Jan 302017
 

ಪ್ರಸಿದ್ಧಕ್ರೀಡೆಯಾದ ಚದುರಂಗವನ್ನು ವರ್ಣಿಸಿ ಪದ್ಯ ರಚಿಸಿರಿ

  45 Responses to “ಪದ್ಯಸಪ್ತಾಹ ೨೪೦: ವರ್ಣನೆ”

  1. ಮಾಡಿನೊಳ್ ಕುಳ್ಳಿರಿಸಿ ಬೆಚ್ಚಗೆ
    ಯಾಡಿಸುವ ಚದುರಂಗದಾಟಕೆ
    ಕಾಡಿಗಟ್ಟುವ ಶಕ್ತಿಯಿರುತುಂ ,ಬರಿದೆ ಹಾಸ್ಯಮಿದೇಂ!
    ಓಡಿಯಾಡುತುಮಂತೆ ಕುಣಿಯುತೆ
    ನೋಡಿರೈ! ಲಘುದಾಳಮೊಂದೆ
    ತ್ತಾಡಿಸುವದಂ ವೀರರಂ ಶ್ರಮವಿಲ್ಲದೇ,ಪುಸಿಯೇಂ!
    (ಪಗಡೆಯಾಟವೆಂದುಕೊಂಡೆ :-).ತಪ್ಪಾಯ್ತು ಎನಿಸುತ್ತಿದೆ)

    • ಹೌದು. ನಿಮ್ಮ ತಪ್ಪೊಪ್ಪಿಗೆ ಸರಿಯಾಗಿದೆ 🙂
      ಆದರೆ ನನಗಂತೂ ಪಗಡೆಯಾಟವೂ ಬಾರದು, ಚೆಸ್ಸೂ ಬಾರದು 🙁

      • ಅಂತಂತಂದ್ರೆ…. ನಿಮಗೆ ಲ್ಯಾಟಿನ್ ಬರೋಲ್ಲ. ಆದರೆ ಅದರಲ್ಲಿ ಬೈದರೆ ಮಾತ್ರ ಗೊತ್ತಾಗುತ್ತೆ ಅಲ್ವೆ!?

      • ಸರಿಯಾಗಿ ಕಲಿತು,ಬರೆದರಾಯ್ತು ಬಿಡಿ:-)

  2. ಮನುಜ ಮತ್ತೆಯ ಬಲ್ಪ ಬಲದಿಂ-
    ದೆನಿತ ತೆರದಿಂ ಸಮರ ಗೈವಂ
    ತನುವ ಹಿಂಸಿಪ ಕದನ ಹಳತೈ ನವಿರು ಚದುರಂಗ
    ಮನದ ಯುದ್ಧದಿ ಬೊಜ್ಜು ದೊರೆಗೆ ಕ-
    ದನದಿ ಜಿಗಿಯುವ ತುರಗ, ಮಂತ್ರಿಯೊ-
    ಳೆನಿತು ಶಕ್ತಿಯಿರಲೆದುರ ಮೆದುಳು ಗೆದ್ದು ನಲಿಯುವುದು.

    • ಏನರ್ಥ? ಮನುಜ ಮತ್ತೆ ಅಂದರೇನು? ಬುದ್ಧಿಮತ್ತೆ? ನಾಲ್ಕು ಐದನೇಯ ಸಾಲಿನ ಮಧ್ಯ ಅಷ್ಟು ಗತಿಸರಾಗತೆ ಇಲ್ಲ. ಲಘುಗಳಿರುವ ಪದವನ್ನು ಸಾಲಿನಂತ್ಯದಲ್ಲಿ ಒಡೆಯುವುದು ಅಷ್ಟು ಹಿತವಾಗದು.

      • ಮನುಜನು ಬುದ್ಧಿಮತ್ತೆಯ ಬಲುಹಿನ ಬಲದಿಂ…
        ತುಸು ಸವರಣೆ:
        ಮನುಜನುಂ ಬುದ್ಧಿಬಲದಿಂ ತಾ-
        ನೆನಿತೊ ತೆರದಿಂ ಸಮರಗೈವಂ
        ತನುವಿಹಿಂಸಕ ಕದನಪರುಷಂ, ನವಿರು ಚದುರಂಗಂ|
        ಮನದೆ ಮಾತ್ರವು ದೊರೆಗೆ ಯುದ್ಧವು (attentiveness),
        ಒನಪಿನಿಂ ಜಿಗಿವಾಶ್ವ, ಮಂತ್ರಿಯೊ-
        ಳೆನಿತೊ ಶಕ್ತಿಯಿರಲ್ ಗೆಲಿವನೈ ಎದುರ ಪಕ್ಷವನುಂ||

  3. Movements of bishop and queen in Chess were very restricted in Europe. Freeing them from such constraints, Galileo urged the people to let them go all the way.
    ಸೀಸ|| ಭಾರತದೊಳುದಿಸಿದೀ ಚದುರಂಗದಾಟವದು ಮುಂದೊಮ್ಮೆ ಪೋದತ್ತು ಪರ್ಶಿಯಕ್ಕಂ
    ಮುಂದರಿದು ಪಶ್ಚಿಮಕೆ ಹರಡಿತಜ್ಞಾನವೇ ತಾಂಡವಿಸಿಹೈರೋಪ್ಯ ದೇಶಗಳಿಗಂ|
    ಇಟಲಿಯೊಳ್ ಗೆಲಿಲಿಯೋ ದೂರೇಕ್ಷದೊಳ್(Telescope) ಸೂರ್ಯಕೇಂದ್ರತ್ವಮಂ ತೋರೆ, ಪಾದ್ರಿಯಾಗಳ್
    “ಸಾಧ್ಯಮೇ ಚರ್ಚಿಸುವ, ನಂತರದೆ ನೋಡೋಣ”ವೆಂದನಜ್ಞಾನಮಂ ಮೆರೆಸುತೆಂತೋ||

    ತೇಟಗೀತಿ|| ಇಂತೇ ಸಂಕುಚಿತ ಬುದ್ಧಿಯಿಂ ಚದುರಂಗವನುಂ
    ಆಡುತ್ತಿದ್ದಿರ್ಪ ಜನರನ್ನು ಪ್ರೇರೇಪಿಸುತುಂ|
    ಗೆಲಿಲಿಯೋ ಉವಾಚ:
    ಒಂಟೆ-ರಾಣಿಯರ ಸಂಕುಚಿತ ಗತಿಯಿಂತೇಕೋ?
    ನಡೆಸಿ ಬೀಸಾಗಿ ಇವರನ್ನು ಪಟಲದೊಳ್(Chessboard) ನೀಂ||

    • ಪಾದ್ರಿ ಚರ್ಚಿಸುವ ಎಂದದ್ದು ಧ್ವನಿಪೂರ್ಣವಾಗಿದೆ :)) ಆಡುತ್ತಿದ್ದಿರ್ಪ ಎರಡು ಬಾರಿ ಇರು ಧಾತು ಬಂದಿದೆ. ಆಡುತ್ತಿರ್ದನಿತು ಜನರನ್ನು ಹೀಗೇನಾದರೂ ಮಾಡಬಹುದು.

      • ಆಡುತ್ತಿದ್ದಿರ್ಪ = ಆಡುತ್ತ ಇದ್ದಿರ್ಪ/ಇದ್ದಿಹ/ಇದ್ದಂಥ

        • ಇದ್ದು ಇರ್ಪ ಎರಡೂ ಇರು ಇದರಿಂದಲೇ ಬಂದದ್ದು. ಆಡುತ್ತಿದ್ದಂಥ ಸರಿಹೋಗುತ್ತೆ.

    • ಒಂಟೆ ಎಂದು ನೀವು ಗುರುತಿಸುವ ಚದುರಂಗದ ಕಾಯಿ ಯಾವುದು?

      • ಹಹ್ಹಾ… ಜಯನಗರದ ಕಡೆ ಕುದುರೆ ಎನ್ನುವುದಕ್ಕೆ ವಿದ್ಯಾರಣ್ಯಪುರದ ಕಡೆ ಒಂಟೆ ಅಂತಾರೆ.

        • ಜಯನಗರದಿಂದ ಹೊರಟ ಕುದುರೆಯು ವಿದ್ಯಾರಣ್ಯಪುರವನ್ನು ತಲುಪುವಹೊತ್ತಿಗೆ ಒಂಟೆಯಾಗಿರುತ್ತೆ!

      • Bishop

        • ಧನ್ಯವಾದಗಳು . ನಮ್ಮಲ್ಲಿ ಇದಕ್ಕೆ ರಥ , queen ಗೆ ಮಂತ್ರಿ ಎನ್ನುವ ಪದ್ಧತಿಯೂ ರೂಢಿಯಲ್ಲಿದೆ . ಒಂಟೆ ಅನ್ನುವ ಪದ ಆ ಕಾಯಿಗೆ ತುಂಬ absurd ಅನ್ನಿಸಿತು . ಅದಕ್ಕಾಗಿ ಕೇಳಿದೆ .
          ನಿಮ್ಮ bhishop ಅನ್ನುವ ಪದವು ಅರಿವು ಮೂಡಿಸುವಲ್ಲಿ , universal language ನ ಅಗತ್ಯವನ್ನು ತಿಳಿಸುತ್ತದೆ.

  4. ಕ್ಷಾತ್ರಬಲವನು ಮಂತ್ರಿಮತಿಯನು
    ಮಾತ್ರವಲ್ಲದೆ ತುರಗ,ಕುಂಜರ,
    ಕ್ಷೇತ್ರದಳಗಳ ಬಳಸಿ ಯುದ್ಧವ ಗೆಲ್ಲುವುದ ಕಲಿಸಿ
    ಜಾತ್ರೆಯಂತಿಹ ಬಾಳಿನಾಟದಿ
    ಸೂತ್ರಧಾರನ ಪಾತ್ರವಹಿಸುತ
    ಯಾತ್ರೆಗೈಯಲು ಬುದ್ಧಿಬಲವನು ನೀಡುವಾಟವಿದೈ

    • ತುಂಬ ಚೆನ್ನಾಗಿದೆ 🙂

    • ಇಬ್ಬರಿಗೂಧನ್ಯವಾದಗಳು _/\_

    • ಕ್ಷೇತ್ರದಳಗಳ~ಕ್ಷೇತ್ರದಲಗಳ – ದಳ is Kannada; ದಲ is sanskrit. Strange that Neelakantha hasn’t pounced on you yet! Except this, grammar is perfect. (Some minor ones: ಕ್ಷಾತ್ರಬಲmaM, ಮಂತ್ರಿಮತಿyaM, ಮಾತ್ರmaಲ್ಲದೆ, ಬಳಸಿ ಯುದ್ಧವ ಗೆಲ್ಲುವುದ ಕಲಿಸಿ ~ ಬಳಸುತಾಹವತಂತ್ರಮನ್ನೊರೆದುಂ, ಜಾತ್ರೆvOliha, ಬಾಳಿನಾಟde, ಪಾತ್ರವಹಿಸುte, ಬುದ್ಧಿಬಲmaM)

      • ಅದರಲ್ಲೇನೂ ತೊಂದರೆಯಿಲ್ಲ. ಕ್ಷೇತ್ರದಲ ಇದನ್ನೇ ಕನ್ನಡೀಕರಿಸಿದಾಗ ಕ್ಷೇತ್ರದಳ ಆಗುತ್ತದಲ್ಲ. ಚಂದ್ರಕಳಾನಿಧಿ ಇತ್ಯಾದಿ ಬಳಸುತ್ತೇವಲ್ಲ. ಶಬರಶಂಕರವಿಳಾಸ, ರಾಜಶೇಖರವಿಳಾಸ…

      • Thank you very much for your corrections Sir.
        “@Strange that Neelakantha hasn’t pounced on you yet!” 🙂 -I hope he will start doing that soon as it will help me to improve.
        Here is the modified verse
        ಕ್ಷಾತ್ರಬಲಮಂ ಮಂತ್ರಿಮತಿಯಂ
        ಮಾತ್ರಮಲ್ಲದೆ ತುರಗ,ಕುಂಜರ,
        ಕ್ಷೇತ್ರದಲಗಳ ಬಳಸುತಾಹವತಂತ್ರಮನ್ನೊರೆದುಂ
        ಜಾತ್ರೆವೋಲಿಹ ಬಾಳಿನಾಟದೆ
        ಸೂತ್ರಧಾರನ ಪಾತ್ರವಹಿಸುತೆ
        ಯಾತ್ರೆಗೈಯಲು ಬುದ್ಧಿಬಲಮಂ ನೀಡುವಾಟವಿದೈ

  5. ಗತಿಯ ಪರಿಣಾಮಗಳ ಚಿಂತಿಸು –
    ತಿತರ ಯೋಜನೆಗಳನು ಶಂಕಿಸು –
    ತತುಲ ಯುಕ್ತಿಯ ಯುದ್ಧರಂಗವನಾಟದೊಳ್ ಸೃಜಿಸಿ
    ಚತುರ ಕುಟಿಲೋಪಾಯ ಪೂರಿತ
    ಮತಿಗಳೊಳ್ ಮಸೆದಾಟ ದಾಟಿಸಿ
    ವಿತತ ಸೇನಾಪತಿಗಳಾಗಿಪುದೆಮ್ಮ ಭ್ರಾಂತಿಯೊಲೆ

    • ಚೆನ್ನಾಗಿದೆ. ವಿತತ-ಕಾಳಗ ಅರಿಸಮಾಸವಾಯಿತು 🙂

    • ಅಂದಹಾಗೆ ಅದು ವಿತಥ ಅಲ್ಲವೇ? ತೋರಾಣಿಕೆಯ, ನಿಜವಲ್ಲದ ಕಾಳಗ ತಾನೇ?

      • ವಿತತ = ವಿಸ್ತಾರವಾದ, ಎಂಬುದೇ ಇಂಗಿತ. ವಿಸ್ತಾರವಾದ ಯುದ್ಧದ ಭಾವವನ್ನು ಕುಳಿತಲ್ಲೇ ಕೊಡುತ್ತದೆ ಎಂಬ ಭಾವ.

  6. ಭವದೀರ್ವ ರಾಜರುಂ ಹಗಲಿರುಳ ಮನೆಯಲಾ-
    ಡುವ ರವಿಶಶಿಯರೆಂದು, ತಾರೆಗಳೆ ಕಾಲಾಳು
    ಅವಸರದಿ ಧಾವಿಸಿಹ ಮಂತ್ರಿ ಮೇಘನು ತಾನು
    ಕವಿಗಂತು ಸಂಭ್ರಮವು ಕಾದಾಟವೀಕ್ಷಿಸಲು

  7. ಚತುರಂಗಬಲದಿಂದೆ ಚಾತುರ್ಯಮಮ್ ತೋರು-
    ತತಿಯಾದ ಕಾಲಾಳು ಪಟುಭಟರ ಸೇನೆಯಂ
    ಹಿತವಾಗುವಂತುಳಿಸಿ ಕರಿ,ತುರಗವ೦ ಬಳಸಿ ಮುಂದಿರಿಸಿ ಮೆಲ್ಲನೆಳೆದು I
    ಜತನದಿಂದಾಪತ್ತಿನಿ೦ದರಸನಮ್ ಕಾಯ್ವ
    ಚತುರ ಸ್ಥಳಾಂತರದುಪಾಯಮಮ್ ಕೈಗೊಂಡು
    ಮತಿಯಂ ಪ್ರಯೋಗಿಸುತಲವಧಾನದೊಳ್ ನಡೆವ ಬುದ್ಧಿಗುದ್ಧು II

    ಸ್ಥಳಾಂತರದುಪಾಯ = castling ನ ಬಗ್ಗೆ ,
    ಹಿತವಾಗುವಂತುಳಿಸಿ = ಅನುಕೂಲಕ್ಕಾಗುವಂತೆ ಪದಾತಿಗಳನ್ನು ಕಳೆದುಕೊಂಡು ;ಅಂದರೆ , ಕೆಲವೊಮ್ಮೆ ನಮ್ಮದೇ ರಾಣಿಯ ,ರಥದ , ಆನೆಯ ನಡಿಗೆಗೆ ನಮ್ಮದೇ ಪದಾತಿಗಳು ಅಡ್ಡ ಬರುತ್ತವೆ ( ಆ ಸಂದರ್ಭದಲ್ಲಿ )

    • ಚೆನ್ನಾಗಿದೆ 🙂 ಕಾಲಾಳು ಪಟುಭಟರ, ಬುದ್ಧಿಗುದ್ದು ಇವು ಅರಿಸಮಾಸವಾದವು.

      • ಅರಿಸಮಾಸದ ವಿರೋಧವಾಗಿ ಧನಿ ಎತ್ತುವ ಪ್ರವರ್ತಕರಿಗೆ ಧನ್ಯವಾದಗಳು :-).

        ಕಾಲಾಳು =ಕಾಲ್ನಡೆಯ ಎಂದು ಮಾಡಬಹುದಲ್ಲವೇ ?
        ಬುದ್ಧಿಗುದ್ದು ಅನ್ನುವಲ್ಲಿ ಅದು ಕ್ರಿಯಾ ಸಮಾಸ ವಾಗುವುದಿಲ್ಲವೇ ? ಅನ್ನುವ ಜಿಜ್ಞಾಸೆ ಇದೆ .

        • ಬುದ್ಧಿಗುದ್ದು – ಗುದ್ದು is used here as a kriyaa-naama.
          ಕಾಲಾಳು = ಕಾಲ್ನಡೆಯ – how can this be? It is kaal aaLu.

          Also it is dani, and not dhani 🙂

          • ಕಾಲಾಳು ಅನ್ನುವ ಪದಕ್ಕೆ ಬದಲಾಗಿ ಅರಿಸಮಾಸವನ್ನು ತಪ್ಪಿಸಲು ‘ಕಾಲ್ನಡೆಯ ‘ ಎಂಬ ಪದ ಸರಿಯಾಗಬಹುದಲ್ಲವೇ ಎಂದು . ಮಾತ್ರೆ ಲೆಕ್ಕಾಚಾರಕ್ಕೆ ಸರಿ ಹೊಂದಿಸಲು ನಾನು ಆ ಪದ ಸೂಕ್ತವಾಗಬಹುದಲ್ಲವೇ ಎಂದು ಕೇಳಿರುವುದು .
            ಅರ್ಥ ಇದು … ಚದುರಂಗದ ಬೋರ್ಡ್ನಲ್ಲಿ ಪದಾತಿ ಒಂದೊಂದೇ ಹಜೆ ಮುಂದಿಡುವುದು . (ಮೊದಲ ಸಲ ಮಾತ್ರ ಮುಂದಕ್ಕೆ ೨ ಹೆಜ್ಜೆ ಇಡುವ ಅವಕಾಶ ಅದಕ್ಕಿದೆ ) ಆದ್ದ್ದರಿಂದ ಆ ಅರ್ಥ ಬರುವಂತೆ ‘ಕಾಲ್ನಡೆಯ’ ಅಂದಿರುವುದು . ಪದದ ಬಗ್ಗೆ ಮಾತ್ರ ನನ್ನ ಪ್ರಶ್ನೆ
            ಕಾಲ್ನಡೆಯ ಪಟುಭಟರು ಅಂದರೆ ಅರಿಸಮಾಸ ದೋಷ ಪರಿಹಾರವಾಗುವುದಲ್ಲವೇ ? .

            ಬುದ್ದಿ ನಾಮ ಪದ . ಗುದ್ದು ಕ್ರಿಯಾಪದ . (ಪದಕೋಶದಿಂದ ). ಬುದ್ದಿಯಿಂದ ಗುದ್ದು . ಆಟದಲ್ಲಿ ಬುದ್ಧಿಪೂರ್ವಕವಾಗಿ ಕೊಡುವ ಗುದ್ದು ಅನ್ನುವ ಅರ್ಥ ಅಲ್ಲಿ ನಾನು ಬಳಸಿರುವುದು. ಅದಕ್ಕೆ ಅರಿಸಮಾಸ ದೋಷ ಉಂಟೇ ?”ಬುದ್ಧಿಗುದ್ದು ”ಇದು ಕ್ರಿಯಾಸಮಾಸವೇ ?ಎಂದು ನನ್ನ ಪ್ರಶ್ನೆ

        • ಓಹ್, ಕಾಲ್ನಡೆಯ ಪಟುಭಟರು ಸರಿ. ಕಾಲಾಳು = ಕಾಲ್ನಡೆಯ ಎಂಬ ಸಮೀಕರಣದಿಂದ ಗೊಂದಲಕ್ಕೀಡಾದೆ.
          ಬುದ್ಧಿಯಿಂದ ಗುದ್ದು, ಬುದ್ಧಿಯ ಗುದ್ದು – ಬುದ್ಧಿಗುದ್ದು ಎಂಬುದೇ ಅರಿಸಮಾಸವಾಗುವುದು. ಮರಗಾಲಿನಿಂದ ಕುಣಿತ ಮರಗಾಲುಗುಣಿತ ಎಂಬಂತೆ. ಆದರೆ ಬುದ್ಧಿಗುದ್ದನ್ನು ಸಮರ್ಥಿಸಲು ಕ್ರಿಯಾಸಮಾಸ ಹೇಗೆ ಮಾಲಾದೀತು? ಅಂತದ್ದೆಲ್ಲೂ ನಾನು ನೋಡಿಲ್ಲ. ಕಾರ್ಯಗೈದನು ಎಂಬಂತೆ ಇಲ್ಲಿ ಮಾಡಿದಾಗ ಬುದ್ಧಿಗುದ್ದಿದನು ಎಂದು ವಿಚಿತ್ರವಾದ ರೂಪ ಬರುತ್ತದೆ. ಅಷ್ಟಕ್ಕೂ ನೀವು ನಿಮ್ಮ ಪದ್ಯದಲ್ಲಿ ಬಳಸಿದ್ದು ನಡೆವ ಬುದ್ಧಿಗುದ್ದು ಎಂದು, ನಾಮಪದವೇ. ಇಲ್ಲಿ ಗುದ್ದು ಎಂಬುದು ನಾಮಪದವಾಗುಳಿಯುತ್ತದೇ ವಿನಾ, ಕ್ರಿಯೆಯಲ್ಲ.

          • ಧನ್ಯವಾದಗಳು .

            ಚತುರಂಗಬಲದಿಂದೆ ಚಾತುರ್ಯಮಮ್ ತೋರು-
            ತತಿಯಾದ ಕಾಲ್ನಡೆಯ ಪಟುಭಟರ ಸೇನೆಯಂ
            ಹಿತವಾಗುವಂತುಳಿಸಿ ಕರಿ,ತುರಗವ೦ ಬಳಸಿ ಮುಂದಿರಿಸಿ ಮೆಲ್ಲನೆಳೆದು I
            ಜತನದಿಂದಾಪತ್ತಿನಿ೦ದರಸನಮ್ ಕಾಯ್ವ
            ಚತುರ ಸ್ಥಳಾಂತರದುಪಾಯಮಮ್ ಕೈಗೊಂಡು
            ಮತಿಯಂ ಪ್ರಯೋಗಿಸುತಲವಧಾನದೊಳ್ ನಡೆವ ಬುದ್ಧಿಯುದ್ಧ II

  8. ಬಿಳಿ ಕಪ್ಪಿನ ಚೌಕಟ್ಟೊಳ್
    ದಳಮಂ ಚಲಿಸಲ್ಕೆದಾಳಮಿಲ್ಲದೆಯುಂ ಅ-
    ಪ್ಪಳಿಸೆದುರಾಳಿಯನಳಿಸಲ್
    ಚಳಮತಿಯಿಂದೆ ಚದುರಂಗದೊಳ್ ಗೆಲುವಿರ್ಕುಂ

    • ಚೆನ್ನಾಗಿದೆ 🙂 ಬಿಳಿ ಕಪ್ಪಿನ ಎಂಬಲ್ಲಿ, ಮತ್ತು …ಮಿಲ್ಲದೆಯಂ ಅಪ್ಪಳಿಸೆ… ಎಂಬಲ್ಲಿ ವಿಸಂಧಿಯಾಗಿದೆ.

  9. ಚದುರಂಗದ ಪೊಡೆದಾಟಂ
    ಬಿದಿಯಾಡಿಸುತಿರ್ಪುದೆಮ್ಮನೆ೦ದಾವ್ ಬಗೆಯಲ್
    ಕುದುರೆಯೊ, ಗಜಮುಷ್ಟ್ರಗಳೋ
    ಬೆದಕಲ್ಕಾವಾಗಲಾರೆವೇಮಿಚ್ಛೆಯವೋಲ್
    [ಬದುಕು ವಿಧಿಯಾಡಿಸುವ ಚದುರಂಗ ಎಂದು ಬಗೆಯುವುದಾದರೆ, ಆಟದಲ್ಲಿ ನಾವು ಯಾರಾಗುತ್ತೇವೆ ಎಂಬುದು ನಮ್ಮಿಚ್ಛೆಯ೦ತಾಗದೇ]

  10. ಕರಿಬಿಳಿಯ ಸಾಲೆಂಟರಲಿ ಚೌಕ ಚಚ್ಚೌಕ-
    ಕರವತ್ತನಾಲ್ಕು ಮನೆಯಿರುವ ಚದುರಂಗ ।
    ಸರಿಸಮದ ಹದಿನಾರು ಕರಿಬಿಳಿಯ ಕಾಯ್ಗಳೊಳು
    ಪರಿಪರಿಯೆ ಕಾಯ್ದು ಕೊಲುವಿಕೆಯ ರಣರಂಗ ।।೧।।

    ಇದಿರಿದಿರು ಕುಳಿತೀರ್ವರಾಡುವಾಟಮಿದರೊಳ-
    ಗೊದಗಿಬರೆ ಚಿತ್ತವೃತ್ತಿಯದವರ ಸಂಗ ।
    ಮೊದಲಸಾಲಿನ ನಡುವಲಿಹ ರಾಜನೆಡ ಮಂತ್ರಿ
    ಬದಿಯಲಿಕ್ಕೆಲಕೊಂಟೆ ಮದಗಜ ತುರಂಗ ।।೨।।

    ಮುಂದಲಿನ ಸಾಲಲೊಟ್ಟೆoಟೆಂಟು ಕಾಲಾಳು
    ಪೊಂದಿರುವ ಸೈನ್ಯಮದೆ ಚದುರಂಗದಂಗ ।
    ಒಂದೊಂದೆ ಕಾಯಿಗಳನೊಮ್ಮೆ ಮಾತ್ರಮೆ ಚಲಿಸಿ
    ಬಂದಿಸುವುದೆದಿರು ರಾಜನಗೊಳಿಸಿ ಭಂಗ ।।೩।।

    ಬರಿದೊಂದೆ ಮನೆಮುಂದೆ ಸರಿಯುತಲಿ ಕಾಲಾಳು
    ತರಿಯಬಲ್ಲನುವೋರೆಗಿರುವ ಕಾಯ ।
    ಕರಿಬಿಳಿಯ ಮನೆಮಾತ್ರ ನೇರಕೋರೆಯೆ ಚಲಿಸು-
    ತರಿಯನೋಸರಿಸುದಿಂತೊಂಟೆ ತಾನು ।।೪।।

    ಉದ್ದಗಲಕಡ್ಡಾಡುತವೊ ಜೋಡಿಯಾನೆಗಳು
    ಗುದ್ದಾಡುವವು ವೈರಿಸೈನ್ಯ ದೊಡೆತಾಂ ।
    ಇದ್ದಕಿದ್ದಂತೆಗರುತೊಂದೆರೆಡು ಮನೆ ಕುದುರೆ
    ಸದ್ದು ಮಾಡುದು ಸುತ್ತಲೆಂಟು ಮನೆಯೊಳ್ ।।೫।।

    ಸುತ್ತೆಂಟು ದೆಸೆಗೊಂದು ಮನೆ ಜರುಗುವವ ರಾಜ
    ಮತ್ತೇಳು ಮನೆವರೆಗೆ ಮಂತ್ರಿ ಮಾತ್ರಂ ।
    ಅತ್ತಲಿಂದಿತ್ತಲೀ ಬಗೆಯ ನಡೆಯೊಡೆ ಕಡೆಗೆ
    ಮುತ್ತಿ ರಾಜನ ಕಟ್ಟೆ ಹೆಣೆದು ತಂತ್ರಂ ।।೬।।

    ಮುಗಿಬಿದ್ದು ಕಾಲಾಳು ಮುಟ್ಟಲಾ ಬದಿಯ ಮನೆ
    ಸಿಗುದು ಮರುಜನುಮಮದು ಮಿಗೆ ರೂಪದೊಳ್ ।
    ಮುಗಿದ ಚದುರಂಗದಾಟಮದು ಸರಿಸಮ ಕಡೆಗೆ
    ಹುಗುವು ಕಾಯ್ಗಳುಮೊಂದೆ ಸಂದೂಕದೊಳ್ ।।೭।।

    (“ಚದುರಂಗ”ದಾಟದ ಕಾಯಿಗಳ ಜೋಡಣೆ – ಜರುಗಣೆ ಬಗೆಗಿನ ಪದ್ಯ)

    • ಆಹಾ, ವಿವರಣೆ ಚೆನ್ನಾಗಿ ಬಂದಿದೆ. ಇದರಿಂದಲಾದರೂ ನಾನು ಈ ಆಟವನ್ನು ಕಲಿಯಬೇಕೆನ್ನಿಸುತ್ತಿದೆ. ಕೊನೆಗೆ ಒಂದೇ ಸಂದೂಕದಲ್ಲಿ ಹುಗುವುವು ಎಂಬುದು ತುಂಬ ಸೊಗಸಾಗಿದೆ 🙂

      • ಧನ್ಯವಾದಗಳು ನೀಲಕಂಠ, ನಿನಗಾಗಿಯೇ ಈ ಪದ್ಯವನ್ನು ಬರೆದದ್ದು !! ಮುಖ್ಯವಾಗಿ ರಾಜನಿಗೆ “ಚೆಕ್” ಕೊಡಬಹುದಾದ ವಿಚಾರವನ್ನೇ ಮರೆತಿದ್ದೆ, ಹಾಗಾಗಿ ಈ ೭ನೇ ಪದ್ಯ

        ಮರ್ಮದಿಂ ಮುನ್ನುಗ್ಗುತೆದಿರುಬದಿ ರಾಜನೆಡೆ
        ನಿರ್ಮಿಸಿರೆ ಜಾಲವವನಲುಗದಂತೆ ।
        ಧರ್ಮದಿಂದೆಚ್ಚರಿಪುದೆದುರಾಳಿಗದ ತಡೆಯೆ
        ಪೆರ್ಮೆಯಿದು ಚದುರಂಗದಾಟದೊಳ್ ಕಾಣ್ ।।೭।।

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)