರ್ಭದಲ್ಲಿ ದು೦ಬಿಗಳ ಝೇ೦ಕಾರ ಮತ್ತು ಮರಿ ಇಟ್ಟ ಹಕ್ಕಿಗಳ ಚಿಲಿಪಿಲಿ ನಾದವೇ ನಾನು (ಹೊ೦ಗೆ ಮರ) ಪ್ರಾಕೃತಿಕವಾಗಿ ಆಚರಿಸುವ ವಸಂತೋತ್ಸವ .
ಎಲೆಯಿಕ್ಕು = ಚಿಗುರು , ಎಳೆವೆಳಗು =ನಸುಬೆಳಗು
ಹೂ ಇಲ್ಲದಾಗ ದುಂಬಿಗಳು ಮರದ ಸುತ್ತು ಸುಳಿಯಲಾರವು ,ತಮ್ಮನ್ನು ಶತ್ರುಗಳಿಂದ ರಕ್ಷಿಸುವ ಎಲೆಗಳ ಮರೆಯಿಲ್ಲದೆ ಚಿಕ್ಕಪುಟ್ಟ ಹಕ್ಕಿಗಳು ಗೂಡು ಕಟ್ಟಲಾರವು ; ನಾನು ಗಮನಿಸಿದಂತೆ ಅವೆರಡೂ ಲಕ್ಷಣಗಳು ಹೊಂಗೆ ಮರದಲ್ಲಿ ಈ ಋತುಮಾನದಲ್ಲಿ ಮಾತ್ರ ಕಾಣಲು ಸಾಧ್ಯ. ಆದುದರಿಂದ ಹೊಂಗೆ ಮರವನ್ನೇ ಆರಿಸಿಕೊಂಡೆ
ಹೌದು ಭಾಲ ಮೇಡಮ್, ಹಳಗನ್ನಡದಲ್ಲಿಯೇ ಬರೆಯಬೇಕೆಂದೇನೂ ಇಲ್ಲ. ವೃತ್ತಗಳಿಗೆ ಹಳಗನ್ನಡ ಹೆಚ್ಚು ಒಗ್ಗುತ್ತದೆ ಅಷ್ಟೆ. ಒಂದು ಶಿಸ್ತಿನ ಪಾಲನೆ ಎಂದರೆ ಒಂದು ಪದ್ಯದಲ್ಲಿ ಹಳಗನ್ನಡ, ನಡುಗನ್ನಡ, ಹೊಸಗನ್ನಡಗಳ ಮಿಶ್ರಣವಾಗಬಾರದು. ಇದು ಅಪೇಕ್ಷಣೀಯ.
ಪರಿಯಂ ಕಾಣದ ನೀಲಿಯಾಗಸಕೆ ಮೇಣ್ ಬಣ್ಣಂಗಳಂ ಮೆತ್ತಿರಲ್
ಬಿರುಕಾಗಿರ್ಪ ನೆಲಕ್ಕೆ ಜೀವವ ಕುಡಲ್ ಬಣ್ಣಂಗಳಾ ನೀರನೆ-
ತ್ತೆರಚಲ್ ವಿಸ್ಮಯಗೊಂಡ ಭೂಮಿಯಳು ಮಣ್ಣಿಂ ಬಂದ ಮಾಧುರ್ಯದೊಳ್
ವೆರೆಯಲ್ ರಂಗು ಬೆಡಂಗ ಬಣ್ಣಿಪುವುದೇಂ ಚೆನ್ನಂ ವಸಂತೋತ್ಸವಂ
ವಿಸ್ಮಯಗೊಂಡ ವಿಸ್ಮಯಂಗೊಂಡ, ವಿಸ್ಮಿತಮಾದ. ಭೂಮಿಯೊಳೆ. ವೆರೆಯಲ್?? ಬೆರೆಯಲ್ ರಂಗು? ಬಣ್ಣಿಪುವುದೇಂ? ಬಣ್ಣಿಪುದೇಂ? ಬಣ್ಣಿಸುವುದೇಂ? ಬೆಡಂಗನೇನೊರೆವೆನಾಂ…. 🙂
Thanks for the Corrections 🙂
ಎಲೆಗಳು ಚಿಗುರುತಿರಲು ತರುಗಳಲಿ ನಗುವಿರಲು
ನೆಲಕೆ ತೋರಣಕಟ್ಟಿದವೊಲಿರ್ಪುದು|
ಗೆಲುವಿಂದೆ ಪಶುಪಕ್ಷಿಗಳು ಬನದೊಳಾಡಿರಲು
ಚೆಲುವಾಯ್ತು ಚೆನ್ನಂ ವಸಂತೋತ್ಸವಂ|
ಪಸಿರೆಲ್ಲು ಪಸರಿಸಲು ಬೇಸಿಗೆಯ ಬೇಗೆಯೊಳು
ಪೊಸ ವೆಳಕಿನೆಸಕಮಂಬೆತ್ತಿ ಬರಲು|
ಮುಸುಕ ತೆರೆಯೆ ಪ್ರೇಮಿಗಳ ಮನೊದೊಳುರ್ಕಿಸುತೆ
ಜಸದಿಂದೆ ಚೆನ್ನಂ ವಸಂತೋತ್ಸವಂ|
ವಿರಹಿಗಳ್ಗೌತಣವು, ನಲಿವಿಂಗೆ ಕಾರಣವು
ತರುಗಳ್ಗೆ ನವ್ಯಾಂಬರವನೀವುದು|
ಸೆರೆಯ ಬಿಡಿಸುತೆ ಲಹರಿಯಂನೀಡೆ ಜೀವಿಗಳ
ಮೆರೆಯಿಸಿರೆ ಚೆನ್ನಂ ವಸಂತೋತ್ಸವಂ|
ಮೊದಲನೇ ಪದ್ಯದ ಮೊದಲ ಪಾದ ಗತಿಹಿತವಾಗಿಲ್ಲ. ಎಲೆಯೆಲ್ಲ ಚಿಗುರಿರಲು ತರುಗಳಲಿ ನಗುವಿರಲು…. ಅಂದರೆ ಸರಿಯಾದೀತು.
savaraNege dhanyavAdagaLu
ಮುಂಜಾವ ಮೃದುಕರದ ಮಮತೆಯ ಸ್ಪರ್ಶಕಿದೊ
ಮಂಜರಿಯ ಮೆಲ್ಲುಸಿರಿನೆಲರ ಮೋಡಿ!
ರಂಜಿಸುತೆ ತರೆ,ಬಿರಿವ ಮಲ್ಲಗೆಯ ಕಂಪನಹ!
ಮಂಜುಲಂ!ಚೆನ್ನಂ!ವಸಂತೋತ್ಸವಂ!!
ತುಂಬ ಚೆನ್ನಾಗಿದೆ ಮೇಡಮ್ 🙂
Thanks a lot!
A lot ಏಕೆ ಅನ್ನೋದನ್ನ ಊಹಿಸಬಲ್ಲೆ 🙂
ಎಂತೊ ತೊಟ್ಟಿರುತಾನುಮಿಂದು ಪೊಸಬಟ್ಟೆಯಂ
ಸಂತೆಬೀದಿಲೆ ನಡೆದೆ ವಿಸ್ಮೃತಿಯೊಳೈ|
ಇಂತು ವರ್ಣಮಯಮಾದುದಲೆ ಪೇಚು!+ಎನ್ನಂ ವ-
ಸಂತೋತ್ಸವಮಮ ಸಿಲ್ಕಿಸಿಹುದಿಂತುಂ!!
ಪೊಸವಸ್ತ್ರ- ಅರಿಸಮಾಸವಾಯಿತಲ್ಲಾ.. ವಿಸ್ಮೃತಿಯಿನಿಂ- ವಿಸ್ಮೃತಿಯಿಂ ,ಇಂತಾಯ್ತುಮದು-ಇಂತಾಯ್ತದು( ಛಂದಸ್ಸು ಕೆಡುವುದು)- ಎಂದಾಗಬೇಕಲ್ಲವೆ ? ವರ್ಣಮಯವು- ವರ್ಣಮಯಂ ಆದರೆ ಒಳಿತು. ಇಂತಲೆ -ಎಂದರೆ ?
ಇಂತಲೆ=ಇಂತು
ಉಳಿದವನ್ನು ಸರಿಪಡಿಸಿದ್ದೇನೆ. ಧನ್ಯವಾದಗಳು.
ಇಲ್ಲೊಂದು ಅನ್ವಯಕ್ಲೇಶವಿರುವುದನ್ನು ಈಗ ಗಮನಿಸಿದೆ: ಎನ್ನಂ=ಎನ್ನ ಎಂದು ಬಳಸಿಬಿಟ್ಟಿದ್ದೆ. ಇದನ್ನೂ ಸರಿಪಡಿಸಿದ್ದೇನೆ.
ಜಗಮೆಲ್ಲಂ ತವೆಯಾಚರಿಪ್ಪುದೆನುತುಂ, ಪೈಪೋಟಿಯಂ ಸಾರುತುಂ,
ಪೊಗರಿಂದಾಚರಿಸಲ್ಕೆ ,ಪರ್ವಮಕಟಾ ವ್ಯಾಪಾರಮೆಂದಾಗಿರಲ್!
ಮಿಗೆತಾಂ ಖಂಡಿಪೆನೆಂದಿದಂ,ವರುಷವುಂ ಸದ್ಭಾವಮಂ ಪೋಷಿಸಲ್,
ಚಿಗುರಂ ಪೊಣ್ಮಿಸಿ,ಮೌನದಿಂ ಬರುತಿರಲ್,ಚೆನ್ನಂ ವಸಂತೋತ್ಸವಂ!!
(ಪೈಪೋಟಿಯಿಂದಾಗಿ ಹಬ್ಬದಾಚರಣೆಯೇ ವ್ಯಾಪಾರದಂತಾಗಿರುವಾಗ,ಇದನ್ನು ಖಂದಿಸಲೋ ಎಂಬಂತೆ ಮೌನದಿಂದ ಬರುವ ವಸಂತೋತ್ಸವವು ಚೆನ್ನಂ)
ಪೈಪೋಟಿಯನ್ನೊಡ್ಡುತುಂ ಆಗದು. ಪೈಪೋಟಿಯನೊಡ್ಡುತುಂ ಸರಿ. ಛಂದಸ್ಸಿಗೆ ಪೈಪೋಟಿಯೊಳ್ ಸಾರುತುಂ ಎಂದೇನಾದ್ರೂ ಮಾಡಬಹುದು. ಪರ್ವಂಗಳೆ ಆಗಬೇಕು. ಪರ್ವಮಕಟಾ ವ್ಯಾಪಾರ… ಎಂದು ತಿದ್ದಬಹುದು. 🙂
ಸರಿಪಡಿಸಿದ್ದೇನೆ,ಧನ್ಯವಾದ!
ಬಿಳಿಯಿರ್ಪ ವಸ್ತ್ರದಿಂ
-ದೊಲವಿನಿಂ ನಗುತಲೆಳೆ
ಬಾಲೆ ತಾ ಸಾಗುತಿಹಳೂರಿನೆಡೆಗೆ
ಪೊಳೆವ ಕಣ್ಣನು ನೋಡಿ
ಚೆಲುವೆಯಾಕೆಗೆ ಕೇಳ್ದೆ
“ಹಲೋ ! ಹಾಯ್ ! ಚೆನ್ನಂ ವಸಂತೋತ್ಸವಂ?”
ಬಿಳಿಯಿರ್ಪ – ಬಿಳಿಬಿಳಿಯ ಅಂತ ದ್ವಿರುಕ್ತಿ ಬಳಸಿದರೆ ಭಾವಾಭಿವೃದ್ಧಿ ಆಗುತ್ತದೆ. ಎಳೆಬಾಲೆ ಅರಿಸಮಾಸವಾಯಿತು. ಬಾಲೆ ಎಂಬಲ್ಲಿ ಪ್ರಾಸ ಹೊಂದುವುದಿಲ್ಲ. ..ದೊಲವಿನಿಂದಾ ಬಾಲೆ – ಯೆಳೆನಗೆಯ ಸೂಸುತೂರೆಡೆಗೈದಿರಲ್ ಅಂತೇನಾದ್ರೂ ಮಾಡಬಹುದು. ಹಲೋ ಹಾಯ್ ಎಂಬಲ್ಲಿ ಲಗಂ ಬಂದಿದೆ. ಇದನ್ನು ನೀನೇ ತಿದ್ದು 🙂
ಬಿಳಿಬಿಳಿಯ ವಸ್ತ್ರದಿಂ
-ದೊಲವಿನಿಂದಾಬಾಲೆ
ಯೆಳೆನಗೆಯ ಸೂಸುತೂರೆಡೆಗೈದಿರಲ್
ಪೊಳೆವ ಕಣ್ನನು ನೋಡಿ
ಚೆಲುವೆಯಾಕೆಗೆ ಕೇಳ್ದೆ
“ಜಲಜಾಕ್ಷಿ ! ಚೆನ್ನಂ ವಸಂತೋತ್ಸವಂ?”
ಹಹ್ಹಾ, ಹಲೋ ನಿಂದ ಜಲಜಾಕ್ಷಿಗೆ ಜಿಗೀತಿಯಾ ಅಂತ ಕಲ್ಪಿಸಿಕೊಂಡಿರಲಿಲ್ಲ 🙂
ಚೆನ್ನಮೆನಿತೋ ವಸಂತರ್ತುವಾರ್ ತಿಳಿಯರೈ
ಉನ್ನತಿಯನಾನುವಳು ಪ್ರಕೃತಿಮಾತೆ|
ಮುನ್ನಮೀ ಪರ್ವದಾಗಮನಮಂ ಸೂಚಿಸುವ
ಚೆನ್ನಂ ವಸಂತೋತ್ಸವಮದಲ್ತೆ ಪೇಳ್||
ವಸಂತರ್ತುಮಾರ್ ಎಂದರೆ? ವಸಂತರ್ತುಂ ಎಂಬುದು ತಪ್ಪು. ವಸಂತರ್ತುವಾರ್ ಎನ್ನಬಹುದು. ಉನ್ನತಿಯನಾನುವಳ್ ಆಗಬೇಕು. ತಾತ್ಪರ್ಯ ಗೊತ್ತಾಗಲಿಲ್ಲ 🙂
Nature blossoms in vasantaritu. The preceding Vasantotsava is the harbinger of that season. Thanks for the corrections. I have effected them.
ನಿಯತಿಯಿನೆ ಕುಸುಮಿಸುತೆ ಪೂಗಳಂ,ಕಿಸಲಯಂ!
ನಯನಂಗಳಂ ತಣಿಸೆ ಸೊಬಗಿನಿಂದಂ
ಭಯಭೀತಿಯಂ ಹಣಿದು,ವಿವಿಧ ಬಯಕೆಯನುದಿಸೆ,
ಪಯಣದೊಳ್ ಚೆನ್ನಂ ವಸಂತೋತ್ಸವಂ!
(ಹೂ,ಚಿಗುರುಗಳನ್ನರಳಿಸಿ,ಬಾಳಿನ ಪಯಣದಲ್ಲಿ ಬೆಳೆಯುವಿಚ್ಛೆಯನ್ನುದಿಸುತ್ತಿರೆ,ವಸಂತೋತ್ಸವವು ನಿಜವಾಗೂ ಉನ್ನತವಾದ್ದದ್ದು!)
ಸೊಗದಿಂ ತಾಯ್ವಿರ ತೋಳ್ಗಳೊಳ್ ನಲಿವ ಪೊನ್ಕಂದಮ್ಮರಂ ಪೋಲುತುಂ!
ನಗೆಯೊಳ್ ತೇಲಿಸೆ,ಬಾನನುಂ ,ಮೊಳೆತ ತಾರಾಪುಂಜಮಂ ಮೀರುತುಂ!
ಬಗೆಯೊಳ್ ಪಚ್ಚೆಯನುರ್ಕಿಸಿರ್ಪ ಪೊದೆಯೊಳ್, ವೃಕ್ಷಂಗಳೊಳ್,ವಲ್ಲಿಯೊಳ್
ಮುಗುಳಲ್ ಪೂಗಳು ,ಸಗ್ಗಮೇ ಸನಿಹಮೈ!ಚೆನ್ನಂ ವಸಂತೋತ್ಸವಂ!!
ತಾತ್ಪರ್ಯ ಸ್ಪಷ್ಟವಾಗಲಿಲ್ಲ. ಒಳ್ಳೊಳ್ಳೆ ಪಾದಗಳಷ್ಟು ಕಂಡುಬಂದವು 🙂
ಭಾನನುಂ – ಸೂರ್ಯನನ್ನು? ಭಾನುವಂ ಆಗಬೇಕು. ಉರ್ಕಿಸಿರ್ಪುರೆ ಸಾಲ್- ಒಂದು ಲಘು ಕಾಣೆಯಾಗಿದೆ. ಸಾಲ್ ವೃಕ್ಷ – ಸಾಲ ವೃಕ್ಷ? ಸಾಲ್ ಮೂಲಪದವೇ?
ಅದು ಬಾ ,ಭಾ ಅಲ್ಲ 🙂
ಸಾಲ್ ಎಂದರೆ ಸಾಲು, ಆದರೂ ಬದಲಾಯಿಸಿದ್ದೇನೆ!
ಅರ್ಥ-ತಾಯಂದಿರ ತೋಳಲ್ಲಿರುವ( ಚಿನ್ನದ) ಕಂದರನ್ನು ಹೋಲುತ್ತ,ಆಗಸವನ್ನು ನಗೆಯಲ್ಲಿ ತೇಲಿಸಲು ಮೊಳೆತ ತಾರೆಗಳನ್ನು ಮೀರುತ್ತ,ಮನಸ್ಸನ್ನು ಹಸುರಾಗಿಸಿಕೊಂಡಿರುವ(ಸಂತಸದಿಂದಿರುವ?) ,ಪೊದೆ,ಮರ,ಬಳ್ಳಿಗಳಲ್ಲಿ ಹೂವರಳಿರಲು…ಸಗ್ಗಮೇ ಹತ್ತಿರವಿದ್ದಂತೇ..
ನೀರುಣಿಸಿ ಪಾಡುತುಂ,ಜೊತೆಯಾಗೆ ತರುಲತೆಯ!
ಪೂರಯಿಸುವಂತವಳ ಬಯಕೆಯಂ ತಾಂ
ಚಾರುವರ್ಣ ಸುಗಂಧ ಸುಮಗಳಂ ಸುರಿದುತರೆ,
ನೀರೆಗದೊ ಚೆನ್ನಂ ವಸಂತೋತ್ಸವಂ!!
ಮರಳುತಲಿ ಕೆಳೆಯರೀರ್ವರು ಮನೆಗೆ ತೋಷದಲಿ
ಹರುಷದಲಿ ಋತುಗಳಂ ಬಣ್ಣಿಸುತವನೆಂಬಂ
“ಹರಳು ಹನಿಗಳ ಮಳೆಯಲಾಡುತುಂ ನಲಿಯಲ್ಕೆ ವರ್ಷ ಋತುವೇಚೆಂದವೈ !!”
ಸುರುಳಿಗುರುಳಿನ ತರಳ ಪೇಳುತಿಹನೀಪರಿ
“ಸ್ವರಪಂಚಮವು ಕೇಳುತಿಹುದಲೀಮಾಸದೊಳ್
-ಳರರೆ ! ಚಿಗುರೊಡೆಯುತಿದೆ ಮಾಮರವು ಮೈದುಂಬಿ ! ಚೆನ್ನಂ ವಸಂತೋತ್ಸವಂ !”
ಚೆನ್ನಾದ ಕಲ್ಪನೆ, ಪೂರಣವಿಧಾನ. ಎರಡನೇ ಸಾಲಲ್ಲಿ ಲಗಂ ಬಂದಿದೆ. ಕೆಳೆಯರಿರ್ವರು ಆಗಬೇಕು. ನಾಲ್ಕನೇ ಸಾಲಲ್ಲಿ ಒಂದು ಮಾತ್ರೆ ಕಡಿಮೆಯಾಗಿದೆ.
ನಾಲ್ಕನೇ ಸಾಲು ಸರಿಯಿದೆ 🙂
ಒಂದುಮಾತ್ರೆ ಕಡಿಮೆಯಿರುವುದು ಸಾಧು ಎಂದೇ ನಿಮ್ಮ ಅಭಿಮತ?
ಕಾಮನೇಹಿಗನಮಾ! ಪುಷ್ಪಸಾಸಿರ ಪಿಡಿದು,
ಭಾಮೆಯರಲೊಂಟಿತನಮನಳಿಸೆ ಬರಲ್!
ತಾಮಸಮೆ ನಿರ್ನಾಮಗೊಳುತೆಲ್ಲರಾಡುತಿರೆ,
ಭೂಮಿಯೊಳೆ,ಚೆನ್ನಂ ವಸಂತೋತ್ಸವಂ!!
ಒಳ್ಳೆ ಕಲ್ಪನೆ. ಆರರಿಗಳಲ್ಲಿ ಮುಖ್ಯನಾದವನಿಗೆ ಅರಿಸಮಾಸವನ್ನೇ ಮಾಡಿದ್ದೀರಿ, ಕಾಮನೇಹಿಗ, ಪುಷ್ಪಸಾಸಿರ 🙂
ಬೆಸನಂ ಕಳ್ತಲೆಯಂತೆ ನಾಲ್ದೆಸೆಯೊಳುಂ ತೀವಿರ್ದು ಕೇಳ್ವಲ್ಲಿ ಪೇ-
ಳ್ವೆಸರಿಲ್ಲೆಂಬ ತೆರಂ ಮಸುಳ್ದ ತಲೆಯಿಂ ಭಾವಪ್ರಕಾಶಂ ವಿವ-
ರ್ಣಿಸಿ ನಿಂತಿರ್ಕೆ, ವಿಭಾವಸುಪ್ರಭವನಂ ಮೈದೋರ್ವ ಮುನ್ನಂ ನಿಶಾ-
ವಿಸರಂ ಮುಗ್ಗರಿಸಲ್ಕೆ ಸಲ್ಲುತರುಣಂ ರಾಗಾಂಕಿತಖ್ಯಾತಿಯಿಂ-
ದೆಸೆಯುತ್ತಾಗಳೆ ಮೂಡಿ ಮೂಡಲಿನೊಳಂ ಲೋಗರ್ಗಮಾ ಪ್ರೀತಿಯೆಂ-
ಬೆಸಕಂನೀಳ್ದು ಮನಃಪ್ರಕಾಶನಕೆ ಮೇಣಾಶ್ವಾಸನಂಗೊಟ್ಟು ತೋ
ಷಿಸುವಂದಂ, ವರವರ್ಣಭಾಂಡನಿಕರಂ ವಿಸ್ಫೋಟನಂಗೊಂಡು ಜಾ-
ಳಿಸಿ ಚಿತ್ತಂ, ಕವಿದಿರ್ದ ಜಾಡ್ಯದೆರಕಂ ಮೈಝಾಡಿಸುತ್ತಂತೆಯೇ
ದೆಸೆಗೆಟ್ಟೋಡುತೆ ನೋಟಕುಂ ಸಿಗದವೊಲ್ ಚೆಲ್ಲಾಟಮೇರಾಟಮಾ-
ಗಸಮಂ ಮುಟ್ಟಿ ದಿವಕ್ಕೆ ತಟ್ಟಿ ಭರದಿಂ ಶೃಂಗಾರಶೃಂಗಕ್ಕಮೇ-
ರಿಸುವಂದಂ ರಸರಾಜ್ಯವೈಭವದೊಳಾಳುತ್ತುಂ ಜನಂಗಳ್ ಸ್ವಭಾ-
ವಸಮಸ್ತಂ ಮರೆಯಾಗುವಂತೆ ಮೆರೆಯುತ್ತೋಲಾಡುತೊರ್ವೊರ್ವರು-
ಣ್ಣಿಸೆ ಮತ್ತಿನ್ನನಿತರ್ಗೆ ಭೂರಿಮುದಮಂ, ಮುಂಬರ್ಪ ಚೈತ್ರಕ್ಕೆ ರಂ-
ಜಿಸುವಂತಂತು ವಸಂತನಾಗಮನದೊಳ್ ಚೆನ್ನಂ ವಸಂತೋತ್ಸವಂ
ಮನದ ಆಶಾಭಾವವೆಲ್ಲವೂ ತಲೆಮರೆಸಿರುವಂತಹ ಕತ್ತಲೆ ಸುತ್ತಲೂ ತುಂಬಿರುವಾಗ ಭಾವಪ್ರಕಾಶವೆಂಬ ಸೂರ್ಯೋದಯದ ಮುನ್ನುಡಿಯನ್ನು ಹೊತ್ತು ರಾಗಾಂಕಿತನಾದ ಅರುಣ ಮೂಡಿಬರುವಂತೆಯೇ, ಮನದ ಜಾಡ್ಯವನ್ನು ಕಳೆಯುತ್ತ ಜನರೆಲ್ಲ ಆಮೋದಪ್ರಮೋದಗಳಲ್ಲಿ ತೇಲಿ ಬಣ್ಣಗಳ ಪಾತ್ರೆಗಳೇ ಒಡೆದು ಶೃಂಗಾರರಸದ ತಾರಕಕ್ಕೇರಿ ಒಬ್ಬರಿಗೊಬ್ಬರು ಸಂತಸದ ಉಣಿಸನ್ನು ನೀಡುತ್ತ ಮುಂಬರುವ ಚೈತ್ರದ ರಂಜನೆಗಾಗಿ ವಸಂತದ ಆಗಮನಪೂರ್ವಕ ಬರುವ ಈ ವಸಂತೋತ್ಸವ ಶೋಭಿಸುತ್ತಿದೆ.
ಪದಪ್ರೌಢಿ, ಖಂಡಪ್ರಾಸ, ಬಾಹುಳ್ಯಗಳೆಲ್ಲ ಚೆನ್ನಾಗಿವೆ.
ಧನ್ಯವಾದಗಳು!! ಪದ್ಯ ಚೆನ್ನಾಗಿಲ್ವ?
ಮರ್ತ್ಬುಟ್ರ ಬುದ್ದಿ, “ನಿಮ್ ಪದ್ಯಗೋಳು ಸಂದಾಗಿರ್ತಾವೇಂತ ಇಗಾ ಈಗೊಮ್ಮೆ ಮೊತ್ತವಾಗಿ ಯೋಳ್ಬುಡ್ತೀನಿ, ಪದೇ ಪದೇ ಯೋಳಾಕಿಲ್ಲ,” ಅಂಬ್ತ ಆವತ್ತೇ ಯೋಳಿದ್ನಲ್ಲ.
ಹೀಗೆ ಸಾರಾಸಗಟು wholesale ವ್ಯಾಪಾರ ಮಾಡಿದ್ರೆ ರುಚಿ ಇರೋದಿಲ್ಲ. ಕಿರಾಣಿ ವ್ಯಾಪಾರಾನೇ ದಿನನಿತ್ಯ ಸಂತೋಷ ಕೊಡೋದು 🙂
ಕಿರಾಣಿಗಳಲ್ಲಿ ಹಲವಾರು ವಿಧಗಳಿವೆ. ನಿಮಗೆ ಯಾವುದು ಪಸಂದು: ರೂಪ್ ಕಿ ರಾಣಿ, ಧನ್ ಕೀ ರಾಣಿ, ಮನ್ ಕಿ ರಾಣಿ, ಜಿಂದಗೀ ಕಿ ರಾಣಿ, ಜನಮ್ ಕಿ ರಾಣಿ, ಪಿಛಲೆ ಜನಮ್ ಕಿ ರಾಣಿ, ಅಗಲೇ ಜನಮ್ ಕಿ ರಾಣಿ, ಜನಮ್ ಜನಮ್ ಕಿ ರಾಣಿ…..
ಸೊಗಮಾಗೆ ಕಣ್ಗಳಿಗೆ ಮಾಂದಳಿರ್ಕೂಡೆ ಮ
ಲ್ಲಿಗೆಯಪೂ ಗಮವೆನಿಸಲಾಘ್ರಾಣಕೆ
ಮಿಗೆಯಿನಿದಿರಲ್ವಕ್ಕಿ ಕೂಜನವು ಕಿವಿಗೆ ಹೋ
-ಳಿಗೆಯಿಂದೆ ಚೆನ್ನಂ ವಸಂತೋತ್ಸವಂ
(ಕೆಲವು ಲಗಂ ದೋಷಗಳಂತೂ ಇವೆ, ಮತ್ತೆ ಭಾಷೆಯು ಅಷ್ಟು ಸರಾಗವಾಗಿಲ್ಲವೆಂದೂ ಎನ್ನಿಸುತ್ತಿದೆ. ಸವರಣೆಗಳನ್ನು ಸೂಚಿಸಿರಿ 🙂
ಎಲ್ಲರಿಗೂ ದುರ್ಮುಖಿ ಸಂವತ್ಸರದ ಶುಬಾಶಯಗಳು.
“ಮಿಗೆಯಿನಿಸಿರಲ್ವಕ್ಕಿ ಕೂಜನವು”
ಶುಭಾಶಯಗಳು 🙂