Jun 132016
 

ಬೇಸಿಗೆ ರಜೆಯ ನಂತರ ಶಾಲೆಯ ಮೊದಲದಿನಕ್ಕಾಗಿ ಹೊರಡುತ್ತಿರುವ ಮಕ್ಕಳ ಪಾಡನ್ನು ವರ್ಣಿಸಿ ಪದ್ಯ ರಚಿಸಿರಿ

  35 Responses to “ಪದ್ಯಸಪ್ತಾಹ ೨೦೬: ವರ್ಣನೆ”

  1. ಇದು ಸುಲಭ ಸಾಧ್ಯವಾದ ವರ್ಣನೆ … ಕರಾವಳಿ , ಒಳನಾಡಿನ ಶಾಲೆಗಳಿಗೆ ಹೋಗುವ ಮಕ್ಕಳ ಕಲ್ಪನೆಯಲ್ಲಿ

    ಬಣ್ಣನೆಗಸದಳ
    ಚಿಣ್ಣರ ಸಂಭ್ರಮ
    ಮಣ್ಣಿಗೆ ಹೊಸತನ ಮಳೆಯವೊಲು I
    ತಣ್ಣನೆ ಹನಿಗದು ,
    ಬಣ್ಣದ ಕೊಡೆಗಳು
    ಕಣ್ಣಿಗೆ ತೀಡಿದ ಕಾಡಿಗೆಯೋ ? II

    ಮಣ್ಣು ಮಳೆ ಬಂದು ಹೊಸತನದಿಂದ ಸಂಭ್ರಮಿಸುವಂತೆ ಚಿಣ್ಣರ ಸಂಭ್ರಮ . ಕಣ್ಣಿಗೆ ತೀಡಿದ ಕಾಡಿಗೆಯಂತೆ ಬಣ್ಣದ ಕೊಡೆಗಳು ಆ ವಾತಾವರಣಕ್ಕೆ ಹೊಳಪನ್ನು ಕೊಡುತ್ತವೆ ಎಂಬ ಅರ್ಥದಲ್ಲಿ

  2. ಝಳಕೆ ಬಾಗದ ಬರಿಯ ಮಂಡೆಯೊ
    ಳಳಿದ ಭಯಭೀತಿಗಳ ಮನಸಿನ
    ಜಳಕ-ಗಿಳಕದ ತಂಟೆ ತಾಗದಲಾಟವಾಡಿದೆವು
    ಬೆಳಕು ಹರಿದರೆ ನಡುಗುವುದು ಮೈ
    ಕೊಳಕು ಮೋರೆಯ ಶಾಸ್ತ್ರಿ ಮೇಷ್ಟ್ರಿಗ-
    ಳುಳಿಯಗೊಡಲಾರರಲೆ ನಮ್ಮಯ ಲೀಲೆಗಳನಿನ್ನು

    ಯಾರೋ ಒಬ್ಬ ಶಾಸ್ತ್ರಿ ಮಾಸ್ತರರನ್ನು ಉಲ್ಲೇಖಿಸಿದ್ದು. ಪಾನಿಗಳಲ್ಲಿ ಯಾರಾದರೂ ಶಾಸ್ತ್ರಿಗಳಿದ್ದರೆ ಕ್ಷಮಿಸುವುದು 🙂

  3. ಪರಡಿಸಿ ರೆಂಕೆಯಂ ಬಡಿಯಲಾರದ ವೇಸರದಿಂದೆ ಬಾಡುತುಂ,
    ಪರಿಪರಿ ಪಣ್ಗಳಂ ಸವಿವ ಮೋದಕೆ ,ಚುಂಚನೆ ಚಾಚಿಕಾಯುತುಂ,
    ಪರಿಯುವ ನೀರಿನೊಳ್ಮುಗುತಲೇಳುವ ಕಾಲಮನೀಕ್ಷೆ ಮಾಡುತುಂ,
    ಸರಳಿನ ಗೂಡಿನೊಳ್ ಕುಳಿತ ,ಬಂಧಿತ ಪಕ್ಷಿಗಳೋಲೆ ಕಾಂಬರೇಂ!
    (ಮೊದಲ ದಿನ..)

    • Good idea.
      ನೀರಿನೊಳ್ಮುಗುತ – muLuguta?
      What is ಕಾಲಮನೀಕ್ಷೆ ಮಾಡುತುಂ?
      ಬಂಧಿತ ಪಕ್ಕಿ – ari-samaasa (bandhita pakShigaLante kaambarem)

      • ಅರಿಸಮಾಸವನ್ನು ತಿದ್ದಿದ್ದೇನೆ,ಕಾಲಮನೀಕ್ಷೆ ಮಾಡುತುಂ-waiting for that good time!

        • eekShe maadutum – doubtful about its popularity in usage. We can very well change it to kaalamaneekShisuttumE

  4. ಶಾಲೆಗೆ ಪೋಗುವ ಸಂತಸಮಾಗಿರೆ
    ಪಾಲಿಸುತೋದುವ ಕಂದರಿಗೆ!
    ಚೀಲವನಂದೇ ಹುಡುಕುವ ಕಷ್ಟವು
    ಗೋಲಿಯನಾಡುವ ಚಿಣ್ಣರಿಗೆ!!

  5. ಅಮ್ಮ ನನ್ನಚೀಲವೆಲ್ಲಿ ?
    ತಮ್ಮ ಮರೆಯೊಳಿಟ್ಟನೇನು ?
    ಗುಮ್ಮನಂತೆ ಕಾಟ ಕೊಡುವೆಯೇಕೆ ನನ್ನ ತಮ್ಮನೇ? I
    ಅಮ್ಮ ನನ್ನದಂಗಿಯನ್ನು
    ಪಮ್ಮಿಯೆಳೆದು ತನ್ನದೆನಲು
    ಸುಮ್ಮನಿರುವೆನೇನು ನಾನು? ಚೀಲ ಕಾಣೆ ಮಾಡಿದೆ II

    ಶಾಲೆಗೆ ಹೊರಡುವ ಮೊದಲು ಅಕ್ಕ ಮತ್ತುತಮ್ಮ ( ಪುಟ್ಟ ಮಕ್ಕಳು ) ತಾಯಿಗೆ ತಮ್ಮ ದೂರುಗಳನ್ನು ಸಲ್ಲಿಸುವುದು — ಸಂಭಾಷಣೆಯ ರೂಪದಲ್ಲಿ

    • ಆಹಾ! ಸಹಜ ಸುಂದರವಾಗಿದೆ.

    • ತುಂಬಾ ಸುಂದರವಾಗಿದೆ ಕಲ್ಪನೆ !

      • snarayana ಅವರಿಗೆ ಧನ್ಯವಾದಗಳು . ಪದ್ಯಪಾನದಲ್ಲಿ ಹೊಸಬರೊಬ್ಬರಿಂದ ದೊರೆತ ಅಭಿಪ್ರಾಯದಿಂದ, ಕಿಂಚಿತ್ ಕಲಿಯಲು ಸಾಧ್ಯವಾದ ಪದ್ಯ-ವಿದ್ಯೆ ಸಾರ್ಥಕವಾದ೦ತೆ ಅನಿಸುತ್ತದೆ

  6. ರಜೆಯ ಮೋಜಲಿ ನಲಿದ ಮಕ್ಕಳು
    ವಜೆಯ ಚೀಲದ ಹೊರೆಯುಮಿಲ್ಲದೆ
    ಸೃಜನ ಮನದೊಳ್ ನಗೆಯ ಮೊಗದೊಳ್ ಶಾಲೆಯೆಡೆ ನಡೆದರ್ |
    ರಜತವರ್ಣದ ರದನಕಾಂತಿಯ
    ನಿಜವ ಪೇಳುವ ಮುಗ್ಧಭಾವದಿ
    ಸುಜನಮನವನು ಮುದದಿ ತಣಿಸಿದ ಮಿನುಗುತಾರೆಗಳು ||

  7. ರಜೆಯಲಿಡಿಯೆ ಮನಸು ತಣಿಸಿ
    ಮಜದ ಬುತ್ತಿ ನೆನಪ ಚೀಲ
    ಭುಜದಿ ಹೇರಿ ಹೊರಟ ನಡಿಗೆ ಕಲಿವ ಶಾಲೆಗೇ
    ಮಜಲಿನಲ್ಲಿ ಹಾದಿಮೌನ
    ಗಿಜಿಗಿಡುತ್ತ ಭೇದಿಸಿಹರೆ?
    ಸುಜನರಾಗೆ ಭವದಲರಳಿ ಬಿರಿವ ಸುಮಗಳು ||

    ರಜಾಕಾಲದಲ್ಲಿ ಆಡಿಕುಣಿದ ಮಕ್ಕಳು( ನಾಳೆ ಬಿರಿವ ಸುಮಗಳು) ಆ ನೆನಪನ್ನು ಹೊತ್ತು ಶಾಲೆಗೆ ಹೋಗುತ್ತ ಮಾತನಾಡಲು , ಆ ದಾರಿಯಲ್ಲಿ ಅಷ್ಟುದಿನ ಇದ್ದ ಮೌನ ಭೇದಿಸಿತೆ?

    • Nice one!! ಹಾದಿಮೌನ is ari-samaasa, you can use “pathada mauna”. jagadalaraLi will be more suitable than bhavadalaraLi as bhava will also bear more philosophical meaning 🙂

      • ಧನ್ಯವಾದ. 🙂
        ರಜೆಯಲಿಡಿಯೆ ಮನಸು ತಣಿಸಿ
        ಮಜದ ಬುತ್ತಿ ನೆನಪ ಚೀಲ
        ಭುಜದಿ ಹೇರಿ ಹೊರಟ ನಡಿಗೆ ಕಲಿವ ಶಾಲೆಗೇ
        ಮಜಲಿನಲ್ಲಿ ಪಥದ ಮೌನ
        ಗಿಜಿಗಿಡುತ್ತ ಭೇದಿಸಿಹರೆ?
        ಸುಜನರಾಗಿ ಜಗದಲರಳಿ ಬಿರಿವ ಸುಮಗಳು ||

  8. ಚಿತ್ತದೆ ತುಂಬುವುದೇಂ,ಬಲ್
    ಗತ್ತನೆ ತೋರ್ದು,ಛಡಿಯೇಟನಿತ್ತವರಾಸ್ಯಂ,
    ಹೊತ್ತಿಗೆಯೊಳೊತ್ತಿದಕ್ಕರ
    ಚಿತ್ತಾರದೊಡನರೆ!ತುಂಟರನೆ ನಡುಗಿಸುತುಂ!!

  9. ಹಾರಾಡಿ ನಲಿದಳು ಚಿಟ್ಟೆಯ ತೆರದಲಿ
    ಜೋರುಸಿರಂ ಪಿಡಿದಂತಾಯ್ತು
    ಊರನು ತಿರುಗುತ ರಜೆಯುಂ ಕಳೆಯಲು
    ಘೋರ ಜ್ವರಬಂದಂತಾಯ್ತು

  10. ಮುತ್ತಿರ್ಪ ಮುಗಿಲ ಘನಕಂ ಬಾಲರ ಮನಂ ನಿ-
    ಮಿತ್ತವುಂ ಗಡ ಮೊದಲದಿನಮದಂದು ।
    ಒತ್ತಿಬಂದಿರ್ಪ ಕಂಬನಿ ಬೆರೆಯೆ ಮಳೆಹನಿಯು
    ಹೊತ್ತಗೆಯ ಹೊತ್ತು ಹೊರಡುವ ಹೊತ್ತಿನೊಳ್ ।।

    ಸಾಮಾನ್ಯವಾಗಿ ಶಾಲೆ ಆರಂಭಗೊಳ್ಳುವ ಆ ಮಳೆಗಾಲದ ದಿನಗಳು – ಮೋಡದಂತೆ ಹೆಪ್ಪುಗಟ್ಟುವ ಮಕ್ಕಳ ಮನ – ಕಡೆಗೆ (ಮಳೆಸುರಿದಂತೆ!!) ಅಳುತ್ತಾ ಶಾಲೆಗೆ ಹೊರಡುವ ಮಕ್ಕಳು

  11. ಮೊನ್ನೇನೆ ಬರ್ಬೇಕಾದ್ದಿನ್ನೂ ಬಂದಿಲ್ಲ, ಹೋ!
    ಮನ್ನಣೆ ಪಡೆದ ಟೆಕ್ಸ್ಟ್ ಬುಕ್ಸು(ಪಾಠ್ಯಂಗಳ್)| ಕೈಬೀಸಿ
    ಇನ್ನೊಂದಷ್ಟ್ ದಿವಸ ನಡೆಯೋಣ||

  12. ದಿನಂಗಳುರುಳಲ್ಕೆ ಮಾಸ್ತರ ವಿಚಿತ್ರ ದೃಷ್ಯಂಗಳೇ
    ಮನಂಗಳೊಳಗಾಡುತುಂ ದುಗುಡಭಾವಮಂ ಪೆರ್ಚಿಸಲ್
    ಅನಂತ ಸುಖಮೊರ್ಮೆಲೇ ಕಡಿಯೆ ಮಂಕಂನಂತಾದನೈ
    ಅನರ್ಥಮಿದುಮೆಂದು‍ ದೂಷಿಸುತೆ ಪೋಗುವಂ ಶಾಲೆಗಂ

  13. ಸಮವಸ್ತ್ರಮಂ ಧರಿಪ ಸಂ-
    ಭ್ರಮವುಂ ಸಹಪಾಠಿ ಮಿತ್ರರೊಡೆ ಸಂಗಮವುಂ ।
    ಯಮನಿಯಮಂಗಳ ಸರಿ ಸಂ-
    ಯಮವುಂ ಶಾಲಾ ವಿಶೇಷ ಶಾಕಾಹಾರಂ ।।

    ಶಾಲೆಯೆಂದರೆ …..
    ಸಮವಸ್ತ್ರ – ಗೆಳೆಯರು – ಕಟ್ಟುನಿಟ್ಟಿನ ನಡುವಿನಲ್ಲೂ ದೊರೆವ ಬಿಸಿಯೂಟ !!

  14. ಹೊಸ ಬ್ಯಾಗು ಹೊಸ ಬುಕ್ಕು ಹೊಸ ಅಂಗಿ ಸ್ಥಿರ ಭಂಗಿ
    ಅಳಲಿಲ್ಲ ನನ್ನ ತಂಗಿ ಶಾಲೆಯೆಂದು |
    ತೋರುತಿದ್ದಳೊ ಕರುಮಚೀಲವನು ಹೊತ್ತಂತ
    ನೂತ್ನ ರೂಪವ ತೊಟ್ಟ ಆತ್ಮನೆಂದು ||

  15. || ವಿಚಿತ್ರಲಲಿತವೃತ್ತ ||

    ರಜೆಯೊಳನಿಶಂ ಸುಖಿಸಿ ಸಂಚರಿಸಿ ಮಕ್ಕಳ್,
    ಭುಜಿಸಿ ತಣಿಯಲ್ ಕುಣಿದು ಕುಪ್ಪಳಿಸಿ ಬಾಡೊಳ್,|
    ವಿಜಯಪಥದೊಳ್ ಕ್ರಮಿಸೆ ಶಿಕ್ಷಣಮನೊಂದಲ್,
    ಸೃಜಿಸುತೊಲವಂ ತಳೆಯಲಾಗದಸಮರ್ಥರ್ ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)