Oct 022017
 

ಶರನ್ನವರಾತ್ರಿಯ ಯಾವುದಾದರೂ ಆಯಾಮವನ್ನು ವರ್ಣಿಸಿ ಪದ್ಯರಚಿಸಿರಿ

  17 Responses to “ಪದ್ಯಸಪ್ತಾಹ ೨೭೫: ವರ್ಣನೆ”

 1. ತೊಳಗುವ ಸೌಧಮೇ ಮನೆಯದಪ್ಪೊಡೆ ಶಾರದೆಗಾನೆಯಪ್ಪೊಡಂ
  ಮಿಳಿರ್ವುರುವಾಹನಂ ಜನರ ಘೋಷಮದೊಪ್ಪಿರೆ ಮಂತ್ರದಂತೆವೋ
  ಲಳಿಗಳೆ ಮುತ್ತುತಿರ್ಪೊಡೆ ಮದಾಂಬುವಿಗೊರ್ಚರದಂತೆ ಸಂದಿರಲ್
  ಪಳತೆನಿಸಿರ್ಕುಮೇಮ್ ದಸರೆಯೀ ಮುದಮಂತೆಯೆ ವೈಭವಂಗಳಾ//

  • ತೊಳಪ ಸುಸೌಧ… better avoid ಸು. (I see ಸು in many of your verses, which we should avoid as much as possible). We can make it toLaguva saudha…
   ಸೌಧಮಾವಸಥ – means? If you use some uncommon words please give meanings. Others can also catch them.
   ಮಿಳಿರ್ವುರುವಾಹನಂ? How you break the sandhi?
   Please give overall meaning.

   • ಧನ್ಯವಾದಗಳು ನೀಲಕಂಠರೆ. ಅವಸಥ=ಮನೆ, ಮಿಳಿರ್ವ =ಚಲಿಸುವ, ಒರ್ಚರ=ಒಂದೆಳೆಯ ಸರ.
    ದಸರೆಯ ಜಂಬೂಸವಾರಿಯ ಸಂದರ್ಭ, ದೇವಿಗೆ ಆ ಹೊಳೆಯುವ ಅರಮನೆಯೇ ಮನೆ, ಚಲಿಸುವ ಆನೆಯೇ ವಾಹನ, ಆನೆಯ ಮದಜಲಕ್ಕೆ ಮುತ್ತುವ ದುಂಬಿಗಳೇ ಮಾಲೆ, ಜನರ ಘೋಷವೇ ಮಂತ್ರೋಚ್ಚಾರಣೆ, ಹೀಗಿರುವ ದಸರೆಯು ಎಂದಿಗಾದರೂ ಹಳತಾದೀತೇ? ಎಂಬುದು ತಾತ್ಪರ್ಯ. ಸು ಎಂಬ ಶಬ್ದ ಹೆಚ್ಚಾಗಿ ಬರುವುದು ನನ್ನ ವ್ಯುತ್ಪತ್ತಿಯ ಕೊರತೆಯಿಂದಾಗಿ 🙁

    • ಒಳ್ಳೇ ಕಲ್ಪನೆ!
     ಅಲ್ಲಿ ಇಲ್ಲಿ ಉಂಟಾದ ಅನ್ವಯಕ್ಲೇಶವನ್ನು ಹೋಗಲಾಡಿಸಲು ಒಂದು ತಿದ್ದುಗೆಯ ಪ್ರಯತ್ನ 🙂

     ತೊಳಗುವ ಸೌಧಮೇ ಮನೆಯದಪ್ಪೊಡೆ ಶಾರದೆಗಾನೆ ವಾಹನಂ
     ಮಿಳಿತಜನಂಗಳುರ್ಬಟೆಯ ಘೋಷಮೆ ಮಂತ್ರದವೊಲ್ ಮದೇಭಸಂ-
     ಕುಳಮದವಾರಿಸಂಗತಮದಾಳಿಕುಳಂ ವರಮಾಲೆಯಪ್ಪೊಡಂ
     ಪಳತೆನಿಸಿರ್ಕುಮೇಮ್ ದಸರೆಯೀ ಮುದಮಂತೆಯೆ ವೈಭವಂಗಳಾ//

 2. ವಾರಿಸೇಚಿತ ಭೂರಂಗಂ
  ತಾರೆಚಂದ್ರಮತೋರಣಂ
  ಸಾರಸಾನಿಲಸಂಗೀತಂ
  ವಾರಿಜಾಸನಮೊಪ್ಪುಗುಂ
  (ದೇವಿಯ ಆರಾಧನೆಗೆ ಶರತ್ಕಾಲದ ಸಿದ್ದ್ದತೆ)

  ಶರದಾಕಾಶ ನೈರ್ಮಲ್ಯಂ
  ಹರಿದ್ವರ್ಣದ ಶೋಭೆಯಂ,
  ಪುರಕಂ ತರ್ಪ ಯತ್ನಂ ದಲ್!
  ವರದೇವಿಯ ಪೂಜೆಯಿಂ!!
  (ನಮ್ಮ ಸುತ್ತಲೂ ಕಾಣುತ್ತಿರುವ ಪ್ರಕೃತಿಯ ಸೊಬಗನ್ನು ಸ್ವಂತವಾಗಿ ಹೊಂದುವ ಯತ್ನವೇ ನವರಾತ್ರ ಆಚರಣೆಯು)

  • chennagide. ತಾರೆಚಂದ್ರಮತೋರಣಂ will become ari-samasa. We can better make it taarakeNaankatoraNam.

 3. ಒಳ್ಳೇ ಕಲ್ಪನೆ!
  ಅಲ್ಲಿ ಇಲ್ಲಿ ಉಂಟಾದ ಅನ್ವಯಕ್ಲೇಶವನ್ನು ಹೋಗಲಾಡಿಸಲು ಒಂದು ತಿದ್ದುಗೆಯ ಪ್ರಯತ್ನ 🙂

  ತೊಳಗುವ ಸೌಧಮೇ ಮನೆಯದಪ್ಪೊಡೆ ಶಾರದೆಗಾನೆ ವಾಹನಂ
  ಮಿಳಿತಜನಂಗಳುರ್ಬಟೆಯ ಘೋಷಮೆ ಮಂತ್ರದವೊಲ್ ಮದೇಭಸಂ-
  ಕುಳಮದವಾರಿಸಂಗತಮದಾಳಿಕುಳಂ ವರಮಾಲೆಯಪ್ಪೊಡಂ
  ಪಳತೆನಿಸಿರ್ಕುಮೇಮ್ ದಸರೆಯೀ ಮುದಮಂತೆಯೆ ವೈಭವಂಗಳಾ//

 4. ಕಳೆದಬಾರಿ ಹತ್ತು ಪದ್ಯಗಳನ್ನು ಬರೆಯಲು ಕುಮ್ಮಕ್ಕು ನೀಡಿದ ಮಂಜ. ಹೋಗ್ಲಿಪಾಪ ಅಂತ ಕವನಿಸಿದರೆ, ಈ ಬಾರಿ ಇಪ್ಪತ್ತನ್ನು ಬರೆಯಿರೆಂದ. Unreasonable demand ಆದ್ದರಿಂದ, ಈಗ ಕೇವಲ ನವಪಾದಗಳನ್ನು ಬರೆದಿದ್ದೇನೆ.

  ಶರನ್ನವರಾ’ತ್ರ’ವೆಂದಿದ್ದರೆ, ಅದು ಆಶ್ವಯುಜಮಾಸದ ಪಾಡ್ಯದಿಂದ ನವಮಿಯವರೆವಿಗೆ ಎಂದಾಗುತ್ತಿತ್ತು. ಶರನ್ನವರಾ’ತ್ರಿ’ ಎಂದಿರುವುದರಿಂದ, ಶರತ್ಕಾಲದ ಆಶ್ವಯುಜ ಹಾಗೂ ಕಾರ್ತಿಕಮಾಸಗಳ (21.09.2017 to 18.11.2017) ನನಗಿಷ್ಟವಾದ ಒಂಭತ್ತು ರಾತ್ರಿ(/ದಿನ)ಗಳ ಬಗೆಗೆ ಹೇಳುವೆ. ಪ್ರತಿಪಾದದಲ್ಲೂ ಆರು ವಿಷ್ಣುಗಣಗಳು + ೧ ಗುರು. ಐದುಶುಕ್ರವಾರದ ಹಾಡಿನ ಮಟ್ಟು: ಹರನಽ ಕುಽ/ಮಾರಽನಽ/ ಚರಣಽ ಕಽ/ಮಲಕೆರಗಿಽ/ ಶಾರದೆಗೆಽ/ ವಂದಿಽಸುಽ/ವೆಽ. ಹಾಡಾದ್ದರಿಂದ ಆದಿ/ಅಂತ್ಯಪ್ರಾಸಗಳನ್ನು ಬಳಸಿಲ್ಲ. ಅಂಶನಿಯಮಗಳನ್ನೂ ಪೂರ್ಣವಾಗಿ ಪಾಲಿಸಿಲ್ಲ (ಲಘುಬಾಹುಳ್ಯ). ಕ್ಷಮೆಯಿರಲಿ.

  ಆಶ್ವೀಜಮಾಸದ ಚೌತಿಯ ದಿನದಂದುಪಾಂಗಲಲಿತೆಯ ವ್ರತವದಹುದು|
  ದಶಮಿಯು ಬಂದಾಗ ನೆನೆಯಮ್ಮ ನೀನಾಗ ಬುದ್ಧದೇವನನು ಮನದೆ|
  ಬಿಟ್ಟೆರಡುದಿನಗಳ ತಾಯೆ ನೀನಾರಂಭ ಮಾಡವ್ವ ದ್ವಿದಳವ್ರತ|
  ಮುಂಬರುವ ಪೌರ್ಣಮಿಗೆ ಪೋಗಮ್ಮ ಮೈಸೂರ ಚಾಮುಂಡಿದರ್ಶನಕ್ಕೆ|
  ತಮಿಳಳು ನೀನಾದ್ರೆ ಮೂರುಂಟು ಕೇಳಮ್ಮ ಪೆರಟಾಶಿ ಶನಿವಾರವು|
  ಹೊಸಹೊಸ ವ್ರತಗಳ ಮಾಡುವೆಯಾದರೆ ಉಂಟಮ್ಮ ಸಂಕಷ್ಟವು (ಸಂಕಷ್ಟಹರಚತುರ್ಥಿ)|
  ಸಂಕಷ್ಟವೇಕಮಾವಾಸ್ಯೆಯ ದಿನದಂದು ಕರೆಯಮ್ಮ ಧನಲಕ್ಷ್ಮಿಯ|
  ಬಂತೀಗ ಕಾರ್ತೀಕ, ವಟಗುಟ್ಟಲಿನ್ನೇಕೆ? ಹಚ್ಚು ಪಟಾಕಿಯನ್ನು|
  ಸೋಮ್ವಾರ ತಣಿಸವ್ವ (ಗಂಡ!)ಬಸವನನೊಂದಷ್ಟು ಕೇಮೆಯ ಮಾಡಲಿಷ್ಟು|
  ———-
  ನವರಾತ್ರಫಲಸಮವೀ ನವವ್ರತಗಳ ಫಲವಂತೆಂದೆಂದೆಂಬರೌ||

  • unreasonable demand ಏನೂ ಅಲ್ಲ. ನೀವು ಸಮರ್ಥರಾದ್ದರಿಂದ ಹೇಳಿದ್ದಷ್ಟೇ.

  • ಪದ್ಯ ಬರೆಯಿರೆಂದು ಇನ್ನೊಬ್ಬರು ಕುಮ್ಮಕ್ಕು ಕೊಡುವ ಅಧೋಗತಿಗಿಳಿಯಿತೇ ನಿಮ್ಮ ಕವಿತ್ವ! 🙁

   • ಹೌದು, ಪಾತಾಳಲೋಕಕ್ಕೂ ಹರಡಿತು ನನ್ನ ಖ್ಯಾತಿ 😉

 5. ವಿಭವದೊಳು ಸಗ್ಗವನು ನಾಚಿಸಿ
  ನಭವ ಮೀರುತೆ ಮಿನುಗುತಲಿ ಮೇ
  ಣಿಭ ಸಮೂಹದ ಸೊಬಗ ನಡಿಗೆಯೊಳಗನ ಮಗಳವಳ,
  ಅಭಯಹಸ್ತಳ ನೃತ್ತಗಾನಗ
  ಳುಭಯ ಸಂಭ್ರಮದಿಂದ ಭಜಿಸುತೆ
  ಸಭೆಯು ಮೆರೆದಿಹುದೀಗ ಕಾಣಿರಿ ಮಹಿಷಪುರದೊಳಗೆ

  ಸುರಗಂಗೆವೋಲ್ ಹರಿವ ಭಾರತದ ಸಂಸ್ಕೃತಿಯ
  ನೆರೆದ ಜನಗಳಿಗೆಲ್ಲ ಪರಿಚಯಿಸುತುಂ
  ತಿರುಗುತಿಹ ಕಾಲಚಕ್ರವ ನೆನಪಿಸುತಲೀಗ
  ಮೆರೆದಿಹುದು ಮೈಸೂರ ಮೆರವಣಿಗೆಯು

  ಬೊಂಬೆಯ ರೂಪದಿ ಬಂದರ್
  ನಂಬಿದರಂ ಹರಸಿ ಕಾಯಲೆಂದು ಸುರರ್ಗಳ್
  ತುಂಬಿದ ಮನೆಯೊಳಗುಕ್ಕಿರ
  ಲಂಬುಧಿವೋಲಂದದಿಂದೆ ಸಂತಸಮೀಗಳ್

  ಸರದಿ ತಪ್ಪದೆ ಪೋಗಲೇನನೊ
  ಬರೆದು ಹಾಕಿದೆ ಶಾರದಾಂಬೆಯೆ
  ಕರವ ಮುಗಿವೆನು ಮನ್ನಿಸೆನ್ನನು ಮುಗುದಬಾಲನನು
  ಬರೆಯದಾದೆನು ನಿನ್ನ ವಿಭವವ
  ನೊರೆಯದಾದೆನು ನಿನ್ನ ಮಹಿಮೆಯ
  ಶಿರವಬಾಗಲು ಮಾತ್ರವರಿತೆನು ಪೊರೆಯಬೇಕೆನ್ನ

  • ನಿಂದಾಸ್ತುತಿ:
   ಮೊರೆಯುತಾಶೀರ್ವದಿಸುಗೆನ್ನುತೆ
   ಶಿರವ ಸುಮ್ಮನೆ ಅಮ್ಮನೆದುರೊಳ-
   ಗಿರಿಸಿ ನಾಟಕಮನ್ನುಮಾಡುವ ಬದಲುಮದೆ ಶಿರಮಂ|
   ವರಕವೀಂದ್ರರ ಕೃತಿಗಳೆದುರೊಳ-
   ಗೊರಗಿಸಿದ್ದೊಡಮೊರೆಯುತಿರ್ದಿಹೆ
   ಪರಿಪರಿಯ ಪದ್ಯಂಗಳಂ ನೀಂ ಬುಧರು ಮೆಚ್ಚುವವೋಲ್|| 🙂

   • 😐 ನಿಮ್ಮ ಬೈಗುಳವೇ ಆಶೀರ್ವಾದ_/\_

    • ನಕ್ಕುಬಿಟ್ಟರೆ ಸಾಕು. ಆಶೀರ್ವಾದ ಗೀಶೀರ್ವಾದ ಬೇಕಾದರೆ ಶುದ್ಧನಿಂದಾಪದ್ಯವನ್ನು ಬರೆಯಬೇಕಾಗುತ್ತದೆ!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)