Apr 092011
 

ಅದತೋರಿಸಿದತೋರಿಸೆನುವೆನಿತು ಮಾನಿನಿಯ-
ರೆದಿರು ತಾನೆಡೆಬಿಡದೆ ಹರಡಿ ಮಡೆಸುತಲಿರಲು
ಕದದೊಳಗಿನಾಸೀರೆಗೀಬಣ್ಣಕಾಸೆರಗಲಿದರಂಚ ವಿನ್ಯಾಸಗಳ್ |
ಚೆದುರಿ ಪರಕಿಸೆ ವನಿತೆಯೊಂದೊಂದನರಿವೆಗಳ
ಪದರ ದರ್ಪಣವಿದಿರು ಹಿಡಿದೆಸೆಯುತಿರೆ ಪಣಿಕ-
“ನಿದನುಡುವ ಯೋಗ್ಯತೆಯನೀನಾರಿ ಪಡೆದಿಲ್ಲ”ವೆಂದೆನುತ ಮನದಿ ನಕ್ಕ ||

  6 Responses to “ವಾರ್ಧಕ ಷಟ್ಪದಿಯಲ್ಲಿ: ಸೀರೆಯನಾಯ್ಕೆ ಮಾಡದ ನಾರಿಯರ ವಿಧಾನಗಳ ಬಗ್ಗೆ ಬೇಸತ್ತ ಸೀರೆಯಂಗಡಿಯವ, ನನ್ನ ಚಂದದ ಸೀರೆಯುಡುವ ಸೌಂದರ್ಯ ಈ ನಾರಿಗಿದೆಯೇ ಎಂದು ಯೋಚಿಸಬಹುದೇ?”

  1. "ಒಪ್ಪುವಂತಿದೆ ಪ್ರಥಮ ಯತ್ನ ವಾರ್ಧಕ ರಚನೆ
    ಒಪ್ಪಮಾಡಿದರೆ ಮೂರಾರು ಪಾದಗಳನ್ನು"
    ತಪ್ಪದೆಯೆ ಸಲಿಸುವುದು ಮೂರಾರು ಪಾದದೊಳು ಮುವ್ವತ್ತು ಮಾತ್ರೆ ಗುರುವಂ.

    ಪ್ರಿಯ ಸೋಮರೆ,

    ಲಕ್ಷಣವನ್ನು ಗಮನಿಸಿ, ಮೂರು ಮತ್ತು ಆರನೇಪಾದಗಳನ್ನು ಪರಿಷ್ಕರಿಸಿದರೆ ಸರಿಹೋದೀತು.

    ಉದಾ: ಕದದೊಳಗಿನಾಸೀರೆಗೀಬಣ್ಣಕಾಸೆರಗಲಿದರಂಚ ವಿನ್ಯಾಸ ಕುಸುರಿ

    "ನಿದನುಡುವ ಯೋಗ್ಯತೆಯನೀನಾರಿ ಪಡೆದಿಲ್ಲ ವೆಂದೆನುತ" – ಮನದಿ ನಕ್ಕ ||

  2. ಧನ್ಯವಾದ ಸಾರ್, ಆರನೇ ಪಾದದಲ್ಲಿ ೩೦ ಮಾತ್ರೆ ನೀವು ತಿಳಿಸಿಕೊಟ್ಟ ಹಾಗೆ ಸರಿ ಮಾಡಿದೀನಿ. ಮೂರನೇ ಪಾದದಲ್ಲಿ ೩೦ ಮಾತ್ರೆಗೆ ಈಗಾಗ್ಲೇ ಸರಿಹೊಂದತ್ತೆ ಅಲ್ವೇ?
    ಕದದೊಳಗಿ ನಾಸೀರೆ ಗೀಬಣ್ಣ ಕಾಸೆರಗ ಲಿದರಂಚ ವಿನ್ಯಾಸ ಗಳ್

  3. ಸರಿಯಾಗಿ ಸರಿಮಾಡೆ ಸರಿಯಾಗದುಂಟೇನು?
    ಸರಿಯಾಗಿರಲು ಪದ್ಯ, ನದಿಯಂತೆ ಹರಿಯುವುದು
    ಸರಿಯಿಲ್ಲವೆನೆ, ಪೇಪರನು ಹರಿದಪರಿ. ಸೋಮ, ಸರಿಹೋಯ್ತು ಪದ್ಯವೀಗ |

  4. ಹೌದು. ಗಮನಿಸಿರಲಿಲ್ಲ. ನಿಮ್ಮ ಪದ್ಯದಮೂರನೇ ಸಾಲು ಈಗಾಗಲೇ ಸರಿಯಾಗಿತ್ತು. ಪ್ರಮಾದ ನನ್ನದೇ.

  5. ಪದ್ಯದ ವಿಮರ್ಶೆಯನು ಪದ್ಯದಿ೦ದಲೆ ಮಾಡಿ
    ಸದ್ಯೋನವದ್ಯಕಮನೀಯಸಂವಾದವನು
    ವಿದ್ಯಾವಿನೋದದೊಳು ಸಾಧಿಸುತ್ತಿಹ ನಿಮ್ಮ ಪದ್ಯಪ್ರಿಯತೆಗೆ ಮಣಿವೆ

  6. ಚೋದ್ಯವೇಂ ಗಮಗಮಿಸೆ ನಾರು ಹೂಕೆಳೆಯಿಂದ
    ಪದ್ಯವ್ಯಸನ ಮತ್ತೆ ಮರುಕಳಿಪ ಸಂಬಂಧ
    ವಿದ್ಯಾಬ್ಧಿಯವಧಾನಿ ನಂಟಿರಲು ಪದ್ಯರುಚಿಗುಪ್ಪಿಗೇಂ ಕೊರತೆ, ನಮನ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)