Jan 152018
ಎಲ್ಲಾ ಪದ್ಯಪಾನಿಗಳಿಗೂ ಮಕರಸಂಕ್ರಾಂತಿಯ ಶುಭಾಶಯಗಳು, ಭಾರತೀಯರೆಲ್ಲರೂ ವೈವಿಧ್ಯಮಯವಾಗಿ ಆಚರಿಸುವ ವಿಶೇಷವಾದ ಈ ಹಬ್ಬದ ಯಾವುದೇ ಆಯಾಮವನ್ನು ವರ್ಣಿಸಿ ಪದ್ಯ ರಚಿಸಿರಿ.
ಎಲ್ಲಾ ಪದ್ಯಪಾನಿಗಳಿಗೂ ಮಕರಸಂಕ್ರಾಂತಿಯ ಶುಭಾಶಯಗಳು, ಭಾರತೀಯರೆಲ್ಲರೂ ವೈವಿಧ್ಯಮಯವಾಗಿ ಆಚರಿಸುವ ವಿಶೇಷವಾದ ಈ ಹಬ್ಬದ ಯಾವುದೇ ಆಯಾಮವನ್ನು ವರ್ಣಿಸಿ ಪದ್ಯ ರಚಿಸಿರಿ.
ನಮ್ಮೂರಲ್ಲಿ ಮಾಡಿದ ಹಬ್ಬದ ಬಗ್ಗೆ ಬರೆದ ಒಂದಿಷ್ಟು ಷಟ್ಪದಿಗಳು. ನಡುಗನ್ನಡದಲ್ಲಿವೆ. ಫೇಸ್ಬುಕ್ಕಲ್ಲಿ ಹಾಕಿದ್ದು 🙂
ಅಟ್ಟಡುಗೆಗಳ ಬಲ್ಗಡಣವೊ-
ಟ್ಟೊಟ್ಟಿ ತುಂಬಿದ ತೇರುಗಳ ಸಾ-
ಲೊಟ್ಟುಗೂಡಿತು ಮಕರಸಂಕ್ರಮಣೋತ್ಸವಕ್ಕೆಂದು
ಗಟ್ಟಿಮೊಸರೊಗ್ಗರಣೆಯನ್ನದ
ರೊಟ್ಟಿ ಶೇಂಗಾ ಎಳ್ಳು ಹೋಳಿಗೆ
ಸಟ್ಟುಗಂಗಳ ಸಿವುಡು ಸಾರಿನ ಸಾರವೆಸೆದಿರಲು
ಮಾವುನಿಂಬೆಗಳುಪ್ಪುಗಾಯಿಯ
ನಾವೆದುಂಬಿದ ಚಟ್ಣಿಪುಡಿಗಳ
ಕಾವುದಣಿಯದ ಪಲ್ಯರಸಗಳ ಖಿಚುಡಿ ಪಚಡಿಗಳ
ಜೀವವುಂಡ ಕರೆಂಡಿ ಹಿಂಡಿಯ
ಭಾವದುಂಬುವ ಮೊಸರು ಬೆಣ್ಣೆಯ
ಠಾವಿಗುರುಪರಿಮಳವ ಬೀರುವ ತೊವ್ವೆ ತುಪ್ಪಗಳ
ಅನ್ನದೇವಾಲಯದ ಶಿಖರಕೆ
ಹೊನ್ನ ಕಳಸವನಿಟ್ಟ ತೆರನಿದು
ಜನ್ನದೂಟದ ಪೂರ್ಣದಾಹುತಿ ಮಿರ್ಚಿಭಜಿಗಳನು
ಬನ್ನಬವಣೆಯ ಮರೆತು ವಿರಚಿಸೆ
ಗನ್ನಮಪ್ಪ ಸಿಲಿಂಡರಿಂ ಸಂ-
ಪನ್ನಮಾದುದು ಕಾರುಗಳ ಹೇರಾಣಿಕೆಯ ಕೇಳಿ
ಮೆರೆವ ವರದಾನದಿಯ ತೀರದ
ಸುರಿವ ಸೌಂದರ್ಯಕ್ಕೆ ಮರುಳಾ-
ಗಿರುತೆ ಜನತೆಯ ಜಾತ್ರೆ ಹೊರಟುದು ಭೂರಿಭೋಜನಕೆ
ಕರದೆ ಪೂಜೆಯ ಸಲಕರಣೆಯೆ-
ಲ್ಲೆರೆವ ಭಕ್ತಿಯ ನೀರ ಬಿಂದಿಗೆ
ಜರಿಯ ಬಟ್ಟೆಗಳೆಲೆಯಡಿಕೆ ಕಾಯ್ದುಂಬುಗಾಣ್ಕೆಯಲಿ
ಅಲ್ಲಿ ಚೆಲ್ಲಿದ ಚೆಲ್ಲೆಗಂಗಳ
ಮೊಲ್ಲೆಮುಡಿದಿಹ ಬೆಡಗುವಡೆದಿಹ
ಸಲ್ಲಲಿತವನಿತಾವಿಸರದಿಂ ಪೂಜೆಗೊಳ್ಳುತಲಿ
ಕಲ್ಲುಮನಸಿಗೆ ತಣ್ಪನೆರೆಯುತ
ಫುಲ್ಲಕುಸುಮಂಗೈವ ಹದನದಿ
ಭುಲ್ಲವಿಸಿ ಪರಿದಿರ್ದಳಲೆ ವರವರದೆ ವರದಾತೆ
ಹಸುರು ಹಾಸಿದ ದಂಡೆಯೆಡಬಲ-
ದುಸಿರು ನೀಡುವ ವೃಕ್ಷರಾಜಿಯ
ಕಸುವುದುಂಬಿದ ಮಣ್ಣ ಗದ್ದೆಯ ನಡುವೆ ಗಜಬಜಿಸಿ
ಹಸನಗೈದಿರುವಂಥ ವೇದಿಯೊ-
ಳೆಸೆದು ಹರಟೆಯ ಮಂತ್ರ ಮೊಳಗಿರೆ
ಹಸಿವು ನೀಗುವ ಯಜ್ಞ ಜರುಗಿತು ಹರಿಯ ನೆನಹಿನಲಿ
ಹೊಟ್ಟೆಯುರಿಸಿದ ಪಾಪವದು ಕಟ್ಟಿಟ್ಟ ಬುತ್ತಿಯು ತಿನ್!
ಹರಿಯ ನೆನಹಿನೊಳಪ್ಪುದೇ ಪರಮಾರ್ಥ ಸಾರ್ಥಕಮೈ
ಫೇಸುಬುಕ್ಕಿಗೆ ಸೇರ್ಸಿಕೊಳ್ಳುವುದೀ ಕಮೆಂಟುಗಳಂ
😀 ಮುಂದಿನ ವರ್ಷ ನಮ್ಮೂರಿಗೆ ಬನ್ನಿ. ಹೊಟ್ಟೆಯುರಿ ತಣ್ಣಗಾಗ್ತದೆ.
ಜನ್ನದೂಟದ ಪೂರ್ಣದಾಹುತಿ
ಕನ್ನಡದ ಮೆಣಸಿ೦ಗೆ ಬಳಿದೊಡೆ
ಹೊನ್ನಬಣ್ಣದ ಕಡಲೆಹಿಟ್ಟಿನ ಪೂರಣದೆ ಸಿಗದೇ ?
ಪದ್ಯ ಸೊಗಸಾಗಿದೆ ನೀಲಕಂಠರೆ . ಮಿರ್ಚಿಯ ಬದಲು ಮೆಣಸು ಎಂಬ ಪದ ಸೊಗಸಲ್ಲವೇ? ಎಂದೆ
ಮಿರ್ಚಿ ಮೆಣಸುಗಳೊಂದೆಯಾದರು
ಪೆರ್ಚುವುದು ಧ್ವನಿ ಮಿರ್ಚಿಯಿಂದಲೆ
ಮೆರ್ಚಿನಾ ಪದವೆಮಗೆ ನಿಚ್ಚದ ಮಾತುಮನಸಿನಲಿ 🙂
ನೀವು ಹೇಳುವುದೂ ಸರಿ . ನಾನು ಧ್ವನಿಸಿರುವುದು ಏನೆಂದರೆ , ಅದು ನಡುಗನ್ನಡವಲ್ಲ ; ನುಡಿಗನ್ನಡವಾಗಿದೆ ಎಂದು . ಸಿಲಿಂಡರು , ಕಾರು ,ಮಿರ್ಚಿ ಎಂಬ ಪದಗಳಿಂದ ಗ್ರಾಂಥಿಕ ಭಾಷೆಯ ಸೊಬಗು ಬರುವುದಿಲ್ಲ ಎಂದು ನನ್ನ ಗ್ರಹಿಕೆ .
Yes, true.
ಬಹಳ ಚೆನ್ನಾಗಿದೆ,
ಈಗಳೇ ಭೋಜನವನುಂಡೆಂ
ತೂಗುಕಂಗಳಿನೆವೆಯ ಕೀಳುತೆ
ಸಾಗೆ ದಿಟ್ಟಿಯು ಪದ್ಯಪಾನದೆ ಮತ್ತೆ ಪಸಿವುದಲ
😀
ಮಕರನ ರಾಶಿಯನೆ ರವಿ ಪ
ತಿಕರಿಸಿದಪನೆಂದು ಹಿಗ್ಗುತುರ್ವೀತಲದೊಳ್
ಮಕರಿಯೊಳು ರಾಶಿಯೊಟ್ಟಿ ಹಿ
ದುಕಿ ರೊಟ್ಟಿಯ ತಟ್ಟಿಯವರೆಯಂ ಸವಿದುಂಬರ್
ಹಹ್ಹಾ.. ಚೆನ್ನಾಗಿದೆ! ಮೊದಲನೇ ಹಾಗು ಎರಡನೇ ಸಾಲುಗಳ ಅಂತ್ಯ ಆದಿಯಲ್ಲಿ ಗತಿಸುಭಗತೆ ತಪ್ಪಿದೆಯಲ್ಲ…
ಪಾಪ ನಿಮಗ್ಯಾಕೆ ಬೇಜಾರು, ಹೀಗೆ ಮಾಡಿಕೊಳ್ಳಿ:
ಮಕರನ ರಾಶಿಯನರ್ಕಂ
ಸ್ವೀಕರಿಸಿದನೆಂದು ಹಿಗ್ಗುತುರ್ವೀತಲದೊಳ್
….
ಈಗ ಪ್ರಾಸ ತ್ರಾಸುಪಟ್ಟುಕೊಂಡಿತು 🙂
ನಿಮಗೆ ಯಾವ ತ್ರಾಸ ಬೇಕೋ ಆರಿಸಿಕೊಳ್ಳಿ 🙂
😀 ಚೆನ್ನಾಗಿದೆ
ತಿಲ ಗುಡ ಚಣಕಂಗಳ್ ಖಂಡಕಂ ನಾಲಿಕೇರಂ
ಕಲೆತ ಮಧುರಪಾಕಂ ಪಕ್ವಪುಂಡ್ರೇಕ್ಷುದಂಡಂ
ಕಲೆಯನೆರಕದೊಳ್ ಪೊಯ್ದಂತೆ ಚೀನೀಯಶಿಲ್ಪಂ
ಸಲೆ ಸೊಗಸಿವು ಸೂರ್ಯಂ ನಕ್ರನಂ ಕೂಡೆ ಲಭ್ಯಂ
ಸೈಯೆಂಬರ್ ಕಮಲಾಪ್ತನಂ ಪಿಡಿಯಲಾಕಾಶಾಂತದೊಳ್ ಬಾಲನಂ
ಮಾಯಾಬಂಧನದಿಂದೆ ಮುಕ್ತನೆನಿಸಲ್ ಸಾಹಾಯ್ಯಮಂ ಗೈಯಲುಂ
ಸಾಯೆಂಬರ್ ತವೆ ಬಾಧಿಸಲ್ಕೆ ಗಜನಂ ಕುಂಭೀರನಂ ತಥ್ಯ ಕಾಣ್
ಪ್ರಾಯೇಣೋತ್ತಮಮಧ್ಯಮಾಧಮದಶಾಃ ಸಂಸರ್ಗತೋ ಜಾಯತೇ
ಮೊಸಳೆ ಸೂರ್ಯನನ್ನು ಹಿಡಿದಾಗ ಕೊಂಡಾಟ, ಹಬ್ಬ. ಹುಡುಗನನ್ನು ಹಿಡಿದಾಗ ಆತನಿಗೆ ಸನ್ಯಾಸಕ್ಕೆ ಅನುಮತಿ. ಆನೆಯನ್ನು ಹಿಡಿದಾಗ ಮೊಸಳೆಯ ಮೇಲೆ ಚಕ್ರಪ್ರಯೋಗ. ಮಾಡಿದ ಕೆಲಸ ಒಂದೇ ಬಗೆಯದಾದರೂ ಸಂಸರ್ಗದಿಂದ ಬೇರೆ ಬೇರೆ ಫಲಗಳು.
ಅರ್ಥಪ್ರಾಪ್ತಿಯ ನಷ್ಟದೊಳ್ ಸಿಲಿಕಿದೆಂ ಜೀವೆಂ ಭವತ್ಪದ್ಯದೊಳ್ 🙁
ಪದ್ಯಕ್ಕಂಟಿದ ಗದ್ಯದಿಂ ಪರಿವುದಾ ಸಂಕಷ್ಟಮುಂ ನಷ್ಟಮುಂ
Thanks! Very nice idea 🙂
+1
ಎಳ್ಳು ಬೆಲ್ಲವನುಣ್ಣದಲೆ (೩ನೆಯ ಪದ್ಯ) ನೀ
ವೊಳ್ಳಿತಾಡಿದಿರೆಲ್ಲರೂ ಕೈ
ಕೊಳ್ಳಿರೆನ್ನಯ ಧನ್ಯವಾದಗಳನ್ನು ಮುದದಿಂದ
ಮಾರ್ವಾಡೀ ಗಡ! ರಾಮ-ಲಕ್ಷ್ಮಣವದೆಲ್ಲಂ(ಲೆಖ್ಖ) ಸೇರೆ ಛಂದಸ್ಸಿನೊಳ್
ಗೀರ್ವಾಣಂ ನುಡಿ ನಾಲ್ಕ ಪಾದದೊಳು ಮಾತ್ರಂ ಸಂದುದೀ ಪದ್ಯದೊಳ್!
ಗೀರ್ವಾಣದ ನಾಲ್ಕನೆಯ ಪಾದ ಈ ಪದ್ಯದಿಂದ ಕದ್ದದ್ದು:
ಸಂತಪ್ತಾಯಸಿ ಸಂಸ್ಥಿತಸ್ಯ ಪಯಸೋ ನಾಮಾಪಿ ನ ಶ್ರೂಯತೇ
ಮುಕ್ತಾಕಾರತಯಾ ತದೇವ ನಲಿನೀಪತ್ರಸ್ಥಿತಂ ರಾಜತೇ |
ಸ್ವಾತ್ಯಾಂ ಸಾಗರ ಶುಕ್ತಿಮಧ್ಯಪತಿತಂ ಸಮ್ಮೌಕ್ತಿಕಂ ಜ್ಞಾಯತೇ
ಪ್ರಾಯೇಣೋತ್ತಮಮಧ್ಯಮಾಧಮದಶಾ ಸಂಸರ್ಗತೋ ಜಾಯತೇ ||
ಮಿಕ್ಕ ಮೂರು ಪಾದಗಳನ್ನೂ (ಕದ್ದಲ್ಲದೆ) ಗೀರ್ವಾಣದಲ್ಲಿ ಹೊಂದಿಸುವ ಸಾಹಸ ನನಗೆ ಮೀರಿದ್ದು 🙂 ಕಡೆಯ ಪಾದಕ್ಕೆ
ಪ್ರಾಯೇಣಾಧಮಮಧ್ಯಮೋತ್ತಮದಶಾಃ ಎಂದೂ ಪಾಠಾಂತರವುಂಟು.
ಪ್ರಾಯೇಣಾಧಮಮಧ್ಯಮೋತ್ತಮದಶಾಃ cannot be right one for it has to support the ಜಾಯತೇ which is in singular form whereas ದಶಾಃ is in plural.
ಹೌದು; ವಿಸರ್ಗ ನನ್ನ ಟಂಕನದ ಪ್ರಮಾದ.
ಪುರಾಣದಲ್ಲಿನ ಮೊಸಳೆಗಳನ್ನೆಲ್ಲ ಗಣಿಸಿದ್ದೀರಿ. ದರ್ಶನಗರ್ಭಿತವಾಗಿದೆ.
ಕಬ್ಬಂ ಸಿಗಿಯಲೊಡಂ ರಸ
ಮುಬ್ಬರಿಸಲ್ ಪೀರ್ದು ಸವಿವುದುಂ ಸ್ಫೂರ್ತಿಯನಾಂ
ತಬ್ಬರಿಸುತುಮೊರೆವರ್ ನಲ್
ಗಬ್ಬಂ ರಸಮೆಸೆಯೆ ಪರ್ವಪರ್ವಗಳಿನಿವರ್
ಎಳ್ಳಿನಿಂ ತ್ವಚೆಮೆತ್ತ ಬೆಲ್ಲದಿಂ ಮೆಯೆ್ ಬೆಚ್ಚ-
ವೆಳ್ಳು ಸಿಹಿ ಸವಿವಂತ ಕಾರಣವ ಕಾಣ್
ಒಳ್ಳೊಳ್ಳೆ ಮಾತಾಡಿರೆಂಬಂತ ಹಿತನುಡಿಗ
ಳೆಲ್ಲವು ಅಡಗಿಹುದು ಸಂಕ್ರಾಂತಿಯೊಳ್
ಆಹಾ! ಸರಳಸುಂದರವಾಗಿ ಚೆನ್ನಾಗಿದೆ 🙂 ಎಲ್ಲವೂ..
ಇಳೆಯೊಡಲ ಸಿರಿಯುಕ್ಕೆ ನೇಸರನ ಕಳೆಯುಕ್ಕೆ
ಕಳೆದಿರುಳ ದೇವರ್ಕಳಿಂಗೆ ಜಗರಿಂ
ತಿಳಿಯಾಗಸದೆ ಪಟಮೆ, ರಂಗವಲ್ಲಿಯ ನೆಲಮೆ,
ಪೊಳೆವ ಕಂಗಳ ನಗುವುಮುಕ್ಕೆ ಪೊಂಗಲ್
ಲೋಗರಿಂ – ಜಗರಿಂ
ಮುಂದಿನ ಚಿತ್ರಕ್ಕೆ ಪದ್ಯ ರಂಗವಲ್ಲಿಯದ್ದೋ, ಹಾಗಾದರೆ? 🙂 ಚೆನ್ನಾದ ಕಲ್ಪನೆ.
ಧನ್ಯವಾದ, ಮುಂದಿನವಾರಕ್ಕೆ ರಂಗವಲ್ಲಿಯನ್ನೇ ಹಾಕೋಣ 🙂
ಜೀವೆಂ, ರಂಗವಲ್ಲಿಯ ಚಿತ್ರಕ್ಕೆ ಪದ್ಯ ಈ ಬಾರಿ 🙂
ಥ್ಯಾಂಕ್ಸ್! ಸೋಮ. ನಮ್ಮ ಪದ್ಯಗಳು ಆ ಚಿತ್ರದ ಅರ್ಧದಷ್ಟು ಚೆನ್ನಾಗಿದ್ದರೂ ಸಾಕು 🙂
ಚಾತುರ್ವರ್ಣ್ಯ
ನೋಡೈ ಮಿತ್ರನೆ ಪ್ರಾತಿನಿಧ್ಯಮನದೆಂತೆಮ್ಮಗ್ರಜರ್(ancestors) ನೋಂಪಿಯಿಂ
ನೀಡಿರ್ಪರ್ ಸಕಲರ್ಗೆ ಪರ್ವಗಳೊಳೈ – ವಿಪ್ರರ್ಗುಪಾಕರ್ಮಮಂ|
ಕೇಡಂ ವಾರಿಪ ಯೋಧರಿಂಗೆ ನವರಾತ್ರಂ, ವೈಶ್ಯದೀಪಾವಳೀ
ಈಡಪ್ಪರ್ ಬಿಸಿಲಿಂಗೆ ಮೇಣ್ ಮಳೆಗೆ ರೈತರ್ಗಾಯ್ತು ಸಂಕ್ರಾಂತಿಯೈ||
ಹಿಂದೆಂದೋ ದೀಪಾವಳಿಗೆ ಇಂಥದೇ ಪದ್ಯವನ್ನು ರಚಿಸಿದ್ದೆ. ಈಗ ಸಂಕ್ರಾಂತಿಗೆ. ಮುಂದೆ ಉಪಾಕರ್ಮ-ನವರಾತ್ರಗಳಿಗೆ ಇಂಥದೇ ರಚಿಸುವೆ!
ಇಂಥದ್ದೇಯೋ ಇದೇಯೋ ಬರೆದುದು ಕವನಂ? ಹಾದಿರಂಪರ್ ಪ್ರಚಂಡರ್
http://padyapaana.com/?p=1509 ಇಲ್ಲಿನ ೭ನೆಯ ಪದ್ಯವನ್ನು ನೋಡಿರಿ. There too just a passing reference.
ಮಣ್ಣಮಗನ ಮೊಗದಲ್ಲಿ ಮೂಡಿದನು ಮಂದಹಾಸರವಿಯು
ಕಣ್ಣನರಳಿಸುವ ಕಳೆಯು ಕೂಡುತಲೆ ಸಗ್ಗವಾಯ್ತು ಬುವಿಯು
ಬಣ್ಣದುಡುಗೆಯನು ತೊಟ್ಟು, ಎಳ್ಳುಬೆಲ್ಲಗಳನೊಟ್ಟಿಗಿಟ್ಟು
ಚಿಣ್ಣರಾಡುತಿಹ ಸೊಬಗ ನೋಡಿ ಮೈಮರೆತೆ ದಿಟ್ಟಿ ನೆಟ್ಟು