ರವಿರಾಜತೆಗಿದು ಮುಕುಟ-
ಚ್ಛವಿಯೆನೆ ಕಾಣ್, ಕವಿ ಪತಂಗಮಂ ಮುನ್ನೀಳ್ದಂ!
ಬುವಿಯೊಡೆತನಂಗಳೆಲ್ಲಂ
ಪವನಕ್ಕೆರವಾದ ಪುಲ್ಲೆನುತ್ತಿದಕೊಲ್ದಂ
ರವಿಯ ರಾಜತ್ವಕ್ಕೆ ಇದು ಮುಕುಟ ಎಂಬಂತೆ ಕವಿಯೊರ್ವ ಈ ಪತಂಗವನ್ನು ರವಿಯೆಡೆಗೆ ಹಾರಿಸುತ್ತಿದ್ದಾನೆ. ಈ ಭೂಮಿಯ ದೊರೆತನಗಳೆಲ್ಲ ಗಾಳಿಗೆ ಸಿಕ್ಕ ಹುಲ್ಲಿನ ತೆರ ಎಂದು ತಿಳಿದು ಅವನಿದಕ್ಕೆಳಸಿದ್ದಾನೆ.
’ನಭವನವಿಕಸಿತಸೂರ್ಯಪ್ರಭಾಕುಸುಮ’ ಚೆನ್ನಾಗಿದೆ. ಮಧ್ಯದಲ್ಲಿ ’ಅದನ್ನೆ’ ಎಂದಿರುವುದು ಕೊಂಚ ಕರ್ಕಶವಾಗಿದೆ ಅಷ್ಟೆ 🙂 ನಿಮ್ಮ ಪದ್ಯವೂ ಪ್ರತಾಪ ಸಿಂಹರ ಪದ್ಯವೂ (#೨) ಸುಮಾರು ಒಂದೇ ಜಾಡಿನಲ್ಲಿವೆ. ತಪ್ಪೇನಲ್ಲ.
ರವಿರಾಜತೆಗಿದು ಮುಕುಟ-
ಚ್ಛವಿಯೆನೆ ಕಾಣ್, ಕವಿ ಪತಂಗಮಂ ಮುನ್ನೀಳ್ದಂ!
ಬುವಿಯೊಡೆತನಂಗಳೆಲ್ಲಂ
ಪವನಕ್ಕೆರವಾದ ಪುಲ್ಲೆನುತ್ತಿದಕೊಲ್ದಂ
ರವಿಯ ರಾಜತ್ವಕ್ಕೆ ಇದು ಮುಕುಟ ಎಂಬಂತೆ ಕವಿಯೊರ್ವ ಈ ಪತಂಗವನ್ನು ರವಿಯೆಡೆಗೆ ಹಾರಿಸುತ್ತಿದ್ದಾನೆ. ಈ ಭೂಮಿಯ ದೊರೆತನಗಳೆಲ್ಲ ಗಾಳಿಗೆ ಸಿಕ್ಕ ಹುಲ್ಲಿನ ತೆರ ಎಂದು ತಿಳಿದು ಅವನಿದಕ್ಕೆಳಸಿದ್ದಾನೆ.
ಬಹಳ ಚೆನ್ನಾಗಿದೆ
Thank you 🙂
(ಬುವಿ+ಅರಸೊತ್ತಿಗೆಯು+ಎಲರಿಂ)
ಬುವಿಯರಸೊತ್ತಿಗೆಯೆಲರಿಂ
ನವೆವುದುಮೆಂದರಿತುಮೇಂ ಪ್ರಯೋಜನಮಾಯ್ತಯ್|
ಕವಿಗದೆ ಗಾಳಿಯೊದಗಿತೇ
ರವಿಮುಕುಟಕ್ಕೇರಿಸಲ್ ಕಿರೀಟಮನಯ್ಯೋ!!
ಮೇಲೇರುವಕಾತುರದೊಳ್
ನೀಲಪತಂಗಂ ಗಭಸ್ತಿಮಾನನ ಸೋಂಕಲ್|
ತೇಲಿ ಗಗನದೊಳಗೇರಿತು
ಕಾಲನವೋಲ್ ಸೂತ್ರಧಾರಿ ತಡೆಯುತಲಿರ್ದಂ ||
ಗಗನದೊಳಗೇರಿತು -> ಗಗನದೊಳೇರ್ಗುಂ ಮಾಡಬಹುದು ಹಳಗನ್ನಡದ ದೃಷ್ಟಿಯಿಂದ, ಚೆನ್ನಾಗಿದೆ
ಸಲಹೆಗೆ ಧನ್ಯವಾದಗಳು ಸೋಮ. ತಿದ್ದುವೆ.
ನೀಲಗಗನದೊಳ್ ತೋರ್ಪೀ
ಲೀಲೆಯನೇವೇಳ್ವೆನೇಱಿ ಪಾಱ್ವ ಪತಂಗಂ
ಬಾಲನ ಬಸಮಾದತ್ತೇಂ
ಬಾಲಮನಾಡಿಸುತುಮಾಡಿ ಕುನ್ನಿಯ ಪದನೊಳ್
ಚೆನ್ನಾಗಿದೆ ಜೀವೆಂ, ಬಸಮಾದತ್ತೇಂ ಅಂದರೆ?
ಥ್ಯಾಂಕ್ಯೂ!, ಸೋಮ. ವಶ -> ಬಸ.
ಕುನ್ನಿಗೊಂದೇ ಬಾಲವಿನ್ನೊಂದನೆಲ್ಲಿಂದೆ
ಚೆನ್ನಿಗನೆ ತಂದೆಯೋ ಪೇಳುಗೀಗಳ್|
ತಿನ್ನಲೊಂದೇ ಬಾಯಿ ತಾನಿರಲು ಅಂಗವೆರ-
ಡಿನ್ನೇಕೊ ಮರೆಯೊಳಾ ಬಾಲದೊಳ್ ಪೇಳ್??
ಹಿಂಚದಲೆ ಬೇಸರಿಸದಲೆ ನೀ
ವಿಂಚು ಇಂಚನು ಟೀಕೆ ಗೆಯ್ವಿರಿ
ಕೊಂಚವೂ ಸಂಕೋಚ ಬೇಡವೆ ಅಂಗಗಳ ಬಗ್ಗೆ?
ಮಿಂಚಿನಂದದೊಳಿತ್ತಲತ್ತಲು
ಸಂಚರಿಸಲೆರಡಂತೆ ತೋರ್ಪುದು
ಪೊಂಚಿ ನೋಡಿರಿ ಕುನ್ನಿ ಬಾಲವನಾಡಿಸುವ ಜವಮಂ
hhahha
ಅಂದಿಗೊರ್ವನು ಸೂರ್ಯನಂ ಸಾರಿ ಮೋರೆಯಂ
ಕೆಂದಾಗಿ ದುಂಡಾಗಿ ಮಾಡಿಕೊಂಡಂ|
ಇಂದಿಗೀ ಪಟಮದೇ ಕಜ್ಜಕುಜ್ಜುಗಿಸುತ್ತೆ
ಪೊಂದಿಹುದು ಪೆಚ್ಚಾಗಿ ಕಪ್ಪೆಕಾಲಂ||
ಇದೇನು ಪ್ರಸಾದು, ಪಟವನ್ನು ಕಪ್ಪೆಗೆ ಹೋಲಿಸುವುದೇ? ಎನ್ನೋಣವೆಂದಿದ್ದೆ :D, ಸೂಕ್ಷ್ಮವಾಗಿ ಗಮನಿಸಿದಾಗ ನನಗೂ ಪಟ, ಮತ್ತು ಬಾಲಂಗೋಚ್ಚಿ ಕಪ್ಪೆಯು ತೇಲಿದ ಹಾಗೆ ಕಾಣುತ್ತಿದೆ 🙂
Hahhaaa
ದೂರದೂರಿನೊಳಿರ್ಪ ಹೊಳೆವ ಮುತ್ತನು ಕಂಡು
ಹಾರಲೆಳಸಿರ್ಪುದೀ ಮನದ ಪಟವು..
ದಾರಪಿಡಿದವನದನು ಕಡಿವನೆಂಬುದ ಮರೆಯು-
-ತೇರಿಹುದು ಬೆಂಕಿಯುಂಡೆಯನೆ ಬಯಸಿ
ಚೆನ್ನಾಗಿದೆ
ಸೊಗಸಾಗಿದೆ!
ಇಬ್ಬರಿಗೂ ಧನ್ಯವಾದಗಳು_/\_
ಬಿಳಿವಣ್ಣದೆ ಪಲವಣ್ಣಮ-
ನೊಳಕೊಂಡಿರ್ಪಂತೆ ಕೈತವಂಗೈವನಿಗೆಂ-
ದಿಳೆಯಿಂ ಬಣ್ಣದಪಟಮಂ
ಬೆಳಗುತಲಾರತಿಯನೀವುದೇ ಹದನಂ ದಲ್
Nice!
ಸೊಗಸಾಗಿದೆ!
ನೋಡಾರೆ ಕಲಿಯೆಯೇಂ ಸೂರ್ಯನಂ ಸಾರ್ದರೆಂ-
ತೀಡಾಗುವರು ದುರ್ದೆಸೆಗಮೆನ್ನುತುಂ|
ಖೋಡಿಮೋಡವದೋಡುತೋಡುತಂತೆಯೆ ಕರಗಿ
ಕೋಡಿಹರಿವುದುಮಿಳೆಗೆ ನೀರಾಗುತುಂ||
ಸೂತ್ರಮಂ ಪಿಡಿಯೆ ನಾಂ ಬಿಡಿಸಿಕೊಳೆ ಯತ್ನಿಸುವೆ
ಮಿತ್ರನಂ ಸಾರ್ವ ಕಾತುರದಿ ನೀನೈ|
ಚಿತ್ರಮೇನೆಂಬೆ ಬಿಡುಗಡೆಯಗೊಳಿಸಲು ಸೇರ್ವೆ
ಧಾತ್ರಿಯನು ತೊರೆದೆಲ್ಲ ಕೆಚ್ಚನೇಕೋ||
ಚೆನ್ನಾಗಿದೆ ಪ್ರಸಾದು
ಬೆರಗ ಬಣ್ಣಂಗಳಿಂದಿರುವೆನಾ ಮೋಡವದು
ಬರಿದೆ ಬಿಳಿಯೆಂದು ಹಂಗಿಪೆಯ ಪಟವೆ|
ಕರಗಲಾ ಮೋಡವಾಗಳ್ ದಿಗಂತದೆ ನೋಡು
ಮಿರುಗುಬಣ್ಣಗಳಿಂದ್ರಧನುವೈಭವಂ||
ಚೆನ್ನಾಗಿದೆ
ನಭವನವಿಕಸಿತಸೂರ್ಯ
ಪ್ರಭಾಕುಸುಮಮಂ ಪತಂಗಮಾಗುತೆ ಪಟತಾ-
-ನಭಿರಾಮತೆಯಿಂ ಪೊಂದ-
-ಲ್ಕಭಿಗಮಿಸುತಿರಲ್ಕದನ್ನೆ ಬಿದಿಸೆಳೆದಿದೆಯೇಂ?
’ನಭವನವಿಕಸಿತಸೂರ್ಯಪ್ರಭಾಕುಸುಮ’ ಚೆನ್ನಾಗಿದೆ. ಮಧ್ಯದಲ್ಲಿ ’ಅದನ್ನೆ’ ಎಂದಿರುವುದು ಕೊಂಚ ಕರ್ಕಶವಾಗಿದೆ ಅಷ್ಟೆ 🙂 ನಿಮ್ಮ ಪದ್ಯವೂ ಪ್ರತಾಪ ಸಿಂಹರ ಪದ್ಯವೂ (#೨) ಸುಮಾರು ಒಂದೇ ಜಾಡಿನಲ್ಲಿವೆ. ತಪ್ಪೇನಲ್ಲ.
+1 🙂
ಒಂದೇ ಜಾಡು: ಇಬ್ಬರೂ ಒಬ್ಬಳೇ ವಧುವನ್ನು ಇಷ್ಟಪಟ್ಟರಂತೆ. “ಎರಡೂ ದದ್ದ ಹೊರಕ್ ಹಾಕು” ಎಂದು ಹೇಳಿ ಅದೇ ಹೋದ್ಲಂತೆ ಅವ್ಳು!
+2 🙂
ಎಲ್ಲರಿಗೂ ಧನ್ಯವಾದಗಳು_/\
ಚಂದದ ಪಟಮಂ ಗೆಯ್ದೆಂ
ಮಂದಿಗದಂ ತೋರ್ಗುಮೆನುತಲೆಸೆಯಲ್ಕನಿಲ-
ಸ್ಯಂದನದಿಂದನಲಾಕರ-
ಮೆಂದೇ ಪೋಪುದಲ ಶೂನ್ಯದೃಷ್ಟಿಯೆ ಕಾಣ್ಗುಂ
ಚಂದದ ಪಟವನ್ನು ಮಾಡಿ ಜನರಿಗೆ ತೋರಿಸಲು ಹೋದರೆ ಸೂರ್ಯನೆಡೆಗೆ ಪಟವು ಗಾಳಿಯಿಂದ ಒಯ್ಯಲ್ಪಡಲು (ಸೂರ್ಯಕಾಂತಿಯನ್ನು ನೋಡಲಾಗದೆ) ಕಣ್ಣಿಗೆ ಶೂನ್ಯವೇ ಕಾಣುತ್ತಿದೆ
ಅನಿಲಸ್ಯಂದನ – air flow
ಅನಲಾಕರ – ಸೂರ್ಯ
ಸರಿಯಾಗಿ ಹೇಳಿದಿರಿ. ವೇದಾಂತಿಗಳ ಪ್ರಕಾರ ಜಗತ್ತೆಲ್ಲವೂ ಶೂನ್ಯ. ಕಣ್ಣಿಗೆ ಕಾಣುತ್ತಿರುವ ಆ ಸೂರ್ಯ, ಮೋಡ, ಆಗಸ, ಗಾಳಿಪಟ, ಸೂತ್ರ, ಸೂತ್ರಧಾರ – ಎಲ್ಲವೂ ಶೂನ್ಯ 😉
shuunya-dRSTi?? shuunya-dRshya?
yes dRshya is better, thanks 🙂
ರಂಗೇರೆ ವಿವಾಹದೆ ಬಾ-
ನಂಗಳದೊಳ್ ಮುಗಿಲಿನಂತರಪಟದ ಮರೆಯೊಳ್
ಸಿಂಗರಿಸೆ ರವಿ”ವರ”ಗೆ ಬಾ-
ಸಿಂಗವ ಕಟ್ಟುದೆ ಸುಸೂತ್ರದಿಂ ಬಗೆ ಹಸ್ತo !!
ಆಹಾ ಚೆನ್ನಾಗಿದೆ! ಬಗೆ-ಹಸ್ತ ಸಮಾಸವೇ? ಬಗೆ – ಹೃದಯ ಎಂಬರ್ಥದಲ್ಲಿ ಬಳಸಿದ್ದಾ? ಬಗೆಗೈಯಿಂ ಎಂದಾದರೆ ಅರಿ ತೊಲಗೀತು 🙂
ಧನ್ಯವಾದಗಳು ನೀಲಕಂಠ ,
ಅದು “ಬಲಹಸ್ತo” (ಪ್ರಸಾದ್ ಸರ್, ಎಲ್ಲಿ ಎಡಗೈಯ್ಯೋ / ಬಲಗೈಯ್ಯೋ ಅಂತ ಪರೀಕ್ಷಿಸಿಯಾರೋ ಅಂತ ಈ “ಬಗೆ ಹಸ್ತ o” !!)
“ಸೂರ್ಯ”ನ ಮದುವೆಯ ಸಂದರ್ಭ – ಮೋಡ ಹರಡಿ “ಅಂತರಪಟ ” ಹಿಡಿದಿದೆ – ಬೆಟ್ಟ “ಬಾಸಿಂಗ” ಕಟ್ಟಲು ಕೈ ಚಾಚಿದೆ ಎಂಬ ಕಲ್ಪನೆ ! ಹಾಗಾಗಿ “ಗಿರಿಹಸ್ತ o” ಸರಿಹೋದೀತೆ ?
🙂 ಇದೆಲ್ಲ ನಡೆಯುವುದು ಕವಿಯಿಂದಾದ್ದರಿಂದ ಕವಿಹಸ್ತಂ ಎಂದುಬಿಡಿ!
bahaLa chennagide
ಧನ್ಯವಾದಗಳು ಸೋಮ , ನೀಲಕಂಠ (ಗಮನಿಸಿರಲಿಲ್ಲ )
“ಕವಿಹಸ್ತo” ಚೆನ್ನಾಗಿದೆ !!
ರಂಗೇರೆ ವಿವಾಹದೆ ಬಾ-
ನಂಗಳದೊಳ್ ಮುಗಿಲಿನಂತರ ಪಟದ ಮರೆಯೊಳ್
ಸಿಂಗರಿಸೆ ರವಿವರಗೆ ಬಾ-
ಸಿಂಗವ ಕಟ್ಟುದೆ ಸುಸೂತ್ರದಿಂ ಕವಿಹಸ್ತo !!