Jul 112016
 

COMET

  42 Responses to “ಪದ್ಯಸಪ್ತಾಹ ೨೧೦: ಚಿತ್ರಕ್ಕೆ ಪದ್ಯ”

  1. ಕವಿಯ ಕಣ್ನೋಟದ ವಿಲಾಸಂ
    ಕವಿದ ತಾರಾಪುಂಜದೊಳಗಂ
    ತಿವಿದು ಜಾಲಾಡುತ್ತುಮರಸಿರ್ಪುದು ರಸಾವಳಿಯಂ
    ಸವಿದುದಲ್ತೇಂ ಭಾನು ಕಾಣದ
    ವಿವರಮಂ ತಿಳಿತಿಳಿದು ಹಸಿವಂ
    ತವಿಸಿ ತಣ್ಪಂ ನೀಳ್ದುದಮಮಾ ಉಂಟೆಯೆಣೆಯಿದಕಂ

  2. Poets that shine bright with their stupefying diction appear and vanish like comets. But the Rishikavi-s (vAlmIki/vyAsa) are, akin to the stars, permanently enthroned in the literary firmament.
    ಚರ್ಚರೀ|| ಎಣೆಯಿಲ್ಲದ ಪದಸಿದ್ಧಿಯ ಮೆರೆಯುತ್ತಿಹ ಕವಿ ತಾಂ
    ಇಣುಕುತ್ತಲಿ ಮರೆಯಾದನೆ ನಿಮಿಷಕ್ಕಹ ಮದದಿಂ|
    ಕ್ಷಣದುಲ್ಕೆಯ ವೊಲು ತೀರರು ಮಹಿಮರ್ ಋಷಿಕವಿಗಳ್
    ಪ್ರಣಮಿಪ್ಪೆನು ಉಡುಸಂಘದ ವೊಲು ಶಾಶ್ವತಭವರಂ||

    • ಪ್ರಣಮಂ means? What is overall meaning? ಚರ್ಚರೀ is 2-4 * 3 + 4 or 4*5 + 2 ?

      • I have rephrased the verse, and have given the meaning too in the original post.
        ಚರ್ಚರೀ: ನನನಾನನ| ನನನಾನನ| ನನನಾನನ| ನನನಾ|

  3. A comet is ferocious vis-a-vis the twinkling stars. Besides, it wags a tail!
    ಬಾಲವುಳ್ಳವು ತಾವು ಕೋಲಾಹಲವ ಗೈದು
    ಓಲಾಡುತ್ತಿಹವು ಎಲ್ಲೆಲ್ಲೂ| ಚುಕ್ಕೆಗಳ್
    ನೀಲಾಂಬರದೊಳು ನಿಂದಿಹವು||

  4. ಎತ್ತರದ ಲೋಕಮನೇರ್ದೀ
    ಚಿತ್ತಾರದಲೊಳೆವ ತಾರೆಯರನುಂ ಬಿಡದೇ
    ಧುತ್ತನೆ ಮುತ್ತಿತೆ! ಧೂಮಂ,
    ಬಿತ್ತುತೆ ಕಂಪನಮನಂತೆ ತೋರ್ದು,ನಿಜಜಗಂ!

  5. ಕುರುಗಳಾಡೆ,ದ್ವೇಷದಾಟವ
    ನರಿತು ಕಲಿತರೆ,ಪಾಠವಂ ನಿಜ
    ಮಿರುವುದಾದೊಡನೊಂದುಗೂಡೇಯೆಂಬುದಂ ,ಮೊದಲು!
    ಸರಿಸಮರು ತಾವೆಂಬ ಬಗೆಯಿಂ
    ಮಿರುಗು ತಾರಾ,ಗ್ರಹಗಳೆಲ್ಲವು
    ಪರಮ ಗೌರವದಿಂದೆ ಕೇತನಕೆರಗುತೈಕ್ಯತೆಯಿಂ!!

  6. ದೇವನಾಂಶದ ಪ್ರಾಣಮೊಂದದು
    ಜೀವ – ದೇವರ ತಳುಕನರಿಯದೆ
    ಸಾವನಪ್ಪಿ ಪೊಡರ್ವ ಚುಕ್ಕಿಯ ರೂಪದಿತ್ತೀಗಳ್ /
    ಕೇವಲಜ್ಞಾನಮನು ಸಾಧಿಸೆ
    ದೈವಸಾಕ್ಷಾತ್ಕಾರವೆಂಬನು
    ಭಾವವನು ಪೊಂದಲು ವಸುಂಧರೆಯತ್ತ ತಿರುಗಿಹುದೈ //

    ಸತ್ತವರು ನಕ್ಷತ್ರವಾಗುತ್ತಾರೆಂಬ ಬಾಲಿಶ ಕಲ್ಪನೆಯನ್ನಾಧರಿಸಿ. ನಾನು ಹಳೆಗನ್ನಡಕ್ಕೆ ಹೊಸಬ. ತಪ್ಪಿದ್ದಲ್ಲಿ ದಯವಿಟ್ಟು ತಿದ್ದಬೇಕಾಗಿ ವಿನಂತಿ.

    • ದೇವನ+ಅಂಶದ>ದೇವನಾಂಶದ ಎಂದಾಗದು; ದೇವನಂಶದ ಎಂದಾಗುತ್ತದೆ. ಸವರ್ಣದೀರ್ಘಸಂಧಿಯು ಸಂಸ್ಕೃತದ್ದು. ಕನ್ನಡಕ್ಕೆ ಅನ್ವಯವಾಗದು. ಕಲ್ಪನೆಯು ಚೆನ್ನಾಗಿದೆ. ನಿಯತವಾಗಿ ಕವನಿಸುತ್ತಿರಿ.

  7. ದಿನಮೆಲ್ಲಂ ಕ್ರಮಿಸುತ್ತೆ ದೂರಮನೆ ಮೇಣ್ ಕಜ್ಜಂಗಳಂ ಗೈಯುತುಂ
    ಕೊನೆಯೊಳ್ ವಿಶ್ರಮಿಸಲ್ಕೆ ತಾಂ ತೆರಳಿರಲ್ಕಾ ಸೂರ್ಯನುಂ,ನಿದ್ರೆಯೊಳ್
    ಮಿನುಗುತ್ತಿರ್ಪೆಳೆ ತಾರೆಯರ್ಕಳ ಝಣತ್ಕಾರಂಗಳಂ ಕೇಳ್ದನೇಂ!
    ಮನಮಂ ಬಂಧಿಪ ಯತ್ನಕೀದು ಬಿಡುವಂ,ಕಣ್ನೋಟಮಂ ಬೀರ್ದನೇಂ!!

    (ಬಾನಿನಿಂದ ತೆರಳಿ ವಿಶ್ರಮಿಸುತ್ತಿರುವ ಸೂರ್ಯನೂ, ಮನವನ್ನು ಹಿಡಿತದಲ್ಲಿಡಲಾರದೇ ಬಾನಂಗಳದಲ್ಲಿನ ತಾರೆಯರನ್ನು ನೋಡಿದನೇ!)

  8. ಸ್ಮರಸೇನಾಪತಿ ಧೂಮಕೇತುವಲ ಕಾಮಾಗ್ನಿಪ್ರಭೂತಸ್ತರೀ-
    ಸರದಿಂ ಯುದ್ಧಕೆ ಸೌರಮಂಡಲದ ಮೇಲ್ವಾಯ್ದಂ ತಪೋಭಂಗಕೆಂ-
    ದುರಿಗಣ್ಣಾತನ ತಾಣಕಂದು ಕಳಿಸಿರ್ಪರ್ ಮಾರನಂ ಗತ್ತಿನೊಳ್
    ಸುರರಾಟಕ್ಕೊಡೆಯಂ ಶರೀರರಹಿತಂ ತಾನಾದ ಕೋಪಾಗ್ನಿಯಿಂ

    ಅಂದು ಶಿವನ ಕಡೆ ತನ್ನ ಒಡೆಯನನ್ನು ಕಳಿಸಿದ ಸುರರ ಮೇಲೆ (ಸೌರಮಂಡಲ) ಯುದ್ಧಕ್ಕೆ ಹೊರಟಿದ್ದಾನೆ ಈ ಧೂಮಕೇತು. ಈತ ಮನ್ಮಥನ ಸೇನಾಪತಿ. ಕಾಮದುರಿಯ ಹೊಗೆಯೇ ಇವನ ಧ್ವಜ!

    • ಚೆನ್ನಾಗಿದೆ

      • ಧನ್ಯವಾದಗಳು. ಎಂದೂ ಪ್ರತಿಕ್ರಿಯಿಸದ ನೀವೇ ಚೆನ್ನಾಗಿದೆ ಎಂದರೆ ನಿಜಕ್ಕೂ ಚೆನ್ನಾಗಿರಬೇಕು 🙂

        • ನಿಮ್ಮ ಪದ್ಯಗಳೆಲ್ಲ ಚೆನ್ನಾಗಿಯೇ ಇರುತ್ತವೆ,ಇಂದಿನಂತೆಯೇ ,ನಿಜಕ್ಕೂ!
          ಯಾರಾದರೂ ಪ್ರತಿಕ್ರಿಯಿಸಿದರೆ ಆಯಿತು,,ಎಂದು ಸುಮ್ಮನಿರುವದಷ್ಟೇ 🙂

  9. ಆರಿದಾರಿದು ರಸಿಕದೇವನು
    ಸಾರುತಿರ್ಪಂ ಭೀಮನಂದದೆ
    ಪಾರಿಜಾತಮನರರೆ ನಲ್ಲೆಗೆಮುಡಿಪ ಕಾತರದಿಂ!
    ದಾರಿಗಡ್ಡದ ಮುಗಿಲಗಡಣಮ
    ನೇರಿ ಜವದಿಂ ಬೆಳಕಿನೊಲ್ ಸುರ
    ಪುರದ ಮಾರರ ತೆರದ ಕಂಗಳಿಗುಮಮ! ಕಾಣದವೊಲ್!!

    • ಚೆನ್ನಾಗಿದೆ ಕಲ್ಪನೆ ಮತ್ತು ಪದ್ಯ. ಗಡಣ ಕನ್ನಡ ಪದ. ಮುಗಿಲಗಡಣಮನೇರಿ ಅಂತೇನಾದರೂ ಮಾಡಬಹುದು.

  10. ಕಾಲಮಂ ದೂರದಿಂ ಗುಣಿಸುದೆಂತದು ಕಾಣ
    ನೀಲದಂಬರದಾಚೆ ನೀಳದೊಳಗಂ ।
    ಮೂಲೆಯೊಳ್ಗವಿತಿರ್ಪ ಗ್ರಹ ತಾರೆಗಳ ಗುಡಿಸಿ
    ಕಾಲನಿರ್ಣಯಮೆ ಬೆಳಕ ಪೊರಕೆಯೊಳು ಮೇಣ್ ।।

    ಚಿತ್ರದಲ್ಲಿ “ಬೆಳಕಪೊರಕೆ” ಕಂಡ ಕಲ್ಪನೆಯಲ್ಲಿ – “ಜ್ಯೋತಿರ್ವರ್ಷ” & “ಜ್ಯೋತಿಶ್ಯಾಸ್ತ್ರ” ಗಳ ವರ್ಣನೆಯ ಪ್ರಯತ್ನ.

    • ಚೆನ್ನಾಗಿದೆ ಮೇಡಮ್. ಮೂಲೆಯೊಳ್ಗೆ ತಪ್ಪು. ಮೂಲೆಯೊಳಗವಿತಿರ್ಪ ಮಾಡಬಹುದು. ಕೊನೇ ಸಾಲಿನಲ್ಲಿ ಒಂದು ಮಾತ್ರೆ ಹೆಚ್ಚಾಗಿದೆ.

      • ಧನ್ಯವಾದಗಳು ನೀಲಕಂಠ, ಓ.. ಮತ್ತೆ ಅದೇ ತಪ್ಪು ! ಸರಿಪಡಿಸಿದ್ದೇನೆ.
        ಕಾಲಮಂ ದೂರದಿಂ ಗುಣಿಸುದೆಂತದು ಕಾಣ
        ನೀಲದಂಬರದಾಚೆ ನೀಳದೊಳಗಂ ।
        ಮೂಲೆಯೊಳಗವಿತಿರ್ಪ ಗ್ರಹ ತಾರೆಗಳ ಗುಡಿಸಿ
        ಕಾಲನಿರ್ಣಯ ಬೆಳಕ ಪೊರಕೆಯೊಳು ಮೇಣ್ ।।

  11. ಕತ್ತಲೆ ಬೆಳಕಿನ ಮಿಶ್ರಣದಿಂದಂ
    ಬತ್ತದೆ ಜೀವನ ಸಾಗುತಿದೆ
    ಹೊತ್ತಿಸಿ ದೀಪಮನುಜ್ವಲ ಪಥದೊಳ್
    ಚಿತ್ತಗಳಂ ಕರದೊಯ್ಯುತಿದೆ!

  12. ನೀಲಿಬಾನಿನ ತಾರೆಯರ್ಕಳು
    ತೇಲುತಾನಂದದಲಿ ಸುಂದರ-
    ಬಾಲಚಂದ್ರನ ಬರವನಿಚ್ಛಿಸಿ ಮೇಳಗೊಂಡಿರಲು
    ಶೂಲಮಂ ಝಳಪಿಸುತುಮೊರ್ಮೆಯೆ
    ಖೂಳನೇಂ ಪ್ರತ್ಯಕ್ಷನಾದನೆ
    ಗಾಳಿಗೊಡ್ಡಿದ ದೀಪಶಿಖೆಯೊಲ್ ನಲುಗಿಸುತ್ತವರಂ!!

    • ಆಹಾ, ಒಳ್ಳೆ ಕಲ್ಪನೆ! ನೀಲಿ ಬಾನಿನ ಅಂತ ಮಾಡಬಹುದು. ನೀಲಬಾನು ಅರಿಸಮಾಸ. ಮೇಳೈಸಿರ್ದಿರಲು.. ಗಣ ತಪ್ಪಿದೆ. ಮೇಳಗೊಂಡಿರಲು ಮಾಡಬಹುದು. ಶಿಖೆಯೊಲೆ ಅಂತ ಮಾಡಬಹುದು. ಶಿಖೆಯವೊಲ್ ಸರಿಯಾದ ಪ್ರಯೋಗ.

      • ಧನ್ಯವಾದಗಳು,ಶಿಖೆಯೊಲ್ ಸರಿಯಾಗಿರಬಹುದು.

        • ಪದೇ ಪದೇ ಸರ್ ಹೇಳಿದ್ದಾರೆ 🙂

          • ಉತ್ತಮಪುರುಷವನ್ನು ಪ್ರಥಮಪುರುಷದಲ್ಲಿ (’ಸರ್’) ಹೇಳಿರುವುದು ಧ್ವನಿಪೂರ್ಣವಾಗಿದೆ 😉

    • ಬೆಸ್ಟ್ ಕಲ್ಪನೆ

  13. ಕತ್ತಲೆ ಮುಸುಂಕಿರುವೊಡಂ
    ಸುತ್ತಣ ಲೋಕಕ್ಕೆ ನೀಡುತೆ ಪ್ರಭೆಯಂ, ತಾ
    ನೆತ್ತರಮಾಯ್ತೆ!ದಿನದಿನಂ
    ಬಿತ್ತರದೆರ್ದೆಯ ನಭಂ,ಸಕಲರಂ ಮೀರ್ದುಂ!!

  14. ಹಲಕಾಲದಿಂದಿರುಳಿನೊಳ್
    ಭಲ! ಚಲಚಿತ್ರಪ್ರದರ್ಶನದ ಯೋಜನೆ ಕಾಣ್ ।
    ಸೆಲೆಯೊಡೆದುಂ ತಾರಾಗಣ
    ನೆಲೆನಿಂದುದೆಲೆ ಕಲೆ ನೀಲಪರದೆಯ ಮೇಲ್ ತಾಂ !!

    “ಸಿನೆಮಾ ಟಾಕೀಸ್”ನ ಕತ್ತಲಲ್ಲಿ “ಪ್ರೊಜೆಕ್ಟರ್”ನ “beam” ನಂತೆ ಕಂಡ ಕಲ್ಪನೆಯಲ್ಲಿ !!

    • ಆಹಾ.. ತುಂಬಾ ಚೆನ್ನಾಗಿದೆ ಕಲ್ಪನೆ. ತಾರಾಗಣ!! ನೀಲಿಪರದೆ ಮಾಡಿದರೆ ಅರಿ ತೊಲಗುವುದು 🙂 ಅಂತೆಯೇ ಪಲವುಂ ಕಾಲದಿರುಳಿನೊಳ್…

      • ಪಲವುಂ ಕಾಲದಿನಿರುಳೊಳ್

      • ಧನ್ಯವಾದಗಳು ನೀಲಕಂಠ. ತಿದ್ದಿದ ಪದ್ಯ :

        ಪಲವುಂ ಕಾಲದಿನಿರುಳೊಳ್
        ಭಲ! ಚಲಚಿತ್ರಪ್ರದರ್ಶನದ ಯೋಜನೆ ಕಾಣ್ ।
        ಸೆಲೆಯೊಡೆದುಂ ತಾರಾಗಣ
        ನೆಲೆನಿಂದುದೆಲೆ ಕಲೆ ನೀಲಿಪರದೆಯ ಮೇಲ್ ತಾಂ !!

  15. ಮೆರಗಂನೀಡದೆನುವರೇಂ-
    ಕರಭೂಷಣಕರ್ಣಕುಂಡಲಂಗಳ್,ಸ್ವರ್ಣಾ
    ಭರಣದಲಂಕಾರಂಗಳ್!
    ನಿರುತಂ ಶರ್ವರಿಯನಾಲಿಯೊಳೆ ಭೋಗಿಸುವರ್!!

    (ನಕ್ಷತ್ರ…ಗಳು ರಾತ್ರಿಯ ಅಲಂಕಾರವೆಂಬ ಅರ್ಥದಲ್ಲಿ)

Leave a Reply to ನೀಲಕಂಠ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)