Oct 092016
 

ಆಯುಧಪೂಜೆಯ ಯಾವುದಾದರೂ ಆಯಾಮವನ್ನು ವರ್ಣಿಸಿ

  16 Responses to “ಪದ್ಯಸಪ್ತಾಹ ೨೨೩: ವರ್ಣನೆ”

  1. ಬುದ್ಧಿಯೆನುವಾಯುಧಕೆ ಸಂಸ್ಕಾರವೆನ್ನುವಾ
    ಶುದ್ಧಿಯನು ಮಾಡಿಕೊಳೆ ಪೂಜೆಯದು ದಿಟದಿ
    ಸಿದ್ಧಿಯೆನುವಾಫಲಕೆ ಶ್ರದ್ಧೆಯದೆ ಮರವಹುದು
    ತಿದ್ದಿಕೊಳೊ ತಿಳಿಯುತಲಿ ನೀನನಂತ

    ಮನುಷ್ಯನಿಗೆ ಬುದ್ಧಿಯೆನ್ನುವುದೇ ಆಯುಧ, ಅದಕ್ಕೆ ಸಿಗುವ ಸಂಸ್ಕಾರವೇ ಪೂಜೆ,ಈ ಪೂಜೆಯ ಫಲ ಸಿದ್ಧಿ,ಆ ಫಲಕ್ಕೆ ಶ್ರದ್ಧೆಯೇ ಮರ ಎನ್ನುವ ಅರ್ಥದಲ್ಲಿ ಬರೆದಿದ್ದೇನೆ. ನೀನನಂತ(ನೀನು+ಅನಂತ) ಎನ್ನುವುದು ಅರಿಸಮಾಸವೇ? ದಯವಿಟ್ಟು ತಪ್ಪುಗಳಿದ್ದರೆ ತಿಳಿಸಿ,ತಿದ್ದಿ.

    • ಕೊನೆಯ ಸಾಲಿನ ಆಶಯ ಸರಿಯಾಗಿಲ್ಲ. ಜಾಗ್ರತೆಯಾಗಿ ತಿದ್ದಿಕೊಳ್ಳೋಣ ಎಂದು ನಾನು ಶ್ರಮಿಸುತ್ತಿದ್ದರೆ, ’ಅನಂತವಾಗಿ ತಿದ್ದುವಿಕೆಯಲ್ಲಿ ತೊಡಗಿಕೋ’ ಎನ್ನುವಿರಲ್ಲ 😉

    • ’ಸಂಸ್ಕಾರವೆನ್ನುವಾ’ ಹಾಗೂ ’ಸಿದ್ಧಿಯೆನುವಾ’: ’ಸಂಸ್ಕಾರವೆನ್ನುವ’ ಹಾಗೂ ’ಸಿದ್ಧಿಯೆನುವ’ ಎಂಬು ಬಳಸುವುದೇ ಲೇಸು. ಸಂಸ್ಕಾರಮೆಂದೆಂಬ/ ಸಿದ್ಧಿಯೆನ್ನುವ ಎಂದು ಸವರಬಹುದು.

      • ಧನ್ಯವಾದಗಳು.ಕೊನೆಯ ಸಾಲು ದಾರಿತಪ್ಪಿದೆ ಎಂದು ನನಗೂ ಅನ್ನಿಸಿತು. ಅನಂತನು(ನಾನು) ತನ್ನ ಬುದ್ಧಿಯನ್ನು ತಿದ್ದಿಕೊಳ್ಳಲಿ ಎಂದು ಹೇಳಿದ್ದು 🙂 ಸದ್ಯಕ್ಕೆ ನಿಮ್ಮ ಎರಡು ಸಲಹೆಗಳೊಂದಿಗೆ ಬದಲಾದ ಪದ್ಯ ಇಲ್ಲಿದೆ. ಕೊನೆಯ ಸಾಲನ್ನು ಹೇಗೆ ಸರಿ ಮಾಡುವುದೆಂದು ಯೋಚಿಸುತ್ತಿದ್ದೇನೆ.
        ಬುದ್ಧಿಯೆನುವಾಯುಧಕೆ ಸಂಸ್ಕಾರಮೆಂದೆಂಬ
        ಶುದ್ಧಿಯನು ಮಾಡಿಕೊಳೆ ಪೂಜೆಯದು ದಿಟದಿ
        ಸಿದ್ಧಿಯೆನ್ನುವ ಫಲಕೆ ಶ್ರದ್ಧೆಯದೆ ಮರವಹುದು
        ತಿದ್ದಿಕೊಳೊ ತಿಳಿಯುತಲಿ ನೀನನಂತ

        • “ತಿದ್ದಿಕೊಳೊ ಬುದ್ಧಿಯನು ನೀನನಂತ” ಎಂದು ಮಾಡೋಣವೆಂದುಕೊಂಡಿದ್ದೆ. ಹಾಗೆ ಮಾಡಿದರೆ ಪುನರುಕ್ತಿಯಾಗುತ್ತದೆಂದು ತಿಳಿಯುತಲಿ ಎಂದು ಮಾಡಿಕೊಂಡೆ.ಈಗ ಕೊನೆಯ ಸಾಲು ಹಾದಿ ತಪ್ಪಿದೆಯೆಂದು ತಿಳಿದರೂ, ಎಲ್ಲಿ, ಹೇಗೆ ತಪ್ಪಿದೆಯೆಂದು ತಿಳಿಯುತ್ತಿಲ್ಲ. ತಪ್ಪನ್ನು ತಿಳಿಸಿಕೊಟ್ಟ ನೀವೇ ಸರಿಮಾಡುವ ದಾರಿಯನ್ನೂ ತೋರಿಸಬೇಕಾಗಿದೆ 🙁

          ಹಾದಿರಂಪರೆಯೆನ್ನ ಸರಿಹಾದಿಗೆಳೆತನ್ನಿ
          ಬೋಧನೆಯ ಗೈಯುತಲಿ ಕವನವನದೊಳ್
          ಸಾಧನೆಯ ಮಾರ್ಗವನು ಕಾಣದೆಲೆ ಚಡಪಡಿಸಿ
          ಶೋಧಿಸಿರೆಯುಂ ದಾರಿ ಕಾಣದಾಯ್ತು 🙁

          • ನಿಮ್ಮ ಮೂಲಪದ್ಯವೂ ಈ ಪ್ರತಿಕ್ರಿಯಾಪದ್ಯವೂ ಚೆನ್ನಾಗಿದೆ. ಕೊನೆಯ ಸಾಲಿನಲ್ಲಿ ಯಾವ ದೋಷವೂ ಇಲ್ಲ. ಅದು ನನ್ನ lateral comment ಅಷ್ಟೆ. ಗಂಭೀರವಾಗಿ ತೆಗೆದುಕೊಳ್ಳಬೇಡಿ. ನಕ್ಕುಬಿಡಿ ಸಾಕು.

  2. ಅಜ್ಜಿಕತೆಗಳು ’ಚಂದ್ರಗುಪ್ತನೆಂಬ ಒಬ್ಬ ಪರಾಕ್ರಮಿರಾಜನಿದ್ದ…’ ಎಂದು ಆರಂಭಗೊಳ್ಳುತ್ತಿದ್ದವು. ಇಂತಹ ಕ್ಷಾತ್ರವಿಜೃಂಭಣೆಯು ಲುಪ್ತವಾಯಿತು ಎಂಬ ಅರ್ಥದಲ್ಲಿ ಗೃಹೀತವಾಗಬೇಕು ಈ ಪದ್ಯದ ಎರಡನೆಯ ಸಾಲು.
    ’ಒಂದೊಮ್ಮೆ ತಾನಿದ್ದ ಚಂದ್ರಗುಪ್ತನು’ಮೆಂದುಮಾರಂಭಗೊಳ್ಳುತಿದ್ದವು ಗಾಥೆಗಳ್
    ’ಒಂದೊಮ್ಮೆ ತಾನಿದ್ದನಧನಭೂಸುರ*’ನೆನ್ನುತಾರಂಭಗೊಳ್ಳುವಂತಾದುದೀಗಳ್|
    ಭಾರತಕ್ಷಾತ್ರಮಿಂತೆಂದಾಯ್ತೊ ಸೋವಿಯಂದಾಯ್ತು ಧರ್ಮಗ್ಲಾನಿ ಜನಚಿತ್ತದೊಳ್
    ನಿತ್ಯದಾಚರಣೆಯಿಂದಸ್ತ್ರಶಸ್ತ್ರವು ತಪ್ಪಿ ಪೂಜೆಮಾತ್ರಕದಾಯ್ತು ನವಮಿಯಂದು||
    ಈಗಳಾಯ್ತು ಮಗುಳೆ ಅಸ್ತ್ರದುತ್ಥಾನಮೈ
    ನಿತ್ಯವೀಗ ಧರ್ಮದಸ್ತ್ರಯೋಗಂ|
    ನಮಿಪೆವೀಗಳೆನ್ನಿ ರಾಷ್ಟ್ರನಾಯಕರಿಂಗೆ
    ಮರಳಿಸಿರ್ಪರ್ ಪೆರ್ಮೆಯಂ ಭಾರತಿಗೆ||
    (*ಬಡಬ್ರಾಹ್ಮಣ ಎಂದು ಬರೆದರೆ ಅರಿನೀಲಕಂಠರು ಎರಗಿಬೀಳುತ್ತಾರೆ!)

    • ಇರಬೇಕು ಇರಬೇಕು ಒಬ್ಬ ಅರಿಯ ಭಯ! ಕೇರಿಗೊಂದು ಹಂದಿ ಇರಬೇಕೆಂದು ದಾಸರು ಹೇಳಿದಂತಾದರೂ.

  3. ನೀರಜಮನುಳಿಸಲ್ಕೆ ಪಗಲಿರುಳು ದುಡಿಯುತ್ತೆ
    ಪಾರುತಿಹ ಭೃಂಗಾಳಿಯೋಲೆ ದಿಟದಿಂ,
    ವೀರಸೈನಿಕರಿಂದು ಭಾರತಿಗೆ ಭುಜಮಾಗೆ
    ಸೇರದೇಂ ಪೂಜೆಯುಂ ಮೊದಲಿಗಲ್ಲೇ!

  4. ಚರಮಾರ್ಗಂಗಳ ಕಷ್ಟಮಂ ತರಿಯೆ ಮೇಣ್ ಸಂದಿರ್ಪ ಶಸ್ತ್ರಂಗಳುಂ,
    ನರವೈರ್ಯರ್ಕಳನಂದು ಮಾತೆಯರಿದಾ ಶಕ್ತ್ಯಾಯುಧಾದ್ಯಂಗಳುಂ,
    ಪುರದೊಳ್ ವಾಸಿಪ ಶತ್ರುಸಂಕುಲಮನೇ ಧ್ವಂಸಿಪ್ಪ ಸುಜ್ಞಾನಮುಂ,
    ವರಮಾಗಲ್ಕರೆ ಬಾಳ್ತೆಗಿಂದು !ಸಲದೇನೀ ಗೌರವಂ!ಪ್ರೀತಿಯುಂ!!

  5. ನಿಯತದೊಳಾಶ್ವಯುಜದೆ ನವ-
    ಮಿಯದಿನ ಶುದ್ಧದೊಳು ವಾಹನಾದಿಯ ಪೂಜಾ
    ಮಯದಾಯುಧಾರ್ಚನ ವಿಧಿ, “ವಿ-
    ಜಯದಶಮಿ”ಗೆ ಶಕ್ತಿರೂಪದಾರಾಧನೆಯುಂ ।।

    “ಮಹಾನವಮಿ”ಯ ದಿನದ “ಆಯುಧಪೂಜೆ”(ದೇವಿಯ ಕ್ರಿಯಾಶಕ್ತಿ ಸ್ವರೂಪದಾರಾಧನೆ)ಯ ಮಾರನೆಯ ದಿನದಮದು “ವಿಜಯದಶಮಿ” !!

  6. ಆಯುಧಾನಿ ವಿನಾಶಯಂತಿ
    ಮಾರ್ಗಪಾಷಾಣಕಂಟಕಾನ್,
    ಭವಂತಿ ತರ್ಹಿ ಪೂಜ್ಯಾನಿ
    ಲೋಕಸಜ್ಜನಬಂಧುಭಿ:

    • ಮುಳ್ಳುಗಳನ್ನು ನಾಶ ಮಾಡುತ್ತವೆ ಎಂದಲ್ಲವೇ ಇಂಗಿತ? ವಿನಾಶಯಂತಿ ಆಗಬೇಕು. ವಿನಶ್ಯಂತಿ ಅಂದರೆ ತಾವೇ ನಾಶವಾಗುತ್ತವೆ ಎಂದರ್ಥ. ಪಾಷಾಣ ಸರಿ. ಕಂಟಕ ಸರಿ. ಘಟಕಗಳಲ್ಲಿ ಅರ್ಥವಾದಂತಾಯಿತು. ಆದರೆ ಪೂರ್ತಿ ತಾತ್ಪರ್ಯ ಏನು?

      • ತುಂಬಾ ತುಂಬಾ ಧನ್ಯವಾದ ನೀಲಕಂಠರೇ, ನನ್ನೀ ಮೊದಲಪದ್ಯವನ್ನು ತಿದ್ದಿಕೊಳ್ಳಲು ಸಹಕರಿಸಿದ್ದಕ್ಕಾಗಿ.

    • ಅಂದಹಾಗೆ ಪದ್ಯಪಾನಕ್ಕೆ ಉಭಯಭಾಷಾಕವಯಿತ್ರಿಗೆ ಆದರದ ಸ್ವಾಗತ 🙂

  7. ಕವಿಕುಲಕದಾಯುಧವು ಲೇಖನಿಯು ತಾನಹುದು
    ನವರಸವ ಹರಿಸುವುದು ಮನನದಿಯಲಿ (ನವರಸಂಗಳಹರಿಸಿ ಮನನದಿಯಲಿ)
    ಭವದ ವೇದನೆಗಳನು ಬದಿಗೊತ್ತುತಲಿ ಭಾವ-
    -ದಿವಕೇರಿಸುವ ಸಾಧನಕೆ ನಮಿಪೆನು

    (ದಿವ=ಸ್ವರ್ಗ,ಆಕಾಶ)

    ಹಳಗನ್ನಡದಲ್ಲಿ ಬರೆಯಲು ಪ್ರಯತ್ನಿಸಿ ಕಲಸುಮೇಲೋಗರ ಕನ್ನಡವಾಗಿ(೨ ಕಡೆಯಲ್ಲಿ ಛಂದಸ್ಸೂ ಎಡವಿದ) ಇನ್ನೊಂದು ಪ್ರಯತ್ನ.

    ವೀರರಸದೊಳ್ ಖಳರ ತುರಿವ ಕತ್ತಿಯುಮಾಗಿ
    ಧೀರಗಂಭೀರಮಿರುತಲಿ ಶಾಂತದೊಳ್
    ಆ ರತಿಯ ಪತಿಯ ಬಾಣಮುಮಾಗಿ ಶೃಂಗಾರ-
    -ದಾ ರಸದಿ ಮೆರೆವ ಲೇಖನಿಗೆ ನಮಿಪೆನ್

    ಇಲ್ಲಿ ಆಗಿರುವಂತೆ ಪಂಚಮಾತ್ರಾ ಚೌಪದಿಯ ಎರಡನೇ ಹಾಗೂ ನಾಲ್ಕನೆಯ ಸಾಲಿನ ಕೊನೆಯ ಗಣಗಳಲ್ಲಿ ೨ ಮಾತ್ರೆಗಳು ಬರುವುದು ತಪ್ಪೇ?(ನಾನು ತಿಳಿದ ಪ್ರಕಾರ ೨ನೇ ಸಾಲಿನಲ್ಲಿ ೫೫೫೩ ಅಥವಾ ೫೫೫೧, ೪ನೇ ಸಾಲಿನಲ್ಲಿ ೫೫೫೧ ಗಣಗಳು ಬರಬೇಕು).
    ನನಗೆ ಗೊತ್ತಿದ್ದೂ ಆಗಿರುವ ತೊಡಕುಗಳು ಖಳರ->ಖಳರಂ,ಲೇಖನಿಗೆ->ಲೇಖನಿಗಂ ಆಗಬೇಕು.(ಆದರೆ ಹೀಗೆ ಮಾಡಿದರೆ ಛಂದಸ್ಸಿನ ತೊಡಕು ಜಾಸ್ತಿಯಾಗುತ್ತದಾದ್ದರಿಂದ ಮಾಡಲಿಲ್ಲ).ಬಹುಶಃ ಕೊನೆಯ ಸಾಲಿನ ಪೆನ್->ಪೆಂ ಆಗಬೇಕು.ಬೇರೆ ತಪ್ಪುಗಳೂ ನುಸುಳಿರಬಹುದು. ದಯವಿಟ್ಟು ತಿದ್ದಿ,ತಿಳಿಸಿ.
    (ಪ್ರತಿ ಬಾರಿಯೂ ನಿಮಗೆ ಕೊಡುತ್ತಿರುವ ತೊಂದರೆಗೆ ಕ್ಷಮೆಯಿರಲಿ. ಸದ್ಯಕ್ಕೆ “ಕನ್ನಡ ಕೈಪಿಡಿ”ಯ copy ಎಲ್ಲಿಯೂ ಸಿಗುತ್ತಿಲ್ಲವಾದ ಕಾರಣ ನನ್ನ ವ್ಯಾಕರಣ ದೋಷಗಳಿಗೆ ನಿಮ್ಮ ಮದ್ದೇ ಆಗಬೇಕು).

    ವ್ಯಾಕರಣ,ಛಂದೋದೋಷಗಳಿರುವ ಮೊದಲ ಪದ್ಯದ ಹಳೆಗನ್ನಡ ರೂಪ

    ಕವಿಕುಲಕದಾಯುಧವು ಲೇಖನಿಯದಹುದಲ್ತೆ
    ನವರಸಂಗಳಹರಿಸಿ ಮನದನದಿಯೊಳ್
    ಭವದ ವೇದನೆಗಳಂ ಬದಿಗೊತ್ತುತಲಿ ಭಾವ-
    -ದಿವಕೇರಿಸಿರ್ಪ ಸಾಧನಕೆ ನಮಿಪೆಂ(ಪೆನ್?)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)