Nov 132016
 

ಶರದದೊಳ್ ನವಿಲಾಡಿದೆ ನಲ್ಮೆಯಿಂ

  34 Responses to “ಪದ್ಯಸಪ್ತಾಹ ೨೨೯: ಸಮಸ್ಯಾಪೂರಣ”

 1. ದ್ರುತಪೂರ್ವ ವಿಲಂಬಿತ //
  ಮೊರೆತಿರಲ್ ನದಿ ಭೋರ್ಗರೆಯುತ್ತೆ ಮೇಣ್
  ಕರೆಯ ತಾಂ ಮಳೆಗಿತ್ತೆನೆನುತ್ತಲಾ|
  ಪರಿವ ತುಂಗೆಯ ತೀರದೊಳಾಗಳಾ
  ಶರದದೊಳ್ ನವಿಲಾಡಿದೆ ನಲ್ಮೆಯಿಂ||

  ಮಳೆಗಾಲದ ಅನಂತರ ನದಿ ಉಕ್ಕಿ ಹರಿಯುತ್ತಿದ್ದಾಗ (ಶರತ್ಕಾಲದಲ್ಲಿ) ಮಳೆಗೆ ತಾನೇ ಕರೆಕೊಟ್ಟೆನೆಂದು(ಸಾರ್ಥಕ ಭಾವ) ತುಂಗೆಯ ತೀರದಲ್ಲಿ ,ಶರತ್ಕಾಲದಲ್ಲಿ ನವಿಲು ನಾಟ್ಯವಾಡಿತು.
  ತಪ್ಪಿದ್ದಲ್ಲಿ ತಿದ್ದಬೇಕಾಗಿ ವಿನಂತಿ.

 2. ಸರಿಯುತಾನೆಯ ಪಂಕ್ತಿಯು ಕಾಡಿನೊಳ್
  ಕರಿಯ ಮೋಡದ ರಾಶಿಯ ಸೃಷ್ಟಿಸಲ್,
  ಮರುಳುಗೊಳ್ಳುತುಮೊರ್ಮೆಗೆ !ಪಾಡುತುಂ
  ಶರದದೊಳ್ ನವಿಲಾಡಿದೆ ನಲ್ಮೆಯಿಂ!!

 3. ಸರಳ ಪಿಂದಣ ಜೀವನಮೊಗ್ಗಿರಲ್
  ದೊರೆತ ಭಾಗ್ಯದೆ ತೃಪ್ತಿಯ ಕಾಣುತುಂ
  ಬೆರಗುಗಂಗಳನಾದರಿಸುತ್ತೆ ಹಾ!
  ಶರದದೊಳ್ ನವಿಲಾಡಿದೆ ನಲ್ಮೆಯಿಂ!!

  • ಏನರ್ಥ? ಪಿಂತಣ. ಎರಡನೇ ಸಾಲಿನಲ್ಲಿ ಛಂದಸ್ಸು ತಪ್ಪಿದೆ.

   • ಈ ನವಿಲು ಮೃಗಾಲಯದಲ್ಲಿ ಸೆರೆಯಾದದ್ದು.
    ತನಗೆ ಸಿಕ್ಕಿದ್ದರಲ್ಲಿಯೇ ತೃಪ್ತಿಯನ್ನು ಕಾಣುತ್ತ,, ತನ್ನನ್ನು ನೋಳ್ಪರನ್ನು ಆದರಿಸುತ್ತ,ಅವರುಗಳ ಸಂತಸಕ್ಕಾಗಿ, ಶರದದಲ್ಲಿಯೂ ಕುಣಿಯಿತು (ನವಿಲು)
    ಸವರಣೆಯನ್ನು ಮಾಡಿದ್ದೇನೆ _/\_

 4. ಹರಡಿಸಲ್ ಶಿವೆ ಸೂರ್ಯನ ರಶ್ಮಿಗಂ
  ತುರುಬ ತಾನ್ ಜಲಕೇಳಿಯ ನಂತರಂ|
  ನೆರಳನೇ ಕರಿಮೋಡಮೆನುತ್ತಲಾ
  ಶರದದೊಳ್ ನವಿಲಾಡಿದೆ ನಲ್ಮೆಯಿಂ||
  ಪಾರ್ವತಿಯು ಜಲಕೇಳಿಯ ಬಳಿಕ ತನ್ನ ಕೇಶಪಾಶವನ್ನು ಒಣಗಿಸಲು ಬಿಸಿಲಿಗೆ ಒಡ್ಡಿದಾಗ ಆ ನೆರಳನ್ನೇ ಕಾರ್ಗಾಲದ ಮೋಡವೆಂದು ತಿಳಿದು ನವಿಲು ಶರತ್ಕಾಲದಲ್ಲಿಯೂ ನರ್ತಿಸಿತು.

  • ಚೆನ್ನಾಗಿದೆ. ತುರುಬಂ.. ನಂತರ ಸಾಧುವಲ್ಲ. …ಕೇಳಿಯನಂತರಂ ಮಾಡಿಕೊಳ್ಳಿ. ಅನಂತರ…

   • ಧನ್ಯವಾದಗಳು. ತುರುಬಮಾ ಜಲಕೇಳಿಯನಂತರಂ// ಎಂದು ತಿದ್ದಿದ್ದೇನೆ 🙂

 5. ಉರಿದು ಸೂಸುವುವಲ್ತೆ ಪಟಾಕಿಗಳ್
  ಕರಿಯ ಮೋಡದ ಪಾಂಗಿನ ಧೂಮಮಂ
  ಭರದಿ ವಿಭ್ರಮೆಯಾಂತುದನೀಕ್ಷಿಸಯ್
  ಶರದದೊಳ್ ನವಿಲಾಡಿದೆ ನಲ್ಮೆಯಿಂ

 6. ಸಿರಿಯನೆಂತುಟು ಬಣ್ಣಿಪೆ ಕಾಣೆ ಕ-
  ಣ್ಕೊರೆವ ಪೆರ್ಮೆಯ ಜೀಯನ ವಾಸದೊಳ್
  ಕೊರೆದು-ಕೆತ್ತಿದಲಂಕೃತ ಕುಂಜರೇ-
  ಶರದದೊಳ್ ನವಿಲಾಡಿದೆ ನಲ್ಮೆಯಿಂ

  ಕುಂಜರ – ಆನೆ
  ರದ – ದಂತ

 7. “ಮರಳಿ ನೃತ್ಯವದಂದಿನ,ನೋಡೆನಾ
  ನಿರುವೆ ಪಂಬಲದಿಂ ಸಖ”ನೆಂದೊಡಂ
  ಹರಣಗೈಯದೆ ಕಾಲಮನಕ್ಕಟಾ!
  ಶರದದೊಳ್ ನವಿಲಾಡಿದೆ ನಲ್ಮೆಯಿಂ!

  (ಸಖಿಯ ಇಚ್ಚೆಯ ಪೂರೈಸೆ…)

 8. ಮರದೊಳಿರ್ದು ಸಮೀಪಕೆ ಮಾಧವಂ
  ಕರೆದನಾದಿನ ಗೋಗಳ ವೇಣುವಿಂ
  ಕರಿಯಮೋಡದೊಲಾತನ ಕಾಣುತುಂ
  ಶರದದೊಳ್ ನವಿಲಾಡಿದೆ ನಲ್ಮೆಯಿಂ

 9. ಅರಳದಿಂದುವ ಕಂಡರು ಕೌಮುದೀ
  ಬರದೆ ಕಾಲದೆ ಕಾಲುವೆ ತುಂಬಿರಲ್
  ಕರಿಯ ಮೋಡದೆ ನೀರಿರದಾಗಿರಲ್
  ಶರದದೊಳ್ ನವಿಲಾಡಿದೆ ನಲ್ಮೆಯಿಂ

 10. ಕರಿಯ ವಿತ್ತದ ಮೋಡದ ಛಾಯೆಯೊಳ್
  ಗರಿಗೆದರ್ಗುಮದೇಂ ಗಡ ವರ್ಷದೊಳ್
  ತಿರೆಯವಕ್ಕಿಯದೀಕ್ಷಿಸೆ ಮೋಡಿ(ದಿ)ಯಂ
  ಶರದದೊಳ್ ನವಿಲಾಡಿದೆ ನಲ್ಮೆಯಿಂ

  ತಿರೆಯವಕ್ಕಿ – ರಾಷ್ತ್ರಪಕ್ಷಿ

  ವರ್ಷಾ ಋತುವಿನಲ್ಲಿ ಕಪ್ಪುಹಣದ ಮೋಡದ ಛಾಯೆಯಲ್ಲಿ ಗರಿಗೆದರದ ರಾಷ್ಟ್ರಪಕ್ಷಿಯು ಶರದ್ ಋತುವಿನ ಮೋದಿ(ಮೋಡಿ)ಯಿಂದ ನಲಿದಾಡಿತು

 11. ವಿರಹ ಬಾಧೆಯು ಕಾಡೆ ಮಯೂರನಂ
  ಮರಳಿ ಮಾನಸದೇವಿಯ ಕಾಣುತುಂ
  ಮರೆಯುತುಂ ಭವಲೋಕದ ನೇಮವಂ
  ಶರದದೊಳ್ ನವಿಲಾಡಿದೆ ನಲ್ಮೆಯಿಂ

  ಶರತ್ಕಾಲದಲ್ಲಿ ವಿರಹಬಾಧೆ ಕಾಡಿದಾಗ, ಅಲ್ಲಿಗೆ ಬಂದ ಮನದರಸಿಯನ್ನು ನೋಡಿ, ಲೋಕದ ನಿಯಮವನ್ನು ಮರೆತು ನವಿಲು ಕುಣಿದಾಡಿದೆ ಎಂದು ಬರೆಯಲು ಪ್ರಯತ್ನಿಸಿದ್ದೇನೆ..ತಪ್ಪಿದ್ದಲ್ಲಿ ದಯವಿಟ್ಟು ತಿಳಿಸಿ[ದೇವಿಯ ಕಾಣುತುಂ ತಪ್ಪಾದಲ್ಲಿ ಬಹುಷಃ ಮರಳಿ ಮಾನಸ ದೇವಿಯು ಬಂದಿರಲ್ ಎಂದು ಮಾಡಬಹುದೆನಿಸುತ್ತದೆ]

  • ಚೆನ್ನಾಗಿದೆ 🙂

  • ತಪ್ಪು ಎಂದರೆ, ಇಲ್ಲಿ ಹೊಸಗನ್ನಡ ಹಳಗನ್ನಡದ ರೂಪಗಳನ್ನು ಬೆರಸಿದ್ದೀರಿ. ವಿರಹಬಾಧೆ ಕಾಡೆ, ದೇವಿಯಂ ಕಾಣುತುಂ ಎಂದೆಲ್ಲ ಆಗಬೇಕು. ತಿದ್ದಲು ಪ್ರಯತ್ನಿಸಿ.

   • ಧನ್ಯವಾದಗಳು_/\_. ತಿದ್ದಿದ ಪದ್ಯ ಇಲ್ಲಿದೆ.ಇಲ್ಲಿಯೂ ತಪ್ಪುಗಳಿದ್ದಲ್ಲಿ ದಯವಿಟ್ಟು ತಿಳಿಸಿ.
    ವಿರಹದಾ ಧಗೆ ಕಾಡೆ ಮಯೂರನಂ
    ಮರಳಿ ಬಂದಿರೆ ಮಾನಸ ದೇವಿಯುಂ
    ಮರೆಯುತುಂ ಭವಲೋಕದ ನೇಮವಂ
    ಶರದದೊಳ್ ನವಿಲಾಡಿದೆ ನಲ್ಮೆಯಿಂ

 12. ಗರಿಯ ಬಿಚ್ಚದು ಮುಂಬರಲಿರ್ಪುದಾ 
  ಶರದದೊಳ್, ನವಿಲಾಡಿದೆ ನಲ್ಮೆಯಿಂ
  ಮರುಳೆ ನೋಡಿದನೋಡೆವೆಯಿಕ್ಕದಂ
  ತರಿಯೆ ಬಿಟ್ಟರೆ  ಮತ್ತಿದು ಕಾಂಬುದೇಂ

 13. ಅರೆ ! ಮಯೂರಿಯು ವರ್ಷಕೆ ಕೂಗಿಹಳ್
  ತರಳೆಯಂದದಿ , ಮೇಘವು ಕಾಣದೈ !
  ಶರದ ವೇಗದಿ ಕೂಗಲು ಮೇಘನಂ
  ಶರದದೊಳ್ ನವಿಲಾಡಿದೆ ನಲ್ಮೆಯಿಂ

 14. ಬರಿಯ ಶೀತಕೆ ಬಾಡಿ ಮಯೂರವುಂ
  ನರನವೋಲ್ ಮುದುಡಿಂ ಕುಳಿತಿಲ್ಲವೈ
  ಭರದಿ “ತಾಂ ತನ ಧೀಂ ತನ” ಎನ್ನುತುಂ
  ಶರದದೊಳ್ ನವಿಲಾಡಿದೆ ನಲ್ಮೆಯಿಂ

  • ಒಳ್ಳೆ ಕಲ್ಪನೆ! ಆದರೆ ಸಮಸ್ಯೆಗೆ ಸೂಕ್ತಪರಿಹಾರ ಸಿಕ್ಕಿಲ್ಲವೇನೋ. ಮಯೂರಮುಂ – ಮಯೂರವೂ, ಮುದುಡಿಂ ಆಗದು. ಮುದುಡಿ ಆಗಬೇಕು. ಮುದುರುತ್ತೊರಗಿಲ್ಲವಯ್ ಎಂದು ಮಾಡಬಹುದು.

 15. ಕರದಿ ಕುಂಚವನೆತ್ತಿರೆ ಕೋವಿದಂ
  ಮರೆಯುತುಂ ಗಡ ವರ್ಷದ ಬಿಂದುವಂ
  ಬರೆದಿರಲ್ ಶರವೇಗದಿ ಚಿತ್ರವಂ
  ಶರದದೊಳ್ ನವಿಲಾಡಿದೆ ನಲ್ಮೆಯಿಂ

  ನವಿಲಿನ ನಾಟ್ಯವನ್ನು ಚಿತ್ರಿಸುತ್ತಾ ಚಿತ್ರಕಾರ ಮಳೆಹನಿಯನ್ನು ಬರೆಯುವುದನ್ನು ಮರೆತಿದ್ದರಿಂದ ಶರತ್ಕಾಲದಲ್ಲಿ ನವಿಲು ನಾಟ್ಯವಾಡಿದಂತೆ ಕಂಡಿತೆಂದು ಬರೆಯಲು ಯತ್ನಿಸಿದ್ದೇನೆ.ತಪ್ಪಿದ್ದಲ್ಲಿ ತಿಳಿಸಿ.

  • ಆಹಾ, ತುಂಬ ಚೆನ್ನಾದ ಕಲ್ಪನೆ ಮತ್ತು ಪರಿಹಾರ!

   ಕರದೆ ಕುಂಚವನೆತ್ತಿ ಕಲಾವಿದಂ
   ಬರೆದಿರಲ್ ಶರವೇಗದೆ ಚಿತ್ರಮಂ
   ಮರೆದಿರಲ್ಕೆ ವಿನೀಲಪಯೋದಮಂ
   ……………

   ಎಂದರೆ ಅರ್ಥಸ್ಪಷ್ಟತೆ ಬಂದೀತೆಂದು ನನ್ನ ಅನಿಸಿಕೆ. ಮಳೆಹನಿಗೆ ಬದಲಾಗಿ ಮೋಡಗಳನ್ನು ತಂದೆ 🙂

 16. “ಬರುವುದಾ ಋತುವೆಂದೊ? ನಲುಯುವೆಂ ನಾನೆಂದೊ?
  ಹೊರಳುವುದು ತಾನೆಂದೊ ವರ್ಷರ್ತುವು!”
  ಬರಲು ಬಯ-ಬಯಸಿರ್ಪ ಕಾಲವದು, ಅಲಸಿಪುದೆ?
  ಶರದದೊಳ್ ನವಿಲಾಡಿಹುದು ನಲ್ಮೆಯಿಂ||

  • enartha sir?

   • ವರ್ಷರ್ತುವು ಎಂದು ಕಳೆದು ಶರದೃತು ಬರುವುದೋ? ಎಂದು ಕುಣಿದೇನೋ? ಎಂದು ಹಲುಬುದ್ದಿದ್ದ ನವಿಲು, ಆ ಋತು ಬಂದಾಗ ಆಲಸ್ಯಪಡದೆ….

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)