Jun 052017
 

ಕಂದಪದ್ಯದ ಸಮಸ್ಯೆಯ ಸಾಲನ್ನು ಪೂರ್ಣಗೊಳಿಸಿರಿ

ಕಂಡು ಕುರುಡು ಕೇಳಿ ಕಿವುಡು ನುಡಿ(ದ೦)ದು೦ ಮೂಕಂ

  95 Responses to “ಪದ್ಯಸಪ್ತಾಹ ೨೫೮: ಸಮಸ್ಯಾಪೂರಣ”

  1. ಸಿಂಡರಿಸಿದ ಮೊಗದಿಂದಂ
    ಮಂಡಿಸೆ ದೌರ್ಭಾಗ್ಯ ಯೋಜನೆಗಳೆಂದೆಂದುಂ
    ಭಂಡನೊಲಿರೆ ಸಿದ್ರಾಮಂ
    ಕಂಡು ಕುರುಡು ಕೇಳಿಕಿವುಡು ನುಡಿದಂ ಮೂಕಂ

    • ಚೀದಿ, ಸಮಸ್ಯಾಪಾದದಲ್ಲಿರುವುದು ನುಡಿ’ದುಂ’; ನುಡಿ’ದಂ’ ಅಲ್ಲ. ಅಲ್ಲದೆ, ಕಂಡು ಕುರುಡು ಮತ್ತು ಕೇಳಿ ಕಿವುಡು – ಈ ಎರಡು ಶಾಪಗಳು. ನುಡಿದ೦ ಮೂಕಂ – ಇದು ವರ! ಸಿದ್ರಾಮನಿಂದ ವರವೂ ಸಿಗುವುದೆ?

      • ಹಿಂದೆ ಅವಧಾನದಲ್ಲಿ ಕೇಳಲಾಗಿದ್ದ ಈ ಸಮಸ್ಯೆಯನ್ನು ಈ ಬಾರಿಯ ಆಶುಗೋಷ್ಠಿಯಲ್ಲಿ ಕೇಳಲಾಗಿತ್ತು, ಅದನ್ನು “ಕಂಡು ಕುರುಡು ಕೇಳಿ ಕಿವುಡು ನುಡಿದ೦ ಮೂಕಂ” ಎಂದು ಸಪ್ತಾಹದ ಪ್ರಶ್ನೆಯಾಗಿ ಸೂಚಿಸಿದ್ದೆ, ಇದನ್ನು ನೋಡಿ ಚೀದಿ ಪೂರಣ ಮಾಡಿದ್ದಾನೆ. ಈ ಮಧ್ಯೆ “ನುಡಿದು೦” ಎಂದಿತ್ತು ಎಂದು ಗೋಷ್ಠಿಯಲ್ಲಿ ಭಾಗವಹಿಸಿದ ಸ್ನೇಹಿತರೊಬ್ಬರು ಸಮಸ್ಯೆಯನ್ನು ತಾಣದಲ್ಲಿ ಬದಲಾಯಿಸಿದ್ದಾರೆ. ಅಡ್ಡಿಯಿಲ್ಲ ಹಾಗೂ ಸಾಧ್ಯ ಹೀಗೂ ಸಾಧ್ಯವಿರುವುದರಿಂದ, ಎರಡಕ್ಕೂ ರಿಯಾಯಿತಿ ಕೊಡೋಣ.

        • ಆಗಲಿ. ಆದರೆ ಮೂರನೆಯದಾದ ವರವನ್ನು ಮೊದಲೆರಡಾದ ಶಾಪಗಳಿಂದ ಬೇರ್ಪಡಿಸದೆ ಎಲ್ಲವನ್ನೂ ಒಂದೇ ತಟ್ಟೆಯಲ್ಲಿಟ್ಟು ಪರಿಹಾರ ಮಾಡುವುದು ಆಗದೇನೋ. ಇರಲಿ, ಸಹೃದಯರ ಪರಿಹಾರಗಳನ್ನು ಕಾದುನೋಡುವೆ. ದಯವಿಟ್ಟು ಆಶುಗೋಷ್ಠಿಯಲ್ಲಿನ ಪರಿಹಾರಗಳನ್ನು ತಿಳಿಸುವಿರ?

          • ಪ್ರಸಾದು,
            “ಕಂಡು ಕುರುಡು ಮತ್ತು ಕೇಳಿ ಕಿವುಡು – ಈ ಎರಡು ಶಾಪಗಳು”ಎಂದು ತೀರ್ಮಾನಿಸಬೇಕೇಕೆ, ಅದನ್ನ ವರವಾಗಿಯೂ ಓದಿಕೊಳ್ಳಬಹುದಲ್ಲವೇ. ನಿಮ್ಮ ಪ್ರಯತ್ನಗಳು ಚೆನ್ನಾಗಿವೆ ಮುಂದುವರೆಸಿರಿ 🙂

          • ಸಂಖ್ಯೆ ೫ರಲ್ಲಿನ ನಿಮ್ಮ ಪದ್ಯದಲ್ಲಿ ನೀವು ಅವನ್ನು ಶಾಪ(undesirable) ಎಂದೇ ತೀರ್ಮಾನಿಸಿದ್ದೀರಿ!

          • ಅದೇ ಪ್ರಸಾದು, ಬರೀ ವರ ಎಂದು ತೀರ್ಮಾನಿಸಬೇಕೇಕೆ?

        • ಗಮನಿಸಿ, ಇಲ್ಲಿನ ಹಲವಾರು ಪರಿಹಾರಗಳು ’ಕುರುಡು’-’ಕಿವುದು’ಶಬ್ದಗಳನಷ್ಟೇ ಆಶ್ರಯಿಸಿ ನಿಂತಿವೆ. ಅವಕ್ಕೆ ’ಕಂಡು’-’ಕೇಳಿ’ಶಬ್ದಗಳ ಅವಶ್ಯಕತೆಯಿಲ್ಲ.

  2. The samasyApAda is very queer. I can’t think of many ways to solve it. I am eager to see others’ parihAra-s. Here is a ‘somewhat’ sensible one! Seeing what is shown in 1 – ಕಂಡು ಕುರುಡು. Hearing what is stated in 2 – ಕೇಳಿ ಕಿವುದು. The thought ends here. ನುಡಿದುಂ ಮೂಕಂ is actually the beginning of the next thought.
    (೧) ಅಂಡಂ ನಟಿ ತೋರಲದಂ,
    (೨) ಮುಂಡವೆ ಸಿಡಿವೊಲ್ ವಿಲೀನಪದ್ಧತಿಗಳಿನೀ|
    ಡಿಂಡಿಮಸಂಗೀತಮನುಂ (Loud fusion music) –
    (೧)ಕಂಡು ಕುರುಡು, (೨)ಕೇಳಿ ಕಿವುಡು! ನುಡಿದು೦ ಮೂಕಂ…||
    ಚಂಡಿಯ ದಯೆಯಿಂದವನಾ (ಅವನ+ಆ)
    ಗಂಡಾಂತರಮೆಂತೊ ನೀಗಿ ಫಲಮೇನ್? ಅವನುಂ|
    ತೊಂಡಾಡುತ್ತಾಡಿಹನೈ
    ಮಂಡೆಯು ಸಿಡಿವೋಲವಾಚ್ಯವ, ಪರುಷಗಿರದಿಂ||
    (೨ನೆಯ ಪದ್ಯದ ಅರ್ಥ: ಚಂಡಿಯ ದಯದಿಂದ ಅವನ ಆ ಗಂಡಾಂತರವು ನೀಗಿ ಮೂಕನು ನುಡಿದೂ ಫಲವೇನು? ಅವನು ತೊದಲುತ್ತ ಆಡಿಹನು, ತಲೆಯು ಸಿಡಿಯುವಂಥ ಅವಾಚ್ಯ, ಅದೂ ಕರ್ಕಶಕಂಠದಿಂದ.)

  3. ಭಂಡರೆ ಪೆರ್ಚಿದ ಜಗದೊಳ್
    ಖಂಡಿಸೆ ನಾಸ್ತಿಕ್ಯಮಂ ಶಿವನನುಗ್ರಹದಿಂ/
    ದುಂಡಿರೆ ವರಮಂ – “ನಿಮಗಂ
    ಕಂಡು ಕುರುಡು ಕೇಳಿ ಕಿವುಡು”-ನುಡಿದಂ ಮೂಕಂ//
    ಜಗತ್ತಿನಲ್ಲಿ ಭಂಡರೇ ಹೆಚ್ಚಾದಾಗ, ನಾಸ್ತಿಕ್ಯವನ್ನು ಹೋಗಲಾಡಿಸಲೆಂದು ಶಿವ ಓರ್ವ ಮೂಗನ ಮೇಲೆ ಅನುಗ್ರಹಗೈದ. ಆತ ದೇವರಿದ್ದಾನೆಂಬ ಸತ್ಯವನ್ನು ಸಾರಲು ಹೇಳುತ್ತಾನೆ “ನಿಮಗೆ ಕಂಡೂ ಕುರುಡು ಕೇಳಿಯೂ ಕಿವುಡು”(ನನ್ನನ್ನು ನೋಡಿ ಮಾತಾಡುತ್ತಿದ್ದೇನೆ-ಇನ್ನಾದರೂ ಅರಿತುಕೊಳ್ಳಿ)

    • Fine. Thanks for subscribing to my understanding of the samasyApAda as stated in my comment under 1st verse (Cheedi’s).

      • ಏನೋ, ಸೋಮರ ಭ್ರಾತೃವಾತ್ಸಲ್ಯದಿಂದಾಗಿ ಈ ಪೂರಣ ಸಾಧ್ಯವಾಯಿತು. 😉

        • 🙂

        • ಓಹ್, ನಿನ್ನ ಸಾಮರ್ಥ್ಯದಿಂದಲ್ಲ! ಸೋಮರು ಹೀಗೇಕೆ ಕೆಲವರಿಗೆ ಮಾತ್ರ ಭ್ರಾತೃವಾತ್ಸಲ್ಯವನ್ನು ತೋರಿಸುತ್ತಾರೋ ಕಾಣೆ.

          • ಹಾಗೇನಿಲ್ಲಾ ಪ್ರಸಾದು, ಹೆಚ್ಚು ಮಾನ್ಯತೆ ಪಡೆದ ವಿವೇಕಾನಂದರ ಮಾರ್ಗವನ್ನ ಅನುಸರಿಸೋಣ… ಸಹೋದರರೇ ಮತ್ತು ಸಹೋದರಿಯರೇ… 🙂

        • ’ಸಹೋದರರೆ ಮತ್ತು ಸಹೋದರಿಯರೆ’ ಎಂಬಲ್ಲಿ ’ಭ್ರಾತೃ’ ಉಂಟು, ’ವಾತ್ಸಲ್ಯ’ ಎಲ್ಲಿ?

    • ಆಹಾ! ಚೆನ್ನಾಗಿದೆ

  4. The last resort:
    (೧) ಕೆಂಡಂ ಸೂರ್ಯನುಮಾಗಿರ-
    ಲುಂಡವನಂ ರಾಹು(Eclipse), (೨) ಮದ್ದುಗುಂಡದು(Bomb) ಸಿಡಿಯಲ್|
    (೩) ಗಾಂಡೀವಿಮಿತ್ರದಯದಿಂ(Srikrishna):
    (೧)ಕಂಡು ಕುರುಡು, (೨)ಕೇಳಿ ಕಿವುಡು, (೩)ನುಡಿದ೦ ಮೂಕಂ||

    • ಸಂಸ್ಕೃತದಲ್ಲಿನ ಒಂದು ಸಮಸ್ಯೆಯ ಸಾಲು-ನಿಮ್ಮ ಪೂರಣಶೈಲಿಯನ್ನು ನೋಡಿದಾಗ ನೆನಪಾಯಿತು. (Because I know only one of this type 🙂 )
      “ಸಿಂಧೂರಬಿಂದುರ್ವಿಧವಾ ಲಲಾಟೇ”(ವಿಧವೆಯ ಹಣೆಯಲ್ಲಿ ಸಿಂಧೂರ)
      ಪೂರಣ ನಿಮ್ಮದೇ ಶೈಲಿಯಲ್ಲಿದೆ
      ೧: ಕಿಂ ಭೂಷಣಂ ಸುಂದರಸುಂದರೀಣಾಂ ?
      ೨:ಕಿಂ ದೂಷಣಂ ಪಾಂಥಜನಸ್ಯ ನಿತ್ಯಂ ?
      ೩:ಕಸ್ಮಿನ್ ವಿಧಾತ್ರಾ ಲಿಖಿತಂ ಜನಾನಾಂ ?
      ಸಿಂಧೂರಬಿಂದುಃ(೧) ವಿಧವಾ(೨) ಲಲಾಟೇ(೩)//

      • There have been many such solutions in avadhaana-s and here in padyapaana. But it is usually a last resort, in case the essence of the samasyApAda seems elusive. Technically, it is incorrect to accuse a samasyApAda of being incorrect. Nevertheless, in some cases the number of solutions will not be optimal.

    • ಕನಿಷ್ಠಮಾರ್ಗದ ಪರಿಹಾರವಾದರೂ ಚೆನ್ನಾಗಿದೆ 🙂
      ಸೂರ್ಯನುಂ ಎನ್ನುವ ಬದಲು ಭಾಸ್ಕರನಾಗಿರ.. ಮಾಡಬಹುದು. ಗಾಂಡಿವಿ ಎಂದು ಬಲ್ಲೆ.

      • ಸೂರ್ಯನುಂ ಎಂಬುದಕ್ಕೆ’ಸೂರ್ಯನು’ ಹಾಗೂ’ಸೂರ್ಯನೂ’ ಎಂಬ ಎರಡೂ ಅರ್ಥಗಳಿಲ್ಲವೆ? ನಾನು ಮೊದಲ ಅರ್ಥದಲ್ಲಿ ಬಳಸಿದ್ದೇನೆ. ನೀವು ಎರಡನೆಯ ಅರ್ಥದಲ್ಲಿ ಗ್ರಹಿಸಿ, ’ಭಾಸ್ಕರನು’ ಎಂದು ಸೂಚಿಸಿರುವಿರ? ಆಪ್ಟೆ ನಿಘಂಟುವಿನಲ್ಲಿ ಗಾಂಡೀವಿ ಎಂದೇ ಇದೆ. ಗಾಂಡಿ ಎಂಬುದು ಆ ಆಯುಧ, ಅದನ್ನು ಹೊಂದಿದವನು ಗಾಂಡೀವಿ.

        • ಸೂರ್ಯನು ಎಂಬುದು ಸೂರ್ಯಂ ಎಂತಲೇ ಆಗಬೇಕು. ಸೂರ್ಯನುಂ ಎಂದರೆ ಸೂರ್ಯನೂ.

    • ಪ್ರಸಾದ್ ಸರ್, ವಿಶಿಷ್ಟವಾದ ಪೂರಣ ತುಂಬಾ ಇಷ್ಟವಾಯಿತು. “ಸೂರ್ಯನುಂ” ಎಂದರೆ “ಸೂರ್ಯನು”ಎಂದಾಗುವುದೆಂದು ನಾನೂ ತಿಳಿದಿದ್ದೆ ನೀಲಕಂಠ. “ಸೂರಿಯಂ” ಬಳಸಬಹುದಲ್ಲವೇ?

      • dhanyavAdagaLu.

      • ಸೂರಿಯ ಅಂತ ಪದ ಇದೆಯೇ? ಸೂರ ಇದೆ.

        • ಭಕುತಿ, ಮುಕುತಿ, ಕೀರುತಿ ಇರಬಹುದಾದರೆ, ಸೂರಿಯ ಏಕಿರಬಾರದು?

        • ಧೈರ್ಯ ~ ಧೈರಿಯ (ತ್ಸ) ಇದೆ ಅಲ್ಲವೇ? ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟಿನಲ್ಲಿ ಸೂರಿಯ = ಸೂರ್ಯ ಎಂದಿದೆ.

  5. ನನ್ನದೊಂದು ಪ್ರಯತ್ನ-

    ಭಂಡರ್ ವಿಜ್ಞಾಪನೆಯಿಂ
    ಮಂಡಿಪರಯ್ ದೂರದರ್ಶನದೊಳನೃತಮನೇ
    ಉಂಡ ಗುಳಿಗೆಯಕ್ಕಜದಿಂ
    ಕಂಡು ಕುರುಡು, ಕೇಳಿ ಕಿವುಡು, ನುಡಿದಂ ಮೂಕಂ

    ವಿಜ್ಞಾಪನೆ – advertisement

    • ಅನೃತಸೂಚನೆಯಿಂದೆ ದಿಟ್ಟಿ ಮೇಣ್ ಶ್ರವಣಂಗ-
      ಳೆನಿತೊ ಪೋದೊಡಮಕ್ಕಜಮದುಮೇನೈ?
      ಇನಿತನಿತು ಮಾತನಾಡುವದಾಗೆ ಮೂಕಂಗ-
      ಮನೃತಮಾ ಜಾಹೀರುಮೆಂತುಮಾಯ್ತಯ್??
      As I said, you can’t consider all those three on the same plane.

  6. ದಂಡಮೆ ದಶಗುಣಮೆನಲು-
    ದ್ದಂಡದ ನಾಯಕನ ಪೆರ್ಮೆಯೇಂಪೇಳ್ದಪುದಯ್
    ಅಂಡಲೆತದ ಪೋರರೊಳುಂ
    ಕಂಡು ಕುರುಡು, ಕೇಳಿ ಕಿವುಡು, ನುಡಿದಂ ಮೂಕಂ

  7. ಖಂಡವನುಂಡಾನಂದದೆ
    ಗುಂಡಿಗೆಯಂ ಪುಂಡರೀಕನೇ! ತಣಿಸೆಂದೀ
    ಖಂಡಿನಿಯೊಳಿರ್ಪ ದೋಹಂ
    ಕಂಡು ಕುರುಡು ಕೇಳಿ ಕಿವಿಡು ನುಡಿದುಂ ಮೂಕಂ !!

    (ಎಲೈ ಹುಲಿಯೇ! ನನ್ನ ಮಾಂಸವನ್ನು ತಿಂದು ನಿನ್ನ/ನನ್ನ ಹೃದಯವನ್ನು ತಂಪು* ಮಾಡಿಕೊ ಎಂದು {ಪುಣ್ಯಕೋಟಿ} ನುಡಿದ ಈ ಭೂಮಿಯಲ್ಲಿ ಈಗಿರುವ ದ್ರೋಹ ಕಂಡು ಕಣ್ಣು ಕುರುಡಾಯಿತು, ಕೇಳಿ ಕಿವಿ ಕಿವುಡಾಯಿತು ಹಾಗೂ ಅದರ ಬಗ್ಗೆ ಸತತವಾಗಿ ಮಾತನಾಡಿ ಬಾಯಿ ಮೂಕವಾಯಿತು)

    ಖಂಡ=ತುಂಡು=ಮಾಂಸ
    ಪುಂಡರೀಕ=ಹುಲಿ
    ಖಂಡಿನಿ=ಭೂಮಿ

    *ನಿನ್ನ ಹೃದಯ- ನನ್ನನ್ನು ಭಕ್ಷಿಸಿ
    ನನ್ನ ಹೃದಯ- ವಚನಪಾಲನೆಯಿಂದ

  8. ಪುಂಡರವೊಲ್ ತರುಣರ್ಕಳ
    ದಂಡಿರೆ ಕಲ್ಯಾಣಭಾಗ್ಯಮಂ ಪಡೆದಾಗಳ್
    ಚಂಡತನಮನುಳಿಯುತೆ ಕಾಣ್
    ಕಂಡು ಕುರುಡು ಕೇಳಿ ಕಿವುಡು ನುಡಿದಂ ಮೂಕಂ

  9. ಗುಂಡಿಗೆ ಕುಸಿಗುಮೆದುರಿಸಲ್
    ಗಂಡೆದೆಯೇ ವೇಳ್ಕುಮಲ್ತೆ ರಣರಂಗಮನಾ
    ತಂಡಂ ಪೋರಿದ ಪಾಂಗಿದೆ
    ಕಂಡು ಕುರುಡು ಕೇಳಿ ಕಿವುಡು ನುಡಿದಂ ಮೂಕಂ

  10. ಭಂಡರ್ ಪಾಪಂಗೈಯುತೆ
    ಖಂಡಿಪರಂ ತುಂಡುಗೈವೆವೆನ್ನುತೆ ಮೆರೆಯಲ್
    ಖಂಡಿಸೆ ಪೋದವನಾದಂ
    ಕಂಡು ಕುರುಡು ಕೇಳಿ ಕಿವುಡು ನುಡಿದುಂ ಮೂಕಂ

    ದುಷ್ಕೃತ್ಯವನ್ನು ಖಂಡಿಸಲು ಹೋದವ ಕೊನೆಗೆ ಕುರುಡ,ಕಿವುಡ,ಮೂಗನಾದ ಸ್ಥಿತಿ

  11. ಸಿಂಡರಿಸುತ್ತೆ ಮೊಗಮನಾ
    ದಂಡದಿನೇಟಂ ಕೊಡಲ್ಕೆ ಬರುತಿರೆ ಪಾಚೋ
    ಪಾಂಡು ನಡುಗಿ ತಾನಾದಂ
    ಕಂಡು ಕುರುಡು ಕೇಳಿ ಕಿವುಡು ನುಡಿದುಂ ಮೂಕಂ

    ಪಾಚೋ ಶ್ರೀಮತಿ ಪಾಪ ಪಾಂಡುವಿಗೆ ಬೈದು ಲಟ್ಟಣಿಗೆಯಿಂದೇಟನ್ನು ಕೊಡಲು ಬಂದಾಗ ಬೆದರಿ ಕಣ್ಣು ಮುಚ್ಚಿ, ಬೈಗುಳ ಕೇಳಲಾಗದೆ ಕೈಗಳಿಂದ ಕಿವಿಗಳನ್ನೂ ಮುಚ್ಚಿ, ತಾನಾಡಿದ ಮಾತುಗಳಿಂದ ಏನೂ ಪ್ರಯೋಜನವಿಲ್ಲವಾಗಿ ಮೂಕನೂ ಆದ.

  12. ಚಂಡಾಡಿರೆ ವೈರಿಯ ಪಡೆ
    ಗುಂಡುಗಳುಮ್ಮಳಿಸೆ ತಪ್ಪಿರಲ್ ಪ್ರಙ್ನೆಯು ಸೋ
    ಲುಂಡ ಚಣದೆ ದಿಗ್ಭ್ರಮೆಯೊಳ್
    ಕಂಡು ಕುರುಡು ಕೇಳಿಕಿವುಡು ನುಡಿದಂ ಮೂಕಂ

  13. ತೊಂಡೆಯವೋಲಿರೆ ತುಟಿಗಳ್
    ಬೆಂಡೆಯೆ ಬೆರಳಾಗೆ, ಕಂಗಳಾಗಿರೆ ಕಮಲಂ
    ಗಂಡಂ ಕಂಡಿರಲವಳಂ
    ಕಂಡು ಕುರುಡು ಕೇಳಿ ಕಿವುಡು ನುಡಿದುಂ ಮೂಕಂ

    ರೂಪವತಿಯಾದ ಹೆಂಡತಿಯನ್ನು ಅವಳದೇ ಗಂಡ ನೋಡಿದಾಗ ಇವಳನ್ನು ನೋಡಿದ ಮೇಲೆ ಇನ್ನೇನನ್ನೂ ನೋಡಬೇಕಿಲ್ಲವೆಂದು ಕುರುಡನೂ,ಮೈಮರೆತು ಬೇರೇನೂ ಕೇಳದಾಗಿ ಕಿವುಡನೂ,ತೊದಲಾಡುತ್ತಾ ಮೂಕನೂ ಆದ

    • ಚೆನ್ನಾಗಿದೆ 🙂
      ಅವಳದೇ ಗಂಡ ಎನ್ನುವುದಕ್ಕೆ ಏನಿದೆ ಪದ್ಯದಲ್ಲಿ? 😉
      ಕಂಗಳಾಗಿರೆ *

      • ಅವಳದೇ ಗಂಡ ಎಂಬುದನ್ನು ಯಾವ ಸಾಲೂ ತೋರದಿದ್ದರೂ,
        “ಕಂಡಿರಲವಳಂ ಪುರುಷಂ” ಎಂದು ಬದಲಿಸಿ ಹೆಣ್ಣು ನೋಡುವ ಶಾಸ್ತ್ರ ಮಾಡಬಹುದಲ್ಲವೇ ?

        • ಮಾಡಬಹುದು.ನಾನೂ ಹೆಣ್ಣುನೋಡುವ ಶಾಸ್ತ್ರದ ಬಗ್ಗೆ ಯೋಚಿಸಿದ್ದೆ..ಆದರೆ ಛಂದಸ್ಸಿಗೆ ಹೊಂದಿಸಲಾಗದೆ ಗಂಡನೇ ಲೇಸೆಂದುಕೊಂಡೆ 🙂

      • ಅರ್ಥಮಾಡಿಕೊಳ್ಳಲು ಯತ್ನಿಸಿ ನೀಲಕಂಠರೆ. ಅವಳು ವಸ್ತುತಃ polyandrist. ಆದರೆ ಅವಳಿಗೆ ಅವಳದೇ ಆದ ಒಬ್ಬ ಗಂಡನೂ ಇದ್ದಾನೆ. ಅವನ ಬಗೆಗಿನ ಪದ್ಯವಿದು. ಇದರ ಮೂಲವು ಮಹಾಭಾರತದಲ್ಲಿದೆ. ದ್ರೌಪದಿಯ ಒಬ್ಬಾನೊಬ್ಬ ಗಂಡನಾದ ಅರ್ಜುನನಿಗೆ ಸುಭದ್ರೆಯೆಂಬ (own)ನಿಜಪತ್ನಿಯಿದ್ದಳಲ್ಲವೆ, ಹಾಗೆಯೇ ಇವಳು – ಕಲಿಯುಗ ಅರ್ಜುನಿ!

      • ಧನ್ಯವಾದಗಳು _/\_. ತಿದ್ದಿದ್ದೇನೆ.

    • ಚೆನ್ನಾಗಿದೆ

    • ’ಕಂಡಿರಲ್’ಅವಳಂ & ’ಕಂಡು’ ಕುರುಡು: ‘ಕಂಡು’ ದ್ವಿರುಕ್ತಿ. ಅಲ್ಲದೆ, ’ಕಂಡಿರಲವಳಂ’ ಎಂಬುದು ಕುರುಡು, ಕಿವುಡು, ಮೂಕುಗಳೆಲ್ಲಕ್ಕೂ ಅನ್ವಯವಾದಂತಾಗುತ್ತದೆ; ಅರ್ಥಾತ್ ಕಂಡಿರಲ್ ಕುರುಡು, ಕಂಡಿರಲ್ ಕಿವುಡು, ಕಂಡಿರಲ್ ಮೂಕು ಎಂದಾಗುತ್ತದಲ್ಲವೆ? This is what I have been saying; that such impediment is inherent in the samasyApAda. I am still on the look out for a clarification in case my comprehension is incorrect.

      • ಕಂಡಿರಲವಳಂ- ಕಂಡು ಕುರುಡು,ಕೇಳಿ ಕಿವುಡು,ನುಡಿದುಂ ಮೂಕಂ
        ಅವಳನ್ನು ಕಂಡಾಗ ಪರವಶನಾಗಿ, ಕಂಡಿದ್ದರಿಂದ ಕುರುಡನೂ,ಯಾವ ದನಿಯೂ ಕೇಳದೆ(ಅಥವಾ ಅವಳ ದನಿ ಕೇಳಿ, ಬೇರೇನೂ ಕೇಳದಾಗಿ ಎಂದುಕೊಳ್ಳಲೂಬಹುದು),ಗಡಿಬಿಡಿಯಿಂದ ಏನೋ ಮಾತನಾಡಿ,ಅದು ಯಾರಿಗೂ ಅರ್ಥವಾಗದೆ ವ್ಯರ್ಥವಾಗಿ ಮೂಕನೂ ಆದ ಎಂದುಕೊಂಡು ಬರೆದದ್ದು.
        “ಗಂಡಂ ನೋಡುತೆ ಚಣದೊಳ್” ಎಂದರೆ ಪದಗಳ ಮಟ್ಟಿಗೆ ಪುನರುಕ್ತಿ ಹೋಗಿ ಸ್ವಲ್ಪ ಅರ್ಥ ಸ್ಪಷ್ಟತೆ ಬಂದೀತು

  14. ಪುಂಡರ ಕುಕಾರ್ಯಗಣದಿಂ
    ಗಂಡುಗಲಿಗಳೆಲ್ಲ ಮೃತ್ಯುವಂ ಕಂಡಿಹರೈ |
    ಅಂಡಜ ಸಂಭವದಂತ್ಯದೆ
    ಕಂಡು ಕುರುಡು ಕೇಳಿ ಕಿವುಡು ನುಡಿದಂ ಮೂಕಂ ||

    (ಭಯೋತ್ಪಾದಕರ ದುಷ್ಕೃತ್ಯಗಳಿಂದ ವೀರರೂ ಸಹ ಮರಣವನ್ನಪ್ಪುತ್ತಿದ್ದಾರೆ. ಹೀಗೇ ಆದಲ್ಲಿ, ಪ್ರಪಂಚದ ಅಂತ್ಯಕಾಲದಲ್ಲಿ, ಕುರುಡುತನವನ್ನು ಕಂಡು, ಕಿವುಡುತನದ ಬಗ್ಗೆ ಕೇಳಿ ಮೂಕನೂ ಮಾತನಾಡಿ ದಂಗೆಯೇಳುತ್ತಾನೆ)

    ಅಂಡಜ=ಬ್ರಹ್ಮ
    ಅಂಡಜಭವ=ಬ್ರಹ್ಮಸೃಷ್ಟಿ=ಭೂಮಿ

  15. ಪಂಡಿತರಾಗಮ ಶಾಸ್ತ್ರದೊ
    ಳಂಡಧರನ ರೂಪಿ ಶಂಕರಾರ್ಯರ ನುಡಿಯಿಂ |
    ಮಂಡನಮಿಶ್ರರಪಜಯದೆ
    ಕಂಡು ಕುರುಡು ಕೇಳಿ ಕಿವುಡು ನುಡಿದುಂ ಮೂಕಂ ||

    (ಸಕಲ ವೇದಶಾಸ್ತ್ರ ಪಂಡಿತರಾದ, ಶಿವಸ್ವರೂಪಿಯಾದ ಶಂಕರಾಚಾರ್ಯರು ಮಂಡಿಸಿದ ವಾದದಿಂದ ಮಂಡನಮಿಶ್ರರು ಪಡೆದ ಅಪಜಯದಿಂದ ಕುರುಡು, ಕಿವುಡು, ಮೂಗರಂತೆ ದಿಗ್ಭ್ರಾಂತರಾದರು)

    ಅಂಡಧರ= ಈಶ್ವರ

    • ಅಂಡಧರ ಶಿವ ಹೇಗೆ? ಅಂಡಜಧರ – ಹಾವನ್ನು ಧರಿಸಿದವನು.

      • ಮೂರ್ನಾಲ್ಕು ಶಬ್ದಕೋಶಗಳಲ್ಲಿ (Googleನಲ್ಲೂ ಕಂಡಂತೆ) ‘ಅಂಡ’ ಹಾಗೂ ‘ಅಂಡಧರ’ ಪದಗಳಿಗೆ “ಶಿವನ ಹೆಸರು” ಎಂಬ ಅರ್ಥ ನೀಡಿದ್ದಾರೆ. ಆದರೆ ಪದದ ಉತ್ಪತ್ತಿ ಹೇಗೆಂದು ತಿಳಿಯುತ್ತಿಲ್ಲ.

  16. ಹೆಂಡತಿಗಂ ಸಂಭಾಳಿಸೆ
    ಗಂಡಾಂತರಮಿಲ್ಲಮೆಂದು ಕೊಳುಕೊಡುವಾಗಲ್
    ಗಂಡಗೆ ಜತೆ ಕೊಂಡೊಯ್ಯಲ್
    ಕಂಡು ಕುರುಡು ಕೇಳಿ ಕಿವುಡು ನುಡಿದುಂ ಮೂಕಂ !!

    ಇಂಥ ಗಂಡನ ಜೊತೆ ಶಾಪಿಂಗ್ – ಹೆಂಡತಿಗೆ ಸ್ವಲ್ಪವೂ ಕಷ್ಟವಾಗದು !!

  17. ಬಂಡಿನ ಭಾಂಡಮೆನಿಪ ಸುಮ-
    ಮಂಡಲದಂಡಲೆವ ಬಂಡುಣಿಗಡಣಗರ್ಪೊಳ್
    ಮೀಂಡಿನ ಝೇಂಕೃತಿಯೊಳ್ ಮೇಣ್
    ಕಂಡು ಕುರುಡು ಕೇಳಿ ಕಿವುಡು ನುಡಿದುಂ ಮೂಕಂ

    • ಅರ್ಥವನ್ನು ವಿವರಿಸುವಿರಾ ?

    • ಏನಿಲ್ಲ. ಮಕರಂದದ ಭಾಂಡಗಳೆಂಬ ಕುಸುಮಮಂಡಲದ ನಡುವೆ ಅಂಡಲೆವ ದುಂಬಿಗಳ ಗುಂಪಿನ ಕಪ್ಪಿನಲ್ಲಿ, ಮತ್ತು ಗಮಕಗಳಿಂದ ಕೂಡಿದ ಝೇಂಕಾರದಲ್ಲಿ ಕಂಡರೂ ಕುರುಡು, ಕೇಳಿದರೂ ಕಿವುಡು, ಮಾತಾಡಿದರೂ ಮೂಕ.
      ಮೀಂಡ್ ಗಮಕ. ಹಿಂದಿ ಪದ 🙂

  18. ಸಂಡಿಗೆಯನೊಣಗಿಪಾಗಳ್,
    ಪಿಂಡಿನ ದನದಿಂದೆ ಕಾಯೆನುತೆ ಪೋಗಿರೆ ತಾಯ್,|
    “ಖಂಡಿತ”ಮೆಂದಾಲಸನೈ,
    ಕಂಡು ಕುರುಡು, ಕೇಳಿ ಕಿವುಡು, ನುಡಿದುಂ ಮೂಕಂ ||

    ( ಸಂಡಿಗೆಯನ್ನು ಒಣಗಿಸುವಾಗ ಹಿಂಡಿನ ದನದಿಂದ ಕಾಯೆಂದು ತಾಯಿ ಹೇಳಿ ಹೋಗಿರಲು, ದನವು ಸಂಡಿಗೆಯನ್ನು ತಿನ್ನುವುದನ್ನು ಕಂಡು ಕುರುಡು, ತಾಯಿಯ ಮಾತನ್ನು ಕೇಳಿ ಕಿವುಡು ಹಾಗೂ ಖಂಡಿತವಾಗಿ ಕಾಯುವೆನೆಂದು ತಾಯಿಗೆ ನುಡಿದೂ ನುಡಿಯದ ಮೂಕನಂತಿರುವ ಸೋಮಾರಿಯಾದ ಮಗನನ್ನೊಳಗೊಂಡ ಪದ್ಯಪೂರಣ.)

    • ಆಹಾ! ಸೊಗಸಾಗಿದೆ. ಕಾಯಿಸಂಡಿಗೆ ಹಪ್ಪಳ ತಿಂದಷ್ಟೇ ಖುಷಿಯಾಯಿತು 🙂

    • ವಿನೋದಯುಕ್ತ ಪೂರಣ! ಇದು ಕಗ್ಗ ಮಂಕುತಿಮ್ಮನ ಕಥೆಯಾಯಿತು!

  19. ಧನ್ಯವಾದಗಳು ನೀಲಕಂಠರೆ , ಸಂಡಿಗೆಯನ್ನು ದನ ತಿಂದು ಖಾಲಿಯಾದರೂ ನೀವು ಮಾತ್ರ ಸವಿದಂತೆ ಕಲ್ಪಿಸಿಯೇ ಖುಷಿಯಾದಿರಲ್ಲ! ಬಹಳ ಒಳ್ಳೆಯ ಗುಣ. 🙂

    • ಆಲಸಿಯೆಂತೋ ತಾಯಿಯ-
      ನಾಲಿಸಿಯುಂ ಕಾಯದಿರ್ದಪಂ ಸಂಡಿಗೆಯಂ
      ಲೀಲೆಯಿದೌ ನಿಮ್ಮಯ ಪದ-
      ಮಾಲೆ ರುಚಿಯ ಸುತ್ತು ಬೇಲಿಯಾಗುತೆ ಕಾಯ್ಗುಂ

    • ಶಕುಂತಲಾ / ನೀಲಕಂಠ,
      ನಿಮ್ಮ ಪೂರಣ / ಪ್ರೇರಣ ಗಳೆರಡೂ ಬಹಳ ಇಷ್ಟವಾಯಿತು !!

      • ಉಷಾ, ನೀಲಕಂಠ ಹಾಗೂ ಚೇತನ್ ಅವರಿಗೆ ಧನ್ಯವಾದಗಳು. ನಿಮ್ಮೆಲ್ಲರ ಪದ್ಯಪೂರಣಗಳೂ ತುಂಬ ಚೆನ್ನಾಗಿವೆ . _/_

  20. ಚಂಡತನದಿಂ ಮೆರೆದು ಪಾ-
    ಖಂಡಿ ಸತಿಯೆನಿಪ್ಪ ಕೈಕಯಿಯಿದಿರ್ಗಂ ಪಾ-
    ಲುಂಡೆಯರಸಂ ದಶರಥಂ
    ಕಂಡು ಕುರುಡು ಕೇಳಿ ಕಿವುಡು ನುಡಿದುಂ ಮೂಕಂ

  21. ಕಂಡಂತುಸುರಿರ್ಪೆo ಗಡ
    ಅಂಡಲೆದಿರ್ಪo ಮೊಬೈಲ ಪಿಡಿಕಯ್ಯೊಳ್ ಬ್ರ-
    ಹ್ಮಾಂಡವ ಪಡೆದಂತಿರ್ಪo
    ಕಂಡು ಕುರುಡು ಕೇಳಿ ಕಿವುಡು ನುಡಿದುಂ ಮೂಕಂ !!

    ಪಿಡಿಕಯ್ = ಮುಷ್ಟಿ

    ಇತ್ತೀಚೆಗೆ ಯುವಜನತೆಯಲ್ಲಿ ಹೆಚ್ಚಾಗುತ್ತಿರುವ ಮೊಬೈಲ್ ಗೀಳಿನ ಬಗ್ಗೆ

    • Ahaaa… ತುಂಬ ಚೆನ್ನಾಗಿದೆ 🙂

    • ಇದು ಬಿಎಸ್ಎನ್ಎಲ್ ಮೊಬೈಲಿನ ಜಾಹೀರಾತೇ ಇರಬೇಕು . 🙂

      • JIO – JINEDO !!

        • After resigning from BSNL, you have shifted loyalty to Reliance!

          • ಅಯ್ಯೋ, ತಪ್ಪು ತಿಳಿದಿರಿ ಪ್ರಸಾದ್ ಸರ್, ನಾನು ಹೇಳಿರುವ Jio ~ ಎಲ್ಲೆಂದರಲ್ಲಿ ಉಚಿತ ದೊರೆಯುತ್ತಿರುವ 4G DATA “ಶಾಪ”ವಾದ ಬಗ್ಗೆ ! ಅಂದಮೇಲೆ Jinedo ~ BSNL “ವರ”ವಾದಂತಲ್ಲವೇ ?!!

  22. ಕೊಂಡಾಡೆ ಪದ್ಯಪಾನವ
    ಕಂಡು ಕುರುಡ ಕೇಳಿ ಕಿವುಡ ನುಡಿದಂ ಮೂಕಂ ।
    ಕೊಂಡಾಗ ಮದ್ಯಪಾನವ
    ಕಂಡು ಕುರುಡು ಕೇಳಿ ಕಿವುಡು ನುಡಿದುಂ ಮೂಕಂ !!

    • Least cost with most profit ಎಂಬುದಕ್ಕೆ ಸ್ಪಷ್ಟ ನಿದರ್ಶನ. ನೀವು ನಿಜಕ್ಕೂ pun-ಡಿತರೇ !!

      • ಏನಪ್ಪಾ ಇದು! ಧನುರ್ ರಾಶಿಗೆ ಬಿರುದು/ಬಾವುಲಿಗಳು ಬೆಂಬಿಡದೆ ಬೆನ್ನಟ್ಟಿವೆಯಲ್ಲ ಜ್ಯೋತಿಷಿಗಳೇ ?!!

  23. ಇಂಡಿಯವಾಗಿರೆ ಭಾರತ
    ಖಂಡಂ, ಮಾಸಂಗಳೆಲ್ಲ ಮಂತ್ಸೆಂದಾಗಲ್ |
    ಖಂಡಿನಿಯೊಳ್ ಸಕ್ಕದನುಡಿ
    ಕಂಡು ಕುರುಡು ಕೇಳಿ ಕಿವುಡು ನುಡಿದುಂ ಮೂಕಂ ||

    (ಭಾರತವು India ಆದಾಗ, ಮಾಸಗಳೆಲ್ಲ Months ಆದಾಗ ; ಲೋಕದಲ್ಲಿ ಸಂಸ್ಕೃತ ಕಲಿತೂ ವ್ಯರ್ಥವಾಗಿದೆ)

Leave a Reply to ನೀಲಕಂಠ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)