May 222017
“ಕೈಗೂಡೆ ಸಗ್ಗಂ ಗಡಾ” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು
“ಕೈಗೂಡೆ ಸಗ್ಗಂ ಗಡಾ” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು
ಬೇಡಿದ್ದು ಕೈಗೂಡಿಬಿಟ್ಟರೆ ಸ್ವರ್ಗವೇ ಸರಿ. ಆದರೆ ಹೋಲಿಕೆಗಾಗಿ ನರಕವೆಂಬುದಿಲ್ಲದೆ ಸ್ವರ್ಗದ ಪ್ರಾಶಸ್ತ್ಯವೆಲ್ಲಿಯದು?
ಸೈನಿಕ/ಶೇನಿ|| ಬೇಡಿದ್ದು ಕೈಗೂಡೆ ಸಗ್ಗಂ ಗಡಾ, ಕೇಳ್
ಬೀಡೆಂಬುದಿಲ್ಲರ್ದೆ (A type of hell)ತಾಮಿಸ್ರಮೆಂಬೋ|
ಕೋಡೆನ್ನೆ ಸ್ವರ್ಲೋಕಸೌಖ್ಯಂಗಳಂ ಪೇಳ್
ಈಡಂತೆ/ಈಡುಂಟು ತುಲ್ಯಕ್ಕೆ ಸಗ್ಗಕ್ಕಮೇನುಂ??
ಮನಮಂ ತೋಷಿಪ ನಿರ್ಜನಸ್ಥಳಕೆ ಭಾರ್ಯಾದಾಸಿಯಿಂ ತಾಂಬುಲಂ
ತನುವಂ ಷಡ್ರಸದಿಂದೆ ಪೋಷಿಪ ಲಸಚ್ಛ್ರೀ ಭೋಜನಂ ಮೇಣಿರ/
ಲ್ಕಿನತಾಪಂಗಳೆಯಲ್ಕೆ ಮಂಚಕಮದೊಂದಿರ್ದಲ್ಲಿ ತೂಂಗುತ್ತಿರಲ್
ದನಿಯಂ ತಾವರಿವರ್ ಮಹಾಕವಿಗದೋ ಕೈಗೂಡೆ ಸಗ್ಗಂ ಗಡಾ//
ದನಿ=ಧ್ವನಿ(ಕಾವ್ಯಧ್ವನಿ)
ಅಲ್ಲಸಾನಿಪೆದ್ದನನ ಪದ್ಯವೊಂದರ ಭಾವಾನುವಾದಕ್ಕೆ ಯತ್ನಿಸಿದ್ದೇನೆ. ಇದೇ ವೆಬ್ಸೈಟಿನ ತೆಲುಗು ಪದ್ಯಾಲು ಎಂಬ ವಿಭಾಗದಲ್ಲಿ ಮೂಲ ಪದ್ಯವಿದೆ.
ಮೊದಲ ಪಾದದಲ್ಲಿ ‘ತೊಷಿಪ’ ಪದವು ವೃತ್ತಕ್ಕೆ ಚ್ಯುತಿ ತಂದಿದೆ.
Typing error ಎಂದು ಭಾವಿಸುತ್ತೇನೆ !
ಓಹ್! ಹೌದು, ಟೈಪೋ ಆಗಿತ್ತು. ಸವರಿರುವೆ. ಧನ್ಯವಾದಗಳು.
ಮಗನೊಲ್ದೊಪ್ಪಿದ ಪೆಣ್ಣನೇ ಜನಕನುಂ ನೋಡುತ್ತೆ ಮೆಚ್ಚಲ್ಕೆ ಮೇಣ್
ನಗಮಂ ಬೇಡದೆ ಮಾವನಾಗುವೆನೆನಲ್ ಸಂದಿರ್ದ ಸತ್ಕಾಲದೊಳ್
ಮಗಳಂ ನೀಡಲದೊರ್ವ ಸದ್ವರನನಾ ಕನ್ಯಾಪಿತಂ ಶೋಧಿಸಲ್
ಸೊಗದಿಂ ಸೇರುತಲಿರ್ವರಾ ಬಯಕೆಯುಂ ಕೈಗೂಡೆ ಸಗ್ಗಂ ಗಡಾ
ಮಗ ಪ್ರೀತಿಸಿದ ಹೆಣ್ಣನ್ನೇ ತಂದೆಯೂ ಕಂಡು, ವರದಕ್ಷಿಣೆ ಇಲ್ಲದೆ ಸೊಸೆಯನ್ನಾಗಿಸಿಕೊಳ್ಳಲು ಬಯಸಿದ್ದಾಗ, ಆ ಹುಡುಗಿಯ ತಂದೆಯೂ ಈ ಹುಡುಗನನ್ನೇ ಮೆಚ್ಚಿ, ಅಳಿಯನಾಗಿಸಿಕೊಳ್ಳಬೇಕೆಂದು ಬಯಸಿದ ಸಂದರ್ಭ..
ಚನ್ನಾಗಿದೆ !
ಆದರೆ ಮೊದಲ ಸಾಲಿನಲ್ಲಿ ಮತ್ತೇಭ ವಿಕ್ರೀಡಿತ ವೃತ್ತಭಂಗವಾಗಿದೆ ?
ಧನ್ಯವಾದಗಳು_/\_. ತಿದ್ದಿದ್ದೇನೆ
ಚನ್ನಾಗಿದೆ! It should be magaM, not just maga. We can make it maganoldoppida.
ಧನ್ಯವಾದಗಳು ಸರ್_/\_..ಮೂಲದಲ್ಲೇ ತಿದ್ದಿದ್ದೇನೆ
ಪಾದಾಬ್ಜಂಗಳ ಭೃಂಗರೂಪ ಕವಚಂ ತೊಟ್ಟಿಪ್ಪನಾ ಶ್ರೀಧರಂ |
ನೋಡ್ದಾ ಪಾವುಗೆಯಪ್ಪಿಕೊಂಡ ಪದಮಂ ಸಂತೋಷದಿಂದುತ್ಸುಕಂ ||
ಖೇದಂಗೊಳ್ಳದ ಪಾದುಕಾಧರನು ತಾಂ ಕಂಡಿಪ್ಪನಲ್ಲಂಘ್ರಿಯಂ |
ಸಾಧುತ್ವಂ ಚರಣಕ್ಕೆ ನೋಡಲಪದಂ ಕೈಗೂಡೆ ಸಗ್ಗಂ ಗಡಾ ||
(ಪಾದಕಮಲಗಳಿಗೆ ದುಂಬಿಗಳ ಕವಚದಂತೆ Boots ತೊಟ್ಟಿದ್ದಾನೆ ಶ್ರೀಮಂತ. ಅವನು, ಪಾದುಕೆಯು ಅಪ್ಪಿಕೊಂಡ ಕಾಲುಗಳನ್ನು ಕಂಡು ತನ್ನ ಭಾಗ್ಯಕ್ಕೆ ತೃಪ್ತಿಪಟ್ಟನು. ಚಪ್ಪಲಿ ಹಾಕಿದವನು ಬರಿಗಾಲಿನವನನ್ನು ಕಂಡು ಸಂತೋಷಪಟ್ಟನು. ಬರಿಗಾಲಿಗೆ ಕುಂಟನನ್ನು ಕಂಡು ಹೆಮ್ಮೆಯಾಯಿತು.
ಹೀಗೆ ಎಲ್ಲರೂ ಅವರ ಪಾಲಿನ ಭಾಗ್ಯಗಳಿಗೆ ತೃಪ್ತಿ ಹೊಂದಿದಾಗ ಅದೇ ಕೈಸೇರಿದ ಸ್ವರ್ಗ)
Good idea. ನೋಡಲಪದಂ – what is this?
2 nd and 4th lines – missing praasa
hosagannaDa forms – ಪಾದುಕಾಧರನು,
Thanks sir
ನೋಡಲಪದಂ=ನೋಡಲ್+ಅಪದಂ
(ಕುಂಟನನ್ನು ನೋಡಿದಾಗ)
ಮರುಭೂಮಿಪ್ರತಿಯಾದ ಚಿತ್ತಮಿದರೊಳ್ ಸಂತೋಷ ಪುಷ್ಪಂಗಳಂ
ಸ್ಪುರಿಸುತ್ತುಂ ಬೆರಗಾಗಿಪೀ ಸಕಲ ಸದ್ಗೀತಾದಿ ನೃತ್ಯಂಗಳುಂ,
ವರಕಾವ್ಯಂಗಳೆ, ಯಕ್ಷಗಾನರವಮುಂ,ರಂಗಸ್ಥಲಪ್ರೇಂಖಮುಂ
ಪುರವಿದ್ವಾಂಸಮನೋಬಲಂಗಳಿನಹಾ ಕೈಗೂಡೆ ಸಗ್ಗಂ ಗಡಾ!!
(ಪುರವಿಧ್ವಾಂಸರ ದೆಸೆಯಿಂದಾಗಿ ,ವಿವಿಧ ಕಲಾಪ್ರಕಾರಗಳು ನಮಗೆ ದೊರೆಯುತ್ತಿರುವಾಗ(ಮರುಭೂಮಿಯಾದ ಚಿತ್ತದಲ್ಲೂ ಸಂತೋಷಪುಷ್ಪಗಳನೀವ),ಅದೇ ಸಗ್ಗವು)ಮರುಭೂಮಿಪ್ರತಿ=ಮರುಭೂಮಿಯ copy
ಸೊಗಸಾದ ಪದ್ಯ!
ಕಡೆಯ ಸಾಲಿನಲ್ಲಿ ಒಂದು ಲಘು ಅಧಿಕವಾಗಿದೆ
ಮರುಭೂಮಿಪ್ರತಿಯಾದ – marubhoomiprabhamaada??
ಸದ್ಗೀತಾದಿ – sangeeta iruvaaga sadgeeta eke? 🙂
ಯಕ್ಷಗಾನಕುಣಿತಂ – arisamaasa
ಪುರವಿಧ್ವಾಂಸ – vidvaansa – alpapraaNa
ಸರಿಪಡಿಸಿದ್ದೇನೆ(ತ..ಡ..ವಾಗಿ):-) ತಮ್ಮಿಬ್ಬರಿಗೂ ಧನ್ಯವಾದಗಳು
ನಾನಾ ವರ್ಣದ ಲಂಗ ದಾವಣಿಗಳುಂ ಕಾಲಿಂಗೆ ಕಾಲ್ಗೆಜ್ಜೆಯು೦
ತಾನಾನಂದದೆ ಮಾತೆಯೇ ತೊಡಿಸಲಾ ರತ್ನ೦ಗಳಂ ಹಾರದೊಳ್ I
ಆನಿಚ್ಚಿಪ್ಪುದೆ ಕ೦ಕಣ೦ ಕುಡುಲಿ ಮೇಣಾ ಕೈಗುಗುರ್ ಬಣ್ಣವು೦
ಆನೇ ಲೇಪಿಸುವಾಸೆವೊಂದಿದೆನಗಂ ಕೈಗೂಡೆ ಸಗ್ಗಂ ಗಡಾII
ಅಲಂಕಾರ ಪ್ರಿಯೆಯಾದ ಪುಟ್ಟ ಹುಡುಗಿಯೊಬ್ಬಳಿಗೆ ಸಮಾರಂಭಕ್ಕೆ ಹೋಗಲು ಪೂರ್ವ ತಯಾರಿಯಾಗಿ ,ತನ್ನ ಕೈಗೆ ತಾನೇ nail -polish ಹಚ್ಚಲು ಮಹದಾಸೆ ಇದ್ದು , ಅದಕ್ಕೆ ಅಮ್ಮ ಸಮ್ಮತಿಸಿದಾಗ ಆಗುವ ಸಂತೋಷ . ತನ್ನ ಬೇರೆ ಅಲಂಕಾರಗಳನ್ನೆಲ್ಲಾ ಅಮ್ಮನೇ ನಡೆಸಲಿ . ಉಗುರಿಗೆ ಬಣ್ಣ ಹಚ್ಚುವ ಕೆಲಸ ಮಾತ್ರ ತನಗೇ ಇರಲಿ ಎಂಬುದು ಅವಳ ಬಹುದಿನಗಳ ಕನಸಾಗಿತ್ತು .
chennagide 🙂 visandhi dosha at the end of 2nd and 3 rd lines.
ಧನ್ಯವಾದಗಳು ನೀಲಕಂಠರೆ .
ನಾನಾ ವರ್ಣದ ಲಂಗ ದಾವಣಿಗಳುಂ ಕಾಲಿಂಗೆ ಕಾಲ್ಗೆಜ್ಜೆಯು೦
ತಾನಾನಂದದೆ ಮಾತೆಯೇ ತೊಡಿಸಲಾ ರತ್ನ೦ಗಳಂ ಹಾರದೊಳ್I
ನಾನಿಚ್ಚಿಪ್ಪುದೆ ಕ೦ಕಣ೦ ಕುಡುಲಿ ಮೇಣಾ ಕೈಗುಗುರ್ ಬಣ್ಣವು೦
ಆನೇ ಲೇಪಿಸುವಾಸೆವೊಂದಿದೆನಗಂ ಕೈಗೂಡೆ ಸಗ್ಗಂ ಗಡಾII
ಮೂರನೇ ಸಾಲಿನ ಕೊನೆಯಲ್ಲಿ ಇನ್ನೂ ಹೋಗಿಲ್ಲ ದೋಷ 🙂
ಪೊಸತೆಂದೆಂಬಿನ ಕಲ್ಪನಾವಿಸರಣಂ ಪುಂಖಾನುಪುಂಖಂ ಸದಾ-
ಲಸದರ್ಥಪ್ರದವಾಗ್ವಿಶೇಷನಿಚಯಂ ಛಂದೋವಿಧಾಲಂಕೃತಂ
ಜಸಮಾಶಿಪ್ಪ ಸುಹೃಜ್ಜನಂ ಬಳಿಯಿರಲ್ಕುತ್ಸಾಹದಿಂ ಪದ್ಯದೊಂ-
ದೆಸಕಂ ಬೀರ್ವ ತೆರಂ ನಿರಂತರಮು ತಾಂ ಕೈಗೂಡೆ ಸಗ್ಗಂ ಗಡಾ!
ಅಮಮಾ! ಸಗ್ಗಮದಾಗಿರಲ್ಕೆ ದಿಟದೊಳ್ ನೀವ್ ಸಗ್ಗಮಂ ಪೊರ್ದಿರೈ 😉
ಕ್ಷಮಿಸಯ್ ಒಂದಿರದಾಯ್ತು! ನೂಂಕುವರಲಾ ಸಗ್ಗಕ್ಕೆ ಮಿತ್ರರ್ ಜಸಂ
ಭ್ರಮೆಯಾಯ್ತಯ್ ….. 🙂
What a diction man!
ಎಲ್ಲ ತಮ್ಮಂಥವರ ಆಶೀರ್ವಾದ 🙂 _/\_
ನನ್ನನ್ನು ನಾನೇ ಆಶೀರ್ವದಿಸಿಕೊಳ್ಳಲಾಗದೆ?
Hahhaa.. ಹಾಗೇನಾದ್ರೂ ಮಾಡಿಕೊಂಡೀರಾ ಜೋಕೆ! ಭಸ್ಮಾಸುರನ ಕತೆಯಾದೀತು!!
ಕರಿಮುಗಿಲು ಜಟೆಯಂತೆ ಬಿರುಮಳೆಯು ಸುರಗಂಗೆ
ಶರಧಿಯದು ಪಾಲ್ಗಡಲು ಕಲ್ಪತರು ಶೇಷ |
ಸರಸಿಜವು ಪೀಠ ದುಂಬಿಯ ಗಾನ ವೀಣೆನುಡಿ
ಪರಿಸರವು ಕೈಗೂಡೆ ಸಗ್ಗಂ ಗಡಾ ||
(ಮೊದಲ ಪಾದದಲ್ಲಿ ಶಿವ, ಎರಡನೆಯ ಪಾದದಲ್ಲಿ ವಿಷ್ಣು, ಮೂರನೆಯ ಪಾದದಲ್ಲಿ ಬ್ರಹ್ಮ-ಮೂವರೂ ಪ್ರಕೃತಿಯಲ್ಲಿಯೇ ಕಾಣುವವರು. ಆದ್ದರಿಂದ ಪರಿಸರವು ಕೈಸೇರಿದ ಸ್ವರ್ಗ)
[ಚೌಪದಿಯು ಹೊಸಗನ್ನಡದ ಪ್ರತೀತಿಯಾದ್ದರಿಂದ ಹೊಸಗನ್ನಡವನ್ನೇ ಬಳಸಿದ್ದೇನೆ]
ಈಪರಿಯ ಗಣಿತ ಸೂತ್ರದೆ ವೃತ್ತದಪರೂಪ
ರೂಪದೊಳು ಪದ್ಯಪೂರಣವನಿತ್ತು
ಛಾಪ ಮೂಡಿಸಲಾಗದಿರೆ ನಾಲ್ಕು ಸಾಲ್ಗಳೊಳ್
ಚೌಪದಿಯು ಕೈಗೂಡೆ ಸಗ್ಗo ಗಡಾ !!
ಗಣಿತ ಪ್ರಿಯೆಗೆ, ಸೂತ್ರದ ಪ್ರಕಾರ ನಾಲ್ಕು ಸಾಲುಗಳಿಂದ “ವೃತ್ತ” ರಚಿಸಲು ಆಗದೆ ಕಡೆಗೆ “ಚೌಕ”ವು ಸಾಧ್ಯವಾಗಿರಲು ಸಂತೋಷವಾಗಿದೆ !!
ವಿಶಿಷ್ಟವಾದ ಪೂರಣ.!
ಅದ್ಭುತ!!
“ಶುಶ್ರೂಷ೦ ಬದುಕಲ್ಕೊಡಂಬಡುಕೆಯೊಳ್ ಕೈಗೂಡೆ ಸಗ್ಗo ಗಡಾ” ಎಂದು – ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ / ಮಲ್ಟಿ ಆರ್ಗನ್ ಡಿಸಾರ್ಡರ್ ಪೇಶಂಟ್ ಇಬ್ಬರಿಗೂ ಅನ್ವಯಿಸುವಂತೆ “ವಿನೋದವಾಗಿ” ವೃತ್ತದಲ್ಲಿ ಬರೆಯಲು ಪ್ರಾರಂಭಿಸಿದ್ದು ಸಾಧ್ಯವಾಗದೆ ಈ ಚೌಪದಿ !! ಮೆಚ್ಚಿದ್ದಕ್ಕೆ ಧನ್ಯವಾದಗಳು ಚೇತನ್ !