May 292017
 

ತಮ್ಮ ಮಗುವನ್ನು ಮೊದಲಬಾರಿಗೆ ಶಾಲೆಗೆ ಕಳುಹಿಸುತ್ತಿರುವ ಮಾತಾಪಿತರ ಭಾವವನ್ನು ವರ್ಣಿಸಿ ಪದ್ಯರಚಿಸಿರಿ

  58 Responses to “ಪದ್ಯಸಪ್ತಾಹ ೨೫೭: ವರ್ಣನೆ”

 1. ಖೇದಂ ಪೆರ್ಮೆ ಕುತೂಹಲ
  ಮಾದುದು ಕಾತುರತೆಯುಕ್ಕೆವಾತಂಕಂ; ತಿ
  ಕ್ತಾದಿ ರುಚಿಗಳಾರು ಸಿಸುಗ
  ಳಾದಿಯ ಭಾವನೆಯ ಪಾಕದೊಳ್ ಸೇರಿರ್ಕುಂ

  (ದುಃಖ, ಹೆಮ್ಮೆ , ಕುತೂಹಲ, ಕಾತುರತೆ, ಉತ್ಸಾಹ, ಆತಂಕ ಎಂಬ ಆರು ರುಚಿಗಳು ಮಾತಾಪಿತರ ಭಾವನೆಯೆಂಬ ಅಡುಗೆಯಲ್ಲಿ ಸೇರಿದೆ)

  ಸಿಸುಗಳ ಆದಿ=ಮಕ್ಕಳ ಮೂಲ=ಪೋಷಕರು

  • ..ಯುಕ್ಕೆವಾತಂಕಂ ಗೊತ್ತಾಗಲಿಲ್ಲ. ಶಿಶುಗಳಾದಿ.. ಬಹಳ ವಿಚಿತ್ರವಾದ ಪ್ರಯೋಗ. ವ್ಯಾಖ್ಯಾನಾಪೇಕ್ಷಿತವೂ ವಿಮರ್ಶನಾರ್ಹವೂ ಆದುದು. ಅದು ಸೀದಾ ಸೀದಾ ಶಿಶುಗಳ ಮೊದಲನೇಯ ಭಾವನೆ ಎಂತಲೇ ಅರ್ಥ ಕೊಡುತ್ತದೆ 🙂

   • ಕಾತುರತೆ+ಉಕ್ಕೆವ+ಆತಂಕಂ=ಕಾತುರತೆಯುಕ್ಕೆವಾತಂಕಂ

    ….ತಿ
    ಕ್ತಾದಿ ರುಚಿ ಪೆತ್ತವರ ಮನ
    ದಾದಿಯ ಭಾವನೆಯ ಪಾಕದೊಳ್ ಸೇರಿರ್ಕುಂ

    ಈ ತಿದ್ದುಗೆ ಸೂಕ್ತವೇ ? ಸಾಧು ಪ್ರಯೋಗವೂ ಆಯಿತೆಂದು ತೋರುತ್ತದೆ.

    • ಉಕ್ಕೆವ ಇದು ಉತ್ಸವ ಇದರ ತದ್ಭವವೇ? ಉಕ್ಕೆವಂ ಉಕ್ಕೆವಮಾತಂಕ.. ಈ ರೀತಿ ಬಳಸಬೇಕು.

     • ಹೌದು. ಉತ್ಸಾಹ – ಉಕ್ಕೆವ , ತತ್ಸಮ-ತದ್ಭವಗಳು.
      “ಉಕ್ಕೆವಮಾತಂಕ” ಎಂದರೆ ಗತಿಗೆಡುತ್ತದೆಯಲ್ಲವೇ ?

      ಕಾತುರತೆಯುಕ್ಕೆವಂ ದುಗುಡಂ ತಿ…
      ಎಂದು ಬದಲಿಸಬಹುದೇ?

     • ಸರಿ

 2. ಕ್ರೋಂಚಪಾದ||
  ಸಂದುದು ನಾಲ್ಕೈ ವರ್ಷಗಳೀಗಳ್ ಜತನದೆ ಮಠವನು(ಶಾಲೆ) ಹಿಡಿದಿರಿಸಿರುತಾಂ (Admission to LKG booked four years in advance)|
  ವಂದಿಸಿ ದೇವಂಗಂದಿಗೆ ನಾಂಗಳ್ ರತಿಯೊಳು ತೊಡಗಿರೆ ನವಸತಿಪತಿಯರ್|
  ಚಂದದ ಬಾಲಂ ಪುಟ್ಟಲುಮೊಂದೇ ವರುಷದೆ, ಹರುಷದೆ ಬೆಳೆಸಿರೆ ಹಿತದಿಂ(for 3 yrs)
  ಬಂದುದದೋ ಹೋ! ಬೊಮ್ಮಟೆಯಂ ನಾಂ ತವಕದೆ ಮಠಕಹ ಕಳುಹುವ ದಿನಮುಂ||

  • ” ಬೊಮ್ಮಟೆ” ಎಂದರೆ ?

   • ಬೊಂಬೆ> ಮಗು

    • ಓ ! ತಿಳಿಯಿತು _/\_

     • ಕಂದಗರ್ಭಿತ ಕ್ರೌನ್ಚ//
      ಕಂದ// ಎನ್ನಯ ಸಂಶೋಧಂ ಗಡ
      ಮುನ್ನಂ ವರಕವಿಗೆ -ನಿಮಗೆ ತಿಳಿದಿರಬಹುದೈ/
      ಚೆನ್ನದೆ ಕಂದಂ ಪೊಕ್ಕನು
      ಚಿನ್ನಾ(ಣ್ಣಾ)! ಎನುವ ತವ ಲಿಖಿತ ಕವನದ ಪೊಡೆಯೊಳ್//

      ಕ್ರೌoಚಪದ- ಎನ್ನಯ ಸಂಶೋಧಂ ಗಡ ಮುನ್ನಂ ವರಕವಿಗೆ ನಿಮಗೆ ತಿಳಿದಿರಬಹುದೈ
      ಚೆನ್ನದೆ ಕಂದಂ ಪೊಕ್ಕನು ಚಿನ್ನಾ! ಎನುವ ತವಲಿಖಿತ ಕವನದ ಪೊಡೆಯೊಳ್//

      ಅರ್ಥ- ಇದು ಹೊಸ ಸಂಶೋಧನೆಯಂತೂ ಆಗಿರಲಿಕ್ಕಿಲ್ಲ. ನಿಮಗೆ ಗೊತ್ತಿರಬಹುದು. ನಿಮ್ಮ ಪದ್ಯದ(ಕ್ರೌoಚಪದ) ಕುಕ್ಷಿಯಲ್ಲಿ ಕಂದಪದ್ಯ(ಕಂದ) ಚೆನ್ನ್ನಾಗಿ ಅಡಗುತ್ತಾನೆ.
      ಇದು ಚಿತ್ರಕವಿತೆಯ ಗರ್ಭಿತಪದ್ಯಕ್ಕೊಂದು ಉದಾಹರಣೆ. ಆದರೆ ಒಂದಿಡೀ ಹಕ್ಕಿಯ ಕಾಲನ್ನು (ಕ್ರೌನ್ಚಪದ) ಸರಿದೂಗಿಸಲು ಇಬ್ಬರು ಕಂದರು ಬೇಕು. 🙂

  • ಗಮನಿಸಿರಲಿಲ್ಲ. ತಿಳಿಸಿಕೊಟ್ಟುದಕ್ಕೆ ಧನ್ಯವಾದಗಳು ಮಂಜಣ್ಣ.

 3. ಗಂಟೆ ಚಣಮಾಗಿತ್ತು ನಿನ್ನ ಕಳಿಸುವ ಮುನ್ನ-
  -ವೊಂಟಿಯಾಗಿಹೆನೀಗ ಕೇಳೊ ಕಂದಾ.
  ತುಂಟನಾಗದೆ ನೀನು ಜಾಣನಾಗುತೆ ಕಲಿಯು-
  -ತೆಂಟು ದಿಕ್ಕುಗಳಲ್ಲು ಪಡೆ ಕೀರ್ತಿಯಂ

  ಓದು ಬರಹದ ಭಾಗ್ಯವೆನಗಿಲ್ಲಿ ದಕ್ಕಿಲ್ಲ-
  -ವಾದೊಡೇನೆನಗದರ ಚಿಂತೆಯಿಲ್ಲ..
  ಸಾಧನೆಯು ನಿನದಾಗೆ ತೃಪ್ತಿಯೆನಗಹುದಲ್ತೆ
  ಮೇದಿನಿಗೆ ಕಾಡಲಂಕಾರಮಲ್ತೆ?

  (ಭೂಮಿಯ ಉದರದಿಂದ ಕಾಡು ಬೆಳೆಯುವುದರಿಂದ ಕಾಡು ಬೆಳೆದಷ್ಟೂ ಭೂಮಿಯ ಸೌಂದರ್ಯ,ಸಂತೋಷ ಹೆಚ್ಚುತ್ತದೆ ಹಾಗೇ ಮಗ(ಳು) ಬೆಳೆದಷ್ಟೂ ತಾಯಿಯ ಸಂತೋಷವೂ ಹೆಚ್ಚುತ್ತದೆ ಎಂಬರ್ಥದಲ್ಲಿ)

  ಬಸ್ಸು ಬಂದಿಹುದಿಲ್ಲಿ ಬೇಗ ಬಾರೆಲೊ ಪುಟ್ಟ
  ಸುಸ್ಸು ಬರುತಿಹುದೆನಗೆ ಬಾರೆನಮ್ಮ
  ಉಸ್ಸಪ್ಪ! ನನಗೆಷ್ಟು ಕಷ್ಟ ಕೊಡುವೆಯೊ ನೀನು
  ಮಿಸ್ಸ ಕಂಡರೆ ಭಯವು ಬಾರೆನಮ್ಮ

  • ಅನಂತರೇ ! ದಯವಿಟ್ಟು ತಪ್ಪು ತಿಳಿಯಬೇಡಿ !
   ನಿಮ್ಮ 3ನೆಯ ಪದ್ಯದ ಭಾಷೆಯು ‘ಪದ್ಯಪಾನ’ದ ಗಾಂಭೀರ್ಯಕ್ಕೆ, ಪದ್ಯಪಾನದ ಉದ್ದೇಶಕ್ಕೆ ಸಮಂಜಸವಾದುದಲ್ಲ ಎಂಬ ಅನಿಸಿಕೆ ನನ್ನದು.
   ಸುಸ್ಸು, ಮಿಸ್ಸು , ಬಸ್ಸು – ಎಂಬಂಥ ಪದಗಳು ಶಾಸ್ತ್ರೀಯ ಸಾಹಿತ್ಯಕ್ಕೆ ತಕ್ಕದ್ದಲ್ಲ. ನಿಮ್ಮ ಪ್ರತಿಭೆಯ ಬಗ್ಗೆ ಮಾತಾಡತ್ತಿಲ್ಲ. ಆದರೆ ಅದರ ಸಮರ್ಪಕ ಬಳಕೆಯು ಈ ಪದ್ಯದಲ್ಲಿ ಕಾಣುತ್ತಿಲ್ಲ.
   ಮನಸ್ಸಿಗೆ ಬೇಸರವಾಗಿದ್ದಲ್ಲಿ ಕ್ಷಮೆಯಿರಲಿ !!

   • ಇಲ್ಲ ಚೇತನ್, ಇದು ಚಾಟುಪದ್ಯವೆನಿಸುತ್ತದೆ. ಬರಿಯ ಇಂಥವನ್ನೇ ಬರೆದರೆ ಆಗ ನಿಮ್ಮ ಆಕ್ಷೇಪ ಸಲ್ಲುತ್ತಿತ್ತು. ಆಗೊಮ್ಮೆ ಈಗೊಮ್ಮೆ ಪದ್ಯಪಾನಿಗಳಲ್ಲಿ ಹಲವರು ಇಂಥವನ್ನು ಬರೆದಿದ್ದಾರೆ.

    • ಆಗಲಿ sir. ಅನಂತರಿಗೆ ನಾನು ಮತ್ತೊಮ್ಮೆ ಕ್ಷಮೆ ಕೋರುತ್ತೇನೆ.

     • ಶಾಲೆಗೆ ಹೋಗುವ ಮಕ್ಕಳು ತಾಯಿಯೊಂದಿಗೆ ಈ ರೀತಿ ಮಾತನಾಡುವುದು ಈಗಿನ ಕಾಲಕ್ಕೆ ಸಹಜವೆನಿಸಿದ್ದರಿಂದ (ಪದ್ಯದಲ್ಲಿ ವಿಶೇಷವೇನಿಲ್ಲದಿದ್ದರೂ) ಅನೌಚಿತ್ಯವೆನಿಸದು ಎಂದು ಭಾವಿಸಿದೆ.
      ನೀವು ಕ್ಷಮೆ ಕೋರಬೇಕಾಗಿಲ್ಲ..ನಾನು ಕ್ಷಮಿಸುವಷ್ಟು ದೊಡ್ಡವನೂ ಅಲ್ಲ 🙂

      ಪದ್ಯಪಾನದ ಮೊಗಕೆ ದಿಟ್ಟಿಬೊಟ್ಟಾಗಿರಲಿ
      ಚೋದ್ಯಮೆಂದೆನಿಸಿರ್ಪ ಪದ್ಯಮಿಂದು
      ಹೃದ್ಯಪದ್ಯಮನೊರೆಯೆ ಮರಳಿ ಯತ್ನವಗೈವೆ
      ಸದ್ಯಕ್ಕೆ ಮನ್ನಿಸಿರಿ ಚೇತನಣ್ಣ

     • ಅನಂತರೇ!

      ಇಪ್ಪತ್ತರ ಹರೆಯದ ತರುಣನ ಬಳಿ
      ತಪ್ಪದು ಕೇಳಲ್ ಕ್ಷಮಿಸೆಂದು |
      ಸಿಪ್ಪೆಯ ಸುಲಿದೊಡೆ ಫಲಮದು ಲಭಿಸುವೊ
      ಲೊಪ್ಪಿರಿ ಗೆಳೆತನ ಮರೆತೆಲ್ಲ ||

  • ಸುಸ್ಸುಸ್ಸು ಹಯ(ದ)ಪ್ರಾಸಮಿಹ ಚೌಪದಿಯ ಬಸ್ಸು ಮಿಸ್ಸಾಗಲಿಲ್ಲವಲ್ಲ ಸದ್ಯ !! ಜೊತೆಗೆ ಮತ್ತೆರಡು ಚೌಪದಿಗಳು !! ಪದ್ಯಪಾನ ತಾಣದಲ್ಲಿ ಹೀಗೇ “ಪಂಚ್”ಮಾತ್ರಾ & “ಚತುರ್”ಮಾತ್ರಾ ಚೌಪದಿಗಳು ದೊರೆಯುತ್ತಿರಲಿ !!

   • ನೀವು ಪದಗಳನ್ನೊಡೆವ ರೀತಿ ಚಮತ್ಕಾರಿಕವಾಗಿರುತ್ತದೆ. ನಿಮ್ಮನ್ನು ‘puಣ್-ಡಿತೆ’ ಎನ್ನಬಹುದೇ?

    • “ಖಂಡಿತಾ” ಅನ್ನಬಹುದು ಎಂದೆಸುತ್ತಿದೆ ! ಭಾಷಾತಜ್ಞರನ್ನು ಕೇಳಬೇಕು !!

     • ಮೂರ್ಧನ್ಯಾಕ್ಷರದ(’ಟ’ವರ್ಗ) ಹಿಂದಿನದು ’ಣ’ಕಾರವಾಗಬೇಕು; ’ನ’ಕಾರವಾಗದು. ಹಾಗಾಗಿ ಅದು ಪಣ್-ಡಿತೆ ಎಂದಾಗಬೇಕು. ಇದು ಅಭಿಪ್ರಾಯವೂ ಅಲ್ಲ, ಪ್ರತಿಕ್ರಿಯೆಯೂ ಅಲ್ಲ, ವಿಮರ್ಶೆಯೂ ಅಲ್ಲ, ಕುಚೋದ್ಯವೂ ಅಲ್ಲ. ನೀವು ಇಚ್ಛಿಸಿದಂತೆ ಇದು ಕೇವಲ ’ಭಾಷಾಶಾಸ್ತ್ರ’.

     • 🙁 ತಿದ್ದಿದ್ದೇನೆ ಸ್ವಾಮೀ !

     • ಖಂಡಿತದ ವಿವರಣೆ/ಸವರಣೆಗೆ ಧನ್ಯವಾದಗಳು ಪ್ರಸಾದ್ ಸರ್,ಮಂಜು

    • ಆಂಗ್ಲದಲ್ಲಿ ನ-ಣ-ಗಳಿಗೆ ಒಂದೇ ಅಕ್ಷರವಿರುವುದು – N. ಆದರೆ ಆ ಎರಡೂ ಉಚ್ಚಾರಣೆಗಳಿವೆ, ಮತ್ತು ಇವು ಸಂಸ್ಕೃತವ್ಯಾಕರಣವನ್ನನುಸರಿಸಿಯೇ ಇವೆ. Tenth ಎಂಬಲ್ಲಿ nಅಕ್ಷರವನ್ನು ನಕಾರದಂತೆಯೂ (ತದನಂತರದಲ್ಲಿ ’ತ’ಕಾರವು ಬಂದಿರುವುದರಿಂದ), Tent ಎಂಬಲ್ಲಿ ಅದೇ nಅಕ್ಷರವನ್ನು ಣಕಾರದಂತೆಯೂ (ತದನಂತರದಲ್ಲಿ ಮೂರ್ಧನ್ಯ’ಟ’ಕಾರವು ಬಂದಿರುವುದರಿಂದ) ಉಚ್ಚರಿಸುತ್ತಾರೆ. ಹಾಗಾಗಿ ನೀವು ಆಂಗ್ಲಾಕ್ಷರಗಳಲ್ಲಿ ಬರೆಯುವುದರಿಂದ ಏನೂ ವ್ಯತ್ಯಾಸವಾಗುವುದಿಲ್ಲ 🙁

     • ಇವೆಲ್ಲಾ ಬೇಕಿತ್ತಾ ನನಗೆ. ಸುಮ್ನೆ. ಈ ಭಾಷಾತಜ್ಞರ ಕೈಲಿ ಸಿಕ್ಕಿಹಾಕಿಕೊಳ್ಳಬಾರದೆಂದು ಇವತ್ತು ಅರ್ಥವಾಯಿತು.

     • hhahha

   • ಧನ್ಯವಾದಗಳು_/\_ಸಮಸ್ಯಾ ಪೂರಣ,ದತ್ತಪದಿ,ವರ್ಣನೆಗಳೊಂದಿಗೆ ಅಪ್ರಸ್ತುತ ಪ್ರಸಂಗಕ್ಕೂ ಸ್ವಲ್ಪ ಅಭ್ಯಾಸವಿರಲಿ ಅಂತ ಮೂರನೆಯ ಚೌಪದಿ ಬರೆದೆ ಅಷ್ಟೇ 😉

 4. ಭಾಷಾಕಾಶಿಯ ವಿಶ್ವನಾಥನೆನಿಕುಂ ಸಂಗೀತಸೌರಾಷ್ಟ್ರದೊಳ್
  ಘೋಷದ್ರಾಗಮಹಾಭಿಷೇಕದೊಳೆ ಮೀಯ್ಗುಂ ಸೋಮನಾಥಂಬೊಲಾ/
  ತೋಷತ್ತಾಂಡವರುದ್ರನಾಗಲಿ ಲಸದ್ವಿಜ್ಞಾನದಿಂದೆನ್ನುತು
  ದ್ಘೋಷಿಪ್ಪರ್ ಗಡಮೀಪ್ಸೆಯಿಂ ಕಳುಹುತುಂ ಸತ್ಪುತ್ರನಂ ಶಾಲೆಗಂ//
  (ತೋಷತ್ – ಶತೃಪ್ರತ್ಯಯ ಬಳಕೆ ಸರಿಯೇ?)
  ಭಾಷಾಕಾಶಿಯ ವಿಶ್ವನಾಥನಾಗಲಿ, ಸಂಗೀತಸೌರಾಷ್ಟ್ರದಲ್ಲಿ ರಾಗಾಭಿಷೇಕದಲ್ಲಿ ಮೀಯುವ ಸೋಮನಾಥನಾಗಲಿ , ವಿಜ್ಞಾನದಿಂದುನ್ಮತ್ತನಾಗಿ ಆನಂದತಾಂಡವ ಗೈವ ರುದ್ರನಾಗಲೆಂದು ಆಶಾಭಾವನೆಯಿಂದ ಶಾಲೆಗೆ ಕಳುಹುತ್ತಾರೆ.

  ಅಂದಹಾಗೆ ನಾನು ಸ್ತ್ರೀಶಿಕ್ಷಣದ ವಿರೋಧಿಯಲ್ಲ 😉

 5. ಬೆರಳಿನುಂಗುರ ಮುಡಿಯಲಿಹ ಗರಿ
  ಮುರಳಿಬಂಧವ ಕಳಚಿ ತೆಗೆದದೊ
  ತರಳ ನಂದನ ಕಳುಹುವಾದಿನವೆಂದೆಶೋದಳಿಗೆ ।
  ಕೊರಳ ತಾಯತ ನೊಸಲ ರಕ್ಷೆಯ
  ಸುರುಳಿಗೆಜ್ಜೆಯ ಕಳೆದು ಕಳುಹುದು
  ಕರುಳಬಳ್ಳಿಯನಂತು ಶಾಲೆಗೆ ಬೇಡವಮ್ಮನಿಗೆ !!

  • ಬದಲಿಗೆ:
   ಕಪ್ಪು ಶೂಸು, ಬಿಳಿಯ ಸಾಕ್ಸು
   ನೀಲಿ ಚಡ್ಡಿ, ಪಟ್ಟೆ ಶರಟು
   ಅಗಸನಂತೆ ರಾಶಿಪುಸ್ತಿ
   ಹೊತ್ತು ಹೊರಟನು!!
   Your verse is fine.

   • ಧನ್ಯವಾದಗಳು ಪ್ರಸಾದ್ ಸರ್,

    ಸುರುಳಿಗೆಜ್ಜೆಯ ಕಳಚಿ ಕಟ್ಟುದದೊ ಕರಿಬೂಟು
    ಕೊರಳ ತಾಯತ ಮರೆಸೆ ಕತ್ತುಪಟ್ಟೆ ।
    ಧರಿಸಿ ಸಮವಸ್ತ್ರವನು ಬೆನ್ನಿಗೇರಿಸಿ ಪಾಟಿ
    ಮರಿ ಕೂಸುಮರಿ ಮೆರೆಸಿ ಶಾಲೆಗಟ್ಟೆ ।।

 6. ಮಮತೆಯಿಂ ತರು ಪೋಷಿಸಿ ಪುಷ್ಪಮಂ
  ವಿಮಲರಾಗದಮರ್ದುವಮೆಯ್ದಿರಲ್ |
  ಸುಮದೊಲಿರ್ಪಣುಗಾ ! ನಡೆ ಸಾಲೆಗಂ
  ಭ್ರಮರಹಸ್ತಕಮೀಯುವೆ ನಿನ್ನನುಂ ||

  ತರುವು ಹೂವನ್ನು ಬೆಳೆಸಿ, ಅದಕ್ಕೆ ಪರಿಶುದ್ಧವಾದ ಪ್ರೀತಿಯೆಂಬ ಮಕರಂದವನ್ನು ತುಂಬಿದಂತೆ (ನಾನು ನಿನ್ನನ್ನು ಬೆಳೆಸಿದ್ದೇನೆ). ಹೂವಿನಂಥಾ ಮಗನೇ ! ಶಾಲೆಗೆ ನಡೆ. ನಿನ್ನನ್ನು (ಗುರುವೆಂಬ) ದುಂಬಿಗೆ ಒಪ್ಪಿಸುತ್ತೇನೆ.

  (ದುಂಬಿಯು ಹೂವಿನ ಮಕರಂದವನ್ನು ಸಿಹಿಜೇನಾಗಿ ಮಾಡಿ ಎಲ್ಲ ಜನರಿಗೂ ಸಿಹಿಯನ್ನು ಹಂಚುತ್ತದೆ)!

  • ನೇಮಮಲ್ತೆಲಳಿ ಪೂವ ಸಾರ್ವುದುಂ
   ಕಾಮುಕಂಗಮಲರನ್ನುಮೀವೆಯೇಂ!
   ಭೂಮಸಾರಘವ(Honey) ಹಂಚುವಾತುರಂ
   (Reverse)ವಾಮಕೊಪ್ಪಿಸಿತೆ ದೈವಶಾಸ್ತಿಯಂ(Divine rule)!!

   • ಸ್ವಾಮೀ!
    ನಿಮ್ಮ ಮಾತನ್ನು ಅರ್ಥಮಾಡಿಕೊಳ್ಳುವುದರಲ್ಲಿ ಅಸಮರ್ಥನಾಗಿದ್ದೇನೆ. ದಯವಿಟ್ಟು ಬಿಡಿಸಿ ಹೇಳುವಿರಾ?

   • ಅಳಿ/ದುಂಬಿಯು ಹೂವನ್ನು ಸಾರುವುದು ನಿಯಮ. ನೀವಾದರೋ ಹೂವನ್ನೇ ಒಯ್ದು ಕಾಮುಕದುಂಬಿಕೆ ಒಪ್ಪಿಸಹೊರಟಿದ್ದೀರಿ! ಜೇನುತುಪ್ಪವನ್ನು ಹಂಚುವ ಆತುರದಲ್ಲಿ ದೈವನಿಯಮವನ್ನು ಮುರಿಯುವಿರ?

    • ಆ! ಸರಿಪಡಿಸುತ್ತೇನೆ.
     ಶಿಷ್ಯನೇ ಗುರುವನ್ನು ಅರಸಿ ಹೊರಡುವ ಗುರುಕುಲ ಪದ್ಧತಿಯನ್ನು ತಲೆಯಲ್ಲಿಟ್ಟುಕೊಂಡು ರಚಿಸಿದೆ. ಅತಾರ್ಕಿಕವಾದದ್ದು ಗಮನಕ್ಕೆ ಬರಲಿಲ್ಲ.

    • ಬೇಡ ಬೇಡ. ನಿಮ್ಮ ಪದ್ಯವು ಸರಿಯಾಗಿಯೇ ಇದೆ. ನನ್ನದು ಚಾಟುಪ್ರತಿಕ್ರಿಯೆ ಅಷ್ಟೆ.

     • ಆದರೂ ನಿಮಗೆ ಮಾತು ಕೊಟ್ಟಿದ್ದೇನಲ್ಲವೇ ?ವಚನಭ್ರಷ್ಟನಾಗಬಾರದೆಂದು ಬೇರೆಯ ಪದ್ಯ ಬರೆದಿದ್ದೇನೆ !!

      ಶೃತಿವಿಶಾರದಮಾಗಿಹ ದೇವನಿಂ
      ಮತಿಯ ಸಾರವ ಪೀರಲು ದುಂಬಿಯೊಲ್
      ಸುತನೆ ಪೋಗೆಲೊ! ಬಿಜ್ಜೆಯ ಪದ್ಮದ
      ಪ್ರತಿ. ಬೃಹಸ್ಪತಿ ಮೆಚ್ಚಲಿ ನಿನ್ನನುಂ

 7. ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು. ಈ ಪ್ರಥಮಗುರುವು ತನ್ನ ಕಂದನ ವಿದ್ಯಾಗುರುವಿಗೆ ಹೇಳುವ ಮಾತು:
  ಸಮಯಮೆಲ್ಲಮನೊಬ್ಬನಿಂಗೇ
  ಮಮತೆಯಿಂ ಮೀಸಲಿಡುತೆಂತೋ
  ಅಮರಮನ್ನಿನ್ನೆಲ್ಲಮನ್ನುಂ ಕಂದಗರುಹಿದೆನಾಂ|
  ಅಮಿತದೆನಿತೋ ಶಾವಕರನುಂ(Brat)
  ರಮಿಸಬಲ್ಲೆಯೊ ಕಲಿಸಬಲ್ಲೆಯೊ
  (Control)ಯಮಿಸಲಾಗದೆಲವರ ಬೆಮರುತೆ ದಣಿದು ಕೂರುವೆಯೋ!!

  • ಆಹಾ! ಅಮರವನ್ನು ಶಾಲೆಗೆ ಹೋಗುವ ಮೊದಲೇ ಹೇಳುತ್ತಿದ್ದರೇ?

   • (ನಮಸ್ತೇಸ್ತು) ಮಹಾಮಾಯೇ ಶ್ರೀಪೀಠೇ ಸುರಪೂಜಿತೇ ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮೀ – ಇದು ಅಮರದಂತಿಲ್ಲವೆ?

 8. ಎಳೆಯ ಮಗುವದು ಬಿಜ್ಜೆ ಕಲಿಯಲು
  ಗೆಳೆಯರಾರೈ ನನ್ನ ಕಂದಗೆ
  ಬಳಲಿ ಬರುವನು ಯಾವ ಸಮಯಕೆ ಎಂದು ಕಳವಳವು
  ಮಳೆಯು ಭರದಿಂ ಬಂದು ಬಿಟ್ಟಿದೆ
  ಹೊಳೆಯು ಸಂಕವ ದಾಟ ಬಹುದೇ?
  ಚಳಿಯ ತಡೆಯದೆ ನಡುಗಿ ಹೋಗುವನೆಂದು ಚಿಂತೆಯಿದೆ

 9. ಮಾತಾ-ಪಿತರ ’ಭಾವ’ ಎಂತೆಂದು ಕೇಳಿರುವಿರಿ. ಮಾತೆಯ ಭಾವನ ಹಾಗೂ ಪಿತನ ಭಾವನ ಕತೆಗಳನ್ನು ವಿವಿಕ್ತವಾಗಿ ಹೇಳುವೆ ಕೇಳಿ:

  ಒಟ್ಟುಕುಟುಂಬ. ಹಿರಿಯ ಮಗ, ಎಂದರೆ ಈ ಮಗುವಿನ ದೊಡ್ಡಪ್ಪ, ಅರ್ಥಾತ್ ಮಗುವಿನ ತಾಯಿಯ ’ಭಾವ’, ಅರ್ಥಾತ್ ಆಕೆಯ ಗಂಡನ ಅಣ್ಣನು ಮನೆತನದ ಕೃಷಿಯನ್ನು ಗಮನಿಸಿಕೊಳ್ಳುತ್ತಾನೆ. ಪುರುಸೊತ್ತಿರುವುದರಿಂದಲೂ ಸಜ್ಜನನಾಗಿರುವುದರಿಂದಲೂ ಈತನು ಮನೆಯಲ್ಲಿನ ಎಲ್ಲ ಮಕ್ಕಳನ್ನು ಶಾಲೆಗೆ ಒಯ್ಯುತ್ತಾನೆ.
  ತಾತನ ಕಾಲದಿನೊಟ್ಟಿಗಿರುವರೈ
  ಮಾತೆಯ ಭಾವಂ ಸಜ್ಜನನೈ|
  ರೈತನು ತಾನಹನದರಿಂ ಬಾಲನ-
  ನೀತನುಮೊಯ್ಯುವ ಶಾಲೆಗಮೈ||

  ಆ ಮಗುವಿನ ತಂದೆಯ ’ಭಾವ’, ಅರ್ಥಾತ್ ಆ ತಂದೆಯ ಅಕ್ಕನ ಗಂಡನು ಬೈಂದೂರಿನವ, ಎಂದರೆ, ಆ ಅಕ್ಕನನ್ನು ಅಲ್ಲಿಗೆ ಕೊಟ್ಟಿದೆ (ವಿವಾಹದಲ್ಲಿ). ಅವನೂ ದಿಮ್ಮನೆಯ ಕುಳ. ಹೆಂಡತಿಯ ತವರಿನಲ್ಲಿ ಮನೆಯಳಿಯನಾಗಿದ್ದುಕೊಂಡು ಮಕ್ಕಳನ್ನೆಲ್ಲ ಶಾಲೆಗೆ ಒಯ್ಯುವುದು ಇತ್ಯಾದಿ ಚಾಕರಿಯನ್ನು ಮಾಡುವ ದರ್ದು ಅವನಿಗೇನು?
  ತಂದೆಯ ಭಾವನುಮಿಲ್ಲೆಲ್ಲಿರುವನು
  ಬೈಂದೂರ್ಗಕ್ಕನ ಕೊಟ್ಟಾಯ್ತು!
  ಕುಂದಿಲ್ಲವನಿಗೆ, ಗೃಹಜಾಮಾತನು-
  ಮಿಂದಾಗನು, ಚಾಕರಿಗೈಯಂ||

 10. ಪರವಿದ್ಯೆಯಂ ಪಡೆಯೆ ಪೋ-
  ದೊರೆದಂದೆಮ್ಮೆರ್ದೆ ಕಂದಗಂ ಪರುಟವಿಸಿಂ
  ಗುರುತುಗೊಳಿಸಿo ಗುರುತರದ
  ಗುರಿಗಾಣಲ್ ಗುರುವಿನೆಡೆಗೆ ನಡೆನೀನೆಂಬರ್ ।।

  ಪೋದೊರೆ = ಹೋಗಲಿಕ್ಕೆ ಬಿಡು, ಪರುಟವಿಸು = ಅಣಿಮಾಡು

  (ಹಿಂದೆ ಮಕ್ಕಳನ್ನು ಗುರುಕುಲಕ್ಕೆ ಕಳುಹುತ್ತಿದ್ದ ಕಲ್ಪನೆಯಲ್ಲಿ)

  • ಪರುಟವಿಸಿಂ ಹಾಗೂ ಗುರುತುಗೊಳಿಸಿo – ಇವು ಅನುಕ್ರಮವಾಗಿ ಪರುಟವಿಸಿರಿ ಹಾಗೂ ಗುರುತುಗೊಳಿಸಿರಿ ಎಂದು ಮಧ್ಯಮಪುರುಷದಲ್ಲಿ (ಬೇರಾರಿಗೋ) ಹೇಳಿದಂತಾಗುತ್ತದೆಯೇ ಹೊರತು, ಪರುಟವಿಸುತೆ/ಪರುಟವಿಸಿಟ್ಟು ಹಾಗೂ ಗುರುತುಗೊಳಿಸುತೆ/ಗುರುತುಗೊಳಿಸಿಟ್ಟು ಎಂದಾಗವು.

   • ಧನ್ಯವಾದಗಳು ಪ್ರಸಾದ್ ಸರ್,
    ತಿದ್ದುಗೆಯಲ್ಲಿ ಪರವಿದ್ಯೆ – ಅಪರವಿದ್ಯೆ ಯಾಗಿಬಿಟ್ಟಿದೆ !!

    ಪೊರೆದಿಂತೆಮ್ಮ ಕಂದಗ-
    ಪರವಿದ್ಯೆ ದೊರಕೊಳಿಸಲ್ಕವಗನುಗೊಳಿಸುತುo
    ಗುರುತುಗೊಳಿಸುತೆ ಗುರುತರದ
    ಗುರಿಗಾಣಲ್ ಗುರುವಿನೆಡೆಗೆ ನಡೆನೀನೆಂಬರ್ ।।

    ದೊರಕೊಳಿಸು = ಸಿಗುವಹಾಗೆ ಮಾಡು

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)