Apr 092019
 

೧. ಅನುಷ್ಟುಪ್ ಸಮಸ್ಯೆ:

ನಾಣಿಂದುಡೆಯನುರ್ಚಿದಳ್ 

ನಾಣಿಂದೆ = ನಾಚಿಕೆಯಿಂದೆ, ಉಡೆ=ವಸ್ತ್ರ, ಉರ್ಚು=ತೆಗೆ

೨. ರಥೋದ್ಧತ  ಸಮಸ್ಯೆ:

ಬೇವನೇ ಬಯಸುವಂ ಯುಗಾದಿಯೊಳ್

  15 Responses to “ಪದ್ಯಸಪ್ತಾಹ ೨೫೩: ಸಮಸ್ಯಾಪೂರಣ”

  1. ಕಾವ ಲೋಗರ ಸಮೂಹವೊಂದಕಂ-
    ದಾವನೋ ಜನರೊಳೊರ್ವ ಪಾಚಕಂ I
    ಸೇವೆಯಟ್ಟಿನೊಳು ಕೃಷ್ಣವರ್ಣದಾ
    ಬೇವನೇ ಬಯಸುವಂ ಯುಗಾದಿಯೊಳ್ II
    ಚೌಕಿದಾರರ ತಂಡದೊಳಗೆ ಅಡುಗೆಯವನೆಂಬ ಚೌಕಿದಾರ ಸ್ವಯಂಸೇವೆಯ ತನ್ನ ಅಡುಗೆಗೆ (ಒಗ್ಗರಣೆಗೆ ) ಯುಗಾದಿಯ ದಿನವೂ ಕರಿಬೇವನ್ನೇ ಬಯಸಿದ

  2. ಬರೆ ಸೂರ್ಯಂ ಕರಂ ಹೈಮಾಂಬರೆ ವಿಶ್ವಂಭರಾಖ್ಯೆಯೇ
    ಕರಂಗುತ್ತೆಂತುಟೋ ಬೇಗಂ ನಾಣಿಂದುಡೆಯನುರ್ಚಿದಳ್

    ಸೂರ್ಯನನ್ನು ಕಂಡಾಗ ಹಿಮವಸ್ತ್ರವನ್ನು ತೊಟ್ಟ ಭೂಮಿಯು ಸಮಾಧಾನ ಹೊಂದಿ ಕರಗಿ ನಾಚುತ್ತಾ ಬಟ್ಟೆಯನ್ನು ತೆಗೆದಳು.

  3. ವೈವಾಹಾದಿಯೊಳೇಗಳ್ ತಾಂ ನಾಣಿಂದುಡೆಯನುರ್ಚಿದಳ್|
    ಈಗಳ್ ನಾಣ್ಚುವೊಲಾ ಭರ್ತಂ ಬಿಡುಬೀಸಿಂದೆಯುರ್ಚುವಳ್||

    • ROFL

    • ನಾಣ್ಚುವೊಲ್ “ಆ” ಭರ್ತಂ ಅಂದರೆ ಈಗ ಅನೇಕ ಗಂಡಂದಿರಿದ್ದಾರೆಂದೇ?ಇದು ವಾಚ್ಯವೋ ಧ್ವನಿತವೋ ತಿಳಿಯಲಿಲ್ಲ

      • ’ಆ’ ಎಂದರೆ, ನಾಚಿಕೊಳ್ಳುವ ಸರದಿ ಇವಳದಿದ್ದಾಗ ಇದ್ದನಲ್ಲ, ಅವನೇ. ವ್ಯಾಚ್ಯವೇನಿಲ್ಲ. ಎಲ್ಲ ಧ್ವನಿತವೇ. ನಾಚಿದ ಆ ಭರ್ತನು ಬಾಯಿಬಡಿದುಕೊಂಡಾಗ ಹೊರಟ ಧ್ವನಿಯೇ!

  4. ಅನ್ಯೋನ್ಯದಾಂಪತ್ಯ:
    ಹಾವಭಾವದಿ ಕಳತ್ರಳೀಯಲೇಂ
    ಖೋವದೊಲ್ ಮಧುರಮಿರ್ಪುದೆಲ್ಲಮೈ|
    ಓವ ಕೈಯವಳ ಸ್ವಾದುವಿರ್ದಿರಲ್
    ಬೇವನೇ ಬಯಸುವಂ ಯುಗಾದಿಯೊಳ್||

  5. ವ್ಯಾಧಿಯಿಂ ಪೀಡಿತಳ್ ವೈದ್ಯಂ ವ್ರಣಮನೀಕ್ಷಿಪೆನೆಂದಿರಲ್
    ಬಾಧೆಯಂಬಟ್ಟು ತಾನಾಗಳ್ ನಾಣಿಂದುಡೆಯನುರ್ಚಿದಳ್

    • ಸರಿಸುತ್ತುಡೆಯಂ ಕೊಂಚಂ ತೋರೆ ಸಾಕಿತ್ತು ಗಾಯಮಂ|
      ವ್ಯಾಧಿಯೇನೆಂದು ಸುಸ್ಪಷ್ಟಂ, ವಸ್ತ್ರಸರ್ವವನುರ್ಚಿರಲ್||

  6. ನೋವಿನೊಂದಿಗೊದಗಿರ್ಪ ನಲ್ಮೆಯಂ
    ಸಾವಿನೊಂದಿಗೊದಗಿರ್ಪ ಬಾಳ್ಕೆಯಂ
    ಭಾವಿಸಲ್ಕೆ ಸವಿಬೆಲ್ಲದೊಂದಿಗಾ
    ಬೇವನೇ ಬಯಸುವಂ ಯುಗಾದಿಯೊಳ್

    • ಸಂಖ್ಯೆ ೩ರಲ್ಲಿ ನಾನು ಬಳಸಿದ ’ಆ’ಶಬ್ದಕ್ಕೆ ತಕರಾರೆತ್ತಿ ಈಗ ನೀವೇ ಅದನ್ನು ಬಳಸಿದಿರಲ್ಲ! ’ಆ ಬೇವು’ ಎಂದರೆ ಕಹಿಬೇವೋ? ಕರಿಬೇವೋ?

      • ಆ ವನ್ನು ಅಂ(ಬೆಲ್ಲದೊಂದಿಗಂ) ಮಾಡಿಕೊಂಡ್ರಾಯ್ತು. ಕರಿಬೇವಲ್ಲ..ಬರೀಬೇವು 🙂

  7. ಮಾಣಿಯುರ್ಚಿದನೆ೦ದು೦ ನಿ-
    ಲ್ದಾಣ ಮುಟ್ಟಿದ ವೇಳೆಯೊಳ್ I
    ವಾಣಿ, ತಾನ್ ಮೀಯಿಸಲ್ಕಾಗಳ್
    ನಾಣಿಂದುಡೆಯನುರ್ಚಿದಳ್ II

    ಉರ್ಚು = ಮಲ ವಿಸರ್ಜಿಸು ಎಂಬ ಅರ್ಥದಲ್ಲಿ ಮೊದಲ ಪಾದ
    ತನ್ನೊಂದಿಗೆ ಹಸುಗೂಸಾದ ಹುಡುಗನನ್ನು ಕರೆದೊಯ್ದ ವಾಣಿಯೆ೦ಬ ಮಹಿಳೆ ಅವನ ಮಡೆಯಾದ ಉಡುಪನ್ನು ಪ್ರಯಾಣಿಕರ ಮಧ್ಯೆ ನಾಚುತ್ತಾ ತೆಗೆದಳು.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)