Jul 242016
 

ವಸಂತತಿಲಕ ಛಂದಸ್ಸಿನ ಕೆಳಗಿನ ಸಮಸ್ಯೆಯ ಸಾಲನ್ನು ಪೂರ್ಣಗೊಳಿಸಿರಿ:

ಕೈಲಾಸಮೇ ಕುಳಿರಿನೊಳ್ ಕರಗಿರ್ದುದಲ್ತೆ

  66 Responses to “ಪದ್ಯಸಪ್ತಾಹ ೨೧೨: ಸಮಸ್ಯಾಪೂರಣ”

  1. ಹಾಲಾಹಲಂ ಮಥನದೊಳ್ ಪುದಿದಿರ್ದಪಂ, ಶ್ರೀ
    ಫಾಲಾಕ್ಷನೇ ತೆರಳಿದನ್ ವಿಷಮಾರ್ದುಪೀರ |
    ಲ್ಕಾಲೋಲನಾ ತಪನ ಮೂರಿಯತಾಂಟಿದಾಗಳ್
    ಕೈಲಾಸಮೇ ಕುಳಿರಿನೊಳ್ ಕರಗಿರ್ದುದಲ್ತೇ ||

    ಸವರಿಕೆಯ ನಂತರ:
    ಹಾಲಾಹಲಂ ಮಥನದೊಳ್ ಪುದಿದಿರ್ದಪಂ, ಶ್ರೀ
    ಫಾಲಾಕ್ಷನೇ ತೆರಳಿದನ್ ವಿಷಮಾರ್ದುಪೀರ |
    ಲ್ಕಾಲೋಲನುಷ್ಣದುರಿ ಮೂರಿಯತಾಂಟಿದಾಗಳ್
    ಕೈಲಾಸಮೇ ಕುಳಿರಿನೊಳ್ ಕರಗಿರ್ದುದಲ್ತೇ ||

    ಕ್ಷೀರಸಾಗರಮಥನದೊಳುದ್ಭವಿಸಿದ ಹಾಲಾಹಲವನ್ನು ಕುಡಿಯಲು ಸ್ವತಃ ಶಿವನೇ ಆರ್ಭಟಿಸಿ ಹೋದಾಗ, ಆ ಆಲೋಲನ ಬಾಯಿಂದ ವಿಷದ ತಾಪವು ಹೊರಹೊಮ್ಮಿ, ಛಳಿಯೊಳಿದ್ದೂ ಕೈಲಾಸವೇ ಕರಗಿತಲ್ಲ!

    • ತುಂಬ ಚೆನ್ನಾಗಿದೆ! ತಪನ ಮೂರಿಯತಾಂಟಿದಾಗಳ್ ಎಂದರೆ? ಏನೋ ಅರಿಸಮಾಸ ಆಗಿದೆಯಲ್ಲ..

      • ತಪನ – ತಾಪ
        ಮೂರಿ – ಬಾಯಿ/ಮೂತಿ
        ತಾಂಟಿದಾಗಳ್ – ಅಪ್ಪಳಿಸಿದಾಗ/ಹೊರಹೊಮ್ಮಿದಾಗ

        ಅರಿಸಮಾಸವಾಗುವುದೇ?

        • ತಪನಮೂರಿ ಅರಿಸಮಾಸ. ತಪನ ಪದವನ್ನು ಸ್ವತಂತ್ರವಾಗಿ ಉಪಯೋಗಿಸಿದ್ದರೆ ತಪನಂ ಎಂದು ಆಗಬೇಕು.

          • ನೀಲಕಂಠರೇ, ಧನ್ಯವಾದಗಳು. ಸವರಿದ್ದೇನೆ. ಸರಿಯಿದೆ ಎಂದು ಭಾವಿಸುತ್ತೇನೆ.

    • ಕಾರ್ತಿಕ್ ಬಹಳ ಚೆನ್ನಾಗಿದೆ

  2. ಹಿಮವು ತುಸು ಕರಗಿ ನದಿಯಾಗಿ ಹರಿಯುವುದು ಬೇಸಗೆಯಲ್ಲಿ – March, April, Mayಗಳಲ್ಲಿ
    ಕಾಲಂ ಹಿಮರ್ತ್ತುವೊಳು ಮೇಣದರತ್ತಮಿತ್ತಂ
    ಚಾಲಕ್ಕಮಾಸ್ಪದಮದೆಲ್ಲಿಹುದೈ ಹಿಮಕ್ಕಂ?
    ಫಾಲಾಕ್ಷನಕ್ಷಿತಪತುಲ್ಯಮುಹೂರ್ತ(season)ದೊಳ್ ಕೇಳ್
    ಕೈಲಾಸ May ಕುಳಿರಿ(=ಬಿಸಿಲಿ)ನೊಳ್ ಕರಗಿರ್ದುದಲ್ತೆ||

    • ಕುಳಿರ್ ಎಂದರೆ ಚಳಿ ಎಂದರ್ಥವಲ್ಲವೇ?
      ಕುಳಿರ್ಗಾಳಿ – ತಣ್ಣನೆಯ ಗಾಳಿ..

      • ಹೌದು. ಅಲ್ಲಿರುವುದು ಶೀತ-ಅತಿಶೀತಗಳೆಂಬೆರಡೇ ಕಾಲಗಳು. ಹಿಮವು ಅತಿಶೀತದಲ್ಲಿ ಘನೀಭೂತವಾಗುತ್ತದೆ, ಶೀತದಲ್ಲಿ ಕರಗುತ್ತದೆ!

    • ಫಾಲಾಕ್ಷನಕ್ಷಿತಪತುಲ್ಯಮುಹೂರ್ತ ಎನ್ನುವ ಪ್ರಯೊಗ ಚೆನ್ನಾಗಿದೆ ಪ್ರಸಾದು

  3. ಫಾಲಾಕ್ಷನಿಂ ಭಸಿತಗೊಂಡಿಹ ಮಾರನಂದಂ!
    ಪೇಳಲ್ಕೆ ಸಲ್ಗೆ?ಶಿಶಿರಾಂಘ್ರಿಗೆ ಸಿಲ್ಕಿ ,ಮರ್ತಂ
    ಶಾಲೀನವೈಭವದೆ ಗೋಚರಮಪ್ಪುವೀ ಭೂ-
    ಕೈಲಾಸಮೇ ಕುಳಿರಿನೊಳ್ ಕರಗಿರ್ದುದಲ್ತೇ!!

    (ಹಸಿರಿನ ವೈಭವದಂತೇ ತೋರಿದ ಭೂಮಿಯ ಆನಂದವು ,ಚಳಿಯಲ್ಲಿ ಮಾಯವಾಯಿತಲ್ಲವೇ)

    • ಚೆನ್ನಾಗಿದೆ, ಆದರೆ ಮೊದಲ ಹಾಗೂ ಕಡೆಯ ಪಾದಗಳಲ್ಲಿ ಒಂದು ಲಘು ಕಡಿಮೆಯಾಗಿದೆ.

    • ಹೀಗೆ ಸವರಬಹುದೇನೋ –

      ಫಾಲಾಕ್ಷನಿಂ ಭಸಿತಗೊಂಡನೆ ಮಾರನಂದಂ!
      ಪೇಳಲ್ಕೆ ಸಲ್ಗೆ?ಶಿಶಿರಾಂಘ್ರಿಗೆ ಸಿಲ್ಕಿ ,ಮರ್ತಂ
      ಶಾಲೀನವೈಭವದೆ ಗೋಚರಿಸಿರ್ಪುದೀ ಭೂ-
      ಕೈಲಾಸಮೇ ಕುಳಿರಿನೊಳ್ ಕರಗಿರ್ದುದಲ್ತೇ!!

    • ಶಿಶಿರಾಂಘ್ರಿಗೆ ಸಿಲ್ಕಿ , ಭೂಕೈಲಾಸಮೇ… ಬಹಳಚೆನ್ನಾದ ಪೂರಣ

  4. ಮೊನ್ನೆಯ ಆಶುಘೋಷ್ಟಿಯಲ್ಲಿ ನನ್ನೆರಡು ಪರಿಹಾಗಳು ಇಂತಿದ್ದವು..

    ಬೋಳಾಗಿರಲ್ ಧರೆಯೊಳೇ ತರುವಿಲ್ಲದಾಗಳ್
    ಕಾಲಂಗಳೇ ಬದಲಿಸಲ್ ವಿಪರೀತಮಾಗಳ್
    ಮಾಲಿನ್ಯದಿಂದೆ ಮುಸುಕಾಗಿರಲೆಲ್ಲು ನೋಡೀ
    ಕೈಲಾಸಮೇ ಕುಳಿರಿನೊಳ್ ಕರಗಿರ್ದುದಲ್ತೇ

    ಕೋಲಾಹಲಂ  ಮಥನಕಾಲದೆ ಪೆರ್ಚಿಸಲ್ಮೇಣ್
    ಫಾಲಾಕ್ಷನೊರ್ಮೆಲೆಯೆ ಮುನ್ನಡೆದಿರ್ಪನೀಗಳ್
    ಹಾಲಾಹಲಂ ಕುಡಿಯಲಳ್ಕಿನೊಳಿತ್ತ ಬೆರ್ಚಲ್
    ಕೈಲಾಸಮೇ ಕುಳಿರಿನೊಳ್ ಕರಗಿರ್ದುದಲ್ತೇ

  5. Though Shiva stayed composed in the numbing chill of Kailasa, he was thawed by Parvati’s penance.
    ನೀಲಾಂಬರಾಂತಿಕ(near)ದೊಳೊರ್ವನೆ ಶಾಂತಿಯಿಂದೇಂ
    ಆಲೋಕಬದ್ಧಯಮದೊಳ್(in dhyana eyes closed) ತೊಡಗಿದ್ದುಮಿದ್ದುಂ ಕೈಲಾಸಮೇ ಕುಳಿರಿನೊಳ್!
    ಕರಗಿರ್ದುದಲ್ತೆ ಫಾಲಾಕ್ಷಮಾನಸಮಪರ್ಣೆಯ ಕೃಚ್ಛ್ರಕಂ ತಾಂ||

    • ಐಡಿಯಾ ಬಹಳಚೆನ್ನಾಗಿದೆ, ಫಾಲಾಕ್ಷಮಾನಸಮಪರ್ಣೆಯ ಎನ್ನುವಲ್ಲಿ ಏನೋ ಟೈಪೋ ಅದಂತಿದೆ

      • ಇಲ್ಲ. ಫಾಲಾಕ್ಷಮಾನಸಂ ಅಪರ್ಣೆಯ (ಪಾರ್ವತಿಯ) ತಪಸ್ಸಿಗೆ…

  6. ಸಾಲಂಕೃತಂಗೊಳದದೆಂದು, ವಿರಾಗಿಯಂತೇ
    ಕಾಲಂಗಳಿಂದೆ ಧೃಡ ಚಿತ್ತದೆ ನಿಂದಿರಲ್ಕಾ
    ಕೈಲಾಸಮೇ!ಕುಳಿರಿನೊಳ್ ಕರಗಿರ್ದುದಲ್ತೇ,
    ಕಾಲಕ್ಕೆ ಬಾಗದೆದೆಯೀಶನ , ಭಕ್ತಿಗಂ ಹಾ!

    (ವಿರಾಗಿಯಂತೇ ಕೈಲಾಸ ನಿಂದಿರ್ದರೂ,ಕಾಲವನ್ನು ನೋಡದೀಶನೆದೆಯೇ ಭಕ್ತನ ಭಕ್ತಿಗೆ ಕರಗಿತು,ಕುಳಿರಿನಲ್ಲೇ!)

    • ಚೆನ್ನಾಗಿದೆ ಸಹೋದರಿ

      • ಧನ್ಯವಾದಗಳು 🙂 ನಿಮ್ಮ ಪದ್ಯವೂ ಬಹಳ ಚೆನ್ನಾಗಿದೆ.

    • ಕಾಲಕ್ಕೆ ಬಾಗದೆದೆಯೀಶನ , ಭಕ್ತಿಗಂ ಹಾ! ಎಂಬಲ್ಲಿ ಬರೆದಲ್ಲಿ comma ಕಂಡರೂ ಓದುವಾಗ ಅನ್ವಯಕ್ಲೇಶವಾಗುತ್ತದೆ. ಈಶನ ಭಕ್ತಿಗಂ ಹಾ ಬಾಗದೆದೆ ಎಂಬಂತೆ. ಈ ರೀತಿ ತಿದ್ದಬಹುದು –

      …….. …….. ಕರಗಿರ್ದುದಲ್ತೇ
      ಫಾಲಾಕ್ಷನೆರ್ದೆ ನಿಜಭಕ್ತಿಗೆ, ಕಾಲಕಲ್ಲಯ್

  7. ಚೌಲಂಗೊಳುತ್ತೆ ಬರಗೆಟ್ಟಿಹುದಾವ ಪಕ್ಷಂ?
    ಬಾಲಾಂತದೊಳ್ ವಿಷಮಯೋರಗಮಾವುದೈ ತಾನ್?
    ಫಾಲಾಕ್ಷನೆಲ್ಲಿಹನು? ಬಾಯೊಳು (Icecream)ಬರ್ಫದಾಯ್ತೇಂ?
    (ಕಾಂಗ್ರೆಸ್)ಕೈ. ಲಾಸಮೇ. ಕುಳಿರಿನೊಳ್. ಕರಗಿರ್ದುದಲ್ತೆ.
    (ಲಾಸ=ಹಲ್ಲಿ)

    • :):)

    • ಹಹ್ಹಾ, ಅದ್ಭುತವಾಗಿದೆ. ದೊಡ್ಡ ನಮಸ್ಕಾರ ನಿಮಗೆ 🙂 ನಿಮ್ಮ ಸೂಕ್ಷ್ಮಬುದ್ಧಿಯಲ್ಲಿ ಒಂದಿನಿತಾದರೂ ನನಗಿದ್ದಿದ್ದರೆ…

      • ಧನ್ಯವಾದಗಳು. ಚಂಜ್ಗೊಂದ್ಗಂಟೆ ಟ್ಯೂಶನ್ನಿಗ್ಬನ್ನಿ. ಹ್ಹಹ್ಹ. ನಿಮ್ಮ ಪದಪ್ರೌಢಿಯಲ್ಲಿ ಒಂದಿನಿತಾದರೂ ನನಗಿದ್ದಿದ್ದರೆ…

        • ವಿದ್ಯಾರಣ್ಯಪುರದಿಂದ ಜಯನಗರಕ್ಕೆ ದಿನಾ ಮುಂಜಾನೆ ಸಂಜೆ ಅರ್ಧರ್ಧ ಗಂಟೆ ಟ್ಯೂಶನ್ಗೆ ಬನ್ನಿ 🙂

          • ಎಷ್ಟು ದಿನ? ಸರಿಯಾಗಿ ಯೋಚಿಸಿ ಉತ್ತರಿಸಿ.

    • ಈ ಪರಿಹಾರಕ್ರಮವನ್ನು ಏನೆನ್ನುತ್ತಾರೆ?

      • ಗೊತ್ತಿಲ್ಲ. ಹಿಂದೊಮ್ಮೆ ಇದೇ ರೀತಿ ಪರಿಹಾರ ಮಾಡಿದ್ದಿರಿ. ಕುಂತೀಸುತೋ ರಾವಣ ಕುಂಭಕರ್ಣಃ ಇದ್ದಂಗಿದೆ.

  8. ಬಾಲೇಂದು ಮೇಣ್ ತ್ರಿಪಥಗಾಶ್ರಯಮಪ್ಪ ಶೀರ್ಷ-
    ಸ್ಥೂಲಾಂಕಮೀಶನ ಲಲಾಟದಭಸ್ಮಶೌಕ್ಲ್ಯಂ
    ಪ್ರಾಲೇಯಶುಭ್ರತೆಯನಣ್ಕಿಸೆ ನಾಣ್ಚಿ ಭೂಭೃ-
    ತ್ಕೈಲಾಸಮೇ ಕುಳಿರಿನೊಳ್ ಕರಗಿರ್ದುದಲ್ತೇ

    ಶಿವನು ಜಟೆಯಲ್ಲಿ ಧರಿಸಿದ ಗಂಗೆಯ, ಬಾಲೇಂದುವಿನ, ಹಾಗು ಹಣೆಯ ಭಸ್ಮದ ಬೆಳ್ಪಿನ ಮುಂದೆ ತನ್ನ ಮಂಜಿನಬೆಳ್ಪು ತಗ್ಗಿ ಕೈಲಾಸ ಪರ್ವತವು ನಾಚಿಕೆಯಿಂದ ಶೀತದಲ್ಲೂ ಕರಗಿತು

  9. ಲೀಲಾಸ್ಮರಂಗೆಡೆಯನೀಯದೆ ಚಿತ್ತದೆಂದುಂ,
    ಶಾಲೀನ ಸೃಷ್ಟಿಗ ವಸಂತನುಪೇಕ್ಷಿಸುತ್ತಾ
    ಲೋಲಾಕ್ಷಿಯನ್ನಿನಿತು ನೋಳದ ಪಾಂಗಿಗಂದಾ
    ಕೈಲಾಸಮೇ ಕುಳಿರಿನೊಳ್ ಕರಗಿರ್ದಲ್ತೇ!!

  10. ಪಾಲಬ್ಧಿಯಂದದ ಸಿತಚ್ಛವಿಯಂಗೊಳ್ಳುತ್ತುಂ
    ಲಾಲಿತ್ಯದಿಂ ನಲಿವ ಗಂಗೆಯನೀಕ್ಷಿಸುತ್ತುಂ
    ಫಾಲಾಕ್ಷಕೇಶಘನದೊಳ್ !,ಪರಿವಾಸೆಯಿಂದಾ
    ಕೈಲಾಸಮೇ ಕುಳಿರಿನೊಳ್ ಕರಗಿರ್ದುಲ್ತೇ!!

    (ಶಿವನ ಜಟೆಯಲ್ಲಿ ಗಂಗೆಯನ್ನು ಕಂಡು,ತಾನೂ ಹರಿಯ ಬೇಕೆಂಬಾಸೆಯಿಂದ ಕೈಲಾಸವು ಕರಗಿತು)

    • ಒಳ್ಳೆ ಕಲ್ಪನೆ ಮೇಡಮ್. ಮೊದಲ ಸಾಲಿನಲ್ಲಿ ಒಂದು ಮಾತ್ರೆ ತಪ್ಪಿದೆ. ಗಂಗೆಯನಂತೆ ಕಂಡಾ- ಅಂದರೆ ಏನು? ಪರಿವಾಸೆಯಿಂದಂ ಮಾಡಿದರೆ ಆ ಕಾರ ತೆಗೆಯಬಹುದು.
      ಪಾಲಬ್ಧಿಯಂದದ ಸಿತಛ್ಛವಿಯಂಗೊಳುತ್ತುಂ
      ಲಾಲಿತ್ಯದಿಂ ನಲಿವ ಗಂಗೆಯನೀಕ್ಷಿಸುತ್ತುಂ

      • ಇನ್ನೊಂದು ಸಾಲನ್ನೂ ಬರೆದುಬಿಟ್ಟಿದ್ದಿದ್ದರೆ ನಿಮ್ಮದೇ ಪೂರಣವೆಂದೆನ್ನಬಹುದಿತ್ತು! ತಿದ್ದುಪಡಿಗೆ ಧನ್ಯವಾದಗಳು!
        ಪರಿವಾಸೆಯಿಂದ+ಆ ಕೈಲಾಸಮೇ

  11. ಕಾಲತ್ರಯಂ, ಬದಿಯೆ ಪಾರ್ವತಿ, ಮೇಲೆ ಗಂಗಾ
    ಜಾಲಂ ಗಡಾ, ಕುವರರೀರ್ವರ ಮಧ್ಯೆ ಚಂದ್ರಂ ।
    ಕಾಲಾಂತಕಂ ಬಿಡದೊಡಂ ಕುಳಿತಿರ್ದೊಡಂತಾಂ
    ಕೈಲಾಸಮೇ ಕುಳಿರಿನೋಳ್ ಕರಗಿರ್ದುದಲ್ತೇ ।।

    ಕುಳಿರ್ =ಕುಳಿತುಕೊಳ್ಳು
    ಸದಾಕಾಲವೂ ಬಿಡದೆ ಶಿವನು ತನ್ನ ಸಂಸಾರ(ಗೌರಿ,ಗಂಗೆ,ಇಬ್ಬರು ಮಕ್ಕಳು,ನಡುವೆ ಚಂದ್ರ !!)ದೊಡನೆ ಕುಳಿತಿರಲು “ಕೈಲಾಸ”ಪರ್ವತವೇ ಸವೆದಿದೆಯೇ?!

    • ದಣಿದೆಯೇಂ ಕೈಲಾಸವಿನ್ನು ಬಿಡು ದುಗುಡಮಂ
      ತಿಣುಕದಿರು ಶಿವಕುಟುಂಬದ ಭಾರದಿಂ|
      ಪ್ರಣಮಿಪೆನು ಕಳುಹಿಸವರನ್ನೆನ್ನ ವಾಸಕಂ
      ಹೊಣೆಯವರ ಹೊರುವನೀ ಹಾದಿರಂಪಂ||

    • ಕುವರರಿರ್ವರ ಮಧ್ಯೆ ಯಾಕೆ ಬಂದ ಚಂದ್ರ?

      • ಆ ತೋಳಲ್ಲೊಬ್ಬ ಈ ತೋಳಲ್ಲೊಬ್ಬಮಗನನ್ನು ಎತ್ತಿಕೊಂಡಿದ್ದ ಆಗ. ತಲೆಮೇಲೆ ಚಂದ್ರನಿದ್ದ. ಇಲ್ಲದ ಉಸಾಬರೀನ್ರೆಪ ನಿಮ್ದು!

    • ಚೆನ್ನಾಯ್ತು ! “ಉಷಾಬರಿ” – ನಿಮ್ಮಿಬ್ಬರ “ಹಾದಿರಂಪ” !! ಧನ್ಯವಾದಗಳು.
      ಚಿಕ್ಕಂದಿನಿಂದ ಮನದಲ್ಲಿ ಅಚ್ಚೊತ್ತಿರುವ ಕೈಲಾಸದ ಶಿವನ “ಫ್ಯಾಮಿಲಿ ಫೋಟೊ”ದ ವರ್ಣನೆಯ ಪ್ರಯತ್ನ. “ಕುವರರೀರ್ವರು ಮಧ್ಯೆ ಚಂದ್ರಂ” ಎಂದರೆ ಸರಿಯಾಗುದೇನೋ ?
      ಕುಳಿರಿನೊಳ್ = ಕುಳಿತುಕೊಳ್ಳುವಿಕೆಯಲ್ಲಿ ಎಂಬ ಅರ್ಥದಲ್ಲಿ ಬಳಸಿರುವುದು ಸರಿಯಾದಲ್ಲಿ – ಹೀಗೊಂದು ಪೂರಣ (ವಿನೋದವಾಗಿ)

      ಕೈಲಾಸ – ಕಾಯಕಮದೆಂಬರು ಬಲ್ಲವರ್ಗಳ್
      ಭೂಲೋಕದೊಳ್ ನರಗೆ ಕರ್ಮಮಗೈಯುದಲ್ತೇ !
      ಆಲಸ್ಯದಿಂ ಕೊಳದೆ ವಿಶ್ರಮಿಸಿರ್ಪೊಡಂತಾಂ
      “ಕೈಲಾಸ”ಮೇ ಕುಳಿರಿನೊಳ್ ಕರಗಿರ್ದುದಲ್ತೇ !!

      “ಕಾಯಕವೇ ಕೈಲಾಸ”ವೆಂಬರು – ಕರ್ಮವನ್ನೆಸಗದೆ ಆಲಸ್ಯದಿಂದ ಕೈಕಟ್ಟಿ ಕುಳಿತಿರಲು, ಕಾಯಕ ಸೊರಗುವುದಲ್ಲವೇ ?

  12. ಬಾಲಾರ್ಕನಿಂ ಹಿತದ ಕಜ್ಜಮನೀಕ್ಷಿಸುತ್ತುಂ
    ನೀಲೋತ್ಪಲಂ ಕರಗಳಂ ಮುಗಿದಿರ್ದುದಲ್ತೇ!
    ಹಾಲಾಹಲಂ ಕುಡಿದನೊಳ್ಳಿತಿಗೆಂದೆ,ಸಾಂಬಂ
    ಕೈಲಾಸಮೇ ಕುಳಿರಿನೊಳ್ ಕರಗಿರ್ದುದಲ್ತೇ!!

    (ಒಳ್ಳೆಯ ಕೆಲಸವನ್ನು ಕಂಡ ನೈದಿಲೆಯ ಮತ್ತು ಕೈಲಾಸದ ಮನಸ್ಸೂ ಕರಗಿದವು)

  13. ವಾಲುತ್ತೆ ತಾಂಡವಿಸೆ ರೌದ್ರದೆ ನೀಲಕಂಠಂ,
    ಡೋಲಾಯಮಾನಮಿರೆ ಘಾತಮನೊಂದಿ ಬೆಟ್ಟಂ,|
    ಸೋಲಿಂದೆ ಬೆರ್ಚಿ ಬೆಮರಲ್, ನಡುಗುತ್ತೆ ನೋವಿಂ,
    ಕೈಲಾಸಮೇ ಕುಳಿರಿನೊಳ್ ಕರಗಿರ್ದುದಲ್ತೇ ? ||

    • ಚೆನ್ನಾಗಿದೆ ಮೇಡಮ್! ವಿಶೇಷತಃ ನನ್ನ ಹೆಸರು ಬಂದಿದೆ 🙂

      • ಧನ್ಯವಾದಗಳು ನೀಲಕಂಠರೆ . ನೀವು ಕವಿವರರು ಮಾತ್ರವಲ್ಲದೆ ನೃತ್ಯಪರಿಣತರೂ ಹೌದೆನ್ನುವುದು ನನ್ನ ಪದ್ಯದಿಂದಾಗಿ ಎಲ್ಲರಿಗೂ ತಿಳಿಯಿತು 🙂

    • ಕುಣಿದು ಕಾಲು ದಣಿದಾಗ ಊತವನ್ನು ತಗ್ಗಿಸಲು ಅಲ್ಲಿ ಬರ್ಫಿನ ಗಡ್ಡೆಯನ್ನು ಇರಿಸಬೇಕು. ಇದು ಶಿವನಿಗೆ ಗೊತ್ತಿದ್ದರಿಂದಲೇ ಶೀತಪರ್ವತದ ಮೇಲೆ ನೃತ್ಯಗೈದ. ಅಷ್ಟಲ್ಲದೆ ಅವನನ್ನು ವೈದ್ಯನಾಥ ಎನ್ನುವರೆ?
      ಏಕೆಂಬಿರೌ ಶಿವನನೆಂಬರು ’ವೈದ್ಯನಾಥಂ’?
      ಲೋಕಂ ಸುಖಿಪ್ಪವರೆಗಂ ಕುಣಿದಾಗಳಾಗಳ್|
      ಬೇಕಲ್ತೆ ಪೀಡಹರ ವಿಗ್ರಹ(body)ಮರ್ದಮೊಂದೋ(massage)
      ನಾಕಾರೆ ಬರ್ಫಿನ ಲವಂಗಳು(pieces) ಊತಕೊಂದೋ||

      • ಡಾ| ರಂಪಣ್ಣನವರಿಗೆ ಧನ್ಯವಾದಗಳು. ವಿಗ್ರಹಮರ್ದಮೊಂದೋ, ಊತಕೊಂದೋ… ಯಾಕೋ ಅರ್ಥವಾಗಲಿಲ್ಲ.

  14. ಜ್ವಾಲಾವಿಲೋಲನೊಳವೊಕ್ಕೊಡೆ ಪತ್ನಿ ತಾಪ-
    ಜ್ವಾಲಾಹತಪ್ರಮಥನಾಥನ ಚಿತ್ತವಿದ್ರಾ-
    ವಾಲೀನವೃತ್ತಿಗಳನೀಕ್ಷಿಸಿ ದೈನ್ಯದಿಂದಂ
    ಕೈಲಾಸಮೇ ಕುಳಿರಿನೊಳ್ ಕರಗಿರ್ದುದಲ್ತೆ

    ಜ್ವಾಲಾವಿಲೋಲ – ಅಗ್ನಿ, ಪತ್ನಿ – ಈ ಸಂದರ್ಭದಲ್ಲಿ ಸತಿ, ದಾಕ್ಷಾಯಣಿ, ಪ್ರಮಥನಾಥ – ಶಿವ, ಚಿತ್ತವಿದ್ರಾವಾಲೀನವೃತ್ತಿ – ಮನಸ್ಸನ್ನು ಕರಗಿಸುವಂಥ ವರ್ತನೆ.

  15. ಕಾಳೋರಗಂಗಳನೆ ಪೊತ್ತಿಹೆಯೆಂದು ವಿಂಧ್ಯಂ,
    ನೀಲಾಂಬರಕ್ಕೆಸೆದು ಹಾ!ಬಿರುಸಾದೆಯೇಂ ನೀಂ!
    ಫಾಲಾಕ್ಷಸೌಧಮಿರುತುಂ ಮೆದುವೆರ್ದೆಯಿಂದಾ
    ಕೈಲಾಸಮೇ ಕುಳಿರಿನೊಳ್ ಕರಗಿರ್ದುದಲ್ತೇ!!
    (ಹೇ ವಿಂಧ್ಯವೇ,ಕಾಳೋರಗವನ್ನು ಹೊತ್ತ ಮಾತ್ರಕ್ಕೆ ಜಂಬ ಪಡುತ್ತಿರುವೆಯೇ! ಶಿವನ ಸೌಧಮಾದ ಕೈಲಾಸಮೇ ಕರಗುವಾಗ(ಕುಳಿರಿನೊಳ್ ಎಂಬುದನ್ನು ವಿಪರೀತ ಸಂದರ್ಭ ಎಂದುಕೊಳ್ಳಬಹುದೇನೋ))

  16. ಕೈಲಾಗದಜ್ಜ ಮಗುವಂ ಪೆಗಲಲ್ಲಿ ಪೊತ್ತಂ
    ಮೈಲಾರಯಾತ್ರೆ ಸವೆಸಲ್ಕುರಿಬೇಗೆಯೊಳ್ ಕಂ
    ಡಾಲೋಕನಾಥನುಮೆಯಾಣ್ಮನ ಚಿತ್ತಸತ್ವಂ
    ಕೈಲಾಸಮೇ ಕುಳಿರಿನೊಳ್? ಕರಗಿರ್ದುದಲ್ತೇ ?

    • ಶಿವನ ಚಿತ್ತಸತ್ತ್ವಂ ಕುಳಿರಿನೊಳ ಕೈಲಾಸಮೇ? ಅಲ್ಲ, ಹಾಗಾಗಿ ಕರಗಿತು! ಚೆನ್ನಾಗಿದೆ. But…
      ಶಿವನನ್ನಿದೇಂ ಗೈದೆ! ಲೊಚಗುಟ್ಟುತಿಹ ಪಲ್ಲಿ!
      ಕವಗುಟ್ಟಿದನೆ ಬರಿದೆ ’ಅಯ್ಯೊಪಾಪಂ’|
      ಯುವತಿಯಂ (ಪಾರ್ವತಿ) ಬಿಟ್ಟಿತ್ತ ಬಂದನೇಂ ತಗ್ಗಿಸಲು
      ಭವಿಯ ಸಂಕಷ್ಟಮನ್ನಷ್ಟೊ ಇಷ್ಟೊ??

      • ಧರಿಸಿರಲರ್ಧದೇಹದೊಳು ಪರ್ವತಪುತ್ರಿಯನಾ ಮಹೇಶ್ವರಂ
        ಕರುಣೆಯ ತೋರಲೊರ್ವನೆ ಧರಾತಲಕಾಗಮಿಸಲ್ಕೆ ಸಾಧ್ಯಮೇಂ?
        ಉರಿಸುವ ತಾಪಮಂ ತಣಿಸಿ ಭಕ್ತನ ಯಾತ್ರೆಗೆ ಸೌಖ್ಯಮಿತ್ತನೈ
        ಕರಗಿದ ಚಿತ್ತಮೇ ಪರಿಯಿತಂದು ಶಿರಸ್ಸಿನಿನಿಂದುಕಾಂತಿಯೇ

        • clap clap. Wouldn’t ಸೌಖ್ಯmaniತ್ತನೈ be better? (Of course, it calls for arithmetical correction)

          • “… ತಣಿಸಿ ನಂಬಿಗೆ ಸೌಖ್ಯಮನಿತ್ತನೈ ದಿಟಂ” ಎನ್ನಬಹುದೇನೊ. ಆದರೆ ವಿಭಕ್ತಿಪಲ್ಲಟ ಕನ್ನಡದಲ್ಲಿ ನಡೆಯುತ್ತಲೇ ಇರುತ್ತಲ್ಲ, ಹಾಗಾಗಿ ಪರವಾಗಿಲ್ಲ 🙂 ಹಾಗೆಯೆ “ಧರಿಸಿರಲರ್ಧ ದೇಹದೊಳು ಭೂಧರಪುತ್ರಿಯನಾ ಮಹೇಶ್ವರಂ” ಎಂದಾಗಿಸಿಕೊಂಡರೆ ಸೊಗಸಾಗಿರುತ್ತೆ. ಥ್ಯಾಂಕ್ಸ್.

  17. ಕೈಲಾಸಮೇ!ಕುಳಿರಿನೊಳ್!! ಕರಗಿರ್ದುದಲ್ತೇ
    ಪಾಳಾದ ಬುಧ್ಧಿಯಕಟಾ!!! ಜರೆಯೋಳಿ ಸಂದಾ
    ಭೂಲೋಕಮಂ ಗಡಗುಡಿಪ್ಪ ರವಂ,ನಿಜಂ,ಹಾ!
    ನೀಲಾಂಬರಂ ಸರಿಯೆ,ಗೇಹಮದಾಯ್ತು ಶಾಂತಂ!!

    (ಚಳಿಗಾಲದಲ್ಲಿ ಕೈಲಾಸಯಾತ್ರೆಗೆ ಹೊರಡುವೆವು ಎಂಬ ಹೇಳಿಕೆಗೆ ಹಿರಿಯರಿಂದ ಸಿಕ್ಕ ಜರೆತವಿದು!)

    • Fine imagination. This is how the samasyApAda has to be adapted considering that it doesn’t proffer much choices. Luckily weekend is around the corner!

  18. (ಕಾಂಚನಾ & ಪ್ರಸಾದ್ ಸರ್ ರವರ ಪೂರಣಗಳಿಂದ ಸ್ಫೂರ್ತಿಗೊಂಡು)

    ಕೈ “ಲಾಸ”ಮೇ? ಕುಳಿರಿನೊಳ್ ! ಕರಗಿರ್ದುದಲ್ತೇ –
    ಕಾಲಂದುಕಂ, ಗಡಗಡಾ ನಡುಕಂ ಗಡಾ ಮೇಣ್
    ಭೂಲೋಕದೊಳ್ ಕುಣಿಯಲಾಗುದೆ ರುದ್ರನೋಲ್ ಕಾಣ್
    “ಕೈಲಾಸಮೇ ಕುಣಿತದೊಳ್ ನಡುಗಿರ್ದುದಲ್ತೇ” !!

    ಲಾಸ = ಲಾಸ್ಯ
    (ಕಾಲ್ಗೆಜ್ಜೆಯೇ ಮರುಗುತ್ತಿರುವ ಈ ಗಡಗಡ ಚಳಿಯಲ್ಲಿ – (ಕೈಲಾಸ ಪರ್ವತವೇ ನಡುಗುವಂತೆ ಕುಣಿಯುವ) “ರುದ್ರ”ನಂತೆ ಕುಣಿಯಲು ಸಾಧ್ಯವೇ ?!!)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)