Oct 162017
 

  31 Responses to “ಪದ್ಯಸಪ್ತಾಹ ೨೭೭: ಚಿತ್ರಕ್ಕೆಪದ್ಯ”

 1. ಪಲ್ಲವ|| ಸರಿಯೆ ಗಾದೆಯು ಸುಳ್ಳದಾಗದು
  ಭರವಸೆಯು ವೇದಗಳದಂತೆಯೆ
  ಮೊರೆಯನೆಮ್ಮಯ ಹವ್ಯವಾಹನು
  ಸುರರಿಗೊಯ್ವನು ನೋಡದೋ||

 2. ಮುಗಿಲೊಳೆಳೆಯಿಂದುವಿರ್ಪ ದಿನದೊಳ್ ಬೆಳಗಿಸಲ್
  ಗಗನವಂ , ಮೇಲೇರಿಹವು ತಾರೆ ತೆರದಿ ಕಾಣ್
  ಝಗಮಗದ ದೀಪವುಂ ಮಿಣುಕುಹುಳ ಕಂಡು ತಾವ್
  ಮಗು ಹನುಮನೋಲ್ ಜಿಗಿದು ಬೆರಗುಗೊಳಿಪುದೇ ? ಹಾಂ !

  • ಅರ್ಧಾಂತ್ಯಗಳಲ್ಲಿ ಊನಗಣವನ್ನು ಬಳಸದಿರುವುದರಿಂದ, ಇದು ರಗಳೆಯೆನಿಸುತ್ತದೆ. ರಗಳೆಗಳಲ್ಲಿ ಅಂತ್ಯಪ್ರಾಸವು ಅಪೇಕ್ಷ್ಯ, ಆದಿಪ್ರಾಸವು ಅನಪೇಕ್ಷ್ಯ. ಇಲ್ಲಿ ಆದಿಪ್ರಾಸವನ್ನು ಸಾಧಿಸಿರುವುದರಿಂದ, ಊನಗಣಯುಕ್ತಪಂಚಮಾತ್ರವಾಗಿಸಬಹುದು.

 3. ಉರಿಯೊಡಲಿನಿಂಧನಂ ಮೇಣ್
  ಗುರಿಯುಂ ತೋರದೊಡಮಿರ್ಪ ಕಳ್ತಲ ಪಥಮಯ್
  ಕುರಿಗಳವೊಲ್ ಸ್ಪರ್ಧಾಥಿಗ-
  ಳುರೆ ಬಿಂಬಿಪುದಲ್ತೆ ಮಾನಿಸರ ಜೀವನಮಂ

  • ಎರಡನೆಯ ಪಾದದಲ್ಲಿ ಛಂದಸ್ಸು ತಪ್ಪಿರುವಂತೆ ತೋರುತ್ತಿದೆ ಸೋಮಣ್ಣ..ದಂಧಕಾರದ(ಅಂಧಕಾರದ ಎನ್ನುವಲ್ಲಿ)..ತಾತ್ಪರ್ಯವನ್ನೂ ತಿಳಿಸುವಿರಾ?

   • ಅನಂತ, ಹೌದು ಛಂದಸ್ಸು ತಪ್ಪಿತ್ತು ಸವರಿಸಿದಗದೇನೆ, ಧನ್ಯವಾದ 🙂

    ಅರ್ಥ: (mocking aimless competitive world) ಒಡಲಿನ ಉರಿಯೇ (fire in the belly) ಇಂಧನ, ಮತ್ತು ಗುರಿಯೂ ಕಾಣದ ಅಂಧಕಾರದ ಹಾದಿ, ಕುರಿಗಳ ಹಾಗೆ ಸ್ಪರ್ಧಾರ್ಥಿಗಳನ್ನ ನೋಡಿದರೆ, ಮನುಷ್ಯರ ಜೀವಿತವೆಂದೇ ತೋರುತ್ತದೆ

 4. ಅಗ್ನಿಗೆ ಏನೂ ಗ್ರಾಸವೇ. ಹಾಗಾಗಿ, ಅದರ ಕೈಗೆ ಸಿಕ್ಕಿಕೊಳದಂತಿದ್ದು, ಅದು ಆಚೀಚೆ ಚಾಚದಂತೆ ದಿಗ್ಬಂಧನವಾಗಿದ್ದುಕೊಂಡು, ಸ್ವಯಂಗಲಿತವಾಗುವವರೆಗೆ ಅದು ಒಂದೇ ಕಡೆಗೆ ಉರಿಯಲು ಬಿಡುವುದೊಳಿತು.
  ಉತ್ಪಲಮಾಲೆ|| ಗ್ರಾಸಮದಗ್ನಿಗಂ ಸಕಲವೆಲ್ಲವು, ಬೇಡೆನುತೆನ್ನದೇನನುಂ
  ಜೈಸುಗುಮಷ್ಟದಿಗ್ಗತಿನಿರೋಧದೆ ಜಿಹ್ವೆಯ ಚಾಚದೊಲ್ ಹುತಂ|
  ಸೂಸುತುಮೊಂದೆ ದಿಕ್ಕಿನೊಳು ಪೊಂದಿರೆ ವೇಗದೆ ನೈಜಶೀರ್ಣಮಂ
  ಹ್ರಾಸವದಾಗುವೊಲ್ ವಿಗುಣಗಳ್ ಗಡಮೆಂತೊ ಸತರ್ಕದಿಂದಿರೈ||

 5. ತೇಲಿಸುವ ಸಾಮರ್ಥ್ಯವಿರುವುದು ಗಾಳಿಗೆ ಮಾತ್ರವಲ್ಲ. ಅಗ್ನಿಗೂ ಇದೆ ನೋಡಿ. ಕೇವಲ ಇವೆರಡಕ್ಕೆ ಆ ಸಾಮರ್ಥ್ಯವಿರುವುದು ಎನ್ನಬೇಡಿ. ಬೆಂಗಳೂರಿಗರನ್ನು ಕೇಳಿ, ನೀರಿಗೂ ತೇಲಿಸುವ ಸಾಮರ್ಥ್ಯವಿದೆಯೆನ್ನುತ್ತಾರೆ! ಉತ್ಪಲಮಾಲೆ||

  ತೇಲಿಸಿಕೊಂಡು ಪೋಪುದು ಸಮೀರನುಮೊರ್ವನೆ ಎನ್ನಲೇಕೆ ನೀಂ
  ಲೀಲೆಯಿನಂತೆಯೇ ಗಗನಕೊಯ್ವುದು ವಹ್ನಿಯು ತೇಲುಬುಟ್ಟಿಯಂ|
  ಹೋಲುವುದೆಂತೊ ಅಗ್ನಿ-ಸಮಿರಕ್ಷಮಮಂ ಜಲಮೆಂತೊ ನೋಡೆಲೋ
  ಆಲಿಸು ಬೆಂಗಳೂರಿಗರ ರೋದನಮಿಂದಿನ ವರ್ಷಪರ್ವದೊಳ್||

 6. ಸ್ವಲ್ಪಕಾಲ ಬೆಳಗುವ ಆಕಾಶಬುಟ್ಟಿಯನ್ನು ನೋಡುತ್ತ ತತ್ಕಾಲದಲ್ಲಿ ನಮ್ಮ ನೋವುಗಳನ್ನು ಮರೆಯುತ್ತೇವೆ. ಇನ್ನು ದೈವವು ಸೃಷ್ಟಿಸಿರುವ ಅನಂತ ಊರ್ಜೆಯಿರುವ ನಕ್ಷತ್ರವೀಕ್ಷಣೆಯು ಜೀವಿತಕಾಲದ ನೋವುಗಳನ್ನು ಮರೆಸವೆ?

  ಅನವದ್ಯ|| ಗಳಿಗೆಕಾಲವೆ ದೀಪ್ತಿಯ ಸೂಸೇಂ ಹೃದ್ಯಮದಲ್ತೆಲೆ ಬುಟ್ಟಿಯೈ
  ಅಳಿಸುಗುಂ ಗಡಮೆಮ್ಮಯ ನೋವನ್ನಿಷ್ಟನು ತೋರುತೆ ಮಾಯೆಯಂ|
  ಹೊಳೆಯೆ ತಾರಕೆಸಾಸಿರ ಬಾನೊಳ್ ಹಿಂಗದ ಊರ್ಜೆಯ ಶಕ್ತಿಯಿಂ
  ಕಳೆಯದೇಂ ಭವದೆಲ್ಲ ವಿಬಾಧಂ ನೋಡುತೆ ನಿಂದಿರಲಭ್ರಮಂ||

 7. ಇಳಿಯುತ್ತುಂ ಧರೆಗಂ ತ್ರಿಶಂಕುದಿವದಿಂ ಪೂದೋಟಮೇಂ ಬಂದಿತೇಂ?
  ಕಳೆಯಲ್ಕೆಂ ದಿವಿಜೇಂದ್ರದರ್ಪಮನೆ ಪಾತಾಳೇಂದ್ರನಗ್ನ್ಯಸ್ತ್ರಮಂ
  ತಳೆಯುತ್ತುಂ ಸಿಡಿಸಿರ್ಪನೇಂ? ನಭದಿನಾ ಸಪ್ತಾರ್ಚಿ ವರ್ಷಾಗ್ನಿಯ-
  -ನ್ನಿಳೆಗಂ ಸಾರಿದನೆಂಬವೋಲ್ ತಿಳಿದುದೀ ದೀಪ್ತಿವ್ರಜಂ ಚಿತ್ತಕಂ

  ಈ ದೀಪಸಮೂಹವನ್ನು ತಲೆಯೆತ್ತಿ ನೋಡಿದಾಗ ತ್ರಿಶಂಕು ಸ್ವರ್ಗದ ಹೂದೋಟದ ಹೂಗಳಂತೆಯೂ,ಪಾತಾಳದಿಂದ ಬಲೀಂದ್ರ ಸ್ವರ್ಗದೆಡೆಗೆ ಸಿಡಿಸಿದ ಅಗ್ನಿಬಾಣಗಳಂತೆಯೂ,ಅಗ್ನಿದೇವನು ಸುರಿಸಿದ ಅಗ್ನಿವರ್ಷದ ಬಿಂದುಗಳಂತೆಯೂ ಕಂಡಿತು ಅನ್ನುವ ಪ್ರಯತ್ನ

  • ಹಲವು ಪುರಾಣವಿಷಯಗಳ ಸಮಾಹಾರವಿದೆ. ಪದಪ್ರೌಢಿಯಿದೆ. ಧನ್ಯವಾದಗಳು (ಕಳೆಯಲ್ಕೇಂ?)

   • ಧನ್ಯವಾದಗಳು_/\_..ಪದ್ಯದಲ್ಲಿ ಒಳ್ಳೆಯ ಅಂಶಗಳೇನಾದರೂ ಮೈಗೂಡಿದ್ದಲ್ಲಿ ಅದು ವಾರದ ಹಿಂದೆ ನೀವು ಬರೆದ ನಿಂದಾಸ್ತುತಿಯ ಪರಿಣಾಮ(ಆ ನಂತರವೇ ಉದಾಸೀನದಿಂದ ಬಿಟ್ಟಿದ್ದ ಗದಾಯುದ್ಧದ ಪಂಚಮಾಶ್ವಾಸವನ್ನು ಓದುವುದಾಯಿತು).
    ಕಳೆಯಲ್ಕೆಂ=ಕಳೆಯಲಿಕ್ಕೆಂದು/ನಿವಾರಿಸಲಿಕ್ಕೆ ಎಂಬರ್ಥದಲ್ಲಿ ಬಳಸಿದ್ದೇನೆ

    • ನೀವ್ಯಾರೋ ಸೂಕ್ಷ್ಮಮತಿಗಳು. ನಿಂದೆಗೆ ಮಣಿಯುತ್ತೀರಿ. ನನ್ನನ್ನು ಎಷ್ಟು ನಿಂದಿಸಿದರೂ ನನ್ನ ಆಲಸ್ಯ ತೊಡೆಯದು. ಅಧ್ಯಯನ ತೊಡಗದು. ಹಾಗಂತ ನೀವು ನಿರಾಶರಾಗಬೇಡಿ. ನನ್ನನ್ನು ಪರಿಪರಿಯಾಗಿ ನಿಂದಿಸಿ ನೋಡಿ.

     • ನಿಂದೆಯಲ್ಲಿ ನಾನ್ಯಾವತ್ತೂ ಹಿಂದೇ.ಆದರೂ ಪ್ರಯತ್ನಿಸಿದ್ದೇನೆ

      ರಂಪಮಂ ಗೈಯುತುಂ ನಿತ್ಯಂ ಸಾಧನಾಪಥಕೊಯ್ವರಂ
      ರಂಪರಂ ವಂದಿಪೆಂ ಹಾಸ್ಯಾಸಕ್ತರಂ ಕಾವ್ಯಶಕ್ತರಂ

     • ಒಂದು ನಿರ್ದಿಷ್ಟವಾದ ಸವರಣೆ: ಕಾವ್ಯಶಕ್ತರಂ ತಪ್ಪು. (ಮುಕ್ತಕ)ಪದ್ಯಲೇಖರಂ ಎನ್ನಿ. ನಾನು ಒಂದೂ ಕಾವ್ಯವನ್ನು ಈವರೆಗಂತೂ ಬರೆದಿಲ್ಲ, ಮುಂದೆಯೂ ಬರೆಯಲಾರೆನೇನೋ.

  • ಕಾವ್ಯಶಕ್ತರಂ ಎಂದದ್ದು ಕಾವ್ಯವನ್ನು ಬರೆಯಲು ಬೇಕಾದ ಶಕ್ತಿ ಇರುವವರನ್ನು ಅನ್ನುವ ಅರ್ಥದಲ್ಲಿ

 8. ಮಾತ್ರಾ ಮಲ್ಲಿಕಾಮಾಲೆ:

  ಬಾನ ಕೊಳದಲ್ಲರಳಿಹವು ನೋಡೆನಿತು ಬೆಳಗುವ ಹೂಗಳು
  ನಾನು ನಾನೆನ್ನುತಲಿ ಬೆಳಕನು ಚೆಲ್ಲಿ ಕಳೆಯುತ ಕತ್ತಲು
  ಸಾನುರಾಗದಿ ದೇವನಿಂತೆಯೆ ತರಲಿ ಮನಸಿಗೆ ನೆಮ್ಮದಿ
  ಹಾನಿಗಳನೆಲ್ಲವನು ಕಳೆಯುತ ದೀವಳಿಗೆಯಾ ಹಬ್ಬದಿ

  • ಚೆನ್ನಾಗಿದೆ. ನಿಮಗೆ ಮಾತ್ರಾಛಂದಸ್ಸು ಪ್ರಿಯವಿದ್ದಂತಿದೆ. ಮಾತ್ರಾಮಲ್ಲಿಕಾಮಾಲೆಯಲ್ಲದೆ ಸಂತುಲಿತಮಧ್ಯಾವರ್ತಗತಿ, ಸಂತುಲಿತದ್ರುತಾವರ್ತಗತಿ, ಪಲ್ಲವ, ಭಾಮಿನಿ ಇತ್ಯಾದಿಗಳಲ್ಲಿಯೂ ನಿಮಗೆ ಪದ್ಯರಚನೆಯು ಸುಲಭಸಾಧ್ಯ.

   • ಧನ್ಯವಾದಗಳು. ಭಾಮಿನಿಯನ್ನು ಸ್ವಲ್ಪ ಪ್ರಯತ್ನಿಸಿದ್ದೇನೆ. ಇನ್ನು ಮಿಕ್ಕವುಗಳನ್ನು ಸ್ವಲ್ಪ ತಿಳಿದುಕೊಳ್ಳಲಿಕ್ಕೆ ನೋಡುವೆ.

  • ಪಲ್ಲವ|| ಬಾನ ಕೊಳದೊಳಗರಳಿಸುತೆ ಹೂ
   ಮಾನಿ ಸೂಸುಗೆ ಬೆಳಕರಾಜಿಯ
   ಸಾನುರಾಗದಿ ದೀವಳಿಗೆಯೊಳ್
   ಹಾನಿಗಳ ಕಳೆ ದೇವನೆ||

   ಸಂತುಲಿತಮಧ್ಯಾವರ್ತಗತಿ (೩-೫)||
   ಬಾನ ಕೊಳದೊಳಗಮರಳಿಹವು ನೋಡು ಬೆಳಗುಹೂಗಳೆನಿತು
   ನಾನು ನಾನುಮೆನ್ನುತಲಿ ಬೆಳಕನ್ನು ಚೆಲ್ಲಿ ಕಳೆಯುತಿರುಳಂ|
   ಸಾನುರಾಗದೊಳು ದೇವನಿಂತು ನೆಮ್ಮದಿಯ ತರಲಿ ಮನಕೆ
   ಹಾನಿಗಳನೆಲ್ಲವನ್ನು ಕಳೆಯುತ್ತೆ ದೀವಳಿಗೆಯ ಚಣದಿ||

   ಸಂತುಲಿತದ್ರುತಾವರ್ತಗತಿ=ಧವಳ (6-6-6-ಗುರು-ಗುರು )||
   ಬಾನೊಳ್ ಕೊಳದೊಳ್ ಮೂಡಿರ್ಪವು ನೋಡೈ ಪೂಗಳ್
   ನಾನಾನೆನ್ನುತ್ತುಂ ಬೆಳಕಂ ಚೆಲ್ಲುತ್ತುಂ ತಾಂ|
   ದೀನರ್ಗಾ ದೇವಂ ನೆಮ್ಮದಿಯಂ ತರಲಿಂದೇ
   ಊನಂಗಳ ಕಳೆಯುತ್ತುಂ ದೀಪಾವಳಿಯಂದುಂ||

 9. ಭವ್ಯಾಕಾಶದಪಾರ ವಿಸ್ತರಗಳಿನ್ನೇರಲ್ಕೆ ಕಾಲ್ಸೋಲುಗುಂ
  ದಿವ್ಯವ್ಯೋಮದೊಳಿರ್ಪನಂತ ರುಚಿಯಂ ಕಾಣಲ್ಕೆ ಕಣ್ಸಾಲದೈ
  ಶ್ರವ್ಯಾಶ್ರವ್ಯಗಳಿರ್ಕೆ ಬಾನಿನೊಡಲೊಳ್ ಕೇಳಲ್ಕಶಕ್ತರ್ ಗಡಾ
  ಕಾವ್ಯಂ ತಾಮೆಟುಕಲ್ಕೆ ಮಾಳ್ಪ ಪರಿಯೀ ಆನಂದ ದೀಪಾವಳಿs

 10. ಧಗಧಗನೆಂದು ಉರಿಯುವ ಬೆಂಕಿಯು ಹೆಚ್ಚು ಅಪಾಯಕಾರಿಯಲ್ಲ. ಬರಿಯ ಕಾಗದದ ಬೇಲಿಯಿಂದ ಅದನ್ನು ನಿಯಂತ್ರಿಸಬಹುದು. ಆದರೆ ತಣ್ಣಗೆ-ಮೃದುವಾಗಿ ಇರುವಂತೆ ತೋರುವ…..
  ಸ್ವಾಗತ|| ರೋಷದಿಂದುರಿದೊಡೇನು ಹುತಾಶಂ
  ಕ್ಲೇಷನಿಗ್ರಹವು ಪತ್ರಕಸಾಧ್ಯಂ (ಪತ್ರಕ=ಪತ್ರ)|
  ದೂಷಣಪ್ರವಣಕೋಮಲಜಿಹ್ವಂ
  ಭೀಷಣಪ್ರಕೃತಿದಂತನಿರುಧ್ಯಂ||

 11. ಕಪ್ಪೊಡಲಿನ ಸೀರೆಗೆ ಕೌಸುಂಭವೆ (orange colour)
  ಒಪ್ಪವು ಬಣ್ಣವು ಅಂಚೆಂದು|
  ಟಿಪ್ಪಣಿ-ಗೈದಿತು ಹೆಂಗಳೆಯರಿಗೈ
  ಚಪ್ಪರದಂದವು ಬುಟ್ಟಿಗಳ||

 12. ಜ್ಞಾನಿಯ ಸಂಗವು ಸದಾಪೇಕ್ಷ್ಯ. “ಈಗ ನಾನು ಸಮರ್ಥನು, ಅವನ ಸಂಗವು ಇನ್ನು ಬೇಡ” ಎಂದರೆ…
  ವಸಂತತಿಲಕ|| ಓಜಸ್ವಿಯಪ್ಪ ಮತಿವಂತನ ಸಂಗಮೆಂದುಂ
  ರಾಜೋಚಿತಂ ಕಳೆಯೆ ಮೋಹಮದಂಗಳೆಂದುಂ (ಅಜ್ಞಾನ)|
  ಸಾಜಂ ನಿಜಕ್ಕಮೆನುತೀಗಿದೊ ಡೀಯಮೆನ್ನಲ್ (Flight)
  (ಹಾರಲ್)ಈಜಲ್ಕಮಕ್ಕುಮಹುದೇಂ ವಿಗತಾಗ್ನಿಸಂಗಂ??

 13. ಈ ಚಿತ್ರಕ್ಕೆ
  1. ಹವ್ಯವಾಹನನು ನಮ್ಮ ಪ್ರಾರ್ಥನೆಯನ್ನು ಸುರರಿಗೆ ಮುಟ್ಟಿಸುವುದಿಂತು,
  2. ಅಗ್ನಿಗೆ ನಾವು ಪಕ್ಕಾಗದಂತೆ, ತಾನೇ ಆರುವವರೆಗೆ ಅದನ್ನು ಒಂದೇ ಕಡೆಗೆ ಉರಿಯಲು ಬಿಡುವುದೊಳಿತು,
  3.Read more …

 14. ದೀಪಗಳನುಂ ಬೆಳಗಿ ಚಂದದಿ
  ಪಾಪಗಳ ನಾವ್ ತೊಡೆದುಹಾಕುತ
  ಧೂಪದಾರತಿಯೆತ್ತಿ ಸರ್ವರು ಬಲಿಯ ಪೂಜಿಸುವ
  ದೀಪ ಹಚ್ಚುತಲಿರುಳನೋಡಿಸಿ
  ಲೋಪತಿದ್ದುವ ಜ್ಞಾನ ಪಡೆಯುತ
  ತಾಪಗಳನುಂ ಮರೆತು ನಾವ್ ಸಾಗೋಣ ಬೆಳಕಿನೆಡೆ

  ( ಇದು ಈ ಚಿತ್ರಕ್ಕೆ ಬರೆದ ಪದ್ಯವಲ್ಲ.)

  • ಆಧುನಿಕ ಅವಧಾನಿಯೊಬ್ಬರು ಪದಪುಂಜಗಳನ್ನು ಮೊದಲೇ ಸಜ್ಜಾಗಿಸಿಕೊಂಡು, ಅವಧಾನದಲ್ಲಿ ಯಾವುದೇ ವಿಷಯಕ್ಕೂ ಅವನ್ನು ಬಳಸಿಕೊಳ್ಳುತ್ತಾರಂತೆ. ಇದೂ ಅಂತೆಯೇ ಎನ್ನೋಣವೆ 😉 ಇರಲಿ. ಪೂರ್ಣಾವಧಾನಿಯಾಗಲು ಇದೊಂದು ಹೆಜ್ಜೆಯಾಗಲಿ. ಮುಂದರಿದು ಸದ್ಯದಲ್ಲೇ ನೀನು ಅವಧಾನಿಯಾಗೆಂದು ಆಶಿಸುವೆ.

 15. यथा नारी समारम्भे
  स्वर्णाभरण धारणात् ।
  शोभते यामिनी दीप​-
  मालालङ्कारभूषिता II

  ಸಮಾರಂಭದಲ್ಲಿ ಸ್ವರ್ಣಾಭರಣ ಧರಿಸಿದ ಹೆಂಗುಸು ಶೋಭಿಸುವಂತೆ ದೀಪಮಾಲೆಯಿಂದ ಅಲಂಕಾರಗೊಂಡ ಕತ್ತಲು ಕಂಗೊಳಿಸುತ್ತದೆ

  (ಸಂಸ್ಕೃತ ಭಾಷೆಯಲ್ಲಿ ಬರೆಯುವ ಒಂದು ಪ್ರಯತ್ನ ಮಾಡಿದ್ದೆ . ಕೊನೆಯ ಪಾದದಲ್ಲಿ ಒಂದು ವ್ಯಾಕರಣ ದೋಷವಿತ್ತು. ಭಾಷೆ ಬಲ್ಲವರಿಂದ ತಿದ್ದಿಸಿಕೊಂಡು ಇಲ್ಲಿ ಹಾಕಿದ್ದೇನೆ )

  • chennagide!

   • ನೀಲಕಂಠರಿಗೆ ಧನ್ಯವಾದಗಳು . ಯಾರಾದರೂ ಇದನ್ನು ಓದಿಯಾರು ಎಂಬ ನಿರೀಕ್ಷೆ ನನಗಿರಲಿಲ್ಲ ನೀವು ಓದಿದ್ದು ಮಾತ್ರವಲ್ಲದೆ , ”ಚೆನ್ನಾಗಿದೆ’ ಎಂದು ಪ್ರತಿಕ್ರಿಯಿಸಿರುವುದು ”ಸ್ವರ್ಗಕ್ಕೆ ಮೂರೇ ಗೇಣು ” ಎಂಬಷ್ಟು ಸಂತೋಷವಾಗಿದೆ .

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)