Nov 022020
 

ವರ್ಣನೆ:

೧. ಅತಿಶಯೋಕ್ತಿಯಲ್ಲಿ ಅನುರಾಗದ ವರ್ಣನೆ

೨. ಜೇಬು

೩. ಆಶೀರ್ವಾದವೇ ಉಡುಗೊರೆಯಾದಾಗ

ಶಾರ್ದೂಲದ ಸಮಸ್ಯೆ:

ಸೂರ್ಯಂ ರಾತ್ರಿಗೆ ಭೂಷಣಂ ದಿವಸಕಂ ಚಂದ್ರಂ ಮಹಾಭೂಷಣಂ 

  12 Responses to “ಪದ್ಯಸಪ್ತಾಹ ೪೨೦”

  1. ’ಸೂರ್ಯಂ ಭೂಷಣಂ ದಿವಸಕಂ ರಾತ್ರಿಗೆ ಚಂದ್ರಂ ಮಹಾಭೂಷಣಂ’ ಎಂಬುದನ್ನು ’ಸೂರ್ಯಂ ರಾತ್ರಿಗೆ ಭೂಷಣಂ ದಿವಸಕಂ ಚಂದ್ರಂ ಮಹಾಭೂಷಣಂ’ ಎಂದ ಬರೆಯಬಹುದು, ಏಕೆಂದರೆ ಕನ್ನಡವು (inflected) ಸಪ್ರತ್ಯಯಭಾಷೆ ಸರಿಯೆ. ಆದರೆ ಸೋಮ, ಛಂದಸ್ಸಿನ ನೆಪ ಮಾಡಿಕೊಂಡು ಈಪಾಟಿ ಅನ್ವಯವ್ಯಾಯಾಮ ಮಾಡುವುದೆ!

    ಕಾರ್ಯಂ ವಕ್ರತೆಯಿಂದೆ ಪದ್ಯರಚನಂ, ಮಾಸೊಲ್ ಗಡಾ ಕನ್ನಡಂ
    ಪರ್ಯಾಯಂ ಮಿಗೆ ಲೇಖ್ಯಮೆಂತೊ ಪದಗಳ್ ಸಪ್ರತ್ಯಯಂ ಸರ್ವಮೈ|
    ಆರ್ಯಂ ಸೋಮನೆ, ಅಂತೆನುತ್ತುಮಿನಿತೇಂ ನೀನ್ವಯಂ ಮಾಳ್ಪುದೈ!?
    ’ಸೂರ್ಯಂ ರಾತ್ರಿಗೆ ಭೂಷಣಂ ದಿವಸಕಂ ಚಂದ್ರಂ ಮಹಾಭೂಷಣಂ||’

  2. ಆಶೀರ್ವಚನವಾಗೆ ಉಡುಗೊರೆಯು ತಾನಾಗ
    ಕೌಶೇಯಗಳ್-ಚೊಂಬು-ತಟ್ಟೆ-ಲೋಟಂ|
    ರಾಶಿರಾಶಿಯೊಳೆಂತೊ ಅಟ್ಟವನು ಸೇರದೆಲೆ
    ಲೇಶಪರಿಪಾಕವದು ನೆಲೆಯಪ್ಪುದೈ||

  3. ಎನಗೊಬ್ಬಳಿದ್ದಳು ’ಅನುರಾಧ’ಳೆಂಬಳು
    ಮುನಿಯುವ ಸಹಪಾಠಿಯೊರುವಳ್|
    ಮುನಿಯುವ ಸಹಪಾಠಿಯೊರುವಳವಳನ್ನು
    ’ಅನುರಾಗ’ ಎಂದೇ ಕರಯುವೆ||

  4. ಹರಿ ಓಂ.. ನಾನು sslc ವಿದ್ಯಾರ್ಥಿ . ಡಾ. ಗಣೇಶರ ದೊಡ್ಡ ಅಭಿಮಾನಿ . ಅವರ ಅಷ್ಟಾವಧಾನ ನನ್ನನ್ನು ಇಲ್ಲಿ ಕರೆತಂದಿತು. ಸಮಸ್ಯಪೂರಣದಲ್ಲಿ ನನ್ನ ಮೊದಲ ಪ್ರಯತ್ನ . ನೂರಾರು ದೋಷಗಳನ್ನು ಒಡಗೊಂಡಿದೆ. ದಯವಿಟ್ಟು ಮನ್ನಿಸಬೇಕು.

    ಕಾರ್ಯಂ ಮಾಯಜಗತ್ತಿನೊಳ್ಗೆ ಬದಲಾದುದ್ ಸೋಜಿಗಂಯೆಂಬುದುಂ|
    ಶೌರ್ಯಂ ಕತ್ತೆಯೊಳಕ್ಕೆ ಪೋಗಿರೆ ಮೃಗೇಂದ್ರಂ ಕೊಂಡ ಮೂರ್ಖತ್ವವಂ|
    ಆರ್ಯಂ ತಾ ಬಡವಾಗಿರೈ ಕಟುಕ ತಾ ಗೋರಕ್ಷನೆಂದಿದ್ದಿರೆಂ|
    ಸೂರ್ಯಂ ರಾತ್ರಿಗೆ ಭೂಷಣಂ ದಿವಸಕಂ ಚಂದ್ರಂ ಮಹಾಭೂಷಣಂ||

    ಮಾಯಾ ಜಗತ್ತಿನಲ್ಲಿ ಎಲ್ಲವೂ ಅದಲು ಬದಲಾಗಿದೆ . ಶೌರ್ಯತ್ವವು ಕತ್ತೆಯೊಳಕ್ಕೆ ಅಡಕವಾಗಿದ್ದರೆ , ಸಿಂಹವು ಮೂರ್ಖ ಪ್ರಾಣಿಯಾಗಿದೆ. ರಾಜನಾಗಿದ್ದವನು ಬಡವನಾದ, ಕಟುಕನಾಗಿದ್ದವನು ಗೋ ರಕ್ಷಕನಾಗುತ್ತನೆ . ಹಾಗೆಯೇ ಸೂರ್ಯನು ರಾತ್ರಿ ರಾಜನಾದ ಮತ್ತು ಚಂದ್ರನು ಹಗಲ ಬಾನಿನ ಭೂಷಣವಾದ. ಈ ರೀತಿಯಾಗಿ ನಾನು ಪರಿಹಾರ ಮಾಡಲು ಪ್ರಯತ್ನಿಸಿದ್ದೇನೆ .

    • ಪ್ರಣವ ಹೆಗಡೆಗೆ ಪದ್ಯಪಾನಕ್ಕೆ ಸ್ವಾಗತ. ನೀನೇ ನಿರೀಕ್ಷಿಸಿದಂತೆ, ನಿನ್ನ ಈ ಪ್ರಥಮಪದ್ಯದಲ್ಲಿ ದೋಷಗಳಿವೆ, ಸರಿಯೇ. ತಿದ್ದೋಣ. ಆದರೆ, ತಿದ್ದುವುದಕ್ಕಿಂತ ನನ್ನ ಪ್ರಥಮಪದ್ಯವನ್ನು ನಿನಗೆ ತೋರಿಸಿದರೆ ನಿನಗೆ ಹೆಚ್ಚು ಸಮಾಧಾನವಾದೀತು 🙂 ಪದ್ಯರಚನೆಯಲ್ಲಿ ಎಳವೆಯಲ್ಲಿಯೇ ಆಸಕ್ತಿವಹಿಸಿದುದು ಒಳ್ಳೆಯದೇ ಆಯಿತು. ಬೇಗ ನಿರ್ದುಷ್ಟಪದ್ಯಗಳನ್ನು ರಚಿಸಲು ಹಾಗೂ ಇನ್ನೂ ಹೆಚ್ಚಿನದನ್ನು ಸಾಧಿಸಲು ಇದು ಒದಗಿಬರುತ್ತದೆ.

      1. ಪ್ರಥಮಯತ್ನದಲ್ಲಿಯೇ ವೃತ್ತದಲ್ಲಿ ರಚಿಸಿರುವುದು ಶ್ಲಾಘ್ಯ. ಅದರಲ್ಲೂ, ಕ್ಲಿಷ್ಟಕರವಾದ ಪ್ರಾಸವುಳ್ಳ ಸಮಸ್ಯಾಪೂರಣಕ್ಕೇ ಕೈಹಾಕಿದ್ದೀಯೆ. ಅಭಿನಂದನೆಗಳು.
      2. ಕಾರ್ಯಂ ಎಂಬುದು ಇಲ್ಲಿ ಹೊಂದುವುದಿಲ್ಲ.
      3. ಮಾಯಾ ಎಂಬುದನ್ನು ಮಾಯ ಎಂದಾಗಿಸಲಾಗದು.
      4. ಬಡವಾಗಿರೈ ಎಂದರೆ ’ನೀವು ಬಡವಾಗಿರಿ’ ಎಂದು ಯಾರಿಗೋ ಹೇಳಿದಂತಾಗುತ್ತದೆ. ಬಡವಾಗಿಹಂ, ಬಡವಾಗಿರಲ್ ಎಂದು ಸವರಬಹುದು.
      5. ಎಂದಿದ್ದಿರೆಂ?
      6. ಕಲ್ಪನೆಯನ್ನೂ ಒಳಗೊಂಡಂತೆ, ಇನ್ನೂ ಕೆಲವೊಂದು ಹೇಳಬಹುದಾದರೂ, ಹಾಗೆ ಮಾಡದೆ, ನನ್ನ ಮಟ್ಟಿಗೆ ಈ ಪದ್ಯವನ್ನು ತಿದ್ದಿ ಬರೆಯುವೆ. ನನಗಿಂತ ಹೆಚ್ಚು ತಿಳಿದವರು ಇಲ್ಲಿದ್ದಾರೆ. ಅವರು ನಮ್ಮಿಬ್ಬರ ಪದ್ಯಗಳನ್ನೂ ತಿದ್ದಿಯಾರು 😉

      ಶೀರ್ಯಂ ಸಾಜಮದೆಲ್ಲಮೀ ಜಗದೊಳೇಂ ಆಶ್ಚರ್ಯಮಂ ನೋಡೆಲೋ
      ಶೌರ್ಯಂ ತೋರ್ದುದೆ ಗರ್ದಭಂ, ಹರಿಗಳೊಳ್ ಮೂರ್ಖತ್ವಮೇ ಸಂದುದೈ|
      ಆರ್ಯಂ ತಾಂ ನಿಧನಂ ವಲಂ, ಕಟುಕ ತಾಂ ಗೋರಕ್ಷನಿಂದಾಗಿಹಂ
      ಸೂರ್ಯಂ ರಾತ್ರಿಗೆ ಭೂಷಣಂ ದಿವಸಕಂ ಚಂದ್ರಂ ಮಹಾಭೂಷಣಂ||

      • ತಪ್ಪುಗಳನ್ನು ತಿಳಿಸಿ ತಿದ್ದಿರುವುದಕ್ಕೆ ತಮಗೆ ಅನಂತ ವಂದನೆಗಳು. ಮುಂದಿನ ದಿನಗಳಲ್ಲೂ ನನಗೆ ನೀವು ಹೀಗೆ ಮಾರ್ಗದರ್ಶನ ನೀಡಬೇಕೆಂದು ವಿನಂತಿಸುತ್ತೇನೆ . ನಾನು ಛಂದೋಬದ್ಧ ಕವಿಗಳ ಕೃತಿಗಳನ್ನು ಓದಲು ಪ್ರಾರಂಭಿಸಿಲ್ಲ , ಶೀಘ್ರವೇ ಪ್ರಾರಂಭಿಸುತ್ತೇನೆ . ಆಂಗ್ಲ ಮಾಧ್ಯಮವಾದ ಕಾರಣ ಶಾಲೆಯಲ್ಲಿ ಛಂದಸ್ಸನ್ನು ಕಲಿಸುವುದಿಲ್ಲ. Youtube ನಲ್ಲಿರುವ ಗಣೇಶರ ಅವಧಾನಗಳನ್ನು ಒಂದು ವರ್ಷದಿಂದ ಕೇಳುತ್ತಿದ್ದೇನೆ. ಆಗ ಛಂದಸ್ಸಿನ ಮೇಲೆ ಆಸಕ್ತಿ ಹುಟ್ಟಿತು. Seniors ಗಳಿಂದ
        ಕೆಲವು ಛಂದಸ್ಸಿನ ಪರಿಚಯವಾಯಿತು. ಪದ್ಯಪಾನ ಸಂಸ್ಥೆಯು ಈ ತರಹದ ಕಾರ್ಯಕ್ಕೆ ಅವಕಾಶ ಕೊಡುತ್ತಿರುವುದು ಅತ್ಯಂತ ಸಂತಸದ ವಿಷಯ. ವ್ಯಾಕರಣದ ಅಧ್ಯಯನವನ್ನು ಮಾಡಿ ಉತ್ತಮ ಪದ್ಯಗಳನ್ನು ರಚಿಸುವ ಪ್ರಯತ್ನವನ್ನು ಮಾಡುತ್ತಿರುತ್ತೇನೆ. ಧನ್ಯವಾದಗಳು

        • ಪ್ರಣವ, ಬಹಳ ಸಂತೋಷ, ಪದ್ಯಪಾನದ ಈ ಕೆಳಕಂಡ ಮಾಹಿತಿಗಳನ್ನು ಗಮನಿಸು

          Learn Prosody – ಛಂದಸ್ಸುಗಳ ಪರಿಚಯ – छन्दःपरिचयः
          Learn Aesthetics – ಅಲಂಕಾರ ಪರಿಚಯ – अलङ्कारपरिच

      • ಅದು ನಿಧನವೋ ನಿರ್ಧನವೋ?

        • ತಮ್ಮ ಆಸಕ್ತಿಗಾಗಿ ಧನ್ಯವಾದಗಳು. ನಿ ಮತ್ತು ನಿರ್ – ಎರಡೂ ಉಪಸರ್ಗಗಳಿವೆ (https://www.aplustopper.com/upsarg-sanskrit-vyakaran/#:~:text=प्र-). ನಿಧನ ಎಂದರೆ ಮರಣ ಎಂದೂ ಆಗುತ್ತದೆ, ಧನವಿಲ್ಲದವನು ಎಂದೂ ಆಗುತ್ತದೆ. ಇಲ್ಲಿ ’ನಿರ್ಧನ’ ಎಂದರೆ ಛಂದಸ್ಸು ಕೆಡುತ್ತದೆ, ಹಾಗಾಗಿ ’ನಿಧನ’ ಬಳಸಿದೆ.

  5. ಸಮಸ್ಯಾಪೂರಣ :

    ಪರ್ಯಾಲೋಚಿಸೆ ಕಾರ್ಯ ಕಾರಣ ವಿಧಾನಂ ಕಾಣ್ ವಿಪರ್ಯಾಸಮಾಂ-
    ತರ್ಯಂ ಕತ್ತಲಕಾಲದೊಳ್ ಬೆಳಕಮೇಲೇಕಾಗ್ರಮೊಂದಾಗೆ ಸೌಂ- ದರ್ಯಾರಾಧನಮಂತುಟುಂ ಬೆಳಕ ಪರ್ಯಾಪ್ತಂ ವಿಶೇಷಂ ಭಲಾ
    ಸೂರ್ಯಂ ರಾತ್ರಿಗೆ ಭೂಷಣಂ ದಿವಸಕಂ ಚಂದ್ರಂ ಮಹಾಭೂಷಣಂ !!

    “ಕತ್ತಲಿದ್ದಾಗ ಬೆಳಕಿನ ಮೇಲೆ – ಬೆಳಕಿದ್ದಾಗ ಸೌಂದರ್ಯದ ಮೇಲೆ” ಕೇಂದ್ರೀಕೃತವಾಗುವ ಕಾರ್ಯ ಕಾರಣ ಸಂಬಂಧದ ವಿಪರ್ಯಾಸದ ಹಾಗೆ
    “ರಾತ್ರಿಯಲ್ಲಿ ಸೂರ್ಯ – ಹಗಲಲ್ಲಿ ಚಂದ್ರ”

  6. ಸಮಸ್ಯಾಪೂರಣ:
    ಆರ್ಯಾವರ್ತದೊಳಾಗಲಾಗಿರೆ ಪಗಲ್ ಪಾಶ್ಚಾತ್ಯದೊಳ್ ರಾತ್ರಿ ಕಾಣ್
    ಪರ್ಯಾಯಂ ಧರೆಯೊಳ್, ವಿಲೋಕಿಸಿರೆ ಬಾಹ್ಯಾಕಾಶದೀ ವಿಸ್ಮಯಂ
    ಆರ್ಯಾ, ಪರ್ಯಟನಂ ಗಡಾ ನಿರುತವುಂ ಗೋಚಾರದಿಂದಂತುಟುಂ
    ಸೂರ್ಯಂ ರಾತ್ರಿಗೆ ಭೂಷಣಂ ದಿವಸಕಂ ಚಂದ್ರಂ ಮಹಾಭೂಷಣಂ !!

    ( ಬಾಹ್ಯಾಕಾಶದಿಂದ ಭೂಗೋಳವನ್ನು ಗಮನಿಸಿದಾಗ – ಗ್ರಹಗಳ ತಿರುಗುವಿಕೆಯಿಂದಾಗಿ , ಅರ್ಧ ಭಾಗದಲ್ಲಿ ರಾತ್ರಿ ,ಉಳಿದರ್ಧದಲ್ಲಿ ಹಗಲು , ಸೂರ್ಯ, ಚಂದ್ರ ಒಟ್ಟಾಗಿ ಕಾಣುವ ವಿಸ್ಮಯದ ಬಗೆಗಿನ ಪೂರಣ)

  7. ಜೇಬು
    ದೊರೆಗಂ ಪುರಸೊತ್ತಾದೊಡೆ
    ಕರಮಂ ತುರುಕುತ್ತಲಿರ್ದಪಂ ಗಡುಸಾದಾ
    ಮರೆವೆಂ ನಾನೀ ನೋವಂ
    ಮರಳಲ್ ಮನೆಗೆನ್ನ ತಡಕಲಾ ಮೃದುಹಸ್ತಂ

    ಅತಿಶಯೋಕ್ತಿಯಿಂದ ಅನುರಾಗದ ವರ್ಣನೆ
    [ಅಷ್ಟು ಸರಿಯಿಲ್ಲದಿದ್ದರೂ ಆಶುವಾಗಿ ಬರೆದದ್ದರಿಂದ ಹಾಕುತ್ತಿದ್ದೇನೆ]
    ನಿನ್ನ ಕಾಣುತೆ ಮೂರು ಲೋಕವ –
    ದೆನ್ನ ವಶವಾಗಿರ್ದುದಲ್ಲದೆ
    ಪೊನ್ನರಾಶಿಯೆ ಸುರಿದು ಹರಸಿದುದೆನ್ನನೆಂದೆಂದು
    ಚೆನ್ನವಾದುದು ಜೀವಭಾವವು
    ರನ್ನದೋಲ್ ಮೇಣೆನ್ನ ಕಾಂತಿಯು
    ಮುನ್ನ ಮಾಸಿದ ಬಾಳಿನಿಂ ಸ್ವರ್ಗಕ್ಕೆ ಬಂದವೊಲೇ

    ಸಮಸ್ಯೆ
    1.
    ಭಾರ್ಯಾ ವೈಧುರಭೂಷಣಂ ಸತಿಗೆ ತಾಂ ಜಾರಂ ಕಣಾ ಭೂಷಣಂ
    ಶೌರ್ಯಂ ಭೂಷಣಮಲ್ತೆ ಪಂದೆಗಳಿಗಂ ನಿರ್ವೀರ್ಯಗಿನ್ನಂತೆ ತಾ –
    ತ್ಪರ್ಯಂ ಭೂಷಣಮಾವುದಿಲ್ಲಮದಕಂ ಸತ್ಯಂ ಸದಾ ಸರ್ವಥಾ
    ಸೂರ್ಯಂ ರಾತ್ರೆಗೆ ಭೂಷಣಂ ದಿವಸಕಂ ಚಂದ್ರಂ ಮಹಾಭೂಷಣಂ
    2.
    ಕಾರ್ಯಂ ಮಾಳ್ಪನಿಗಂ ಗಡುಗ್ರ ಬಿಸಿಲೊಳ್ ತಾಪಂಗೊಳುತ್ತಿರ್ದಗಂ
    ಸೂರ್ಯಂ ರಾತ್ರೆಗೆ ಭೂಷಣಂ ದಿವಸಕಂ ಚಂದ್ರಂ ಮಹಾಭೂಷಣಂ

    ಆಶೀರ್ವಾದವೇ ಉಡುಗೊರೆಯಾಗೆ
    ಸೂಡದ ಹೂಗಳ ಬೇಡದ ವಸ್ತುವ
    ತೀಡುತ್ತಲವರ ಹೆಸರಿಟ್ಟು – ನೀಡಿರೆ
    ಬೇಡುವರಾಶೀರ್ವಾದವ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)