Jul 152019
೧. ಅರ್ಧಸಮವೃತ್ತವಾದ ವಿಯೋಗಿನೀ ಛಂದಸ್ಸಿನ ಸಮಸ್ಯೆ
ಕಲವಿಂಕಂ ಕರಿಗಿತ್ತುದೌತಣಂ (ಕಲವಿಂಕಂ – ಗುಬ್ಬಚ್ಚಿ)
ಗತಿ:
ನ ನ ನಾ ನ ನ ನಾ ನ ನಾ ನ ನಾ (ಮೊದಲ ಮತ್ತು ಮೂರನೇಯ ಸಾಲುಗಳು)
ನ ನ ನಾ ನಾ ನ ನ ನಾ ನ ನಾ ನ ನಾ(ಎರಡನೇಯ ಮತ್ತು ನಾಲ್ಕನೇಯ ಸಾಲು)
೨. ಶಾಲಿನೀ ಛಂದಸ್ಸಿನ ಸಮಸ್ಯೆ:
ಮತ್ತೇಭಂಗಳ್ ಮತ್ಕುಣಂಗಳ್ ಗಡಕ್ಕುಂ (ಮತ್ಕುಣಂ – ತಿಗಣೆ)
ಕಲವಿಂಕದ, ಹಸ್ತಿಲಾಂಛನಂ
ನಲವಿಂದೊಪ್ಪುಗುಮಲ್ತೆ ಪ್ರಾಂತಕಂ
ಕಲೆಯಲ್ ಜನರ್ಗೆಂದೆ ನಲ್ಮೆಯಿಂ
ಕಲವಿಂಕಂ ಕರಿಗಿತ್ತುದೌತಣಂ
ಎರಡು ಪ್ರದೇಶಗಳ ಲಾಂಛನ ಗುಬ್ಬಿ ಮತ್ತು ಆನೆಯೆಂದಿತ್ತು, ಗುಬ್ಬಿಯ ಪ್ರದೇಶದ ಜನ ಆನೆಯ ಪ್ರದೇಶದ ಜನಕ್ಕೆ ಔತಣವಿತ್ತರು
ಚೆನ್ನಾಗಿದೆ ಸೋಮ. ಆದರೆ,ಕಲವಿಂಕದ, ಹಸ್ತಿಲಾಂಛನವು ಎಂದಾಗುತ್ತದೆ…
ಧನ್ಯವಾದ ಹೊಳ್ಳ
ಸವರಣೆ: ಕಲವಿಂಕ-ದ್ವಿರದ-ಲಾಂಛನಂ
ಚಿತ್ತೈಸಲ್ ಬ್ರಹ್ಮಾಂಡಮಂ ಮಾಪನಕ್ಕಂ
ಮತ್ತೇಭಂಗಳ್ ಮತ್ಕುಣಂಗಳ್ ಗಡಕ್ಕುಂ,
ಮತ್ತೇಂ?! ಭೂಮಿ ಕ್ಷುಲ್ಲಕಂ, ಬಾನ ಚಂದ್ರಂ
ತುತ್ತುಂ ಸೌರವ್ಯೂಹಮುಂ ಮೂಲೆಗುಂಪಯ್
ಅಗಾಧವಾದ ಬ್ರಹ್ಮಾಂಡದ ಮಾಪನವನ್ನು ನೆನೆದಾಗ ಹಿರಿದೆಂದು ಕಾಣುವುದೆಲ್ಲವೂ ಕಿರಿದೇ ಆಗುತ್ತದೆ
Aha! beautiful…
ಧನ್ಯವಾದ ಹೊಳ್ಳ
ಗಲಿತಂ ಪೊಡೆ ಅಯ್ಯೊ! ಎನ್ನುತುಂ
ಕಲವಿಂಕಂ ಕರಿಗಿತ್ತುದೌತಣಂ|
(ಆನೆ ಕೋಪದಿಂದ:) “ಸಲೆ ದಂತಕು ಸಾಲದಿರ್ಪುದೀ
ತಿಲಮಾತ್ರಾನ್ನವ ನೀನೆ ಮಿಂಗೆಲೋ||” (ಮಿಂಗು=ನುಂಗು)
😀
ಆನೆಗೆ ಔತಣವೀವೆನೆಂದು ತಿಳಿಸಿದ್ದ ಗುಬ್ಬಚ್ಚಿ ಒಂದು ಯಳ್ಳುಕಾಳನ್ನು ಅದರ ಬಾಯಿಗೆ (ತುಂಡ) ಹಾಕಿ ಹಾರಿ ತನ್ನ ಕೆಲಸವಾಯಿತೆಂದುಕೊಂಡಿತು. ಆನೆಯಾದರೋ, “ಇದು ಸುಮ್ಮನೆ ಹಾರಾಡುತ್ತಿದೆ. ಯಾವಾಗ ಹೊಟ್ಟೆತುಂಬ ಹಣ್ಣು-ಕಾಳುಗಳನ್ನು ಕೊಡುವುದೋ?” ಎಂದು ಕಾತರದಿಂದಿದೆ.
ತಿಲಮನ್ನಿಭತುಂಡಕಿತ್ತುದೇ
ಕಲವಿಂಕಂ ಕರಿಗಿತ್ತುದೌತಣಂ| (ಔತಣಂ>ಪ್ರಥಮಾವಿಭಕ್ತಿಯಾಗಿ)
“ಚಲಿಸುತ್ತಿಹುದತ್ತಲಿತ್ತಲೇ
ಫಲ-ಧಾನ್ಯಂಗಳನೀವುದೆಂದಿಗೋ||”
🙂 Hadirampa social! Chennagide.
*special
ಅತ್ತಿತ್ತೆಲ್ಲೆಲ್ಲುಂ ಜಲಾಂತರ್ಯದೊಳ್ ಮೇಣ್
ಮತ್ತೇಭಂಗಳ್, ಮತ್ಕುಣಂಗಳ್ ಗಡಕ್ಕುಂ|
ಮತ್ತಂ ಶಾರ್ದೂಲಂ, ಕಕುಂಜಂ, ಕಪೋತಂ
ಪತ್ತಾರ್ ತಿರ್ಯಗ್ಜಂತುಗಳ್, ಮೀಂಗಳೆಂತೋ||
ಚೆನ್ನಾಗಿದೆ
ಬಲಮಿರ್ದೊಡನುಂ ಪೃಥಾಸುತರ್
ಕಲೆತರ್ ದಾಸರವೋಲ್ ವಿರಾಟನೊಳ್
ಛಲವದ್ವಿಧಿಖೇಲನಂ ಸಖಾ!
ಕಲವಿಂಕಂ ಕರಿಗಿತ್ತುದೌತಣಂ
ಬಲವಂತರಾದರೂ ಕೂಡ ಪಾಂಡವರು ದಾಸರಂತೆ ವಿರಾಟನಲ್ಲಿ ಸೇರಿಕೊಂಡರು. ಗೆಳೆಯನೇ! ಇದು ವಿಧಿಯ ಛಲ. ಗುಬ್ಬಿ ಆನೆಗೆ ಔತಣವಿತ್ತಿತು.
ಸಖತ್ ಉಪಮಾನ
ಧನ್ಯವಾದ
Super Manjunath. ಸಮಸ್ಯೆಯ ಮಂಜು ಸರಿಸಿ, ಅದರ ಧ್ವನಿಯ ಸಾಮರ್ಥ್ಯವನ್ನು ತೋರಿದ್ದೀರಿ!!!
ಧನ್ಯವಾದ
+1 🙂
ಕುತ್ತಾಗುತ್ತುಂ, ಕೊಲ್ಲುತುಂ ಜೀವಜಾಲ
ಕ್ಕಿತ್ತೀ ಕುಂದಂ ಪೇಳಲೇಂ ಶಕ್ಯಮಕ್ಕೇಂ
ವಿತ್ತಂ ತೋರಲ್ ಮಾನವಂಗಂ ವಿರಾಜ
ನ್ಮತ್ತೇಭಂಗಳ್ ಮತ್ಕುಣಂಗಳ್ ಗಡಕ್ಕುಂ
ಜೀವರಾಶಿಯನ್ನು ಕೊಂದು ಜೀವಜಾಲಕ್ಕೆ ಕುತ್ತನ್ನಿತ್ತಿರುವ ಮಾನವನಿಗೆ ಸಂಪತ್ತು ದೊರೆಯುತ್ತದೆಂದಾದರೆ ಆನೆಗಳೂ ತಿಗಣೆಗಳಾಗುತ್ತವೆ(ಹೊಸಕಿ ಹಾಕುತ್ತಾನೆ)
ಆಹ! ಭರ್ಜರಿ ಕಲ್ಪನೆ. ಅಲ್ಲದೆ, ಪೇಳಲೇಂ ಶಕ್ಯಮಕ್ಕೇಂ ಎಂಬಲ್ಲಿ ಏಂ ಎಂಬುದರ ಮನೋಹರ ಪುನರಾವರ್ತನಪ್ರಯೋಗವನ್ನು ಅಲ್ಲಿಲ್ಲಿ ನೋಡಿದ್ದೇನೆ. (ತೋರಲ್ ಎಂಬುದಕ್ಕಿಂತ ದಕ್ಕುವುದಾದರೆ ಎಂಬ ಅರ್ಥವಿರುವ ಪದವು ಸೊಗಯಿಸುತ್ತದೆ)
ಧನ್ಯವಾದ. ಅಲ್ಲಿ ತೋರಲ್ ಎಂದಿದ್ದಿದ್ದನ್ನು ದಕ್ಕಲ್ ಅಂತಲೇ ಮಾಡಿದರಾಯ್ತು.
Elegant! ಆಹಾ! ನಿಮ್ಮಿಂದ ಪದ್ಯಪಾನಕ್ಕೆ ವಸಂತಾಗಮನವಾಯ್ತು.ವಿರಾಜನ್ಮತ್ತೇಭ – ಸಮಾಸ ಬಿಡಿಸಿ ಹೇಳುತ್ತೀರಾ?
ತುಂಬಾ ದೊಡ್ಮಾತು 🙂 ವಿರಾಜತ್+ಮತ್ತೇಭ- ವಿರಾಜಿಸುತ್ತಿರುವ ಮತ್ತೇಭ.
ಚೆನ್ನಾಗಿದೆ ಮಂಜ
ವಿನೋದವಾಗಿ :
ಇತ್ತಲ್ ಕಾಣ್ ಪೆಂಡಿರ್ ಕಸೂತಿ ಕ್ರಮಂ, ಮೈ-
ವೆತ್ತಿರ್ಪಿಂತುಂ ಮೆತ್ತೆಮೇಲಾನೆ ಚಿತ್ರಂ,
ಒತ್ತೊತ್ತುತಿರ್ಪಾಗೆ ಗಂಡಂ ಉಸುರ್ದಂ
“ಮತ್ತೇಭಂಗಳ್ ಮತ್ಕುಣಂಗಳ್ ಗಡಕ್ಕುಂ” !!
ಮೆತ್ತೆ ಮೇಲಿನ “ಕಸೂತಿ ಆನೆ” ಒತ್ತಿದ ಸಂದರ್ಭ !!
ಸ್ವಲ್ಪ ಬದಲಾವಣೆಯೊಂದಿಗೆ,
ಇತ್ತಾಗಲ್ ಪೆಂಡಿಂ ಕಸೂತಿ ಕ್ರಮಂ, ಮೈ-
ವೆತ್ತಿರ್ಪಿಂತುಂ ಮೆತ್ತೆಮೇಲಾನೆ ಚಿತ್ರಂ,
ಒತ್ತೊತ್ತುತಿರ್ಪಾಗೆ ಗಂಡಾಂತರಂ ಕಾಣ್
ಮತ್ತೇಭಂಗಳ್ ಮತ್ಕುಣಂಗಳ್ ಗಡಕ್ಕುಂ !!
*ಪೆಂಡಿಂ ~ ಬಿಗಿದ ಗಂಟುಗಂಟಾದ