Feb 062017
 

ಅವಧಾನಿ ಗಣೇಶ ಕೊಪ್ಪಲತೋಟ ಅವರು ಬೆಳ್ತಂಗಡಿಯ ಅವಧಾನದಲ್ಲಿ ಕೊಟ್ಟ ಮಂಜುಭಾಷಿಣಿಯ ಸಮಸ್ಯಾ ಪಾದವನ್ನು ಪೂರಯಿಸಿ

ಅಧರಾಮೃತಂ ದಿಟದೆ ಶಾಪಮಾದುದೇ

  47 Responses to “ಪದ್ಯಸಪ್ತಾಹ ೨೪೧: ಸಮಸ್ಯಾಪೂರಣ”

  1. ಸಮಸ್ಯೆಗೆ ಪರಿಹಾರವನ್ನು ಕೊಡಲು ಮುಂದುವರಿದಾಗ ಸಮಸ್ಯಾ ಸಾಲು ಅರಿಯಾಗಿ ಅಡ್ಡಬಂದು ಅಪಶಕುನವಾಯಿತು. ಇನ್ನೊಂದು ದಿನ ಪ್ರಯತ್ನಿಸುತ್ತೇನೆ 🙂

    • ೧) ಎಲ್ಲಿ ಅರಿ? ಹಾಗೆ ನೋಡಿದರೆ, ನಿಮ್ಮ ’ಸಮಸ್ಯಾಸಾಲು’ ಅರಿ!
      ೨) ಇದೇ ಅರಿ ಇನ್ನೊಂದು ದಿನ ಇದಿರಾದರೆ ರವಷ್ಟು ಮೆತ್ತಗಾಗಿರುತ್ತಾನೆಯೆ?

    • ???

      • ಸೋಮರು ಈಗ ತಿದ್ದಿದ್ದಾರೆ. ಮೊದಲು ಸಮಸ್ಯಾ ಸಾಲನ್ನು ಪೂರಯಿಸಿ ಅಂತ ಇತ್ತು :))

    • ನೀಲಕಂಠರೇ , ಅಪಶಕುನ ದೋಷಪರಿಹಾರವಾಗಿ ,ಪದ್ಯಪಾನದಲ್ಲಿ ಸಮಸ್ಯೆಯ ಸಾಲು ವಾಮನ ಅವತಾರದ ವಾಮನನಂತೆ ಮೂರು ಪಾದದ ಜಾಗವನ್ನು ಬೇಡುವಂತಿದೆ .

  2. ವಿಷಕನ್ಯೆ
    (War)ಪ್ರಧನಪ್ರಕಾರದೊಳನಂತರೀತಿಗಳ್
    ರುಧಿರಸ್ರವಂ ಮಗುಳೆ ಕೂಟನೀತಿಗಳ್|
    ವಿಧದೆಂತೊ ಹಾಲಹಲಕನ್ಯೆಯೀಯಲೇಂ
    ಅಧರಾಮೃತಂ ದಿಟದೆ ಶಾಪಮಾದುದೇ||

  3. ಮದಮೇರಿರಲ್ ಸರಸಿ ಮಂತ್ರಿಯೋರ್ವನೇ
    ಮುದಮೀವಳಂ ಸೆಳೆದ ಗೂಢವಾರ್ತೆಯಂ
    ಮದನಾರಿವೊಲ್ ಬರೆಯೆ ಪತ್ರಕರ್ತನುಂ
    ಅಧರಾಮೃತಂ ದಿಟದೆ ಶಾಪಮಾದುದೇ

  4. ಬುಧನಾದೊಡಂ ವಿಕಲಕಾಮದೀಪ್ಸೆ ತಾ೦
    ವಿಧಮಾಗಿರಲ್ಕೆಳೆಯ ಶಿಷ್ಯವೃಂದದೊಳ್
    ಸುಧೆಯೀಂಟಿರಲ್ ಕನಲುತೊಲ್ಲದಾಕೆಯಾ
    ಅಧರಾಮೃತಂ ದಿಟದೆ ಶಾಪಮಾದುದೇ

    • ವಿಕಲಮೇಂ? ವಿಪುಲಮೆನ್ನೈ.

    • ವಿಕಟಕಾಮ…?

      • ಕಾಮಧೂಮ್ರಿತ ದೃಶ್ಯಗಳು ಜಾಸ್ತಿಯಿದ್ದರೆ, ಸೆನ್ಸಾರಿನವರು V ಆಕಾರದ ಕತ್ತರಿಯಿಂದ cut ಮಾಡುತ್ತಾರಲ್ಲ, ಅದು ವಿ-ಕಟ-ಕಾಮ!

    • ಮಾಸ್ತಿಯವರ ’ರಂಗಸ್ವಾಮಿಯ ಅವಿವೇಕ’ಕತೆಯು ನೆನಪಿಗೆ ಬಂತು.

  5. ವಧೆಯಾದ ಪತ್ನಿಯನೆ ಕಾಮಿಸುತ್ತುಮೇ
    ವಿಧುರಂ ಮಹಾವಿರಹದಿಂದೆ ನೊಂದಿರಲ್ |
    ಮಧುಚಂದ್ರದೊಳ್ ಸವಿದ ಭಾವನಾತ್ಮಕಂ-
    ಗಧರಾಮೃತಂ ದಿಟದೆ ಶಾಪಮಾದುದೇ ? ||

    • ಭಾವನಾತ್ಮಕಂಗೆ ಅಧರಾಮೃತಂ? ಹಿಂದಿನ ನೆನಪೇ ಈಗ ಶಾಪ ಅಂತ ತಾತ್ಪರ್ಯವೇ?

      • ಹೌದು. ಭಾವನಾತ್ಮಕನಾದ ವಿಧುರನಿಗೆ ಹಿಂದಿನ ನೆನಪಿನಿಂದ ವಿರಹವೇದನೆಯಾಗಿ ಶಾಪದ ಪರಿಣಾಮವನ್ನುಂಟು ಮಾಡಿದೆ.

  6. ಸುಧೆಯುಂಡ ಜೀವಮರೆ!ಯೊಲ್ಲೆನೆಂದಿರಲ್
    ಮಧುಪರ್ಕ ಮೋದಮಯ ಖಾದ್ಯಭೋಜನಂ
    ನಿಧಿಗೆಂದೆ ಕೈಗೊಳುವ ಕಜ್ಜಮನ್ನುಮಾ,
    ಅಧರಾಮೃತಂ ದಿಟದೆ ಶಾಪಮಾದುದೇ!!

    (ಸವಿಯನ್ನುಂಡ ಜೀವಕ್ಕೆ ಇನ್ನಾವುದೇ ಕೆಲಸಮಾಡುವ ,ಉಣ್ಣುವ ಇಚ್ಚೆಯಿಲ್ಲದೇ,….)

  7. ವಿಧಿವತ್ತದಂಮೃತಕೆ ದೇವಲೋಕ ಮೇಣ್
    ಸುಧೆಯೆಂದಿಹರ್ ಸುರೆಯ ಮರ್ತ್ಯಲೋಕದೊಳ್ ।
    ಅಧಮಂ ನರಂ ವ್ಯಯಿಸೆ ಮಧ್ಯಪಾನಕಂ
    ಅಧರಾಮೃತಂ ದಿಟದೆ ಶಾಪಮಾದುದೇ ?!

    ಅಧರ = ಕೆಳಗಿನ

    ಗತ್ಯಂತರವಿಲ್ಲ, ಅಮೃತಕ್ಕೆ ಮೇಲಣ ದೇವಲೋಕವೇ, ಕೆಳಗಣ ಭೂಲೋಕದಲ್ಲಿ ಸುರೆಯೇ ಸುಧೆ, ದುರ್ದೈವಿ ಮನುಜ ಆ (ಕೆಳಗಿನ) ಸುರೆಯ ದಾಸನಾಗಿದ್ದಾನೆ ಅಲ್ಲವೇ ?!!

    • Fine imagination and different usage of the keelakapada.

      • ಧನ್ಯವಾದಗಳು ಪ್ರಸಾದ್ ಸರ್,
        ನಿಮ್ಮ ಸಮುದ್ರ ಮಥನದ “ಅಧರಾಮೃತ”ದ ಕಲ್ಪನೆಯೂ mindblowing !!

  8. ವಿಧಮಾದುದಿಂತು ವದನ ಪ್ರಸಾದನಂ
    ಮಧುವಂತಿತಾಂ ತುಟಿಗಳಂದಗಾಣಲುಂ
    ರುಧಿರಾಂಜನಂ ಬಳಿದವಳ್ಗವಳ್ಗೆ ಕಾಣ್
    ಅಧರಾಮೃತಂ ದಿಟವೆ ಶಾಪಮಾದುದೇ ।।

    ರುಧಿರಾಂಜನ = ಕೆಂಪುಬಣ್ಣದ ಮುಲಾಮು (~ Lipstick) !!

    (ಅವಳ ತುಟಿಗೆಂಪು ಅವಳಿಗೇ ಶಾಪವೇ ?!!)

    • ಚೆನ್ನಾಗಿದೆ ಉಷಾ ಅವರೆ. 🙂 ” ..ತುಟಿಗಳಂದಗಾಣಲುಂ” – ಇಲ್ಲಿ ಬಿಂದುವಿನ ಅಗತ್ಯವಿಲ್ಲವಾದ್ದರಿಂದ ” ..ತುಟಿಯನಂದಗಾಣಿಸಲ್” ಎಂಬುದಾಗಿ ಸವರಬಹುದು.

      • “ಮಂಜುಭಾಷಿಣಿ”ಯನ್ನು ಮೆಚ್ಚಿ, ಮತ್ತೂ ಅವಳ ತುಟಿಯನಂದಗಾಣಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಶಕುಂತಲಾ !!
        ತಿದ್ದಿದ ಪದ್ಯ :
        ವಿಧಮಾದುದಿಂತು ವದನ ಪ್ರಸಾದನಂ
        ಮಧುವಂತಿತಾಂ ತುಟಿಯನಂದಗಾಣಿಸಲ್
        ರುಧಿರಾಂಜನಂ ಬಳಿದವಳ್ಗವಳ್ಗೆ ಕಾಣ್
        ಅಧರಾಮೃತಂ ದಿಟವೆ ಶಾಪಮಾದುದೇ ।।

    • (ಪ್ರಸಾdhaನಂ)
      ಅದೆಂತು ಶಾಪವೋ ತಿಳಿಯದು! ಆಂಗ್ಲಕಾದಂಬರಿಗಳಲ್ಲಿ ಹೀಗೆಲ್ಲ ಓದಿದ್ದೇನೆ: When he saw her full lips he decided he would today eat all of her lipstick. ( eat ಎಂಬುದನ್ನು lick ಎಂದಾದರೂ ಅರ್ಥೈಸಬಹುದು, ಇಲ್ಲವೆ ತಿನ್ನುವಷ್ಟು ಪ್ರಮಾಣದಲ್ಲಿ ಬಳಿದುಕೊಂಡಿದ್ದಳು ಎಂದಾದರೂ ಅರ್ಥೈಸಬಹುದು!)

      • ಪ್ರಸಾದ್ ಸರ್, (ಪ್ರಸಾದನಂ) – ಇದು ಬಹುಶಃ ನಿಮ್ಮನ್ನು ಸೆಳೆಯಲು ಮಂಜುಭಾಷಿಣಿ ಮಾಡಿಕೊಂಡ “ಟೈಪೋ” ಇರಬೇಕು !!
        ನಾನು (ಅವಳಿಂದ ಅವಳಿಗಾದ) ವಿಲೋಮ “ಶಾಪ”ದ “ಕೆಮಿಸ್ಟ್ರಿ”ಬಗ್ಗೆ ಹೇಳಿರುವುದು. ನೀವು ಅದರ ಅನುಲೋಮ “ಪಾಶ”ದ “ಮಿಸ್ಟ್ರಿ”ಬಗ್ಗೆ ಯೋಚಿಸುತಿದ್ದೀರಲ್ಲ ?!!

        • Oh, what a play on phonemes! Viloma and Anuloma can serve as names of destructive cosmetics. I recall Sridevi’s words from the movie LAMHE: अपना चहरा खराब करने के लिए इस्तमाल कीजिए… खराब… खराब… खराब… खराब… (face lotion)

  9. ವಿಧುವಂಶಜಾತಕುರುಪಾಂಡುರಾಜಗಂ
    ವಿಧಿಯೊಡ್ಡಿದೊಂದು ವಿಷಜಾಲದಿಂದಲೇ
    ಮಧರಾಮೃತಂ ದಿಟದೆ ಶಾಪಮಾದುದೇ!
    ಮಧುತಲ್ಪದೊಳ್ ಸತಿಯೊಳೊಂದುಗೂಡಿರಲ್!!

  10. All these emerged from Samudramanthana: Lakshmi, Apasaras, Varuni, Kamadhenu, Airavata, Ucchaishravas, Kaustubha, Parijata, Sharanga, Chandra, Dhanvantari, Halahala and FINALLY (ಅಧರ also means LAST) Amrita. While the Gods and Demons were fighting it out, Garuda snatched it and gave it to the Gods.
    (Vishnu)ಅಧಿದೇವನಂ ಗರುಡನಿಂದೆ ಸೇರಿಯೇಂ
    (Last generated)ಅಧರಾಮೃತಂ ದಿಟದೆ ಶಾಪಮಾದುದೇ-|
    ಮಧಮತ್ವದಿರ್ಪಸುರರಿಂಗೆ ಹಾಲಿನಂ-
    ಬುಧಿಯಂ ವಿಧಾತರೊಡೆ ಮಂಥಿಪಾಗಲೈ||
    Idea credit to Smt. Usha. She used ಅಧರ as LOW. So I looked for other meanings of the word.

  11. ಬಾಲಾಂಜನೇಯನು ಹನೂಮಂತನಾದುದು: ಅಧರಾ=ಧರೆಯದಲ್ಲದ=ಆಕಾಶದ. ಅಮೃತ=ಸೂರ್ಯನೆಂಬ ಹಣ್ಣು
    ಬುಧನಿನ್ನುಮಾಗದಿಹ ಬಾಲ್ಯದೊಳ್ ಬಲಂ(ಆಂಜನೇಯ)
    ಮಧುಮಿರ್ಪ ಹಣ್ಣೆನುತೆ ತಿನ್ನೆ ಪೋದನೇಂ|
    (ಮೇಲೆ=)ಅಧಿದೀಪ್ಯಮಾನರವಿರೋಷಗೊಳ್ಳಲಾ
    ಅ-ಧರಾಽಮೃತಂ ದಿಟದೆ ಶಾಪಮಾದುದೇ||

    • ಅ-ಧರಾಮೃತ = ಭೂಮಿಗಂಟದ ಅಮೃತಫಲ ~ ಸೂರ್ಯ ಎಂಬ ಅದ್ಭುತ ಕಲ್ಪನೆಯ ಪೂರಣ ಪ್ರಸಂಗ ಬಹಳ ಇಷ್ಟವಾಯಿತು ಪ್ರಸಾದ್ ಸರ್ !!

  12. ಮಧುಮಾಲತೀ ವೆಸರ ಪೆಣ್ಣ ಕೂರ್ಮೆಯಂ
    ನಿಧಿಯೆಂಬವೋಲ್ ಪಡೆಯಲಾಶಿಸಿರ್ದಪಂ
    ಮಧುವೀಂಟನಂ ಸಿಗದ ಕಾಮತಪ್ತಗಾ
    ಅಧರಾಮೃತಂ ದಿಟದೆ ಶಾಪಮಾದುದೇ!

  13. ಮಧುರಾಪುರಂ ಕಡೆಯ ಪತ್ರಮಾದೊಡಂ
    ಮಧುರಂ ಗಡಾ ಜಗೆದ ವೀಳ್ಯದಾಸವಂ
    ವಿಧದೊಳ್ ಮೊಗಂ ಸುರಿಯೆ ನೋಟಮೀಕ್ಷಿಪ-
    ರ್ಗಧರಾಮೃತಂ ದಿಟದೆ ಶಾಪಮಾದುದೇ!

    • ಯಪ್ಪಾ! ಏನು ಭೀಬತ್ಸವಪ್ಪ! ಸಖತ್ ಕಲ್ಪನೆ.

    • ರಾಮಚಂದ್ರ ಸರ್, ನಿಮ್ಮ “ಲಾಲ್ ರಸ”ದ ಪದ್ಯ “ಲಾಲಾ ರಸ”ವನ್ನು ನೆನಪಿಸಿದೆ !!

      ವಿಧಿವತ್ತಲಿಂ ಗಡ ವಿವಾಹಪೂರ್ಣದೊಳ್
      ವಧು ಮೆಲ್ಲ ಜೊಲ್ಲ ಸುರಿಸಂದು ನಿದ್ರೆಯೊಳ್
      ಮಧುಮಂಚದಂಚ ತಲೆದಿಂಬು ತೊಯ್ದಿರಲ್
      ಅಧರಾಮೃತಂ ದಿಟದೆ ಶಾಪಮಾದುದೇ ?!!

  14. ಅಂದಿನ ಅವಧಾನಕ್ಕೆ ನಾನು ರಚಿಸಿಕೊಂಡ ಪರಿಹಾರ ಹೀಗಿತ್ತು.
    ವಧಿಸಲ್ ತಮೋಗುಣಮನಂತು ಕೌಶಿಕಂ
    ವಿಧಿಲೀಲೆಯಿಂದೆ ತಪಕೆಂದು ನೋಂತಿರಲ್
    ಮಧುರಾಂಗೆ ಮೇನಕೆಯೆ ಮೋಹಿಸಿರ್ದೊಡಂ-
    ತಧರಾಮೃತಂ ದಿಟದೆ ಶಾಪಮಾದುದೇ||

    ಅಂದು ಶತಾವಧಾನಿಗಳು ಮಾಡಿದ ಪರಿಹಾರವೂ ಪಾಂಡುವಿನ ಮರಣದ ಪ್ರಸಂಗವನ್ನು ಆಶ್ರಯಿಸಿತ್ತು.

  15. ಹಾದಿರಂಪರ ವಿ‍ಷಕನ್ಯೆ & ಆಂಜನೇಯನ ಕಥೆ, ಅನಂತ ಅವರ ಮಂತ್ರಿ, ರಾಮ್ ಹಲವು ಪೂರಣಗಳು- ತಂಬುಲರಸವ ಸೂಸಿ ನಕ್ಕ!, ಒಲ್ಲದವಳ ಅಧರಾಮೃತ, ಸಿಗದೇ ಹೋದ ಮಧುಮಾಲತಿ, ಶಕುಂತಲಾ ಅವರು ಬರೆದ ವಿಧುರನ ಕಥೆ,ಕಾಂಚನ ಅವರು ಬರೆದ ಹೊಟ್ಟೆ ತುಂಬಿದ ಮೇಲೆ ರೊಟ್ಟಿಯೂ ಕಹಿ ಎಂಬರ್ಥದ ಪದ್ಯ, ಪಾಂಡುವಿನ ಪ್ರಸಂಗ, ಉಷಾ ಅವರು ಬರೆದ ಅಧೋಲೋಕದ ಅಮೃತ, ಲಾಲಾರಸದ ಕುರಿತು- ಹೀಗೇ ಎಲ್ಲ ಪರಿಹಾರಗಳೂ ಚೆನ್ನಾಗಿವೆ. ಇದಕ್ಕೆ ಇ‍ಷ್ಟೊಂದು ಪರಿಹಾರಗಳು ಸಾಧ್ಯವಿದೆ ಎಂದು ನಾನು ಊಹಿಸಿರಲೂ ಇಲ್ಲ! ವಿಶೇಷತಃ ನೀಲಕಂಠ ಅವರು ಸಮಸ್ಯಾಪಾದವನ್ನು ಮಾಡಿದ್ದೂ ಸೊಗಸೆನಿಸಿತು.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)