Mar 192018
 

ಕೆಳಕಂಡ ವಸ್ತುಗಳನ್ನು ವರ್ಣಿಸಿ ಪದ್ಯರಚಿಸಿರಿ:

೧. ಧರ್ಮದ ದಾರಿ

೨. ದಿನದರ್ಶಿಕೆ (Calendar)

೩. ರಾವಣನ ಶ್ರಾದ್ಧಕ್ಕೆ ಬಂದ ಬ್ರಾಹ್ಮಣರು

೪. ಕೋಗಿಲೆ

  23 Responses to “ಪದ್ಯಸಪ್ತಾಹ ೨೯೯: ವರ್ಣನೆ”

 1. ರಾವಣನ ಶ್ರಾದ್ಧಕ್ಕೆ ಬಂದ ಬ್ರಾಹ್ಮಣರ ಸಂಭಾಷಣೆ
  ವಿಪ್ರ೧: ಏದೊರೆ ಬಣ್ಣಿಪೆಮ್!? ವಡೆಯ ರೂಪಮನಕ್ಷಿಗಮಂತೆ ಕುಕ್ಷಿಗಂ
  ಹ್ಲಾದಮನೀವುದೈ (ವಿ ೨:)ಬುಧರೆ! ಪಾಯಸಮಂ ಮರೆತಿರ್ಪಿರೆಂತುಟೈ?
  (ವಿ ೩:)ಬೂದಿಯ ಬಣ್ಣಮಂ ತಳೆದ ಕುಂಬಳದೀ ಪುಳುಶೇರಿದದ್ಭುತಂ!
  ಮೂದಲಿಕುಂ ಗಡೀ ತಿಥಿಯ ಭೋಜನಮಾ ಸೊದೆಯಮ್ ವಿಭಾವಿಸಲ್
  (ವಿ ೪:)ಸೋದರಮಾದೊಡಂ ಸವಿಯ ಮಧ್ಯದೊಳೆಂತುಟು
  ಕಯ್ಮೆ ವಂದುದಾ (ಹಿರಿಯ ವಿ:)
  ಹ್ಲಾದದೊಳಿರ್ಪ ದಂಪತಿಯ ಜೀವನದೊಳ್ ಪುಳಿವಿಂಡಿದಂ ಲಸ
  ತ್ಸ್ವಾದದೆ ಕಯ್ಪು ತೋರ್ದುದು ಮಹೀಸುರರಿಂತೆನುತುಂಡು ಪೋಗೆ ಮಂ
  ಡೋದರಿಯಶ್ರುವಂ ಸುರಿಸುತಿರ್ಪುದನಾವನುಮೀಕ್ಷಿಸಿಲ್ಲ ಹಾ!!

 2. ಧರ್ಮದ ದಾರಿ!
  ಏಳೆ|| ಶರ್ಮ, ನೀನರಿಯೆಯೇಂ ಧರ್ಮಮೇ ದಾರಿಯು
  ಮರ್ಮಮಿದೇಂ ದಾರಿಯ ದಾರಿ?

 3. ಕೋಗಿಲೆ
  ಮಾಕಂದರಸೋನ್ಮತ್ತಂ
  ಶ್ರೀಕರ ಸುರಭಿದಳತೂರ್ಯನಾದಕರಂ ಮೇಣ್/
  ಕಾಕವಿಟಂಕವಿನಿರ್ಯ
  ತ್ಕೋಕಿಲಮೇ೦ ಶಂಬರಾರಿಶಂಖಮೆ ಬಗೆಯಲ್//

 4. ವೇದೋದ್ಘೋಷಕಮಂತೆಯೆ
  ಯಾದವವಂಶಿಗಮಜಸ್ರಮುಂ ಶ್ರುತಿಯಾಯ್ತೀ
  ನಾದಂ ಕೋಕಿಲಗಾನಮ
  ದೇದೊರೆತೀ ಪಿಕಸಮೂಹಗಾನಾಭ್ಯಾಸಂ//
  ವೇದದ ಗಾನಕ್ಕೆ , ಕೃಷ್ಣನ ಕೊಳಲಿಗೆ ಕೋಗಿಲೆಯ ಗಾನವೇ ಶ್ರುತಿಯಾಯ್ತು. ಅಂದರೆ ಈ ಕೋಗಿಲೆಗಳ ಗಾನಾಭ್ಯಾಸ ಯಾವತೆರನಾದ್ದಾಗಿರಬಹುದು…?

 5. ಧರ್ಮಮಾರ್ಗ
  ಕ್ಷುರಧಾರೆಯೆ ತಾನೆಂದರ್ ಕವಿಗಳ್ ಧರ್ಮಮಾರ್ಗಮಂ
  ಕೊರೆಗುಂ ನಿಚ್ಚಮುಂ ನೋಂತಿರ್ಪನನೀ ಕಲಿಗಾಲದೊಳ್
  ಕವಿ=ವೇದಾಂತದ ಕವಿಗಳು
  Inspired by ಕ್ಷುರಸ್ಯಧಾರಾನಿಶಿತಾ…..

 6. “ದಿನದರ್ಶಿಕೆ ”

  ಚಣಚಣದನುರಣನಕದೊ ಸ-
  ರಣಿ ಗಡಿಯಾರಗಳ ರಿಂಗಣಂ ಧಾರುಣಿಯೊಳ್ |
  ಎಣಿಸಲೆಣಿಸೆ ದಿನವಂ ಮೇಣ್
  ಅಣಿಗೊಳುದೇಳೇಳು ಚೌಕಗಳ ರಂಗಂ ತಾಂ ||

  • ಚೆನ್ನಾಗಿದೆ ಗಡಿಯಾರವನ್ನ ದಿನದರ್ಶಿಕೆಯೊಡನೆ ಹೋಲಿಸಿದ ಪದ್ಯ… ಆದರೆ ಏಳೇಳು ಚೌಕಗಳು ಹೇಗಾಗುತ್ತದೆ 🙂

   • ಧನ್ಯವಾದಗಳು ಸೋಮ , ವಾರ ವಾರಕ್ಕೆ ಏಳೇಳು ಮನೆಗಳು !?

 7. ರಾವಣನ ಶ್ರಾದ್ಧಕ್ಕೆ ಬಂದ ಬ್ರಾಹ್ಮಣರು:

  ಮೂರೂ ತಲೆಗಳಿಗೆ ಇಕ್ಕಿದ ಪಿಂಡಗಳ
  ಈರೈದು ತಲೆಯವ ಮುಕ್ಕಿದ ತಾನಂತೆ!
  ಹಾರುವರು ಪೇಳ್ವುದ ಲೆಕ್ಕಿಸದಾ ಭಂಡ
  ದೂರುವದು ಶ್ರಾದ್ಧಲೋಪವೆಂದೇತಕೆ?

  ೧೮ ಮಾತ್ರೆಯ ಪಾದಗಳಿಗೆ ಅಳವಡಿಸಿದ್ದೇನೆ. ಯಾವ ಛಂದಸ್ಸಿಗೆ ಕೂಡುತ್ತದೆಯೋ ಗೊತ್ತಿಲ್ಲ.
  ಪದ್ಯಪಾನಿಗಳು ದಯಮಾಡಿ ಪರಾಮರ್ಶಿಸಿರಿ.

  -ಪ್ರಭು

  • ಪದ್ಯ ಚೆನ್ನಾಗಿದೆ. ಹೀಗೆ ಮಾಡಲೇನೂ ಅಡ್ಡಿಯಿಲ್ಲ. ರಗಳೆ ಎನ್ನಿಸಿಕೊಳ್ಳುತ್ತದೆ. ಆದರೆ ನಿಮ್ಮ ಪದ್ಯದಲ್ಲಿ ಮಾತ್ರಾಗತಿ ಇಲ್ಲ. ೧೮ ಮಾತ್ರೆಗಳ ಸಾಲಾದ್ದರಿಂದ ಪ್ರತಿ ಸಾಲಿನಲ್ಲಿ ೩ ಮಾತ್ರೆಗಳ ೬ ಗಣಗಳನ್ನಿಟ್ಟು ಬರೆಯಲು ಪ್ರಯತ್ನಿಸಿ(೩-೩-೩-೩-೩-೩).
   ಹಾಗೆಯೇ “ತಲೆಗಳಿಗೆ ಇಕ್ಕಿದ” ಎಂಬಲ್ಲಿ ವಿಸಂಧಿದೋಷ ತಲೆದೋರಿದೆ. ಅದು “ತಲೆಗಳಿಗಿಕ್ಕಿದ” ಎಂದಾಗಬೇಕು. “ಪಿಂಡಗಳ ಈರೈದು” ಎಂಬುದನ್ನು “ಪಿಂಡಗಳನೀರೈದು” ಎಂದಾಗಿಸಿದರೆ ಉತ್ತಮ.

 8. ದಿನದರ್ಶಿಕೆ:
  ದಿನದರ್ಶಿಕೆ ತಾಂ ಕಾಲದ
  ಮನಮಂ ತೋರ್ಪಂತೆ ಬೀಗೆ ಮುಂಬರ್ಪುಗಳೊಳ್
  ಜನರಂ ತೀರ್ಮಾನಕೆಳೆಯೆ
  ಘನಮಾಯೆಯ ಹಾಳೆಗಳೆಯೆ ಗೆಲ್ವುದು ವಿಧಿಯಯ್

  ರಾವಣನ ಶ್ರಾದ್ಧಕ್ಕೆ ಬಂದ ಬ್ರಾಹ್ಮಣರ ಮಾತು:
  ಚಿತ್ತಂ ಕಂಪಿಪ ಭಯಕಂ
  ತುತ್ತಾದರ್ ಜನರುಮಂತೆ ದೇವರ್ಕಳೆ ಹಾ
  ಮತ್ತೀ ದುರುಳಾತ್ಮದ ಕೃತಿ
  ಪತ್ತೆನೆ ಘೋರಮಲ ಗೆಯ್ವುದಯ್ ಸದ್ಗತಿಗಂ

  ರಾವಣನಿಗೆ ಸದ್ಗತಿ ಕೊಡಿಸುವ ಅವಶ್ಯಕತೆಯನ್ನ ಬ್ರಾಹ್ಮಣರು ಮಾತಾಡಿಕೊಂಡರು… ಇಲ್ಲದಿದ್ದರೆ ಅವನ ದುರುಳಾತ್ಮವು ಹತ್ತು ಪಟ್ಟು ಘೋರವಾಗಬಹುದೆಂದು

  ಧರ್ಮದ ಪಥ:
  ಧರ್ಮವ್ಯಾಲನೆ ಪಾರ್ವಂ
  ಧರ್ಮಜನುಂ ಭೀಷ್ಮರಂತೆ ಪಾರ್ವರರಿಯನಯ್
  ಮರ್ಮಮಿದೇಂ ದೇವನುಲಿದ
  ಕರ್ಮದ ಪಥದಿಂದೆ ಗೆಲ್ದರೇನಿವರೆಲ್ಲರ್?

 9. ಧನ್ಯವಾದಗಳು ಮಂಜವರೆ!
  ನಿಮ್ಮ ಸೂಚನೆಯಂತೆ ಬರೆಯಲು ಪ್ರಯತ್ನಿಸುವೆ.
  -ಪ್ರಭು

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)