Nov 042019
 
 1. ಪ್ರಹರ್ಷಿಣಿ ವೃತ್ತ (ನಾಲ್ಕೂ ಸಾಲೂ ಸಮಾನ)

ಸೂರ್ಯಂಗಂ ಕುಳಿರಿನ ಬಾಧೆಯಾದುದಲ್ತೇ

2. ಕಂದಪದ್ಯ

ಮಿಂಚಿಂ ಪುಟ್ಟಿರ್ಪುದಲ್ತೆ ಮುಗಿಲಕಟಕಟಾ

  54 Responses to “ಪದ್ಯಸಪ್ತಾಹ ೩೮೨: ಸಮಸ್ಯಾಪೂರಣ”

 1. ತೂರ್ಯಂಗಳ್ ಮೊಳಗಿತು ಭಕ್ತಸಂಕುಲಕ್ಕಂ
  “ಕಾರ್ಯಂಗಳ್ ಫಲಿಪುದಿನಂಗೆ ನೀಡಲರ್ಘ್ಯಂ”
  ನಾರ್ಯರ್ಕಳ್ ನರರ್ಕಳುಮೊಳ್ಪಿನಿಂದೆ ಗೆಯ್ಯಲ್
  ಸೂರ್ಯಂಗಂ ಕುಳಿರಿನ ಬಾಧೆಯಾದುದಲ್ತೇ

  • ಚೆನ್ನಗಿದೆ ಸೋಮಣ್ಣ

  • ಚೆನ್ನಾಗಿದೆ. ನಾರ್ಯರ್ಕಳ್ ಎಂದು ಬಳಸಬಹುದೇ?

   • ಧನ್ಯವಾದ, ಹೌದು, ನಾರಿಯರ್ ಅಗ್ಬೇಕಿತ್ತು

    “ಭಾರ್ಯರ್ಕಳ್ ಪತಿಗಳೊಡೊಮೊಳ್ಪಿನಿಂದೆ ಗೆಯ್ಯಲ್” ಸವರಣೆ

 2. ವಾರ್ಯಾಭಂ ವೆರಲೆನೆ ತಣ್ಪನೀಯುತೆಂತೋ
  ಭಾರ್ಯೆ ಶ್ರೀ ಸವರೆ ರವೀಂದುನೇತ್ರನಂ ತಾಂ
  ಕಾರ್ಯಾತಂ ಸಲುತಿರಲಳ್ತಿಯಿಂದಮಾಗಳ್
  ಸೂರ್ಯಂಗಂ ಕುಳಿರಿನ ಬಾಧೆಯಾದುದಲ್ತೇ?

  ಲಕ್ಷ್ಮಿಯ ಕೈ ಬೆರಳುಗಳು ನೀರಿನಂತೆ ತಂಪನ್ನು ಕೊಡುವಂಥವುಗಳು. ಆಕೆ ಸೂರ್ಯಚಂದ್ರನೇತ್ರನಾದ ವಿಷ್ಣುವನ್ನು ಅವನ ಕಾರ್ಯಾಂತ್ಯದಲ್ಲಿ(ವಿಶ್ರಾಂತಿಯನ್ನು ಪಡೆವಾಗ) ಸವರಿದಾಗ ಸೂರ್ಯನಿಗೆ ಚಳಿ ಬಾಧಿಸಿತು.

 3. ಸಂಚರದುದ್ಯತ್ಸ್ಮೇರಂ
  ಮಿಂಚಿಂ ಪುಟ್ಟಿರ್ಪುದಲ್ತೆ – ಮುಗಿಲಕಟಕಟಾ
  ಸಂಚಿದು ಮದನನದೆನುತುಂ
  ಕೊಂಚಂ ಯೋಚಿಸದೆಯಳ್ತಿಬಲೆತೊಳ್ತಾಯ್ತೇಂ

  ಮಿಂಚಿನಿಂದ ನಗೆಯು ಹೊರಹೊಮ್ಮಲಾಗಿ ಇದು ಮದನನನ ಸಂಚೇ ಇರಬೇಕೆಂದುಕೊಳ್ಳುತ್ತ ಮೋಡವು ಪ್ರೇಮಪಾಶಕ್ಕೆ‌ ಬಲಿಯಾಯ್ತೇ?(ಮೋಡ ಮತ್ತು ಮಿಂಚಿನ ದಾಂಪತ್ಯಕಲ್ಪನೆ ಪ್ರಸಿದ್ಧವಷ್ಟೇ?)

 4. ಕಿಂಚಿತ್ ಕಾಯ್ಗೊಂಡದೊ ಕಡ-
  ಲಂಚಿಂದಲ್ ಮುಂಚಿಬಂದು ಜಲದಾಗಮದೊಳ್
  ಸಂಚಂದೋರ್ದೇರುತೆ ತಾಂ-
  ಇಂಚಿಂ ಪುಟ್ಟಿರ್ಪುದಲ್ತೆ ಮುಗಿಲಕಟಕಟಾ !!

  * ಇಂಚು = ಏಣಿ / ನಿಚ್ಚಣಿಗೆ

  ಸ್ವಲ್ಪ ಸ್ವಲ್ಪವೇ ಕಾದು ಬಿಸಿಯಾಗಿ, ಕಡಲಂಚಿನಿಂದ ಮುಂದಾಗಿಬಂದ ನೀರ ತಂತ್ರಶಾಸ್ತ್ರ – ಉಪಾಯವಾಗಿ (ಏಣಿಯಿಂದ) ಮೇಲೇರಿ ಮುಗಿಲಾಗಿದುದಲ್ಲವೇ ?!!

  • ಒಳ್ಳೆಯ ಪರಿಹಾರ ಮೇಡಂ. ತಾಂ + ಇಂಚಿಂ – ತಾನಿಂಚಿಂ ಆಗುತ್ತದೆ.

   • ಓ.. ಹೌದಾ ಮಂಜು ? “ಕೀಲಕ”ವೇ ಮುರಿದಮೇಲೆ ಪರಿಹಾರಮೆಂತು ?!!
    ಕವನಂ + ಇಂಬಿಡೆ = ಕವನಮಿಂಬಿಡೆ
    ಮನಂ + ಇಂತು = ಮನಮಿಂತು
    ಎನಗಂ + ಇಂತುಟೆ = ಎನಗಮಿಂತುಟೆ
    ಹೀಗೆ , ತಾಂ + ಇಂಚಿಂ = ತಾ-ಮಿಂಚಿಂ ಆಗುವುದೆಂದುಕೊಂಡೆ
    ಏನುಮಾಡುವುದೀಗ ?
    (ಹತ್ತಿ – ಇಳಿದು ಮಾಡುತ್ತಾ “ಮೋಡ” ಹುಟ್ಟಿದ್ದೆಂದು ಹೇಳಲು ಪ್ರಯತ್ನಿಸಿದ್ದು !!)

    • ಹಳಗನ್ನಡದಲ್ಲಿ ತಾಂ ಎಂಬುದರ ಮುಂದೆ ಸ್ವರಗಳು ಬಂದರೆ ನತ್ವ ಬರುತ್ತದೆ – ತಾನಿರೆ, ತಾನೊರೆದಂ, ತಾನಿಳಿಯಲ್ ಇತ್ಯಾದಿ.

     • ಕ್ರಿಯಾಪದವಾದರೆ “ನತ್ವ”, ನಾಮಪದವಾದರೆ “ಮತ್ವ” ವೇನಾದರೂ ಸಾಧ್ಯವೇ?( ನಾನು ಕೊಟ್ಟಿರುವ ಉದಾಹರಣೆಗಳಂತೆ)
      ಏನಿಲ್ಲ ಪೂರಣವನ್ನು ಉಳಿಸಿಕೊಳ್ಳುವ
      ಸಲುವಾಗಿ…..!!

     • ಸಾಧಾರಣವಾಗಿ ಹಳಗನ್ನಡದಲ್ಲಿ ನಪುಂಸಕಲಿಂಗ ಪ್ರಥಮಾವಿಭಕ್ತಿಯ ಶಬ್ದವು ಬಿಂದುವಿನಿಂದ ಅಂತ್ಯವಾಗುತ್ತಿದ್ದರೆ ಅಂತಹ ಶಬ್ದಕ್ಕೆ ಸ್ವರಗಳು ಪರವಾದರೆ ನತ್ವ ಬರುತ್ತದೆ. ಮರಂ, ನೆಲಂ ಇತ್ಯಾದಿಗಳಿಗೆ ಅಪವಾದವುಂಟು. ಅವು ಮರನಂ, ನೆಲನಂ ಎಂದೆಲ್ಲ ಬಳಸಲ್ಪಡುತ್ತವೆ.

  • ಸಂಚಂದೋರ್ದೇರುತ್ತಲುಂ ಎಂದು ಮಾಡಬಹುದೇ? Idea ಚೆನ್ನಾಗಿದೆ.

  • ಧನ್ಯವಾದಗಳು ಮಂಜು, ರವೀಂದ್ರ ,
   ಈ ಸವರಣೆ ಸೂಕ್ತವಾಗಿಧೆ .
   ತಿದ್ದಿದ ಪದ್ಯ :

   ಕಿಂಚಿತ್ ಕಾಯ್ಗೊಂಡದೊ ಕಡ-
   ಲಂಚಿಂದಲ್ ಮುಂಚಿಬಂದು ಜಲದಾಗಮದೊಳ್
   ಸಂಚಂದೋರ್ದೇರುತ್ತಲುಂ
   ಇಂಚಿಂ ಪುಟ್ಟಿರ್ಪುದಲ್ತೆ ಮುಗಿಲಕಟಕಟಾ !!

 5. ವಾರೀಸೂರ್ಯ –The reflection of the receding Sun in the ocean
  ಕಾರ್ಯಂ ನಿತ್ಯಮುಮುದಯಾಸ್ತಮರ್ಕನಿಂದಂ
  ತಾರ್ಯಂಗೈದಿರುತೆ ದಿಗಂತಮಂ ನದೀನಾಂ- (ನದೀನ=ಸಮುದ್ರ)
  ತರ್ಯಂ ತಾಂ ಬುಗಲಿರುಳೊಳ್ ಗಡಾಗ ವಾರೀ-
  ಸೂರ್ಯಂಗಂ ಕುಳಿರಿನ ಬಾಧೆಯಾದುದಲ್ತೇ|| ಪ್ರಹರ್ಷಿಣೀ

 6. ಕಾರ್ಯಂಗೈಯುತೆ ದಿನದೊಳ್ ಪ್ರಯಾಣಮಾಂತಾಂ-
  ತರ್ಯಂ ಕಾಣ್ವೊಡೆ , ಮರೆವೋದಡಂಗಲಾಗಲ್
  ಪಾರ್ಯಂ ಮೇಣ್ ಮುಗಿಲೊಡಲಾಗಿರಲ್ ಹಿಮಂ ತಾಂ
  ಸೂರ್ಯಂಗಂ ಕುಳಿರಿನ ಬಾಧೆಯಾದುದಲ್ತೇ !!

  ದಿನದಲ್ಲಿ ಸಂಚರಿಸುತ್ತಾ ತಂಪಾದ ಮೋಡದೊಳಗೆ ಅಡಗಿದ ಪರಿಣಾಮ ( ಒಳಗುಟ್ಟು ನೋಡಿ) – ಸೂರ್ಯನಿಗೆ ಚಳಿ ಬಾಧಿಸಿದೆ !!

  • ಕಾಣ್ವೊಡೆ – ಕಾಂಬೊಡೆ
   ಪಾರ್ಯಂ ಅಂದರೆ?

   • ಧನ್ಯವಾದಗಳು ನೀಲಕಂಠ,
    ಪಾರ್ಯ = ಸಫಲ / ಪರಿಣಾಮ ಎಂಬಅರ್ಥವಿದೆ
    ತಿದ್ದಿದ ಪದ್ಯ:
    ಕಾರ್ಯಂಗೈಯುತೆ ದಿನದೊಳ್ ಪ್ರಯಾಣಮಾಂತಾಂ-
    ತರ್ಯಂ ಕಾಂಬೊಡೆ , ಮರೆವೋದಡಂಗಲಾಗಲ್
    ಪಾರ್ಯಂ ಮೇಣ್ ಮುಗಿಲೊಡಲಾಗಿರಲ್ ಹಿಮಂ ತಾಂ
    ಸೂರ್ಯಂಗಂ ಕುಳಿರಿನ ಬಾಧೆಯಾದುದಲ್ತೇ !!

 7. ಧೈರ್ಯಂ ಕುಂದಿರೆ ಕಲಿಭೀಮಛಾಯೆಯಿಂ ಸ್ವ-
  ಸ್ಥೈರ್ಯಂ ಸೋಲ್ತಿರೆ ಯಮಸೂನುವಾಕ್ಯದಿಂ ಹಾ!
  ದುರ್ಯೊಧಂ ನಡುಗಿದನೇಂ! ಕುತಂತ್ರಲೀಲಾ-
  ಸೂರ್ಯಂಗಂ ಕುಳಿರಿನ ಬಾಧೆಯಾದುದಲ್ತೇ||

  ದುರ್ಯೊಧನ ಪಂಪಾ ಸರೋವರದಲ್ಲಿದ್ದಾಗ ಪಾಂಡವಾಗಮನದಿಂದ ನಡುಗಿದ ಎಂದು.

  • ಕುತಂತ್ರಲೀಲಾಸೂರ್ಯಂಗಂ ಬಹಳ ಚೆನ್ನಾಗಿದೆ ಹೊಳ್ಳ

  • ಬಹಳ ಚೆನ್ನಾಗಿದೆ ಹೊಳ್ಳರೇ

  • ಧನ್ಯವಾದಗಳು ಸೋಮ, ಮಂಜುನಾಥ್.

  • ಬಹಳ ಚೆನ್ನಾಗಿದೆ ಹೊಳ್ಳರೆ! ಆದರೆ ದುರ್ಯೋಧನ ಅಡಗಿದ್ದು ವೈಶಮ್ಪಾಯನ ಸರೊವರದಲ್ಲಿ. ಪಾಪ ಅದನ್ನು ನಮ್ಮ ಹಂಪಿಯ ಪಮ್ಪಾಸರೋವರಕ್ಕೆ ತನ್ದಿರಲ್ಲ 🙂
   ಜೊತೆಗೆ, ಕಲಿಭೀಮಛಾಯೆ ಎಂಬಲ್ಲಿ, ಭೀಮಚ್ಛಾಯೆ ಅಂತ ಆಗುತ್ತದೆ, ಛುತ್ವ ಸಂಧಿಯಾಗಿ.

   • ಧನ್ಯವಾದಗಳು ನೀಲಕಂಠರೇ .. ಭೀಮಚ್ಛಾಯೆ -> ತಿಳಿದುಕೊಂಡ ಹಾಗಾಯ್ತು. ಧನ್ಯವಾದಗಳು. ಪಂಪಾ ಸರೋವರ -> ಅಯ್ಯೋ.. ಮತ್ತೆ ವಚನಭಾರತ ಓದಬೇಕಾಗಿದೆ 🙂

 8. ವಂಚನೆಯಂ ಗೈಯ್ವವೊಲೀ
  ಕುಂಚದ ಬಗೆಯಯ್ ತಡಿದ್ವಿಲಾಸದ ಕೃತಿಯೊಳ್
  ಸಂಚಿತಮೂಲಾಭ್ರಮೆನಲ್
  ಮಿಂಚಿಂ ಪುಟ್ಟಿರ್ಪುದಲ್ತೆ ಮುಗಿಲಕಟಕಟಾ

  ಮಿಂಚುಗಳ ಬೇರುಗಳಾದ ಮೋಡವೆನ್ನುವ ಕಲಾಕೃತಿಯ ಪೂರಣ

  • ತಡಿದ್ವಿಲಾಸ ಎಂದರೇನು ಸೋಮ? ಬೇರು ಎನ್ನುವುದು ಎಲ್ಲಿ ಬಂದಿದೆ. ಪರಿಹಾರ ಸ್ಪಷ್ಟವಾಗಲಿಲ್ಲ.

   • ಹೊಳ್ಳ,
    ತಡಿದ್ವಿಲಾಸ – ತಡಿತ್ + ವಿಲಾಸ – ಮಿಂಚಿನ ವಿಲಾಸವನ್ನು ಬಿಡಿಸಿರುವ ಚಿತ್ರ
    ಮುೂಲ – ಬೇರು, ಸಂಚಿತಮೂಲಾಭ್ರಮೆನಲ್ – Cloud from accumulated root appearance in the picture

 9. ಪಂಚವರಪಾಂಡುತನಯರೆ
  ಪಾಂಚಾಲಿವೆರಸು ಕುಲಾರ್ಕರೆನೆ ಬೆಳಗಿರೆ ಮೇಣ್
  ಸಂಚಿನ ಶಕುನಿಗೆ ಮೂಡಿದ
  ಮಿಂಚಿಂ ಪುಟ್ಟಿರ್ಪುದಲ್ತೆ ಮುಗಿಲಕಟಕಟಾ

  ಶಕುನಿಯ ಸಂಚಿನ ಮಿಂಚಿಗೆ ಪಾಂಡವಕುಲಾರ್ಕರಿಗೆ ಮುಗಿಲಿನ ಸಂಕಷ್ಟ ಶುರುವಾಯ್ತು.

 10. “ತೂರ್ಯಂಗೊಂಡಿರಲುರುವೀರ್ಯಶೌರ್ಯಕೆಲ್ಲಂ
  ಪರ್ಯಾಯಂ ಗಡ ತನಗಿಂದು ಧರ್ಮಶೈತ್ಯಂ”
  ಸ್ವರ್ಯೋಷಾಮಣಿ ಜರಿದಿರ್ಪಳರ್ಜುನಂಗಂ
  “ಸೂರ್ಯಂಗಂ ಕುಳಿರಿನ ಬಾಧೆಯಾದುದಲ್ತೇ!”

  ಸ್ವರ್ಯೋಷಾಮಣಿ (ಊರ್ವಶಿ) ಅರ್ಜುನನಿಗೆ ಜರಿದದ್ದು, “ಅಂತಹ ಪ್ರಸಿದ್ಧಿಯ ವೀರ್ಯಶೌರ್ಯದವನೀತ, ಇವನಿಗೆ ಇಂದು ಧರ್ಮದ ಶೈತ್ಯ ಅಡರಿದೆ. ಸೂರ್ಯನಿಗೇ ಚಳಿಯ ಬಾಧೆಯಾಯಿತಲ್ಲವೇ!”.

 11. ಆಹಾ! ತುಂಬಾ ಚೆನ್ನಾಗಿದೆ. He is cold to me ಎನ್ನುವ ಅರ್ಥವೂ ಧ್ವನಿಸಿದೆ. ಇಲ್ಲಿ ತನಗಿಂದು -> ತನಗೆ ಎಂದರೆ ಯಾರಿಗೆ? ಆತನಿಗೆ ಎಂದಾಗ ಬೇಕಲ್ಲವೇ?…

  • Thank you! ತನಗಿಂದು – ತನಗೆ – means “to him” only. But to make it having better clarity, can change it to, ಗಡಮಿವಗಿಂದು

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)