Apr 032016
 

bee

ಕೃಪೆ: ಅಂತರ್ಜಾಲ

  93 Responses to “ಪದ್ಯಸಪ್ತಾಹ ೧೯೬: ಚಿತ್ರಕ್ಕೆ ಪದ್ಯ”

  1. ಕಣ್ಣಿಂದಲೇನನ್ನು ಪೆಣ್ಣೆ ನೀ ನೋಡಿಹೆ
    ಬಣ್ಣಿಸಬಲ್ಲೆ, ಪೇಳವ್ವ| ಕರ್ಣದೆ
    ತಿಣ್ಣದ(excessive) ರವಮೆಂತಿಹುದೆಂದು!!

  2. ಅಳಿವಿ೦ಡ೦ಮೊಗದೊಳಿಡುತೆ
    ತಳಿಯಂ ಕೆಳೆತನದೆ ನೋಳ್ಪ ಪರಿಯೊಳ್ ಮುದಮೇ೦ ! I
    ಬಳಯಿಸುತೆ ಮಧುಕರಿಗಳಂ
    ಬಿಳಿಬಟ್ಟೆಯ ತರುಣಿ ಚಿತ್ರ ಭಂಗಿಗೊಲಿದಳೇ೦?II

  3. ಹಾವ ಬಾಯಲಿ ಸಿಕ್ಕ ಕಪ್ಪೆಯು
    ಸಾವ ಚಣದೊಳು ನೊಣನ ಕಂಡರೆ
    ಬಾಯ ತೆರೆದುಪಭೋಗಿಸುವವೋಲ್ ಲೌಕಿಕದ ಬದುಕು ||

    • ಮಿಕ್ಕ ಮೂರು ಮನೋಜ್ಞಚರಣಗ-
      ಳಕ್ಕರೆಯ ಕಾಣಿಕೆಯನೇತಕೆ
      ದಕ್ಕಿಸಲು ಸಂಕೋಚ? ಗೌತಮ! ನುಡಿವುದೊಡನೊಡನೆ 🙂

      • ಗೌತಮರ ಪರವಾಗಿ:
        ಹಾವ ಬಾಯಲಿ ಸಿಕ್ಕ ಕಪ್ಪೆಯು
        ಸಾವ ಚಣದೊಳು ನೊಣನ ಕಂಡಿರೆ
        ತೀವಿ ಜಿಹ್ವೆಯ ಸೆಳೆದು ತಿಂಬುದೆ
        ಜೀವಿತದ ಮರ್ಮವದುಮೈ|

  4. ಹಾವ ಬಾಯಲಿ ಸಿಕ್ಕ ಕಪ್ಪೆಯು
    ಸಾವ ಚಣದೊಳು ನೊಣನ ಕಂಡರೆ
    ಬಾಯ ತೆರೆದುಪಭೋಗಿಸುವವೋಲ್ ಲೌಕಿಕದ ಬದುಕು ||

  5. ಬಂಡುಣುತೆ ನಲಿವ ಬಂಡುಣಿ
    ದಂಡಿಂದೇತಕರೆ!ಬಾಲೆಯಂ ಮುತ್ತಿರ್ಕೋ!
    ಕಂಡಿರ್ಪವೇನ್ಮೊದಲ್ ತಾಂ
    ಕಂಡರಿಯರ್ದ ನವರುಚಿಯನೀಗ ಸಿಹಿಯೊಡಂ!!

  6. ಹುಲ್ಲುಹಾಸಿನ ನಡುವೆ ಹಾರುತೆ
    ಮೆಲ್ಲುತಲೆ ಸವಿಜೇನರಸಮಂ
    ಝಲ್ಲೆನಿಸಿಪೂಯೆದೆಯನಲುಗಿಪ ದುಂಬಿಸಾಲಿಂದು,
    ಗಲ್ಲಮಂ ಕ್ರಮಿಸುತ್ತೆ ಬಂದುಂ
    ಸೊಲ್ಲನೀಪರಿ ಪೇಳುತಿರ್ಪವೆ!
    “ಸಲ್ಲದೈ ನಿನದೆಂಬ ಜಂಬವು ಮನುಜನೊಂದೊಂದೂ”

  7. ನಿನ್ನೆ ಪದ್ಯಪಾನದ ಈ ಕಂತಿನ ಸೂಚನೆಯ ಮಿಂಚೆ ಬಂದೊಡನೆಯೇ ಹೊಳೆದ ಕಲ್ಪನೆಯನ್ನು ಇಷ್ಟರೊಳಗೆ ಯಾರಾದರೂ ಸ್ವಯಂ ಸಾಕ್ಷಾತ್ಕರಿಸಿಕೊಂಡಿರುವರೋ ಏನೋ ಎಂದು ಕಳವಳಿಸಿದ್ದೆನಾದರೂ ಅದು ಹಾಗೆಯೇ ಅಚುಂಬಿತವಾಗಿ ಉಳಿದಿದೆ. ಹೀಗಾಗಿ ಆ ಹಳೆಯ ಕವಿಸಮಯಸಮಿದ್ಧವಾದ ಕಲ್ಪನೆಯನ್ನಾಧಿರಿಸಿದ ಹವಣು ಇಲ್ಲಿದೆ:

    ಅಭಿಜಾತಾಮಲಕಾವ್ಯನಿತ್ಯಪಠನ-ವ್ಯಾಖ್ಯಾನ-ನಿರ್ಮಾಣಚಿ-
    ತ್ಪ್ರಭನಪ್ಪೊರ್ವ ಕವೀಂದ್ರನಾಲಯಸಮೀಪೋದ್ಯಾನಸಾಲೋತ್ತಮ-
    ಪ್ರಭವಂಗಳ್ ಗಡ ಜೇನ್ಗಳಂಗನೆಯ ನೇತ್ರಾಸ್ಯಾಂಬುಜಾತಂಗಳೊಳ್
    ವಿಭವಂಗೊಂಡ ಮರಂದಮಂ ಸವಿಯಲೆಂದಿಂತಿಲ್ಲಿ ಸಂದಿರ್ಪುವೇಂ?

    (ಅಭಿಜಾತಕಾವ್ಯರಸಿಕನೂ ಕವಿಯೂ ಆದವನೊರ್ವನ ಮನೆಯ ಬಳಿಯ ಜೇನುಗೂಡಿನವುಗಳೇ ಈ ಹುಳುಗಳಾಗಿರಬೇಕು; ಇಲ್ಲವಾದರೆ ಅವುಗಳಿಗೆ ಹೇಗೆ ತಾನೆ ಹೆಣ್ಣಿನ ಮೊಗದಾವರೆಯಲ್ಲಿ ಮಕರಂದವಿರುವುದು, ಮತ್ತದನ್ನು ತಾವು ಹೀರಬೇಕೆಂಬ ತಿಳಿವು ಹುಟ್ಟುತ್ತಿತ್ತು?)
    ಇದೊಂದು ಕಾವ್ಯಲಿಂಗಾಲಂಕಾರವುಳ್ಳ ಕವಿತೆ. ಇಲ್ಲಿ ಕವಿಸಮಯದ ಪಾತ್ರ ಹಿರಿದು.

    • ನಿಮ್ಮ ಮನೆಯ ಹಿತ್ತಲಲಿನ ಮರದಲ್ಲೊಮ್ಮೆ ಪರೀಕ್ಷೆ ಮಾಡಿಯೇ ಬಿಡೋಣ ಸರ್ :), ತುಂಬಾ ಚೆನ್ನಾಗಿದೆ

      • ಕವಿಸಮಯವನ್ನು ಅಲ್ಲಿಯ ಜೇನುಗಳು ಆಗಲೇ ತಿಳಿದವರಾಗೇ ಇರುವದರಿಂದ(ಅವುಗಳು ನಿಮ್ಮ ಸುದ್ದಿಗೆ ಬರಲಾರವು ) ಹೀಗಾಗಿ ಪ್ರಯತ್ನಿಸಬಹುದು 🙂

      • ಅವರ ಮನೆಯ ಹಿತ್ತಲಲ್ಲಿ ನೋಡಿ ಪ್ರಯೋಜನವಿಲ್ಲ ಸೋಮ. ಕವಿಯ ಉದ್ಯಾನದ ಉತ್ತಮವಾದ ಸಾಲ(ವೃಕ್ಷ)ಗಳಲ್ಲಿ ಹುಟ್ಟಿದ ಜೇನುಗಳಿವು ಎಂದಿದ್ದಾರೆ ಗಣೇಶರು. ಅವರು ವಿವಾಹಿತರಲ್ಲದಿರುವುದರಿಂದ ಅವರಿಗೆ ’ಸಾಲ’ ಇರಲು ಹೇಗೆ ಸಾಧ್ಯ?

    • Please see the verse in No.13 😉

      • ಕಾಂಚನಾ, ಪ್ರಸಾದು ಮತ್ತು ಸೋಮರಿಗೆ ವಂದನೆಗಳು.

  8. ಅಮಮಾ! ಪೆರ್ಜೇನ್ಗಳ ವಿ-
    ಭ್ರಮೆಯಂ ಗಂಡೆರ್ದೆಯಿನಾಂತ ಮಹಿಳೆಯ ಗಂಡೇಂ |
    ಸುಮಹಿತಮೋ! ಆ ಪುಂಸ್ತ್ವ-
    ಕ್ರಮಮೀ ಜೇನ್ಗಡ್ಡದಿಂದೆ ಮಾರ್ಮಲೆತಿರ್ಕುಂ!!

    • ನನಗೆ ಮೊದಲು ತೋರಿದ್ದು ಇದೇ ಸರ್, ಏನು ಧೈರ್ಯ ಅಂತ, ಚೆನ್ನಾಗಿದೆ

  9. ಅಧರಾಮೃತರಕ್ಷೆಗೆಂದಿವಳ್ ಮೇಣ್
    ನಿಧಿಯಂ ರಕ್ಷಿಪ ಸರ್ಪರಾಜಿಯಂತೇಂ|
    ವಿಧಿಯಿಂ ಮಧುಲಿಟ್ಸಮೂಹದೀ ಸಂ-
    ನಿಧಿಯಂ ಕೊಂಡಳೆ ಜಾಣೆ ಜಾಣ್ಮೆಯಿಂದಂ!!

    • ಗಣೇಶ್ ಸರ್ bodyguard ಪದ್ಯ ಚೆನ್ನಾಗಿದೆ 🙂

    • ಸಲೆ ಗಲ್ಲಕೆ ‘ಭಾರ’ ‘ಮಾಲು'(ಜೇನುಹುಳು)ಮೆಂದೇಂ
      ಉಲಿದಿರ್ಪಿರ್ ಗಡ ’ಮಾಲಭಾರಿಣೀ’ಯೊಳ್|
      (ಮಾಲಭಾರಿಣೀ=ಔಪಚ್ಛಂದಸಿಕಾ)

  10. ಬಿದಿಗೆ ಬೆಳಕಿನ ಸೋಮನನು ನಂಬಿದವ ದಾರಿ-
    ಗೆದುರಾಗಿ ನಡೆದು ಕ್ರಮಿಸುವುವನೆ ಇರುಳು? I
    ಎದುರು ಯುವತಿಯ ಕಂಡು ಪರದಾಡಿ ಹುಡಿಕಿದೊಡೆ-
    ಯೊದಗುವುದೆ ಮಕರಂದ ಜೇನುನೊಣಕೆ? II

    • ಭಾಲ ಅವರೆ, ಬಿದಿಗೆ ಚಂದ್ರನಲ್ಲಿ ಬೆಳಕನ್ನು ಹುಡುಕುವ ನಿಮ್ಮ ಪದ್ಯಜ್ಯೋತ್ಸ್ನೆ ಚೆನ್ನಾಗಿದೆ

  11. ಸೆರಗಂ ಹಾಯ್ಕುತೆ ಕಂದರಂ ದಿನಪನಿಂ ಕಾಪಿಟ್ಟವೋಲಬ್ಬೆಯರ್,
    ಸರಿದೀ ದುಂಬಿಯವೃಂದಮುಂ ನೆಳಲನೇ ತಾಂನೀಳ್ದುದೋ ಪ್ರೀತಿಯಿಂ!
    ದರಿತೇಂ ತಾವರೆಯೆಂದುಮಾ ಲಲನೆಯಂ ಮುತ್ತಿಟ್ಟುದೋ!ಬಾಳಿನೊ
    ಳ್ಗರಿಯಾಗಿರ್ಪಿನನಿಂ ಕಾಂತೆಯಂ ಮರೆಸೆ ಮೇಣ್ನೇಯ್ದಿಟ್ಟುದೋ ಜಾಲಕಂ!

    ತಾವರೆಯೆಂದೀ ಮೊಗಮಂ
    ಭಾವಿಸಿ ಬಂದಿರ್ಪಳಿಕುಲಮಿರೆ ತೃಪ್ತಿಯೊಳೇ,
    ಭಾವಿತಗೊಂಡಿರ್ಪಾಸ್ಯದದೊ
    ಳಾವಂ ಪೇಳ್ಗುಮರೆ!ಮಾಧುರಿಯದಿಲ್ಲೆನುತುಂ!

    ಹೆಂಡವ ಕುಡಿವುದು,ಪುಂಡರೊಲ್ ಮೆರೆವುದು
    ಗಂಡಿಗೆ ಎಂಬ ಮಾತನ್ನು-ಜೇನಿಂದು
    ಗುಂಡಿಗೆ ತಳ್ಳಿ ಮೆರೆದಿರ್ಕು!

    ಕಂಡರೆ ಕೀಟವನಂಡೆತ್ತಿ ಪೋಗುವ
    ಗುಂಡಿಗೆ ಹೆಣ್ಣ ಪಾಲೆಂದು-ನಗುವರ
    ಖಂಡಿಸಿ ಬಾಯ ಹೊಲಿದಾಳ!

    • ಕಾಂಚನಾ ಅವರೇ, ಏನು ವೈವಿಧ್ಯ ಬಹಳ ಚೆನ್ನಾಗಿ ಪದ್ಯಗಳು ಬರುತ್ತಿದೆ ಮುಂದುವರೆಯಲಿ

      • ಆಗಲಿ ಸೋಮಣ್ಣ 🙂

        ಆಗದ ಕಜ್ಜಮನಾಗಿಸಿ ತೋರುವ
        ನಾಗಿಣಿ ಯೆದುರೇ ಇದ್ದಿಂದು,
        ಬೀಗುತೆ ಮೀರೆನೆ ಹಿಂದಣ ಲೆಕ್ಕವ
        ನಾಗಲು ರೇಸಲಿ ನಾ ಮುಂದು? 🙂

    • ಗುಂಡಿಗೆ ತಳ್ಳಿ … 🙂 🙂 😀

      • ಕಾಂಚನಾ ಅವರೇ, ಪದ್ಯಗಳೂ ಭಾವಗಳೂ ಸೊಗಸಾಗಿವೆ. ಆದರೆ ಕಾಪಿಡ್ವ ಎಂಬುದು ಅಶುದ್ಧರೂಪ. ಅದನ್ನು ಕಾಪಿಟ್ಟವೋಲಬ್ಬೆಯರ್ ಎಂದು ತಿದ್ದಿದರೆ ಸರಿಯಾದೀತು.

  12. ಸುಮಮೇ ನಿಶ್ಚಿತಮೆನ್ನುತುಂ ಮಧುಪವೃಂದಂ ಬಂದುದೊಂದಕ್ಕಜಂ
    ಭ್ರಮೆಯೇಂ ಬಾಲೆಗದೆಂಬುದಕ್ಕಜಮೆ ದಲ್ ಸಂಕಷ್ಟದಾ ಪೊಳ್ತಿನೊಳ್
    ರಮಿಪೆಂ ಪೂವೆನೆ ನಕ್ಕಳೇಂ ಭ್ರಮರಯೂಥಂ ಸಾರ್ದೊಡಂ ಕಾಣೆನಾ-
    ನಮಮಾ ಧೈರ್ಯಕೆ ಮೆಚ್ಚುವೆಂ ಕುಟುಕನೊಂದುಂ ತಾಳೆನಾ ಕೀಟದಿಂ

    • (ಕ-ಗಯೋರಭೇದಃ) ಗುಟುಕನೊಂದುಂ (ಜೇನುತುಪ್ಪ) ತಾಳೆಯೇಂ ಕೀಟದಿಂ?

    • ಸೋಮಾ, ಪದ್ಯ ಚೆನ್ನಾಗಿದೆ; ಆದರೆ ಪೊಳ್ತಿನೊಳ್ ಎಂದು ಸವರಿದರೆ ಮತ್ತೂ ಹಳಗನ್ನಡದ ಸೊಗಸು ತುಂಬುವುದು.

  13. ಈವರೆಗಿನ ಅಭಿಜಾತ ಹಾಗೂ ಸಮಕಾಲೀನ ಕವಿಗಳೆಲ್ಲರ ಮಾತನ್ನು ಅಲ್ಲಗೆಳೆದಿವೆ ಈ ಅಳಿವೃಂದ.
    ಸಾಂಗತ್ಯ|| ಇನ್ನಿಲ್ದಂಗ್ ಸಾರವ್ರೆ ಕಾವ್ಯದೆ ಕವಿಗೋಳು
    ಕನ್ನೆಯ ತುಟಿಯಂಚ ಸವಿಯ|
    ಕೆನ್ನೆಯು ಗಲ್ಲವು ಕುತ್ತಿಗೆ ಕಿವಿಗಳೆ
    ಚೆನ್ನೆಂದು ಸಾರಿವೆ ತುಂಬಿ||

  14. ಆಕೆಯೇತಕೆ ಭೀತಿರಾಹಿತ್ಯದಿಂ ನಗುತ-
    ನೇಕಾಳಿಗಳ ಸಹಿಸಿಹಳ್ ಬಲ್ಲೆಯೇಂ?
    ನೌಕರರ್ ಯಜಮಾನನನು ಹಿಂಸಿಪರೆ ಪೇಳು
    ಸಾಕುಜೇನುಗಳಿಂತು ಮುದಗೈಯವೇಂ??

  15. Let the bees not taste her lips. Let them just draw some colour from her lips and mark a bindi on her forehead.
    ಪುಷ್ಪಿತಾಗ್ರ|| ಸವಿಯದಿರದೊಡೋಷ್ಠಮನ್ನುಮೇನೈ
    ಕುವರಿಯ ಕೆಂಪಗಿನೋಷ್ಠವರ್ಣಮನ್ನುಂ|
    ತವೆ ತೆಗೆಯುತುಮೆಂತೊ ಭಾಲಮಧ್ಯಂ
    ಛವಿಯೆನಿಪೊಲ್ ನಯಗೈಯವೇಕೊ ಜೇನ್ಗಳ್||

  16. ಗಡ್ಡವಿದೆ ಗಂಡಲ್ಲ, ಜೇನ್ಗಳಿವೆ ಪೂವಲ್ಲ
    ಒಡ್ಡೋಲಗದ ಜೇನುಗೂಡುಮಲ್ಲಂ|
    ಬಡ್ಡೆತ್ತುದಿಂತೆಲ್ಲ ಕಸರತ್ತ ಮಾಡುತ್ತೆ
    ದೊಡ್ಡ ದಾಖಲೆಗೈಯಲೆಳಸಿಹಳು ಕೇಳ್||

    • ಬಗೆಬಗೆಯ ಕಲ್ಪನೆಯ, ಧಗಧಗೆಯ ಜಲ್ಪನೆಯ
      ಸೊಗವಿತ್ತು ನಗವಿತ್ತು ಮೆರೆದಲಂಪಂ|
      ಮುಗುಳಿಸಿಮ್, ಮಿಗಿಲಾಗಿ ದಿಗಿಲಾಗಿ ಸಾಗಲ್ಕೆ
      ಪೊಗೆಯಾಗಿ ತುಂಬಿಗಳ್ ಹಾದಿರಂಪಾ!! 🙂

  17. ಹಗೆಯೊಂದಿರದಿರ್ಪ,ಸಿಹಿಯ
    ಬಗೆಯಂ ತಳೆದಿರ್ಪುದೊಂದೆ ಕಾರಣಮಾಯ್ತೇಂ,
    ಸೊಗದಿಂ ಪೂವಿಂ ಪೂವಿಗೆ
    ಪುಗುವಳಿ ವೃಂದಮಿವಳೊಳ್ ನೆಲೆಯನಪ್ಪಿರಲುಂ!!
    (ಹೂವಿಂದ ಹೂವಿಗೆ ಅಲೆದಾಡದೇ ಇವಳಲ್ಲೇ ನೆಲೆಯಾಗಿರುವುದಕ್ಕೆ,ಹಗೆಯಿರದ ಸಿಯಾದ ಅವಳ ಮನವೊಂದೇ ಕಾರಣವಾಯ್ತ್ತೇ)

    • ಪೂರ್ವಾರ್ಧದಲ್ಲಿ ’ಮನ’ಶಬ್ದವು ಅಪೇಕ್ಷ್ಯ.

  18. ಕಾಪಿಡೆನೆ ಮೊಗದಂದ ಹೂ-ಹಣ್ಣ ರಸವನುಂ
    ಲೇಪಿಸಿರ್ದಿರೆ ಲಲನೆ ಲವಲವಿಕೆಯಿಂ ।
    ಪಾಪಮಳಿವಿಂಡವಳ ಚೂಪುಗಲ್ಲಕೆ ಮುತ್ತಿ
    ಚೀಪಿರ್ದುದದನು ಮಕರಂದಮೆಂದುಂ !!

    Herbal Facialನ ಕಥೆ – ವ್ಯಥೆ !!

    • ಹೌದೆಂಬೆ, ಲೇಪನವು ಮಾತ್ರಮಾನನಕಲ್ಲ
      ಬೂದಿಯಂ ಬಳಿವರೈ ಕಂಠೋರಕುಂ|
      ಕಾದಲೆಯ ತೋಳ ನೋಡಲುಮಾಗ ತಿಳಿಯುವುದು
      ಜಾದುವೇನೆಂಬುದುಮಲಂಕಾರದಾ||

  19. ಸುರೆಯಂ ಸೇವಿಸದಿರ್ದರು ಕೆಲಬರ್
    ಮರೆಯಲ್ ಸ್ವಗೃಹಮನೇ ನಿತ್ಯಂ,
    ನಿರುತಂ ಪಾನದೆ ಮುಳುಗಿದ ಭೃಂಗಂ
    ಚರಣಮನಿಡೆ ಬೇರೆಡೆ, ತಪ್ಪೇಂ?

    ಶೂರತೆಯಂ ಮೆರೆಯುತ್ತೀ
    ನಾರಿಯೆ ಸೆಳೆಯುತಿರೆ,ಬರ್ಪ ಭೃಂಗಗಳಂ!ಹಾ!
    ಚಾರುಸಮಯಕ್ಕೆ ಮರುಗಿದ
    ನೂರಾರು ಕೆಲಮಲರ ವ್ಯಥೆಯನರಿತರದಾರ್!!
    ಕೆಲಮಲರು = ಸುತ್ತಲಿರುವ ಹೂ

    ತಮದ ಮಧ್ಯವು ನಿಲ್ಲುವ ಚಂದ್ರನೋ!
    ಕಮಟು ನೀರೊಳಗೇಳುವ ಪುಷ್ಪವೋ!
    ಗಮನಘಾತುಕರೊಳ್ಗವಧಾನಿಯೋ!
    ವಿಮಲೆ!ಪೇಳ್ವುದು ನಿನ್ನಯ ಚೋದನಂ!!

    (ಈ ರೀತಿಯ ಕೆಲಸಕ್ಕೆ ನಿನ್ನನ್ನು ಪ್ರೇರೇಪಿಸಿದ್ದಾದರೂ ಯಾರು?
    ಕತ್ತಲೆಯಲ್ಲೂ ಬೆಳಗುತ್ತಿರುವ ಚಂದ್ರನೋ,ಕಮಟು ನೀರನ್ನೂ ಲಕ್ಷಿಸದೇ ಹುಟ್ಟುವ ಕಮಲವೋ,ಗಮನ ಘಾತುಕರ ಮಧ್ಯದ ಅವಧಾನಿಯೋ!)

    • ನಿತ್ಯವೂ ಕುಡಿವರು ಸತ್ಯದಿಂ ಪೇಳ್ವೆನು
      ಅತ್ಯಂತ ನೇರ್ಪಿಂ ನಡೆವರು| ತೂರ್ವರ-
      ನಿತ್ಯದಿಂ ಕುಡಿವೆನ್ನಂತಹರು||

  20. If she will smile in adversity, she will be hysterical at normal times!
    ಪ್ರಹರ್ಷಿಣಿ|| ಬೀಭತ್ಸಂ! ವಿಲಪಿಸದಿರ್ಪಳೀಕೆಯೇಕೋ
    ಭ್ರೂಭಂಗಂಗೊಳದಿರುತೆಂತೊ ಹಾಸಗೈವಳ್|
    ಧೀಭಾವಂ ಲಲನೆಯ ಸಾಜದೊಳ್(Normal times) ಗಡೆಂತ-
    (unusual)ಸ್ವಾಭಾವ್ಯಂ! ಗಹಗಹಿಪಟ್ಟಹಾಸಗೈವಳ್||

    • ಅಬ್ಬಾ! ನಿಮ್ಮಯ ಕಲ್ಪನೆಯ ವೈಕಟ್ಯವೇ!!!

  21. ಬಹುಕಾಲಂ ತಪದಿಂದೆ ತಪ್ತಮನದೊಳ್ ಸಂದಿರ್ದ ವಿಜ್ಞಾನದಿಂ
    ಮಹದಾನಂದವಿಭೂತಿಯಂ ಗಳಿಸಿರಲ್ ತದ್ವಾಕ್ಸುಮಾನೀಕದಿಂ
    ವಹನಂಗೊಂಡ ಮಧುಛ್ಛಟಾವಿಸರಮಂ ಬ್ರಹ್ಮರ್ಷಿಕೂರ್ಚಂಗಳೇ
    ತಹಿಸುತ್ತುಂ ಸವಿಯಲ್ಕೆ ಬಂಡುಣಿಗಳಾಗಿರ್ದಿಂತು ವೈಚಿತ್ರ್ಯಮಯ್

  22. ಬೆಳೆಯುತ್ತುಂ ಸುಮರಾಶಿಯಂ ವರುಷದಿಂ ಸಂತೋಷಕಂ ಮಾನಸರ್,
    ಖಿಲದಿಂದಂ ಮಕರಂದಮಂ ಕುಡುತಿರಲ್;ಸಂತೃಪ್ತಿ ಸದ್ಭಕ್ತಿಯಿಂ
    ತಿಳಿಜೇನಂ ಮರುನೀಡುತುಂ ಮಧುಕರಂ ಸಂಬಂಧಮಂ ಕೋದಿರಲ್!
    ಹಳಿಯುತ್ತುಂ ತವೆ ಸಂದವರ್ ,ನಿಜಮಿದಂ , ನಿರ್ಭಾವುಕರ್ ಲೋಕದೊಳ್!!

    • ತಿಳಿಯರ್ದೇಂ ಎಂಬ ಪದವು ಅಶುದ್ಧ ಮತ್ತದರ ಹಿಂದಣ ಆಶಯವೂ ಅರಿವಾಗುತ್ತಿಲ್ಲ. ದಯಮಾಡಿ ಸವರಿಸಿಕೊಳ್ಳಿರಿ.

      • ತಿಳಿಯದೇ ಎನ್ನಲು ತಿಳಿಯರ್ದೇ ಎಂಬುದನ್ನು ಬಳಸಿದ್ದೆ.(ಹೂವನ್ನು ತಮ್ಮ ಸಂತೋಷಕ್ಕಾಗಿ ಬೆಳೆದ ಮನುಷ್ಯರು ,ತಿಳಿಯದೇ ಮಕರಂದವನ್ನು (ಜೇನಿಗೆ) ಕೊಡುತ್ತಿರಲಾಗಿ..)
        ಈಗ ತಿದ್ದಿಕೊಂಡಿದ್ದೇನೆ . ಧನ್ಯವಾದಗಳು ಸರ್.
        (ಮಧುವನ್ನು ಕೊಟ್ಟ ಮಾನವರೊಂದಿಗೆ,ಜೇನನ್ನು ನೀಡಿ ನಿಕಟವಾದ ಸಂಬಂಧವನ್ನು ಮಧುಕರನು ಬೆಳಸಿಕೊಂದಿರುವದನ್ನು ಹಳಿವವರು ನಿರ್ಭಾವುಕರೇ ಸೈ!)

  23. ಜೇನುಹುಳುಗಳ್ ಕಷ್ಟದಿಂ ಬೆಮರ ಸುರಿಸುತಂ
    ಕಾನನದ ಗೂಡಿನೊಳ್ ಮಾಡಿಹರ್ ಸಿಹಿರಸಂ
    ಪಾನಕೆನೆ ನೀರೆಯೋರ್ವಳ್ ಕದಿಯೆ ಜೇನಹನಿ ( honey)
    ಜಾಣಹುಳುಗಳ್ ಪಿಡಿದಿಹರ್ ಚೋರಿಯನಕಟಾ !

    • ಒಳ್ಳೆಯ ಕಲ್ಪನೆ! ಅಭಿನಂದನೆಗಳು. ಆದರೆ ಪಂಚಮಾತ್ರಾಚೌಪದಿಯನ್ನು (ಯಾವುದೇ ಚೌಪದಿಯನ್ನಾಗಲಿ) ಸಮಪಾದಗಳಲ್ಲಿ ಊನಗಣಗಳಿಲ್ಲದೆ ರಚಿಸಿದರೆ (ಅಂದರೆ ನಾಲ್ಕೂ ಸಾಲುಗಳಲ್ಲಿ ಪಂಚಮಾತ್ರಾಘಟಿತವಾದ ನಾಲ್ಕು ನಾಲ್ಕು ಗಣಗಳ ಒಟ್ಟು ಇಪ್ಪತ್ತು ಮಾತ್ರೆಗಳ ಲೆಕ್ಕ) ಪದ್ಯದಲ್ಲಿ ಗತಿಸೌಂದರ್ಯವು ಮೂಡದು. ಸಮಪಾದಗಳಲ್ಲಿ ಮುಗಿತಾಯದ ಹದ ಕಾಣದಿರುವುದೇ ಇದಕ್ಕೆ ಕಾರಣ. ಇದನ್ನು ತಿದ್ದಿಕೊಂಡಲ್ಲಿ ಒಳಿತು.

      • ಸರ್, ಇದು ಲಲಿತರಗಳೆ ಅಂದುಕೊಂಡೆ…

        • ಅಂದು ಹೇಳಿದಿರಿ ’ನನಗೆ ರಗಳೆಗಳ ಪರಿಚಯವಿಲ್ಲ’ ಎಂದು. ಹೋಗಲಿ, ಲಲಿತಳ ಪರಿಚಯವಾದರೂ ಇಲ್ಲವೆ ಎಂದು ಕೇಳಿದ್ದೆ. ಈಗ ಹೀಗೆನ್ನುವಿರಿ! ಈ ನಡುವೆ ಏನಾದರೂ ಬೆಳವಣಿಗೆಗಳಾಗಿವೆಯೆ?

          • ತಮ್ಮಂಥವರನ್ನು ನೋಡಿ ರಗಳೆಗಳ ಬಗ್ಗೆ ಕಲಿಯುವುದು ಏನು ದೊಡ್ಡ ಮಾತು!!

  24. ತನುವ ದಂಡಿಸಿ ಮಧುಕರಂಗಳು
    ಬನದಿ ಪುಡುಕುತಲಿಹವು ಪೂಗಳ
    ದಣಿದು ಹೋದವು ಸುಮವು ಸಿಗದೊಡೆ ಜೇನದೆಲ್ಲಿಹುದು?
    ಮನೆಗೆ ಗುಂಪಲಿ ಮರಳುತಿರುವವು
    ಸನಿಹ ನಿಂತಿಹ ನಾರಿವದನವು
    ವನದ ಪುಷ್ಪದ ಪಾಂಗತೋರಲ್ ಮುದ್ದಕೊಟ್ಟಿಹವು

  25. ಜೇನುಹುಳುವಿನ ಸಾಂಗತ್ಯ-
    ಸ್ಮಿತದಲ್ಲೆಲ್ಲವ ಸೆಳೆಯುವ ಶಕ್ತಿಯು
    ಚತುರೀಕೆಯಲ್ಲಿಹುದು ಕಾಣು
    ಮಿತವಾಗಿ ಜೇನಂಥ ನಗುವನು ಚೆಲ್ಲಲು
    ಹಿತವಾಗಿ ಕುಳಿತವು ಜೇನು

    • ಪೂರ್ವಾರ್ಧದಲ್ಲಿ ಗಣಗಣನ ಸರಿಯಿಲ್ಲ. ಕರ್ಷಣಕ್ಕೆ ಅವಕಾಶವಿದ್ದರೂ, ಅಂಶದಲ್ಲಿ ಲಗಂ ಬಳಸುವಂತಿಲ್ಲ.

  26. ಅಳಿಯಿಟ್ಟಾಡಿದುದಾಟ ಮ-
    ರುಳೆ, ಬರಿದಿಂತವಳು ಮೇಣ್ ಹುಳು ಮುತ್ತಿದುದಿಂ-
    ತಿಳುಹಲ್ ಪೆಣ್ಮನಕಂ ಗಡ
    ಮಿಳೆಯೊಳ್ ಕೊಂಡೊಯ್ದುಮೆಲ್ಲ ಮಧುರದೊಲುಮೆಯಂ ।।

    ಜೇನಿನೊಂದಿಗೆ ಹೆಣ್ಣು ಆಟವಾಡಿರಲು – ಜಗತ್ತಿನ ಎಲ್ಲ ಸವಿ “ಒಲುಮೆ” ಯನ್ನು ತಂದು ಜೇನುಹುಳು ಅವಳಲ್ಲಿ ತುಂಬುತ್ತಿರುವಂತೆ ಕಂಡ ಕಲ್ಪನೆಯಲ್ಲಿ !!

    ಎಲ್ಲರಿಗೂ ಉಗಾದಿ ಹಬ್ಬದ ಶುಭಾಶಯಗಳು !!

  27. ನಿನ್ನ ಮೊಗದ ಚೆಲ್ವಿಂದಂ
    ಕೆನ್ನೆಗೆ ಜೇನುಗಳು ಮುತ್ತನಿತ್ತುದು ದಿಟಮೇ!
    ಚೆನ್ನೆಯೆ, ಕಚ್ಚಿದೊಡನೆಯೇ
    ಬನ್ನದೆ ಬೊಬ್ಬೆಗಳ ಪೊತ್ತು ಪರಿದಾಡುವೆಯೈ|

    • ಆಹಾ! ಎಂಥ ಅರಸಿಕವಾದರೂ ಎಚ್ಚರದ ಕವಿತೆ!! 🙂

  28. ಹರುಷದಿಂದಾಚರಿಸೆ ಪರ್ವಮಂ ಭ್ರಮರಗಳು
    ಸರಿದುವೇಕಿಂದಿಲ್ಲೆನುತಿರಲ್ಕಮಾ!
    ನಿರುತ ಸಿಹಿಯನ್ನುಣುತೆ ತಿರುತಿರುಗಿ ಬೆಂಡಾದೆ,
    ಬರಪೂರ ಕಹಿಯನುಣಲೆಂದಿತೊಂದು!! 😉

    ಸೂರೆಗೊಳ್ಳುತಿರೆ ಮಧುಮೋಹಕ ಸ್ಮಿತಮುಖಂ,
    ಪಾರಿಬಂದುದೆ ಪರಮೆಹಿಂಡು ನಿಜದೆ!
    “ನೀರಿರದ ಸಿತಮೇಘದಿಂ ಮಳೆಯೆ?”ಪೇಳುತುಂ
    ಪಾರುತದು ನೂರುಗಜ ಹಿಂದೆ ಸರಿಗೇಂ!

  29. ಮಾವಂ,ಬೇವಂ ಭ್ರಮರವರಸುವೋಲ್
    ಭಾವಾಧೀನರ್, ತಡಕಿ ಸುಕವಿಗಳ್ I
    ಪೂವೆಂಬ೦ತೆನ್ನ ಪಟಕೆ ಸುಳಿಯಲ್
    ಪೂವಿಂ ಚೆಲ್ಲಿರ್ದ ದಳಮಿದೊ ಪದ೦II

    ಅವಳು ತನ್ನ ಪಟ ನೋಡಿಕೊ೦ಡು , ಪದ್ಯ ಪಾನದಲ್ಲಿ ಕವಿಗಳು ಸೃಷ್ಟಿಸಿದ ಪದ್ಯಗಳನ್ನು ಓದಿದಾಗ ಅವಳ ಅನ್ನಿಸಿಕೆಯ ಕಲ್ಪನೆ — ಮಾವನ್ನು ,ಬೇವನ್ನೂ ದುಂಬಿಗಳು ಅರಸುವಂತೆ ಕವಿ ದುಂಬಿಗಳು ನನ್ನ ಮುಖವನ್ನೇ ಹೂವೆ೦ದು ತಿಳಿದು ಅರಸಿ, ಭಾವದಿಂದ ತಡಕಿದಾಗ ಹೂವಿನಿ೦ದ ಬಿದ್ದ ದಳಗಳ೦ತಿವೆ ಈ ಪದ್ಯಗಳು

    ಭ್ರಮರವಿಲಸಿತ ವೃತ್ತ – ತ್ರಿಷ್ಟುಪ್ ಛ೦ದಸ್ಸಿನಲ್ಲಿ.

    • ಆಹಾ ಒಳ್ಳೆ ಕಲ್ಪನೆ. ಹೊಸ ವೃತ್ತದ ಪರಿಚಯಕ್ಕಾಗಿ ಧನ್ಯವಾದಗಳು ಕೂಡ!

      • ನೀಲಕಂಠರೇ , ಧನ್ಯವಾದಗಳು .
        ಹೊಸ ಸ೦ವತ್ಸರಕ್ಕೆ ಒಂದು ಹೊಸತನ . ಇದೆಯಲ್ಲಾ ಕವಿವಾಣಿ … ಜಗಕೊಂದು ಯುಗಕೊಂದು ಹೊಸ ಹೆಸರು ಬೇಕು … ನಗೆಗೊಂದು ಬಗೆಗೊಂದು ಹೊಸ ಕುಸುರು ಬೇಕು 🙂 … ಹಾಗೆ

  30. ಯುವತಿಯೋರ್ವಳ ಬಣ್ಣಿಸಿದನಪ್ಸರೆಯರೆದುರಲಿ ನಾರದ,
    ಧವಳ ವರ್ಣದ ನುಣುಪುಗೆನ್ನೆಯ ಗಲ್ಲದಂಚಿನ ಮಚ್ಚೆಯ.
    ತವಕದಿಂದಲಿ ನಾರಿಮಣಿಯರು ಭ್ರಮರ ಸೇನೆಯ ಕರೆದರು. ಭುವನಸುಂದರಿಯವಳ ಮೊಗವನ್ನಶಿಸಲಾಜ್ಞೆಯನಿತ್ತರು.

    ಭುವನದೀ ಚೆಲುವೆಯನು ಕಂಡೊಡೆ ಭ್ರಮರಗಳ ಮನ ಕಲಕಿತು.
    ಬವಣೆಯಿವಳಿಗೆ ಸಲ್ಲದೆನ್ನುತ ಸೇನೆ ಸ್ವರ್ಗಕೆ ಮರಳಿತು.
    ಸವಿಯನುಣ್ಣಿಸುವಾತುರದಲಪ್ಸರೆಯರೆಲ್ಲರು ಬಂದರು.
    ಭವಿಸಿದೆಲ್ಲವನರಿತು ಮರುಕದಿ ಕೋರಿಕೆಯನೊಂದಿತ್ತರು.

    “ಕವಿತೆಗೊಪ್ಪುವ ಕೆನ್ನೆಗಲ್ಲಗಳಿರಿಯಲಾಗದೆ ಹೋದರೂ.
    ರವಿಯ ಕಾಂತಿಯ ಹೋಲುವಂದಕೆ ತನ್ನಿ ಗ್ರಹಣವನಾದರು!”
    ಇವರನರಿತಾ ಸೇನೆಯವಳಾ ಕೆನ್ನೆ ಗಲ್ಲಗಳಪ್ಪಿತು,
    ದಿವಸಕಿಂತಲು ಕುವರಿಯಧರದ ಸೊಬಗು ಮುಮ್ಮಡಿ ಗೊಂಡಿತು.

    • ಕಾರ್ತಿಕ್ ಅವರಿಗೆ ಪದ್ಯಪಾನದ ಪರವಾಗಿ ಹಾರ್ದಿಕಸ್ವಾಗತ.
      ನಿಮ್ಮ ಪದ್ಯವೂ ಚೆನ್ನಾಗಿದೆ; ಒಳ್ಳೆಯ ಕಥನಕವನದ ಜಾಡಿನಲ್ಲಿದ್ದು, ಮಾತ್ರಾಮಲ್ಲಿಕಾಮಾಲೆಯ ಗತಿಯಿಂದ ಗಮಕಿಸಿದೆ. ಅಭಿನಂದನೆಗಳು.

Leave a Reply to ಭಾಲ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)