May 292016
 

ಮಜ್ಜಿಗೆ ಮತ್ತಾದುದಲ್ತೆ ಪಾಲೇ ಬಗೆಯಲ್

  27 Responses to “ಪದ್ಯಸಪ್ತಾಹ ೨೦೪: ಸಮಸ್ಯಾಪೂರಣ”

 1. ಉಜ್ಜುಗಮಿರದೆ,ಬಡತನಂ
  ಸಜ್ಜಾಗಿ ಬರಲೊಣ ರೊಟ್ಟಿ,ಗಡ್ಡೆ ಗೆಣಸುಗಳ್
  ಸಜ್ಜಿಗೆಯಾಗಲ್,ತಿಳಿನೀರ್
  ಮಜ್ಜಿಗೆ ಮತ್ತಾದುದಲ್ತೆ ಪಾಲೇ!ಬಗೆಯಲ್

  • ಚೆನ್ನಾಗಿದೆ ಕಾಂಚನಾ. “ಮತ್ತಾದುದಲ್ತೇ” ಎಂಬಲ್ಲಿ ಟಂಕನದೋಷವಾಗಿದೆ.

 2. ಹೆಜ್ಜೆಯಿಡೆ ಪಾಲಲರ್ಜಿ,ಹ!
  ವಜ್ಜೆಯನಾ ಪೋಷಕಾಂಶವೀವುದನರಿತುಂ
  ಸಜ್ಜಾಗಿರ್ದ ಕಡೆದ,ಕೊಡ
  ಮಜ್ಜಿಗೆ ಮತ್ತಾದುದಲ್ತೇ ಪಾಲೇ,ಬಗೆಯಲ್!!
  (ಹಾಲಿನಲರ್ಜಿ ಯಿರುವವರಿಗೆ, ಸಮನಾದ ಪೋಷಕಾಂಶವನ್ನು ತಳೆದ ಮಜ್ಜಿಗೆಯೇ,ಹಾಲಾಯ್ತು)

 3. ಸಜ್ಜಾಗಿ ಪಾಲ್ಗೆ ಮೊಸರ
  ನ್ನಜ್ಜಿಯು ವೆರೆಸಿಟ್ಟಳೇಕೊ ಫ್ರಿಡ್ಜಿನೊಳಮಮಾ
  ಬಿಜ್ಜೆಯದಿಲ್ಲವೆ ಇವಳ್ಗಂ
  ಮಜ್ಜಿಗೆ ಮತ್ತಾದುದಲ್ತೆ ಪಾಲೇ ಬಗೆಯಲ್

 4. ಹೆಜ್ಜೆಯ ಮೆಲ್ಲಗಿಡುತ್ತುಂ
  ಬೊಜ್ಜಿನ ಬಾಲಂ ಕುಚೇಷ್ಟೆಯಂ ಗೈಯಲ್ಕೀ
  ಕಜ್ಜದೆ ಪಾತ್ರೆ ಬದಲಿಸಲ್
  ಮಜ್ಜಿಗೆ ಮತ್ತಾದುದಲ್ತೆ ಪಾಲೇ ಬಗೆಯಲ್

  ಉಜ್ಜುತೆ ಕೈಗಳ ಝಳುಪಿಂ
  ದಿಜ್ಜಿಲ ಪೊಗೆಯನ್ನೆ ಸೃಜಿಸೆ ಮಾಯಾವಿಯು ತಾಂ
  ಸಜ್ಜಾಗೆ ನೀರ್ಚುಮುಕಿಸಲ್
  ಮಜ್ಜಿಗೆ ಮತ್ತಾದುದಲ್ತೆ ಪಾಲೇ ಬಗೆಯಲ್

 5. ಸಜ್ಜಿತ ಕೊಟ್ಟಿಗೆಯೊಳ್,ಪೊಸ
  ಗೆಜ್ಜೆಯ ನಾದದೊಡೆ ಗೋವು ಬಂದಿರೆ,ಮತ್ತೇಂ!
  ಕಜ್ಜಾಯಂಗಳೊಡತಿ,ತಿ
  ಮ್ಮಜ್ಜಿಗೆ ಮತ್ತಾದುದಲ್ತೆ ಪಾಲೇ ಬಗೆಯಲ್!
  (ಕಜ್ಜಾಯ=ಹಾಲಿನ ಕಜ್ಜಾಯ)

 6. ಬೊಜ್ಜಂ ಕರಂಗಿಸೆ ನರಂ,
  ಕಜ್ಜಾಯಂ ಜಿಡ್ಡನೊಂದಿರಲ್,ತ್ಯಜಿಸಿ,ಸದಾ |
  ಗೊಜ್ಜನುಣೆ ಪಥ್ಯದೂಟದೆ,
  ಮಜ್ಜಿಗೆ ಮತ್ತಾದುದಲ್ತೆ ಪಾಲೇ,ಬಗೆಯಲ್ ||

 7. ಮಜ್ಜನಮಾಗಿರ್ಪೊಡನುಂ
  ಲಜ್ಜಾಸ್ಪದ ಕರ್ಮದೊಳ್,ತೊಡೆದದಂ ಗೈಯಲ್
  ಸಜ್ಜನನೊಲ್ ಜನಹಿತಮಂ,
  “ಮಜ್ಜಿಗೆ ಮತ್ತಾದುದಲ್ತೆ ಪಾಲೇ ಬಗೆಯಲ್!”

  (ನಾಚಿಕೆಯಾಗುವಂತಹ ಕೆಲಸವನ್ನು ಮಾಡುತ್ತ ದುಷ್ಟನಾಗಿದ್ದವನು ,ಅದನ್ನು ತೊರೆದು ಮತ್ತೆ ಮೊದಲಿನಂತಾಗಲ್…)

  • To resurrect onself, one need not retreat. One has just to take the virtuous path forward.
   ಪಾಲಾಗದೆಲಾಗಿರೆ ನವನೀತಂ
   ಕಾಲಾಂತರದೊಳ್ ಮಜ್ಜಿಗೆ ತಾಂ|
   ಮೇಲೇರುತಲೊಲೆಯಂ ಘೃತವಾಗುತೆ
   ಲೀಲಾಮಯಗಾರತಿಯಾಯ್ತೌ||

 8. In a movie (ನಾಟ್ಯ) called ಗಜ್ಜುಗ, when the camera is scrolled back in proof of the finer details of an incident, an old woman becomes young, and the fermented buttermilk becomes milk again!
  ’ಗಜ್ಜುಗ’ನಾಟ್ಯದೆ ನಡೆಯಲ್
  ಹೆಜ್ಜೆಯ ಹಿಂದಿರಿಸಿ ಕ್ಯಾಮರ ಪುರಾವೆಗದೋ|
  ಅಜ್ಜಿಯು ಯೌವನವೊಂದುತೆ
  ಮಜ್ಜಿಗೆ ಮತ್ತಾದುದಲ್ತೆ ಪಾಲೇ ಬಗೆಯಲ್||

 9. ಕಜ್ಜಿಯ ನೋವಿರೆ ವೃಧ್ದಂ
  ಸಜ್ಜೆಯ ಕೋಣೆಯೊಳೆ ವಿಶ್ರಮಿಸೆ, ಚೇತರಿಸಲ್|
  ಲಜ್ಜೆಯಿರದೆ ಕುಣಿದೆಂದಂ,
  “ಮಜ್ಜಿಗೆ ಮತ್ತಾದುದಲ್ತೆ ಪಾಲೇ,ಬಗೆಯಲ್ ” ||

 10. “ಸಜ್ಜೆಮನೆ ತಲ್ಪವದು ಮೃದು,
  ಸಜ್ಜಿತವಿರ್ಪುದು ಸುಗಂಧಮಯ ಪೂದಳದಿಂ!”
  ಲಜ್ಜೆಯದಾಲಿಸಲು ಮೊಳೆಯೆ
  ಮಜ್ಜಿಗೆ ಮತ್ತಾದುದಲ್ತೆ ಪಾಲೇ, ಬಗೆಯಲ್!

  ಶೋಭನಶಾಸ್ತ್ರಕ್ಕೆ ಶಯನಕೋಣೆಯ ಮೆದು ಹಾಸಿಗೆ ಸುವಾಸನೆಭರಿತ ಹೂಗಳಿಂದ ಸಿಂಗಾರಗೊಂಡಿದೆ ಎಂಬ ನುಡಿ ಕಿವಿಗೆ ಬಿದ್ದೊಡನೆ, ಲಜ್ಜೆಯಿಂದ ಆವರಿಸಲ್ಪಟ್ಟ ಅವಳು ಮಜ್ಜಿಗೆಯ ಲೋಟವನ್ನು ಹಾಲಿನ ಲೋಟವೆಂದುಕೊಂಡು ತೆಗೆದುಕೊಂಡು ಹೋದಳು.

  • ಲೋಟ, ಅದಲುಬದಲು, ತೆಗೆದುಕೊಂಡುಹೋಗುವುದು – ಇವೆಲ್ಲ ಪದ್ಯದಲ್ಲಿ ಬಂದಿಲ್ಲ. ಬದಲಿಗೆ, ಅವನ ಸ್ಥಿತಿಯಲ್ಲಿ ಮಜ್ಜಿಗೆಯೇನು, ಹಾಲೇನು, ನೀರೇನು, ಗಾಳಿಯೇನು… ಎಲ್ಲವೂ ಮತ್ತುಬರಿಸುವಂಥವೇ ಎಂದು ಸವರಿಸಿ 😉

 11. ಪಜ್ಜೆಯ ಶಕ್ತಿಯುಡುಗಿರ –
  ಲ್ಕಜ್ಜನ ಮನಮಲರಿನೋಲೆ ಮೃದುಗೊಳ್ಳುತಲುಂ
  ಸಜ್ಜಾಗಿರೆ ಕಂದರವೋಲ್
  ಮಜ್ಜಿಗೆ ಮತ್ತಾದುದಲ್ತೆ ಪಾಲೇ ಬಗೆಯಲ್

  [ವಯಸ್ಸಾದ ಮೇಲೆ ಮಗುವಿನ ಮನಸ್ಸಿನಂತೆ ಮೃದುವಾದ ಅಜ್ಜನ ಮನಸ್ಸು, ಮಜ್ಜಿಗೆ ಹಾಲಾದ ಹಾಗಾಯಿತು]

 12. ಗೊಜ್ಜಂ ಮೆಲ್ಲುವ ಗೋವುಂ
  ಸಜ್ಜಿಗೆ ತಿಂದಾದ ಮೇಲೆ ಮೊಸರಂ ಕುಡಿಗುಂ
  ಸಜ್ಜಾಗುತೆ ಪಾಲ್ಗರೆಯಲ್
  ಮಜ್ಜಿಗೆ ಮತ್ತಾದುದಲ್ತೆ ಪಾಲೇ ಬಗೆಯಲ್
  [ಮೊಸರು ಕುಡಿದು ಹಾಲು ಕೊಡುವ ಹಸುವಿನ ಪರಿಯು]

 13. ಹೆಜ್ಜೆಯಿಡದಿರಲ್,ದಿಟ್ಟಣ,
  ಮಜ್ಜಿಗೆ!ಮತ್ತಾದುದಲ್ತೆ ಪಾಲೇ ಬಗೆಯಲ್
  ಮಜ್ಜನದಾಯುಕ್ತ,ವರರೆ!,ಸಿದ್ಧುವಿನಿಂ
  ನುಜ್ಜಾಗುತುಮೇಸಿಬೀಯ ನವವೇಷದೆ ಮೇಣ್!!

  (ಉಪಲೋಕಾಯುಕ್ತ ಮಜ್ಜಿಗೆಯವರ ನೇಮಕದ ನಂತರ…(ಮಧ್ಯಾಂತರದಲ್ಲಿಯ ವಿಧ್ಯಮಾನವನ್ನು ಗಣಿಸದೇ),ಹೆಚ್ಚಿನ ಕೆಲಸ ಮಾಡದ ಲೋಕಾಯುಕ್ತವು(ಅದರ ಕೆಲಸವು) ಸಿದ್ದುವಿನ ಕೈಯಲ್ಲಿ ವಿಭಾಗ(ಪಾಲು) ಆಯ್ತ್ತೇ?)

 14. ಬೊಜ್ಜಿನ ದೇಹದ ಹಳೆ ತುರಿ-
  ಕಜ್ಜಿಯ ಲೇಪನಕೆ, ಪಾಲೊಳರೆಯುವ ಬೇರಂ I
  ಮಜ್ಜಿಗೆಯೊಳರೆದಿರಲ್ ನ-
  ಮ್ಮಜ್ಜಿಗೆ ಮತ್ತಾದುದಲ್ತೆ, ಪಾಲೇ ಬಗೆಯಲ್ II

  ಅಜ್ಜಿಗೆ ಕಾಣಿಸುವುದು ಕಡಿಮೆಯಾಗಿ , (ಶೀತದಿಂದ) ಘ್ರಾ ಣೇ ೦ದ್ರಿಯ ಶಕ್ತಿಯು ಕುಂದಿ , ಮರೆವು ಜಾಸ್ತಿಯಾಗಿ , ತುರಿಕಜ್ಜಿಗೆ ಹಾಲಿನಲ್ಲಿ ಅರೆಯ ಬೇಕಾದ ಮೂಲಿಕೆಯನ್ನು ಹಾಲೆ೦ದುಕೊಂಡು ಮತ್ತೆ ಮತ್ತೆ ಮಜ್ಜಿಗೆಯಲ್ಲಿ ಅರೆದರು ಎಂಬುದು ಈ ಪದ್ಯದ ಆಶಯ

 15. ಸಜ್ಜನೆ ಮೇಣ್ ವೈಧವ್ಯದೆ
  ಬಿಜ್ಜಣಗೊಂಡಿರ್ಪಳಂ ಗಡಾ ದಾಯಾದ್ಯರ್
  ಬೆಜ್ಜರಿಸಿಂ ಪೀಡಿಸಲೆ-
  ಮ್ಮಜ್ಜಿಗೆ, ಮತ್ತಾದುದಲ್ತೆ ಪಾಲೇ ಬಗೆಯಲ್ ।।

  ಬಿಜ್ಜಣ = ವ್ಯಸನ, ಬೆಜ್ಜರ = ಬೆದರಿಕೆ

  ದಾಯಾದಿಗಳ ಕಾಟದಿಂದ ಮತ್ತೆಮತ್ತೆ “ಪಾಲಾ”ಯ್ತು – ಅಜ್ಜಿಯ ಆಸ್ತಿ

 16. ಹೆಜ್ಜೆಯನಿಡುತುಂ ಮೆಲ್ಲನೆ
  ಸಜ್ಜೆಯ ಬೆಣ್ಣೆಯನೆ ಮೆಲ್ಲಲುಷೆಯೊಳ್,ಕಿಟ್ಟಂ!
  ಸಜ್ಜಿತ ಬೆಣ್ಣೆಗೆ ಮೆತ್ತಿದ
  ಮಜ್ಜಿಗೆ,ಮತ್ತಾದುದಲ್ತೆ ಪಾಲೇ ಬಗೆಯಲ್!!

  (ಲೋಕರೂಢಿಯಂತೇ ಬೆಳಿಗ್ಗೆ ಹಾಲುಸೇವನೆಯ ಬದಲು,ಬೆಣ್ಣೆಯನ್ನು ಕದಿಯ ಹೊರಟ ಬಾಲಕನಿಗೆ,ಬೆಣ್ಣೆ ಮುದ್ದೆಗಂಟಿದ ಮಜ್ಜಿಗೆಯೇ ಹಾಲಾಯ್ತೇ!)

 17. ಲಜ್ಜೆಗೊಳುವೀ ಕುಡಿತಕೆ ಜ-
  ಗಜ್ಜಾಹೀರು ನುಡಿಗಟ್ಟಿದು ಗಡಾ, “ಪೀರಲ್
  ಸಜ್ಜನರೀಂಚಲ ಮರದಡಿ
  ಮಜ್ಜಿಗೆ, ಮತ್ತಾದುದಲ್ತೆ, ಪಾಲೇ ಬಗೆಯಲ್” !!

  ಬೆಳ್ಳನೆಯ ಹಾಲ(=ಆಲ್ಕೋಹಾಲ್) ಬಗೆಯ ಮಜ್ಜಿಗೆ ಕುಡಿದು “ಮತ್ತು” ಬಂದುದೇ ?!!

  ಈಚಲ ಮರದ ಕೆಳಗೆ ಮಜ್ಜಿಗೆ ಕುಡಿದರೂ ಹೆಂಡ ಕುಡಿದಂತೆ !!

 18. “ಸಜ್ಜೆ ಬೆಳ್ಕಣಕ್ಕೆ ನನ್ ಪಾಲಿಗೆ ಎಳ್ಡೆಕರೆ ವಲ ಬಂತು ಸಧ್ಯ” ಎಂದು ಅಜ್ಜಿಯು ಅಂದುಕೊಳ್ಳುವಷ್ಟರಲ್ಲಿ, ಒಬ್ಬಾನೊಬ್ಬ ವಾರಸುದಾರನು ಉದ್ಭವಿಸಿ, ಅಜ್ಜಿಗೆ ಮತ್ತೆ ಅದರಲ್ಲೂ ಪಾಲಾಗುವಂತಾಯಿತು 🙁
  “ಸಜ್ಜೆಯ ಕೃಷಿಯಿಂದಾಯ್ತಿಂ-
  ದುಜ್ಜೀವನವೆನಗೆ ದಕ್ಕಿರುವೆರಡೆಕರೆಯೊಳ್|”
  ಸಜ್ಜನನೈದಿರೆ ಭಾಗಕ-
  ಮಜ್ಜಿಗೆ ಮತ್ತಾದುದಲ್ತೆ ಪಾಲೇ ಬಗೆಯಲ್!!

 19. Punchಆಮೃತ!
  ಮಜ್ಜನದಭಿಷೇಕಕಿದೋ
  ಸಜ್ಜಿರ್ಪುದು ಗುಡವು, ಜೇನುತುಪ್ಪವು, ತುಪ್ಪಂ
  ಗಜ್ಜುಗದಷ್ಟೇ, ಅರೆಪಾವ್
  (ಗಟ್ಟಿ)ಮಜ್ಜಿಗೆ(ಅರ್ಥಾತ್ ಮೊಸರು), ಮತ್ತಾದುದಲ್ತೆ ಪಾಲೇ ಬಗೆಯಲ್||

 20. ವಿನೋದವಾಗಿ !!

  ಬಜ್ಜರದಾ ಬೆಂಡೋಲೆಯ
  ದಜ್ಜನುಡುಗೊರೆಯು ದಪ್ಪನೆಯ ಕಾವದಕಂ ।
  ಬೆಜ್ಜ ಕಿರಿದಿರೆ ತೊಡಲದನೆ-
  ಮ್ಮಜ್ಜಿಗೆ ಮತ್ತಾದುದಲ್ತೆ ಪಾಲೇ ಬಗೆಯಲ್ !!

  ಬಜ್ಜರ = ವಜ್ರ, ಬೆಜ್ಜ = ರಂದ್ರ, ಕಾವು = ಓಲೆಯ ಕೊಳವೆ

  ಅಜ್ಜ ಕೊಡಿಸಿದ(ದಪ್ಪ ಕಾವಿನ) ವಜ್ರದೋಲೆ ಧರಿಸಲು ಸಾಧ್ಯವಾಗದೆ(ಕಿವಿಯ ತೂತು ಚಿಕ್ಕದಿರಲು) – ಅಜ್ಜಿ ಕಿವಿ “ಹಾಲೆ”ಯನ್ನು ಮತ್ತೆ ಚುಚ್ಚ(=ಬಗೆ)ಬೇಕಾಯಿತೇ ?!!

  • ಪಾಲೇ ಹಾಗೂ ಬಗೆಯಲ್ – ಈ ಎರಡುಪದಗಳನ್ನೂ ವಿಶಿಷ್ಟಾರ್ಥಗಳಲ್ಲಿ ಬಳಸಿದ್ದೀರಿ. ಪ್ರಸಂಗ, ಪದ್ಯ ಎಲ್ಲ ಚೆನ್ನಾಗಿದೆ.

  • ಉಷಾ ಮೇಡಂ, ಎರಡನೆಯ ಸಾಲನ್ನು ಸ್ವಲ್ಪ ಸವರಿಸಬೇಕಿದೆ

  • ಧನ್ಯವಾದಗಳು ಪ್ರಸಾದ್ ಸರ್, ಚೇದಿ (ತಿದ್ದಿದ ಪದ್ಯ)

   ಬಜ್ಜರದಾ ಬೆಂಡೋಲೆಯ
   ದಜ್ಜನುಡುಗರೆ ಬಲು ದಪ್ಪನೆಯ ಕಾವದಕಂ ।
   ಬೆಜ್ಜ ಕಿರಿದಿರೆ ತೊಡಲದನೆ-
   ಮ್ಮಜ್ಜಿಗೆ ಮತ್ತಾದುದಲ್ತೆ ಪಾಲೇ ಬಗೆಯಲ್ !!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)