Jul 172016
 

ನಿಮ್ಮಿಚ್ಛೆಯ ವೃಕ್ಷವನ್ನು ಕುರಿತು ಅಲಂಕಾರಯುತ ಪದ್ಯರಚನೆ ಮಾಡಿರಿ

  34 Responses to “ಪದ್ಯಸಪ್ತಾಹ ೨೧೧: ವರ್ಣನೆ”

 1. ಹಲವು ಪಾದದೆ ಮೆಟ್ಟಿಸಿಕೊಂಡೊಡಂ,
  ಬಲದಘಾತಮನಶ್ಮದಿನುಂಡೊಡಂ,
  ಗಳದ ಸುಯ್ಯುವ ತಾಡನಕಂಜದೇ
  ಫಲಮನೀವ ರಸಾಲಮೆ ಗೆಲ್ವುದೈ!

  • ಇಲ್ಲಿ ಯಾವ ಅಲಂಕಾರ ಇದೆ?

   • ಇದ್ದರೆ ವಿಭಾವನಾ ಅಲಂಕಾರವಿರಬಹುದು. ಸೂಚನೆಯನ್ನು ಗಮನಿಸದೇ ಬರದದ್ದು 🙂

    • ಕ್ಷಮಿಸಿ, ಇದು ಅನ್ಯೋಕ್ತಿಯು (ಗಣೇಶರಿಂದೇ ತಿಳಿದುಕೊಂಡಿದ್ದೇನೆ :-))

     • ಓಹ್! ಧನ್ಯವಾದಗಳು. ನನ್ನ ಅಲಂಕಾರಪ್ರಜ್ಞೆ ಕಡಿಮೆ 🙁

 2. ಯೋಗಿ ಶಿವನವೋಲ್ ನಿಶ್ಚಲ
  ಮಾ ಗಿರಿಜಾಪತಿಯವೋಲ್ ಪ್ರಸಿದ್ಧಂ ಮತ್ತಾ/
  ನಾಗರ್ಗಾಶ್ರಯ ಮಾದಾ
  ಶ್ರೀಗಂಧತರುಮದು ವೃಕ್ಷವೋ ಶಂಕರನೋ//

  • ಚೆನ್ನಾಗಿದೆ. …ತರುವದು ಆಗಬೇಕು. ತರುಂ ಸರಿಯಲ್ಲ. ವೃಕ್ಷಮೋ ಆಗಬೇಕು. ಅನಾವಶ್ಯಕ ಆಕಾರಗಳನ್ನು ತೆಗೆದರೆ ಒಳ್ಳಿತು. ಪ್ರಸಿದ್ಧಂ ಮತ್ತಂ, ಆಶ್ರಯಮಾದ / ಶ್ರೀಗಂಧತರು…

   • ತಿದ್ದಿದ್ದೇನೆ. ಆಶ್ರಯಮಾದಾ=ಆಶ್ರಯಮೀಯುವ ಎಂದು ಸವರಿದರೆ ಸರಿ ಹೋಗಬಹುದೇ?ಸೂಚನೆಗೆ ಧನ್ಯವಾದಗಳು ನೀಲಕಂಠರೇ.

    • ಇಲ್ಲ. ಮಾದ / ಶ್ರೀಗಂಧ.. ಇದೇ ಸರಿ ಹೋಗುತ್ತದೆ. ಶ್ರೀ ಇರುವುದರಿಂದ ದ ಗುರು ಆಗುವುದು.

     • ಸರಿ. ಹಾಗೆಂದೇ ತಿದ್ದುತ್ತೇನೆ. ಧನ್ಯವಾದಗಳು.

 3. ಚಾರುತರೋದಮಂಡಲವನಾಂತರರಾಜಿಯೆನಿಪ್ಪ ತದ್ದ್ರುಮಂ
  ಮಾರುತಸಂಗಚೋದಿತಸುಗಂಧಶರಂಧರ ದಾರುಮನ್ಮಥಂ
  ತಾರಕಮಪ್ಪ ತೈಲಕಳುಕಲ್ ಶತಶೀತ-ವಿಗಂಧರಾಶಿಗಳ್
  ಗೌರಶರೀರಿ ನೀಲಗಿರಿವೃಕ್ಷಮೆ ಸಲ್ಗುಮಿಳಾಂತರಂಗದೊಳ್

  ಉದಮಂಡಲ = Ooty

  • ಆಹಾ! ತುಂಬ ದಿನದ ನಂತರ ಮೌರ್ಯರ ಪದ್ಯವನ್ನು ನೋಡಿ –

   ನವಕುಸುಮರಾಜಿಯಿಂ ಹೊ-
   ಮ್ಮುವ ಪರಿಮಳಮಂ ತಳರ್ದು ತೀಡುವೆಲರಿನೊಲ್
   ಕವನಂ ಮೌರ್ಯವಿರಚಿತಂ
   ತವಿಸಿರ್ಪುದು ಮನ್ಮನೋಂತರಂಗದ ಝಳಮಂ

   • ನಿಮ್ಮ ಸುಕವಿಹೃದಯಕ್ಕೆ ಎನ್ನ ಧನ್ಯತಾಭಾವದ ನಮನಂಗಳು. ಪದ್ಯದೋಷವೊಂದನ್ನು ಗುರುತಿಸಿ ಸವರಿಸಿದ ಪದ್ಯವನ್ನು ಕೆಳಗೆ ಪೋಸ್ಟ್ ಮಾಡಿದ್ದೇನೆ.

  • ಚಾರುತರೋದಮಂಡಲವನಾಂತರರಾಜಿತವೃಕ್ಷನಾಯಕಂ
   ಮಾರುತಸಂಗಚೋದಿತಸುಗಂಧಶರಂಧರ ದಾರುಮನ್ಮಥಂ
   ತಾರಕಮಪ್ಪ ತೈಲಕಳುಕಲ್ ಶತಶೀತ-ವಿಗಂಧರಾಶಿಗಳ್
   ಗೌರಶರೀರಿ ನೀಲಗಿರಿವೃಕ್ಷಮೆ ಸಲ್ಗುಮಿಳಾಂತರಂಗದೊಳ್

 4. ಬಲುಚೆಲುವಿನಾ ಗುಡಿಗೆ ಕಟ್ಟಿರ್ಪ ತೋರಣವೆ
  ಸಲುಗೆಯಿಂದೊತ್ತಾಗಿರುವೆಲೆಗಳು ವೃಕ್ಷದೊಳ್
  ಚೆಲುವೊಳಗೆ ಚೆಲುವನಡಗಿಸಿರುವಾ ಮಾಲೆಯಾ ತೆರದಿಂದಿವೆ ಸುಮಮರದೊಳ್
  ಕಲರವವು ಕೇಳುತಿದೆ ಪಕ್ಕಿಗಳಿಣಚಿಗಳದು
  ಬಲಶಾಲಿ ಬೇರ್ಗಳಿವೆ ಕರಿಗಾಲುಗಳಿಗಿಂತ
  ಬಲುಪಿರಿದು ಕಾಂಡಗಳ್ ಕಾಣಲ್ಕೆ ತವಕಿಸವೆ ನೇತ್ರಗಳು ಹಾ ! ಗೆಳತಿಯೇ !

  • ಮರವಾವುದೆಂದು ಧ್ವನಿಮಾರ್ಗದಿಂದ ಹೇಳಿರುವುದು ಚೆನ್ನಾಗಿದೆ. ಆದರೆ:
   ಮೀನಾಕ್ಷಿದೇಗುಲದ ತೋರಣದ ಪರ್ಣಮದು
   ತಾನಲ್ತು ಮಾಮರದ ಪಲ್ಲವಂಗಳ್|
   ಆನೆಕಾಲ್ಗಳಿಗಿಂತ ಬಲುಪಿರಿದು ಕಾಂಡಮಿರೆ
   ಐನಾತಿ ವೃಕ್ಷವದು ಶಾಲ್ಮಲಿಯು ಕೇಳ್|| 🙂
   (’ಕರಿಗಾಲು’ ಅರಿ)

   • ಕರಿಗಾಲು ಅರಿಯಾಗದು. ಸಂಧಿಯಾಗಿದೆಯಲ್ಲ. ಕಾರ್ಗಾಲ ಎಂಬಂತೆ. ಆದರೆ ಬಲಶಾಲಿ ಬೇರ್, ಸುಮಮರ ಅರಿಸಮಾಸಗಳು.

 5. “ಬೆಂಗಳೂರಲ್ಲಿಂದು ಕಾಂಕ್ರೀಟು ಬೆಳೆವುದೈ”
  ಹಂಗಿಸಿದ ನುಡಿಗುತ್ತರಿಸಲೆಂದೆ ,ತಾಂ
  ಕಂಗೊಳಿಪ ಪಸುರುಟ್ಟು ಜೊತೆಗೂಡಿ ನಿಂದುವೇಂ
  ಹೊಂಗೆ ತರುಗಳ್ ಸುಮಸ್ಮಿತದೊಳಿಲ್ಲೀ!!

 6. ಜೀವsನಂ ತೇದಿsರೆs ಫಲಪರ್ಣಂಗಳನಿತ್ತುs
  ದೇವsನs ಪೂಜೆsಗೆ ಕದಳಿs
  ಪೂವಿsನs ಜೊತೆಸೇರ್ದುs ಭಕ್ತಿsಯಂ ಮೆರೆಯಿsತೆ s
  ಸಾವಿsನs ಬಳಿಕsವೂ ನಿಜದಿs

  (ಬಳ್ಳಿಯ ರೂಪದಲ್ಲಿ ಹೂದಂಡೆಯೊಂದಿಗೆ ದೇವನನ್ನು ಸೇರುವ ಬಾಳೆ)

 7. ರಸರುಚಿಯಂ ನೀಳ್ದು ಜಗಕೆ
  ಪಸರಿರ್ಕುಂ ಬ್ರಹ್ಮವಸ್ತು ಕಾಣಿಸದೆಮಗಂ
  ರಸನಾಗ್ರಕೆ ಸಿಹಿಯಂ ಕೊ-
  ಟ್ಟೆಸೆವೀ ಖರ್ಜೂರವೃಕ್ಷಮಿಷ್ಟಮದೃಷ್ಟಂ

  ನೋಡಿದ ಮರಗಳಲ್ಲಿ ಯಾವುದು ಇಷ್ಟ ಎಂದು ಹೊಳೆಯಲಿಲ್ಲ. ನೋಡದ ಖರ್ಜೂರದ ಮರವನ್ನು ಬ್ರಹ್ಮವಸ್ತುವಿಗೆ ಹೋಲಿಸಿ ಬರೆದದ್ದು 🙂

 8. ಬಿತ್ತರಿಸಿರ್ಪ ಕುಸುರಿವೆಸ-
  ವೆತ್ತ ಸುಮವ ಮುತ್ತುತಿರ್ಪೊಡಂ ಕಂಜಗವುಂ ।
  ಮುತ್ತುಗದೆಲೆಯೋಲಿರ್ಪೊಡೆ
  ಪತ್ತಳೆ, ಮೇಣ್ ತಾನು ತೇಗದಮರಂ ಜಗದೊಳ್ ||

  “ಕುಸುರಿಕಲೆ” ಯಂತೆ ಕಾಣುವ ಹೂಗಳಿಗೆ, ಮುತ್ತಿರುವ “ಕೆಂಜಗ”ವಿರಲು, (ಊಟಕ್ಕೆ ಬಳಸುವ) “ಮುತ್ತುಗ”ದ ಎಲೆಯಂತೆ ಕಾಣುವ ಎಲೆಗಳಿದ್ದರೂ – ಏಗದ (= ತೇಗದ) = “ತೇಗದಮರದ” ವರ್ಣನೆ !!

 9. ಕಾರಣಮದೇನದೆನೆ,ಚೂತಕೆ
  ಪಾರಿದ ಪಿಕಸ್ವನಮರರೆ!ಹಿತ
  ಮಾರುತದವೋಲೆಂದಿಗೂ ತೇಲುತ್ತೆ ಬರ್ಪುದಕೆ!
  ಆರು ಬಲ್ಲರು?ಪೊಂದಲೋಸುಗ
  ಕೀರವರ್ಣಮನೊಲಿಸಿ ವೃಕ್ಷಮ
  ನೇರಿ ಬೇಳ್ವುದೆ !ಪಸುರು,ಕೆಂಪನು!ಪಾಡಿ ರಾಗದೊಳೇ!!

  (ಮಾವಿನ ಮರಕ್ಕೆ ಹಾರಿಬಂದ ಪಿಕಗಳ ಕೂಜನವು ಹಿತವಾದ ಗಾಳಿಯಂತೇ ತೇಲಿಬರಲು ಕಾರಣವಾದರೂ ಏನಿರಬಹುದು?ಗಿಳಿಗಳ ಬಣ್ಣವನ್ನು ಮರದಿಂದ ಒಲಿಸಿ (ತಾವೂ)ಪಡೆಯಲು ,ಮರವನ್ನು ಬೇಡುತ್ತಿವೆಯೇ!ಹಾಡಿನ ಮೂಲಕ!)

 10. ಬಾಗದೆ ಮೇಲಕೆ ಪೋಗುತುಮಂತೇ
  ಸಾಗಿಸಲೀ ಬಡರೈತನ ಬಾಳಂ!
  ಪೂಗಿಯ ವೃಕ್ಷಮೆ ದೇವನದೆಂಬಂ
  ನೀಗಿಸೆ ಸಾಲದ ಸಂಕಟಮನ್ನೇ!!

 11. (ಕಾಡುಮರದ ಸ್ವಗತ)

  ಕುಡದೆನುತುಂ ಸುಮಂಗಳನು ,ವಿತ್ತಮನರ್ಜಿಪ ಪಣ್ಣನೆಂದು, ತಾಂ
  ಕೊಡಗಳಿನಲ್ತು! ದರ್ವಿಯೊಳಗುಂ! ಸುರಿಸರ್ದೆಯೆ ಹುಂಡುನೀರನುಂ,
  ಕಡೆಗಣಿಸುತ್ತೆ ನಾಮವನೆ, “ಕಾಡಿ”ನದೆನ್ನುವಲಕ್ಷ್ಯದಿಂದೆ ಹಾ!
  ಕೊಡಲಿಯನೆ ಝಳ್ಪಿಸುತ್ತೆ, ಬಳೆದೆನ್ನನೆ ಖಂಡಿಪರೇಂ,ನರರ್!ನಿಜಂ!!

  (ಹೂಹಣ್ಣನ್ನು ಕೊಡುವದಿಲ್ಲವೆಂದು,ನೀರನ್ನೂ ಹಾಕದೇ,ನನ್ನ ಹೆಸರನ್ನೂ ಹೇಳದೇ “ಕಾಡು “ಎನ್ನುತ್ತಾ,ಸ್ವಂತವಾಗಿ ಬೆಳೆದ ನನ್ನನ್ನು ತುಂಡುಮಾಡುವವರು-ನಿಜವಾಗಿಯೂ ನರರೇನು?)

 12. ನನಗೆ ಅಲಂಕಾರದ ತಿಳಿವು ತುಂಬಾ ಕಡಿಮೆ. ನುರಿತ ಪದ್ಯಪಾನಿಗಳು, ತಪ್ಪಿದಲ್ಲಿ ತಿದ್ದಬೇಕು!!

  ಕಾರಿರುಳ ಮಲ್ಲಿಗೆಯು, ಭೂದೇವಿಪಾದಗಳ-
  ನಾರಾಧಿಸುತಿದೆ ಪುಷ್ಪಾರ್ಚನೆಯೊಳು|
  ಕ್ಷೀರಸಾಗರಮಥನದಿಂ ಬಂದ ಕಲ್ಪತರು
  ಪಾರಿಜಾತವಿದು ಸಿಹಿಗಂಪಮರವು||

 13. A poetic reckoning as to why Ashokapushpa (Saraca Asoca Roxb.) hasn’t corolla (petals): Being an extension of the peduncle, the calyx (ಪುಷ್ಪಗರ್ಭ/sepals) is necessarily green. Aspiring for orange coloured corolla, Ashokapushpa decided that that colour wouldn’t go well with the green of calyx. (Green’s compatible colour is yellow, wherefore the green borders and pallu in yellow sarees). So it decided to do away with the corolla altogether, and shine bright with orange coloured calyx, andrecium etc. And despite such deficiency it is called ಅ-ಶೋಕ! It laughs at flowers that have corona (say an additional corolla differently colored) in addition to corolla!
  ದಳಮಿಲ್ಲಮೆಂದಶೋಕಸುಮಕಿಲ್ಲವು ದುಃಖ
  ತೊಳಗಿರ್ಪುದಾದ್ಯಂತಮೊಂದೆ ವರ್ಣಂ|
  ದಳಗಳಿರೆ ವಿವಿಧವರ್ಣದವನ್ಯಪುಷ್ಪದೊಳ್
  ಹಳವಂಡವೇಕೆನುತೆ ಮೂದಲಿಪುದೈ||

  • ತಲೆಯ ಕಬ್ಬಕ್ಕಿಂತ ಶಾಸ್ತ್ರವಾಲವೆ ಭಾರ!
   ನಿಲಲಾರದಾತುಕೊಂಡಿದೆ ಆಂಗ್ಲಮಂ
   ಹಲವು ಪರಿಭಾಷೆಯಂ ಪರಭಾಷೆಯಲಿ ಹೇಳಿ
   ಒಲಿಸುವೊಡೆ ಹುರುಳೆಲ್ಲಿ ಹಾದಿರಂಪ?

   • ಹಹ್ಹಾ… ಕಬ್ಬದ ತಲೆಯ ಮೇಲೆ ಶಾಸ್ತ್ರ ಬಂದಿರುವುದರಿಂದ … ತಲೆಯ ಕಬ್ಬಕ್ಕಿಂತ ಶಾಸ್ತ್ರಜೂಟವೆ ಭಾರ … ಎನ್ನಬಹುದು

    • ಇಲ್ಲ ನೀಲಕಂಠರೆ, ಜೂಟದ್ದು ಕಂಪ್ರೆಸಿವ್ ಸ್ಟ್ರೆಸ್ಸು, ಬಾಲದ್ದು ಟಾರ್ಷನಲ್ ಸ್ಟ್ರೆಸ್ಸು. ಪದ್ಯಕ್ಕೆ ಬೇಕಾದ್ದು ಅದೆ.

     • 🙂 ಇರಬಹುದು ಇರಬಹುದು.. ಹನುಮಪ್ಪನ ಬಾಲ ನೆಗೆದೆದ್ದು ತಲೆಮೇಲೆ ಹಾರಾಡುವಂತೆ!

   • ಶಾಸ್ತ್ರಂಗಳೆಲ್ಲಮುಂ ಪದ್ಯದೊಳೆ ಕಥಿತಮಹ
    ಶಾಸ್ತ್ರಿತನಮಹುದಲ್ತೆ ನಿಜರೀತಿಯೈ|
    ಭಸ್ತ್ರಿಯೊಲ್ ಬುಸುಗುಡುವೆಯೇಕುಚ್ಚರಿಸಲೆರಡು
    ಶಾಸ್ತ್ರೀಯ ಶಬ್ದಗಳ ವೆಂಕಟೇಶ||

    • ಭಸ್ತ್ರದೊಲು ಬುಸುಗುಟ್ಟು ಟೀಕೆಯಿದ್ದಲನುರಿಸಿ
     ಇಸ್ತ್ರಿಯಂ ಮಾಳ್ದಪೆನ್ ಹಾದಿರಂಪ
     ವಸ್ತ್ರದಂಚಿನ ಗರಿಯು ಮುರಿಯದಲೆ ಮಿರುಗಲೆಂ
     ದಸ್ತ್ರಮಿದನೆಸೆದಪೆನ್ ಮಡಿವಾಳನೊಲ್

 14. ಬಿದಿರು ಹೂಬಿಟ್ಟಿತೆಂದರೆ ಜನ ಭೀತಗೊಳ್ಳುತ್ತಾರೆ. ಇದು ಕ್ಷಾಮದ ಮುನ್ಸೂಚನೆಯೆಂದು ಖತಿಗೊಳ್ಳುತ್ತಾರೆ. ಈ ಭಯಕ್ಕೆ ಕಾರಣವಿಲ್ಲದಿಲ್ಲ. ರಾಶಿರಾಶಿಯಾಗಿ ಬೀಜಗಳ ಮಳೆ ಸುರಿದಾಗ ಇಲಿ-ಹೆಗ್ಗಣಗಳು ತಾಂಡವವಾಡುತ್ತವೆ. ರಾಶಿ ಅಕ್ಕಿಯನ್ನು ಮೇಯ್ದು ಅವುಗಳ ಸಂತಾನವು ರಭಸದಿಂದ ಹಿಗ್ಗಿ, ರೈತನ ಬೆಳೆಗೂ ಕಣಜಕ್ಕೂ ಲಗ್ಗೆಯಿಡುತ್ತವೆ. ಸತ್ತ ಇಲಿಗಳು ಕೊಳೆತು ಪ್ಲೇಗು ಹರಡುತ್ತದೆ… – ಹಸುರುಹೊನ್ನು, ಬಿ. ಜಿ. ಎಲ್. ಸ್ವಾಮಿ
  ಹಿತವಿಲಂಬಿತ || ತೋಷಿಪರ್ ಗಿಡಮೀಯೆ ಪ್ರಸೂನಮಂ
  ದೂಷಿಪರ್ ಬಿದಿರನ್ನದೆ ಮಾತಿಗಂ!
  ಮೂಷಿಕಂ(Plague) ಬಹುದೆಂಬರು, ಸಾಧುವೇಂ?
  ಭೀಷಣಂ ಜನಭಾವಮೆ! ಮಾಳ್ಕುಮೇಂ?

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)