Oct 122020
 

ವರ್ಣನೆಯ ವಸ್ತುಗಳು:

೧. ತಿರುಗು ಬಾಣ

೨. ಕಬ್ಬಿನ ಗಾಣ

೩. ಸ್ವರ್ಗಲೋಕ

ರಥೋದ್ಧತ ಛಂದಸ್ಸಿನ ಸಮಸ್ಯೆ: 

ಕೋಳಿಯಂ ಬಯಸಳಲ್ತೆ ಕಾಳಿತಾಂ

  7 Responses to “ಪದ್ಯಸಪ್ತಾಹ ೪೧೭”

 1. *ಸ್ವರ್ಗಲೋಕ
  ಯೋಗಿಗಪಥ್ಯಂ ಮತ್ತಂ
  ಭೋಗಿಯ ಭೋಗಕ್ಕೆ ತಾನುದಾರನೆನಿಕ್ಕುಂ
  ರಾಗಮದಿಲ್ಲದೆ ಸಂದು ವಿ-
  ಯೋಗಮೆ ಮೇಣಿಲ್ಲದಿರ್ಪ ಸುಗ್ಗಿಯೆ ಸಗ್ಗಂ ||
  ( ಕುಮಾರವ್ಯಾಸನ ಯೋಗಿಗೆತ್ತಿದ ಖಡುಗಧಾರೆ.. ಪದ್ಯದ ಆಶ್ರಯದಲ್ಲಿ, ಸ್ವರ್ಗಲೋಕವು ಯೋಗಿಗೆ ಅಪಥ್ಯ, ಭೋಗಿಯ ಭೋಗಕ್ಕೆ ಉದಾರ ಎಂದೆನಿಸಿರುವುದು, ಅಲ್ಲಿ ಪ್ರೀತಿಯೇ ಇಲ್ಲದ ಕಾರಣ ವಿಯೋಗವೇ ಇಲ್ಲದ ವಸಂತಕಾಲದಂತೆ ಸ್ವರ್ಗಲೋಕ ಇದೆ)

  *ಕಬ್ಬಿನ ಗಾಣ
  ಕೋಣನೆರಡಂ ಬಳಸಿ ಸುತ್ತಿಸುತೆ ಕರ್ವಿನಿಂ
  ಗಾಣಮಿದೊ ರಸಮುರ್ಕಿಸಿತ್ತು ಜನಕಂ
  ಜಾಣನೆನಿಸಲ್ಕೆಣ್ಣೆಯಂ ಪಡೆಯುತಿರ್ಪುದೈ
  ಕೋಣಕ್ಕೆ ಸೂಲಂಗಿಯುಂ ಸಿಗದಿರಲ್||
  (ಕೋಣಗಳನ್ನು ಬಳಸಿಕೊಂಡು ಕಬ್ಬಿನಿಂದ ರಸವನ್ನು ಉಕ್ಕಿಸಿ ಜನರಿಗೆ ಕೊಡುತ್ತಾ, ಕೋಣಕ್ಕೆ ಸೂಲಂಗಿಯೂ ಸಿಗದಿರುವಾಗ, ಈ ಗಾಣವು “ಜಾಣ” ಎಂದೆನಿಸಿಕೊಂಡು ಎಣ್ಣೆಯನ್ನು ಪಡೆಯಿತು. (ಎಣ್ಣೆ- ಜಾರುಕ(lubricant) ಮದ್ಯ ಎಂಬರ್ಥವನ್ನೂ ಗಮನಿಸಬಹುದು )

  *ತಿರುಗುಬಾಣ
  ಭರದೊಳೇಕಾಕ್ಷರದೊಳಿತ್ತೊಡಂ ಸಮಸ್ಯೆ
  ಪರಿಹೃತಂ ಗಡಾ ಶತವಧಾನಿಗಳಿನಾಗಳ್
  ನೆರೆದವರ್ಗವರೆ ಅರ್ಥಮಂ ಪೇಳ್ವರೆನಲು
  ತಿರುಗುಬಾಣಮೇ ಪೃಚ್ಛಕರ್ಗಾದುದಲ್ತೇ||
  (ಒಮ್ಮೆ ಶತಾವಧಾನಿಗಳ ಒಂದು ಅವಧಾನದಲ್ಲಿ ಪೃಚ್ಛಕರು ಏಕಾಕ್ಷರದ ಸಮಸ್ಯೆಯನ್ನು ಕೊಟ್ಟು, ಏಕಾಕ್ಷರದಲ್ಲೇ ಪರಿಹರಿಸಬೇಕೆಂದು ಕೇಳಿದ್ದರಂತೆ. ಆಗ ಶತಾವಧಾನಿಗಳು ಹಾಗೆಯೇ ಪರಿಹರಿಸಿ “ಇದರ ಅರ್ಥವನ್ನು ಪೃಚ್ಛಕರೇ ಹೇಳುತ್ತಾರೆ” ಎಂದು ಹೇಳಿದರಂತೆ. ಹಾಗೆ ಅವರ ಪ್ರಶ್ನೆ ಅವರಿಗೇ ತಿರುಗುಬಾಣವಾಯ್ತು)

  *ಸಮಸ್ಯೆ
  ಬಾಳಿನೊಳ್ ಬರುತಿರಲ್ಕೆ ಕಷ್ಟಮಾ-
  ಭೀಳಮಂ ಕಳೆವ ವಾಂಛೆಯಿಂ ನೃಪಂ
  ತಾಳುತುಂ ಬಗೆಯನೀಯೆ ಪಿಟ್ಟಿನಾ
  ಕೋಳಿಯಂ ಬಯಸಳಲ್ತೆ ಕಾಳಿ ಕೇಳ್ ||
  (ಜನ್ನನ ಯಶೋಧರ ಚರಿತೆಯಲ್ಲಿ ಬರುವ ಕಥೆಯನ್ನು ಆಶ್ರಯಿಸಿ, ಜೀವನದಲ್ಲಿ ಕಷ್ಟಗಳು ಬಂದಾಗ ಅದನ್ನು ಕಳೆಯಬೇಕೆಂದು ಮನಸ್ಸು ಮಾಡಿ ಬಲಿಯನ್ನು ಕೊಟ್ಟ ಹಿಟ್ಟಿನ ಕೋಳಿಯನ್ನು ಕಾಳಿ ಬಯಸಲಿಲ್ಲ)

  ಸೂಳಿನಿಂ ಬರುತೆ ಭಕ್ತರಿತ್ತಿರಲ್
  ಬಾಳಿನಿಂ ಕೊರಳುಗುಯ್ದು ದೇವಿಗಂ
  ಕೇಳಲಾರತಿಯೆ ಪೂರ್ಣಮಾಗಿರಲ್
  ಕೋಳಿಯಂ ಬಯಸಳಲ್ತೆ ಕಾಳಿ ಕೇಳ್ ||
  (ಭಕ್ತರೆಲ್ಲತೂ ಕ್ರಮವಾಗಿ ಬರುತ್ತಾ ಕತ್ತಿಯಿಂದ ಕೊರಳನ್ನು ಕುಯ್ದು ಬಲಿಕೊಡುತ್ತಿದ್ದರು. ಮಂಗಳಾರತಿಯು ಪೂರ್ಣವಾದ ಕಾರಣ ಕೋಳಿಯನ್ನು ಕಾಳಿ ಬಯಸಲಿಲ್ಲ)

 2. ಸಮಸ್ಯಾಪೂರಣ :

  ಗಾಳಿವಾತನೊಗೆ, ಊರಿನಮ್ಮಗಂ
  ಕೂಳಿಗಂ ಪ್ರಿಯವು ಬೆಲ್ಲದನ್ನವುಂ
  ಪೇಳಿಕೇಳಿ ಗಡ ಸೀಯದಲ್ಲದಲ್
  ಕೋಳಿಯಂ ಬಯಸಳಲ್ತೆ ಕಾಳಿತಾಂ !!

  ಎಲ್ಲಾ ಗಾಳಿಮಾತು ಬಿಡು. ಹೇಳಿಕೇಳಿ ದೇವಿ – “ಗುಡಾನ್ನಪ್ರೀತಮಾನಸಾ”-
  ಹಾಗಾಗಿ ಸಿಹಿಯಲ್ಲದ ಕೋಳಿಯನ್ನು ಬಯಸಳು

 3. ತೋಳನೆತ್ತಿ ಪರಸುತ್ತೆ ಭಕ್ತರಂ,
  ಬಾಳುತಿರ್ದು ಗುಡಿಯೊಳ್ ವಿಭೂತಿಯಿಂ।
  ಕೂಳಿನಂತೆ, ತಿನದಿರ್ದು ಕುಳ್ಳಿರಲ್
  ಕೋಳಿಯಂ, ಬಯಸಳಲ್ತೆ ಕಾಳಿತಾಂ ।।

  ( ಗುಡಿಯಲ್ಲಿ ತೋಳನೆತ್ತಿ ಭಕ್ತರನ್ನು ಹರಸುತ್ತ ಮಹಿಮೆಯಿಂದ ಬಾಳುತಿದ್ದು ಕಾಳಿಯು ,ಕೋಳಿಯನ್ನು ಆಹಾರದಂತೆ ತಿನ್ನದಿರದೆ ಕುಳಿತಿರಲು ತಾನು ಬಯಸಳಲ್ಲವೆ? )

 4. ಗೂಳಿಯಂತೆ ಜನರನ್ನು ಪೀಡಿಪಾ
  ಖೂಳ ರಕ್ಕಸರ ದಾಳಿಮಾಡಿ ನ-
  -ಲ್ವೇಳೆಯಲ್ಲವರ ಕೊಲ್ವಳಲ್ಲದೇ
  ಕೋಳಿಯಂ ಬಯಸಳಲ್ತೆ ಕಾಳಿತಾಂ

  (ಸ್ವಲ್ಪ ಶಿಥಿಲವಾದ ಹೊಸಗನ್ನಡ ಬಂಧವನ್ನು ಕ್ಷಮಿಸಿ. ಈ ಛಂದಸ್ಸಿನಲ್ಲಿ ನನ್ನ ಮೊದಲ ಪ್ರಯತ್ನ)

 5. ಸ್ವರ್ಗಲೋಕ

  ತನ್ನಂದರೊಡಂ ಸಲ್ಲಲ್
  ಬನ್ನಂಬಡುತಂದು ಸಗ್ಗದೊಳ್ ಕೊರಗುತೆತಾಂ
  ಪಿನ್ನಡೆದಿರಲ್ ನರಕಕ್ಕಂ
  ಸನ್ನಡತೆಯ ಧರ್ಮರಾಯಗಾಯ್ತದೆ ಸಗ್ಗಂ

  ಕಬ್ಬಿನ ಗಾಣ

  ಕಬ್ಬಿನ ಗಾಣವು ಕಬ್ಬಿಣತುಂಡಂತೆ
  ಕಬ್ಬಿನ ಬೆಳೆಯು ಸಿಗದಿರೆ- ಓದದ
  ಕಬ್ಬಿಗನಂತೆ ರಸಹೀನ

  ಸಮಸ್ಯೆ

  ನಾಳೆಯಂ ಕಳೆವುದೆಂದು ತೋರದಂ
  ಸಾಲಿಗಂ ಬಡವನೊಲ್ದುಪೂಜಿಸಲ್,
  ತಾಳಿಕೊಂಡಿರುತೆ ಸಸ್ಯಭೋಜನಂ ಕೋಳಿಯಂಬಯಸಳಲ್ತೆಕಾಳಿಕೇಳ್

 6. ಕಾಳಿ ಎಂಬುವಳೊಬ್ಬಳಿದ್ದಳು. ಅವಳದೇನೋ ರಿವಾಜು, ಮುಂಕೋಳಿಯನ್ನು (ಮುಂಜಾನೆ ಮೊದಲು ಕೂಗುವಂಥದು) ಮಾಂಸದಡುಗೆಗೆ ಬಳಸಳು.

  ಕೂಳಿಗಂ ಬಳಸುವಳ್ ಗಡೇನನುಂ
  ಕಾಳು-ಬೇಳೆಯೊಡನೆಲ್ಲ ಪ್ರಾಣಿಯಂ|
  ಚಾಳಿಯೇನಿದರದೆಂದುಮೆಂದು ಮುಂ-
  ಕೋಳಿಯಂ ಬಯಸಳಲ್ತೆ ಕಾಳಿತಾಂ||

 7. ಸ್ವರ್ಗಲೋಕ
  1.
  ಪಸಿವಿಂ ಮುಕ್ತಿಯ ಕಾಣಲ್
  ರಸದುನ್ಮಾದಂಗಳೆಲ್ಲಮಂ ಸಾಧಿಸೆ ನಾಂ
  ಜಸದಿಂ ಸ್ವರ್ಗಮದೇಕೈ
  ಉಸಿರಾಡುತ್ತಿಹದೆ ಸಿದ್ಧಿಸಲ್ ಗಡಮಕ್ಕುಂ
  2.
  ಹಸಿವಿಲ್ಲ ಕಸವಿಲ್ಲ ರಸವಿಲ್ಲ ಜಸವಿಲ್ಲ
  ಉಸಿರಿಲ್ಲ ಕಣ್ಣ ಮಿಟುಕಿಲ್ಲ – ಸ್ವರ್ಗದೆ
  ಬಸಿರಿಲ್ಲ ಸಂತಾನವದಿಲ್ಲ

  ಕಬ್ಬಿನ ಗಾಣ
  1.
  ಕೃಪಣರು ಸಂಪದವೆಲ್ಲವ ಬಚ್ಚಿಡ –
  ಲಪಹರಿಸುವ ರಾಜನವೋಲೆ
  ಕಪಟದೊಳಡಗಿದ ಸಿಹಿಯನು ಕಕ್ಕಿಸಿ
  ನೆಪವೊಂದಕು ತಾಂ ಕಿವಿಗೊಡದೆ
  2.
  ಕಬ್ಬಿಗೆ ಧೇನುವ ಉಬ್ಬಿದ ಪದವಿಯ
  ಕಬ್ಬಿಗರೆಂದೂ ಕೊಡಲಿಲ್ಲ – ಗಾಣದ
  ರುಬ್ಬುವ ದಂತ ನೀಡಿತ್ತು

  ಸಮಸ್ಯೆ
  1.
  ತಾಳಿರಲ್ಕುದರಶೂಲೆಯಾಗಿರಲ್
  ಕೋಳಿಯಂ ಬಯಸಳಲ್ತೆ ಕಾಳಿ ತಾಂ
  2.
  ಬಾಳಿನೊಳ್ ಬಳೆಯೆ ಪಾಕದಾಗಮಂ
  ಜಾಲಿಸಲ್ ವಿವಿಧ ಪಾಕಮೆಲ್ಲಮಂ
  ಹೋಲಿಸಲ್ಕೆಡೆಯೆ ಇಂತು ಬೇಯದಾ
  ಕೋಳಿಯಂ ಬಯಸಳಲ್ತೆ ಕಾಳಿ ತಾಂ

  ತಿರುಗುಬಾಣ
  1.
  ಮೇಲೆ ನೋಡುತಾಕಾಶಕುಗಿಯೆ ಮೊಗಮೆಲ್ಲವೆಂಜಲಲ್ತೆ
  ಕಾಳಸರ್ಪವನ್ನಂತೆ ಕೆಣಕೆ ಪ್ರಾಣಕ್ಕೆ ಮುಳುವದಲ್ತೆ
  ದಾಳವನ್ನು ನೆಚ್ಚಿರ್ದೊಡಾಗ ಸಂಪದಕೆ ಕೊರೆಯದಲ್ತೆ
  ತಾಳುತಿಲ್ಲಿ ಮಾಡಿರ್ದ ಕರ್ಮವಲ್ತೆಮಗೆ ತಿರುಗುಬಾಣ
  2.
  ಬಿಟ್ಟಿಹ ಬಾಣವು ಕೊಟ್ಟಿಹ ದಾನವು
  ಸುಟ್ಟಿರುವಡುಗೆ ಬರದೆಂದು – ತಿರುಗಿ ತಾ
  ಮೊಟ್ಟೆಯೊಡೆದರೆ ಕೂಡದು

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)