Nov 202016
 

“ಕಂದರ್ಪದರ್ಪಂ ಗಡಾ” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು

  32 Responses to “ಪದ್ಯಸಪ್ತಾಹ ೨೩೦: ಪದ್ಯಪೂರಣ”

 1. ಅರವಿಂದಕ್ಕೆಣೆಯಾದ ಸುಂದರ ಮುಖಂ,ರಕ್ತಾಧರಾಶೋಕಮಂ
  ಚಿರ ಸೌಗಂಧಿತ ಚೂತದೋಲ್ ತನುವನೇ ಪೊಂದಿರ್ದಳಾ ಮಂಗಳಾ //
  ಮಿರುಗಲ್ ಕೌಮುದ ಚಕ್ಷುಗಳ್ ಮೆರುಗಿನಿಂ ಶ್ವೇತಾಂಗಮೇ ಜಾಜಿಯೈ
  ಸರದಿಮ್ ಮೀರುವೆನೆಂದು ಪೋದುದು ದಿಟಂ ಕಂದರ್ಪ ದರ್ಪಮ್ ಗಡಾ //

  ಕಮಲದಂತಿರುವ ಮುಖ, ಅಶೋಕದಂತಿರುವ ಕೆಂದುಟಿಗಳು, ಸುವಾಸನಾಭರಿತ ಮಾವಿನ ಹೂವಿನಂತಿರುವ ದೇಹ, ಉತ್ಪಲದಂತಹ ಕಂಗಳು, ಜಾಜಿಯಂತೆ ಬೆಳ್ಳಗಿರುವ ದೇಹ(ಈ ಪುಷ್ಪಗಳು ಕಾಮನ ಬಾಣದಲ್ಲಿರುವಂಥವು ) ಇವನ್ನೆಲ್ಲ ಪಡೆದ ಪಾರ್ವತಿಯನ್ನು ಐದು ಬಾಣಗಳನ್ನು ಬಳಸಿ(ಐಸರ ) ಮೀರಹೋದುದು ನಿಜವಾಗಿಯೂ ಕಾಮನ ಗರ್ವವೇ ಅಲ್ಲವೇ?

  ತಪ್ಪುಗಳಿದ್ದರೆ ತಿದ್ದಬೇಕಾಗಿ ವಿನಂತಿ.

  • ಆಹಾ, ತುಂಬ ಸುಂದರವಾದ ಕಲ್ಪನೆ! ಮಂಗಳಾ ಎಂದು ಬಳಸಲಾಗದು. ಮಂಗಳೆ ಆಗಬೇಕು. ಗೌರಿಯಯ್ ಎಂದೇನಾದರೂ ಮಾಡಬೇಕು. ಕೌಮುದ ಎಂದರೆ ಕುಮುದದ ಅರ್ಥವಿಲ್ಲ. ಮಿರುಗಿರ್ಪಾ ಕುಮುದಾಕ್ಷಿಗಳ್ ಎಂದು ಮಾಡಬಹುದು. ಚೂತದವೊಲ್ ಆಗಬೇಕು. …ಚೂತದಂತೆ ತನುವಂ…

   • ಧನ್ಯವಾದಗಳು ನೀಲಕಂಠರೇ , ನೀವು ಹೇಳಿದಂತೆಯೇ ತಿದ್ದಿದ್ದೇನೆ.
    “ಚಿರಸೌಗಂಧಿತ ಚೂತದಂತೆ ತನುವಂ ಪೊಂದಿರ್ದಳಾ ಗೌರಿಯಯ್ /
    ಮಿರಿಗಿರ್ಪಾ ಕುಮುದಾಕ್ಷಿಗಳ್ ಮೆರುಗಿನಿಂ ಶ್ವೇತಾಂಗಾಮೇ ಜಾಜಿಯಯೈ”

  • ಐಸರದೈಸಿರಿ ಬಹಳ ಚೆನ್ನಾಗಿ ಮೂಡಿದೆ 🙂

  • ಚೆನ್ನಾಗಿದೆ

 2. ಆರಿಂ ಪುಟ್ಟಿದನಿಂದೆ ಪಲ್ಲಿಲಿಮೊಗಂ ಸಂದಂ ಜಗಚ್ಚಕ್ಷುವೇ
  ಮಾರಾಂತರ್ಗಳಿವಲ್ಲದನ್ಯವಿಧಿಯಾರಿಂದಿಲ್ಲಮಾ ರುದ್ರನೋ
  ಕ್ಷೀರಾಬ್ಧಿಪ್ರಮಥೋತ್ಥಘೋರವಿಷಮಂ ಪೀರಿರ್ದಪಂ ಮೃತ್ಯುಜಿ
  ದ್ಧೀರಂಗೇನಿದಿರಾಂತು ಪೋಪನಕಟಾ! ಕಂದರ್ಪದರ್ಪಂ ಗಡಾ!

  • ಕವಿಕಂದರ್ಪಗಣೇಶನಾಗಮನಮೀ ತಾಣಕ್ಕೆ ದರ್ಪಾಸ್ಪದಂ
   ಕವನಂ ಸಂದಿರೆ ನೇಸರಂತೆ ಮಮಹೃತ್ಕಂಜಾತಕಂ ಮೋದದಂ

  • ಅವಧಾನಿಯ ಪಟ್ಟಕ್ಕೆ ತಕ್ಕ ಪೂರಣ, ಬಹಳ ಚೆನ್ನಾಗಿದೆ 🙂

  • ಇರ್ವರ್ಗಂ ಧನ್ಯವಾದಂಗಳ್

 3. ಆ ವಿಶ್ವೇಶನ ದಿಟ್ಟಿಗೊರ್ಮೆ ಸಲುತುಂ ಭಸ್ಮಂಗೊಳಲ್!ಸ್ಪರ್ಧೆಯಿಂ-
  ದಾವುಂ ಕ್ಷೀಣಿಪೆವೀತೆನೆಂದೆನುತೆ ಹಾ!ದೀಕ್ಷಾವ್ರತಂಗೊಂಡೊಡೇಂ,
  ನಾವಿನ್ಯಂಗೊಳಿಸುತ್ತುಮಂಬರವನುಂ ಗುಹ್ಯ್ಯಾಂತರಂ ಸಾರ್ದೊಡೇಂ,
  ಸಾವಿಲ್ಲೈ ಜನಚಿತ್ತದೆಂಬುದೆ ನಿಜಂ ಕಂದರ್ಪ ದರ್ಪಂಗಡಾ!!

  (ಒಮ್ಮೆಯಷ್ಟೇ ಈಶನಿಂದ ಸುಡಲ್ಪಟ್ಟಿದ್ದಕ್ಕೆ,ಸ್ಪರ್ಧಿಸುತ್ತಾ (ಮನುಜರು ತನ್ನನ್ನು) ಕ್ಷೀಣಿಸಲಿಕ್ಕಾಗಿ ಪ್ರಯತ್ನಿಸುತ್ತಿದ್ದರೂ ಅವರ ಚಿತ್ತದಲ್ಲಿ ತನಗೆಂದಿಗೂ ಸಾವಿಲ್ಲವೆಂಬುದು ನಿಜವಾಗಿಯೂ ಕಂದರ್ಪನ ದರ್ಪವು)

 4. ಯೋಗೊತ್ತುಂಗದೊಳಿರ್ಪ ಧೂರ್ಜಟಿಗೆ ತಾನೇಕಾಗ್ರತಾ ಭಂಗಮಂ
  ವೇಗೋನ್ಮತ್ತ ಮದಾಲಿ ಕೇಂದ್ರಿತಮಿಹಾ ಪುಷ್ಪಾಗ್ರವಂತೇಶುವಿಂ /
  ಭೋಗಾಸಕ್ತನ ಗೈದ ಸಂಭವಿಸಲಾ ಸ್ಕಂದಾವತಾರಂ ವಲಂ
  ಲೋಗರ್ಗಾಪದವಿತ್ತನಂ ತರಿದುದೇ ಕಂದರ್ಪ ದರ್ಪಮ್ ಗಡಾ //

  • ಬಹಳ ಚೆನ್ನಾಗಿದೆ, ‘ಭೋಗಾಸಕ್ತನ ಗೈದ’ ವಿಭಕ್ತಿಪಲ್ಲಟವಾದರೂ ಉಳಿದಂತೆ ಪದ್ಯದ ಭಾವ ಮತ್ತು ಶೈಲಿಗಳಿಂದ ಪದ್ಯವು ಬಹಳ ಚೆನ್ನಾಗಿ ಮೂಡಿದೆ

  • ಚೆನ್ನಾಗಿದೆ. ಪುಷ್ಪಾಗ್ರವಂತೇಶು, ಕೇಂದ್ರಿತಮಿಹಾ ಇವೆರಡು ಅರ್ಥಸ್ಪಷ್ಡವಾಗಲಿಲ್ಲ

   • ಧನ್ಯವಾದಗಳು . “ದುಂಬಿಗಳಿಗೆ ಕೇಂದ್ರವಾಗಿರುವ” “ಪುಷ್ಪಗಳನ್ನು ತುದಿಯಲ್ಲಿ ಹೊಂದಿರುವ ಬಾಣ” ಎಂಬರ್ಥದಲ್ಲಿ ಬಳಸಿದ್ದು.

 5. ಸ್ಮೃತಿಯೊಳ್ ಚನ್ನೆಯ ಮಂದಹಾಸಮಲರೊಳ್ ಭೂವ್ಯೋಮದೊಳ್ ಮೇಘದಾ-
  ಕೃತಿಯೊಳ್ ತಿಂಗಳ ಬೆಳ್ಪಿನೊಳ್ ಮಳೆಯನೀರೊಳ್ ಭಿತ್ತಿಯೊಳ್ ಶಾರದಾಲಂ-
  ಕೃತಿಯೊಳ್ ಕಂದನ ಮುಗ್ಧಮಪ್ಪ ಮೊಗದೊಳ್ ಕಣ್ಮುಚ್ಚಲಾಕಲ್ತಳೊಳ್
  ಪ್ರತಿದಿಕ್ಕಿಂ ಕಣೆಯೆರ್ಚಲೇನಿದಮಮಾ ಕಂದರ್ಪದರ್ಪಂ ಗಡಾ

  • ಆಹಾ! ಸೋಮಣ್ಣ ನಿಮ್ಮಿಂ ಸೊಗಸೆನಿಪವೊಲೇ ಸಂದುದೀ ಪೂರಣಂ ದಲ್!
   (“ಶಾರದಾಲಂ”ಒಂದು ಅಕ್ಷರ ಹೆಚ್ಚಾಗಿದೆ ನೋಡಿ)

 6. ಅಡಿಯೊಂದಂ ಸರಿಪಾಗಳಿಂದೆ ಪಿಡಿದುಂ ಗೈವೆಲ್ಲ ಕಜ್ಜಕ್ಕು ಮೇಣ್
  ಬಡಛಾಪಿಂದರೆ ಕುಂದಿಪೋಪ ಬದುಕೊಳ್ ವೈಭೋಗಸಂಚಾರಕುಂ
  ಕಡೆಗುಂ ಲೋಕದ ಚಿತ್ತದೊಳ್ ಸ್ಪುರಿಸಲುಂ ಕೈವಲ್ಯದಾನಂದಮಂ
  ಮುಡಿಪಾಗಿರ್ದಪೆನೆಂಬ ಸತ್ಯಮೆ ದಿಟಂ ಕಂದರ್ಪದರ್ಪಂ ಗಡಾ!!

 7. ಸ್ತುತಕರ್ಣಾಟವಚೋವಿಲಾಸರಚಿತಪ್ರಾಗ್ದುರ್ಲಭೋದ್ದಂಡಮಾ-
  ನಿತಚಾತುರ್ಯಕಲಾವಿಹಾರಕಲಿತವ್ಯಾಪಾರವರ್ಣಾತ್ಮಕೋ-
  ನ್ನತಶೈಲೀಯವಿಚಿತ್ರಗುಂಫನಲಸದ್ವೈದುಷ್ಯಮಾತ್ರಾತ್ಮಸಂ-
  ಸ್ತುತಮಾಂಡಯ್ಯನ ಕಾವ್ಯದೊಳ್ ಮೆರೆವುದೇ ಕಂದರ್ಪದರ್ಪಂ ಗಡಾ!

  • ಅಬ್ಭಬ್ಬಾ!
   ಏನೀ ಸತ್ಕವಿ ನೆಯ್ದ ಕಬ್ಬಿಗರಕಾವಂತಂದುಸಿರ್ಗಟ್ಟಿಸ-
   ಲ್ಕೇನೀ ಕ್ಲಿಷ್ಟಸಮಾಸದಿಂದೆ ಬೆರಸಲ್ ಭಾಪೆನ್ನರೇಂ ಪಾನಿಗಳ್ 🙂

   • (ಸಂಸ್ಕೃತ)”ಪರೀಕ್ಷೆಯ ನಿರೀಕ್ಷೆಯೊಳ್ ಪದದ ಸಾಲ್ಗಳಂ ಪೋಣಿಪರ್” — ಎಂದೀಗ ಹಿಂದಿನ ಸಮಸ್ಯೆಯೊಂದನ್ನು ಬದಲಿಸಿಕೊಂಡರಾಯಿತು 🙂

 8. ನೆಲೆಸಲ್ ದುಷ್ಟರೊಳಳ್ಕಿನಿಂ ಮಧುರ ಭಾವಂ ಮೂಡಿಸಿರ್ಕುಂ ರಸಾ
  ತಲದಂತಿರ್ಪುದು ಮಾಯೆಯಿಂ ಚಣದೊಳೇ ತೋರ್ಗುಂ ಚಮತ್ಕಾರದಂ
  ತೊಲವಂ ಮೂಡಿಸೆ ಮೌನದಿಂ ಮುನಿಗಳೊಳ್ಭಾವೋತ್ಕಟಾಕ್ಷಂಗಳಿಂ
  ಗೆಲೆ, ಸಂಸಾರಿಯನಾಗಿಸಲ್ಕೆ ಭಲರೇಂ ಕಂದರ್ಪ ದರ್ಪಂ ಗಡಾ

 9. ಪಿ ಎಚ್ ಡಿ ವಿದ್ಯಾರ್ಥಿಗಳ ನಡುವೆ lkg ಹುಡುಗನ ಹಾಗೆ ಅನೇಕ ದೋಷಗಳಿರುವ ನನ್ನ ಮೊದಲ ಮತ್ತೇಭವಿಕ್ರೀಡಿತದ ಪ್ರಯತ್ನ ವನ್ನು post ಮಾಡುವ ಭಂಡಧೈರ್ಯ ಮಾಡುತ್ತಿದ್ದೇನೆ..ದಯವಿಟ್ಟು ತಿದ್ದುವಲ್ಲಿ ಸಹಕರಿಸಿ..

  ಉರಿಯನ್ನೆಬ್ಬಿಸಿ ದೇಹದೊಳ್ ಮೆರೆಯುತುಂ ದುರ್ಮಾರ್ಗಮಂದೋರುತುಂ
  ಶಿರದೊಳ್ ತುಂಬುತುಮಾರುವೈರಿಗಳತಾನ್ ಧೀಕೂಪಮಂ ಸೇರುತುಂ
  ಶರವಂ ಬೀಸುತುಮಾನೆಭೂಮಿಗಧಿಪನ್ ಮೇಣ್ ಕಾರಣಂ ಸೃಷ್ಟಿಗೀ
  ಪರಿಯಿಂ ಹುಂಬರ ಜಂಭದಿಂ ಮೆರೆವುದೀ ಕಂದರ್ಪದರ್ಪಂ ಗಡಾ

  ಧೀಕೂಪ=ಮನದಾಳ,ಬೀರುತುಮಾನೆ=ಬೀರುತುಂ ಆನೇ(ನಾನೇ) ಎಂಬರ್ಥದಲ್ಲಿ ಬಳಸಿದ್ದೇನೆ. ಬಹುಷಃ ಆರು ವೈರಿ ಅನ್ನುವುದು ಸರಿಸಮಾಸ(ಸದ್ಯಕ್ಕೆ ಬೇರೇನೂ ಹೊಳೆಯುತ್ತಿಲ್ಲವಾದ್ದರಿಂದ ಈ ದೋಷದೊಂದಿಗೇ ಹಾಕಿದ್ದೇನೆ). ಕೊನೆಯ ಪಾದದಲ್ಲಿ ಜಂಭವೆಂಬ ಗುಣವನ್ನು ಜಂಭಕ್ಕೇ ಆರೋಪಿಸಿರುವುದೂ ತಪ್ಪಿರಬಹುದೆನ್ನಿಸುತ್ತದೆ.

 10. ಸೈನಿಕ/ಶೇನಿ|| ಹಿಂದಟ್ಟಿ ತಾನೇಣಮಂ(ಜಿಂಕೆ) ಪೋಗೆ ರಾಮಂ
  ಅಂದಾಕೆಯನ್ನೆಂತೊ ಪೊತ್ತೊಯ್ದನಯ್ಯೋ!
  ಬಂದೆಂತೊ ಸನ್ಯಾಸಿವೊಲ್ ತಾನು! ಜಲ್ಪಾ-
  ಕಂ, ದರ್ಪದರ್ಪಂ ಗಡಾ ರಾವಣೇಶಂ||

  ಸೈನಿಕದ (ನಾನಾನ ನಾನಾನ ನಾನಾನ ನಾನಾ) ಮೊದಲ ಮೂರು ಜೋಡಿಗುರುಗಳ ಪೈಕಿ ಎರಡನೆಯದನ್ನು ಒಡೆದರೆ ಅದು ಇಂದುನಂದನ/ವನಮಯೂರವಾಗುತ್ತದೆ (ನಾನನನ ನಾನನನ ನಾನನನ ನಾನಾ).

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)