Dec 052016
 

3bsduc5c14

  64 Responses to “ಪದ್ಯಸಪ್ತಾಹ ೨೩೨: ವರ್ಣನೆ”

 1. ಮರುಳಂ ಹೇಮಂತ ವಸುಂ
  ಧರೆಪೊತ್ತಿರೆ ಗರ್ಭದೊಳ್ ವಸಂತನ ಮುದದಿಂ /
  ತರುವಂ ಸೀಮಂತಕೆ ತಾ
  ನರಿಯದೆ ಬಿಳಿವರ್ಣದಿರ್ಪ ಮಂಜಿನ ಮಡಿಯಮ್//

  ಹೇಮಂತನಿಗೆ ನಿಜವಾಗಿಯೂ ಮರುಳು. ಏಕೆಂದರೆ ಭೂದೇವಿಯ ಹೊಟ್ಟೆಯಲ್ಲಿ ವಸಂತ ಎನ್ನುವ ಶಿಶುವಿರುವಾಗ ಆಕೆಯ ಸೀಮಂತಕ್ಕೆ ಬಿಳಿಯ ಸೀರೆಯನ್ನು(ಮಂಜಿನ) ಉಡುಗರೆಯಾಗಿ ತರುತ್ತಾನೆ(ವೈಧವ್ಯದ ಸಂಕೇತ).

 2. ಚೆನ್ನಾಗಿದೆ

 3. A post in Padyapaana after a long time.
  चतुर्षु मासेषु नदीषु मज्जन् शैत्यामयं शीतकरो न्ववाप ।
  कम्पन्तमम्बा वसुधानुकम्पेनालोक्य हेमन्तमृतुं चकार ॥

  ಚಾತುರ್ಮಾಸ್ಯಕಾಲದಲ್ಲಿ ನದಿಗಳಲ್ಲಿ ಮಿಂದು ಶೀತಕಿರಣನು ಶೀತವನ್ನು (ಚಳಿಜ್ವರವನ್ನು) ಹಿಡಿದನು. (ಕಾರ್ತಿಕಶುದ್ಧದ್ವಾದಶಿಯಂದು ಚಾತುರ್ಮಾಸ್ಯ ಮುಗಿಯುತ್ತದೆ) ಕಂಪಿಸುತ್ತಿದ್ದ ಅವನನ್ನು ಕಂಡು ತಾಯಿ ವಸುಧೆಯು ಅನುಕಂಪದಿಂದ (ಎರಡರ್ಥ – ತಾನೂ ನಡುಗಿ ಅಥವಾ ಸಹಾನುಭೂತಿಯನ್ನು ತೋರಿ) ಹೇಮಂತರ್ತುವನ್ನು
  (ಚಳಿಗಾಲವನ್ನು) ಮಾಡಿದಳು. (ಎಲ್ಲರೂ ತನ್ನ ಮಗನೊಂದಿಗೆ ನಡುಗಲಿ ಎಂದು).

 4. (ಹಿಂದೊಮ್ಮೆ ಬರೆದ ಪದ್ಯ, ಈ ಪ್ರಶ್ನೆಗೆ ಹೊಂದುವುದಾದ್ದರಿಂದ ಇಲ್ಲಿ ಹಾಕಿದ್ದೇನೆ 🙂 )

  ಬರಲು ಹೇಮಂತ ಋತು ಚುಮುಚುಮು
  ಕೊರೆವ ಗಾಳಿಗೆ ನಡುಗಿರಲು ಧರೆ
  ಕೊರಗುತಲಿ ಭೂತಾಯ ಮಕ್ಕಳು ಸಕಲ ತರುನಿಕರ
  ಭರದಿ ತಮ್ಮೆಲೆಗಳನು ಕೆಂಪಿಗೆ
  ತಿರುಗಿಸುತ ಕೆಳಗುದುರಿಸುತಲೀ
  ತರಗು ಹೊದಿಕೆಯ ಹೊದಿಸಿಬಿಟ್ಟವು ಬಿಸುಪ ನೀಡಲಿಕೆ!

 5. ಬೆದರದ ಮನುಜರ್ಗಳೊಳಗು
  ಮೆದೆನಡುಕಂ ಪುಟ್ಟಿಸುತ್ತೆ,ರವಿತೇಜಮನುಂ
  ಮುದುರಿಸೆ,ಹೇಮಂತಂ ಮೇ
  ಣದನೇಂ ತೋರ್ದಂ!ಭಲಾ ಜಗಕೆ ಸಾರ್ದಂ ತಾಂ!

 6. ಅಂಥ ವಿಶೇಷಗಳೇನೂ ಇಲ್ಲದ ಸರಳ ಪದ್ಯ.ದಯವಿಟ್ಟು ತಪ್ಪುಗಳಿದ್ದಲ್ಲಿ, ಉತ್ತಮಪಡಿಸಬಹುದಾಗಿದ್ದಲ್ಲಿ, ತಿದ್ದಿ,ತಿಳಿಸಿ

  ಇಳೆಯ ತಾಯಿಯು ಚಳಿಯ ತಾಳದೆ
  ಬಿಳಿಯ ಕಂಬಳಿ ಹೊದ್ದು ಮಲಗಿರೆ
  ಹೊಳೆವ ಸೂರ್ಯನು ಬೆಳೆದ ಚಂದಿರನಂತೆ ಬೆಳಗುತಿರೆ
  ಸುಳಿವ ಗಾಳಿಯು ಮಧುರ ಗಾನವ-
  -ನುಲಿಯುತಿರೆತಾ ಮಂದ್ರ ಗತಿಯಲಿ
  ನಲಿಯುತಿಹ ಹೇಮಂತ ತನ್ನಯ ಮಹಿಮೆ ಸಾರುತಲಿ

  https://venetiaansell.wordpress.com/2010/11/30/hemanta/ ಈ ಲಿಂಕ್ ನಲ್ಲಿರುವthe sun shines weakly – resembling the moon ಅನ್ನುವ ವಾಕ್ಯವನ್ನಾಧರಿಸಿ “ಹೊಳೆವ ಸೂರ್ಯನು ಬೆಳೆದ ಚಂದಿರನಂತೆ ಬೆಳಗುತಿರೆ” ಎಂದು ಬರೆದಿದ್ದೇನೆ.

 7. ಅರರೆ ! ಗಡಗಡನೆ ನಡುಗಿಸುವ ಚಳಿ ಬೀರಿಹನು
  ಚರಚರನೆ ಚುಚ್ಚುವನು ರೋಮಕೂಪದಲಿ
  ತರತರನೆ ನಡುಗಿಸುವನಧರವನು ಸುಲಭದಲಿ
  ಭರದಿಂದೆ ಬಂದಿಹನು ಹೇಮಂತನು

 8. ಮರದ ಸ್ವಗತ ಹೇಮಂತನನ್ನು ಕುರಿತು:

  ಅತ್ತಿತ್ತಲೆನ್ನುತ್ತೆ ಬಗ್ಗಿಸಿದನಯ್ ಗ್ರೀಷ್ಮ-
  ನಿತ್ತು ಮಳೆಯಂ ವರ್ಷನುಂ ತೊಯ್ದಪಂ
  ಮತ್ತೆ ನಿನ್ನಿಂದೆ ತರುವಾಂ ಹದನಮಾಂಪೆನೆನೆ
  ಬೆತ್ತಲಾಗಿಸಿದೆಯಲ ಹೇಮಂತನೆ

 9. ಸೂರ್ಯನ ವಿರಹದಲ್ಲಿ ಭುವಿಯು ಹೇಳುವ ಮಾತು

  ಚೆಂದದರ್ಕನ ವಿರಹಿಯನುರಕ್ತೆ ತಿರೆ ಮೊರೆವ-
  ಳಿಂದುವೆಳಕುಂ ಸುಡುಗುಮಲ್ತೆ ಸಖನೇ
  ಬಂದಪ್ಪುಗೆಯ್ವ ಹೇಮಂತ-ಸಖ-ಹಿಮ-ಜಾರ-
  ನಿಂದೆ ನಿಂದನೆಯುಳಿವವೊಲು ತಬ್ಬೆಯೇಂ?

 10. ವಿನುತೋತ್ತುಂಗ ವಿತಂತುವಮ್ ಕಳಿಪನೈ ಧಾತೃಮ್ ಗಡಾ ಮಾಘದೊಳ್
  ಕೆನೆಯುತ್ತಿರ್ಪುದು ವೇಗದಿಂ ಪರಿಯುವಾ ದಿವ್ಯಾಪ್ಸುವೊಳ್ ಭತ್ತದಾ /
  ತೆನೆಯಂ ಮುರ್ಚಿಹ ಮುತ್ತದಲ್ತೆ ಬಗೆಯಲ್ ಹೇಮಂತಕೇಶಂ ವಲಂ
  ಕೊನೆಯೊಳ್ ತಾಪವಿಹೀನಕಂಪನ ರವಂ ತತ್ಪಾದ ಶಬ್ದಮ್ ದಿಟಂ //

  ಬ್ರಹ್ಮನು ಮಾಘಮಾಸದಲ್ಲಿ ಕಳುಹಿಸುವ ಶ್ರೇಷ್ಠವಾದ ಕುದುರೆಯೇ ಈ ಹೇಮಂತ. ಭೋರ್ಗರೆಯುತ್ತಿರುವ ನದಿಗಳಲ್ಲಿ ಆತನ ಕೆನೆತವು ಕೇಳುತ್ತದೆ. ಭತ್ತದ ತೆನೆಗಳನ್ನು ಮುಚ್ಚಿರುವ ಮುತ್ತುಗಳಲ್ಲಿ(ಇಬ್ಬನಿ) ಆತನ ಆಯಾಲವು ತೋರುತ್ತದೆ. ಹಾಗೆಯೇ ಚಳಿಯಿಂದ ನಡುಗುವ ಶಬ್ದವೇ(ತಾಪವಿಹೀನ ಕಂಪನ ರವ ) ಆತನ ಖರಪುಟದ ಸದ್ದು .

  • “ಧಾತೃಂ” ಎಂದಾಗುವುದಿಲ್ಲ. ಅದರ ಬದಲಿಗೆ “ಬ್ರಹ್ಮಂ” ಎಂದೇ ಬಳಸಬಹುದಲ್ಲ! ಹಾಗೆಯೇ “ಇಹ” ಎಂಬುದು ವೃತ್ತಕಂದಗಳಿಗೆ ಸೊಗಸಲ್ಲ. “ಇರ್ಪ” ಎಂಬುದೇ ಹೆಚ್ಚು ಸೂಕ್ತ. ವಿತಂತು- ಎಂಬುದಕ್ಕೆ ಏನರ್ಥ? (FYI ವಿಧವೆ ಎಂಬ ಅರ್ಥವೇ ಪ್ರಸಿದ್ಧ.)

   • “ವಿನುತೋತ್ತುಂಗ ತುರಂಗಮಂ” ಎಂದೂ “ಮುರ್ಚಿದ” ಎಂದೂ ತಿದ್ದಿದ್ದೇನೆ. ವಿಜಯವಾಣಿಯ ಪದಬಂಧವೊಂದರಲ್ಲಿ ವಿತಂತುವನ್ನು ಕುದುರೆಯ ಸುಳಿವಿಗೆ ಉತ್ತರವನ್ನಾಗಿ ನೀಡಿದ್ದರು, ಅದನ್ನೇ ಬಳಸಿದ್ದೆ. ಸೂಚನೆಗಳಿಗಾಗಿ ಧನ್ಯವಾದಗಳು.

 11. ಕನ್ನಡದ ಕಂದ ಬಹಳಕಾಲದನಂತರ. ನವಂಬರ್ ಪ್ರಭಾವವಿರಬೇಕು.

  ಹೇಮಂತಕ್ಕೆ ಇದೊಂದು ಕಾರಣವೂ ಇರಬಹುದೆ?

  ಶಾರದಸಂಭ್ರಮವಳಿಯಲ್
  ತೆರಳಿದರಾ ಕಾಲಗೃಹದ ಪರ್ವಾತಿಥಿಗಳ್ |
  ನೀರಸತಪ್ತಂ ಕಾಲಂ
  ತೋರಣದೆಲೆಯೆಣಿಕೆಯಾಟದೊಳ್ ಮಯ್ಮರೆದನ್ ||

  ಶರತ್ಕಾಲದ ಸಂಭ್ರಮ ಕಳೆಯಲು ಕಾಲನ ಮನೆಯಲ್ಲಿದ್ದ ಅತಿಥಿಗಳು ತೆರಳಿದರು. ಹೀಗೆ ನೀರಸತೆಯಿಂದ ಬೆಂದ ಕಾಲನು ತನ್ನ ಮನೆಯ ತೋರಣದೆಲೆಗಳನ್ನು ಎಣಿಸುವ ಆಟದಲ್ಲಿ ಮೈ ಮರೆತನು.

  • ಬಹಳ ಚೆನ್ನಾಗಿದೆ. ಎರಡನೇ ಸಾಲಿನಲ್ಲಿ ಪ್ರಾಸ ಎಡವಿದೆ.

   • ಹೌದು ತಪ್ಪಿದ್ದೆ. ಧನ್ಯವಾದ. ಇಲ್ಲಿದೆ ಸವರಣೆ. ಅಭ್ಯಾಸ ತಪ್ಪಿದರೆ ಹೀಗಾಗುವುದು. 🙂
    ಶಾರದಸಂಭ್ರಮವಳಿಯಲ್
    ನೀರವಗೃಹಮಾಯ್ತು ಕಾಲನತಿಥಿಗಮನದಿಂ ।
    ತೀರದ ಬೇಸರದಿನವನ್
    ತೋರಣದೆಲೆಯೆಣಿಕೆಯಾಟದೊಳ್ ಮಯ್ಮರೆದನ್ ||

    • ಚೆನ್ನಾಗಿದೆ. ಹೆಬ್ಬಳಲು ಅವರು ಕನ್ನಡಲ್ಲಿಯೂ ಹೆಚ್ಚು ಹೆಚ್ಚು ಬರೆಯುತ್ತಿರುವುದು ಸಂತೋ‍ಷದಾಯಕ

  • Good one. I had thought that Soma’s imagination will remain unmatched this time. A good imagination is still elusive to me. For the first time since I resolved (and adhered) to penning at least one verse each week, I am apprehensive of failing this time. Hope the two remaining days will throw up something.

 12. ಗಿರಿಶಿಖರಂಗಳುಂ ಬೆರಗುಗೊಳ್ವ ತೆರಂ ,ಸಿತಸಾನುವುಣ್ಮಿಸಲ್,
  ಧರೆಯನೆ ಕಾಮನಾಲಯವನಾಗಿಸಿ ಸಂಭ್ರಮಕೋಶಮುರ್ಕಿಸಲ್,
  ಪುರವನಿತಾಕುಲಕ್ಕುಮುಡೆಯಂ ವಪುದುಂಬಿಸಿ ಹಾಯ್ಕಿಸಲ್!ದಿಟಂ
  ಕರಚಳಕಕ್ಕಮಾ ಮಣಿಯದರ್, ನಿಜಮಿರ್ಪರೆ!ಹೈಮರಾಯನಾ?
  (ಸಿತಸಾನು=ಮಂಜಿನ ಬೆಟ್ಟ)

  • ಚೆನ್ನಾಗಿದೆ. “ಕುಲಕ್ಕಂ” ಎಂದರೇ ಸಾಕು. “ಕುಲಕ್ಕುಂ” ಎಂದಾಗಬೇಕಿಲ್ಲ.”ಕರಚಳಕಕ್ಕಮಾರ್”ಎಂದಾಗಬೇಕಿತ್ತಾ?

   • _/\_ ಯಾರು ತುಂಬುಡುಗೆಯನ್ನು ಬಯಸುವದಿಲ್ಲವೋ ಅವರಿಗೂ ,ಎಂಬರ್ಥ್ಹದಲ್ಲಿಯೇ ಬರೆದಿದ್ದು!

 13. ಹನಿಹನಿಯು ಬಿದ್ದಿಹುದು ಸ್ವರ್ಗದಿಂದಿಬ್ಬನಿಯು (ಶಿ.ದ್ವಿ)
  ಮನಮೋಹಗೊಳಿಸುತಿದೆ ಗಾಜಹರಳು
  ಸನಿಹದಾ ಸುಮದೆಸೆಳ ಮೇಲಿಬ್ಬನಿಯು ಬೀಳೆ
  ತನುನಿಮಿರಿ ಸೆಳೆಯುತಿದೆ ವಜ್ರದಂತೆ

  • ಚೆನ್ನಾಗಿದೆ. ಮನಮೋಹ ಎನ್ನುವುದಕ್ಕಿಂತ- “ಮನಕೆ ಮೋಹಮನಿತ್ತ” ಎಂದು ಮಾಡಬಹುದು.

 14. What Shishira told Hemanta
  ನನ್ನವೋಲ್ ನಡುಗಿಸಲು ಬಲ್ಲೆಯೇಂ ಜನವನ್ನು
  ಬನ್ನಗೈವರ್ ನಿನ್ನ(ನ್ನು) ತಪಪರ್ವದಿಂ(ದೀಪಾವಳಿ)|
  ಖಿನ್ನನಾಗುತೆ ಬರಿದೆ ಗುಂಡಿಯಿರದುಡುಗೆಗಳ
  ಭಿನ್ನಗೈಯುತೆ ಮೆರೆವೆ ಮರಗಳೊಳ್ ನೀಂ||

 15. ಬೆಸರಿಸದೆ ನಡುಗಿಸುವನಳಿಸದೆಯೆ ಮುದುರಿಸುವ,
  ಕುದಿಸದೆಯೆ ಮನವನಿವ ಪಲ್ಲನದಿರಿಸುವ
  ಹೊದಿಸುತಲಿ ಬಿಳಿಮುಸುಕನಾ ಮಹಾ ಪರ್ವತಕು
  ಎದುರಿಸುವರಾರಿಹರದೆನುತ ನಗುವ

  ಹೆದರಿಸದೆಯೇ ನಡುಗುವಂತೆ(ಚಳಿಯಿಂದ) ,ಅಳಿಸದೆಯೇ ಮುದುಡಿ ಮಲಗುವಂತೆ, ಕೋಪಗೊಳ್ಳದೆಯೇ ಹಲ್ಲು ಕಡಿಯುವಂತೆ ಮಾಡುತ್ತಾನೆ ಎನ್ನುವ ಪ್ರಯತ್ನ. ದಯವಿಟ್ಟು ತಪ್ಪಿದ್ದಲ್ಲಿ ತಿಳಿಸಿ

  • ಆಹಾ! ತುಂಬ ವಿನೂತ್ನವಾದ ಕಲ್ಪನೆ. ಸೊಗಸಾಗಿದೆ. ಆದರೆ ಲಘುಗಳೇ ಹೆಚ್ಚಾಗಿರುವುದು ಸ್ವಲ್ಪ ಕಷ್ಟವೆನಿಸುತ್ತದೆ. “ಬೆದರಿಸದೆ” ಎಂಬಲ್ಲಿ ಟಂಕನದೋಷವಾಗಿದೆ. “ಪಲ್ಲ ಮಸೆಯಿಸುವ” ಎಂದೂ ಮಾಡಬಹುದು. ಮೂರು& ನಾಲ್ಕನೇ ಸಾಲುಗಳ ಮಧ್ಯೆ ಸಂಧಿಯಾಗಲು “ಪರ್ವತ-ಕ್ಕೆದುರಿಸುವ…” ಎಂದು ಮಾಡಬಹುದು

   • ಧನ್ಯವಾದಗಳು _/\_..ನಿಮ್ಮ ಸಲಹೆಯಂತೆ ತಿದ್ದಿದ ಪದ್ಯ ಇಲ್ಲಿದೆ.

    ಬೆದರಿಸದೆ ನಡುಗಿಸುವನಳಿಸದೆಯೆ ಮುದುರಿಸುವ
    ಕುದಿಸದೆಯೆ ಮನವನಿವ ಪಲ್ಲ ಮಸೆಯಿಸುವ
    ಹೊದಿಸುತಲಿ ಬಿಳಿಮುಸುಕನಾಮಹಾ ಪರ್ವತ-
    -ಕ್ಕೆದಿರಿಸುವರಾರಿಹರದೆನುತ ನಗುವ

 16. ಮಳೆಯಿಲ್ಲದ ಮೋಡವಿರಲ್
  ಬಿಳುಪಾಗಿಸೆ ಪಸಿರನುಂಗಿ ತಣ್ಪೆರೆಯುತಿರಲ್
  ಕಿಳೆಯೊಳ್ ಹೇಮಂತನಿರಲ್
  ನೆಳಲಿಂ ಬೇಸತ್ತು ಬಿಸಿಲ ಕಾಂಬರೆ ಲೋಗರ್

 17. ಮಾರ್ತಾಂಡಕೋಪತಾಪೇಣ
  ಸಂಕ್ಷೋಭಿತವಸುಂಧರಾಂ
  ಯೋ ರಕ್ಷತಿ ನಿತಾಂತಂ ತಂ
  ಹೇಮಂತಂಪ್ರಣಮಾಮ್ಯಹಂ!

 18. ಗಡಗಡ ನಡುಕಮನೊತ್ತಲು ನಿದ್ರೆಯು
  ಪಡೆದಿರಲುಣ್ಣೆಯ ಮೇಲ್ ಹೊದಿಕೆ
  ತೊಡಗಿಸಿ ಕೊಳ್ಳಲು ಬೇಡಿತೆ?ಕೆಲಸವ
  ದೊಡಲಿಗೆ ಬಿಸಿಬಿಸಿ ಚಹಕುಡಿಕೆ!

 19. ಇದು ಹೇಮಂತ ಋತುವಿನಲ್ಲಿ ಎದ್ದು ಕಾಣುವ ಪ್ರಕೃತಿಯ ಒಂದು ಚಿತ್ರಣವಷ್ಟೇ .. ವರ್ಣನೆಯಲ್ಲ ..

  ಮಂಜಿನ ಹೊದಕೆಯ ಮುಸುಕಿನೊ-
  ಳ೦ಜುತೆ ಕನವರಿಸಿ ಬೆಳ್ತನದೊಳಿರೆ ತರುಗಳ್ I
  ಮುಂಜಾನೆಯ ಕಡುಗೆಂಪಿನ
  ಕಂಜರಸಖನಂತೆಸೆದುದು ಕಿಂಶುಕಮಾಗಳ್ II

  ಹೆಚ್ಚಿನ ಮರಗಳು ಮಂಜಿನ ಮುಸುಕಿನೊಳಗೆ ಎಲೆಯುದುರಿಸಿ ಬೆಪ್ಪರಂತೆ ಕನವರಿಸುತ್ತ ಇರುವಾಗ ಕಿಂಶುಕವೃಕ್ಷವು ಮಾತ್ರ ಅರುಣೋದಯದ ಸೂರ್ಯನಬಣ್ಣದಿಂದ ಅಂತೆಯೇ ಶೋಭಿಸುತ್ತಿತ್ತು

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)