May 102021
 

೧. ವಿಹಾರ ನೌಕೆ
೨. ಬೇಸಿಗೆಯ ಮಳೆ
೩. ಪಾಣಿನಿ ಮತ್ತು ಕೇಶೀರಾಜರ ಸಂವಾದ

ಪೃಥ್ವೀ-ಛಂದಸ್ಸಿನ ಸಮಸ್ಯೆ-
ಕನ್ನಡ – ವಿರಿಂಚಿ ಮರೆತಿರ್ಪನಯ್ ಶ್ರುತಿಗಳಂ ಬೆರೆಂಗೆಂಬವೊಲ್
ಸಂಸ್ಕೃತ – ವಿರಿಂಚಿರಿಹ ವಿಸ್ಮರ್ತ್ಯಹಹ ವೇದಜಾತಂ ಸ್ವಯಂ

  5 Responses to “ಪದ್ಯಸಪ್ತಾಹ ೪೩೬”

  1. ನೌಕೆಗೂ ವಿಹಾರ/ಭ್ರಮಣನೌಕೆಗೂ ಇರುವ ವ್ಯತ್ಯಾಸ:
    ನೌಕೆಗಳಿಗಿಹುದಲ್ತೆ ಗಮ್ಯವೊಂದಾವಗಂ
    ಆ ಕಾಂಗೊ, ಇಂಗ್ಲೆಂಡು, ಈಕ್ವಡಾರ್ಗಳ್|
    ನಾಕಾರೊ ಹತ್ತೆಂಟೊ ದಿವಸ-ವಾರಭ್ರಮಣ-
    ನೌಕೆಯೊಳು ಯಾನವೇ ಗಮ್ಯವಲ್ತೆ||

    ಬೇಸಗೆಯ ಮಳೆ
    ಬೇಸಽಗೆಽ ಮಳೆಯಽದುಽ ಝರಿ-ಬಾವಿಽ-ಕೆರೆಯಽ ದ-
    ಟ್ಟೈಸಽದಿಲ್ಲವು ಲಾಭಽವೊಂದೂ|
    ಲೇಸೆಂಬಽರದ ಮಾತ್ರಽ ಮನುಜಽರಽದೊಂದಿಷ್ಟುಽ
    ಹ್ರಾಸಽವಾದುದೆನುತ್ತೆಽ ಧಗೆಯುಽ|| ಸಾಂಗತ್ಯ

    ಪಾಣಿನಿ-ಕೇಶೀರಾಜರ ಸಂವಾದ:
    ಪಾಣಿನಿ: (ಆನೆ/ಹುಲಿಗಳ ರಾಜ ಆನೆ/ಹುಲಿ ಇದ್ದಂತೆ)
    ಕೇಶಗಳ ರಾಜನೂ ಕೇಶರೂಪಿಂದಕ್ಕು
    ಆಶುವಾಗಿಟ್ಟುಕೊಳೊ ಬೇರೆ ಹೆಸರ|
    ಕೇಶಿರಾಜ: ಲೇಶಮೇ ವೈರುಧ್ಯ ನಿನ್ನ ನಾಮದೆ ಪೇಳು
    ಕೋಶ-ಪಾದಗಳಿರವೆ ಬರಿಗೈಯೆ ನೀಂ??

    ಸಮಸ್ಯಾಪೂರಣ
    ಪುರಾಣ-ಕಥನಂಗಳೊಳ್ ಜನಪದಂಗಳೊಳ್ ಸರ್ವದಾ
    ಸರಾಗದೊಳಗಾತಗಂ ಪರಪಿತಾಮಹೋಪಾಧಿಯೈ|
    ಜರಾವಶನೆನುತ್ತೆ ತಾಂ ಭ್ರಮಿಸಿ ಕೇಳುತಾ ಮಾತನುಂ
    ವಿರಿಂಚಿ ಮರೆತಿರ್ಪನೈ ಶ್ರುತಿಗಳಂ ಬೆರಂಗೆಂಬವೊಲ್||

  2. ಸಮಸ್ಯೆ –

    ೧.
    ಮರುಳ್ಗೊಳಿಪ ಪಾಂಗಿನಿಂ ವಿವಿಧಭಾಷ್ಯಕಾರರ್ಕಳೇ
    ಪರಸ್ಪರವಿರುದ್ಧಮಾಗೊರೆಯಲರ್ಥಮಂ ವೇದಕಂ
    ಶಿರಂ ತಿರುಗಿ ತಿರ್ರನೇ ಮನದ ಶಾಂತಿಯಂ ಕಾಪಿಡಲ್
    ವಿರಿಂಚಿ ಮರೆತಿರ್ಪನಯ್ ಶ್ರುತಿಗಳಂ ಬೆರಂಗೆಂಬವೊಲ್

    ೨.
    ಧರಿಪ್ಪನಹ ಲೀಲೆಯಿಂ ಸಕಲವೇದಮಂ ಚಿತ್ತದೊಳ್
    ಚಿರಂ ಮನಕೆ ತೋಷಮಂ ಕುಡುವುದೆಂದು ಸಂಗೀತಮಂ
    ಸರಸ್ವತಿಯೆ ಮೋದದಿಂ ಕಲಿಸಲೆಂತುಟೋ ಕಷ್ಟದಿಂ
    ವಿರಿಂಚಿ ಮರೆತಿರ್ಪನಯ್ ಶ್ರುತಿಗಳಂ ಬೆರಂಗೆಂಬವೊಲ್

  3. ಪಾಣಿನಿ ಮತ್ತು ಕೇಶೀರಾಜರ ಸಂವಾದ

    ಹರನ ಡಮರುವಿನಿಂದ ಕೊಂಡೆನು
    ಮೆರೆವ ಸೂತ್ರಂಗಳನು ಕೇಳೆಲೆ
    ತರವೆ ನಿನಗಂ ಪೋಲಿಪೀ ಪರಿ ಎಂದ ಪಾಣಿನಿಯು
    ಸರಿಯೆ ಡಮರುವಿನಿಂದಲಾನುಂ
    ತಿರುವಿ ಬಿಗಿದಾ ಸೂತ್ರದೊಳೆ ವ್ಯಾ-
    ಕರಣದೀ ಹೊತ್ತಗೆಯ ಕಟ್ಟಿದೆನೆಂದ ಕೇಶಿಯು ತಾ

  4. ಬೇಸಿಗೆಯ ಮಳೆ

    ಅಕಾಲಕುಸುಮರ್ತು ಬಂದೆರಗಿ ವಂಚನಂಗೈದುದಯ್
    ಅಕಿಂಚನತೆಯಿಂದಲೆನ್ನೊಡೆಯನಪ್ಪ ಮಕ್ಕಣ್ಣನೊಳ್
    ನಿಕೃಷ್ಟಮಿದು ಸೇಡಿನೊಳ್ ಸಲೆ ಶಿರಸ್ಥಮಂದಾಕಿನಿ
    ಪ್ರಕೃಷ್ಟಮೆನೆ ಬಿದ್ದಳಯ್ ಧರೆಯೊಳಂ ವಸಂತರ್ತುವೊಳ್

  5. ವಿಹಾರ ನೌಕೆ

    ಪ್ರಲಯದ ಕಾಲದಿ ಸಲಹಿತ್ತು ಜೀವರ
    ಎಳೆಯುತ್ತ ಮೀನು ನೌಕೆಯ | ಕೆರೆಯಲ್ಲಿ
    ನಲುಗಿತ್ತು ದೋಣಿಯಡಿಯಲ್ಲಿ

Leave a Reply to Neelakanth Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)