Jul 222019
 

೧. ತಾಂಬೂಲ ವಿನಿಮಯ 

೨. ಚಂದ್ರನ ಬಾಗು 

೩. ತೂಗುವ ದೀಪ

  10 Responses to “ಪದ್ಯಸಪ್ತಾಹ ೩೬೮: ವರ್ಣನೆ”

 1. ಚಂದ್ರನ ಬಾಗು:
  ಝುಳುಝುಳುಮೆನುತುಂ ಸುರನದಿ-
  ಯಿಳಿಯಲ್ ಶಿರದಿಂದೆ ಸೊರಗಿ ಬಾಗಿದ ಚಂದ್ರಂ
  ಬಿಳಿಯೊಂದುಳಿಯಲ್ ಶುಭ್ರದ
  ಕಳೆಯಿಂದಿಂದುವಿನಲಂಕೃತಂ ಶರ್ವಂ ದಲ್

 2. ತೂಗುವ ದೀಪ-
  ದೀಪವು ಸದಾ ಮೇಲ್ಮುಖವಾಗಿರುವುದರಿಂದ ನೆಲದ ಆಸರೆ ಸರಿಯಲ್ಲ-

  ನೆಲನೇಂ ದೀಪದ ಮೂಲಂ
  ತಲೆಯೆತ್ತುತ್ತದಟದಿಟ್ಟಿಯಿಂ ಬಾನ್ದೆಸೆಯಂ
  ಕಲೆಗುಂ, ತೂಗುವ ದೀಪಮೆ
  ಸಲೆ ಪದುಳಮನಾಂಪುದಲ್ತೆ ಮೇಲಾಸರೆಯಿಂ

 3. ತಾಂಬೂಲ ವಿನಿಮಯ:

  ಹಸನಾಗಲ್ ನೇಹಕಿದೋ
  ಪಸಿರಿಂ ತಾಂಬೂಲಮಲ್ತೆ, ರಕ್ತದ ಬಣ್ಣಂ
  ಪೊಸೆದಾಡಲ್ಕೊಪ್ಪುಗುಮಯ್
  ಜಸದಿಂದಿರ್ಬಗೆಯ ಸಂಜ್ಞೆಯುಲಿ ವೀಳ್ಯಕ್ಕಂ

  ನೇಹಕ್ಕೆ(ಹಸಿರಿನಿಂದ) ಮತ್ತು ರಣ ವೀಳ್ಯಕ್ಕೆ(ಎಲೆಯನ್ನು ಹೊಸೆದಾಡಲು ಕೆಂಪಿನ ಬಣ್ಣ) ಎಂಬ ಎರಡೂ ಭಾವ ಒಪ್ಪುತ್ತದೆ ಎನ್ನುವ ಪೂರಣ

 4. ಸಂಕೋಲೆಯೆನುವ ಲತೆಯೊಳ್
  ಬಿಂಕದೆ ಬಿರಿಯದೆಯೆ ನಿಂದ ಮೊಗ್ಗಿನವೊಲ್ ಮೇಣ್
  ಲಂಕಾರಾತಿಯ ಪುಚ್ಛದ
  ಬೆಂಕಿಯವೋಲ್ ಕಂಡೆನೊಂದು ತೂಗಿದ ವೆಳಕಂ

 5. ಸರಿದಿಹ ಮಾಸಮಾನಕದೊ ಹಚ್ಚಿಹನೀಬಗೆ ಬಾಗ ದೀಪವಂ
  ಸರದಿಯೆ ಬಂದು ಬಾಂದಳದೆ ನೇಸರ ನೋಡದ ತೂಗುಚಂದ್ರನಂ
  ಸುರಿಸಿಹ ದುಂಡುತಂಬೆಳಕ ಚಂದದ ಹುಣ್ಣಿಮೆ ರಾತ್ರಿರಂಗದೊಳ್
  ಕರಿಯಿರುಳಂದಮಾವಸೆಗೆ ದೀಪವದೆಲ್ಲದೊ ಕಾಣೆಕಾರಣಂ ?!

  ಸೂರ್ಯ ಪ್ರತಿದಿನ ಹಚ್ಚುವ ವೆರೈಟಿ ಬಾಗು / ತೂಗು “ಚಂದ್ರದೀಪ”ದ ಬಗೆಗಿನ ಪದ್ಯ.

 6. ಬರಿದೆ ತಾಂ ತೂಗದೆಲೆ, ದೀಪವಾಡಿಪುದಂತೆ
  ನೆರಳ, ಭಯವಾಗಿಸುವೊಲೇಕೆಂಬೆಯೋ|
  ಹಿರಿಯಣ್ಣನುದ್ಯುಕ್ತಿ ತಮ್ಮಗಳಿಗುದ್ಬೋಧ
  ಧರೆಯ ನೆರಳಿಂದಿನನು* ಗ್ರಹಣಗೈದಂ||
  *The seemingly long swinging Sun is the senior-most of lamps.

 7. What the flame said (Though it seemingly applies only to oil, it applies to lamp and wick as well):
  (ಸೊಡಲು)ದೀಪಂ ಪೊನ್ನಿನದಿದ್ದೊಡೇನಹುದು ಮೇಣ್ ಬೆಳ್ಪಿದ್ದೊಡೇಂ ಬತ್ತಿಯುಂ
  ಭಾಪಿಂದೆನ್ನೊಲು ತೈಲಮೇಂ ಪೊಳೆವುದೇಂ ನಿವರ್ಣದಿಂದಿರ್ಪುದೈ|
  What the lamp, oil and wick said:
  ಕೂಪಾಂತರ್ಯದೊಳಿರ್ಪ ಕಪ್ಪೆಯೆನಿಪೈ ಬೀಗಿರ್ದೊಡಿಂತುಂ ಗಡಾ
  ಜಾಪಂಗೈವೊಲು ನಿಶ್ಚಲರ್ ನಿಜದೊಳಾಂ, ಚಾಂಚಲ್ಯದಿಂ* ನೀನಿಹೈ||
  *ನಿನ್ನ ಅಸ್ತಿತ್ವಕ್ಕೆ ನಮ್ಮಂಥ ಸುಸ್ಥಿರರು ಹೇತುವಾದರೂ

 8. ತಾಂಬೂಲವಿನಿಮಯ:
  ’ತಾಂಬೂಲ’ಶಬ್ದದೀರರ್ಥಂಗಳೊಳು* ಸಮಾ-
  ರಂಭಂಗಳೊಳಗೀವುದಲ್ಲಮಿದು(ಶೀರ್ಷಿಕೆ) ಕೇಳ್|
  ಕೊಂಬು-ಕೊಡುವುದುಮಿದ್ದೊಡಲ್ಲಿ1 ವಿನಿಮಯವಿಲ್ಲ- (ಒಬ್ಬರು ಕೊಡುತ್ತಾರೆ, ಇನ್ನೊಬ್ಬರು ತೆಗೆದುಕೊಳ್ಳುತ್ತಾರೆ – ಏಕಮುಖ ಅಷ್ಟೆ)
  ವಂಬುಜಾಸ್ಯಳ 2ಸಂಗದೊಳಗುಂಟದು(ವಿನಿಮಯ)||
  *ಸಮಾರಂಭಗಳಲ್ಲಿ ಕೊಡುವ ಫಲತಾಂಬೂಲ1 ಮತ್ತು ವಿಳೆದೆಲೆ-ಅಡಕೆ-ಸುಣ್ಣಗಳ ಭೋಜನಾನಂತರದ ತಾಂಬೂಲ2

 9. ಚಂದ್ರನ ಬಾಗು – ಇಂದುನಂದನ/ವನಮಯೂರ
  ಬಾಗಿದೊಲು ತೋರ್ಗುಮನಿತೇ, ಮಣಿಯುತುಂ ನೀಂ
  ನೀಗದಿರೊ ಆತ್ಮದೊಳ ಗೌರವವನೆಂದುಂ|
  ಬಾಗಿಹನೆ ಎನ್ನುತೆ ಪರೀಕ್ಷಿಸಲವರ್ ತಾಂ
  ಆಗರಿತು ಚಾತುರಿಯನೆಚ್ಚರದಿನಿರ್ಪರ್||

 10. ದೀಪದೊಳ ಜ್ಯೋತಿಯೊಡನೆಣ್ಣೆಬತ್ತಿಗಳು ಮೇಣ್
  ತಾಪ-ವಾತಂ-ಬೆಳಕು-ಪೊಗೆಗಳಿಹವೈ|
  ಭೂಪನಾವಂ ಪೇಳ್ವನಿವುಗಳೊಳಗಾವುದದು*
  ಸಾಪಾಟಿನಿಂದಿಹುದು ತೂಗದೆಲೆ ದಲ್||
  *ಬೆಳಕೂ ತೂಗುತ್ತದೆ, ಕಾವೂ ತೂಗುತ್ತದೆ, ಗಾಳಿಯೂ ತೂಗುತ್ತದೆ…

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)