May 222016
 

ವಸಂತತಿಲಕ ಛಂದಸ್ಸಿಗೆ ಸರಿಹೊಂದುವ ಈ ಪಾದಾಂತ್ಯವನ್ನು ಬಳಸಿ ಪದ್ಯಪೂರಣ ಮಾಡಿರಿ

“ಮುಳಿಸೇಕೆ ಪೆಣ್ಣೇ”

  30 Responses to “ಪದ್ಯಸಪ್ತಾಹ ೨೦೩: ಪದ್ಯಪೂರಣ”

 1. ಸೂಡಿರ್ಪೊಡಂ ಪೊಳೆವ ರತ್ನಮನಂತು ನಾಗಂ,
  ಮೂಡಿರ್ಪ ನೇಸರನ ವರ್ಣಮನಾಂತ ಸಿಂಹಂ-
  ಕಾಡಲ್ಕೆ ಕೋಪದಿನೆ,ಧಾವಿಸಿ ಪೋಪರಂ, ನೀಂ
  ನೋಡುತ್ತುಮಿರ್ಪೊಡೆ,ವೃಥಾ ಮುಳಿಸೇಕೆ ಪೆಣ್ಣೇ!
  (ರತ್ನವನ್ನು ಹೊಂದಿದ ನಾಗನಿಂದಲೂ ಮೂಡುವ ಸೂರ್ಯನ ಬಣ್ಣದ ಸಿಂಹನಿಂದ ಕೋಪಭೀತರಾಗಿ ದೂರಸರಿವವರನ್ನು ಕಂಡೂ ,ಬರಿದೆ ಸಿಟ್ಟೇಕೆ)

  • ತಾತ್ಪರ್ಯ ಸ್ಪಷ್ಟವಾಗಲಿಲ್ಲ. ಏನು ಸಂದರ್ಭ? ರತ್ನಂಗಳನ್ನೆ ನಾಗಂ ಎಂಬಲ್ಲಿ ಛಂದಸ್ಸು ತಪ್ಪಿದೆ. ಗಳನ್ನೆ ಎಂಬುದು ತಪ್ಪು. ಹೊಸಗನ್ನಡ ಆಗುತ್ತದೆ.

   • ಸುಂದರವಾಗಿರುವ ಹಾವು ಮತ್ತು ಸಿಂಹಗಳು ,ಕೋಪವನ್ನೂ ತೋರುತ್ತಿರಲಾಗಿ(ಕಾಡುತ್ತಿರಲಾಗಿ),ಜನರು ಅದರಿಂದ ದೂರಕ್ಕೇ ಸಾರ್ವರು!ಈ ದೃಶ್ಯವು ನಿನ್ನ ಕಣ್ಣೆದಿರಿದ್ದರೂ ಸಹಿತ ಕೋಪವದೇಕೆ?–ಕೋಪವು ನಿನ್ನಲ್ಲಿ ಮನೆಮಾಡಿದ್ದೇ ಆದಲ್ಲಿ ಯಾರು ತಾನೇ ನಿನ್ನ ಹತ್ತಿರಕ್ಕೆ ಬಂದಾರು!(ನೀನೆಷ್ಟು ಸುಂದರವಾಗಿದ್ದರೂ)

 2. ಚಂದ್ರಾಸ್ಯದೊಳ್ ಸಲುವ ಕರ್ಪಣ ಲೇಪದಂದಂ,
  ಚಂದ್ರಾಂಶುವಂ ಮರೆಸೆ ಹೊಂಚುವ ಮೇಘದಂದಂ,
  ಚಂದ್ರಾಗಮಂ ಬಯಸದಿರ್ಪರಿ ರಾಹುವಂದಂ,
  ಚಂದ್ರಾನನೇ!ಕಿಸುರುವೀ ಮುನಿಸೇಕೆ?ಪೆಣ್ಣೇ!

  • ಚೆನ್ನಾಗಿದೆ 🙂

   • ಧನ್ಯವಾದಗಳು,ಇಲ್ಲಿ ಪುನರುಕ್ತಿ ದೋಷವಿರುವುದಲ್ಲವೇ?

    • ಸ್ವತಂತ್ರವಗಲ್ಲದೇ, ಸಮಾಸದ ಭಾಗವಾಗಿ ಚಂದ್ರ ಬಂದಿರುವುದರಿಂದ ಪುನರುಕ್ತಿ ಆಗಲಾರದು ಅಂದುಕೊಂಡಿದ್ದೇನೆ.

 3. ಸಹಬಾಳ್ವೆಗಂ ಭ್ರಮಿಸುತುಂ ಪರಿತಾಪದಿಂ ನಿ-
  ರ್ವಹಿಸಿಂತು ಸಂಭ್ರಮಿಪೆ ಮೇಣ್ ಸಿಡಿಗೊಳ್ಳುದೆಂತೌ
  ಗೃ(ಗ್ರ)ಹಲಕ್ಷ್ಮಿ ನಿನ್ನಿರುವನೇ ಕಡೆಗಾಣಲೇನೌ
  ಸಹನಾಧರಿತ್ರಿಯಲೆನೀಂ ಮುಳಿಸೇಕೆಪೆಣ್ಣೇ ।।

  ಗೃಹಿಣಿ / ಧರಣಿ ಯನ್ನು ಕುರಿತು – ಹೀಗೊಂದು “ವಸಂತಕಲಿಕಾ” !!

  • ಹೊಸ ಛಂದಸ್ಸು !!! ಸಹಬಾಳ್ವೆ ಅರಿಸಮಾಸ 🙂
   ಇರವು ಸರಿಯಾದ ಪದವಲ್ಲವೇ? ಇರುವು ಸರಿಯೇ?

   • “ಶ್ರೀವೇಂಕಟಾಚಲಪತೇತವಸುಪ್ರಭಾತಂ” – ವಸಂತತಿಲಕ. “ಶ್ರೀ” ~ “ಸಿರಿ”ಯಾದರೆ ವಸಂತಕಲಿಕಾ !!

    ಓ.. ಹೌದು, ಧನ್ಯವಾದಗಳು ನೀಲಕಂಠ,, (ಇರುಳು / ಇರವು ಹಾಗೆ ಕನ್ಫೂಸ್ ಆಗಿದೆ !!) ಪದ್ಯವನ್ನು ತಿದ್ದಿದ್ದೇನೆ,

    ಇಹವಾಸಕಂ ಭ್ರಮಿಸುತುಂ ಪರಿತಾಪದಿಂ ನಿ-
    ರ್ವಹಿಸಿಂತು ಸಂಭ್ರಮಿಪೆ ಮೇಣ್ ಸಿಡಿಗೊಳ್ಳುದೆಂತೌ
    ಗೃ(ಗ್ರ)ಹಲಕ್ಷ್ಮಿ ನಿನ್ನಿರವನೇ ಕಡೆಗಾಣಲೇನೌ
    ಸಹನಾಧರಿತ್ರಿಯಲೆನೀಂ ಮುಳಿಸೇಕೆಪೆಣ್ಣೇ ।।

 4. ಲೀಲಾವಿನೋದ,ಮನಿಶಂ ಸ್ಮಿತಕಾಂತಿ,ಯೀಯಲ್
  ಬಾಲರ್ಕರೊಳ್ ಪೊಳೆವ ಬಲ್ನವುರಾದ ಭಾವಂ,
  ವೇಲಾತಟಂ ಥಳಿಪ ವೀಚಿಯವೋಲೆ,ನಿನ್ನಂ
  ಮಾಲಿನ್ಯಗೈಯೆ ತುಡಿವೀ,ಮುನಿಸೇಕೆ ಪೆಣ್ಣೇ!

 5. ಎಣ್ಣೆಗಾಯನು ಮಾಡಿ ನಾಲ್ಕನದರೊಳಗೆರಡ-
  ನುಣ್ಣುದೆಲೆ ನಿನ್ನ ಪಾಲನು ಮಾತ್ರಮಂ|
  ಸಣ್ಣೊಂದಮುಳಿಸೇಕೆ ಪೆಣ್ಣೇ ನನಗಮಷ್ಟೆ
  ತಣ್ಣಗೆ ಗಿಡುಂಗಿರ್ಪೆ ಮೂರನುಂ ನೀಂ??

  (ಉತ್ತರಾರ್ಧ: ನನಗೆ ಮಾತ್ರ ಸಣ್ಣದೊಂದನುಳಿಸಿ, ನೀನು ಮಾತ್ರ ಮೂರ ಗುಳುಂ ಮಾಡಿದೆಯ?)

  • ಹಹ್ಹಾ, ನಾಲ್ಕನೇ ಬಾರಿ ಓದಿದಾಗ ಅರ್ಥವಾಯಿತು 🙂

   • ಅದಕ್ಕೇ ಆಯಮ್ಮನಿಂದ ನಾನು ನಾಲ್ಕು ಎಣ್ಣೆಗಾಯನ್ನು ಮಾಡಿಸಿದ್ದು 😉 ಇತರರಿಗೆ ಆರು ಬೇಕಾದೀತೆಂಬ ಆತಂಕದಿಂದ ಈಗ ಮೂಲಪದ್ಯಕ್ಕೆ ವಿವರಣೆಯನ್ನು ಸೇರಿಸಿದ್ದೇನೆ!

 6. ಮೇಳಗೊಂಡುದ ಮರೆತು, ಸಕಲ ಸಂವೇಗಗಳ್
  ಪಾಲುಪೆಣ್ಣುಗಳೊಳುಂ ಸಾಜಮಾಗೇ,
  ತಾಳಿಕೊಂಡೆಲ್ಲಮಂ ಪೋಗಲೆಂಬಿಚ್ಛೆಯೋ!
  ಕೇಳುವರಿದನರೆ !”ಮುಳಿಸೇಕೆ ಪೆಣ್ಣೇ?”

 7. ವಾರದಂತ್ಯಕೆ ಮೂರು ಜಾವಂಗಳಿರ್ದೊಡಂ,
  ಸೇರದಾಯ್ತೇನೇಳು ಪದ್ಯಂಗಳಿಲ್ಲಿ?
  ಚಾರುತರಮಾದ ಪದಪಂಕ್ತಿ “ಮುಳಿಸೇಕೆ ಪೆ
  ಣ್ಣೇ”-ರಿಕ್ತಮಾಯ್ತೆ!ಬಿಗುಮಾನದಿಂದೇ!!

 8. ಕಾಂಚನಾ ಅವರ ಪದ್ಯ ನೋಡಿ ಮನಸ್ಸು ಕರಗಿತು. ಇಷ್ಟು ದಿನ ಒಳ್ಳೆಯ ಕಲ್ಪನೆಯ ತೆಕ್ಕೆಗೆ ಬಾರದ ಕವಿತಾವನಿತೆಯ ಬಗ್ಗೆ.. 🙂

  ಛಂದೋವಿಹಾರಸಮಯಂ ಪದಲಾಲಿತಾಪ್ತಂ
  ಸೌಂದರ್ಯಪೂರಲಸದರ್ಥವಿಲಾಸಭಾಸಂ
  ಬಂದೆನ್ನ ಕೂಡೆ ನಲಿಯೇ ಕವಿತಾಲತಾಂಗೀ
  ಎಂದಂದು ಕೂಗಿದರು ಹಾ! ಮುಳಿಸೇಕೆ ಪೆಣ್ಣೇ?!!

  • ಬಿಗುಮಾನಮಂ ತೊರೆದು,ಕವಿತಾರ್ಯೆ ನಿನ್ನನೀ
   ನಗನಳಿಯನೋಲೈಸೆ ಮನದಾಳದಿಂ,
   ಬಗೆಬಗೆಯ ಭಂಗಿಯೊಳ್,ನಟರಾಜಸಂಗದೊಳ್,
   ಸೊಗದಿಂದೆ ನರ್ತಿಸಲ್ಕರರೆ ಮುನಿಸೇಕೆ ಪೆಣ್ಣೇ!

   • ನನ್ನ ಪದ್ಯಕ್ಕೆ ಪ್ರತಿಕ್ರಿಯೆಯೇ? ನಗನಳಿಯ ಅಂದರೆ?

    • ನಗ=ಪರ್ವತ. ಪರ್ವತರಾಜನ ಅಳಿಯ=ಶಿವ
     ತುಂಬ ಬಿಗುಮಾನದಿಂದಿರುವ ಅಳಿಯ (ನಗನು ಅಳಿಯ) ಎಂದೂ ಅರ್ಥೈಸಬಹುದು 😉

 9. ಸರಿದು ಕೆಳಕದುವೆಂತೊ ಬಿರಿದು ಮಡಕೆಯದಂತು
  ಬರಿದಾಗೆ ನೆಲವಿನೊಳ್ಗಿರಿಸಿರ್ದ ಬೆಣ್ಣೇ ।
  ಹರಿಲೀಲೆಯಿದಕಿಂತು ಹರಶಿಕ್ಷೆಯದುವೆಂತು
  ತೆರೆಯೆತೆರೆ, ಬರಿದೆ ಹುಸಿಮುಳಿಸೇಕೆ ಪೆಣ್ಣೇ ?!

  (ಬಿಡುಬಿಡೆ, ಬೆಣ್ಣೆಕಳ್ಳ ಕೃಷ್ಣನ ಮೇಲಿನ ಹುಸಿಮುನಿಸ – ಯಶೋದೆ !! )

  • ಚೆನ್ನಾದ ಕಲ್ಪನೆ. ಒಳ್ಗೆ ಪದ ಸಾಧುವಲ್ಲ. ಒಳಂ, ಒಳಗಂ, ಒಳ್ ಇತ್ಯಾದಿ ಬಳಸಬಹುದು.

  • ಚೆನ್ನಾಗಿದೆ ಕಲ್ಪನೆ.
   ಬೆಣ್ಣೇ ~ ಬೆಣ್ಣೆ. ಪೆಣ್ಣೇ ~ ಪೆಣ್ಣೆ. ಹೇಗೂ ಅರ್ಧಾಂತ್ಯದ ಅಕ್ಷರಗಳು ಗುರುವೇ ಅಲ್ಲವೆ?
   ಕೊನೆಯ ಪಾದದಲ್ಲಿ ಎರಡು ಮಾತ್ರೆ ಹೆಚ್ಚು ಇದೆ. ತೆರೆಯೆ ಹುಸಿಮುಳಿಸೇಕೆ ಬರಿದೆ ಪೆಣ್ಣೆ ಎಂದು ಸವರಬಹುದು.

  • ಧನ್ಯವಾದಗಳು ಪ್ರಸಾದ್ ಸರ್,ನೀಲಕಂಠ
   ತಿದ್ದಿದ ಪದ್ಯ :

   ಸರಿದು ಕೆಳಕದುವೆಂತೊ ಬಿರಿದು ಮಡಕೆಯದಂತು
   ಬರಿದಾಗೆ ನೆಲವಿನೊಳಗಿರ್ಪ ಬೆಣ್ಣೆ ।
   ಹರಿಲೀಲೆಯಿದಕಿಂತು ಹರಶಿಕ್ಷೆಯದುತರವೆ
   ತೆರೆ, ಬರಿದೆ ಹುಸಿಯಮುಳಿಸೇಕೆ ಪೆಣ್ಣೇ ।।

   ಪ್ರಸಾದ್ ಸರ್, “ತೆರೆಯೆ ಹುಸಿಮುಳಿಸೇಕೆ ಬರಿದೆ ಪೆಣ್ಣೆ” ಎಂದರೆ – ಪಾದಾಂತ್ಯ ತಪ್ಪುವುದಲ್ಲವೇ ?!

 10. ವಾರಾಶಿಯಂ ತೊರೆದ ನೀರ್,ಮರಳಭ್ಧಿಗಪ್ಪೊಲ್,
  ಬೇರೋರ್ವರಂ ಮುಗಿಸೆ ಹಾ!ಪೊರವೊಂಟೊಡೇಂತಾಂ
  ನಾರಾಚದೋಲೆ ಬರುತುಂ ತಿರಿಯಲ್ಕೆ ನಿನ್ನಂ!
  ಭಾರೀ ಭಯಂಕರದ ಪಾಳ್ ಮುನಿಸೇಕೆ ಪೆಣ್ಣೇ!!

  • ಭಾರೀ ಭಯಂಕರ 🙂 ಸರಿ ಅಲ್ಲ ಅನ್ನಿಸುತ್ತದೆ. ಅರಿಸಮಾಸವಾಗುತ್ತದೆ. ಭಾರೀ ಕನ್ನಡವೇ, ಹಿಂದಿಯೇ, ಮರಾಠಿಯೇ?

 11. ತೋರಾನನಂವಡೆದು,ಮೌನಕೆ ಸೋಲ್ತಿರಲ್ಕಾ
  ಬೇರಾವ ಕೈದುವಿರದಿರ್ಪೆಳೆ ಜಾಯೆ!ಸಾಕ್ಷಾತ್
  ಶ್ರೀರಾಮನೋ!ಮಹಿಯ ಮಾಧವನೋ!ಸ್ವಯಂತಾಂ
  ಸಾರುತ್ತೆ ಕೇಳನೆ,”ನಿಜಂ ಮುಳಿಸೇಕೆ ಪೆಣ್ಣೇ?”
  (ತೋರಾನನ=ಅರಿಸಮಾಸವಾಗಿರಬಹುದು)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)