May 152016
 

‘ವೈಕಾಸಿ’, ‘ಆಡಿ’, ‘ಐಪಸಿ’, ‘ಪಂಗುನಿ’ ಎಂಬ ತಮಿಳು ಮಾಸಗಳ ದತ್ತಪದಗಳನ್ನು ಬಳೆಸಿ ಮಹಾಕಾಲ(ಶಿವ)ನ ವರ್ಣನೆಯನ್ನು ಮಾಡಿರಿ

  32 Responses to “ಪದ್ಯಸಪ್ತಾಹ ೨೦೨: ದತ್ತಪದಿ”

  1. ಚೆಲ್ವೈ ಕಾಸಿಲ್ಲದಿರ್ದುಂ ಗಿರಿವರತನುಜಾಚಿತ್ತಚಾಪಲ್ಯಕೆಂತೋ
    ನಲ್ವಿಂ ಪಕ್ಕಾದೆ, ಚರ್ಮಾಂಬರಿ ಗಿರಿವಿವರಾವಾಸಿ ಕಾಡಾಡಿ, ಕೇಳ್ದ-
    ರ್ಗೊಲ್ವಿಂ ಕೇಳಿರ್ಪುದಂ ಕೇಳ್ದೊಡನೆ ಕುಡುವ ನೀನೈ ಪಸಿರ್ವೊತ್ತ ಕಲ್ಪಂ,
    ಸೋಲ್ವೆಂ ಕಾಣ್ ಪಂಗು ನಿಚ್ಚಂ ನಡೆವೊಡೆ, ನಡೆಸಯ್ ದೇಸಿಗಾ, ಮಾರ್ಗಮಾಗಯ್

    ಬಲುಚೆಲುವಾಯ್ತಿದು, ನೀನೋ ಏನೂ ಕಾಸಿಲ್ಲದವನಾದರೂ ಆ ಗಿರಿರಾಜನ ಮಗಳ ಮನವನ್ನು ಗೆದ್ದೆ. ಚರ್ಮಾಂಬರಿಯೂ, ಗಿರಿಗುಹಾವಾಸಿಯೂ, ಕಾಡಾಡಿಯೂ ಆದ ನೀನು ಕೇಳಿದ್ದನ್ನು ಕೊಡುತ್ತೀಯೆ, ಸಮೃದ್ಧವಾಗಿ ಬೆಳೆದ ಕಲ್ಪವೃಕ್ಷದಂತೆ. ಹೇ ದೇಸಿಗಾ (ದೇಶಿಕ – ಶಿವ, ಅಲೆಮಾರಿ), ನಡೆಯಲಾಗದ ಕುಂಟನಾದ ನನಗೆ ಮಾರ್ಗವಾಗು.

  2. ನಿಜವೈ!ಕಾಸಿದ ನೀರ್,ವಿರೂಪಗೊಳುತುಂ ಬೇರ್ಪಟ್ಟು ,ಮತ್ತೊರ್ಮೆಗಂ
    ಸುಜಲಂಬೊಲ್ ಮರುಪುಟ್ಟುತಿರ್ಪವಿಧದೆಮ್ಮನ್ನಾಡಿಸಿರ್ಪಂ,ದಿಟಂ
    ವಿಜಯಂಗೈಪಸಿವಂ,ಮಹಾಜಗದೆ ತಾಂ ಕಾಲಾದಿಯಿಂದಂ!ಸದಾ,
    ಭಜಿಸುತ್ತುಂ ದಣಿಪಂಗು,ನೀಳದಮಮಾ,ತನ್ನಿಚ್ಛೆಯೊಲ್,ಜೀವನಂ!
    (ಭಕ್ತನಿಗೂ,ತನ್ನಿಚ್ಚೆಯ ಜೀವನವನ್ನು ಕೊಡದೇ,ವಿಜಯಿಯಾಗುವ ಶಿವನು,ನಮ್ಮನ್ನು ಆಡಿಸುತ್ತ ಬಂದಿದ್ದಾನೆ-ನೀರು ,ಆವಿಯಾಗಿ,ಪುನ: ,ನೀರಾಗುವಂತೇ)

  3. ಬಿಸಿಲೈ! ಕಾಸಿತೊಡರ್ದು ಹೇಮರಹಿತಂ ಕಂಡಿರ್ದನಾ ಶಂಕರಂ,
    ಮಸಿಯುಂ ತೋರಗುರುಳ್; ಕೆದರ್ದ ಮುಡಿಯಾಹಾ! ಗಾಳಿಯಂತಾಡಿದಂ.
    ಪಸೆನೀಗಲ್ಕೆ ಧರಿತ್ರಿಯೊಳ್ ಕಡುಬೆಮರ್ದೇನೈ? ಪಸಿರ್ ಮೂಡಿತೈ!
    ಪೊಸಪೇೞಿಂ ಪೊಸಗಬ್ಬಮಂ ಮೊರೆದನಾ ಗೋಪಂಗು ನಿತ್ಯಾದ್ಭುತಂ.

    ಸಾರಾಂಶ: ಪಂಗುನಿ (ಫಲ್ಗುಣ) ಮಾಸದ ಅಧಿಪತಿ ವಿಷ್ಣುವು (ಗೋಪ ಎಂದು ತೆಗೆದುಕೊಂಡಿದ್ದೇನೆ) ವೈಕಾಸಿ (ಬೇಸಗೆ), ಆಡಿ (ಆಷಾಢ) ಮತ್ತು ಐಪಸಿ (ಆಶ್ವಯುಜ) ಮಾಸಗಳಲ್ಲಿ ಶಿವ ಹೇಗಿರುತ್ತಾನೆಂಬುದನ್ನು ವರ್ಣಿಸಿದ್ದಾನೆ.

    ಶಿವನು ವೈಕಾಸಿ/ಬೇಸಗೆಯಲ್ಲಿನ ಧಗೆ ತಾಳಲಾರದೆ ಕೇವಲ ಕಚ್ಚೆಯುಟ್ಟು, ಯಾವುದೇ ರೀತಿಯಾದ ಚಿನ್ನಾಭರಣಗಳನ್ನು ತೊಡದೇ ತೋರ್ಪಡುತ್ತಾನೆ.
    ಶಿವನ ಮುಂದಲೆಗೆ ಭಸ್ಮದ ಮಸಿ ತಾಗಿರುತ್ತದೆ ಮತ್ತು ಕೂದಲು ಪೂರ್ತಿ ಕೆದರಿ ಹಾರುತ್ತಿರುವಂತೆಯೇ, ಗಾಳಿಯೊಡನೆ ಗಾಳಿಯಂತೆಯೇ ಆಡಿ/ಆಷಾಢದಲ್ಲಿ ಆಡುತ್ತಾನೆ (ಕುಣಿಯುತ್ತಾನೆ).
    ಮಳೆಗಾಗಿ ಬಾಯ್ದೆರೆದು ಕಾದು ಕುಳಿತ ಧರೆಯ ಬರವನ್ನು ನೀಗಲು ಶಿವನು ಐಪಸಿ/ಆಶ್ವಯುಜ ಮಾಸದಲ್ಲಿ ತಾನು ಬೆವರಿ ಅದನ್ನೇ ಮಳೆಯಾಗಿ ಸುರಿಸಿ ಭುವಿಯಲ್ಲಿ ಹಸಿರು ಮೂಡುವಂತೆ ಮಾಡುತ್ತಾನೆ.
    ಹೊಸದಾದ ಪ್ರಭೆಯಿಂದ ಬೆಳಗುವ ಶಿವನನ್ನು ಕಂಡು ಪಂಗುನಿ/ಫಲ್ಗುಣ ಮಾಸದ ಅಧಿಪತಿ ವಿಷ್ಣುವು ಚಿರಂತನವಾದ ಆಶ್ಚರ್ಯದೊಂದಿಗೆ ಹೊಸ ಕಾವ್ಯವನ್ನು ಈ ರೀತಿಯಾಗಿ ಶುರುಮಾಡುತ್ತಾನೆ.

    • ತುಂಬ ಚೆನ್ನಾಗಿದೆ ಕಾರ್ತಿಕರೆ. ದತ್ತಪದಿಗಳ ಜೊತೆ ಅವುಗಳ ನಿಜಾರ್ಥದ ಸಾಂದರ್ಭಿಕತೆಯನ್ನೂ ಬೆಸೆದಿದ್ದು. ಮೊದಲ ಸಾಲಿನ ಪ್ರಾಸಭಿನ್ನತೆಯಾಗಿದೆ, ಹಾಗು ಪಾದದ ಉತ್ತರಾರ್ಧದಲ್ಲಿ ಛಂದಸ್ಸು ತಪ್ಪಿದೆ.

      • ನೀಲಕಂಠರೇ, ಧನ್ಯವಾದಗಳು ತಪ್ಪನ್ನು ತೋರಿಸಿದ್ದಕ್ಕಾಗಿ.
        ಸವರಿದ್ದೇನೆ. ಪ್ರಾಸದನುಕೂಲಕ್ಕಾಗಿ ವೈಕಾಸಿಯನ್ನು ಆಡುನುಡಿಯ ಐಕಾಸಿ ಎಂದು ಪರಿಗಣಿಸಿದ್ದೇನೆ.

  4. ಬಲು ಕುತುಕವೈ!ಕಾಸಿ,ದೇಹದಂಡಿಪನೊಳುಂ
    ಜಲದೇವಿ,ಚಂದ್ರರಾಡಿರ್ಪುದುಂ! ಹಾ!
    ನಲವಿಂದೆ ಸೈ,ಪಸಿರ್ ,ತಾನಿರ್ಪವೊಲ್ ,ಕುದಿವ
    ನೆಲದೊಳುಂ ,ಜೀವನದ ಪಂಗು ನೀಗಿ!

    (ಕಾದ ನೆಲದಲ್ಲೂ ,ಹಸಿರು ಮೂಡಿ,ಸಂತೋಷವಾಗಿಯೇ ಇರುವಂತೇ,,ದೇಹದ ಬಗ್ಗೆ ನಿಷ್ಕಾಳಜಿಯನ್ನು ಹೊಂದಿರುವನಲ್ಲಿಯೂ ಗಂಗೆ,ಚಂದ್ರಾದಿಗಳು ಆಡಾಡುತ್ತಿರುವದು(ಸಂತಸದಿಂದೆ),ನಿಜಕ್ಕೂ ಆಶ್ಚರ್ಯ)

    • ಆಹಾ, ಒಳ್ಳೆ ಕಲ್ಪನೆ! ಪಂಗುನೀವಿ ಅಂದರೇನು? ಕಾಸಿ ಎಂದು ಪೂರಕವಾಗಿ ಯಾವ ಪದವೂ ಬರಲಿಲ್ಲ.

      • ಪಂಗು=ಹಂಗು
        ನೀವಿ ಇದು ನೀಗಿ ಆಗಬೇಕು. ಸರಿಮಾಡಿದ್ದೇನೆ.
        ಕಾಸಿ ಇದನ್ನು ದಣಿಸಿ,ಕಾಯಿಸಿ,ಬೇಯಿಸಿ ಎಂದು ಕೊಂಡಿದ್ದೇನೆ

  5. ಮಾಸಿ, ಪಂಗುನಿ, ಆಣಿ, ವೈಕಾಸಿ, ಕಾರ್ತಿಕೈ,
    ದೇಸ-ದ್ರಾವಿಡದೆ ಮಾರ್ಗೞಿ, ಚಿತ್ತಿರೈ|
    ಮಾಸವೈಪಸಿ, ಪುರತ್ತಾಸಿ, ಆಡಿಯೊಳು ಕೈ-
    ಲಾಸಪತಿಯಂ ನುತಿಪರೆಲ್ಲಕಾಲಂ||
    (ತಯಿ ಆವನಿಗಳು ’ಎಲ್ಲಕಾಲಂ’ನಲ್ಲೇ ಸೇರಿವೆ 😉 This is just ‘Present Sir’ for the attendance log. I will pen another verse.)

    • Hehhee, ನಿರೀಕ್ಷಿಸುತ್ತಿದ್ದೆ ನಿಮ್ಮನ್ನು. ಇದು ಬರಿ ಹೊಸಿಲು ದಾಟಿಬರುವಾಗಿನ ಪದ್ಯವೇನು..! ನಾನೂ, ಕಾಂಚನಾ ಅವರೂ, ಕಾರ್ತಿಕರೂ ಪಟ್ಟ ಶ್ರಮಕ್ಕೆ ಸ್ವಲ್ಪ ಮರ್ಯಾದೆ ಕೊಟ್ಟು ಇನ್ನೊಂದು ರಚಿಸುತ್ತೀರೆಂಬ ಆಶೆ 🙂

      • ಮರ್ಯಾದೆ ಕೊಡಲೆಂದೇ ಇಂಥದ್ದನ್ನು ರಚಿಸಿದ್ದು. ಇಲ್ಲದಿದ್ದರೆ ನಿಮ್ಮಗಳ ಪದ್ಯವನ್ನು ಮೀರಿಸುವಂಥದ್ದನ್ನು ರಚಿಸುತ್ತಿದ್ದೆ 😉

        • ಮೀರಿರ್ಕುಂ ಭವದೀಯಪದ್ಯವಿಭವಂ ನೈಘಂಟಿಕೀಭಾರದೊಳ್
          ನೂರಾರ್ ಮೇರುಗಳಂ ಸದಾ, ವಿದಿತಮಯ್ ಸರ್ವರ್ಗುಮೀ ತಾಣದೊಳ್ 🙂

    • ಮರ್ಕಳಿಯನ್ನು ಮಾರ್ಗೞಿ(ಮಾರ್ಗಳಿ) ಎಂದು ಮಾಡಬಹುದಲ್ಲವೇ? 🙂

      • ಧನ್ಯವಾದ. ನನಗೆ ತಮಿಳು ಉಚ್ಚಾರಣೆ ತಿಳಿಯದು, ಕಾಗುಣಿತ ತಪ್ಪಾಗಿರುತ್ತದೆ ಎಂದು ನಿರೀಕ್ಷಿಸಿದ್ದೆ. ತಿದ್ದಿದ್ದೇನೆ

  6. ||ಶಾರ್ದೂಲವಿಕ್ರೀಡಿತವೃತ್ತ||

    ಚೆಲ್ವೈ,ಕಾಸಿದ ಪಾಲಿನಂಥ ರುಚಿಯಂ ಪೊಂದಿರ್ಪ ಗಂಗಾಜಲಂ,
    ನಲ್ವಿಂ ನಾಟ್ಯಮನಾಡಿ ಶಂಕರಜಟಾಲಂಕಾರಮಂ ಪೆರ್ಚಿಸಲ್,|
    ಗೆಲ್ವಂ ಮೂಡಿಪನೈ,ಪಸಿರ್,ಬುವಿಯೊಳಿರ್ಪಂತಾಗಿಸಲ್ ಸೃಷ್ಟಿಯೊಳ್,
    ಸಲ್ವಂ,ಪಂಗು ನಿರಾಶೆಯಂ ಪಡದಿರಲ್, ಸಂತೈಸಲೆಂದೀಶ್ವರಂ ||

    • ಆಹಾ, ತುಂಬ ಸುಂದರವಾಗಿಯೂ, ಸರಳವಾಗಿಯೂ ಮೂಡಿಬಂದಿರುವ ಪದ್ಯ ಮೇಡಮ್!
      ಶೇಖರ ಅಂದರೆ ಶಿವ ಅಂತ ಅರ್ಥ ಇದೆಯಾ? ಶಂಕರಂ ಅಂತ ಮಾಡಬಹುದಲ್ಲ…

    • ಅಯ್ಯೋ, ಏನಿದು ಮಾಯೆ! ಮೇಡಮ್, ಪದ್ಯ ಎಲ್ಲಿ ಹೋಯಿತು?

      • 🙂 ನೀಲಕಂಠರೆ, ಮೊದಲನೇ ದತ್ತಪದವನ್ನು “ವೈಕಾಸಿ”ಯ ಬದಲಾಗಿ “ಐಕಾಸಿ ” ಎಂದು ತಿಳಿದು ಪದ್ಯವನ್ನು ರಚಿಸಿದ್ದೆ. ತಪ್ಪಿನ ಅರಿವಾಗಿ ತಿದ್ದಬೇಕಾದಾಗ ಪದ್ಯವು ಮಾಯವಾಗಿ ಈಗ ಸವರಣೆಗೊಂಡು ಪ್ರತ್ಯಕ್ಷವಾಗಿದೆ.

        • ಪ್ರಾಸಕ್ಕಾಗಿ ಆನೆ ಹೋಗಿ ಸಿಂಹ ಬಂತು 🙂

          • ಆನೆಯಂತೆಯೇ ಹುಲಿಯೂ( ಶಾರ್ದೂಲವೆಂದರೆ ಹುಲಿ ಅಲ್ಲವೆ ?)ತುಂಬ ಸುಂದರವಾಗಿಯೂ ಸರಳವಾಗಿಯೂ ನಿಮಗೆ ಕಂಡಲ್ಲಿ ಧನ್ಯವಾದಗಳು. 🙂

          • Hahhaa, ಈ ಶಾರ್ದೂಲ ಸರಳವಲ್ಲ. ಇದಕ್ಕೆ ಹುಲಿ, ಸಿಂಹ, ಚಿರತೆ, ಶರಭ ಎಂದೆಲ್ಲ ಅರ್ಥಗಳಿವೆ 🙂 ನಾನೂ ಇಷ್ಟು ದಿನ ಬರೀ ಸಿಂಹ ಅಂದುಕೊಂಡಿದ್ದೆ.

  7. ಸೀಸ|| ವಾಸಽವೈ ಕಾಸಿಕೊಳೆಽ ಮೈಯನವಽಕಾಶವಿರಽದಿರ್ಪಽ ಹಿಮದಾಲಯದೆಽ ನಿನ್ನಽದೆಂಬೆಂ
    ಆಡಿಽ ತಾಂಡವಮಽನುಂ ಕಾವನೊಡಽಲೊಳಗಿಂದೆಽ ಪುಟ್ಟಿಸಲುಽಮೆಳಸುತ್ತಽಲಿರ್ಪೆಽಯೇನೈ|
    ಪೇಳೈ ಪಽಸಿಯ ಹಿಽಮಽಶೀತಽಕಂ ಲೇಪಿಽಪೆಽಯೇಂ ಬೂದಿಽಯಂ ಸ್ಮಽಶಾನದ್ದಽದಿದ್ದೇಂ
    (ಈ ಪಾದದ ಮಾತ್ರಾರೂಪ: ಪೇಳೈ ಪಸಿಯ ಹಿಮದ ತಣುವ ತಡೆಯಲ್ ತೊಡುವೆಯೇಂ ಬೂದಿಯಂ ಸ್ಮಶಾನದ್ದದಿದ್ದೇಂ)
    ಪೊಂದಿಽ ಏಂ ಸುಡುಗಣ್ಣಽ ನೀ ಸುಡದೆಽಲೆಲ್ಲಽಮಂ ಸಾಜಽದಿಂ ಶೀತಽಮಂ ಸೈಸಿಽ ನಿಂದೈ||
    ಆಟವೆಲದಿ|| ಆರಽ ಪಂಗುಽ ನಿಂಗೆಽ ಪೇಳಯ್ಯಽ ಜಗದೀಶಽ
    ವಾಯುಽವಿಂಗೆಽ ಬೀಸುಽ ಜೋರಾಗೆಂಬೆಽ|
    ಶೀತಽದಗ್ನಿಽಯಿಂದೆಽ ಸುಡು ಎಂಬೆಽ ಹೈಮಽಗಂ
    ವರುಣಽ ಸುರಿಯೊಽ ಸುಮ್ಮಽಸುಮ್ಮಽನೆಂಬೆಽ||

    ಎರಡನೆಯ ಪಾದದಲ್ಲಿ ಕಾವ ಎಂಬ ಪದವನ್ನು ಬಳಸಿದ್ದೇನೆ, ಕಾವು ಎಂಬರ್ಥದಲ್ಲಿ. ಕಾಮದೇವ ಮತ್ತವನುರವಣೆ ಎಂಬ ಶ್ಲೇಷಾರ್ಥವಾಗುವಂತೆ ಆ ಪದ-ಪಾದವನ್ನು ಹೇಗೆ ತಿದ್ದುವುದೆಂದು ತಿಳಿಸಿಕೊಡಿರೆಂದು ಪಾನಿಗಳಲ್ಲಿ ಕೋರಿಕೆ.

    • ಆಹಾ, ಏನದ್ಭುತವಾದ ಕಲ್ಪನೆ!! ಕಾವನೊಡಲೊಳಗಿಂದೆ ತಾಂಡವ! ಸುಡುಗಣ್ಣ ಪೊಂದಿ ಸುಡದಲೆ..!!
      ದೊಡ್ಡ ನಮಸ್ಕಾರ ನಿಮಗೆ 🙂

      • ಅನಂತಧನ್ಯವಾದಗಳು ನಿಮಗೆ. ’ಅನಾದ್ಯನಂತಧನ್ಯವಾದ’ ಎನ್ನಲಾರೆ, ಏಕೆಂದರೆ ನಾನು ನಿಮ್ಮ ಹಾಗೆ ವಿಪರೀತಸೀಮಾರ್ಥಗಳನುಳ್ಳ ’ದೊಡ್ನಮ್ಸ್ಕಾರ’ದಂಥ ಪದಪುಂಜವನ್ನು ಬಳಸುವುದಿಲ್ಲ 😉

        • ಅನಂತ ಅಂದರೇನೇ ಎರಡೂ ಕಡೆ ತುದಿ ಇಲ್ಲದ್ದು ಅಂತ. ಅನಾದ್ಯನಂತ ಎಂದರೇನು?!!

          • ಅನಾದಿ+ಅನಂತ. ಆದ್ಯಂತರಹಿತ ಎನ್ನೊಲ್ಲವೆ ದೇವರನ್ನು ನಾವು?

          • ಹೌದು. ಆದರೆ ತಾತ್ತ್ವಿಕವಾಗಿ ಅನಂತ ಎಂದರೆ ಆದಿಯೂ ಇಲ್ಲದ್ದು ಎಂತಲೇ ಆಗುತ್ತದೆ. ಆದಿ ಇದ್ದು ಅಂತ್ಯವಿರದೇ ಇರಲು ಸಾಧ್ಯವಿಲ್ಲ. ಹೀಗಾಗಿಯೇ ಬಿಗ್ ಬ್ಯಾಂಗ್ ಸಿದ್ಧಾಂತವೂ ಈಗ ಅತಾರ್ಕಿಕವಾಗಿದೆಯಲ್ಲವೇ 🙂

    • ಶ್ಲೇಷೆಯ ಪ್ರಯತ್ನ, ಮಾತ್ರಾಸೀಸದಲ್ಲಿ… ಆಡಿ ತಾಂಡವಮನೇ ಬಲ್ದೋರಿಯೊಡಲ ಕಾವಂ …

      • It should ALSO state that he has resorted to dance for combating the cold from within.

        • ಆಗುತ್ತದಲ್ಲ, ಒಡಲ ಕಾವಂ ತೋರೆ… ಬಲ್ದೋರೆಯೊಡಲ ಕಾವಂ ಅಂತ ಬದಲಿಸಬಹುದು

  8. ಲೋಕದೊಡನಾಡಿದುದು ದಿಟ-
    ವೈ, ಕಾಸೀವಾಸಿ ಕಾಲಭೈರವ ಭಾವಂ ।
    ಸ್ವೀಕರಿಪಂಗುನ್ನಿಸುದದು-
    ವೈ (ವು+ಐ) ಕಾರಂ ಭವದೊಳೊಳ್ಳಿತಂಗೈಪ ಸಿವಂ ।।

    ಉನ್ನಿಸು = ಭಾವಿಸು

    “ಐ” ಕಾರ ಶಿವನ ವರ್ಣನೆ !! ದತ್ತಪದ ನಿರ್ವಹಣೆಗೆಗಾಗಿ ಈ “ಸಿವ – ಕಾಸಿ”. ದಯವಿಟ್ಟು ಮನ್ನಿಸಿ.

Leave a Reply to ಶಕುಂತಲಾ ಮೊಳೆಯಾರ ಪಾದೆಕಲ್ಲು Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)