Sep 112016
 

ಈ ಸಪ್ತಾಹದ ವರ್ಣನೆಯ ವಸ್ತು “ಕಾವೇರೀ ನದಿ”

  48 Responses to “ಪದ್ಯಸಪ್ತಾಹ ೨೧೯: ವರ್ಣನೆ”

  1. ಕಾವೇರೀಜಲಮಾದಾಯ, ಕಲಶೇ ನಿಕ್ಷಿಪ್ಯ
    ಶರ್ಕರಂ ಸಿಂಚಿತ್ವಾ
    ಜಂಬೀರಫಲಂ ಸಂಪೀಡ್ಯ ತದ್ರಸಂ ಮಿಲಿತ್ವಾ
    ಏಲಾಚೂರ್ಣಂ ಸಂಯುಜ್ಯ
    ಚಷಕಪೂರ್ಣಂ ಪಾನೀಯಂ ಪಂಕೇ ನಿಷಿಚ್ಯ
    ಶಿಷ್ಟಂ ಪಾನೀಯಂ ಪೀತ್ವಾ
    ಪ್ರಸ್ರಾವಣಾರ್ಥೇ ಬಹಿರ್ದೇಶಂ ಗಚ್ಛಾಮಿ||
    (ಜನಿವಾರಂ ಕಾದ್ಲೆ ಪೋಟ್ಕೊಣುಣುಽಽಽ)

  2. ಮೊನ್ನೆ ತಾನೇ ಇದೇ ವಿಷಯದ ಬಗ್ಗೆ FB ನಲ್ಲಿ ಬರೆದ ಪದ್ಯ…

    ನೆಲೆಸಿರ್ಪಳ್ ಕಾವೇರಿ ಸ-
    ಕಲ ಕನ್ನಡಿರ್ಗೆ ಜೀವನವ ನೀಡುತ್ತೀ|
    ನೆಲಮಂ ತೊರೆದಿರ್ಪಳ್ ತ-
    ಬ್ಬಲಿಯಾಗಿಸೆ ತನ್ನ ಮಕ್ಕಳೆಲ್ಲರನಕಟಾ|

  3. ಕಾವೇರೀಪ್ರೋಲ್ಲಸಿತಜಲಮೀ ಲೋಕಚಿತ್ತಕ್ಕೆ ನಲ್ವಿಂ-
    ದೀವೊಲ್ವಂ ಬಿಟ್ಟುಳಿದು ಬರಿದೇ ಕಿಚ್ಚನೀಯುತ್ತೆ ಸಾರ್ಗುಂ
    ಕಾವೇರಿರ್ಕುಂ ಜಲದಿನೆ ಜನಿಪ್ಪಾ ಕಡಲ್ಗಿಚ್ಚಿನಂದಂ
    ಜೀವಾಧಾರಪ್ರಕೃತಿಯಿವಳಾ ವೈಪರೀತ್ಯಂ ಗಡಲ್ತೇಂ

  4. ಬೊಮ್ಮನಾ ಮಗಳಿವಳು ಮುನಿಕವೇರನ ತನುಜೆ
    ನಮ್ಮನೆಲ್ಲರ ಸಲಹುತಿರುವಮ್ಮನಿವಳು
    ತಮ್ಮ ಸೊತ್ತಿವಳೆನುತ ತಮಿಳುಜನ ಮೆರೆಯುತಿರೆ
    ಒಮ್ಮತದಿ ಹೋರಾಡುತಿವಳನುಳಿಸಿ

    ಕಾವೇರಿ ಕವೇರಮುನಿಯ ತನುಜಾತಳೋ ಅಲ್ಲವೋ ಎಂದು ಸರಿಯಾಗಿ ಗೊತ್ತಿಲ್ಲ. ಅಲ್ಲವಾದರೆ ಮೊದಲಸಾಲಿನ ‘ತನುಜೆ’ಯನ್ನು ಪುತ್ರಿ ಅಂತ ಮಾಡಿಕೊಳ್ಳಬಹುದೇನೋ. ತಪ್ಪುಗಳಿದ್ದರೆ ತಳಿಸಿ,ತಿದ್ದಿ.

    • ಚೆನ್ನಾಗಿದೆ. ತನುಜೆ, ಪುತ್ರಿ ಎರಡೂ ಒಂದೇ.ಅದಲ್ಲದೆ, ಸಂಧಿ ಸಮಾಸ ಇರದ ಕಡೆ ದಯವಿಟ್ಟು ಮಧ್ಯದಲ್ಲಿ ಜಾಗೆ ಇಟ್ಟು ಬರೆಯಿರಿ.

      • ಧನ್ಯವಾದಗಳು.ತಿದ್ದಿದ್ದೇನೆ.ಈಗ ಆಗುತ್ತಿರುವ ಗಲಾಟೆ ನೋಡಿದರೆ ಈ ಪದ್ಯದ ಉತ್ತರಾರ್ಧವನ್ನು ಬದಲಿಸಬೇಕೆನಿಸುತ್ತಿದೆ.
        ಬೊಮ್ಮನಾ ಮಗಳಿವಳು ಮುನಿಕವೇರನ ತನುಜೆ
        ನಮ್ಮನೆಲ್ಲರ ಸಲಹುತಿರುವಮ್ಮನಿವಳು
        ಒಮ್ಮತದಿ ಬಾಳುತಿರಿ ಮಕ್ಕಳೆಲ್ಲರು ತಾಯ-
        -ನೆಮ್ಮದಿಯ ಕದಡದಿರಿ ಮತಿಯನಳಿದು

        ಮತಿಯನಳಿದು~ ಬುದ್ಧಿ ಕಳೆದುಕೊಂಡು ಎನ್ನುವ ಅರ್ಥದಲ್ಲಿ ಬರೆದಿದ್ದೇನೆ.ತಪ್ಪಿದ್ದರೆ ದಯವಿಟ್ಟು ತಿಳಿಸಿ

  5. ಛಲಮಂ ಗೈದು ಪೊರಕ್ಕೆ ಬಂದೆಯ ಕಣೌ ಕಾವೇರಿ ನಿನ್ನಾಣ್ಮನೊಳ್
    ಸಲುವೆಂ ಲೋಗರ ಜೀವಕೆಂದು ನಿರುತಂ, ಕಾಣಲ್ಕೆ ನೀಡಿರ್ಪೆಯೇಂ
    ಛಲಮಂ ಮತ್ತೆ ಜನಕ್ಕೆ ನಿನ್ನ ಪಥದೊಳ್, ಕಾರ್ಯಂಗಳಾರಂಭಮಾ-
    ವೊಲವಿಂದಾದುದೊ ತದ್ವಿಧಂ ಫಲಮೆನಿಕ್ಕುಂ ಕಾರಣೌಪಮ್ಯದಿಂ

    ಕಾವೇರಿ, ನಿನ್ನ ಪತಿ ಅಗಸ್ತ್ಯನಲ್ಲಿ ಹಠ ಸಾಧಿಸಿ ಹರಿಯ ಬಂದೆಯಲ್ಲ, ಲೋಕಕ್ಕೆ ಸಲ್ಲುವಳಾಗುತ್ತೇನೆಂದು. ಆದರೇನು ಈಗ ಜನರಿಗೆ ಕೊಟ್ಟದ್ದು ಛಲವನ್ನೇ ತಾನೇ?! ಯಾವುದೇ ಕಾರ್ಯವನ್ನು ಗೈಯಲು ಆರಂಭಿಸುವ ರೀತಿಯೇ ಫಲದಲ್ಲಿಯೂ ಕಾಣಬರುತ್ತದೆ ಎಂಬುದು ದಿಟವಲ್ಲವೇ!

  6. ಕಾಕದ ರೂಪಿನಾ ಗಣಪನಿಂ ಮಹಿಯೊಳ್ ನೆಲೆಯಾದಳಾದ್ದರಿಂ
    ಶೋಕಮ ನೀಡಲಾ ಸುತನಿಗಮ್ ತವೆ ಬಿಜ್ಜೆಯನೀಯದಾಕೆಗಂ/
    ಲೋಕದೊಳೀಗಳಾ ಲಲಿತೆಯಂ ಸಲೆ ಕಾಂಬಲು ಶಕ್ಯಮಾಗದೇ
    ಆಕೆಯ ನಾಮದಿರ್ಪಳಿಗೆ ತಾಂ ಕೊಡುತಿರ್ಪಳು ಕಾಕಕೀರ್ತಿಯಂ //

    ಅಗಸ್ತ್ಯನು ಕಾವೇರಿಯನ್ನು ಕಮಂಡಲದಲ್ಲಿ ತೆಗೆದುಕೊಂಡು ಹೋಗುವಾಗ ಗಣೇಶನು ಕಾಗೆಯ ರೂಪದಲ್ಲಿ ಬಂದು ಅದನ್ನು ಚೆಲ್ಲಿದ್ದನೆಂಬ ಕಥೆಯನ್ನಾಧರಿಸಿ ಬರೆದದ್ದು. ಮೊದಲು ಬುದ್ಧಿ ಕಲಿಸಬೇಕಾಗಿರುವುದು ಅವನಿಗಲ್ಲ, ಅವನ ತಾಯಿಗೆ ಎಂದು ಆಕೆಯನ್ನು ಹುಡುಕಲಾಗದೆ ಈಗ ಅದೇ ಹೆಸರಿನವಳಿಗೆ ಅಪಕೀರ್ತಿಯನ್ನು ಕಾವೇರಿ ತರುತ್ತಿದ್ದಾಳೆ ಎಂಬರ್ಥದಲ್ಲಿ ಬರೆದಿದ್ದೇನೆ. ಉತ್ಪಲಮಾಲೆಯಲ್ಲಿ ಮೊದಲ ಪ್ರಯತ್ನ. ತಪ್ಪಿದ್ದಲ್ಲಿ ತಿದ್ದುತ್ತೀರೆಂಬ ಭರವಸೆಯಂತೂ ಇದ್ದೇ ಇದೆ .

    • Good attempt in utpalamaale. But meaning not clear. What is ಅದೇ ಹೆಸರಿನವಳಿಗೆ? Who is she?
      Few corrections – ಶೋಕಮ ನೀಡಲಾ – shOkamaneeyala, ಕಾಂಬಲು – kaamboDe, ಕೊಡುತಿರ್ಪಳು – kuDutirpa… (koDu is kuDu in haLagannada).

  7. ಧರೆಯ ದಾಹವನ್ನು ತಣಿಸೆ
    ಚರಣವಿಟ್ಟು ಮುದದೆ ಬಂದ
    ತರಳೆ ಜೀವ ಸರುವು ,ಬರಿದೆ ಕದನಕಾದಳೆ?
    ಮರುಳ ಜನದ ಹುಂಬ ರಾಜಕೀಯಕಾದಳೆ!

    ತನ್ನೊಳಿರ್ಪ ಜಲಮನತುಲ
    ನನ್ನಿಯಿಂದಲಿತ್ತರೇನು!
    ಚೆನ್ನರಾದ ತೃಪ್ತರನ್ನು ಕಾಣದಾದಳೆ!
    ಖಿನ್ನವಾದ ಮನುಜ ಲೋಕವನ್ನೆ ಕಂಡಳೆ!

    ಮೇಲುಕೀಳು ಭಾವಭರಿತ
    ಬೇಲಿಯನ್ನೆ ತೊಡೆದವಳ ವಿ
    ಶಾಲ ಹೃದಯವಿಂದು ಮಿಡಿವವೋಲದಾಯಿತೆ!
    ಪಾಲ ಕೊಡದೆ ಪುಳಿಯನೆಸೆದವೋಲದಾಯಿತೆ!

    ಇರುತೆ ಸೂರ್ಯ ಚಂದ್ರ ತಾರೆ
    ತರಣಗೈದು ಕಷ್ಟವನ್ನು
    ಮರಳಿ ಮಿನುಗುವಂದವಿನಿತು ಬಲಮನಿತ್ತಿತೆ!
    ಹರಿದು ಕುಣಿದು ನಲಿವುದಕ್ಕೆ ಕೆಳೆಯದಾಯಿತೆ!!

    • chennagide.. adare kelavu arigaLive 🙂
      idaava chhandassu?

      • ಖಂಡ ಭೋಗ ಷಟ್ಪದಿ(ಭಾಮಿನಿಯಲ್ಲಿರುವಂತೇ ) ಎನ್ನಬಹುದೇನೋ!
        ಕನ್ನಡ,ತಮಿಳರಂ ಬೆಸೆವ ಕಾವೇರಿಯರಿಯಾದೊಡೇಂ!

  8. ತಲಕಾವೇರಿಯೊಳು ಜನಿಸಿ
    ಬಲತಿರುಗಿ ನಡೆದಿಹೆಯೌ ತವರ ತೊರೆದುಂ ಮೇಣ್
    ಛಲದತ್ತೆಮನೆಯೊಳೆಡವ-
    ಟ್ಟೆಲೆ, ವರದಕ್ಷಿಣೆಯ ಕಾಟ ಸೆಳೆತರೆ ಜಲವಂ !!

    ಹೀಗೊಂದು “DO-ವರಿ” ಕೇಸ್

  9. ತೋಳಾನಿಸಿ ಬರೆ ನೆರೆ ಪೆಣ್
    ಕೀಳಾಗಿಸಿಯಬ್ಬೆ ಮಡಿಲ ಸಿಸು ತೊರೆವಂದಂ |
    ಬೇಳುವೆಯಿಂ ನೆರೆ ನಾಡಂ
    ಬಾಳಿಸಲೊಳ್ಕಿ ಕರುನಾಡ ತೊರೆದವಳಿವಳೇಂ.||

    ಕೆಲವೊಮ್ಮೆ ಬೇರೆಯ ಹೆಂಗಸರು ಕೈ ಚಾಚಿದರೆ ಅಮ್ಮನ ಮಡಿಲಿನಲ್ಲಿರುವ ಮಗುವೂ ಅಮ್ಮನನ್ನು ಬಿಟ್ಟು ಹೋಗುತ್ತದೆ. ಹಾಗೆಯೇ ಕಾವೇರಿಯೂ ಕೂಡ ಇರಬಹುದೇ.,

    • ಚೆನ್ನಾಗಿದೆ ರಾಮರೇ. ಕಂದದಲ್ಲಿ ಸಮಪಾದಗಳ ಮಧ್ಯದ ಗಣ ಸರ್ವಲಘುವಾದರೆ ನಂತರದ ಗಣವೂ ಸರ್ವಲಘುವಾಗಬಾರದು ಎಂದು ಗಣೇಶ್ ಸರ್ ಹೇಳಿದ್ದರು. ಆದರೂ ಮೊನ್ನೆ ಯಾವುದೋ ಒಂದು ಕಾವ್ಯದಲ್ಲಿ ಎರಡೂ ಗಣಗಳು ಸರ್ವಲಘುವಾದದ್ದನ್ನು ನೋಡಿದೆ. ಸ್ಪಷ್ಟಪಡಿಸಿಕೊಳ್ಳಿ, ತಿಳಿಸಿ.

      • ನಮಸ್ತೆ ನೀಲಕಂಠರೇ, ಪಂಪ ಭಾರತದ ಹಲವಾರು ಪದ್ಯಗಳಲ್ಲಿ ಈ ನಿಯಮವನ್ನು ಪಾಲಿಸಲಾಗಿಲ್ಲ…. ಆದರೂ ಸಮಪಾದದಲ್ಲಿ ಸರ್ವಲಘುವಿನ ಮುಂದೆ ಸರ್ವಲಘು ಬಂದಾಗ ಓದುವಾಗ ಕೊಂಚ ವ್ಯತ್ಯಾಸವಾದಂತೆ ತೋರುವುದು ಸುಳ್ಳಲ್ಲ..

        ನೆಗ಼಼ಳ್ದರಿಗನ ಸಾಹಸಮೊ
        ರ್ಮೆಗೊರ್ಮೆ ಕೆಲದವರ ಮಾತಿನೊಳ್ ತನ್ನ ಮನಂ |
        ಬುಗೆ ಮಂತ್ರಪದಕ್ಕುರ
        ಸುಗಿವಂತೆವೊಲಗಿದು ಸುಗಿದು ತಲೆಗರೆದಿರ್ಪಂ || ೭-೪೩

        • ಆಹಾ, ಧನ್ಯವಾದಗಳು.

        • Even in Gadhaayuddha!!
          ಪವನಂಗೆ ಪುಟ್ಟಿದಂ ರಾ
          ಘವನಣುಗಾಳ್ ತ್ರಿಣಯನಾಮ್ಶಮೆನಿಪಣುವಂ ಪಾಂ /
          ಡವ ಕೇತು ದಂಡದೊಳ್ ನೆಲ
          ಸುವುದಾವಗ್ಗಳಿಗೆ ಕಪಿಗೆ ಚಪಲತೆ ಸಹಜಂ //

  10. ಬಗೆಯೊಳ್ ಮೌನಂ ನಟಿಸುತೆ
    ಸೊಗದಿಂದರೆ! ನಲಿದು,ಕುಣಿದು ವೈಯಾರದೊಳೇ
    ಪುಗುತಿರೆ ಕಡಲಂ,ನಿನ್ನೊಳ-
    ಬಗೆಯನದೆಂತು ತಿಳಿಯರ್ ರಸಿಕಲೋಗರ್ ಹಾ!!

    (ಮೌನದಿಂದಿರುವಂತೆಯೇ ನಟಿಸುತ್ತ,ಕುಣಿದು ಕುಪ್ಪಳಿಸುತ್ತ, ಕಡಲನ್ನು ಸೇರಲು ಹೋಗುತ್ತಿರುವ ನಿನ್ನ ಒಳ ಮನಸ್ಸನ್ನು ಬಲ್ಲದ ರಸಿಕರಾರು?ಕಾವೇರಿಯೇ!)

  11. ಜೀವನದಿ ನೀನೆಮಗೆ ಕಾವೇರಿಮಾತೆಯೇ
    ನೋವಿನಲಿ ಕಪ್ಪಾಯ್ತು ನೀನಿರದ ಹಗಲು|
    ಕಾವೇರಿ ಬೇಯುತಿದೆ ಜನಮನವು, ಕರುನಾಡ-
    ಕಾವಳವ ನೀಗಿಸಲು ಮರಳಿ ಬಾ ಮನೆಗೆ||

    • ಕಾವೇರಿಯಾಗಲಾಗಲಿ ನದಿಯದಾವುದೇ
      ಹಾವವಂ ಬದಲಿಸುತೆ ಬರಲು ಮರಳಿ|
      ಸೋವಿ’ಪಶ್ಚಿಮವಾಹಿ’ಯೆಂಬರದ ಬಲ್ಲಿದರು
      ಸಾವ ಕರ್ಮಕ್ಕೊದಗುಮಾಗಳಷ್ಟೆ|| 🙂

  12. ನೆರಳಿನವೋಲೆ ರಾಮಕೆಲಕಿರ್ಪೊಡೆಯುಂ ಸತಿ ಸೀತೆಯಂ ತಥಾ
    ಕುರುಕುಲ ಪಾಂಡವರ್ಗೊಲಿದ ಕೃಷ್ಣೆಯನುಂ ಸೆಳದೊಯ್ದಿರಲ್ ಮಹಾ
    ದುರುಳಜನರ್ಕಳಂದೆ ,ಸಿರಿಗನ್ನಡ ನಾಡಿನ ಚೆಲ್ವೆಯಂತಿರಲ್
    ವರನದಿಯಂ ,ಸುಧಾರಿಸಿಕೊಳಲ್ಕಹ!ಸಾಧ್ಯಮೆ?ದುಷ್ಟ ಕಾಲದೊಳ್!!
    (ಸುಧಾರಿಸು=ಸಂಬಾಳಿಸು)

  13. ಸೇರಿರ್ಪ ಮನೆಗೆಂದು ಪೆಣ್ಗಳಂ ಕಳುಹುತಿರೆ
    ನೂರಾರು ವರ್ಷಂಗಳಿಂ ಮಾನಸರ್,
    ಕೇರಿಯೂರಂ ತೊರೆದು ,ಬೆಳಗಲ್ಕೆ ಗೇಹಮಂ
    ಸಾರಿ ಪೋದಳೆ ದೂರ,ಕಾವೇರಿಯುಂ!!

  14. ಪೊತ್ತಿ ಕೆಳರ್ದೀ ದಳ್ಳುರಿ
    ಬತ್ತಿದುದಂ ಕಾಣೆನೆಲ್ಲಿಯುಂ ಕರುನಾಡೊಳ್ |
    ಪೊತ್ತಿರ್ಪೀ ಪಾವಕಮಂ
    ಬತ್ತಿಸದೆನೆ ದಿಟದೊಳಾಪಮಿಲ್ಲಾಪಗೆಯೊಳ್ ||

    ದಿಟದೊಳಾಪಮಿಲ್ಲಾಪಗೆಯೊಳ್ –
    ದಿಟದೊಳ್ + ಆಪಂ + ಇಲ್ಲ + ಆಪಗೆಯೊಳ್

    ಕಾವೇರಿ ನದಿಯಲ್ಲಿ ನೀರಿಲ್ಲ ನೀರಿಲ್ಲ ಎಂದು ಸುಮ್ಮನೆ ಹೇಳಿದರಾಯಿತೇ.? ಎರಡೂ ರಾಜ್ಯದಲ್ಲೂ ಹೊತ್ತಿ ಉರಿದ ದಳ್ಳುರಿ ಇನ್ನೂ ಆರಿಲ್ಲ ಎಂದರೆ ಆರಿಸಲು ನೀರಿಲ್ಲ ಎಂದೇ ಅರ್ಥವಲ್ಲವೇ..

  15. ದ್ವಿಸುತರಂ ಪಡೆದಿರ್ಪ ತಾಯಿತಾಂ ಕಾವೇರಿ
    ನಸುನಗುತೆ ಬಾಳ್ವಳೇಂ? ಜಲಜನನಿ ತಾಂ
    ಅಸುರರೋಲ್ ಜಲದಾಸ್ತಿಗಾಗಿರಲ್ ಕಾದಾಟ ( ಜಲದಾಸ್ತಿ ಎನ್ನುವುದು “ಅರಿ ಸಮಾಸ ದೋಷ” ಆದರೆ “ನೀರಾಸ್ತಿ” ಎಂದು ಮಾಡಬಹುದೇ?)
    ಭಸಭಸನೆ ಯಾರೆಡೆಗೆ ಪೋಪಳೀಕೆ?

    • ತುಂಬ ಚೆನ್ನಾಗಿದೆ ಅಂಕಿತಾ. ಅಸುರರೊಲ್ ಎಂಬುದು ಅಷ್ಟೊಂದು ಸಾಧುವಲ್ಲ. ಅಸುರರವೊಲ್ ಆಗಬೇಕು. ಇಲ್ಲಿ ಛಂದಸ್ಸಿಗಾಗಿ ಅಸುರರ್ಕಳಂತೆ ಜಲದಾಸ್ತಿಗಂ ಕಾದಾಟ … ಎಂದು ಮಾಡಬಹುದು. ಜಲದಾಸ್ತಿ ಸರಿಯಾಗೇ ಇದೆ. ಅದು ಸಮಾಸವಲ್ಲ. ಜಲದ ಆಸ್ತಿ ಎಂದು ಸಂಧಿ ಮಾತ್ರ ಆಗಿರುವಂಥದು.

      • ಧನ್ಯವಾದ ಸರ್,

        ಅಯ್ಯೋ,. . .ನನಗೆ ಸರಿ ಇರುವುದೆಲ್ಲ ತಪ್ಪಾಗಿ ಕಾಣುತ್ತಿದೆ.
        ತಪ್ಪಾಗಿರುವುದು ಸರಿಎನಿಸುತ್ತಿದೆ.!!
        ಕಷ್ಟ . . . .ಕಷ್ಟ. . . .

  16. ಗಗನದಿಂದಲಿ ವರ್ಷಮಿಲ್ಲವು
    ಸುಗಮವಿಲ್ಲವು ನಮ್ಮ ಬೆಳೆಗಳು
    ಧಗಿಪ ಬೇಗೆಗೆ ಬಾಯದಾರಿದೆ ನಿಲ್ಲು ಕಾವೇರಿ
    ಮಗುವಿನಂದದಿ ನಮ್ಮ ತಣಿಸಲು
    ಜಿಗಿದು ಬುವಿಯಲಿ ಹರಿದು ಬರುತಿಹ
    ಜಗದ ಸುಂದರಿ ಹುಟ್ಟಿ ನಮ್ಮನ್ನಗಲುತಿಹಳೇನು?

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)