Jan 082019
 

೧. ರಥೋದ್ಧತದ ಸಮಸ್ಯೆ

ಮಂದಹಾಸಮೆ ವಿನಾಶಕಾರಕಂ  

೨. ಕಂದಪದ್ಯದ ಸಮಸ್ಯೆ

ತಿನ್ನಿಪನವಳಣುಗನಿಂಗೆ ಪಳಸುಣಿಸುಗಳಂ

  43 Responses to “ಪದ್ಯಸಪ್ತಾಹ ೩೪೧: ಸಮಸ್ಯಾಪೂರಣ”

  1. ಸಂದ ಕೆನ್ನೆಗುಣಿಯಿಂದೆ ಕನ್ನೆಗಂ
    ಚಂದ ಕಂಡಿರೆ ಮುಖಾರವಿಂದವುಂ
    ಮಂದಿಗಾಣೆ ದುರುಗುಟ್ಟುತುಂ ಗಡಾ
    ಮಂದಹಾಸಮೆ ವಿನಾಶಕಾರಕಂ ।।

    ಬಹುಬಾರಿ ಹೆಣ್ಣಿಗೆ ಅವಳ ರೂಪವೇ ಶತ್ರು ಅಲ್ಲವೇ ?!

    • Nice one madam! ಚಂದ ಕಂಡಿರೆ – will be better if it is ಚಂದಗಂಡಿರೆ – i.e. with sandhi

      • ಧನ್ಯವಾದಗಳು ನೀಲಕಂಠ ,
        ತಿದ್ದಿದ ಪದ್ಯ :

        ಸಂದ ಕೆನ್ನೆಗುಣಿಯಿಂದೆ ಕನ್ನೆಗಂ
        ಚಂದಗಂಡಿರೆ ಮುಖಾರವಿಂದವುಂ
        ಮಂದಿಗಾಣೆ ದುರುಗುಟ್ಟುತುಂ ಗಡಾ
        ಮಂದಹಾಸಮೆ ವಿನಾಶಕಾರಕಂ ।।

    • ಚೆನ್ನಾಗಿದೆ.

  2. ಕುಂದನೊಂದೆ ದಶಕಂಧರಂ, ಕುರು-
    ಕ್ರಂದನಕ್ಕೆ ಸಲೆ ಪೆಣ್ಣ ಹಾಸಮೇ!
    ಮಂದಬುದ್ಧಿಗಳಿಗಟ್ಟಹಾಸಮೇಂ,
    ಮಂದಹಾಸಮೆ ವಿನಾಶಕಾರಕಂ

    ರಾವಣ, ದುರ್ಯೊಧನರನ್ನು ನೋಡಿದರೆ, ಮಂದಬುದ್ಧಿಗಳಿಗೆ ಹೆಣ್ಣಿನ ಅಟ್ಟಹಾಸವೇನು, ಮಂದಹಾಸವೇ ವಿನಾಶಕಾರಕವಾಗುತ್ತದೆ.

  3. ಮಗುವು ಕೆಟ್ಟಮಾತುಗಳನ್ನು ಆಡಿದಾಗ, ಕೆಟ್ಟಕೆಲಸಗಳನ್ನು ಮಾಡಿದಾಗ, ಅದರ ತಂದೆಯು ಕುಪಿತಗೊಂಡು ದಂಡಿಸಿ ಆ ಮಗುವನ್ನು ತಿದ್ದದೆಲೆ ಮೋಹದಿಂದ ಅದನ್ನು ಮೆಚ್ಚುವುದು ವಿನಾಶಕಾರಿ
    ಕುಂದುವಾತು-ಕೆಲಸಂಗಳಲ್ಲಿ ಮೇಣ್
    ಕಂದನೇಗಳು ತೊಡಂಗಿಕೊಂಡಿರಲ್|
    ತಂದೆಯಕ್ಕರೆಯೊಳಿರ್ಕುಮೇಂ! ರುಷಾ-
    ನ್ಮಂದಹಾಸಮೆ ವಿನಾಶಕಾರಕಂ||

    • ರುಷಾನ್ಮಂದಹಾಸ ಹೇಗೆ?

      • ರುಷಾತ್=ಕೋಪಕ್ಕಿಂತ ಎಂಬರ್ಥದಲ್ಲಿ ಬಳಸಿದೆ. ಆದರೆ ಅದು ಸರಿಯಾಗದು. ಇಲ್ಲಿ ತಿದ್ದಿದ್ದೇನೆ:
        ಕುಂದುವಾತು-ಕೆಲಸಂಗಳಲ್ಲಿ ಮೇಣ್
        ಕಂದನೇಗಳು ತೊಡಂಗಿಕೊಂಡಿರಲ್|
        ತಂದೆಯುಗ್ರತೆಯ ಬಿಟ್ಟು ತೋರಿದೀ
        ಮಂದಹಾಸಮೆ ವಿನಾಶಕಾರಕಂ||

  4. ಆಶ್ಚರ್ಯವೇನಿಲ್ಲ. ಪಳ = ಫಲ ಮತ್ತು ಪಲ (ಮಾಂಸ). ವಸ್ತುತಃ ಹಳೆಯದು = ಪೞೆಯದು
    ಸಮಸ್ಯಾಪಾದದಲ್ಲಿ ತಕರಾರನ್ನು ಎತ್ತುವಂತಿಲ್ಲ. ’ತಿನ್ನಿಪನವnaಣುಗನಿಂಗೆ ಪಳಸುಣಿಸುಗಳಂ’ ಎಂದಾಗಬೇಕಲ್ಲವೆ? ಅಥವಾ, ’ಅವಳ ಅಣುಗನಿಂಗೆ (ಅವನು) ತಿನ್ನಿಪನು ಪಳಸುಣಿಸುಗಳಂ’ ಎಂದೆ?
    ಚೆನ್ನಿನ ಸೇಬಂ, ಕದಲಿಯ,
    ಪೊನ್ನಿನೊಳೆಸೆದಿರ್ಪ ಮಾವನ್, ಅಂಜೂರವ ಮೇಣ್|
    (ಸುಟ್ಟ) ಜೊನ್ನಂ, ದ್ರಾಕ್ಷಿಯ, ಪನಸಂ
    ತಿನ್ನಿಪನವಳ(ನ)ಣುಗನಿಂಗೆ ಪಳಸುಣಿಸುಗಳಂ||

  5. ಅಂದದಿಂದಮಿರೆ ವಕ್ತ್ರದೊಳ್ ನಿತಾಂ
    ತಂ ದರಸ್ಮಿತಮದೊಳ್ಪು; ಚಿತ್ತಮಂ
    ಕುಂದಿಪೀ ಚಿತೆವೊಲಿರ್ಪ ಚಿಂತೆಗಂ
    ಮಂದಹಾಸಮೆ ವಿನಾಶಕಾರಕಂ/

  6. ಮುನ್ನಿನ ಸತಿಯೊಳ್ ಪುಟ್ಟಿದ
    ನೆನ್ನಲ್ಕರ್ಭಕನನೊಪ್ಪದಿರೆ ಮಲತಾಯೇ|
    ಇನ್ನೇಂ ಗೈವಂ ರಮಣಂ
    ತಿನ್ನಿಪಿನವಳಣುಗನಿಂಗೆ ಪಳಸುಣಿಸುಗಳಂ

    ಮಲತಾಯಿಯು ಮಲಮಗನನ್ನು ಒಪ್ಪದಿದ್ದಾಗ ಆಕೆಯ ದಾಸನಾದ ತಂದೆ ಮೊದಲಿನ ಸತಿಯ ಮಗನಿಗೆ ಹಳಸುಣಿಸನ್ನು ತಿನ್ನಿಸಿದ.

  7. ವಿನೋದವಾಗಿ :

    ಅನ್ನೆಯಮಿದು ಪತಿಗಂ ಮನ-
    ದನ್ನೆಯು ಹೊರಗಾದ ಮೂರು ದಿನವುಂ ಗಡ ಕಾಣ್ ।
    ಅನ್ನಾನ್ನಗತಿಯ ಮನೆಯೊಳ್
    ತಿನ್ನಿಪಿನವಳಣುಗನಿಂಗೆ ಪಳಸುಣಿಸುಗಳಂ !!

    * ಅನ್ನಾನ್ನಗತಿ = ಅನ್ನಕ್ಕಾಗಿ ಬಾಯಿಬಿಡುವ ಸ್ಥಿತಿ

    ಹೀಗೊಂದು (ಅಪರೂಪದ) ಅನಿವಾರ್ಯ ವಾಸ್ತವ !!

  8. ಜೂದಿನಿಂ ದುರುಪತಿಂ ವಿವಸ್ತ್ರಮಾ
    ಳ್ಪಂದು ನಕ್ಕ ಧೃತರಾಷ್ಟ್ರಸನ್ನಿಭರ್,|
    ಬೆಂದರಾಹವದ ಕಿಚ್ಚಿನೊಳ್ ಗಡಾ
    ಮಂದಹಾಸಮೆ ವಿನಾಶಕಾರಕಂ ||

    ಜೂಜಿನಿಂದ(ಮೋಸದಿಂ ಪಗಡೆಯನ್ನು ಗೆದ್ದು) ದ್ರೌಪದಿಯನ್ನು ವಿವಸ್ತ್ರಗೊಳಿಸುವಾಗ ನಕ್ಕ ಕೌರವರು ಯುದ್ಧದ ಬಿಂಕಿಯಲ್ಲಿ ಬೆಂದುಹೋದರು. ಬಹುಶಃ ಆ ನಗುವೇ ಅವರ ವಿನಾಶಕ್ಕೆ ಕಾರಣವಾಯಿತೇನೋ(ಆದ್ದರಿಂದ ನಗು ವಿನಾಶಕಾರಕ).

    • Good! but needs corrections.
      First line doesn’t have praasa. ದುರುಪತಿಂ is not accepted form. We cannot make Draupadi as durupati. Even if you make, its dviteeya-vibhakti will be like durupatiyam. ಧೃತರಾಷ್ಟ್ರಸನ್ನಿಭರ್ – ರಸನ್ನಿಭರ್ does not mean children / sons.

      • ತಿದ್ದಿಕೆಗೆ ಧನ್ಯವಾದಗಳು
        ಸರಿಪಡಿಸಲು ಪ್ರಯತ್ನಿಸಿದ್ದೇನೆ

        ಸಂದಣಿರ್ಪ ಸಭೆಯೊಳ್ಗೆ ಮಾನಿನಿಂ
        ನಿಂದಿಸಿಂ ಮೆರೆದರಟ್ಟಹಾಸದಿಂ(ಕೌರವರ್)|
        ಬೆಂದರಾಹವದ ಕಿಚ್ಚಿನೊಳ್ ಗಡಾ
        ಮಂದಹಾಸಮೆ ವಿನಾಶಕಾರಕಂ ||

  9. ಭಿನ್ನಮಿರಲ್ ಬುದ್ಧಿ ಮನಂ
    ಬಿನ್ನಗೆಯೊಳ್ ಜೀವಕಿತ್ತು ತಣಿಸೆ ನೆನವನುಂ
    ಬಿನ್ನಾಣದ ದಾಂಪತ್ಯದೆ
    ತಿನ್ನಿಪನವಳಣುಗನಿಂಗೆ ಪಳಸುಣಿಸುಗಳಂ ।।

    ಇರವಿನಲ್ಲಿನ ಬುದ್ಧಿ-ಮನದ (ಸೂಕ್ಷ್ಮ ರೂಪದ ) ದಾಂಪತ್ಯ – ಜೀವಿ (ಸ್ಥೂಲ ರೂಪದ) ಅದರ ಸಂತಾನ – ಜೀವಿಯನ್ನು ಕಾಡುವ ಹಳೆಯ ನೆನಪುಗಳು – ಆ ಆಲೋಚನೆಗಳಿಗೆ ಕಾರಣವಾದ “ಮನ”ದ ಕಲ್ಪನೆಯ ಪದ್ಯ.

    • ಒಳ್ಳೆಯ ಕಲ್ಪನೆ ಮೇಡಂ

      • ಧನ್ಯವಾದಗಳು ಮಂಜು .
        ನಿನ್ನ “ಅಂದದಿಂದಮಿರೆ ವಕ್ತ್ರದೊಳ್…… ” ಪದ್ಯ ಬಹಳ ಚೆನ್ನಾಗಿದೆ . ನಿನ್ನದೇ ಪದಗಳಲ್ಲಿ ಹೀಗೊಂದು ವಿನೋದ ಪದ್ಯ :
        (ವಕ್ತ್ರ = ಹಲ್ಲು? ಎಂದೂ ಆಗುದಾದರೆ )

        ಮುಂದುದೋರುತಿರೆ ವಕ್ತ್ರವುಂ ನಿತಾಂ-
        ತಂ ದರಸ್ಮಿತದಿನೆಳ್ಬುದುಂ ಗಡಾ !
        ಅಂದಗುಂದಿಸೆ ಮುಖಾರವಿಂದವಂ
        ಮಂದಹಾಸಮೆ ವಿನಾಶಕಾರಕಂ !!

        ಮುಗುಳುನಗೆಯಿಂದ ಮತ್ತೂ ಮುಂದೆಬರುವ ಉಬ್ಬುಹಲ್ಲಿನ ಬಗೆಗಿನ ಪದ್ಯ !!

        • ಹಹ್ಹ. ಚೆನ್ನಾಗಿದೆ. ವಕ್ತ್ರ ಎಂದರೆ ಹಲ್ಲು ಎಂಬ ಅರ್ಥವಿಲ್ಲವೆನಿಸುತ್ತದೆ. ದಂತ ಎಂದಾಗಿಸಬಹುದು. ಮೆಚ್ಚುಗೆಗಾಗಿ ಧನ್ಯವಾದಗಳು.

          • “ವಕ್ತ್ರ” = ಒಸಡು / ದವಡೆ ಎಂದಾಗುವುದೇ ?

          • ಇಲ್ಲ. ವಕ್ತ್ರ ಅಂದರೆ ಮುಖ. ವಕ್ತ್ರಾಸ್ಯೇ ವದನಂ ತುಣ್ಡಮಾನನಂ ಲಪನಂ ಮುಖಂ- ಅಮರಕೋಶ

  10. ಅನ್ನೆಯ ಗೈದುಂ ಭಾರತ
    ದುನ್ನತಿಯಂ ಲೆಕ್ಕಿಪದೆಲೆ(ಇರಲ್) ಸೋನಿಯ ಗಾಂಧಿಂ |
    ಸನ್ನಣದಿಂ ಮೋದಿಂ ಮೇಣ್
    ತಿನ್ನಿಪನವಳಣುಗನಿಂಗೆ ಪಳಸುಣಿಸುಗಳಂ ||

    ದೇಶದ ಉನ್ನತಿಯನ್ನು ಎಣಿಸದೇ ಕುಟುಂಬ ರಾಜಕಾರಣ ಮಾಡಿದ ಸೋನಿಯಗಾಂಧಿಯ ಮಗನಿಗೆ(Prime minister candidate) ಮೋದಿಯು ಹಳಸುಣಿಸುಗಳನ್ನು(ಮೋದಿಯ ಒಳ್ಳೆಯ ಆಡಳಿತ/ಜನರ ನಿಂದೆ/ರಾಹುಲ್ ಗಾಂಧಿ ಜೋಕ್ಸ್ ಗಳು ಹಳಸುಣಿಸು) ತಿನ್ನಿಸಿದ.

    • January 12, 2019 at 11:11 am
      ಅನ್ನೆಯ ಗೈದುಂ ಭಾರತ
      ದುನ್ನತಿಯಂ ಲೆಕ್ಕಿಪದೆಲೆ(ಇರಲ್) ಸೋನಿಯ ಗಾಂಧಿಂ |
      ಬಿನ್ನಣದಿಂ ಮೋದಿಂ ಮೇಣ್
      ತಿನ್ನಿಪನವಳಣುಗನಿಂಗೆ ಪಳಸುಣಿಸುಗಳಂ ||

      • ಚೆನ್ನಾಗಿದೆ. ಆದರೆ ಪದ್ಯದಲ್ಲೇ ಹಳಸುಣಿಸುಗಳೆಂದರೇನೆಂಬುದು ಬಂದರೆ ಚೆನ್ನ. ಹಾಗಲ್ಲದಿದ್ದರೆ ವ್ಯಾಖ್ಯಾನವಿಲ್ಲದೇ ಅರ್ಥವಾಗುವುದು ಕಷ್ಟ. ಇರಲಿ, ಕೆಲವು ತಿದ್ದುಪಡಿಗಳು- ಗಾಂಧಿಂ ಆಗುವುದಿಲ್ಲ ಗಾಂಧಿ ಎಂದಾಗಬೇಕು. ಅಂತೆಯೇ ಮೋದಿ ಕೂಡ.

        • ಧನ್ಯವಾದಗಳು ಮಂಜರವರೇ,
          ಪದ್ಯದಲ್ಲೇ ಹಳಸುಣಿಸುಗಳನ್ನು ತರಲು ಪ್ರಯತ್ನಿಸುತ್ತೇನೆ.

          ಗಾಂಧಿ/ಮೋದಿ ಮಾಡಿದರೆ ವಿಭಕ್ತಿ ಲೋಪ ಆಗುವುದಿಲ್ಲವೇ?
          ಪ್ರಥಮ ವಿಭಕ್ತಿಯಲ್ಲಿ ಲೆಕ್ಕಿಪದೆಲೆ ಸೋನಿಯ ಗಾಂಧಿಂ/ಮೋದಿಂ ತಿನ್ನಿಪನ್ (ಲೆಕ್ಕಿಸದೆ ಸೋನಿಯ ಗಾಂಧಿಯು/ಮೋದಿಯು ತಿನ್ನಿಸುತ್ತಾನೆ)ಎಂದು ಮಾಡಿದ್ದೇನೆ

          • ಇಲ್ಲ. ಪ್ರಥಮಾವಿಭಕ್ತಿಯಲ್ಲಿ ಬಿಂದು ಬರುವುದು ಅ ಕಾರಾಂತ ಶಬ್ದಗಳಿಗೆ ಮಾತ್ರ. ಉದಾಹರಣೆಗೆ- ಮಂಜಂ, ಸುನೀಲಂ, ಜಗಂ ಇತ್ಯಾದಿ.
            ಉಳಿದಂತೆ ಅಂದರೆ ಇ, ಉ, ಎ ಕಾರಾಂತಗಳು ಹಾಗೆಯೇ ಉಳಿದುಕೊಳ್ಳುತ್ತವೆ. ಉದಾಹರಣೆಗೆ ಮೋದಿ, ಮೋದಿಂ ಅಲ್ಲ. ಮನೆ ಸರಿ ಮನೆಂ ತಪ್ಪು. ಎತ್ತು ಸರಿ ಎತ್ತುಂ ತಪ್ಪು(ಎತ್ತುಂ ಎಂದರೆ ಎತ್ತೂ ಕೂಡ ಎಂಬರ್ಥ ಬರುತ್ತದೆ).

  11. ಇನ್ನುಮೆ ರೈತಮ್ ಕವಿಯುಮ್
    ತಿನ್ನಿಪನವಳಣುಗನಿಂಗೆ ಪಳಸುಣಿಸುಗಳಂ|
    ಮನ್ನಿಸಿ ಸರಸತಿಬುವಿಯರ್
    ಮುನ್ನಮೆ ತಾವ್ ನೀಳ್ಪರಲ್ತೆ ಹೊನ್ನಿನ ಬೆಳೆಯಮ್||

    ರೈತನು ಭೂಮಿಯ ಮಕ್ಕಳಾದ ಗಿಡಗಳಿಗೆ, ಕವಿಯು ಶಾರದೆಯ ಮಗುವಾದ ಮನಸ್ಸಿಗೆ ಹಳೆಯ ಉಣಿಸು (ಗೊಬ್ಬರ, ಹಳೆ ಸೂರ್ಯ…) ಕೊಟ್ಟರೂ ಅವರು ಹೊಸತಾದ ಬೆಳೆಯನ್ನೆ (ಕಲ್ಪನೆ) ಕರುಣಿಸುತ್ತಾರೆ.

  12. ಕೆನ್ನೆತ್ತರ್ ಬಣ್ಣಂಬಡು-
    ದುನ್ನತಿಕೆಯು ಭೂಮಿಪುತ್ರ ಮಂಗಳಗಂ ಮೇಣ್
    ಭಿನ್ನಮದೌ ಸೂರ್ಯನ ಪರಿ
    ತಿನ್ನಿಪನವಳಣುಗನಿಂಗೆ ಪಳಸುಣಿಸುಗಳಂ !!

    ಸೌರಮಂಡಲದಲ್ಲಿ “ಭೂಮಿ”ಯ ನಂತರದಲ್ಲಿರುವ (ಭೂಮಿಪುತ್ರ / ರಕ್ತವರ್ಣ) “ಮಂಗಳ”ನಿಗೆ ಸೂರ್ಯನಿಂದ ದೊರೆವುದು ಉಳಿದ ಬೆಳಕು/ಶಾಖ ಎಂಬ ಕಲ್ಪನೆ !!

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)