Jan 072020
 

೧. ಕಂದ:

ಇಲ್ಲದಿರುವುದೆಳ್ದು ಕಾಂಬ ಸೋಜಿಗಮಲ್ತೇ 

೨. ಪಂಚಮಾತ್ರಾಚೌಪದಿ:

ಹರನಂತೆ ತೋರ್ದತ್ತು ಸಂಜೆ ಸೊಬಗಿಂ

  35 Responses to “ಪದ್ಯಸಪ್ತಾಹ ೩೯೪: ಸಮಸ್ಯಾಪೂರಣ”

 1. ಪೆರೆವೆತ್ತ ಕಾರ್ಮೋಡಮಾಗೆ ಜಟೆ ಗುಡುಗ ರವ-
  ಮುರೆ ಡಮರು ಪಣೆಗಣ್ಣೆ ಪಡುವಣದಿನಂ
  ತೆರೆಯುರಗಮಂ ನೀಲಶರಧಿಗೇಹಮನಾಂತು
  ಹರನಂತೆ ತೋರ್ದತ್ತು ಸಂಜೆ ಸೊಬಗಿಂ

  • ಕಲ್ಪಿತವು ಸೊಗಸಪ್ಪುದೆಲೆ ಸೋಮ ಕೊಂಚಮೆ ವಿ
   ಕಲ್ಪಮಂ ಮಾಡೆ ಪೆರ್ಚುವುದು ದಿಟದಿಂ
   ಸ್ವಲ್ಪಮೇ ’ಪಡುತಿರ್ಪಿನಂ’ ಎಂದು ತಿದ್ದಲೊಡ
   ನಲ್ಪಮೇ ’ಗುಡುಗುದನಿಯುರೆ’ಯೆಂದೊಡಂ

   ಗೇಹಮೋ ದೇಹಮೋ ನೇಹಿಗನೆ ಪೇಳ್

  • ಒಳ್ಳೆ ಕಲ್ಪನೆ-ಕವನಿಕೆ ಸೋಮ

 2. ತಿರೆಗ ಕಿಚ್ಚಂ ಪೊತ್ತಿಸಿರ್ಪಂತೆ ಆಗಸಮು
  ಮುರಿವಂತೆ ಪಾತಾಳ ಪಜ್ಜಳಿಪವೊಲ್
  ಮರೆಸಾರೆ ರವಿ ಪರಿವ ಪೊಂಬೆಳಕಿನಿಂದೆ ಪುರ
  ಹರನಂತೆ ತೋರ್ದತ್ತು ಸಂಜೆ ಸೊಬಗಿಂ

 3. ಉರಿಗಣ್ಣು ಪೆರೆ ಭೈರವಾದಿಗಳು ಕೈರವಗ
  ಳರಿ ವಿರಹಿಗಳನಾಂತ ಕಾಮನೆ ವಲಂ
  ವರಮನವರೊಳ್ ಶಾಶ್ವತಾವಾಸಮೆಂದೀಯೆ
  ಹರನಂತೆ ತೋರ್ದತ್ತು ಸಂಜೆ ಸೊಬಗಿಂ

 4. ಕರಿಚರ್ಮಮಂ ತೊಟ್ಟು ಸತಿಪಿತನು ಬೇಳ್ವ ಬೇ
  ಳುರಿಯ ನಂದಿಸಿ ಗಣಮನೆಲ್ಲೆಡೆಗಳೊಳ್
  ನೆರೆಯಿಸುತ್ತರೆವೆರೆಯ ಮರೆಸಿ ಕೋಪದೊಳೆದ್ದ
  ಹರನಂತೆ ತೋರ್ದತ್ತು ಸಂಜೆ ಸೊಬಗಿಂ

 5. ಪೆರೆ ಸೂಡಿ ನಾಯಿ ಮೀನುಮೆ ಸೋವ ಪೆಣ್ ಬಣಂ
  ಮೆರೆವೆಂಟು ರೂಹುಗಳು ಕಳ್ತಲೆ ವನಂ
  ಮರೆವಾಂತ ನೇಸರನೆ ಮಿಗ ಉಷೆ ಬಲೆ ಕಿರಾತ
  ಹರನಂತೆ ತೋರ್ದತ್ತು ಸಂಜೆ ಸೊಬಗಿಂ

 6. ಅರೆ ನೇಸರನ ಕಾಯ್ಪು ತಿಂಗಳಿನ ತಂಪದರೆ
  ಅರೆಯಾಗಸದ ಬೆಳ್ಪು ಅರೆಗಪ್ಪೆನಲ್
  ಅರೆಯೊಡಲನಾಟಂ ಜಗಕೆ ನಿಚ್ಚಂ ತೋರ್ಪ
  ಹರನಂತೆ ತೋರ್ದತ್ತು ಸಂಜೆ ಸೊಬಗಿಂ

 7. ಎಲ್ಲಮುಮಂ ಗಳಿಸಿ ಪೆರವ
  ರಲ್ಲಿಯ ಬಿಡುಗಾಸಿಗಾಸೆ ಪಡುತುಂ ಹಲುಬುವ
  ರಲ್ಲಿನ ಮಾತ್ಸರ್ಯವದೇನ್ !
  ಇಲ್ಲದಿರುವುದೆಳ್ದು ಕಾಂಬ ಸೋಜಿಗಮಲ್ತೇ|

  ( ಹೊಟ್ಟೆಯೊಂದರ ರಗಳೆ ಸಾಲದೆಂದೇನೋ ವಿಧಿ… ಕಗ್ಗದಿಂದ ಪ್ರೇರಿತ )

  • ಕಲ್ಪನೆ ಚೆನ್ನಾಗಿದೆ, ‘ಹಲುಬುವ’ ಸವರಿಸಬೇಕು ‘ನನನಾ’ ಅಥವಾ ‘ನಾನಾ’ ಎಂದು ಸವರಿಸಿ

  • ಆಹಾ ಸೊಗಸಾದ ಹೊಸರೀತಿಯ ಪರಿಹಾರ! ಸೋಮರು‌ ಹೇಳಿದಂತೆ ಎರಡನೇ ಪಾದಾಂತ್ಯ ಸರಿಯಾಗಿಸಬೇಕು 🙂

 8. ಪೆರೆ ಮೊಗಂ ಕಾರ್ಮೋಡ ಮುಂಗುರುಳ್ ಪಡುವ ನೇ
  ಸರು ಪಿಡದ ಚಕ್ರ ನೀಲಾಬ್ಧಿ ಮೆಯ್ಯಿ
  ತೆರೆಮೊರೆತಮಾದಿವೇದೋಚ್ಚಾರಮಾಗೆ ಮುರ
  ಹರನಂತೆ ತೋರ್ದತ್ತು ಸಂಜೆ ಸೊಬಗಿಂ

 9. ಮೆರೆಸಿ ಪೆರೆಗಲಸಮಂ ಬೆಳಗುವಿನಚಕ್ರಮಂ
  ಮರುತನೊಡನೋಲಾಡೆ ಮುಗಿಲುಸಾಲ್ಗಳ್
  ಕರಮೆಸೆದು ಕಂಗೊಂಡು ಬಗೆಗೊಂಡುದಾ ಸುಧಾ
  ಹರನಂತೆ ತೋರ್ದತ್ತು ಸಂಜೆ ಸೊಬಗಿಂ

  • ಜೀವೆಂ ನಿಮ್ಮ ಏನು ಎಂದು ತಿಳಿಯಿತು :), ಬಹಳ ಚೆನ್ನಾಗಿದೆ ಪದ್ಯಗಳು

   • ಸೋಮ, ನಿಮ್ಮ ಏನು ಎಂದು ತಿಳಿಯಲಿಲ್ಲ (ಈ-ಮೈಲ್ ಮಾಡಿ) , ಆದರೆ ಮೆಚ್ಚುಗೆಗಾಗಿ ಥ್ಯಾಂಕ್ಸ್ 😀

 10. ಎಲ್ಲೆಲ್ಲಿ ಶಬ್ದಮಳಿದುಳಿ-
  ದಲ್ಲಿಹ ಮೌನಮನುಮಾಲಿಪ ಪರಿಯೊಳೆನಿತುಂ
  ಪಲ್ಲಟಮನುಪಸ್ಥಿತಿಯೊಳ್
  ಇಲ್ಲದಿರುವದೆಳ್ದು ಕಾಂಬ ಸೋಜಿಗಮಲ್ತೇ ?!

  • Deafening silence ಅಂತಾರಲ್ಲ, ಹಾಗೆ.

   • ಹೌದು, “ಶಬ್ದ” ಅಳಿದು ಉಳಿವ “ಮೌನ” – ಆ ಮೌನವೂ ಎದ್ದು ಕಾಣುವ / ಕೇಳುವ ಪರಿ – ಅನುಪಸ್ಥಿತಿಯಲ್ಲಿ ಉಂಟಾಗುವ ಈ ಪಲ್ಲಟ – ಈ “ಇಲ್ಲದ ಇರುವಿಕೆ” ಸೋಜಿಗವಾಗಿ ಕಂಡಿದೆ !!

 11. ಬಿರುಬಿಸಿಲಿನೊಳ್ ಬಳಲಿ ಹಿಂದಿರುಗುತಿಳಿವಾಗೆ
  ಬರಮಾಡಿಕೊಳುತೆತ್ತಲಾರತಿಯ, ನೇ-
  ಸರನ ಮೊಗ ಕಂದು ಚಂದಿರಮಾಗುತುಂ ಮನೋ-
  ಹರನಂತೆ ತೋರ್ದತ್ತು ಸಂಜೆ ಸೊಬಗಿಂ !!

  • ಉನಗಣದಲ್ಲಿ ಖಂಡಪ್ರಾಸ ಸಾಗದೌ

   • ಓ.. ಹೌದೇ, ನನಗಿದು ತಿಳಿದಿರಲಿಲ್ಲ,
    ತಿದ್ದಿದ ಪದ್ಯ :

    ಬಿರುಬಿಸಿಲಿನೊಳ್ ಬಳಲಿ ಹಿಂದಿರುಗುತಿಳಿವಾಗೆ
    ಬರಮಾಡಿಕೊಳುತೆತ್ತಲಾರತಿಯನುಂ |
    ಅರುಣಸಾರಥಿ ಕಂದು ಚಂದಿರಮಾಗುತುಂ ಮನೋ-
    ಹರನಂತೆ ತೋರ್ದತ್ತು ಸಂಜೆ ಸೊಬಗಿಂ !!

    * ಅರುಣಸಾರಥಿ = ಸೂರ್ಯ

    • ಮೂರನೇ ಸಾಲು ಮಾತ್ರೆಗಳು ತಪ್ಪಿವೆ,
     ತಿದ್ದಿದ ಪದ್ಯ:

     ಬಿರುಬಿಸಿಲಿನೊಳ್ ಬಳಲಿ ಹಿಂದಿರುಗುತಿಳಿವಾಗೆ
     ಬರಮಾಡಿಕೊಳುತೆತ್ತಲಾರತಿಯನುಂ |
     ಅರುಣಸಾರಥಿ ತೆರಳೆ ಚಂದ್ರನೆಯ್ಯಲ್ ಮನೋ-
     ಹರನಂತೆ ತೋರ್ದತ್ತು ಸಂಜೆ ಸೊಬಗಿಂ !!

 12. ತಿರುಗಾಟದೊಳ್ ನಿಯಮವಿನಿಮಯಕ್ಕೆದುರಾಗೆ
  ಕರಲಾಘವಂಗೈಯೆ ಸೂರ್ಯ ಚಂದ್ರರ್ |
  ಸರಿಯುತಿರಲಾಗೆ ತಿಥಿವಾಸರಂ ಕಾಣ್ ಕಾಲ-
  ಹರನಂತೆ ತೋರ್ದತ್ತು ಸಂಜೆ ಸೊಬಗಿಂ !!

  ಸೂರ್ಯ ಚಂದ್ರರ – shift change time – (ಸಂಜೆ ವೇಳೆ) hand shake ಸೊಗಸು / ಕಳೆದುಹೋಗುವ ದಿನ
  ಹಾಗಾಗಿ – *ಕಾಲ ಹರ ~ ಸಮಯದ ಅಪಹರಣಕಾರ

 13. ಉರಿಬಿಸಿಲ ಪಡುಗಡಲ ತೀರದೊಳ್ ಧ್ಯಾನದಿಂ
  ಪರವೂರ ಭಕ್ತರಂ ಸೆಳೆಯುತುಂ ಮೂರ್ತಿ।
  ಪರಶಿವನ ಛಾಯೆಯಂ ಗೋಪುರದೆ ಬಿತ್ತರಿಸಿ
  ಹರನಂತೆ ತೋರ್ದತ್ತು ಸಂಜೆ ಸೊಬಗಿಂ॥
  ವಾಟ್ಸಾಪ್ ನಲ್ಲಿ ಬಂದ ಒಂದು ಫೊಟೊವನ್ನು ಆಧರಿಸಿ ಬರೆದುದು.

 14. ನಿಶಾ(Night)+ಆಹರ(fetch) = ರಾತ್ರಿಯನ್ನು ತರುವ
  ಉರಿವ ಪಗಲನ್ನು ಸಹಿಸಿರ್ಪ ಲೋಗರಿಗೆಲ್ಲ
  ದೊರಕಿಸಲು ತಣ್ಣನೆಯ ಸಾಂತ್ವನವನು|
  ಇರುತೆ ನಡುವೊಳು ಬೇಗೆಯಂ ತಣಿಸಿ ಮೇಣ್ ನಿಶಾಽಽ-
  ಹರನಂತೆ ತೋರ್ದತ್ತು ಸಂಜೆ ಸೊಬಗಿಂ||
  (ಇದೇ ಕಲ್ಪನೆಯನ್ನು ವಚೋಹರ/ವಾರ್ತಾಹರ = messenger/envoy; ಆರ್ತಿಹರ = pain reliever ಎಂಬ ಕೀಲಕಗಳಿಂದ ಪರಿಹರಿಸಬಹುದು)

 15. ಗೋಷ್ಠಿಯಲ್ಲಿ ಪೂರೈಸಿದ್ದು

  ಸ್ಮರಶರೀರಪ್ರಭನಿಸರ್ಗಲಾವಣ್ಯಮಂ
  ಕರಟಿಸಿನನೆಂಬ ನೊಸಲುರಿಯಿಂದೆ ತಾಂ
  ಮುರುಟಿರ್ಕೆ ವಾರಿಜದ ರತಿವದನಮಾ ಮದನ-
  ಹರನಂತೆ ತೋರ್ದತ್ತು ಸಂಜೆ ಸೊಬಗಿಂ

  ಕಾಮನ ಶರೀರದಂತಹ ಸೊಗಸಿನ ನಿಸರ್ಗಲಾವಣ್ಯವನ್ನು (ಮುಳುಗುವ) ಸೂರ್ಯನೆಂಬ ಹಣೆಗಣ್ಣಿನುರಿಯಿಂದ ಕರಟಿಸಿ / ಕಪ್ಪುಕಪ್ಪಾಗಿಸಿ, ಕಮಲವೆಂಬ ರತಿವದನವು ಬಾಡಿರಲು, ಆ ಮದನಹರನಾದ ಶಿವನಂತೆ ಸಂಜೆ ತೋರಿಬಂತು.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)