Oct 152018
 

೧. ಉತ್ಪಲಮಾಲೆಯ ಸಮಸ್ಯೆ

ಜಾರಿಣಿಯಾದಳಲ್ತೆ ರಘುರಾಮನಪತ್ನಿ ದಶಾಸ್ಯರಕ್ತಿಯೊಳ್

೨. ಕಂದದ ಸಮಸ್ಯೆ

ಹರಶಿರದೊಳ್ ಪೂರ್ಣಚಂದ್ರನೆಸೆದಂ ನೋಡಾ

  26 Responses to “ಪದ್ಯಸಪ್ತಾಹ ೩೨೯: ಸಮಸ್ಯಾಪೂರಣ”

  1. ಅರೆ ! ಶುದ್ಧ ಚತುರ್ದಶಿಯೊಳ್
    ಮರೆದುಂ ಮಾಸ ಶಿವರಾತ್ರಮೆಂದಾಗಮಿಸಲ್
    ಧರೆಗಂ, ಪ್ರದೋಷಮಲ್ತುಂ
    ಹರಶಿರದೊಳ್ ಪೂರ್ಣಚಂದ್ರನೆಸೆದಂ ನೋಡಾ !!

    ಭೂಮಿಯಲ್ಲಿ ಶುದ್ಧ ಚತುರ್ದಶಿಯ ನಂತರ “ಪೂರ್ಣಿಮೆ” ಅಲ್ಲವೇ ?!

    • ಅರ್ಥವನ್ನು ಸ್ವಲ್ಪ ವಿವರಿಸುವಿರಾ..?

      • ಬಹುಳ ಚತುರ್ದಶಿಯಂದು ಮಾಸ ಶಿವರಾತ್ರಿ, ಆದರೆ ಶಿವ ಮರೆತು ಶುದ್ಧ ಚತುರ್ದಶಿಯ ರಾತ್ರಿ ಭೂಮಿಗೆ ಬಂದಿದ್ದಾನೆ. ಭೂಮಿಯಲ್ಲಿ ಬಳಿಕ “ಹುಣ್ಣಿಮೆ”ಯಾದ್ದರಿಂದ, ಅವನ ಶಿರದಲ್ಲಿ ಪೂರ್ಣಚಂದ್ರ ಕಾಣುತ್ತಿದ್ದಾನೆ . ಇದು “ಪ್ರದೋಷ ” ಅಲ್ಲವೇಅಲ್ಲ ಅಲ್ಲವೇ ?!

  2. ಭರದಿಂದಾಕಾರಂಗಳ
    ನುರೆ ಬದಲಿಸುತುಂ ಸಿತಾಭ್ರಮೇ ಯಾಮಿನಿಯೊಳ್
    ಪುರಹರನಾಕೃತಿದಾಳ್ದೊಡೆ
    ಹರಶಿರದೊಳ್ ಪೂರ್ಣಚಂದ್ರನೆಸೆದಂ ನೋಡಾ//
    ಮೋಡವೊಂದು ರಾತ್ರಿಯಲ್ಲಿ ಶಿವನಾಕಾರವನ್ನು ತಾಳಿದಾಗ….

  3. ಚಿರಮೇಂ ಜವ್ವನ ಪೇಳೈ
    ನೆರೆತಿರೆ ಮುಡಿಗೊಂಡ ವ್ಯೋಮಕೇಶನ ಕೇಶಂ
    ಬೆರೆತಿರಲರೆಪೆರೆವೆರಸಾ
    ಹರಶಿರದೊಳ್ ಪೂರ್ಣಚಂದ್ರನೆಸೆದಂ ನೋಡಾ/
    ಶಿವನ ಮುಡಿಯ ಕೂದಲು ಸಂಪೂರ್ಣವಾಗಿ ನೆರೆತಾಗ ಅರ್ಧಚಂದ್ರನೊಡನೆ ಬೆರೆತಾಗ…

  4. ಸ್ಮರಿಸುತೆ ಶಿವನಂ ಯತಿಗಳ್
    ಸ್ಮರಹರನಂ ವ್ಯೋಮಕೇಶರೂಪದೆ ಕಾಣಲ್
    ಪರೆವಳ ಸೂಡಿದ ಸುಮಮೆನೆ
    ಹರಶಿರದೊಳ್ ಪೂರ್ಣಚಂದ್ರನೆಸೆದಂ ನೋಡಾ//
    ಯತಿಗಳು ಶಿವನನ್ನು ವ್ಯೋಮಕೇಶರೂಪ(ಆಕಾಶವೇ ಕೇಶವಾಗಿರುವ)ದಲ್ಲಿ ಕಂಡಾಗ ಶಿವನು ಮುಡಿದುಕೊಂಡ ಹೂವಿನಂತೆ ಅಲ್ಲಿ ಪೂರ್ಣಚಂದ್ರ ತೋರಿದನು

  5. ಸಾರುತೆ ಬಂದು ಪೀಡಿಸಿದ ಶೂರ್ಪಣಖಾಖ್ಯೆ ವಿಚಾರಿಸಲ್ಕೆ ತಾಂ
    ಜಾರಿಣಿಯಾದಳಲ್ತೆ? ರಘುರಾಮನಪತ್ನಿ ದಶಾಸ್ಯರಕ್ತಿಯೊಳ್
    ತೋರದೊಡಾಸ್ಥೆಯಂ ನೆಗಳ್ದ ಪಂಚಮಹಾಸತಿಯರ್ಕಳೋಳಿಯೊಳ್
    ಸೇರಿದಳಲ್ತೆ ಸತ್ಕೃತಿಗಮಾವಗಮಪ್ಪುದು ಗೆಲ್ಮೆ ಲೋಕದೊಳ್//

  6. ಬರಿದಾಗಿರ್ದಿರೆ ಕಬರಿಯು,
    ಹರಶಿರದೊಳ್ ಪೂರ್ಣಚಂದ್ರನೆಸೆದಂ ನೋಡಾ|
    ಹರಿಯುತೆ ಖಂಡಮನೊಂದಂ
    ಮಿರುಗಿಹ ತನ್ನಯೊಡಲಿಂದೆ ಪೌರ್ಣಮಿದಿನದೊಳ್||
    (ಶಿವನ ಮುಡಿಯು/ಕಬರಿಯು ಬರಿದಾಗಿರುವುದನ್ನು ನೋಡಿ ಪೌರ್ಣಮಿಚಂದನು ತನ್ನಯ ದೇಹದ ಖಂಡವೊಂದನ್ನು ಹರಿದು ಶಿವನ ಮುಡಿಗೆ ಎಸೆದನು)

  7. ಪರದೆಯ ಮೇಲಿರ್ಪ ತೆರದೆ
    ಹರಶಿರದೊಳ್ ಪೂರ್ಣಚಂದ್ರನೆಸೆದಂ ನೋಡಾ I
    ವರಶಿಲ್ಪಿಗ೦ಗೆ ತದಿಗೆಯ
    ಕಿರುಮೆಯ್ಯ ಶಶಾ೦ಕನೊಳ್ ದೃಷ್ಟಿಯ ನೆಟ್ಟಾಗಳ್ II

    ಶಿಲ್ಪಿಯು ತಾನು ಶಿವನ ವಿಗ್ರಹವನ್ನು ಕೆತ್ತಿ, ಪರೀಕ್ಷಿಸುತ್ತಿರುವಾಗ ತಲೆಯ ಮೇಲಿನ ಚಂದ್ರನ ಆಕೃತಿಯಲ್ಲಿ ದೃಷ್ಟಿ ನೆಡಲು ಪರದೆಯ ಮೇಲೆ ಕಂಡಂತೆ ಆಕಾಶದಲ್ಲಿ ಪೂರ್ಣ ಚಂದ್ರನನ್ನು ಕಂಡ .

    • Fine imagination. But you could have made it even more profound by stating that while sculpting the Shiva-idol, the sculptor beheld the ಪೌರ್ಣಮಿಚಂದ್ರ in the background of Shiva’s locks to verify the suitability of an idea that took shape in his mind, but then decided that a crescent would look better.

      • ಧನ್ಯವಾದಗಳು .
        ನಾನು ಬರೆದುದರ ಭಾವಾರ್ಥ ಈ ರೀತಿ — ಶಿಲ್ಪಿ ವಿಗ್ರಹವನ್ನು ಕೆತ್ತುವಲ್ಲಿ ತನ್ಮಯನಾಗಿದ್ದನೆಂಬುದು ಒಂದಾದರೆ , ತನ್ನ ಹಲವು ದಿನಗಳ ಶ್ರಮದ ಸಾರ್ಥಕತೆಯನ್ನು ಬಾಲಚಂದ್ರನ ಮೂಲಕ (ಅ೦ಶದಲ್ಲಿ ಪೂರ್ಣವನ್ನು —–ಬಹುಶ ; ನೀವು ಹೇಳಿದ್ದು ಅದೇ ಇರಬಹುದು ಅಂದುಕೊಳ್ಳುತ್ತೇನೆ ) ಕಂಡುಕೊಂದನೆಂಬುದು ಇನ್ನೊಂದರ್ಥ .

  8. ರಾಮನಕುರಿತು ಲಕ್ಷ್ಮಣನ ಸ್ವಗತ …

    ಧಿಕ್ ! ರಘುವಂಶದೀ ದಶರಥಾಖ್ಯನ ಸೂನು ಧರಾತ್ಮಜಾತಳಮ್
    ಚಾರುಚರಿತ್ರಳಮ್ ಬರಿದೆ ಗಾವಿಲ ಲೋಗರ ಮಾತುಗೇಳುತುಂ, I
    ಮೀರುತೆ ಮೇರೆಯ೦; ಸತಿಗೆ ಕೇಡನು ಗೈದೊಡೆ ರಾಜಧರ್ಮವೇ೦?
    ಜಾರಿಣಿಯಾದಳಲ್ತೆ ರಘುರಾಮನಪತ್ನಿ ದಶಾಖ್ಯರಕ್ತಿಯೊಳ್ II

    ಶ್ರೀ ರಾಮನು ಹತ್ತುಜನರ ಬಾಯಿ ಮುಚ್ಚಿಸಿ, ಅವರ (ಪ್ರಜೆಗಳ)ಮೇಲಿನ ಪ್ರೀತಿಗಾಗಿ ಎಂಬರ್ಥದಲ್ಲಿ “ದಶಾಖ್ಯರಕ್ತಿಯೊಳ್” ಎಂಬ ಪದವನ್ನು ಬಳಸಿದ್ದೇನೆ .

    • ಚೆನ್ನಾಗಿದೆ. ಆದರೆ ಧಿಕ್ ರಘು… ಎಂಬುದು ಪ್ರಾಸಕ್ಕಾಗದು. ಹಾ ರಘು ಅಂತೇನಾದರೂ ಮಾಡಬಹುದು. ಜಾತೆಯಂ. ಚರಿತ್ರೆಯಂ.

      • ಯಾಕಾಗಿ ಪ್ರಾಸಕ್ಕೆ ಒಗ್ಗದು ಎಂದು ಅರ್ಥವಾಗಿಲ್ಲ . ದಯವಿಟ್ಟು ತಿಳಿಸಿ

        • ಅಲ್ಲಿ ಧಿಕ್ ರಘು ಎಂಬುದು ಸಂಧಿಯಾಗಿ ಧಿಗ್ರಘು ಎಂದಾಗುತ್ತದೆ. ಹಾಗಾಗಿ ಪ್ರಾಸಕ್ಕೆ ಒಗ್ಗದು

  9. ಕ್ಷಮಿಸಿ . ಎರಡುಕಡೆ ದಶಾಸ್ಯರಕ್ತಿಯೊಳ್ ಎಂದಾಗಬೇಕಾದಲ್ಲಿ ದಶಾಖ್ಯರಕ್ತಿಯೊಳ್ ಎಂದಾಗಿದೆ

  10. ಸಾರ್ಧದುರ್ಜಾರಿಣಿ: ಸಾರ್ಧಂ>ಸಾಕಂ>ಒಂದಿಗೆ/ಜೊತೆಯಲ್ಲಿ. ದುರ್ಜಾರಿಣಿ>ಅತಿಯಾಗಿ ಕೆಟ್ಟ ಹೆಂಗುಸು. (ಅಶೋಕವನದಲ್ಲಿ ಸೀತೆಯು) ಕೆಟ್ಟ ಹೆಂಗುಸರ (ರಾಕ್ಷಸಿಯರ) ಜೊತೆಯಲ್ಲಿದ್ದಳು.
    ಕ್ರೂರವಿಧಿಪ್ರಮಾದದೊಳಶೋಕವನಾಂತದೊಳಂಗೆ ಸಾರ್ಧದುರ್-
    ಜಾರಿಣಿಯಾದಳಲ್ತೆ ರಘುರಾಮನಪತ್ನಿ. ದಶಾಸ್ಯರಕ್ತಿಯೊಳ್|
    ಘೋರಕುಕರ್ಮಮಂ(ಪಾಪ) ಸತತಮುಂ ಸಲೆ ಮಾಳ್ಪ ಸಹಸ್ರಯೋಷೆಯರ್
    ತೋರುವರಲ್ತೆ ಲಂಕೆಯೊಳಗಲ್ಲಿಯುಮಿಲ್ಲಿಯು ಹೆಜ್ಜೆಹೆಜ್ಜೆಗುಂ||

  11. ಸಿರಿಗಂಗೆ ಹರಿವಿನೊಳ್ ಗಡ
    ವರಗೌರಿ ವದನದ ದುಂಡು ಹರವಿನ ಬಿಂಬಂ
    ಪರಿಪೂರ್ಣ ಪ್ರತಿಫಲಿಸಲ್
    ಹರಶಿರದೊಳ್ ಪೂರ್ಣಚಂದ್ರನೆಸೆದಂ ನೋಡಾ !!

    ಶಿವನ ಶಿರದ ಮೇಲಿನ ಗಂಗೆಯಲ್ಲಿ ಕಂಡ “ಚಂದ್ರಮುಖಿ” ಗೌರಿಯ ಮುಖದ ಪ್ರತಿಬಿಂಬ – ಪುರ್ಣಚಂದ್ರನಂತೆ ಕಂಡ ಕಲ್ಪನೆ !!

  12. ಗೆರೆ ಮೂರ ನೊಸಲಿಗೆ ಬಳಿವ
    ಪರಿಪಾಟ ಶಿವಗೆ ವಿಭೂತಿಯೊಳ್ ಗಡ ಮೇಣಾ –
    ತುರದೊಳಿಡೆ ದುಂಡು ಬೊಟ್ಟಂ
    ಹರಶಿರದೊಳ್ ಪೂರ್ಣಚಂದ್ರನೆಸೆದಂ ನೋಡಾ !!

    ಶಿವನ ಹಣೆಗಿಟ್ಟ ದುಂಡಗಿನ ಬಿಳಿಯ ವಿಭೂತಿ ಬೊಟ್ಟು – ಪೂರ್ಣಚಂದ್ರನಂತೆ ಕಂಡ ಕಲ್ಪನೆಯಲ್ಲಿ.

    (ಹಣೆಗೆ ಮೂರು ಗೆರೆಯ ವಿಭೂತಿ ಇಡುವುದು ಪದ್ಧತಿ , ಅವಸರದಲ್ಲಿ “ಬೊಟ್ಟು” ಇಡುವುದುಂಟು ಅಲ್ಲವೇ ?)

    (ಹಣೆಬರಹ = ತಲೆಬರಹ !!)

  13. ವಿರಹೋತ್ಕಂಠತೆಯಿಂ ತಾ
    ನುರಿಯುತೆ ಕುಳಿತಿರೆ ಹಿಮಾದ್ರಿಯೊಳ್ ಪರಮಶಿವಂ
    ಸುರಿದಿರೆ ತುಹಿನಂ ಶಿರಕಂ
    ಹರಶಿರದೊಳ್ ಪೂರ್ಣಚಂದ್ರನೆಸೆದಂ ನೋಡಾ

  14. ಒಂದು ಸಣ್ಣ ಪ್ರಯತ್ನ. ತಪ್ಪಿದ್ದಲ್ಲಿ ತಿದ್ದಿ, ಕಲಿಯುವ ಆಸಕ್ತಿಯಿದೆ.

    ಗಿರಿಸುತೆಯೊಡೆ ಕುಳಿತಿರೆ ಶಿವ
    ಕರದೊಳ್ ಪಿಡಿದಿಹ ತುಹಿನದ ಗೋಲವ, ಆಗಳ್
    ಗಜಮುಖ ಸರಸದಿ ಬೀಸಿರೆ
    ಹರಶಿರದೊಳ್ ಪೂರ್ಣಚಂದ್ರನೆಸೆದಂ ನೋಡಾ !!

    ಉರುಟಣೆಯ ಕಾಲದಲ್ ಉಮೆ
    ಕರದೊಳ್ ಪಿಡಿದಿಹ ರತುನದ ಗೋಲವನಾಗಳ್
    ಸರಸದಿ ನಗುತಲಿ ಎಸೆದಿರೆ
    ಹರಶಿರದೊಳ್ ಪೂರ್ಣಚಂದ್ರನೆಸೆದಂ ನೋಡಾ !!

    • ಪದ್ಯಪಾನಕ್ಕೆ ಸ್ವಾಗತ. ಎರಡನೆಯ ಪದ್ಯದ ಭಾವವು ಚೆನ್ನಾಗಿದೆ. ಮೊದಲ ಪದ್ಯದ ಮೊದಲ ಸಾಲು ಅಪ್ರಸ್ತುತವಲ್ಲವೆ? ಇರಲಿ. ಛಂದಸ್ಸಿನಲ್ಲಿ ದೋಷವಿದೆ. ಇಲ್ಲಿ ಗಮನಿಸಿಕೊಂಡು ಪುನಾರಚಿಸಿ: http://padyapaana.com/?page_id=438 ಬಿಡದೆ ಪದ್ಯರಚನೆಯಲ್ಲಿ ತೊಡಗಿಕೊಳ್ಳಿ.

  15. Thank you, will try to improvise.

    • No need to try. Just keep on composing, and the shortcomings will taper out. You will graduate in one year of doing this exercise. If you postpone, the year also gets postponed. Make it a point to compose one/two verses every week here. Goodluck.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)