May 082016
 

paper-boat-joana-kruse

  53 Responses to “ಪದ್ಯಸಪ್ತಾಹ ೨೦೧: ಚಿತ್ರಕ್ಕೆ ಪದ್ಯ”

  1. ವಸಿಷ್ಠನು ನಿಃಸಂಕಲ್ಪವಿಧಾನದಿಂದ ಲೋಕಹಿತಕ್ಕಾಗಿ ತನ್ನನ್ನು ಒಪ್ಪಿಸಿಕೊಂಡ ಕರ್ಮಠ, ವಿಶ್ವಾಮಿತ್ರನು ಸಸಂಕಲ್ಪನಾಗಿ ಉದ್ಯುಕ್ತನಾದವನು ಎಂದಿದ್ದಾರೆ ದೇವುಡು.
    ಕಲಹಂಸ|| ಜನಮೊಂದುಮಿಲ್ಲದಿಹ ನೌಕೆಗಮಿಲ್ಲಂ
    ಕೊನೆಸೇರ್ವ ಗಮ್ಯಮದುಮೆನ್ನದಿರೈ ನೀಂ|
    ಕನಲಿರ್ಪ ಕೌಶಿಕನಿಗಿಂ(ವಿಶ್ವಾಮಿತ್ರ) ಗಡ ಶ್ರೇಷ್ಠಂ
    ಖನಿಯಪ್ಪ ವಾರುಣಿಯು(ವಸಿಷ್ಠ) ವ್ಯಾಜವ ಬಿಟ್ಟಂ (ಬಿಟ್ಟವನಾದ)||

    • ಕಲಹಂಸದಂಥ ವಿರಳಪ್ರಚುರವೃತ್ತದ ಪ್ರಯೋಗಕ್ಕಾಗಿ ಅಭಿನಂದನೆಗಳು. ಆದರೆ ಚಿತ್ರದಿಂದ ಕಲ್ಪನೆಯು ತುಸು ದೂರ ಸರಿಯಿತಲ್ಲವೇ!

      • ಆ ಹಡಗೇ ’ಕಲ್ಪನೆ’. ಅದು ದೂರ ಸರಿಯಬೇಕಲ್ಲವೆ? 😉

  2. ಕಾಗದದಿಂದಾಗುತ್ತುಂ
    ವೇಗದ ವೀಚಿಗಳ ನಡೆಗೆ ಬೆದರುತ್ತುಂ,ಹಾ!
    ಸಾಗುವದಂ ಮರೆತಿರ್ಕೇಂ
    ಸಾಗರದೊಳ್ ಸಾರ್ದ ದೋಣಿ ,ಬೊಬ್ಬಿರಿದೆಂದುಂ!

    • ಕಲ್ಪನೆಯೂ ರಚನೆಯೂ ಸೊಗಸಾಗಿವೆ. ಆದರೆ ಸಾಗರದೊಳ್ಗೆ ಎಂಬಂಥ ಅಸಾಧುರೂಪವನ್ನು ಸಾಗರದೊಳ್ ಸಾರ್ದ ಅಥವಾ ಸೇರ್ದ ಎಂದು ತಿದ್ದಬಹುದು.

  3. ಪಲಬಗೆಯ ಮಹತ್ಕಾರ್ಯಂ
    ಗಳನೆಸಗುತ್ತಿರ್ಪ ವಾರಿಧಿಯೆ ತಾನೆಂದೇಂ
    ಕಳವಳಮನೊಡ್ಡಿತೇ,ಮ
    ಕ್ಕಳಾಟಮಂ ಭುಂಜಿಸುತ್ತುಮೆಂದುಂ ,ಭುವಿಯೊಳ್!

    • ಪದ್ಯ ಚೆನ್ನಾಗಿದೆ. ಸ್ವಲ್ಪ ಸವರಣೆಗಳನ್ನು ಹೀಗೆ ಮಾಡಬಹುದು:
      ಪಲಬಗೆಯ ಮಹತ್ಕಾರ್ಯಂ
      ಗಳನೆಸಗುತ್ತಿರ್ಪ ವಾರಿಧಿಯೆ……………
      ………………………
      …………………………………………

  4. ತೇಲಿಪುಗುತಿರ್ಪುದೈ ಬಾಲರಾಟದ ದೋಣಿ
    ಗಾಳಿ,ಬಿಸುಪಿಗೆ ಮೈಯನೊಡ್ಡಿ ಮುಂದೆ,
    ನೀಲಸಾಗರ ಜಗದೆ,ತಾನೊಂಟಿಯೆಂದೆಂಬ
    ಕೀಳು ಸಂಗತಿಯೊಂದನರಿತರಿಂದೆ

    • ನೀಳ ಸಾಗರ ಎಂಬುದು ನೀಲಸಾಗರವೇ ಅಥವಾ ನೀಲಿಯಾದ ಸಾಗರವೇ? ಮೊದಲನೆಯದಾದಲ್ಲಿ ಅರಿಸಮಾಸವಾಗುವುದು.

      • ಧನ್ಯವಾದಗಳು, ಎಲ್ಲವನ್ನೂ ಸರಿಪಡಿಸಿದ್ದೇನೆ.

  5. ಕಲ್ಪನೆಯ ಕಡಲಿನೊಳ್ ನುಡಿಯನರಸಲೆಂದು
    ಶಿಲ್ಪಿಸುತೆ ಶೂನ್ಯಮನಮನಾಂ ತೇಲಿಬಿಡುವೆಂ|
    ಕಲ್ಪಸುಸ್ಥಾಯಿಕವಿತೆಯಂ ರಚಿಪ ಕತದಿಂ-
    ದಲ್ಪನಿರ್ಲೇಖಪತ್ರನೌಕೆಯನಿದೀಗಳ್||

    ತೇಟಗೀತಿಯ ಈ ಪದ್ಯವು ಖಾಲಿಹಾಳೆಯಲ್ಲಿ ರಚಿಸಿದ ದೋಣಿಯನ್ನು ಶೂನ್ಯಮನಸ್ಸಿಗೆ ಹೋಲಿಸುತ್ತಾ ಈ ನೌಕೆಯು ನುಡಿಗಳನ್ನು ಹುಡುಕಿಕೊಳ್ಳಲೆಂದು ಕಲ್ಪನೆಯ ಕಡಲಿನಲ್ಲಿ ಸಾಗಿದೆಯೆಂಬ ಪರಿಯಲ್ಲಿ ರಚಿತವಾಗಿದೆ.

  6. ಅಣಮುಂ ತಳುವದೆ ಕಡಲೊಳ್
    ಬಣಗೊಡಲಿನ ದೋಣಿ ತೇಲ್ವುದೇನಿದು ದಿಟದಿಂ|
    ಪ್ರಣಯಾಂಬುಧಿಯೊಳ್ ಸಾಗುವ
    ಗಣನಾತೀರಾರ್ಥಪೂರ್ಣಮನ್ಮಥಲೇಖಂ||

    • ಸರ್, ದಯವಿಟ್ಟು ಅರ್ಥ ತಿಳಿಸಿ (ನಾಲ್ಕನೇ ಸಾಲಿಗೆ)

    • ನೀಲಕಂಠರೆ,ಚೆಲುವಾದ ಈ ಕಂದಪದ್ಯದ ನಾಲ್ಕನೇ ಸಾಲಿನಲ್ಲಿ ಟಂಕನದೋಷವಿರಬಹುದು. ಅದು “ಗಣನಾತೀತಾರ್ಥಪೂರ್ಣಮನ್ಮಥಲೇಖಂ” ಆಗಿರಬಹುದು.

      • ಆಹಾ, ಸರಿಯಾಯ್ತು. ತುಂಬ ಚೆನ್ನಾಗಿದೆ 🙂

        • ತಿದ್ದಿದ ಸೋದರಿ ಶಕುಂತಲಾ ಅವರಿಗೂ ನೀಲಕಂಠರಿಗೂ ಧನ್ಯವಾದ.

  7. ನೌಕೆಯ ಗರ್ಭದೊಳ್ ಪಯಣಕಿಲ್ಲದಿರಲ್ ಜನರಾರುಮಾಗಳ-
    ಸ್ತೋಕವಿಲಾಸದಿಂ ವಿಪುಲಧೈರ್ಯದೆ ಕರ್ಗಜನೌಕೆಯಾದೊಡಂ|
    ಪ್ರಾಕಟಮಪ್ಪುದಂಬುಧಿಯೊಳಂತಿರದಿರ್ದೊಡೆ ಲೋಹನೌಕೆಯುಂ
    ಭೀಕಮಲೀಕನಿರ್ಭರತೆಯೊಳ್ ನಡೆಗುಂ ಕಿರುವೊಂಡದಲ್ಲಿಯುಂ||
    (ಅಸ್ತೋಕ = ಅಪಾರ, ಕರ್ಗಜ = ಕಾಗದ, ಭೀಕ = ಭಯ, ಅಲೀಕನಿರ್ಭರತೆ =ಹುಸಿಯಾದ ಹೆಮ್ಮೆ, ತುಂಬುತನ)

  8. ತಲೆ ಕೈ ಕಾಲ್ ನಡುವೆಲ್ಲಮುಂ ಸಮಯದಂಭೋರಾಶಿಯೊಳ್ ಬಲ್ಮುಳುಂ-
    ಗಲೆಯುತ್ತಿರ್ಪುದಿದೊಂಟಿಯಾಗಿ ನೆಹರೂಟೋಪಿ ಪ್ರವಾಹಕ್ಕೆ ಸಿ-
    ಲ್ಕೊಲವಂಗೊಳ್ಳದೆ ಲೋಗರಿಂದೆ ಬರಿದೇ ಸಂಕೇತಮಾಗಿರ್ದು ದು-
    ರ್ಬಲಚಿತ್ತಕ್ಕಿತಿಹಾಸದೊಳ್ ಪರಿಯಿದಯ್ ತೀವಿರ್ದ ನೈರಾಶ್ಯಕಂ

  9. ಸರಿಸಮಮಿರ್ಪ ಚೌಕನೆಯ ಹಾಳೆಯನಿಮ್ಮಡಿಸಿಕ್ಕೆಲಕ್ಕದಂ
    ಹರಡುತೆ ನಾವೆಗೈದು, ಹುಡುಗಾಟದೊಳೀ ಅಲೆದಾಟವೆತ್ತಣಂ
    ಬರಿದವಕಾಶದಾಗಸದೆ ತೇಲಿಸಿಬಿಟ್ಟಿಹ ಹಾಯಿಹುಟ್ಟಿದುಂ
    ಪರಿಮಿತ ನೌಕೆಯೋಲ್ ಧರಣಿ, ಸಾಗಿಹ ಯಾನವನಾದಿ ಕಾಲದಿಂ ।।

    ಕಾಗದದ ದೋಣಿಯನ್ನು ರಚಿಸುವ ವಿಧಾನದೊಂದಿಗೆ ಭೂಮಿಯ ಸೃಷ್ಟಿ ಕ್ರಿಯೆಯನ್ನು ಹೋಲಿಸುವ ಪ್ರಯತ್ನ.

    • ಆಹಾ, ಅದ್ಭುತವಾದ ಕಲ್ಪನೆ! ಸುಂದರವಾದ ವರ್ಣನಾರೀತಿ ಕೂಡ.
      ನೌಕೆಯಂತೆ ಧರೆ, ಸಾಗಿರೆ ಯಾನಮನಾದಿಕಾಲದಿಂ… ಎಂದು ತಿದ್ದಬಹುದು.

      • ಧನ್ಯವಾದಗಳು ನೀಲಕಂಠ,
        ಬಾಲ್ಯದಲ್ಲಿ ವಿವಿಧ ಬಗೆಯ “ಕಾಗದದ ದೋಣಿ” ಮಾಡಿ, ಬೀದಿಯಲಿ ಹರಿಯುತ್ತಿದ್ದ ಮಳೆನೀರಿನಲ್ಲಿ ತೇಲಿಬಿಡುತಿದ್ದ ನೆನಪಿನ ಪದ್ಯ !! ಈಗ ಸರಿಯಾಯಿತು.

        ಸರಿಸಮಮಿರ್ಪ ಚೌಕನೆಯ ಹಾಳೆಯನಿಮ್ಮಡಿಸಿಕ್ಕೆಲಕ್ಕದಂ
        ಹರಡುತೆ ನಾವೆಗೈದು, ಹುಡುಗಾಟದೊಳೀ ಅಲೆದಾಟವೆತ್ತಣಂ
        ಬರಿದವಕಾಶದಾಗಸದೆ ತೇಲಿಸಿ ಬಿಟ್ಟಿಹ ಹಾಯಿ ಹುಟ್ಟಿದುಂ
        ಪರಿಮಿತ ನೌಕೆಯಂತೆ ಧರೆ, ಸಾಗಿರೆ ಯಾನಮನಾದಿಕಾಲದಿಂ ।।

    • ಯೋಽಽಪ್ಸು ನಾವಂ ಪ್ರತಿಷ್ಠಿತಾಂ ವೇದ….. ಉಪನಿಷದುಕ್ತಿಯೇ ಕಾವ್ಯವಾಗಿ ಹರಿದಿದೆ.

      • ಪ್ರಸಾದ್ ಸರ್, ನಿಜವಾಗಿ ಪದ್ಯಕ್ಕೆ ಪ್ರೇರಣೆ ಭೂಮಿಗೂ-ನಾವೆಗೂ ಹೊಂದುವ “ಹಾಯಿ-ಹುಟ್ಟು” ಪದಗಳು !!
        ಈ ಉಪನಿಷತ್ ವಾಕ್ಯ ನನ್ನ ಮನದಲಿರಲ್ಲಿಲ್ಲ. ಗುರುತಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

  10. ಇರುಳೊಡಲೊಳ್ ವಿರಾಜಿಸುತುಮಿರ್ಪೆಳೆ ಚಂದದಚಂದ್ರನೋ!ವಿಯೋ
    ಗ ರುಚಿಯನೀಯುತುಂ ಹೃದಯಸಾಗರಮಾಕ್ರಮಿಸಿರ್ಪ ನಲ್ಲೆಯೋ!
    ಕರಮೆಸೆದಿರ್ಪ ತಾಯ್ಮಡಿಲೊಳಾಡುವ ಮೆಚ್ಚಿನ ಮುದ್ದುಕಂದನೋ!
    ಸರದ ಗಭೀರಮಂ ತೊಡೆದು ಮೂಡಿದ ಬೆಳ್ನಗೆಮಲ್ಲೆಯೋ!ನಿಜಂ!

  11. ಹಗುರ ಹಾಳೆಯದಾದೊಡೇಂ!ಹಾ!
    ನೆಗಳಿ ದೋಣಿಯ ರೂಪಮಿತ್ತೊಡೆ
    ನಗರ ಸೀಮೆಯನೆಲ್ಲ ಮೀರುತೆ ತೇಲಿ ಹೊಂಟಿತದೇಂ!
    ಸೊಗದ ಜಗಮಂ ಕಾಣುವಿಚ್ಚೆಯೊ
    ಳೊಗೆದು ಸಂದಿರೆ ಕಂದನೊರ್ವಂ
    ಬಗೆಯಬಲ್ಮೆಯನೋವಿ,ದೂರಕೆ ಸಾರ್ದುಪೋಪವೊಲೇ!

  12. BMTC Route No.201 (ಪದ್ಯಸಪ್ತಾಹವೂ 201) – Srinagara to Srinagara
    ಸಿಗಲು ಸುಳಿಗೀ ನೌಕೆ ಸುತ್ತುವುದು ಅಲ್ಲಲ್ಲೆ
    ತೊಗಟೆಕಸಕಡ್ಡಿಗಳ ಪೊತ್ತು-ಬಿಸುಟು|
    ಪುಗುವುದಂತೆಯೆ ಬಸ್ಸು ಇನ್ನೂರಒಂದೆಂಬೆ
    ಮಿಗೆ(ನಿರಂತರವಾಗಿ) ಶ್ರೀನಗರದಿಂದೆ ಶ್ರೀನಗರಕಂ||
    (ಬಸ್ಸಿಗೆ ಅನ್ವಯಿಸಿದಾಗ ಹತ್ತುವಿಳಿಯುವ ಪ್ರಯಾಣಿಕರೇ ’ಪೊತ್ತು-ಬಿಸುಟು’)

  13. ನೀರವತೆಯಬ್ಧಿಯೊಳ್ ಮೌನಮೇ ಮೈಯಾಂತು
    ಸಾರಿತೇಂ ಮಾತಾಗಿ ನೌಕೆಯೆಂಬಂತೆವೊಲ್,
    ತೋರಿತೇನೇಕಾಂತತೆಯೆ ಚಲಿಸಿ ಸಖನನರಸುತ್ತೆ ಬೇಸರಕೆ ಸೋಲ್ತು
    ಪಾರಿ ಸುಖಿಸುವೆನೆಂದು ಕಡಲ ತೆರೆ ಪಕ್ಕಿಯಾ-
    ಕಾರಮಂ ತಾಳ್ದು ಕಣ್ಗೆಸೆದಿರ್ಪುದೇಂ ಮನೋ-
    ಹಾರಿ ಸಿತಕೀರ್ತಿಯೇ ರೂಪೊಡೆದುದೇಂ ಸಿಂಧುಗಂಭೀರತಾಶ್ರೀಯಳಾ

    ನೀರವತೆಯ ಸಮುದ್ರದಲ್ಲಿ ಮೌನವೇ ಮಾತಾಗಿ ನೌಕೆಯಂತೆ ತೇಲುತ್ತಿದೆಯೋ, ಏಕಾಂತತೇ ಬೇಸತ್ತು ಸಖನನ್ನು ಅರಸುತ್ತ ಹೊರಟಿದೆಯೊ, ಕಡಲ ತೆರೆಯೊಂದು ಹಾರಲೋಸುಗ ಹಕ್ಕಿಯಂತಾಗಿದೆಯೋ, ಸಾಗರನ ಗಾಂಭೀರ್ಯಲಕ್ಷ್ಮಿಯ ಸಿತಕೀರ್ತಿಯೇ ಈ ರೀತಿ ರೂಪವೊತ್ತಿತೋ?

  14. ಚಿತ್ತಮೇ ಲವಣಾಂಬುಧಿಪ್ರಭಮಾಗೆ ಬೇಸರದಿಂದಮಾ
    ಹೊತ್ತು ಪಶ್ಚಿಮದದ್ರಿಯಂಬುಗುತಿರ್ದು ಕಳ್ತಲೆ ಮುತ್ತಿರ-
    ಲ್ಕೆತ್ತುತೀ ಮನಮಂ ವಿಯನ್ನಿಭಲಾಘವಕ್ಕೆ ವಿಲಾಸದೊಳ್
    ಪೊತ್ತು ತೇಲುವ ನೌಕೆಯಯ್ ವರಕಾವ್ಯದಚ್ಚಿನ ಪತ್ರಮೇ

    ಬೇಸರಗೊಂಡು ಮನದ ಕತ್ತಲೆಯಾವರಿಸಿದಾಗ, ಚಿತ್ತವೇ ಒಂದು ಉಪ್ಪುನೀರೊಡಲಾಗೆ, ಮನಸ್ಸನ್ನು ಹಕ್ಕಿಯಂತೆ ಹಗುರವಾಗಿಸಿ ಹೊತ್ತು ತೇಲುವ ನೌಕೆಯಂತೆಸೆವುದು ಒಂದು ಒಳ್ಳೆ ಕಾವ್ಯದ ಅಚ್ಚುಳ್ಳ ಪುಸ್ತಕದ ಪುಟ.

  15. Unfortunately we dismiss a paperboat as just a child’s play! Playing children will ignore the peripheral aspects of a real ship (viz., people and merchandise) and will herald just the philosophy of the cruise.
    ಉಪಜಾತಿ|| ಜನಂಗಳುಂ ಮೇಣ್ ಸರಕೇಕೊ ಪೇಳೀ
    ಯಾನಕ್ಕಮರ್ಥಾರ್ಥಮದಿಲ್ಲಮೊಂದೂ| (ಅರ್ಥಾರ್ಥ=economic significance)
    ಏನಿಲ್ಲದಂತಾಗಿ ಉಪಾಧಿಯುಂ ಕೇಳ್
    ಘನತ್ವತತ್ತ್ವಂ ಶಿಶುಖೇಲಮಾತ್ರಂ||
    ಆ ತತ್ತ್ವಗಳೆಲ್ಲ ಏನೇನು ಎಂದು ಅರುಹಲು ನನ್ನ ಸಹಪಾನಿಗಳಿಗೆ ಒಪ್ಪಿಸಿದ್ದೇನೆ 😉

    • ಒಳ್ಳೆಯ ಕಲ್ಪನೆ. ಆದರೆ ಆದಿಪ್ರಾಸನಿಯಮಕ್ಕೆ ಒಗ್ಗುವಂತೆ ಕನ್ನಡದಲ್ಲಿ ಉಪಜಾತಿಯ ರಚನೆಯೇ ಸಾಧ್ಯವಿಲ್ಲವಲ್ಲ.. !

      • ಇದು ಜಾತಿಕವಿತೆಯಲ್ಲ ಸ್ವಾಮಿ. ಹೇಳಿದ್ದೇನಲ್ಲ – ಉಪಜಾತಿ 🙁
        ಅನುಷ್ಟುಪ್ಪಿನ್ನಲ್ಲಿ ಕವನಿಸುವಾಗ ಪ್ರಾಸವನ್ನೇ ಪಾಲಿಸೆವಲ್ಲವೆ. ಅಂತೆಯೇ ಇದೂ ಆಗದೆ? ದಯವಿಟ್ಟು ಮುಂಜೂರು ಮಾಡಿ; ಹ್ವಟ್ಗಾಕ್ಕಳಿ.

        • ನಾವೆಲ್ಲ ಅನುಷ್ಟುಪ್ಪಿಗೂ ಅಡುಗೆಗಿಷ್ಟುಪ್ಪು ಎಂಬಂತೆ ಪಾಲಿಸುತ್ತೇವೆ. ಇರಲಿ, ಹೊಟ್ಟೆಗೆ ಹಾಕ್ಕೊಂಡಿದ್ದೇನೆ. 🙂

    • ಪ್ರಸಾದರೇ, ಇಷ್ಟಕ್ಕೂ ಎರಡನೇ ಸಾಲಲ್ಲಿ ಛಂದಸ್ಸು ತಪ್ಪಿದೆಯಲ್ಲ!

  16. ಕರ್ಪನೆ ನೀರೊಳ್ ದೋಣಿಯು
    ನೇರ್ಪಿಂದಂ ತೇಲಿತೇಲಿ ಸೇರಲ್ ದಡಮಂ
    ಇರ್ಪ, ಸಕಲ ಬನ್ನಂಗಳ
    ತೋರ್ಪಡದೆಯೆ ಮುಂದೆ ಸಾಗುತಿರ್ಪವೊಲಿರ್ಕುಂ

  17. ಹೃದಯಾಪಾರತೆಯೊಪ್ಪದಿಂದೆ ಪರಿವೀ ಜೀವಾಬ್ಧಿಯುಂ,ನೀರಿನೊಳ್
    ಹದಮಂ ಕಾಪಿಡುತಂತೆ ಜಾಣನಡೆಯಿಂ ಪೋಗುತ್ತಿರಲ್ ನೌಕೆಯುಂ,
    ಪದಪಿಂ ರಾಗವನಿತ್ತು ಸಾಗರಕೆ ಮೇಣ್ ಸಂಗಾತಿಯಾದಾಗಸಂ,-
    ಕದಮಂ ತಟ್ಟವೆ ಲೋಕದೆರ್ದೆಯ,ನಿಜಂ, ತಾವಾಗುತುಂ ಸುಂದರಂ!

    (ಸಾಗರ,ನೌಕೆ,ಆಗಸಗಳು ತಮ್ಮತಮ್ಮ ಉದಾರ ನಡತೆಯಿಂದಾಗಿ ಜನರಿಗೆ ಸುಂದರವಾಗಿ ಕಾಣುವುದೆ!)

    • ಹೃದಯವೈಶಾಲ್ಯ..? ಮೊದಲನೇ ಸಾಲಿನಲ್ಲಿ ಛಂದಸ್ಸು ತಪ್ಪಿದೆ. ಹಾಗೆಯೇ ನಾಲ್ಕನೇ ಸಾಲಿನಲ್ಲೂ.

      • ಸರಿಪಡಿಸುತ್ತಿರುವಾಗಲೇ :-), ತಪ್ಪನ್ನು ತೋರಿಸಿದ್ದಕ್ಕೆ ಧನ್ಯವಾದಗಳು!

        • Hahhaa.. ಹೃದ ಇನ್ನೂ ಹಾಗೇ ಇದೆಯಲ್ಲ 🙂

          • ಹೃದ=ಹೃದಯ ,-ಆಗದೇ?,?

          • ಇಲ್ಲ. ಹೃತ್, ಹೃದಯ ಇವೆ. ಹೃದ ಅಂತ ಕಾಣಿಸಲಿಲ್ಲ ನಿಘಂಟಿನಲ್ಲಿ. ಹೃದಯಾಪಾರತೆಯೊಪ್ಪದಿಂದೆ ಎಂದೇನಾದರೂ ಮಾಡಬಹುದು.

  18. ಗಣೇಶ್ ಸರ್ ರವರ “ತೇಟಗೀತಿ”ಯಿಂದ ಪ್ರೇರಣೆಗೊಂಡು “ನುಡಿಯನರಸಿದ” ಕಂದ !!

    ಅಜರಾಮರವುಂ ಗಡ ಕಾ-
    ಗಜದೀದೋಣಿ ನೆನೆಯಲ್ ಮುಳುಗದೈ ಮುದುಡಿಂ
    ಸೃಜನಾತ್ಮಕ ಸಂಪುಟದೋಲ್
    ನಿಜಜನ ಮಾನಸಸರೋವರದೆ ತೇಲ್ವೊಡೆ ತಾಂ !!

    ತೇಲುತ್ತಿರುವ “ಕಾಗದದ ದೋಣಿ” – (ಓದುಗರ ಮನದಲ್ಲಿ ಶಾಶ್ವತವಾಗಿ ನೆಲೆಸುವ) “ಪುಸ್ತಕ”ದಂತೆ ಕಂಡ ಕಲ್ಪನೆಯಲ್ಲಿ !!

  19. || ದೋಧಕವೃತ್ತ ||

    ನೀರಿನ ಮೇಗಣ ದೋಣಿ ಬೆಡಂಗಂ
    ತೋರುತೆ ಸಾಗೆ ತರಂಗದೊಳಂದಂ |
    ಪೀರದೆ, ತೇಲುತೆ ತೀರಮನೈದಲ್,
    ಸಾರುತುಮಿರ್ಪುದೆ ಬೆಳ್ಪಿನ ಸೈಪಿಂ ? ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)