Oct 022016
 

dollMaking

  34 Responses to “ಪದ್ಯಸಪ್ತಾಹ ೨೨೨: ಚಿತ್ರಕ್ಕೆ ಪದ್ಯ”

  1. ಮನದೊಳ್ ದುರ್ಗಿಯ ಕಾಣುತುಂ ಸಮೆದಿಹಳ್ ಪೆಣ್ಣೋವರ್ಳೇ ಭಕ್ತಿಯಿಂ
    ಘನಮಾಗಿರ್ಪ ಸುರೂಪವಂ ನೆನೆಯುತೀ ಸೌನ್ದರ್ಯಕೈಶ್ವರ್ಯಳಂ /
    ವಿನುತ ಬ್ರಹ್ಮಸುವಸ್ತುವಂ ತಿಳಿದಿಹರ್ ತಾವ್ ಬ್ರಹ್ಮರಾಗಿರ್ಪವೋಲ್
    ಎನಗೀ ಚಿತ್ರದೊಳೇಳು ದುರ್ಗಿಯರು ತಾವ್ ತೋರುತ್ತಲಿರ್ಪರ್ ದಿಟಂ //

    ವೇದಾಂತದ “ಸಯೋ ಹವೈ ತತ್ಪರಮಂ ಬ್ರಹ್ಮವೇದ ಬ್ರಹ್ಮೈವ ಭವತಿ” ಎಂಬ ಸಾಲನ್ನು ಆಧರಿಸಿ ಬರೆದದ್ದು. ಹೇಗೆ ಬ್ರಹ್ಮನನ್ನು ಧ್ಯಾನಿಸಿ ಆತನನ್ನು ತಿಳಿದವರು ಬ್ರಹ್ಮರೇ ಆಗುತ್ತಾರೋ ಹಾಗೆಯೇ ಈ ಚಿತ್ರದಲ್ಲಿರುವಾಕೆಯೂ ಆ ದುರ್ಗಿಯ ಧ್ಯಾನದಲ್ಲೇ ಸದಾ ಇರುತ್ತಿದ್ದುದ್ದರಿಂದ ದುರ್ಗಿಯೇ ಆಗಿ ಹೋಗಿದ್ದಾಳೆ. ಹಾಗಾಗಿ ಚಿತ್ರದಲ್ಲಿರುವುದು ೭ದುರ್ಗೆಯರು. ಆರಲ್ಲ.
    ಮತ್ತೇಭದಲ್ಲಿ ಮೊದಲ ಪ್ರಯತ್ನ. ತಪ್ಪಿದ್ದಲ್ಲಿ ತಿದ್ದಬೇಕು. ೨ನೇ ಸಾಲಿನ ಸರೂಪ ವನ್ನು ಸ್ವರೂಪವೆಂದು ಮಾಡಿ ‘ರ್ಪ’ ವನ್ನು ಶಿಥಿಲ ದ್ವಿತ್ವ ಮಾಡಬಹುದೇ?

    • ಭಲೆ! ಅದನ್ನು ಅವಳ ಗಂಡನೂ ಒಪ್ಪುತ್ತಾನೆ!

    • ಚೆಂದದ ಪದ್ಯ..
      ಮೊದಲ ಪಾದದಲ್ಲಿ “ಪೆಣ್ಣೊರ್ವಳೇ” ಎಂದಾಗಬೇಕಿದೆ. 🙂

      • ಓಹ್ ! ನೋಡಿದಿರೇ ಎಷ್ಟೋ ರಾಕ್ಷಸರನ್ನು ಸಂಹರಿಸಿದ ದುರ್ಗಿಯ ಬಗೆಗಿನ ಪದ್ಯದಲ್ಲಿ ಮುದ್ರಾರಾಕ್ಷಸ ನುಸುಳಿಬಿಟ್ಟಿದ್ದಾನೆ 🙁 ತಿದ್ದಿದ್ದೇನೆ. ಧನ್ಯವಾದಗಳು. _/\_

    • Nice one! Still she has not become complete Durga, as she still is with 2 hands 🙂

    • ಆಹಾ! ತುಂಬಾ ಚೆನ್ನಾಗಿದೆ!
      ಮತ್ತೇಭ ದ ಲಕ್ಷಣಗಳನ್ನು ನನಗೆ ಸಹಾಯವಾಯಿತು.

    • ಚೆನ್ನಾಗಿದೆ ಮಂಜರೇ,

      ಬ್ರಹ್ಮರಾಗಿರ್ಪವೋಲ್
      -ಎನಗೀ

      ಇಲ್ಲಿ ಸಂಧಿಮಾಡಬೇಕಾಗುವುದು…ವೊಲೆನಗೀ
      .
      ಹಾಗೂ ದುರ್ಗಿಯರು ಹಳಗನ್ನಡದ ಬಿಗಿತನದಲ್ಲಿ ದುರ್ಗಿಯರ್ ಆಗಬೇಕಾಗುವುದು
      (ಛಂದಸ್ಸು ಕೆಡದಂತೆ ಬದಲಾವಣೆಗಳನ್ನು ಮಾಡಬೇಕು :))

      ಸುರೂಪವಂ – ಸುರೂಪಮಂ

  2. ನಗುಮೊಗದೊಲ್ವ ಚೆಲ್ವನುರೆ ಸಿಂಗರಿಸಿರ್ಪ ಕಿರೀಟಕಾಂತಿಯಂ
    ಝಗಮಗಿಸಿರ್ಪಲಂಕೃತಿಸಮಾಹೃತಿಯಂ ವರವಸ್ತ್ರಪಂಕ್ತಿಯಂ
    ಪಗೆಯೆದೆಗೇಡಿನಸ್ತ್ರನಿಕರದ್ಯುತಿಯಾಂತ ಕರಾಳಿಕೇಳಿಯಂ
    ನಗಜೆಯಿದೆಲ್ಲಮಂ ನಿನಗಮಿತ್ತೆನದಾಗೆ ಜನಾಳಿಲೋಕಕಂ

    ಅಂತಿರ್ಪೊಡೆನ್ನ ಜೀವನ-
    ಕಾಂತಾರಗಹನತೆಯಾರ ಕಂಗಳಿಗಾಯ್ತೌ
    ಇಂತೆನ್ನ ಬವಣೆಯಂ ನೋ-
    ಳ್ಪಂತಿಡುತಿರ್ಪೆಂ ತ್ವದೀಯದೃಷ್ಟಿಯನೀಗಳ್

    ಆ ಶಿಲ್ಪಕಲಾವಿದೆಯ ಸ್ವಗತ –

    ಈ ನಗುಮೊಗದ ಸಿರಿ, ಈ ಸಿಂಗಾರದ ಕಿರೀಟ, ಝಗಮಗಿಸುವ ಈ ಆಭರಣಗಳು, ಈ ವಸ್ತ್ರವಿನ್ಯಾಸ, ಶತ್ರುಗಳ ಎದೆಗೇಡು ಮಾಡುವ ಆಯುಧಗಳಿಂದ ಶೋಭಿಸುವ ಈ ಕೈಗಳ ಕುಣಿತ, ಇದೆಲ್ಲವನ್ನೂ ನಿನಗೆ ನಾನು ಕೊಟ್ಟೆ. ಆದರೆ ಇದೆಲ್ಲ ಜನರು ನಿನ್ನನ್ನು ನೋಡುವುದಕ್ಕೆ.

    ಆದರೇನು, ತಾಯಿ, ನನ್ನ ಬದುಕಿನ ಕಾಡನ್ನು ನೋಡುವವರು ಯಾರು?! ನನ್ನ ಬವಣೆಗಳನ್ನು ನೋಡಲೆಂದೇ ನಿನಗೆ ಈಗ ಕಣ್ಣಿನ ಚಿತ್ರವನ್ನು ಬರೆಯುತ್ತಿದ್ದೇನೆ.

    • ನರರ ಭಯಬಯಕೆಗಳೆ ಸುರರ ತಾಯ್ತಂದೆಗಳೊ?
      ಸುರರಟ್ಟಹಾಸದಿನೆ ನರಭಕ್ತಿಯೊರಲೋ?
      ಪರಿಕಿಸುವರೇನವರ್ಗಳನ್ಯೋನ್ಯಶಕ್ತಿಗಳ?
      ಧರುಮವೆಲ್ಲಿದರಲ್ಲಿ? ಮಂಕುತಿಮ್ಮ||
      —————-
      ಪಿಂತೆ ಕಂಗಳನಿತ್ತ ಪಂಚಮಾತೆಯರಿಂಗೆ
      ಬಂತೇನು ಕಾರುಣ್ಯಮಿನ್ನೆಗಂ ಪೇಳ್|
      ಸಂತೆಬೊಂಬೆಯ ಮಿಟುಕದಕ್ಷಿದ್ವಯವೆ ಬೇಕೆ
      ಸಂತರಾಂತರ್ಯಮನ್ನರಿಯಲಾ ತಾಯ್|| 😉
      (ದೇವತೆಗಳು ಅನಿಮಿಷರು. ದೇವತಾವಿಗ್ರಹಗಳೂ!)

  3. ಏಕತಾನದ ಮೂರ್ತಿಗಳಾದ್ದರಿಂದ ಸ್ರಗ್ವಿಣಿಯಲ್ಲಿ ರಚಿಸಿದ್ದೇನೆ
    (ಕೋಟಿ)ದೇವಿಯರ್ ತಾಮದಿರ್ಕುಂ ಗಡೊಂದೇ ತೆರಂ
    ಹಾವದೊಳ್ ರೂಪದೊಳ್ ಮೇಣ್ ವಯೋಮಾನದೊಳ್|
    ಸೋವಿಯೆಂದುರ್ವಿಯೊಳ್ ಮೂದಲಿಪ್ಪರ್ ಗಡಾ
    (ಬರಿಯ)ಐವರುಂ ಮಾತ್ರಮೇ ಇದ್ದೊಡಂ ಸಾಮ್ಯದಿಂ|| 😉

    ದೇವಿಯರೆಲ್ಲರೂ ಒಂದೇ ತೆರನಿರಬಹುದು, ಆದರೆ ಭೂಮಿಯಲ್ಲಿ ಕೇವಲ 5%ದಷ್ಟು ಯುವತಿಯರು ಒಂದೇರೂಪಲಾವಣ್ಯಗಳವರಿದ್ದರೂ ನೀರಸವೆನಿಸುತ್ತದೆ!

  4. ಜಗದ ತಾಯಿಯು ನೀನಹುದು ನಗು-
    ಮೊಗದಿ ಮಕ್ಕಳ ಮೊರೆಯನಾಲಿಸಿ
    ಸಿಗಿದು ಕೊಲ್ಲುವೆ ದುರುಳರೆಲ್ಲರ ಶಾಂತಿಯನುಪೊರೆಯೆ
    ಮುಗುದ ಬಾಲೆಯ ಕರದಲರಳುತ
    ಮಗಳ ಜಾಣ್ಮೆಗೆ ತಲೆಯದೂಗುತ
    ಮಗಳಿಗೇ ಮಗಳಾದ ಮಾಯೆಯೆ ನಿನ್ನ ನಮಿಪೆನು ನಾ

    ಮಗಳ ಕರದಲ್ಲಿ ಅರಳುತ್ತ ಮಗಳಿಗೇ ಮಗಳಾದ ಜಗದಂಬೆಯ ಬಗೆಗೆ..ದಯವಿಟ್ಟು ತಪ್ಪಿದ್ದಲ್ಲಿ ತಿದ್ದಿ

  5. Perfection is yet to be achieved with the single-sleeve design. These women wear four-sleeve blouses!!!! Think of the plight of the tailor.
    ಶಿಲ್ಪಿಕಾರ್ಯವು ಸುಲಭ, ಎರಕದೊಲ್ ರೂಪಿಸುಗು-
    ಮಲ್ಪಕಾಲದೊಳೆ ಸಾಸಿರ ಪುತಲಿಯಂ|
    (Inconvenience)ಶಲ್ಪಮೇನೆಂಬುದನು ನೀನರಿಯಬಲ್ಲೆಯ ವಿ-
    ಕಲ್ಪದಾ ತೋಳ್ಗಳಂ ಪೊಲಿಯೆ ದರ್ಜಿ!!

    • ಪ್ರಸಾದ್ ಸರ್,
      ಗುಪ್ಪೆ(puff)ತೋಳಿಹುದೊಂದೆ ಕುಪ್ಪಸಕೆ, ನಾಲ್ವಾಗಿ
      ತಪ್ಪೆ ಕಂಡುದೆ ತಮಗೆ ಹಾದಿರಂಪಾ !
      ಒಪ್ಪಗೊಂಡರು ಕವನ ನಾಲ್ಕು ಸಾಲುಗಳಿಂದ-
      ಲಿಪ್ಪುದೊಂದಿಡಿ ಸಾಲದಲ್ತೆ ಬಗೆಯೊಳ್ !!

  6. ಪಡಿಮೂಡಿಸೆನೆ ದಸರೆಗೆಂ-
    ದುಡತೊಡಿಸುತಿರೆ ಜಗದಂಬೆಗಂ ಸ್ತ್ರೀ ರೂಪಂ ।
    ಒಡನಿರ್ಪಿಹಪರ ಮುಕುರದೊ-
    ಳೊಡರ್ಚಿದೇಕಾಧಿಕ ಬಿಂಬದೋಲಿರ್ಕುಂ ಮೇಣ್ ।।

    ಏಕಾಧಿಕ ಬಿಂಬ = multiple reflection
    “ಇಹ – ಪರ”ದ ಕನ್ನಡಿಯ ನಡುವೆ ಮೂಡಿರುವ ಸ್ತ್ರೀಯ ಪ್ರತಿಬಿಂಬಗಳು – ಸಮಾನಾಂತರ ಕನ್ನಡಿಗಳ ಮಧ್ಯೆ ಉಂಟಾಗುವ ಅನಂತ ಪ್ರತಿಬಿಂಬಗಳ ಅದ್ಭುತದ ಕಲ್ಪನೆಯಲ್ಲಿ !!

    • Ahaa.. nice idea and verse!

    • ಬಿಂಬದೋಲಿರ್ಕುಂ ಅಷ್ಟೊಂದು ಸಾಧು ಅಲ್ಲ. ಬಿಂಬದಂತಿರ್ಕುಂ ಮಾಡಬಹುದು.

    • ಧನ್ಯವಾದಗಳು ನೀಲಕಂಠ. ತಿದ್ದಿದ ಪದ್ಯ :

      ಪಡಿಮೂಡಿಸೆನೆ ದಸರೆಗೆಂ-
      ದುಡತೊಡಿಸುತಿರೆ ಜಗದಂಬೆಗಂ ಸ್ತ್ರೀ ರೂಪಂ ।
      ಒಡನಿರ್ಪಿಹಪರ ಮುಕುರದೊ-
      ಳೊಡರ್ಚಿದೇಕಾಧಿಕ ಬಿಂಬದಂತಿರ್ಕುಂ ಮೇಣ್ ।।

  7. ಬನ್ನಂಗಳಂ ಕಳೆವೆನೆಂದಭಯಂಗಳಿಂದಂ
    ಮುನ್ನಂ ಬರಲ್ಕೆ  ನವರಾತ್ರಿಯೊಳ ದ್ವಿತೀಯಳ್
    ತನ್ನಂದದಿಂದೆ ಮರುಳಾದಳೆ ತಾನೆಯೆಂಬೊಲ್
    ಭಿನ್ನಂಗೊಳಲ್ಕೆ ಬಹುರೂಪವ ತೋರ್ದಳಂದಂ

  8. ವಿನೋದವಾಗಿ !!

    ನರರ ಲೋಕದಿ ದಸರೆಯುತ್ಸವ
    ಭರದೆ ಸಾಗಿರೆ ನಗರನಗರದೆ
    ಧರೆಗೆ ಬಂದಿಹ ಭಾರಿ ದೇವಿಯರಾರದಿವರಾರೌ !
    ಸರದಿ ಸಾಲೊಳು ಕುಳಿತು ಬಗೆ ಸಿಂ-
    ಗರದ ಮೊಗಸಾಲೆಯೊಳು ಕಾಯ್ದರೆ
    ನುರಿತ ಪೆಣ್ಣೊಡೆ ತರೆಸಿ ಹುಬ್ಬನು ಮೊಗವ ಸವರಿಸಲುo !!

    ದಸರೆಗೆಂದು ಭೂಮಿಗೆ ಬಂದಿಹ “ಆರು” ದೇವಿಯರು
    BeautyParlour (ಸಿಂಗರದ ಮೊಗಸಾಲೆ)ನಲ್ಲಿ ಕಾದು ಕುಳಿತಿಹರೇ ?! (eye-brow shaping & Facial ಗಾಗಿ)

  9. ರಸಮಂ ಪೀರ್ವ ಜನಕೆಂ
    ದೆಸಗುತ್ತಿರ್ಪಳಲ! ತಿದ್ದಿ ತೀಡುವ ಕಜ್ಜಂ!
    ಹಸಿತ ವದನಂಗಳಿಂ ಕರ
    ಮೆಸೆಯುತ್ತುಮಿರಲ್ಕೆ ದೇವಿಯರ್ಕಳ್ ಸತತಂ!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)