May 132019
 

೧. ವಸಂತತಿಲಕದ ಸಮಸ್ಯೆ

ವೃತ್ತಂ ನಿರೂಪಿತಮಿರಲ್ ಚತುರಶ್ರಮಾಯ್ತಯ್ (…Circle became square)

೨. ಆಟವೆಲದಿಯ ಸಮಸ್ಯೆ

ಗೌರಿ ಗಂಗೆಯಾಗಿ ಮೆರೆದಳಲ್ತೆ

ಆಟವೆಲದಿಯ ನಿಯಮ:

೧ನೆ ಹಾಗು ೩ನೆ ಸಾಲುಗಳು:: ಬ್ರಹ್ಮ  ಬ್ರಹ್ಮ  ಬ್ರಹ್ಮ  ವಿಷ್ಣು  ವಿಷ್ಣು

೨ನೆ ಹಾಗು ೪ನೆ ಸಾಲುಗಳು:: ಬ್ರಹ್ಮ  ಬ್ರಹ್ಮ  ಬ್ರಹ್ಮ  ಬ್ರಹ್ಮ  ಬ್ರಹ್ಮ

  5 Responses to “ಪದ್ಯಸಪ್ತಾಹ ೩೫೮: ಸಮಸ್ಯಾಪೂರಣ”

  1. ಅಭ್ಯಾವೃತ್ತಿ=repetition. ಮರಳಿ ಮರಳಿ ಏಳು ಬಾರಿ ಯತ್ನಿಸಿದಮೇಲೆ ಅವನಿಗೆ ಚೊಕ್ಕವಾದ ಚೌಕವನ್ನು ರಚಿಸಲು ಸಾಧ್ಯವಾಯಿತು.
    “ಎತ್ತೆತ್ತಲುಂ ಸಮಮೆ ನೋಡೆಲೊ ನಾಲ್ಕು ಪಕ್ಕಂ
    ಮತ್ತೊಮ್ಮೆ ಯತ್ನಿಸುತೆ ಛಾತ್ರನೆ ಗೀಟನಿಕ್ಕೈ|”
    ಮೊತ್ತಂ (Attempts)ಪರಿಕ್ರಿಯೆಯದಾಗಿರಲೇಳರಭ್ಯಾ-
    ವೃತ್ತಂ, ನಿರೂಪಿತಮಿರಲ್ ಚತುರಶ್ರಮಾಯ್ತಯ್||

  2. ಇತ್ತಿರ್ಪೊಡಂಗಡವಧಾನದೆ ದತ್ತಪಾದಂ
    ಚಿತ್ತಂ ಪ್ರವೃತ್ತಿಗೊಳೆ ಪೂರಣದೊಳ್ ಪ್ರಮಾಣಂ
    ಒತ್ತೊತ್ತಿ ಬಂದೊದಗುತುತ್ಪಲಮಾಲ ಮಾತ್ರಾ
    ವೃತ್ತಂ ನಿರೂಪಿತಮಿರಲ್ ಚತುರಶ್ರಮಾಯ್ತಯ್ !!

    ಅವಧಾನದಲ್ಲಿ ನಾಲ್ಕು ಸಾಲಿನಲ್ಲಿ – “ಉತ್ಪಲಮಾಲೆ” ವೃತ್ತದಲ್ಲಿ ಸಂದ ಸಮಸ್ಯಾಪೂರಣ !!

    • ಕಲ್ಪನೆ ಪೂರಣಗಳೆಲ್ಲ ಚೆನ್ನಿವೆ. ಆದರೆ ’ಚೌಪದಿ’ ಎಂದಾಗ ಮಾತ್ರ ಅದು ಚೌಪದಿ. ವೃತ್ತಗಳಿಗೆ ನಾಲ್ಕು ಸಾಲುಗಳೆಂಬ ನಿರ್ಬಂಧವಿಲ್ಲ. ಹತ್ತು, ಹದಿಮೂರು, ನಲವತ್ತೆರಡು ಹೀಗೆ ಎಷ್ಟು ಪಾದಗಳ ಪದ್ಯವನ್ನಾದರೂ ರಚಿಸಬಹುದು. ಈ ವಾದದ ಪ್ರಕಾರ ನಾಲ್ಕು ಪಾದಗಳ ಪದ್ಯವೂ ಸಾಧು ಎಂದು ವಾದಿಸುವಿರಾದರೆ ನನ್ನಲ್ಲಿ ಉತ್ತರವಿಲ್ಲ 🙂

      • ಧನ್ಯವಾದಗಳು ಪ್ರಸಾದ್ ಸರ್,
        ಓ ಹೌದೇ?! ( ಈ ವಿಷಯ ನನಗೆ ತಿಳಿದಿರಲಿಲ್ಲ)
        “ಚತುರಶ್ರ” ವೆಂದರೆ “ಚಚ್ಚೌಕ” , ಇದು
        20×4 ವರ್ಣಗಳ / 28×8 ಮಾತ್ರೆಗಳ “ಆಯತ”ವಾಯಿತೆಂದು
        ತಗಾದೆ ತೆಗೆಯಬಹುದೆಂದು ಯೋಚಿಸಿದ್ದೆ !!
        ಹಾಗಾದರೆ , 14 ಪಾದಗಳ “ಉತ್ಪಲಮಾಲೆ”ಎಂದುಕೊಳ್ಳೋಣವೇ?!!

  3. ನಾರಿಯೊಬ್ಬಂಟಿಯೆ ತಾಂ ತೋಡಿರ್ದ ಬಾವಿಯೊಳ್
    ನೀರಿಂಗದಿರೆ ಜನರಿಂತೆಂದರ್ ಗಡಮೀ-
    ಬಾರಿ ಬೇಸಿಗೆ ಬರದೊಳ್ ಬತ್ತದೀಪರಿ
    ಗೌರಿ ಗಂಗೆಯಾಗಿ ಮೆರೆದಳಲ್ತೆ !!

    “ಗೌರಿ ತೋಡಿದ ಬಾವಿಯಲ್ಲಿ ಬತ್ತದ ಗಂಗೆ” ಎಂಬ ದಿನಪತ್ರಿಕೆಯೊಂದರ ಶೀರ್ಷಿಕೆಯಿಂದ ಪ್ರೇರೇಪಿತ ಪದ್ಯ !!
    ಸಿರಸಿಯ ಬಳಿಯ ಗ್ರಾಮವೊಂದರಲ್ಲಿ “ಗೌರಿ” ಯೆಂಬ ಹೆಸರಿನ ಮಹಿಳೆಯೊಬ್ಬಳು ಒಬ್ಬಂಟಿಯಾಗಿ ತೋಡಿದ್ದ 60 ಅಡಿ ಆಳದ ಬಾವಿಯಲ್ಲಿ , ಈ ಬಾರಿಯ ಬೇಸಿಗೆಯ ಬರದಲ್ಲಿ ( ಸುತ್ತಮುತ್ತಲ ಹೊಳೆಗಳು ಬತ್ತಿದ್ದರೂ) ನೀರು ಬತ್ತದಿರುವ ವಿಶೇಷ ಸಂಗತಿಯ ಬಗ್ಗೆ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)